ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

*ಗಂಗೆಯೊಡನಾಡಿದ ಘಟ್ಟ* *ಬೆಟ್ಟಂಗಳು ಕೆಟ್ಟ ಕೇಡನೋಡಿರಯ್ಯ*
*ಅಗ್ನಿಯೊಡನಾಡಿದ ಕಾಷ್ಟಂಗಳು ಕೆಟ್ಟ ಕೇಡ ನೋಡಿರಯ್ಯ*
*ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಿರಯ್ಯ*
*ಜ್ಞಾನಿಯೊಡನಾಡಿದ ಅಜ್ಞಾನಿ ಕೆಟ್ಟ ಕೇಡ ನೋಡಿರಯ್ಯ*
*ಅಯ್ಯಾ ಪರಶಿವ ಮೂರ್ತಿ ಹರನ ನಿಮ್ಮ ಜಂಗಮಲಿಂಗದೊಡನಾಡಿ*
*ಎನ್ನ ಭವಾದಿಭವಂಗಳು ಕೆಟ್ಟ ಕೇಡ* *ನೋಡಿರಯ್ಯ*
*ಚೆನ್ನಮಲ್ಲಿಕಾರ್ಜುನಾ*
ಅಕ್ಕಮಹಾದೇವಿ ಅವರ ಈ ಒಂದು ವಚನವು ಆಯಾ ವಸ್ತು ಹಾಗೂ ಸಂಗದಿಂದ ಬದಲಾಗುವ ಗುಣವನ್ನು ನಾವು ಅಕ್ಕನ ಈ ವಚನದಲ್ಲಿ ತಿಳಿಯಬಹುದಾಗಿದೆ .
ಗಂಗೆ ಎಂದರೆ ಶುದ್ಧ ಎನ್ನುವುದು . ಇಲ್ಲಿ ಗಂಗಾ ನದಿಯು ವಿವಿಧ ಬೆಟ್ಟ ಹಾಗೂ ಘಟ್ಟಗಳಲ್ಲಿ ಹರಿದು ತನ್ನ ಜೊತೆ ಜೊತೆಗೆ ಚಿಕ್ಕ ಚಿಕ್ಕ ಝರಿ ಹಳ್ಳ ಕೊಳ್ಳ ನದಿಗಳನ್ನು ಜೊತೆ ಜೊತೆಗೆ ಸೇರಿಸಿಕೊಂಡು ಹರಿದು ತುಂಬಿ ಬರುವ ಈ ಗಂಗಾ ನದಿಗಳ ಜೊತೆ ಜೊತೆಗೆ ಹೀಗೆ ಹರಿದು ಬರುವುದರಿಂದ ಆ ಘಟ್ಟಗಳು ಹಾಗೂ ಬೆಟ್ಟಗಳಲ್ಲಿಯ ಕೆಟ್ಟ ಗುಣಗಳು ಹೋಗಿ ಅವು ಕೂಡಾ ಗಂಗಾನದಿಯಂತೆ ಸ್ವಚ್ಛ ತಿಳಿಯಾಗಿ ಪವಿತ್ರವಾಗುವಂತೆ ಎನ್ನ ಚೆನ್ನಮಲ್ಲಿಕಾರ್ಜುನನೂ ಕೂಡಾ ಗಂಗೆಯಂತೆ ಎನ್ನುವ ಅರ್ಥವನ್ನು ತಿಳಿಯಬಹುದು .ನಾನು ಬೆಟ್ಟ ಗುಡ್ಡಗಳಲ್ಲಿ ಹರಿಯುವ ಜಲ.ಈ ಜಲ ಹರಿದುಕೊಂಡು ಬಂದು , ಶುಭ್ರ ಹಾಗೂ ಪವಿತ್ರವಾದ ಗಂಗೆಯ ಜೊತೆ ಸೇರಿಕೊಂಡಂತೆ .
ಎಲ್ಲೋ ಬಿದ್ದ ಕಟ್ಟಿಗೆಯು ಅಗ್ನಿಯಲ್ಲಿ ಬೆಂದು ಪವಿತ್ರ ಜ್ಯೋತಿಯಾದಂತೆ.ಕಟ್ಟಿಗೆಯೊಳಗಿನ ಹೀನ ಗುಣಗಳು ಕಳೆದು ಪವಿತ್ರ ಜ್ಞಾನ ಜ್ಯೋತಿಯ ಹಾಗೆ ಬೆಳಗುವ ಕಟ್ಟೆಗೆಯೂ ಕೂಡಾ ಪವಿತ್ರವಾಯಿತು . ಹೀಗೆ ಅಗ್ನಿಯ ಸ್ಪರ್ಶದಿಂದ ಕಟ್ಟಿಗೆಯು ಪವಿತ್ರಗೊಂಡಂತೆ .
ಜ್ಯೋತಿ ಎಂದರೆ ನಮ್ಮ ಮನದ ಅಜ್ಞಾನ ಅಂದರೆ ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವುದು . ಜ್ಞಾನಿಯೊಡನಾಡಿ ಮನದ ಅಂಧಕಾರ ಕಳೆದುಕೊಂಡು ಜ್ಞಾನಿಯಾದೆನು .
ಜ್ಞಾನಿಯೊಂದಿಗೆ ಅಜ್ಞಾನಿಯು ಕೂಡಿ , ತನ್ನಲ್ಲಿರುವ ಅಜ್ಞಾನ ಕಳೆದು ಜ್ಞಾನಿಯಾಗುವ ಗುಣ .ನಾನು ಅಜ್ಞಾನಿ ಚೆನ್ನಮಲ್ಲಿಕಾರ್ಜುನಾ, ಜ್ಞಾನಿಗಳಾದ ಶರಣರ ಸಂಗದ ಜೊತೆಗೆ ಕೂಡಿ ನಾನು ಜ್ಞಾನಿಯಾದೆ ,ಅರಿವು ಆಚಾರ ಲಿಂಗ ಜಂಗಮದ ಮಹೋನ್ನತಿಯಲ್ಲಿ ನಾನು ನಿನ್ನನ್ನು ಕಂಡುಕೊಂಡೆ ಭಗವಂತಾ , ದಿವ್ಯ ಜ್ಞಾನಿ ಪರಮ ಜ್ಞಾನಿಗಳ ಜೊತೆಗೆ ನನ್ನನ್ನು ಸೇರಿಸಿ ಅಲುಗದಂತೆ ಮಾಡು ಪರಮಾತ್ಮ.
ಅಯ್ಯಾ ಪರಶಿವ ಮೂರ್ತಿ ಹರನ ನಿಮ್ಮ ಜಂಗಮಲಿಂಗದೊಡನೆ ಇರಿಸು ಹೇ ಪರಮಾತ್ಮ ಜಂಗಮ ಪ್ರೇಮಿ.ಚೆನ್ನಮಲ್ಲಿಕಾರ್ಜುನ . ಪರಮಾತ್ಮನ ಸೃಷ್ಟಿಯ ಈ ಜಗದ ಲೀಲೆಯಲಿ, ದಿವ್ಯ ಬೆಳಕಿನ ಚೈತನ್ಯ ಸ್ವರೂಪ ಶಕ್ತಿ ಪರಮಾತ್ಮನೇ ಲಿಂಗ ಜಂಗಮವಾಗಿ ಅರಿವು ಮೂಡಿಸಿದ ಎನ್ನೋಡೆಯ ಚೆನ್ನಮಲ್ಲಿಕಾರ್ಜುನನ ಜೊತೆಗೆ ಸದಾ ಇರುಸು ಭಗವಂತಾ . ಇದರಿಂದ ನನ್ನ ಮನದ ಕತ್ತಲು ಕಳೆದು ಜ್ಞಾನ ಮಾರ್ಗವ ನೀ ನೀಡು.ಈ ಹುಟ್ಟು ಮತ್ತು ಸಾವುಗಳ ಬಂಧನದ ಈ ಸಂಸಾರದಿಂದ ಎನ್ನನು ಬಂಧಮುಕ್ತಗೊಳಿಸು.
ನಿಮ್ಮ ಜಂಗಮ ಲಿಂಗದಲ್ಲಿ ನಾನು ಈ ಸಂಸಾರದ ಬಂಧನದಿಂದ ನಿಜ ಮುಕ್ತಳಾದೆ ಚೆನ್ನಮಲ್ಲಿಕಾರ್ಜುನಾ
ಡಾ ಸಾವಿತ್ರಿ ಕಮಲಾಪೂರ




