ಕನ್ನಡ ನಾಡಿನ ಅನರ್ಘ್ಯ ರತ್ನ… ಹೆಚ್ ನರಸಿಂಹಯ್ಯ : ಅವರು 1960ರಲ್ಲಿಯೇ ಭೌತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿದ್ದರು. ವಿದೇಶಿ ಶಿಕ್ಷಣ ಪದ್ಧತಿಯಲ್ಲಿನ ಅನುಕೂಲಗಳನ್ನು ತಮ್ಮ ಕಾರ್ಯಸಿದ್ಧಿಗೆ ಬಳಸಿಕೊಂಡ ಅವರು ಮೂರು ವರ್ಷ ಕಾಲ ತೆಗೆದುಕೊಳ್ಳಬಹುದಾದ ತಮ್ಮ ಪಿ ಹೆಚ್ ಡಿ ಪದವಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರೈಸಿ ಮತ್ತಷ್ಟು ಆಳವಾದ ಅಧ್ಯಯನಕ್ಕೆ ತೊಡಗಿ ತಮಗೆ ನೀಡಲ್ಪಟ್ಟ ಸ್ಕಾಲರ ಶಿಪ್ ಹಣವನ್ನು ಅರ್ಥಪೂರ್ಣವಾಗಿ ಬಳಸಿದರು. ಅತ್ಯಂತ ಕಡಿಮೆ ಮೂಲಭೂತ ಸೌಲಭ್ಯಗಳನ್ನು ಹೊಂದಿಯೂ ಕೂಡ ಮನುಷ್ಯ ಬದುಕಬಲ್ಲ ಎಂಬುದನ್ನು ತೋರಿಸಿಕೊಟ್ಟವರು. ವಿದೇಶದಲ್ಲಿದ್ದ ಬಹಳಷ್ಟು ದಿನಗಳ ಊಟವನ್ನು ಕೇವಲ ಉಪ್ಪಿಟ್ಟು ಮತ್ತು ಮೊಸರನ್ನದಲ್ಲಿಯೇ ಮುಗಿಸಿದವರು…. ಅವರೇ ನಮ್ಮ ಪ್ರೀತಿಯ ಹೆಚ್ ನರಸಿಂಹಯ್ಯ.

ಅತ್ಯಂತ ಸರಳ ಜೀವಿ. ಓದು ಅಧ್ಯಯನಗಳಲ್ಲಿ ಬದುಕನ್ನು ಸಾಗಿಸಿದ, ಮದುವೆ ಮಾಡಿಕೊಳ್ಳದೇ ಇದ್ದರೂ ಸಾವಿರಾರು ಮಕ್ಕಳಿಗೆ ಅಕ್ಷರಶಃ ತಂದೆಯ ಪ್ರೀತಿಯನ್ನು ಧಾರೆ ಎರೆದ ಮೇರು ವ್ಯಕ್ತಿ. ವಿಶ್ವವಿದ್ಯಾಲಯವನ್ನೇ ಕಟ್ಟಿದ ಮಹನೀಯ.
ಅತ್ಯುತ್ತಮ ಭೌತಶಾಸ್ತ್ರದ ಪ್ರಾಧ್ಯಾಪಕ, ಮೂಡನಂಬಿಕೆಗಳಿಗೆ ಸಡ್ಡು ಹೊಡೆದವರು, ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂಬ ವಿಚಾರಧಾರೆಯನ್ನು ಹೊಂದಿದವರು ಎಚ್. ನರಸಿಂಹಯ್ಯನವರು.ಸರಳ ಜೀವನ ಶೈಲಿಯ ಕುರಿತು ಮಾತನಾಡಿದ ಗಾಂಧೀಜಿಯವರ ಮಾತುಗಳನ್ನು ಅಕ್ಷರಶಃ ಪಾಲಿಸಿದ ಜಗತ್ತಿನ ಅಪ್ಪಟ ಗಾಂಧಿವಾದಿ ಹೆಚ್. ನರಸಿಂಹಯ್ಯನವರು.

 1920 ಜೂನ್ 6 ರಂದು ಗೌರಿಬಿದನೂರು ತಾಲೂಕಿನ ಹಳೆಯ ಉಪ್ಪಾರಹಳ್ಳಿಯಲ್ಲಿ ಕಡುಬಡತನದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಹೆಚ್ ನರಸಿಂಹಯ್ಯನವರು ತಮ್ಮ ಪ್ರಾಥಮಿಕ ಶಾಲೆಯನ್ನು  ಹೊಸೂರಿನಲ್ಲಿ ಪೂರೈಸಿ, ಮಾಧ್ಯಮಿಕ ಶಾಲೆಯನ್ನು ಗೌರಿಬಿದನೂರಿನಲ್ಲಿ ಪೂರೈಸಿದರು. ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧವಾದ ನ್ಯಾಷನಲ್ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ಪ್ರೌಢ ಮತ್ತು ಪದವಿ ಶಿಕ್ಷಣಗಳನ್ನು ಪೂರೈಸಿದರು.

 ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಆಗಮಿಸಿದ ಗಾಂಧೀಜಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳುವ ಕೆಲಸ ಹೆಚ್. ನರಸಿಂಹಯ್ಯನವರದಾಗಿದ್ದು ಗಾಂಧಿಯವರಿಂದ ಪ್ರಭಾವಿತರಾದ ಅವರು ತಮ್ಮ ಜೀವನದುದ್ದಕ್ಕೂ ಗಾಂಧಿ ತತ್ವಗಳನ್ನು ಪಾಲಿಸುವ ಮೂಲಕ ಗಾಂಧೀಜಿಯವರ ಪರಮ ಅನುಯಾಯಿಯಾದರು.

 ಹೈಸ್ಕೂಲು ಪ್ರವೇಶ ಪಡೆಯಲು ಬೆಂಗಳೂರಿಗೆ ಬಂದಾಗ ಅವರ ಬಳಿ ಬಿಡಿಗಾಸು ಇರಲಿಲ್ಲವಾದ್ದರಿಂದ ಸುಮಾರು 85 ಕಿ.ಮೀ ದೂರವನ್ನು ಎರಡು ದಿನಗಳಲ್ಲಿ ನಡೆದು ತಲುಪಿದ ಹೆಚ್ ಎನ್ ರವರು ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ಪಡೆದರು. ಮುಂದೆ ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಓದನ್ನು ಅರ್ಧದಲ್ಲಿಯೇ ನಿಲ್ಲಿಸಿ 1942ರ ಭಾರತ ಸ್ವಾತಂತ್ರ್ಯ ಚಳುವಳಿಯ ಅಂಗವಾದ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದ ಅವರು ಸುಮಾರು 9 ತಿಂಗಳು ಸೆರೆಮನೆ ವಾಸ ಅನುಭವಿಸಿದರು. 1944ರಲ್ಲಿ ಬಿ ಎಸ್‌ ಸಿ ಹಾನರ್ಸ್ ಪದವಿಯನ್ನು ಪಡೆದ ಅವರು ಮುಂದೆ 1946 ರಲ್ಲಿ ಎಂ ಎಸ್ ಸಿ ಪದವಿಯನ್ನು ಪಡೆದರು.
 ನಾತಕೋತ್ತರ ಪದವಿಯ ನಂತರ ತಾವು ಓದಿದ ಕಾಲೇಜಿನಲ್ಲಿ 1960ರವರೆಗೆ ಪ್ರಾಧ್ಯಾಪಕರಾಗಿ ಮುಂದುವರೆದರು. ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ
 ಪಿ ಎಚ್ ಡಿ ಪದವಿ ಪಡೆಯಲು ಅಮೆರಿಕಾಗೆ ತೆರಳಿದ  ಹೆಚ್ ಎನ್ ಅವರು ವಿದೇಶದ ನೆಲದಲ್ಲಿ ಕೇವಲ ಉಪ್ಪಿಟ್ಟು ಮತ್ತು ಮೊಸರನ್ನಗಳಲ್ಲಿಯೇ ತಮ್ಮ ಊಟವನ್ನು ಮುಗಿಸುತ್ತಿದ್ದರು.

  ಪಿ ಹೆಚ್ ಡಿ ಮತ್ತು ಎಂಫಿಲ್ ಪದವಿಗಳನ್ನು ಒಂದೇ ಸ್ಕಾಲರ್ಶಿಪ್ ನಲ್ಲಿ ಓದಿ ಪೂರೈಸಿದ ಡಾಕ್ಟರ್ ಹೆಚ್. ನರಸಿಂಹಯ್ಯ ಅವರು ಮತ್ತೆ ಬೆಂಗಳೂರಿಗೆ ಮರಳಿ ಅದೇ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ವೃತ್ತಿಯನ್ನು ಮುಂದುವರೆಸಿದರು.

 ಮುಂದೆ 1972 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಆಗಿ 1977 ರವರೆಗೆ ಕಾರ್ಯನಿರ್ವಹಿಸಿದರು. 1979 ರಲ್ಲಿ ಕರ್ನಾಟಕ ಸರ್ಕಾರದ ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

 1969ರಲ್ಲಿ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತರಾದ ಅವರಿಗೆ ಮುಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ಪ್ರಧಾನ ಮಾಡಿತು, 1984 ರಲ್ಲಿ ಪದ್ಮಭೂಷಣ ಪ್ರಶಸ್ತಿ ಅವರಿಗೆ ಲಭಿಸಿತು.
 ತಮ್ಮ  ಹೋರಾಟದ ಹಾದಿ ಮತ್ತು ತೆರೆದ ಮನ
 ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು.
 ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅವರು ತೋರಿದ ಸಾಧನೆಗೆ ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಅವರಿಗೆ ಲಭಿಸಿತು. ಕರ್ನಾಟಕ ರಾಜ್ಯ ಸರ್ಕಾರವು ತನ್ನ 2ನೆಯ ಅತ್ಯುನ್ನತ ಪ್ರಶಸ್ತಿ ಬಸವ ಪುರಸ್ಕಾರವನ್ನು 2001ರಲ್ಲಿಅವರಿಗೆ ನೀಡಿ ಗೌರವಿಸಿತು. 1990ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪನ್ನು ಹೊಂದಿದ ಅವರು 1995 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಪಡೆದರು.

ಸಾಮಾನ್ಯವಾಗಿ ಮನುಷ್ಯನಲ್ಲಿರುವ ಆಹಾರ, ಒಳ್ಳೆಯ ಉಡುಗೆ ತೊಡುಗೆಗಳ ಅವಶ್ಯಕತೆಗಳನ್ನು ಅಷ್ಟಾಗಿ ಪರಿಗಣಿಸದ ಹೆಚ್ಚೆನ್ ತಮ್ಮ ಬದುಕಿನುದ್ದಕ್ಕೂ ಸರಳ ಸಾತ್ವಿಕ ಸಸ್ಯಾಹಾರ ಸೇವಿಸಿದರು , ಪ್ರತಿದಿನ ಬೆಂಗಳೂರಿನ ಲಾಲ್ ಬಾಗಿನಲ್ಲಿ ಒಂಬತ್ತರಿಂದ ಹತ್ತು ಕಿಲೋಮೀಟರ್ ನಡಿಗೆ, ನ್ಯಾಷನಲ್ ಕಾಲೇಜಿನ ಹಾಸ್ಟೆಲ್ ನ ಕೋಣೆಯ ವಾಸ, ನೆಲದ ಮೇಲೆ ಕುಳಿತುಕೊಳ್ಳಲು ಒಂದು ಪುಟ್ಟ ಜಮಖಾನ ಮತ್ತು ಒಂದು ಪುಟ್ಟ ಬರೆಯುವ ಮೇಜು ಇವಿಷ್ಟನ್ನೇ ತಮ್ಮ ಆಸ್ತಿಯನ್ನಾಗಿ ಹೊಂದಿದ್ದರು. ಅವರು ಬರೆಯಲು ಕುಳಿತುಕೊಳ್ಳುವ ಜಾಗದ ಮೇಲೆ ಅಷ್ಟೋತ್ತರದಲ್ಲಿ ತಲೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಬರಿಸಲಾಗಿತ್ತು ಈ ಕುರಿತು ಬೇರೆಯವರು ಪ್ರಶ್ನೆ ಕೇಳಿದಾಗ ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂಬ ತಮ್ಮ ವಿಚಾರಧಾರೆಯನ್ನು ಅವರು ಅರುಹಿದರು.

ಮುಂದೆ ಬೆಂಗಳೂರು ವಿಶ್ವವಿದ್ಯಾಲಯವನ್ನು ಕಟ್ಟಬೇಕೆಂಬ ಪ್ರಸ್ತಾವನೆ ಬಂದಾಗ ಮಂಚೂಣಿಯಲ್ಲಿ ನಿಂತು ಬೆಂಗಳೂರು ವಿಶ್ವವಿದ್ಯಾಲಯದ ಪ್ರತಿ ಹಂತದ ಬೆಳವಣಿಗೆಗೆ ಕಾರಣವಾದರು. ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಾಯ್ಸ್ ಚಾನ್ಸಲರ್ ಆಗಿ ಕಾರ್ಯನಿರ್ವಹಿಸಿದರು.

 ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಅವರು ಬೆಂಗಳೂರು ಸೈನ್ಸ್ ಫೋರಮ್ ಸಂಸ್ಥೆಯನ್ನು ಸ್ಥಾಪಿಸಿದರು. ಅತೀಂದ್ರಿಯ ಶಕ್ತಿಗಳ, ಕಪ್ಪು ಮಾಟ ಮಂತ್ರಗಳ ಕುರಿತಾದ ಸಂಶೋಧನೆಗಳ…ಸೈಂಟಿಫಿಕ್ ಇನ್ವೆಸ್ಟಿಗೇಷನ್ ಆಫ್ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್ ಸಂಸ್ಥೆಗೆ ಚುನಾಯಿತರಾದ ಭಾರತದ ಏಕೈಕ ವ್ಯಕ್ತಿ ಅವರಾಗಿದ್ದರು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನು ಖಚಿತವಾಗಿ ಒಪ್ಪುತ್ತಿದ್ದ ಹೆಚ್ ನರಸಿಂಹಯ್ಯ ಅವರು ಸಾಯಿಬಾಬಾ ಮುಂತಾದ ಅತೀಂದ್ರಿಯ ಶಕ್ತಿಗಳನ್ನು ಹೊಂದಿದ್ದೇವೆ ಎಂದು ಹೇಳುವ ವ್ಯಕ್ತಿಗಳನ್ನು, ಬಾಬಾಗಳನ್ನು  ಸಾರ್ವಜನಿಕವಾಗಿ ಅವರು ತಮ್ಮ ಚಮತ್ಕಾರಗಳನ್ನು ತೋರಬೇಕು ಎಂದು ಸವಾಲೆಸೆಯುವ ಮೂಲಕ  ಆಹ್ವಾನಿಸಿದರು. ಆದರೆ ಇವರ ಸವಾಲನ್ನು ಸ್ವೀಕರಿಸುವ ಧೈರ್ಯವನ್ನು ಯಾರೂ ತೋರಲಿಲ್ಲ. ಒಂದೊಮ್ಮೆ ಸೂರ್ಯ ಗ್ರಹಣದ ಸಮಯದಲ್ಲಿ ಇವರು ಮತ್ತು ಇವರ ಸ್ನೇಹಿತರ ಗುಂಪು ಗ್ರಹಣ ಎಂಬುದು ಖಗೋಳ ದಲ್ಲಿ ಉಂಟಾಗುವ ಒಂದು ವೈಜ್ಞಾನಿಕ ಕ್ರಿಯೆ ಅದಕ್ಕೂ ನಾವು ಆಹಾರವನ್ನು ಸೇವಿಸಬಾರದು ಎಂಬ ಮೂಡನಂಬಿಕೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಲು ಬೆಂಗಳೂರಿನ ಬಸವನಗುಡಿಯ ವೃತ್ತವೊಂದರಲ್ಲಿ ಸಾರ್ವಜನಿಕವಾಗಿ ಉಪ್ಪಿಟ್ಟನ್ನು ತಯಾರಿಸಿ ಸೇವಿಸಿದ್ದರು.

 ತಮ್ಮ ಓದು, ಬರಹ, ಸಂಶೋಧನೆ  ಪಠ್ಯ ಚಟುವಟಿಕೆಗಳ ಮತ್ತು ವಿಶ್ವವಿದ್ಯಾಲಯದ ಕಾರ್ಯ ಭಾರಗಳಲ್ಲಿ ಅವರು ಮದುವೆಯಾಗುವುದನ್ನೇ ಮರೆತರು ಎಂಬುದನ್ನು ಅವರು ಹೇಳಿದರೆ ಅದು  ಅತಿಶಯೋಕ್ತಿ ಏನಲ್ಲ…. ಅವರಂತೆ ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವ, ಅಧ್ಯಯನ ಶೀಲ ವ್ಯಕ್ತಿಯನ್ನು ಮತ್ತೆ ಹುಟ್ಟಿಸಲು ಆ ಭಗವಂತನಿಗೆ ಆಗಿಲ್ಲ ಎಂಬ ಮಾತುಗಳು ಅವರ ಜ್ಞಾನ ದಾಹವನ್ನು, ಮಕ್ಕಳ ಕುರಿತಾದ ಮಮತೆಯನ್ನು ಮತ್ತು ಜೀವನ ಪ್ರೀತಿಯನ್ನು  ತೋರುತ್ತದೆ.

 ಅತ್ಯಂತ ಸರಳ ಜೀವನ ಶೈಲಿ, ಸತ್ಯಪರತೆ, ನಿಷ್ಠುರತೆ, ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಂಡ ನರಸಿಂಹಯ್ಯ ಅವರು ತಾವು ಓದಿದ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ನ ಒಂದು ಕೋಣೆಯಲ್ಲಿಯೇ ತಮ್ಮ ಜೀವನವನ್ನು ಕಳೆದರು.

 ಗಾಂಧೀಜಿಯವರನ್ನು ಮೀರಿಸುವಂತಹ ಗಾಂಧಿವಾದಿಯಾಗಿದ್ದ ಹೆಚ್ ಎನ್ ರವರು ಕನ್ನಡ ನಾಡಿನ ಅನರ್ಘ್ಯ ರತ್ನಗಳಲ್ಲಿ ಒಬ್ಬರಾಗಿದ್ದು ಅವರು ‘ತೆರೆದ ಮನ’ದಿಂದ ತಮ್ಮ ಬದುಕಿನ ‘ಹೋರಾಟದ ಹಾದಿ’ಯನ್ನು ನಿರೂಪಿಸಿದ್ದು ನಮಗೆ ಸ್ಪೂರ್ತಿಯನ್ನು, ಬದುಕಿನಲ್ಲಿ ಉತ್ಸಾಹವನ್ನು ತುಂಬುವ ಅವರಿಗೆ ಇದೋ ನನ್ನ ನಮನ.


Leave a Reply

Back To Top