ಪುಸ್ತಕ ಸಂಗಾತಿ
ನಿಂಗಮ್ಮ ಭಾವಿಕಟ್ಟೆ ಅವರ ಕೃತಿ
‘ವಚನ ಸಂಭ್ರಮ’
ಒಂದು ಅವಲೋಕನ
ವೈ ಎಂ ಯಾಕೊಳ್ಳಿ



ಅನುಭವ ಅನುಭಾವ ಮೇಳವಿಸಿದ ಸುಂದರ ವಚನೋದ್ಯಾನ – ‘ವಚನ ಸಂಭ್ರಮ’
ಕನ್ನಡ ಆಧುನಿಕ ವಚನ ಸಾಹಿತ್ಯಕ್ಕೆ ಶತಮಾನದ ಇತಿಹಾಸವಿದೆ. ಆದಿ ಅಮಾತೆಪ್ಪ, ಜ.ಚ.ನಿ ಮೊದಲಾದವರಿಂದ ಹಿಡಿದು ಆಧುನಿಕ ವಚನ ಸಾಹಿತ್ಯ ಬೆಳೆದು ಬಂದಿದೆ. ಆಧುನಿಕ ವಚನ ಸಾಹಿತ್ಯ ಶರಣರ ವಚನಗಳನ್ನು ಬಹುತೇಕ ಸ್ವರೂಪದಲ್ಲಿ ಅನುಸರಿಸಿತೇ ಹೊರತು ತತ್ವದ ವಿಚಾರದಲ್ಲಿ ಅದರ ಎತ್ತರಕ್ಕೆ ಏರಲಿಲ್ಲ ಎಂಬ ಮಾತನ್ನು ಒಪ್ಪುವುವೆದಾದರೂ ಸಾಮಾಜಿಕ ಚಿಂತನೆ , ವಚನಕಾರನ ವಯಕ್ತಿಕ ಅನುಭಾವ ಶ್ರೀಮಂತಿಕೆಗಳ ದೃಷ್ಟಿಯಿಂದ ಆಧುನಿಕ ವಚನ ಸಾಹಿತ್ಯವೂ ತನ್ನೇ ಅದ ವಿಶಿಷ್ಟತೆಯನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯಲಾಗದು. ಅದು ಆಧುನಿಕ ಕಾಲದ ಅಭಿವ್ಯಕ್ತಿಯಾದುದರಿಂದ ಸಾಮಾಜಿಕವಾಗಿ ಚಿಂತನೆ ಮಾಡಿದುದೇ ಹೆಚ್ಚು ಎಂಬುದನ್ನು ಮರೆಯಯಲಾಗದು . ಯಾವುದೇ ಕಾವ್ಯ , ಸಾಹಿತ್ಯ ಆ ಕಾಲದ ಅಭಿವ್ಯಕ್ತಿಯಾಗಿರುವದರಿಂದ ಹನ್ನೆರಡನೆಯ ಶತಮಾನದ ವಚನಕಾರರ ಅನುಭಾವದ ಎತ್ತರವನ್ನು ಇಂದಿನ ವಚನ ಸಾಹಿತ್ಯದಲ್ಲಿ ನಾವು ನಿರೀಕ್ಷಿಸುವದೂ ತಪ್ಪೇ ಆಗಿದೆ. ಏನೇ ಇದ್ದರೂ ಆಧುನಿಕ ವಚನ ಸಾಹಿತ್ಯದಲ್ಲಿ ಅತ್ಯತ್ಕೃಷ್ಟವಾದ ಕಾವ್ಯ ಸಿದ್ದಯ್ಯ ಪುರಾಣಿಕ, ಮಹಾದೇವ ಬಣಕಾರ ಮೊದಲಾದವರ ರಚನೆಗಳಲ್ಲಿ ಮೂಡಿ ಬಂದಿರುವದನ್ನು ಗಮನಿಸಲೇಬೇಕು.
ಇಂದಿಗೂ ಕೂಡ ಆಧುನಿಕ ವಚನ ಸಾಹಿತ್ಯದಲ್ಲಿ ವಚನ ಸಂಕಲನಗಳು ಪ್ರಕಟವಾಗುತ್ತಲೆ ಇವೆ. ಅವುಗಳಲ್ಲಿ ಕೆಲವಾದರೂ ತಮ್ಮ ಕಾವ್ಯ ಶ್ರೀಮಂತಿಕೆಯಿಂದ ಓದುಗರ ಗಮನವನ್ನು ಸೆಳೆಯುತ್ತಲೇ ಇವೆ. ಇಂಥ ಒಂದು ವಚನ ಸಂಕಲನ ಹುನಗುಂದದ ಶ್ರೀ ನಿಂಗಮ್ಮ ಭಾವಿಕಟ್ಟಿಯವರದು . ಅವರು ಗುರುದೇವ ಅಂಕಿತದಿಂದ ರಚಿಸಿರುವ ೨೦೪ ವಚಗಳ ಕಟ್ಟನ್ನು ‘ವಚನ ಸಂಭ್ರಮ’ ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಈ ವಚನ ಸಂಕಲನದಲ್ಲಿ ಉತ್ತಮ ವಚನಗಳಿವೆಯಂಬುದಕ್ಕೆ ಸಾಕ್ಷಿ ಅದು ಮೊದಲ ಬಾರಿಗೆ ೨೦೧೮ ರಲ್ಲಿ ಪ್ರಕಟವಾಗಿದ್ದು ಮುಂದೆ ಕೇವಲ ನಾಲ್ಕೇ ವರ್ಷದಲ್ಲಿ (೨೦೨೨) ತನ್ನ ದ್ವಿತೀಯ ಮುದ್ರಣವನ್ನೂ ಕಂಡ ಕೃತಿಯಾಗಿರುವುದೇ ಸಾಕ್ಷಿಯನ್ನಬಹುದು.
ಈ ಸಂಕಲನ ಹುನಗುಂದದ ಅಶೋಕ ಪ್ರಕಾಶನದಿಂದ ಮೊದಲ ಮುದ್ರಣವಾಗಿ ೨೦೧೮ ರಲ್ಲಿ ಪ್ರಕಟವಾಯಿತು. ತನ್ನ ಗುರುದೇವನಿಗೆ ತನ್ನ ,ಮನಕ್ಕೆ ಹೊಳೆದುದನ್ನು ಮುಕ್ತವಾಗಿ ಅರ್ಪಿಸಿಕೊಂಡಿದ್ದೇನೆ ಎಂಬ ಮುಕ್ತಭಾವ ದ ಕವಯಿತ್ರಿ ಜಗತ್ತಿನ ಎಲ್ಲ ಹೊಸತನ್ನು ಗುರು ಎಂದು ಸ್ವೀಕರಿಸಿದವರು. ಹಾಗಾಗಿ ತಾನು ಗುರುದೇವ ಅಂಕಿತ ಇರಿಸಿಕೊಂಡು ಈ ವಚನಗಳನ್ನು ರಚಿಸಿದ್ದೇನೆ ಎನ್ನುತ್ತಾರೆ. ಅಂತೆಯೇ ಅವರು ನಂಬಿದ್ದು “ಪ್ರತಿ ವಚನಕೂ ಗುರುದೇವನೇ ಸಾಕ್ಷಿ ಎಂಬ ಅರ್ಪನಾ ಮನೋಭಾವ “ ಚಾಮರಸ ಕವಿ ಹೇಳುವಂತೆ “ಗುಡಿಯೆ ಮಾತಾಡುವಂದದಿ ಇಲ್ಲಿ ಲಿಂಗ ನುಡಿಸಿದುದನೆ ನಾ ನುಡಿದಿದ್ದೇನೆ” ಎಂಬ ಚಾಮರಸ ಕವಿಯ ಮಾರ್ಗದಂತೆ ಕವಯಿತ್ರಿಯ ನಡೆ ನಮಗೆ ತೋರುತ್ತದೆ. ಇಲ್ಲಿನ ವಚನಗಳು ಹೆಚ್ಚಾಗಿ ಎಲ್ಲವೂ ಐದು ಸಾಲಿನ ನಿಯತ ರಚನೆಗಳಾಗಿದ್ದು ‘ಗುರುದೇವ’ ಅಂಕಿತವನ್ನು ಹೊಂದಿವೆ. ತನ್ನ ವಚನಗಳು ಬರೀ ಅಕ್ಷರರೂಪದ ಬರಹವಲ್ಲ , ಅವು ನುಡಿದ ಆಣೆ ಪ್ರಮಾಣಗಳು ಎನ್ನು ವ ಕವಯಿತ್ರಿ
ವಚನವೆಂದರೆ ಆಣೆ ಪ್ರಮಾಣಗಳ ಮದ್ದು
ಹುಷಾರು ಬೇಕು ಆಡಲು , ನಡೆಯಲು,
ಎಡವಿದರೆ ಸ್ಪೋಟ,
ತಪ್ಪಿದರೆ ಅನಾಹುತ
ಪ್ರತಿ ವಚನಕು ಗುರುದೇವನೆ ಸಾಕ್ಷಿ
ಎಂದು ತಮ್ಮ ಅಂತರಂಗದ ಸಾಕ್ಷಿಯನ್ನೇ ತಾವು ಎದುರುಗೊಳ್ಳುವದಾಗಿ ನುಡಿದಿದ್ದಾರೆ. ಇಲ್ಲಿರುವದು ಒಂದು ತುಂಬ ಸುಸಂಸ್ಕೃತವಾದ ಮಾಗಿದ ಮನಸ್ಸು . ಹೀಗಾಗಿ ಇಲ್ಲಿನ ವಚನಗಳಿಗೆ ಒಂದು ಅನುಭವ ಶ್ರೀಮಂತಿಕೆ ತನ್ನಿಂದ ತಾನೇ ಪ್ರಾಪ್ತವಾಗಿದೆ. ಅದು ಮೊದಲ ವಚನದಲ್ಲಿಯೆ ಎದ್ದು ಕಾಣಿಸುತ್ತದೆ. ಶರಣರು ವಚನ ವೆಂದರೆ ‘ವಚೋ ನ ‘ ಎಂದರು. ಮುದ್ದಾಮಾಗಿ ಹೇಳಿದ್ದು ವಚನವಲ್ಲ. ಅದು ತಾನಾಗಿ ಸಂಭವಿಸಿದ್ದು. ನುಡಿಯಬೇಕೆಂದು ನುಡಿದ ಆಡಂಬರದ ನುಡಿಗಳು ವಚನವೆಂದೆನಿಸಲಾರವು ಅವು ಆಡಂಬರವಲ್ಲ. ಅನುಭವಿಸಿ ಅರಳಿದ ಹೂಗಳು. ಅಲ್ಲಿ ಸೌಗಂಧವಿರುತ್ತದೆ. ಇದನ್ನೇ ಮೊದಲ ವಚನದಲ್ಲಿಯೇ ಕವಯಿತ್ರಿ ಸಾರುತ್ತಾರೆ.
ಯಾರು ಹೇಳಿದರು ಹೂವಿಗೆ ಅರಳು ಎಂದು? .ಅದು ತನ್ನ ಇರುವಿಕೆಯನ್ನು ಸಾರಲೆಂದು ಅರಳುತ್ತದೆ. ಹಾಗೆಯೇ ಕವಿತೆ ಕೂಡ! ಯಾರ ಒತ್ತಾಯಕ್ಕೋ ಅದು ಮೂಡಲಾರದು. ಆದರೆ ಮೂಡಿದ ಮೇಲೆ ಮಾತ್ರ ತನ್ನ ಇರುವಿಕೆಯನ್ನು ಸಾರಿಯೇ ಸಾರುತ್ತದೆ.
ಹೂ, ತನ್ನಿರುವ ಸಾರಲು ಘಮಿಸುತ್ತದೆ
ಗಂಟೆ ತನ್ನಿರುವ ಸಾರಲು ಮೊಳಗುತ್ತಿದೆ
ಈ ಮೌನ ಸದ್ದುಗಳನಾಲಿಸುವ ಕಲೆಯ
ಕಲಿಸು ಸುಮ್ಮನಿದ್ದು ಸಾರುವಂತಿರಿಸು
ಸದ್ದನಡಗಿಸು ಗುರುದೇವ
ಸದ್ದುಗಳಿಂದಲೇ ತುಂಬಿರುವ ಈ ಜಗತ್ತಿನಲಿ ಸದ್ದೇ ನನಗೆ ಬೇಡ ಎನ್ನುವ ಈ ಮನೋಭಾವ ತುಂಬ ವಿಶಿಷ್ಟವಾದುದು ಆದರೆ ಬಹಳ ಮಹತ್ವದ ಮಾತೆಂದರೆ ಸುಮ್ಮನಿದ್ದು ಸಾರುವ ಕಲೆಯ ಕಲಿಸು ಎನ್ನುವದು. ಇದು ಕವಿಗೆ ಮಾತ್ರ ಇರಬಹುದಾದ ವಿಶಿಷ್ಟ ಗುಣ.
ಸಾಮಾಜಿಕ ವಾಗಿ ಚಚನಗಳು ಚಿಂತಿಸುತ್ತಿರುವದಕ್ಕೆ ಇಲ್ಲಿ ಅನೇಕ ಉದಾಹರಣೆಗಳನ್ನು ಎತ್ತಿ ಹೇಳಬಹುದು. ದೇವರ ಹೆಸರಿನಲ್ಲಿ ಬಲಿಯನ್ನು ನೀಡಿ ಜೀವಗಳನ್ನು ಕೊಲ್ಲುವದನ್ನು ಕಂಡು ಕವಿಮನ ಮರುಗುತ್ತದೆ. ಜೀವ ಬಲಿ ಬೇಡಿದಳೇ ದೇವಿ ? ಎಂದು ಖಾರವಾಗಿಯೆ ಪ್ರಶ್ನಿಸುವ ಇಲ್ಲಿನ ಕವಿತೆ ತಮ್ಮ ದುರಾಸೆಗೆ ದೇವಿಯ ಹೆಸರನ್ನು ದುರ್ಬಳಕೆಗೆ ಬಳಸುವವರನ್ನು ಕಟುವಾಗಿಯೃಏ ನಿಂದಿಸುತ್ತಾರೆ.
ಬಲಿಗೆ ಬಾಯ್ದೆರೆದು ಕೂತಳೇ ದೇವಿ?
ಯಾರ ಕೇಳಿದಳು ಬೇಕೆಂದು ?
ತಮ್ಮ ಬಸಿರಿಗೆ ದೇವರ ಹೆಸರು
ಬಯಕೆ ತೀರಿಸೋ ನೆಪಕೆ ಸಾಲದ ಹೆಸರು
ಪಾಪ! ಬಾಯಿ ಇಲ್ಲದ ಬಾಳು ಗುರುದೇವ
ಬಸವಣ್ಣನವರು ‘ಶಾಸ್ತçವನೋದಿದವರ ಮುಂದೆ ಅಳು ಕಂಡಾ’ ಎಂದು ಬಲಿಗೆ ಒಯ್ದ ಪ್ರಾಣಿಗೆ ಎಚ್ಚರಿಸಿದ್ದನ್ನು ನಾವು ನೆನೆಸಿಕೊಳ್ಳಬೇಕು. ‘ತಮ್ಮ ಬಸಿರಿಗೆ ದೇವರ ಹೆಸರು ‘ ಎನ್ನುವದಂತೂ ವ್ಯಂಗ್ಯದ ಅಭಿವ್ಯಕ್ತಿಯಾಗಿದೆ. ಬಾಯಿ ಇಲ್ಲದ ಮೂಕ ಪ್ರಾಣಿಯ ಅಳು ಯಾರು ಕೇಳುವವರು ಎಂಬ ಮಾನವಿಯ ನೆಲೆಯಲ್ಲಿ ಚಿಂತಿಸುವ ವಚನ ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.
ಲೌಕಿಕದ ಬದುಕಿಗೆ ಪಠ ಹೇಳುವಂತಿರುವ ಕೆಲವು ರಚನೆಗಳ ಗಮನ ಸೆಳೆಯುತ್ತವೆ.
ಜಾರಬಾರದು ಅಪರಿಚಿತರೆದುದರು
ಎಡವಬಾರದು ಬಂಧುಗಳೇದುರು
ಬೀಳಬಾರದು ಸಮಾನರರೆದುರು
ಮೆಲದ್ದರೂ ಬಲುಕಷ್ಟ
ಗಾಯದ ಕಲೆಗೆ ಮದ್ದಿಲ್ಲ ಗುರುದೇವ
ನಮ್ಮ ಬದುಕು ಲೌಕಿಕದಲ್ಲಿ ಇರಬೇಕಾದ ರೀತಿಯನ್ನು ಈ ವಬಚನ ದರ್ಶಿಸುತ್ತದೆ. ಗಾಯ ಮಾಯಬಹುದು. ಅದಕ್ಕೆ ಮುಲಾಮು ಇದೆ. ಗಾಯದ ಕಲೆಗೆ ಮದ್ದೆಲ್ಲಿದೆ? ಅಂದರೆ ನಾವು ಎಂದೋ ಒಮ್ಮೆ ಮಾಡಿದ ತಪ್ಪು ಕೂಡ ಗಾಯದ ಕಲೆಯ ಹಾಗೆ ಶಾಶ್ವತ ಉಳಿದೇ ಇರುತ್ತದೆ ಎನ್ನು ಆಳ ಯೋಚನೆ ಇಲ್ಲಿನದು. ಬದುಕಿನ ದಾರಿ ಆದಷ್ಟೂ ತಪ್ಪಿರದೆ ಇದ್ದರೆ ಒಳಿತು ಎಂಬುದು ಈ ವಚನದ ಹಿಂದಿರುವ ಅರ್ಥವಾಗಿದೆ. ಬದುಕು ತುಂಬ ಸೂಕ್ಷ್ಮ. ಇಲ್ಲಿ ಒಮ್ಮೊಮ್ಮೆ ನಮ್ಮ ನೇಹ- ಬಂಧಗಳೇ, ಒಲವ -ಸ್ನೇಹಗಳೆ, ನಮಗೆ ನೋವನ್ನು ಉಂಟು ಮಾಡುತ್ತವೆ. ಅದು ಅಪರಿಹಾರ್ಯ ಕೂಡ . ಸಹಿಸಿಕೊಂಡು ಬದುಕುವುದೇ ಜೀವನ ಎಂಬ ಸಹನಶೀಲತೆಯನ್ನು ಸೂಚ್ಯವಾಗಿ ಈ ಕೆಳಗಿನ ವಚನ ನೀಡುವಂತಿದೆ.
ನೆಚ್ಚಿದವರಿಂದಲೇ ಹೆಚ್ಚು ನೋವು
ಸರಿ ಹೋಗದ ಬಿಡಲಾಗದ ಮೋಹ
ಕಾಣದೆಳೆಯ ಬಂಧದ ಬಲೆಯ
ಬಿಡಿಸು ಇಲ್ಲಾ ಒಲಿಸು ಗುರುದೇವ
ಮನಸು ಉಸಿರುಗಟ್ಟುವ ಮುನ್ನ
ಬದುಕಿನ ಬಂಧವೇ ಹಾಗೆ. ಇಲ್ಲಿನವರಾದ ಮೇಲೆ ಇಲ್ಲಿ ಬರುವ ಎಲ್ಲವನ್ನು ತುಟಿ ಕಚ್ಚ ಸಹಿಸಲೇಬೇಕು. ನೋವೋ ನಲಿವೋ ಉಂಡೇ ತೀರಿಸಬೇಕು ಎನ್ನುವ ಸಹನೆಯೆ ಇಲ್ಲಿ ಅಸ್ತç .ಎಷ್ಟೆ ಬಿಡಿಸು ಎಂದು ಬೇಡಿಕೊಂಡರೂ ಈ ಬಿಡಿಸುವದು ಯಾರಿಂದಲೂ ಅಸಾಧ್ಯ ಕೂಡ. ಸಂಸಾರವನ್ನು ತುಂಬ ಸಹನೆಯಿಂದ ಕಾಪಾಡಿದರೆ ಮಾತ್ರ ಅಲ್ಲಿ ನೆಮ್ಮದಿ ಎಂಬ ತಿಳಿವನ್ನು ಅವರ ವಚನ ಸಾರುತ್ತವೆ.
ಸಂಸಾರ ಕೇಶದ
ಅನುಮಾನವ ಸಿಕ್ಕು
ಮುಖಾಮುಖಿಯೇ ಪರಿಹಾರ
ಅದಾಗದ ಮನೆಯೆ ಶೀತಲ ಸಮರ
ಬಗೆಹರಿಯುವದೆಂತು ಗುರುದೇವ
ಸಂಸಾರ ಎನ್ನುವದು ತಲೆಯ ಕೇಶವಾದರೆ ಅನುಮಾನ ಎನ್ನುವುದು ಅಲ್ಲಿ ಮೂಡುವ ಸಿಕ್ಕು.ಆ ಸಂಶಯವನ್ನು ಪರಿಹರಿಸಲು ಎದುರಾ ಬದುರು ಕೂತು ಚರ್ಚಿಸುವ ದಾರಿಯೇ ಪರಿಹಾರ. ಇರದಿದ್ದರೆ ಆ ಸಿಕ್ಕು ಬಿಡಿಸಲಾಗದು ಎನ್ನುವ ಅನುಭವ ಸತ್ಯವನ್ನು ಅವರ ವಚನ ಸಾರುತ್ತದೆ.
ನಿಸರ್ಗವನ್ನು ಪ್ರೀತಿಸುವ ಸಹಜ ಜೀವನ ನಮ್ಮದಾದರೆ ನಮ್ಮ ಬಾಳಿಗೆ ಬಡತನ ಬರದು ಎನ್ನುವ ವಚನಕಾರ್ತಿ
ತಂಗಾಳಿಗೆ ತೆರದುಕೊಳ್ಳದ
ಮನಸದೇತಕೆ
ಬಂಗಾರದ ಬೆಲೆಯ
ಬದುಕ ಮರೆವುದೇತಕೆ ಗುರುದೇವ
ಅನುಭವಿಸೋ ಸುಖವ ಕಲಿಸು
ಈಬದುಕು ಬಂಗಾರಕ್ಕಿಂತಲೂ ಮಿಗಿಲಾಸ ಸಂಪತ್ತು ಇದನ್ನು ಅನುಭವಿಸುವ ಸುಖ ಕ್ಕಿಂತ ಮಿಲದು ಯಾವುದು ? ಎನ್ನುತ್ತಾರೆ. ಕವಿ ಪಂಪ ‘ತೆಂಕಣಗಾಳಿ ಬೀಸಿದೊಡೆ..’ ಅದನ್ನು ಸವಿಯುವಂತಹÀ ಭಾಗ್ಯ ಇನ್ನೆಲ್ಲಿದೆ? ಎಂದಿದ್ದ . ಬನವಾಸಿ ದೇಶದಲ್ಲಿ ಮರಿದುಂಬಿಯಾಗಿ ಜನಿಸಿದರೂ ಸಾಕು ಎಂಬ ಅಭೀಪ್ಸೆ ಅವನದು. ಇಲ್ಲಿ ವಚನಕಾರ್ತಿ ಯೂ ಕೂಡ ಹಾಗೆಯೆ ಪರಿಬಾವಿಸುತ್ತಾರೆ. ನಿಸರ್ಗದ ಮುಂದೆ ದೈವ ಸಕ್ತಿಯ ಮುಂದೆ ಮನುಷ್ಯನ ಶಕ್ತಿ ಅದೆಷ್ಟರದು? ಎಂಬ ಆಸ್ತಿಕ ಭಾವ ಅವರದು ಹೀಗಾಗಿ ಮನುಷ್ಯ ಎಷ್ಟೇ ದೊಡ್ಡದನ್ನು ಸಾಧಿಸಿದರೂ ಅತ ನಿಸರ್ಗದ ಮುಂದೆ , ದೈವದ ಮುಂದೆ ಕಿರಿಯನೇ ಎನ್ನು ವ ಭಾವ ತಾಳಿದ್ದಾರೆ.
ನೂರು ದೇವರ ಕೆತ್ತುವಾತ
ಒಂದು ಕೀಟಕೆ ಉಸಿರೊಇಡಬಲ್ಲನೆ?
ಹತ್ತುಪಗ್ರಹ ಉಡಾಯಿಸುವಾತ
ಒಂದಿನುದುದಯ ತಡೆಯಬಲ್ಲನೆ?
ಗರ್ವಕೆ ಕಾರಣವಿಲ್ಲವೆಂದ ಗುರುದೇವ
ಮನುಷ್ಯ ನಾನು ಅದನ್ನು ಮಾಡಿದೆ. ಇದನ್ನು ಮಾಡಿದೆ ಎಂದು ಗರ್ವ ಪಡುವ ಅಗತ್ಯವಿಲ್ಲ ಎನ್ನುವ ವಿನಮ್ರ ತಿಳುವಳಿಕೆ ಇಲ್ಲಿನದು, ಮನುಷ್ಯನ ಸೃಷ್ಟಿಶೀಲತೆಯನ್ನು ಎಲ್ಲೊ ಒಂದು ಕಡೆ ಕವಿಯತ್ರಿ ಅಲಕ್ಷಿಸುತ್ತಿದ್ದಾರೇನೋ ಎನ್ನುವ ಭಾವನೆ ಬಂದರೂ ಇನ್ನೊಂದು ನೆನೆಯಲ್ಲಿ ಮನುಷ್ಯ ಗರ್ವ ಪಡಬೇಕಾಗಿಲ್ಲ ಎಂಬ ಮಾತೂ ಅಷ್ಟೇ ಸತ್ಯ ಎನಿಸುತ್ತದೆ.
ಅವರ ಕೆಲವು ರಚನೆಗಳು ತುಂಬ ಅನುಭಾವಿಕ ಸಂಪತ್ತಿನಿಂದ ಕೂಡಿವೆ. ತನ್ನದೆನ್ನುವದೆಲ್ಲವೂ ಗುರುದೇವನದೇ ಆಗಬೇಕು ಎನ್ನುವ ಸಮರ್ಪನ ಮನೋಭಾವದ ರಚನೆಗಳು ಅಲ್ಲಲ್ಲಿ ಕಾಣಿಸುತ್ತವೆ.
ತುಂಬು ಆಸೆ ನನಗೆ , ನನ್ನೊಳಗೆ
ನಾನು ಕಳೆದು ನಿನ್ನೊಳಗಾಗಿ
ನಾಡಿ ಮಿಡಿವವರೆಗೆ ನಿನ್ನ ನುಡಿಯ
ಹಾಡಬೇಕು, ಹರಡಬೇಕು
ಹರನು ಗುರುದೇವ ತಡವೇಕೆ
ನಿನದೆ ಹೃದಯ
ಮಿಡಿಸು ಇಲ್ಲವೆ ಒಲಿಸು
ನಿನ್ನದೆ ಉಸಿರು
ಇರಿಸು ಇಲ್ಲವೆ ಕಳಿಸು ಗುರುದೇವ
ನಿನ್ನಾಲಯವಿದು ಕಾಯಬೆಕು ನೀನೆ
ಉತ್ತಮ ಭಾವಗೀತೆಯಂತೆ ಇಲ್ಲಿನ ವಚನ ಭಾಸವಾಗುತ್ತವೆ. ಅಕ್ಕನ ಹಾಗೆ, ಮೀರಾಳ ಹಾಗೆ ಆ ದೇವನ ಧ್ಯಾನವೇ ತನ್ನ ಬದುಕಿನ ಗುರಿಯಾಗಬೇಕು ಎನ್ನುವ ಅನುಭಾವಿಕ ಎತ್ತರದ ರಚನೆಗಳನ್ನು ಬರೆಯುವಾಗ ಅವರದು ಮಾಗಿದ ಮನಸ್ಸು ಎನ್ನುವ ಭಾವ ಓದುಗನಲ್ಲಿಯೂ ತಾನೇತಾನಾಗಿ ಮೂಡಿದರೆ ಅಚ್ಚರಿಯಿಲ್ಲ. ತುಂಬ ಆಳವಾದ ತಿಳುವಳಿಕೆ ಅವರದು . ಮನುಷ್ಯ ಹೊರಗನ್ನು ಮೋಸ ಮಡಬಹುದು ತನ್ನೊಳಗಿನ ಎಚ್ಚರ ಪ್ರಜ್ಞೆಯಿಂದ ಪರಾಗಲರ ಎಂಬುದನ್ನು
ವಚನ ಕಾವ್ಯದ ವಿಶೇಷತೆಯಂದರೆ ಒಂದು ಮುಖ್ಯವಾದ ವಿಚಾರವನ್ನು ಅಂತರಂಗದಲ್ಲಿ ಇರಿಸಿಕೊಂಡು ಅದಕ್ಕೆ ಪೋಷಕವಾದ ಅಂಶಗಳಿಂದ ವಚನಗಳನ್ನು ಬೆಳೆಸುತ್ತ ಹೋಗುವದು ಅವುಗಳ ರಾಚನಿಕ ಸ್ವರೂಪ. ಸುಂದರವಾದ ಉಪಮೆ ರೂಪಕಗಳಿಂದ ಅವರ ವಚನಗಳು ಗಮನ ಸೆಳೆಯುತ್ತವೆ.
-ಅವರವರ ತೂಕ ಅವರಿಗುಂಟಲ್ಲವೇ ಗುರುದೇವ
-ಹರಿತವಾದರೂ ಖಡ್ಗ ಇರಿಯಲಾರದು ಒರೆಯ
– ನಗುವಿಗೂ ನಗದಿಗೂ ನಂಟಿಲ್ಲ
-ಮುಳಗೋ ಮೂಡೋ ಆಟಕೆ ಬೇಸರವೇ ರವಿಗೆ
-ದೂಡು ದೂಡು ದುರಭಿಮಾನ
– ಕಾಲಚಕ್ರವನಾರು ಮೀರ ಬಲ್ಲರು
-ಜೀವವಿಲ್ಲದೆ ಜೀವಿಯುಂಟೆ
ಇಂತಹ ಉಪಮೆ, ರೂಪಕ, ಸಹಜ ನುಡಿ ಚಿತ್ರಗಳಿಂದ ಅವರ ವಚನಗಳು ಶ್ರೀಮಂತವಾಗಿವೆ.
ಕವಿಯತ್ರಿ ನಿಂಗಮ್ಮ ಇದನ್ನು ಬಹಳ ಸುಂದರವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಅವರ ವಚನಗಳಲ್ಲಿ ಬಳಸುವ ಉದಾಹರಣೆಗಳು ಸೋಪಜ್ಞವಾಗಿವೆ. ತುಂಬ ತಿಳಿವಳಿಕಸ್ಥ ಅನುಭಾವಿಕ ಮನಸ್ಸೊಂದರ ಆಪ್ತ ರಚನೆಗಳಾಗಿ ಅವರ ವಚನಗಳು ಗಮನ ಸೆಳೆಯುತ್ತವೆ. ಮುನ್ನುಡಿ ಬರೆದ ಶರಣ ಡಾ.ಈಶ್ವರ ಮಂಟೂರ ಅವರು ಹೇಳಿದಂತೆ ನಿಂಗಮ್ಮನವರ ವಚನ ಸಂಭ್ರಮದಲ್ಲಿ ‘ವಚನ ಬೆಳೆ ಗದ್ದೆ ಹುಲುಸಾಗಿದೆ’. ಏಕೋ ಅವರು ಮತ್ತೆ ಬೇರೆ ವಚನಗಳ ಸಂಕಲನವನ್ನೇಕೆ ತರಲಿಲ್ಲ? ಎಂಬ ಕೊರಗು ಓದುಗರನ್ನು ಕಾಡುತ್ತದೆ. ಅಥವಾ ಪ್ರಕಟವಾಗದ ವಚನಗಳು ಅವರ ‘ಸುಪ್ತ ಸಂಪತ್ತಾಗಿ’ ಅವರಲ್ಲಿರಬಹುದು.ಅವುಗಳನ್ನು ಪ್ರಕಟಿಸುವ ಮೂಲಕ ಓದುಗರ ಅನುಭಾವ ಶ್ರೀಮಂತಿಕೆಯನ್ನು ಹೆಚ್ಚಿಸಲಿ ಎಂದು ಆಶಿಸಬಹುದಾಗಿದೆ.
ಡಾ.ವೈ.ಎಂ.ಯಾಕೊಳ್ಳಿ

ಚೆನ್ನಾಗಿದೆ
ಖುಷಿಆತ ನೋಡವ