ಸಂಗೀತ ರವಿರಾಜ್ ಅವರ ಕೃತಿ “ಪಯಸ್ವಿನಿಯ ತೀರದಲಿ” ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು

 ಒಂದೆರೆಡು ವರುಷಗಳಿಂದ ಹಿಂದೆ ಪರಿಚಯವಾದ ಸಂಗೀತ ರವಿರಾಜ್  ನನ್ನ ಮನಸಿಗೆ ತೀರಾ ಹತ್ತಿರವಾದವರು. ಮೊದಲ ನೋಟದಲ್ಲಿಯೇ ಅವರ ಹೊಳಹುವಿನ  ಕಂಗಳಲ್ಲಿ ಚುರುಕುತನ ಕಂಡೆ,ಹಾಗೆಯೇ ಬಹಳ ಸಾಧಿಸುವ ಹೆಣ್ಣು ಮಗಳು ಎಂದೆಣಿಸಿದ್ದು ಸುಳ್ಳಲ್ಲಾ.  ಅವರ ಪಯಸ್ವಿನಿ ನದಿಯ ತೀರದಲ್ಲಿ ಪ್ರಬಂಧ ಸಂಕಲನ ಓದಿದಾಗ ನನ್ನ ನಿರೀಕ್ಷೆ ದಿಟವಾಯಿತು.ಗ್ರಾಮೀಣ ಭಾಗದ ಹೆಣ್ಣು ಮಗಳಾದ ಸಂಗೀತ ತನ್ನ ಕೃಷಿ ಕಾರ್ಯಗಳೊಂದಿಗೆ ಏಳು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಪರಿಚಯಿಸಿರುವುದು ಸಂತಸದ ವಿಷಯ.
ಪಯಸ್ವಿನಿಯ ತೀರದಲ್ಲಿ ಇದು ಪುಸ್ತಕದ ಮೊದಲ ಪ್ರಬಂಧ ಈ ಪ್ರಬಂಧ ಓದುವಾಗಲೇ ಮುಂದಿನ ಪಬಂಧ ಓದುವ ಕುತೂಹಲವನ್ನು ಮೂಡಿಸುತ್ತದೆ.
ಲೇಖಕಿಗೆ ನದಿಯ ಬಗೆಗಿನ ಪ್ರೀತಿ,ವ್ಯಾಮೋಹ,ಅದರೊಳಗಿನ ಒಡನಾಟಕ್ಕೆ ತನ್ನನ್ನು ತಾನೇ ತೆರೆದುಕೊಂಡಂತೆ ಭಾಸವಾಗುತ್ತದೆ.ನದಿ ಬತ್ತಿದಾಗ ಮರುಗುವುದು,ತುಂಬಿ ತುಳುಕಿದಾಗ ನಲಿಯುವ ಲೇಖಕಿಯ ಮನ ನದಿಯಲ್ಲಿರುವ ಆಪ್ತತೆಯನ್ನು ತಿಳಿಸುತ್ತದೆ.ಹಾಗೂ ಪಯಸ್ವಿನಿ ತೀರ ಅವರ ಬರಹಕ್ಕೆ ಸ್ಪೂರ್ತಿಯ ಸಂಕೇತವಾಗಿದೆ. ನದಿ ದಾಟಲು ಸಂಕ ಮಾಡುವಾಗ ಅದರ ಅಂದ ಕೆಡುತ್ತದೆಯೊ ಏನೋ ಎಂಬ ಕೊರಗು,ಗ್ರಾಮದವರು ಮಳೆಗಾಲಕ್ಕಾಗಿ ತಾತ್ಕಾಲಿಕ ಪಾಲ ಮಾಡುವಾಗ ಅವರ ಶ್ರಮದ ಬದುಕನ್ನು ಹಾಗು ಅಪಾಯಗಳ ಸಂಭಾಳಿಸುವುದನ್ನು ಕಣ್ಣಿಗೆ ಕಟ್ಟುವಂತೆ ಬರಹದಲ್ಲಿ ಅಭಿವ್ಯಕ್ತಿಸಿದ್ದಾರೆ. ಅನಿವಾರ್ಯವಾಗಿ ಹೊಂದಿಕೊಳ್ಳುವಂತಹ ಬದುಕನ್ನು ಕಲಿಸಿದ್ದಾರೆ. ತನ್ನ ಪಾಡಿಗೆ ತಾನು ಹರಿಯುವ ನದಿಯಂತೆ ಜೀವನ ಪಾಠದ ಅರಿವನ್ನು ಮೂಡಿಸಿದ್ದಾರೆ.
ಮನಸನ್ನು ಮುದಗೊಳಿಸುವ ಬಾಲ್ಯದ ಆಟಗಳಿಂದ ಕ್ರೀಡೆಯಲ್ಲಿಯೂ ಗುರುತಿಸಿಕೊಂಡ ಲೇಖಕಿಗಿದ್ದ ಆಟದ ಆಸಕ್ತಿಯ ಅರಿವಾಗುತ್ತದೆ. ಅವರ ಎಳೆವೆಯ ಬದುಕಿನ ಸಾಲು ಸಾಲು ಚಿತ್ರಣಗಳು ನನ್ನ ಎಳೆವೆಯನ್ನು ಮೆಲುಕು ಹಾಕುವಂತೆ ಮಾಡಿತು, ಬಾಲ್ಯದ ಎಲ್ಲಾ ತರಹದ ಅನುಭವಗಳನ್ನು ಅನುಭವಿಸಿದ ಲೇಖಕಿಗೆ ಇಂದಿನ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಮರುಕ ಹುಟ್ಟಿಸುತ್ತದೆ. ಹಾಗೆಯೆ ರಸ್ತೆ ಪಕ್ಕದ ಮನೆ ಅಚ್ಚುಕಟ್ಟಾಗಿರುವುದರೊಂದಿಗೆ ಮಾತು ನಯವಾಗಿರಬೇಕು ಹಾಗು ಮನಸ್ಸು ಕೂಡ ಕರುಣಾಭಾವದಲ್ಲಿರಬೇಕು ಎನ್ನುವುದು ಲೇಖಕಿಯ ಅನುಭವದಿಂದ ಅರಿವಾಗುತ್ತದೆ. ಹಲ್ಲಿನ  ಶುಚಿತ್ವದ ಬಗೆ ತಿಳಿಸುತ್ತಾ ಮದುವೆ ತಿರಸ್ಕರಿಸಿದ ಹೆಣ್ಣಿನ ಬದುಕಿನ ದಮನಿತ ಸ್ವರಗಳು ಅನಾವರಣಗೊಂಡಿದೆ.  ಅಡುಗೆ ಮನೆ ವಿಚಾರಕ್ಕೆ ಬಂದಾಗ ಹಿಂದಿನ ಮತ್ತು ಆಧುನಿಕತೆಯ ತುಲನೆ ಮಾಡುತ್ತಾ, ಆಧುನಿಕತೆಗೆ ಮನಸ್ಸನ್ನು ಹರಿ ಬಿಡದೆ ಹಿಂದಿನ ಒಲೆಯಲ್ಲಿ ಬೇಯಿಸುವುದೇ ಸ್ವರ್ಗ ಸುಖವೆಂದು ಜೀವನದ ಕುರಿತು ಕನಸ ನೇಯುತ್ತ  ಅದರ ವಿಶೇಷತೆ ಬಗ್ಗೆ ತಿಳಿಸಿದ್ದಾರೆ. ಮಳೆಯ ಬಗೆಗಿನ ತಾವನ್ನು ವಿವಿಧ ಕವಿಗಳ ಕವನದ ಸಾಲಿನಲ್ಲಿ ಕಟ್ಟಿಕೊಡುತ್ತಾ ವಿವರಿಸಿದ ಪರಿ ಬಹಳ ಸುಂದರವಾಗಿದೆ.
ಗ್ರಾಮೀಣ ಮಹಿಳೆ ಗಂಡಿಗೆ ಸರಿಸಮಾನವಾಗಿ ದುಡಿದರು ಅವಳ ಕೆಲಸ ಕ್ಷುಲಕವಾಗಿ ಕಾಣುವ ಪರಿಯನ್ನು ಅಲ್ಲಗೆಳೆಯತ್ತಾ, ಹಳ್ಳಿ ಹೆಣ್ಣು ಮಕ್ಕಳ ಆಸೆ ಆಕಾಂಕ್ಷೆಗಳೆಲ್ಲ ಒಳಗೆ ನಂದಿ ಹೋಗುವ ಪರಿ ಮನಮುಟ್ಟುವಂತೆ ಗ್ರಾಮೀಣ ಮಹಿಳೆಯ ಬಗ್ಗೆ ವಿಶ್ಲೇಷಿಸಿರುವುದು ಅವರ ಅಂತರಾಳದ ಭಾವಗಳನ್ನು ನಿರ್ಲಕ್ಷಿಸಿ ಬಾರದೆಂದು ಎಚ್ಚರಿಸುತ್ತಾ ಅವರ ಯಾತನೆಗೆ ಲೇಖಕಿ ಧ್ವನಿನಿಯಾಗಿದ್ದಾರೆ. ಸದ್ದಿಲ್ಲದೆ ಮಾಡುವ ಪ್ರಕೃತಿಯ ಅವಾಂತರಕ್ಕೆ ಕಾರಣ ನಾವೇ ಎಂದು ಖೇದ ವ್ಯಕ್ತಪಡಿಸುತ್ತಾ ತಮ್ಮ ಒಳ ದನಿಯಲ್ಲಿ ಪ್ರಕೃತಿಯ ಅವಘಡಗಳ ಬಗ್ಗೆ ತೆರೆದಿಟ್ಟ ಪರಿ ಉತ್ತಮವಾಗಿದೆ. ಬಾಲ್ಯದಲ್ಲಿ ಎಲ್ಲರಿಗೂ ಪ್ರಿಯವಾದದ್ದು ಸೈಕಲ್, ಸೈಕಲ್ ನಲ್ಲಿ ಸಂಗೀತರವರಿಗಿರುವ ವ್ಯಾಮೋಹದಿಂದ ಅರಿವಾಗುತ್ತದೆ ಅವರ ಮೊದಲ ಸಂಗಾತಿ ಸೈಕಲ್ ಎಂದು.
ಲೋಕಲ್ ನಾಯಿಯ ನಿಯತ್ತು ಮತ್ತು ಅದರಿಂದಾಗುವ ಅಪಾಯಗಳ ಸಂಭಾಳಿಸುವುದು
ಮತ್ತು ಶ್ರೀಮಂತ ನಾಯಿಯ ಸವಲತ್ತನ್ನು ತಿಳಿದು ಮರುಕ ವ್ಯಕ್ತಪಡಿಸಿರುವುದು  ಓದುಗರಿಗೆ  ಹಾಸ್ಯ ತರಿಸುತ್ತದೆ. ಅಣ್ಣ ತಂಗಿಯರ ಮಧುರ ಬಾಂಧವ್ಯವನ್ನು ಬಿಗಿಗೊಳಿಸುವ ಬಂಧವನ್ನು  ಭಾವುಕತೆಯಿಂದ ರಾಖಿಯಲ್ಲಿ ಬಿಗಿದಿಟ್ಟಿದ್ದಾರೆ.
ಒಳ ಹೊರಗೂ ದುಡಿಯುವ ಮಹಿಳೆ ತನ್ನ  ಹೆಚ್ಚಿನ ಸಮಯವನ್ನು ದುಡಿತ ಮತ್ತು ಮಕ್ಕಳ ಕಾಳಜಿಯಲ್ಲಿಯೇ ಕಳೆಯುತ್ತಾಳೆ, ಅನಾರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತ ನಿರಂತರವಾಗಿ ದುಡಿಯುವ ದುಡಿಮೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಬದುಕಿನಲ್ಲಿ ಎಡವಟ್ಟುಗಳು ಆಗುವುದು ಸಹಜ ಆದರೆ ಮದುವೆ ಮನೆಯ ಪ್ರಸಂಗಗಳ ಎಡವಟ್ಟುಗಳು ಒಂದು ವಿಶೇಷವೆನಿಸುತ್ತದೆ ಬಹಳ ತಮಾಷೆಯಾಗಿ  ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಕಣ್ಣಿಗೆ ಕಾಣದನ್ನು ನಂಬಿಕೆಯ ಬೊಟ್ಟು ನಂಬಿಸಿ ಬಿಡುತ್ತದೆ ಆ ನಂಬಿಕೆಯ ರಹದಾರಿಗೆ ವಿಸ್ತೃತವೆಂಬತ್ತೆ ಹಿಂದಿನಿಂದ ಬಂದಂತಹ ಆಚರಣೆ ಕ್ರಮಗಳನ್ನು ಅನುಸರಿಸಿಕೊಂಡು ನಿರುಮ್ಮಳಾಗಿಬಿಡುತ್ತೇವೆ. ಎಂದು ಇದರ ಬಗ್ಗೆ ನೆಮ್ಮದಿಯ ನಿಟ್ಟುಸಿರ ಚೆಲ್ಲಿದ್ದಾರೆ.
ಮಳೆಯ ರಕ್ಷಣೆಗೆ ತೆರೆದುಕೊಳ್ಳುವ ಕೊಡೆಯ ವ್ಯಾಖ್ಯಾನ ಕೊಡೆಯ ವಿವಿಧ ರಂಗಿನಂತೆ ಹಲವು ನೆನಪುಗಳೊಂದಿಗೆ ಕಟ್ಟಿಕೊಟ್ಟ ಪರಿ ಕೊಡೆ ಅರಳಿದಂತೆ ಮನದ ಭಾವಗಳು ತೆರೆದುಕೊಳ್ಳುತ್ತದೆ.
ಒತ್ತೆಕೋಲದ ಬಗ್ಗೆ ಹಾಗೂ ಭೂತಾರಾಧನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ವಿಷ್ಣುಮೂರ್ತಿ ಆರಾಧನೆಯ ವೈಶಿಷ್ಟ್ಯತೆ  ಹಾಗೂ  ಕೊಡು, ಕೊಳ್ಳುವಿಕೆ ವಿಚಾರ  ಕೇರಳರಾಜ್ಯದ ವಿಷ್ಣುಮೂರ್ತಿಯನ್ನು ನಮ್ಮಲ್ಲಿ ಭಕ್ತಿಪೂರ್ವಕವಾಗಿ ಆರಾಧಿಸುವುದು. ಅದು ತಲೆ ಎತ್ತಿದ ಉದ್ದೇಶವನ್ನು  ವೈಚಾರಿಕವಾಗಿ ಕಟ್ಟಿ ಕೊಟ್ಟಿದ್ದಾರೆ ಇದನ್ನು ಪ್ರತಿಯೊಬ್ಬರೂ ಅರಿಯಲೇಬೇಕು. ತುಂಬಿ  ಹರಿಯುವ ಪಯಸ್ವಿನಿ ನದಿ   ಕೃಷಿಚಟುವಟಿಕೆಗಳಿಗಲ್ಲದೆ,  ಅವಳ ಮೌನದಲ್ಲಿಯೇ  ಅಡಗಿರುವ ನೂರಾರು ಸತ್ಯಗಳನ್ನು,  ಲೇಖಕಿ ಅವಳೊಳಗೆ  ಇಳಿದು ನೂರಾರು ತುಮಲಗಳನ್ನು ಕಾಪಿರಿಸಿಕೊಂಡು ಪ್ರೀತಿ, ಗೌರವದಿಂದ  ಧನ್ಯತೆಯನ್ನು  ಸಾರಿದ್ದಾರೆ.
ಗ್ರಾಮೀಣ ಭಾಗದಲ್ಲಿ ನಡೆಯುವಂತಹ ನಿತ್ಯ ಚಟುವಟಿಕೆಗಳು, ಅಂತರಾಳದ ತಾಕಲಾಟದಿಂದ ನಡೆಯುವ ಘಟನೆಗಳು ಹಾಗೂ ಅನುಭವಗಳನ್ನು ಇಲ್ಲಿಯ ಪ್ರಬಂಧದ ಪರಿಕರವಾಗಿ ನಮ್ಮ ಮುಂದೆ ಇರಿಸಿದ್ದಾರೆ. ಗ್ರಾಮೀಣ ಮಹಿಳೆಯರು ಇದನ್ನು ಓದಿದಾಗ   ತಮ್ಮನ್ನು ತಾವೇ ಕಂಡಂತಹ ಭಾವ ಭಾಸವಾಗುತ್ತದೆ. ಹಾಗಾಗಿ ಇನ್ನು ಮುಂದಿನ ಬರಹಗಳು ಹೊಸ ವಿಚಾರ ಮತ್ತು ಆಲೋಚನೆಗಳೊಂದಿಗೆ  ಸಾಹಿತ್ಯಾಸಕ್ತರ ಮನ ತಣಿಸಬಲ್ಲರೆಂಬ ನಂಬಿಕೆಯಿದೆ. ಗ್ರಾಮೀಣ ಬದುಕಿನ ಕನ್ನಡಿಯಾಗಿರುವ  ಈ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ನಿಮಗೆ ಅಭಿನಂದನೆಗಳು ಸಂಗೀತ.  ನಿಮ್ಮ ಸಾಹಿತ್ಯ ಸೇವೆ ನಿರಂತರವಾಗಿರಲಿ, ಇನ್ನಷ್ಟು ಬರಹಗಳು ತಮ್ಮ ಲೇಖನಿಯಿಂದ  ಮೂಡಿ ಯಶಸ್ವಿಯಾಗಲಿ  ಎಂದು ಶುಭ ಹಾರೈಸುವ


Leave a Reply

Back To Top