ಪುಸ್ತಕ ಸಂಗಾತಿ
ವಾಣಿ ಭಂಡಾರಿ
ಅವರ ಕೃತಿ
“ಖಾಲಿ ಜೋಳಿಗೆಯಕನವರಿಕೆಗಳು”
ಕವಯತ್ರಿಯ
ಮನದಾಳದ ಮಾತುಗಳು ಮತ್ತು
ಪರಿಚಯ
ಪುಸ್ತಕದ ಹೆಸರು-
ಖಾಲಿ ಜೋಳಿಗೆಯ ಕನವರಿಕೆಗಳು
ಲೇಖಕರು-ವಾಣಿ ಭಂಡಾರಿ-9846426931
ಪ್ರಕಾಶಕರು
ಗೋಮಿನಿ ಪ್ರಕಾಶನ, ತುಮಕೂರು- 99866 92342
ಪುಸ್ತಕದ ಬೆಲೆ
ರೂ. ೧೨೦/-.೦೦,
ಮುದ್ರಣ: ೨೦೨೪
ಮನದ ಭಾವ ಹಾಡಾದಾಗ”
“ಮುಳ್ಳಿನ ಮೇಲಿನ ಸಿಟ್ಟಿಗೆ
ಬೇಲಿಗೆ ಬೆಂಕಿ ಹಾಕಬೇಡ
ಸಾವಿರ ಮುಳ್ಳುಗಳ ನಡುವೆ
ಒಂದು ಹೂ ಅರಳಿತು”
(ಗಾಲೀಬ)
ಕವಿತೆ ಬರೆಯುವುದೆಂದರೆ ಮನದ ಭಾವಕ್ಕೆ ಹೆಪ್ಪು ಹಾಕಿ ಮಸೆದು ಕಾಯಿಸಿ ಘಮಗುಡಿಸಿ ತುಪ್ಪವಾಗಿಸುವ ಕೆಲಸ. ಇಂತಹ ಮಹತ್ಕಾರ್ಯವು ಯಾಕೆ ಏನು ಹೇಗೆ ಎಲ್ಲಿ ಉಧ್ಭವಿಸುತ್ತವೆ ಎಂಬುದು ಕವಿಯ ಆ ಕ್ಷಣದ ಭಾವದೊರೆತೆಗೂ ಕೂಡ ನಿಲುಕದ ವಿಚಾರ. ಒಟ್ಟಾರೆ ಕವಿ ಸಮಯ ಎನ್ನುವುದು ಕಾವ್ಯದ ತುಮುಲವನ್ನು, ತಲ್ಲಣ,ತಳಮಳ,ಬೇನೆ, ಮುಂತಾದ ಭಾವಾತೀತವಾದ ಭಾವಕ್ಕೆ ಕೈಗೆಟುದಿರುವ ಅಂಶಗಳು ಆ ಕವಿ ಸಮಯದಲ್ಲಿ ಹುಟ್ಟಿಕೊಳ್ಳುವುದು ಸ್ವತಃ ಕವಿಗೂ ಕೂಡ ಅಚ್ಚರಿಯ ಸಂಗತಿ. ಕವಿತೆ ಕಟ್ಟುವುದಲ್ಲ ಹುಟ್ಟುವುದು ಎಂಬಂತೆ ಇಲ್ಲಿರುವ ಕವಿತೆಗಳು ತಾನಾಗಿ ಚಿಗುರೊಡೆದು ಬೃಹದಾಕಾರವಾಗಿ ಹುಟ್ಟಿ ಹೊರ ಬಂದಂತಹವು. “ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದಿರುವಂತವು. ಕವಿಯು ಸಮಾಜದ ದನಿಯಾಗಿ ಅವರು ಕಂಡು ಕೊಂಡ ರೀತಿ,ಅಮೂರ್ತ ಕಲ್ಪನೆಗಳಿಗೆ ಮೂರ್ತತೆಯ ಕಲಾಕಾರಿಕೆಯನ್ನು ಕುಂಚದಲ್ಲಿ ಕಟ್ಟುವ ಒಂದು ಸಣ್ಣ ಪ್ರಯತ್ನ.
ಪ್ರೀತಿಯ ಹಲವು ಮಗ್ಗುಲುಗಳನ್ನು ವಿವೇಚಿಸುವ ನಿಟ್ಟಿನಲ್ಲಿ ಪ್ರೀತಿಗೆ ಪ್ರೀತಿಯೇ ಜಗತ್ತು.ಅದರಾಚೆಯ ಪ್ರಪಂಚ ಇನ್ನೊಂದು ಇದೆಯೊಂಬುದೊಂದು ಕಲ್ಪನೆ ಸಹ ಇರಲಾದಂತಹ ಭಾವತೀವ್ರತೆಯೇ ಪ್ರೀತಿ ಎಂಬ ನಿಲುವಿನಲ್ಲಿ ದೈವಿಕ ಪ್ರೇಮಜಲವೆಂದೂ ಬತ್ತದ ಒರತೆಯಂತೆ ಸದಾ ಚಿಮ್ಮಿ ಚೈತನ್ಯ ಶೀಲವಾಗಿ ಮಿನುಗುವ ನಕ್ಷತ್ರದಂತೆ ಕಾಣುವುದು. ಅಮೂರ್ತ ಭಾವಗಳಿಗೂ ಇಲ್ಲಿ
ಸಾಗರಸಾಂಗತ್ಯದ ಸೆಳವಿದೆ,ಭಾವಗಳ ಹೋಯ್ದಾಟದಲ್ಲಿ ಆತ್ಮ ಸಂಗಾತಿಯೊಂದಿಗೆ ವಿಹರಿಸಿ ಜನ್ಮ ಸಾರ್ಥಕ್ಯಗೊಳಿಸುವ ಪರಿಪೂರ್ಣ ಮಾನನೀಯವಾದ ಭಾವದ ಎಲ್ಲೆಗಳು ಎಳೆ ಬಿಸಿಲಿಗೆ ಹೊಳೆವ ನೀರ ಹನಿಯಂತೆ ಗೋಚರಿಸುತ್ತವೆ.
ಕವಿ ಭಾವವೊಂದು ಕಾವ್ಯದೊಂದಿಗೆ ಸಾಂಗತ್ಯ ಬೆಳೆಸುವಂತೆ, ಪ್ರೀತಿ ಭಾವವೊಂದು ಪ್ರೀತಿಯಿಂದ ಪ್ರೀತಿಯೊಂದಿಗೆ,ಪ್ರೀತಿಗಾಗಿ ಆತ್ಮ ಸಾಂಗತ್ಯದಲ್ಲಿ ಸಖ್ಯ ಬೆಳಸಿ ಬಾಹ್ಯ ಸೌಂದರ್ಯಕ್ಕೆ ಒಳಗೊಳ್ಳದೆ ಆಂತರಿಕ ಭಾವೋದ್ವೇಗದಲ್ಲಿ ಹನಿ ಹನಿಯಾಗಿ ಹರಿದು ಜಗದಗೊಡವೆ ಮರೆತು ಸಾಗರ ಸೇರುವ, ಜನ್ಮ ಜನ್ಮಾಂತರ ನಂಟಿನ ಭಾವಗಳೇ ಎನಿಸುವ ಈ ನಕ್ಷತ್ರಪುಂಜದ ಬೆಳಗು ಈ ಪ್ರೀತಿ ಸೊಬಗು.
ಆಧುನಿಕ ಬದುಕಿನ ಜಂಜಾಟದ ನಡುವೆ ಭಿನ್ನ ಭಿನ್ನ ಕಾರ್ಯ ಕಲಾಪನ್ನು ಪರಿಶೀಲಿಸುವಾಗ ನೈಜ ಪ್ರೀತಿಗೆ ಜೀವಂತಿಕೆಯನ್ನು ಹೊಂದಿದ ಪಾವಿತ್ರ್ಯೆಯ ಅಂತಃಕರಣವಿರುವುದನ್ನು ನಾವು ಮರೆತಂತೆ ಆಗಿದೆ. ಆ ಹಂಬಲಿಕೆ ಕನವರಿಕೆ ಕನಸು ತಲ್ಲಣಗಳು ವಿವಿಧ ಹಂತಗಳಲ್ಲಿ ಕಾವ್ಯದುದ್ದಕ್ಕೂ ಅವನಿಗಾಗಿ ಆಕೆಯ ಒಳ ಬೇಗುದಿಗಳು ಜೀವಂತಿಕೆಯನ್ನು ಪಡೆದಿವೆ.ಪ್ರೀತಿ ಇರದೆ ಈ ಜಗದಲ್ಲಿ ಏನಿದೆ? ಪ್ರೀತಿಯೇ ಎಲ್ಲ ಎಂಬ ನವಿರು ಭಾವದ ಜಗತ್ತು ತೆರೆದುಕೊಂಡಿದೆ. ಪ್ರೀತಿಯನ್ನು ವಿಶ್ಲೇಷಣೆಗೆ ಒಳಪಡಿಸಲುಬಾರದು ಹಾಗೂ ವಿಶ್ಲೇಷಿಸಲಾಗದು.
ಒಂದು ಹಂತದಲ್ಲಿ ಪ್ರೀತಿಯೇ ಜಗತ್ತು ಎಂದ ಕವಯತ್ರಿ ಅದರ ವೈರುದ್ಯಗಳನ್ನು ಇನ್ನೊಂದು ಮುಖದಲ್ಲಿ ಕಾಣುತ್ತಾರೆ.ಇಲ್ಲಿ ಕಾಣುವ ಬಹುಪಾಲು ಮಹಿಳೆಯರು ಹೆಚ್ಚಾಗಿ ಬಡತನದ ಬೇಗೆ ಅಥವಾ ತಳಸ್ತರದ ನೋವು,,ಸಮಾಜದ ಟೀಕೆ ಟಿಪ್ಪಣಿಗಳಿಗೆ ನರಳಿ ನೊಂದ ಭಾವ,ಹಸನಾದ ಪ್ರೀತಿಗೆ ಹೆಸರಿಡಲಾಗದೆ ನೈತಿಕತೆಯ ನೆಲೆಯ ತಳಮಳ, ಅನ್ಯಾಯ, ಸಂಪ್ರದಾಯದ ಶೋಷಣೆಗೆ ಮೈಯೊಡ್ಡಿ ನಿಂತ ಕರಾಳತೆಯ ಹಿಂಸೆ,ನಂಬಿಕೆಯ ಕೊಲೆಗೆ ಪ್ರೀತಿ ಎಂಬ ಎರಡಕ್ಷರದ ಹಿಂದೆ ನಡೆಯುವ ಆಗೋಚರ ಭಾವಾಂತರಂಗದ ತಲ್ಲಣ, ಹಾಗೂ ಮನುಷ್ಯ ಪ್ರೀತಿಯನ್ನೆ ಕಳೆದು ಕೇವಲ ದಾಸ್ಯದ ನೆರಳಿನಲ್ಲಿ ನೋವುಣ್ಣುವ ಚೋಮನ ಪದದಿಂದ ಬೆಳ್ಳಿಯ ದಿಟ್ಟತೆಯವರೆಗೂ ಹಬ್ಬಿ, ಎಲ್ಲರೊಳಗೆ ನಿಲೆ ನಿಂತ ಅವ್ವ ಈ ನೆಲದ ಒಂದು ಶಕ್ತಿಯಾಗಿ ರೂಪಕವಾಗಿ ಮತ್ತೆ ಕಾಡುತ್ತಾಳೆ,ಜತನಗೈಯ್ದು ಕಾಯುವ ಧೀಶಕ್ತಿ ಎಲ್ಲರೊಳಗೆ ಅವ್ವ ಮತ್ತೆ ಮತ್ತೆ ಹೆಣ್ಣಿನಂತರಂಗ ಒಳಹೊಕ್ಕು ಹೊರಹೊಮ್ಮುತ್ತಾಳೆ. ಗಂಡು ರಾಜಕಾರಣದ ಹಿನ್ನೆಲೆಯಲ್ಲಿ ಪ್ರಭುತ್ವವು ತನ್ನ ಕಪಿಮುಷ್ಟಿಯಲಿ ಕಾರುಣ್ಯದ ಬೆಳಕು ನೀಡದೆ ಸ್ತ್ರೀಯರನ್ನು ಬಲಿಪಶುವಾಗಿಸುವ ಅನಾದಿ ಕಾಲದ ಶೋಷಣೆಯ ದನಿಯಾಗಿ ಕವಯಿತ್ರಿ ವೃಷ್ಟಿ ನೆಲೆಯಿಂದ ಸಮಷ್ಟಿಯ ದನಿಯಾಗಿ ಪ್ರತಿನಿಧಿಸುತ್ತಾರೆ. ಇಂತಹ ಕವಿತೆಗಳು ಯಾಕೆ ಸೃಷ್ಟಿಯಾದವು ಎಂಬ ಸಹಜ ಚಿಂತನೆಗೆ ನಾನು ಮೊದಲೆ ತಿಳಿಸಿದಂತೆ,,ಕವಿ ಸಮಯದ ಚಮತ್ಕಾರ ಮತ್ತು ಜೀವಸೆಲೆಗೆ ಚೈತನ್ಯವನ್ನು ನೀಡುವುದೇ ಈ ದೈವಿಕ ಪ್ರೀತಿಯಾದ್ದರಿಂದ ಅದೊಂದು ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತನವೇ ಈ ಕವಿತೆಗಳು.
ಈ ಹಿನ್ನೆಲೆಯಲ್ಲಿ ನನ್ನೆಲ್ಲ ಕವಿ ಭಾವದ ಬಸಿರಿನ ಬಯಕೆ ಬೇನೆ ಜನನ ನಾಮಕರಣ,ಮಗುವಿನ ಅಳು ನಗು ತುಂಟಾಟ ಕೀಟಲೆ ಸಹಿಸಿಕೊಂಡು ಎಲ್ಲವನ್ನು ಮೊದಲಾಗಿ ವಿಮರ್ಶಿಸಿ ಚರ್ಚಿಸಿ ಸರಿ ತಪ್ಪುಗಳ ಅವಲೋಕಿಸಿ,ಭಾವಬುದ್ದಿಗೆ ಒಂದಿಷ್ಟು ಬುದ್ದಿ ಹೇಳಿ ಬದುಕು ಬರಹಕ್ಕೆ ಬೆಳಕಾದ ಎಸ್. ಎಸ್ .ಕೆ ಮತ್ತು ಎಸ್.ಕೆ. ಇವರಿಗೂ ನಾನು ಅನಂತ ಋಣಿಯಾಗಿದ್ದೇನೆ. ನನ್ನ ನೆಚ್ಚಿನ ಹಿತೈಷಿಗಳಿಗೆ, ಮಿತ್ರವೃಂದಕ್ಕೆ , ಮುಖಪುಟದ ಎಲ್ಲ ಸ್ನೇಹಿತರಿಗೆ,
ನನ್ನಾಳದಲ್ಲಿ ಬೆರೆತ ನನ್ನ ಜೀವದ ಗೆಳತಿಗೆ ಹಾಗೂ ನನ್ನ ಸರಿ ತಪ್ಪುಗಳ ವಿವೇಚಿಸುವ ಮುದ್ದಿನ ತಂಗಿಗೆ ಮತ್ತು ನೋವಲ್ಲೂ ನಲಿವಲ್ಲೂ ಜೊತೆಯಾದ ನನ್ನ ಸಹೋದರಿಯರಿಗೆ ನೆನಕೆಗಳು.
ನನ್ನ ಜೀವ ಭಾವದಲ್ಲಿ ಬೆರೆತು ಬದುಕಿಗೆ ನೆರಳಾಗಿ ನಿಂತು, ಕಷ್ಟದಲ್ಲಿ ಸುಖದಲ್ಲಿ ಜೊತೆಗೂಡಿ ಕೈ ಹಿಡಿದು ನಡೆಸುವ ನನ್ನ ಆತ್ಮಸಂಗಾತಿಗೆ ಕೃತಜ್ಞತೆಗಳು ಧನ್ಯವಾದಗಳು ಇವೆಲ್ಲ ಕೇವಲ ಪದಗಳಷ್ಟೆ. ಅದರಾಚೆಗಿನ ಬದುಕಿಗೆ ಸಾರಥಿಯಾದ ಪ್ರೇಮದ ಮೂರ್ತಿಗೆ ನನ್ನೊಲವಿಗೆ ನಾನೆಂದು ಅಬಾರಿ ಋಣಿಯಾಗಿದ್ದೇನೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಬರಹಕ್ಕೆ ಪ್ರೇರಣ ಶಕ್ತಿಯಾದ ಸೃಜನಶೀಲ ಮನಸುಗಳಿಗೆ, ಆತ್ಮೀಯರಿಗೂ ಮತ್ಯೊಮ್ಮೆ ಮಗದೊಮ್ಮೆ ಕೃತಜ್ಞತೆಗಳು.
ಸಂಕಲನದ ಕಾರ್ಯಭಾರ ಹೊತ್ತು ಪ್ರಕಟಿಸುತ್ತಿರುವ ಆಪ್ತರಾದ ಗೋಮಿನಿ ಪ್ರಕಾಶನದ ಗುಬ್ಬಚ್ಚಿ ಸತೀಶ್ ಅವರಿಗೆ ಅವರ ಪರಿಶ್ರಮಕ್ಕೆ ನನ್ನ ಕೃತಜ್ಞತೆಗಳು. ಖಾಲಿ ಜೋಳಿಗೆಯ ಕನವರಿಕೆಗಳು ಸಹೃದಯರ ಕನವರಿಕೆಗಳಾಗಿಯು ಎದೆಯೊಳಗೆ ನೆಲೆ ನಿಂತಿರಬಹುದು.ಈ ಹಿನ್ನೆಲೆಯಲ್ಲಿ ಕಾವ್ಯ ನಮೆಲ್ಲರ ದನಿ. ಈ ಕನವರಿಕೆಗಳನ್ನು ಕೊಂಡು ಓದುವ ಸಂಪ್ರದಾಯ ಇರಲೆಂದು ಬಯಸುತ್ತೇನೆ.̲̲
ವಾಣಿ ಭಂಡಾರಿ ಅವರ ಕಿರು ಪರಿಚಯ
ಮೂಲತಃ ಮಲೆನಾಡಿನ ಸಸ್ಯ ಸಮೃದ್ಧ ಮಡಿಲಾದ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ಭೈರಾಪುರದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಾಹಿತ್ಯ ಸಂಗೀತ ಪ್ರಿಯರು.ಮನೆಯ ಪರಿಸರವು ಅದಕ್ಕೆ ತಕ್ಕಂತೆ ಇದ್ದ ಪ್ರಯುಕ್ತ ಚಿಕ್ಕಂದಿನಿಂದಲೇ ಆಟಪಾಠ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿ ಕೊಳ್ಳುತ್ತಿದ್ದರು. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನೆಲ್ಲ ತನ್ನೂರು ರಿಪ್ಪನ್ ಪೇಟೆಯಲ್ಲೆ ಮುಗಿಸಿ ಉನ್ನತ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡು, ಕನ್ನಡ ಉಪನ್ಯಾಕರಾಗಿ ಸೇವೆ ಸಲ್ಲಿಸುತ್ತಲೇ ತಾವು ಸಹ ಕಲಿಕಾರ್ಥಿಯಾಗಿಯೇ, ವಿದ್ಯಾರ್ಥಿಗಳಿಗೆ ಕಥೆ,ಕವನ ಚುಟುಕು ಭಾವಗೀತೆ ಹೀಗೆ ಹತ್ತಾರು ಪ್ರಕಾರಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಬರೆಸಿ ಅವರ ಸೃಜನಶೀಲತೆಯನ್ನು ಚಿಕಿತ್ಸಕ ಮನೋದೃಷ್ಟಿಗೆ ಒಳಪಡಿಸುತ್ತಿದ್ದರು.ತಮ್ಮ SSCL ವ್ಯಾಸಂಗ ಮುಗಿಯುತ್ತಿದ್ದಂತೆ,,ಹೆಚ್ಚಿನ ಓದು ಸಂಗೀತ ಸಾಹಿತ್ಯ ಜ್ಯೋತಿಷ್ಯ ಇವುಗಳಿಗಾಗಿ,,,
“ಬಹುಮುಖ ಪ್ರತಿಭೆ” ಅವಾರ್ಡ್ ಅನ್ನು “ನಮ್ಮೂರ್ ಪೌಂಡೇಷನ್ ಹೈದರಾಬಾದ್” ಇವರಿಂದ ೨೦೦೫ ರಲ್ಲಿ ಪಡೆದಿರುವುದು ಇವರ ಸೃಜನಶೀಲತೆಗೆ ಮತ್ತೊಂದು ಗರಿ. “ಸಂತನೊಳಗಿನ ಧ್ಯಾನ” ಗಜಲ್ ಕಾವ್ಯ ಕೃತಿಯು “ಕನ್ನಡ ಪುಸ್ತಕ ಪ್ರಾಧಿಕಾರ” ಕ್ಕೆ ೨೦೨೦ ರಲ್ಲಿ ಆಯ್ಕೆಯಾಗಿದ್ದು,,
ದ. ಸಾ. ಪ. ಗದಗ ಇವರಿಂದ
“ಗಜಲ್ ಕಾವ್ಯ ರತ್ನ ಪ್ರಶಸ್ತಿ”-೨೦೨೨ ಲಭಿಸಿದೆ. ಇದೆ ಕೃತಿಗೆ ೨೦೨೨ ರಲ್ಲಿ ಉಮಾಶಂಕರ ಪ್ರತಿಷ್ಟಾನ ಮುಖಪುಟ ಪ್ರಶಸ್ತಿ ಲಭಿಸಿದೆ.ಅವರ ಹಾಗೂ ಅವರ ನೆಚ್ಚಿನ ಸಾಹಿತ್ಯ ಕೃಷಿ ಕುರಿತು ಕುವೆಂಪು ವಿಶ್ವವಿದ್ಯಾಲಯವು ಕಿರು ಸಂಪ್ರಬಂಧ ಮಂಡಿಸಿರುವುದು ಸಂತಸದ ವಿಷಯ. ಇವರ ಸಾಹಿತ್ಯ ಕೃಷಿಗಾಗಿ “ಅಖಿಲ ಭಾರತ ಕವಯಿತ್ರಿಯರ ಸಂಸ್ಥೆ” ಯ ೨೦೨೪ ರ ‘ಸುಧಾ ಅನಂತ ಅಪರಂಜಿ ದತ್ತಿ’ ಪ್ರಶಸ್ತಿ ಸಹ ಲಭಿಸಿದೆ
ರಾಜ್ಯಮಟ್ಟದ ಗಜಲ್ ಸ್ಪರ್ಧೆ ಪ್ರಥಮ”
( ಹ.ಹ.ಇಬ್ಬನಿ) ಸಾ.ಬಳಗದ ವತಿಯಿಂದ ೩ ದಿನದ ಸತತ ಸ್ಪರ್ಧೆಯ ಸುತ್ತಿನಲ್ಲಿ ಪ್ರಥಮ ವಿಜೇತರಾಗಿ ತುಮಕೂರು ವಿವಿ.ಯ ಕುಲಸಚಿವರಿಂದ ಬಹುಮಾನ ಪಡೆದದ್ದು ಅವಿಸ್ಮರಣೀಯ.
“ರಾಜ್ಯ ಮಟ್ಟದ ಭಾವಗೀತೆ ಪ್ರಥಮ “(ಹ.ಹ.ಇಬ್ಬನಿ)
“ಕವನ ಸ್ಪರ್ಧೆ”( ಭಾ.ಸಂಗಮ)
“ದಸರ ಕಥಾಸ್ಪರ್ಧೆ”
“ಪ್ರಬಂಧ ಸ್ಪರ್ಧೆ”
ಹೀಗೆ ಹತ್ತಾರು ವಿಭಾಗಗಳಲ್ಲಿ ತಮ್ಮ ಸಾಹಿತ್ಯದ ಛಾಪನ್ನು ಮೂಡಿಸಿ ಪ್ರಶಸ್ತಿ ಬಹುಮಾನ ಪಡೆದಿರುವ ಇವರು ಹಲವಾರು ತಾಲೂಕು ಮತ್ತು.ಜಿಲ್ಲಾ “ಕ.ಸಾ.ಪ.ಸಮ್ಮೇಳನ”ಗಳು
“ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ”
“ಲೇಖಕಿಯರ ಸಂಘ ಕಾರ್ಯಕ್ರಮ
“ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ”
ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಚನ ಮತ್ತು ಉಪನ್ಯಾಸಗಳನ್ನು ನೀಡಿರುತ್ತಾರೆ,ಹಾಗೂ “ಆಕಾಶವಾಣಿ ಯುವವಾಣಿ” ಕಾರ್ಯಕ್ರಮದಲ್ಲಿ ರೆಡಿಯೋ ಸಂದರ್ಶನದ ಮೂಲಕ ಇವರ ಮಾತಿನ ಮೋಡಿ ಸಹ ಕೇಳಬಹುದು.
ಈಗಾಗಲೇ ನಾಡಿನ ಹಲವಾರು ಪತ್ರಿಕೆಯಲ್ಲಿ ತಮ್ಮ
“ಸತ್ಯವಾಣಿ ಕಟೋಕ್ತಿ – ನಿತ್ಯ ಸುಭಾಷಿತ”
“ವ್ಯಕ್ತಿತ್ವ ವಿಕಸನ – ಸಾವನ್ನು ಮುಂದೂಡಿ’, “ಅಂತರ್ ದೃಷ್ಟಿ”-ವಿಮರ್ಶೆ”, “ಮಲ್ನಾಡು ಕವಳ- ಲಲಿತ ಪ್ರಬಂಧ”. “ಮಾನಸ ಸಂಜಾತೆ”, “ತುಂಗೆ ತಪ್ಪಲಿನ ತಂಬೆಲರು”,,,, ಹೀಗೆ ಮುಂತಾದ ಅಂಕಣಗಳು, ಬರಹಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ,ಸಹೃದಯರ ಮನೆ ಮನ ತುಂಬಿದೆ. ತಮ್ಮನ್ನು ಕೇವಲ ಒಂದು ವಿಚಾರಕಷ್ಟೆ ಸೀಮಿತಗೊಳಿಸಿಕೊಳ್ಳದೆ ಮನುಷ್ಯ ಪ್ರೀತಿ ಹಂಚುತ್ತಾ,ಭಾವೈಕ್ಯತೆಯನ್ನು ಬಿತ್ತುವ ಇವರು ಸಾಹಿತ್ಯ ಸಂಗೀತ ತನ್ನ ಉಸಿರು ಜೀವನಾಡಿ ಎಂದು ಸದಾ ಧ್ಯಾನಸ್ಥರಾಗಿ ಅದರೊಳಗೆ ತನ್ಮಯರಾಗಿ ಬಿಡುತ್ತಾರೆ.
ಇನ್ನೂ ಹತ್ತಾರು ಕೃತಿಗಳನ್ನು ಬಿಡುಗಡೆಗೆ ಕೈಯಲ್ಲಿರಿಸಿ ಕಾಯುತ್ತಿರುವ ಇವರು “ಸಂತನೊಳಗಿನ ಧ್ಯಾನ” ಚೊಚ್ಚಲ ಗಜಲ್ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಜನಮನ ಸೂರೆಗೊಂಡ ಅದರ ವಿಮರ್ಶಾಕೃತಿಯೇ “ಸಂತ ಮತ್ತು ಸಮೀಕ್ಷೆ” ಎಂಬ ಖುಷಿಯನ್ನು ವ್ಯಕ್ತ ಪಡಿಸಿ ನಾಡಿನ ಜನರ ಬೊಗಸೆ ತುಂಬಿಸಿದ್ದಾರೆ.
ಪುಸ್ತಕದ ವಿವರ ಮತ್ತು ದೊರೆಯುವ ವಿವರಗಳು
ಪುಸ್ತಕದ ಹೆಸರು-
ಖಾಲಿ ಜೋಳಿಗೆಯ ಕನವರಿಕೆಗಳು
ಲೇಖಕರು-ವಾಣಿ ಭಂಡಾರಿ-9846426931
ಪ್ರಕಾಶಕರು
ಗೋಮಿನಿ ಪ್ರಕಾಶನ, ತುಮಕೂರು- 99866 92342
ಪುಸ್ತಕದ ಬೆಲೆ
ರೂ. ೧೨೦/-.೦೦,