ಪುಸ್ತಕ ಸಂಗಾತಿ

ವಿಮುಕ್ತೆ

ಪುಸ್ತಕ: ವಿಮುಕ್ತೆ

ಲೇಖಕರು: ಓಲ್ಗಾ

ಅನುವಾದಕರು: ಅಜಯ್ ವರ್ಮ ಅಲ್ಲೂರಿ

     ‘ವಿಮುಕ್ತ’ ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಬಹುಚರ್ಚಿತ ಕೃತಿಗಳಲ್ಲಿ ಒಂದು. ಓಲ್ಗಾ ಎಂಬ ಹೆಸರಿನಿಂದಲೇ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಚಿಂತಕಿ, ಅನುವಾದಕಿ, ಹಾಗೂ ಮಹಿಳಾ ಹಕ್ಕುಗಳ ಹೋರಾಟಗರ್ತಿಯಾಗಿರುವ ಇವರು ಪ್ರಸ್ತುತ ತೆಲುಂಗಾಣದ ಸಿಕಂದ್ರಾಬಾದಿನಲ್ಲಿ ನೆಲೆಸಿದ್ದಾರೆ. ಸ್ವೇಚ್ಛ, ನೀಲಿ ಮೇಘಾಲು, ರಾಜಕೀಯ ಕಥಲು, ಮಾಕು ಗೋಡಲು ಲೇವು, ಪ್ರಯೋಗಂ, ವಿಮುಕ್ತ ಇವು ಇವರ ಬಹುಚರ್ಚಿತ ಕೃತಿಗಳು. ಈ ವಿಮುಕ್ತ ಕೃತಿ ಹಲವು ಭಾಷೆಗಳಲ್ಲಿ ಅನುವಾದಗೊಂಡಿವೆ.  ಡಾ. ಸುಪ್ರಿಯ ಎಂ. ಅವರು ಇದನ್ನು ಮಲಯಾಳಕ್ಕೆ ಅನುವಾದ ಮಾಡಿದ್ದಾರೆ.

        ಅಜಯ್ ವರ್ಮಾ ಅಲ್ಲೂರಿ ಅವರು ಈ ಕಥಾ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಜ್ಞಾನದ ವಿದ್ಯಾರ್ಥಿಯಾದ ಅಜಯ್ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ, ಅ ನ ಕೃ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರು. ಗಗನ ಸಿಂಧು (ಕವಿತೆಗಳು), ಡಯಾನ ಮರ (ಅಲೆಹಾಂದ್ರಾ ಪಿಜಾರ್ನಿಕ್ ಸ್ಪಾನಿಶ್ ಕವಿತೆಗಳ ಕನ್ನಡಾನುವಾದ), ಕಲಲ ಇನ್ನೀಟ ಪಾಟ ( ವಿಭಾ ಅವರ ಕವಿತೆಗಳ ತೆಲುಗು ಅನುವಾದ) ಅವರ ಪ್ರಕಟಿತ ಕೃತಿಗಳು. ಕಳೆದ ಎರಡು ಮೂರು ವರ್ಷಗಳಿಂದೀಚೆ ಅನುವಾದ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ  ಎಂ.ಎಸ್ಸಿ (ಭೌತಶಾಸ್ತ್ರ) ಓದುತ್ತಿದ್ದಾರೆ.

           ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯಲ್ಲಿ ಒಟ್ಟು ೬ ಕಥೆಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಶೂರ್ಪನಖಿ, ಅಹಲ್ಯೆ, ರೇಣುಕ, ಮಂಡೋದರಿ ಊರ್ಮಿಳೆಯ ಪಾತ್ರಗಳು ಒಮ್ಮೆ ಮಿಂಚಿ ಮರೆಯಾಗುವುದಾದರೂ ಹಲವು ಕಾರಣಗಳಿಂದ ಓದುಗರ ಮನದಾಳದಲ್ಲಿ ಬೇರೂರಿ ನಿಂತಿವೆ. ರಾಮಾಯಣದಲ್ಲಿ ಅಮುಖ್ಯವಾಗಿ ಪರಿಗಣಿಸಲಾದ ಈ ಪಾತ್ರಗಳನ್ನು  ಓಲ್ಗಾ ಅವರು ತಮ್ಮ ಕಥೆಗಳಲ್ಲಿ ಕೇಂದ್ರ ಪಾತ್ರಗಳಾಗಿ ಆಯ್ದುಕೊಂಡು ಅವುಗಳಿಗೊಂದು ಅಸ್ಥಿತ್ವವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಈ ಪಾತ್ರಗಳೆಲ್ಲವೂ ಕಥಾ ನಾಯಕಿ ಸೀತೆಯೊಡನೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಂವಾದಿಸುತ್ತವೆ.  ಹಾಗೆ ಸೀತೆಯೊಂದಿಗಿನ ಭೇಟಿಯಲ್ಲಿ ಆ ಪಾತ್ರಗಳು ತಮ್ಮ ಅಂತರಂಗವನ್ನು ತೆರೆದು ತೋರಿಸುತ್ತವೆ.  ಅವುಗಳಿಂದ ಸೀತೆ ಹಲವು ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಾಳೆ. ಆ ಹೊಸ ಅರಿವಿನ ಬೆಳಕು ಕೊನೆಗಾಲದಲ್ಲಿ ಆಕೆಯನ್ನು ಮುನ್ನಡೆಸುತ್ತದೆ. ರಾಮನಿಂದ ಪರಿತ್ಯಕ್ತಳಾದ ಸೀತೆ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳ ಬೆಳವಣಿಗೆಯನ್ನು ಕಾಣುತ್ತಾ ಅವರ ಸಂಭ್ರಮದಲ್ಲಿ ತನ್ನ ಖುಷಿಯನ್ನು ಅರಸುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿ ಈ ಪಾತ್ರಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಈ ಕಥೆಗಳ ಶೀರ್ಷಿಕೆಗಳೂ ಅರ್ಥಪೂರ್ಣವಾಗಿದ್ದು ಆಕರ್ಷಣೀಯವಾಗಿದೆ.

         ಮೊದಲ ‘ಸಮಾಗಮ’ ಕಥೆಯಲ್ಲಿ, ಲವಕುಶರ ನಿಮಿತ್ತ ಸೀತೆ ಮತ್ತು ಶೂರ್ಪನಖಿಯರ ಅನಿರೀಕ್ಷಿತ ಭೇಟಿ ನಡೆಯುತ್ತದೆ. ತನ್ನ ಸೌಂದರ್ಯವನ್ನು ಕಳಕೊಂಡು ಇತರರ ಅವಮಾನ, ಪರಿಹಾಸ್ಯ, ನಿಂದನೆಗೆ ಗುರಿಯಾದ ಶೂರ್ಪನಖಿ ನೋವುಗಳನ್ನು ಮರೆಯಲು ಪ್ರಕೃತಿಯನ್ನು ಪ್ರೀತಿಸತೊಡಗುತ್ತಾ ತನ್ನೊಳಗಲ್ಲೂ ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾಳೆ. ನಿಸರ್ಗದ ಸೌಂದರ್ದಲ್ಲಿ ಖುಷಿಯನ್ನು ಅರಸುತ್ತಾ, ಹೂದೋಟವನ್ನು ಬೆಳೆಸುವ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಇಲ್ಲಿ ಬಾಹ್ಯ ಸೌಂದರ್ಯಕ್ಕಿಂತಲೂ ಅಂತರಂಗದ ಸೌಂದರ್ಯವೇ ಮಿಗಿಲೆಂದು ಲೇಖಕಿ ಪ್ರತಿಪಾದಿಸುತ್ತಾರೆ.

  ‘ಮೃಣ್ಮಯನಾದ’ ಕಥೆಯಲ್ಲಿ ತನ್ನದಲ್ಲದ ತಪ್ಪಿಗೆ ಗಂಡನಿಂದಲೇ ಶಾಪಕ್ಕೊಳಗಾಗಿ ಕಲ್ಲಾಗಿ ಯುಗಗಳ ಕಾಲ ರಾಮನ ಪಾದ ಸ್ಪರ್ಶಕ್ಕಾಗಿ ಕಾದು ಶಾಪ ವಿಮೋಚನೆ ಪಡೆದ ಅಹಲ್ಯೆಯನ್ನು ಕಾಣಬಹುದು. ವನವಾಸದ ಕಾಲದಲ್ಲಿ ಸೀತೆಯು ಅಹಲ್ಯೆಯನ್ನು ಭೇಟಿಯಾಗುತ್ತಾಳೆ.  ತನ್ನ ಜೀವನಾನುಭವದಿಂದ ತಿಳಿದುಕೊಂಡ ವಿಚರಾಗಳನ್ನು ಅಹಲ್ಯೆ ಹಂಚಿಕೊಳ್ಳುವಾಗ “ವಿಚಾರಣೆ ಮಾಡುವುದೆಂದರೇನು ಸೀತಾ?  ಅಪನಂಬಿಕೆ ತಾನೆ! ಅದಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ? ಎಂಬ ಮಾತು ಆ ಕ್ಷಣಕ್ಕೆ ಅರ್ಥವಾಗದಿದ್ದರೂ ಮುಂದೊಂದು ದಿನ ಸೀತೆಗೆ ಅಗ್ನಿಪರೀಕ್ಷೆ ಸಂದರ್ಭದಲ್ಲಿ ಮನವರಿಕೆಯಾಗುತ್ತದೆ. ಮುಂದೆ ಬಸುರಿಯಾಗಿದ್ದಾಗ ಮತ್ತೊಮ್ಮೆ ಅಹಲ್ಯೆಯೊಡನೆ ಮಾತನಾಡುತ್ತಾಳೆ. ಆಗ ಸೀತೆ ಆಕೆಯ ಮಾತುಗಳಿಂದ ತನ್ನನ್ನು ತಾನು ಅರಿತುಕೊಳ್ಳುತ್ತಾಳೆ. ಅದನ್ನೇ ಮುಂದೊಂದು ದಿನ ರಾಮನಿಗೂ ಹೇಳುತ್ತಾಳೆ. “ನಾನು ಭೂಪುತ್ರಿ ರಾಮಾ, ನಾನು ಯಾರೆಂದು ಈಗ ಅರಿತುಕೊಂಡಿದ್ದೇನೆ. ಈ ಇಡೀ ಲೋಕವೆಲ್ಲ ನನ್ನದೇ. ಯಾವ ಕೊರತೆಯೂ ಇಲ್ಲ ನನಗೆ, ನಾನು ಭೂಪುತ್ರಿ” ಎಂದು ಹೇಳುತ್ತಾ ಮಕ್ಕಳನ್ನು ರಾಮನಿಗೊಪ್ಪಿಸಿ ಎಲ್ಲಾ ಬಂಧನಗಳಿಂದಲೂ ಮುಕ್ತಳಾಗಲು ಬಯಸುತ್ತಾಳೆ.

‘ಮರಳ ಮಡಕೆ’  ಕಥೆಯಲ್ಲಿ, ಒಬ್ಬ ಗಂಡಸನ್ನು ನೋಡಿ ಚಂಚಲಗೊಂಡದ್ದಕ್ಕೆ ಗಂಡನಾದೇಶದಂತೆ ಮಗನಿಂದ ಶಿಕ್ಷೆಗೊಳಗಾದ ರೇಣುಕೆಯದ್ದೇ ಪ್ರಧಾನ ಪಾತ್ರ. ಗಂಡ ಮಕ್ಕಳಿಂದ ದೂರವಾಗಿ ಏಕಾಗ್ರತೆಯಿಂದ ಶಿಲ್ಪಗಳನ್ನು ತಯಾರಿಸುತ್ತಾ ಆ ಕಲೆಯನ್ನು ಮತ್ತೊಬ್ಬರಿಗೆ ಕಲಿಸುತ್ತ ಹೊಸ ಬದುಕು ಕಟ್ಟಿಕೊಂಡ ರೇಣುಕೆ “ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ತಾರಿಗೂ ಗೊತ್ತಿಲ್ಲ” ಎಂಬ ಅನುಭವಜನ್ಯವಾದ ಮಾತು ಸೀತೆಗೆ ಮೊದಲು ಅರ್ಥವಾಗದಿದ್ದರೂ ಮುಂದೆ ಪರಿಸ್ಥಿತಿಯೆ ಆಕೆಗದನ್ನು ಅರ್ಥಮಾಡಿಸುವುದು ವಿಪರ್ಯಾಸ.

‘ವಿಮುಕ್ತೆ’ ಕಥೆಯಲ್ಲಿ, “ಎಲ್ಲ ದುಃಖಗಳಿಗೂ ಮೂಲ ಕಾರಣ ಅಧಿಕಾರವೇ ಅಕ್ಕಾ” ಎಂದು ಹೇಳುವ ಊರ್ಮಿಳೆ ಯಾರ ಅಧಿಕಾರಕ್ಕೂ ಅಧೀನಳಾಗದೆ, ಅಧಿಕಾರದಿಂದ ಯಾರನ್ನೂ ಬಂಧಿಸಲು ಪ್ರಯತ್ನಿಸದೆ ಮುಕ್ತಳಾಗಲು ಬಯಸುತ್ತಾಳೆ. ಏಕಾಂತ ಮತ್ತು ಧ್ಯಾನದಲ್ಲೇ ತನ್ನ ನೆಮ್ಮದಿ, ಪ್ರೀತಿಯನ್ನು ಅರಸುತ್ತಾಳೆ. ಈ ಸಂದರ್ಭದಲ್ಲಿ ಊರ್ಮಿಳೆಯ ಬಗ್ಗೆ ಶೀಲಾ ಭಂಡಾರ್ಕರ್ ಅವರು ಬರೆದ  ‘ತಪ್ತ ಮೈಥಿಲಿ’ ಎಂಬ ಬರಹ ನೆನಪಾಗುತ್ತದೆ. ಅದರಲ್ಲೂ ಊರ್ಮಿಳೆಯ ಅಂತರಂಗದ ಶೋಧನೆಯಿದೆ.

‘ಅಶೋಕ’  ಕಥೆಯಲ್ಲಿ ಪತಿವ್ರತೆಯರ ಸಾಲಿನಲ್ಲಿ ಗುರುತಿಸಲ್ಪಟ್ಟ ಮಂಡೋದರಿಯ ವ್ಯಕ್ತಿತ್ವದ ಪರಿಚಯವಿದೆ. ಅಶೋಕವನವು ರಾವಣ ಮಂಡೋದರಿಗೆ ನೀಡಿದ ಒಲವಿನ ಉಡುಗೊರೆ. ಅಲ್ಲಿ ಮಂಡೋದರಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಾಳೆ. ಅದು ಆಕೆಯ ಧ್ಯಾನ ಮಂದಿರವೂ ಆಗಿರುತ್ತದೆ. ಅಲಂಕಾರಗಳನ್ನು ಮಾಡುವುದರಲ್ಲೇ ಜೀವನೋತ್ಸಾಹವನ್ನು ಕಾಣುವ ಮಂಡೋದರಿ ತನ್ನ ಆಚಾರ ವಿಚಾರ ಸಂಸ್ಕೃತಿಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುವುದನ್ನು ಕಾಣಬಹುದು. ಹಾಗೇ ರಾವಣ ತಪ್ಪು ಹಜ್ಜೆಗಳನ್ನಿಡುವಾಗಲೆಲ್ಲ ಆತನನ್ನು ಸದಾ ಎಚ್ಚರಿಸುವ  ಮಂಡೋದರಿ, ರಾವಣ ಸತ್ತಾಗ,  ಆರ್ಯ ಧರ್ಮದ ವಿಧವೆಯರಂತೆ ಬದುಕಲು ಒಪ್ಪದೆ ಸದಾ ಸರ್ವಾಲಂಕಾರಭೂಷಿತಳಾಗಿರಲು ಬಯಸುತ್ತಾಳೆ. “ಈ ಮಂಡೋದರಿ ಆರ್ಯ ಧರ್ಮಗಳನ್ನು ಅನುಸರಿಸಿ ನಿರಲಂಕಾರಿಯಾಗುವವಳಲ್ಲ. ವೈಧವ್ಯವನ್ನು ಹೊಂದುವವಳಲ್ಲ” ಎಂದು ಪ್ರತಿಭಟಿಸುತ್ತಾಳೆ.

ಕುಮಾರಸ್ವಾಮಿ ತೆಕ್ಕುಂಜ ಅವರು ‘ಮಂಡೋದರಿಯ ಪಾತ್ರವನ್ನಿಟ್ಟುಕೊಂಡು ಕಾದಂಬರಿ ಬರೆದಿದ್ದಾರೆ. ಹಾಗೆಯೇ ಭಾಗ್ಯರೇಖಾ ದೇಶಪಾಂಡೆ ಅವರೂ ಮಂಡೋದರಿ ಪಾತ್ರವನ್ನು ಆಳವಾಗಿ ಅಭ್ಯಸಿಸಿ ಒಂದು ಕಾದಂಬರಿಯನ್ನು ನೀಡಿರುವುದು ಗಮನಾರ್ಹ.

‘ಬಂಧಿತ’ ಕಥೆಯಲ್ಲಿ, ರಾಜನಾಗಿ,  ಪ್ರಜಾಪಾಲಕನಾಗಿ ಅಧಿಕಾರ ಕರ್ತವ್ಯಗಳ ಮಧ್ಯೆ ಸಿಲುಕಿ ನಲುಗಿ ಹಲುವು ವಿಚಾರಗಳಲ್ಲಿ ಬಂಧಿತನಾಗಿ, ಕುಟುಂಬ, ಸಂಬಂಧ ಪ್ರೀತಿ ಎಲ್ಲದರಿಂದಲೂ ದೂರ ನಿಂತು ತನ್ನನ್ನು ತಾನೇ ಬಂಧನಕ್ಕೊಳಪಡಿಸಿಕೊಂಡು ಪ್ರಜೆಗಳಿಗಾಗಿ, ಆರ್ಯ ಧರ್ಮದ ಉಳಿವಿಗಾಗಿ ಬದುಕಿದ ರಾಮನಿದ್ದಾನೆ.

          ಓಲ್ಗಾ ಅವರು ‘ಸೋದರಿತ್ವವೇ ಮಹಿಳೆಯರ ವಿಮೋಚನೆಯ ಪರಿಣಾಮಕಾರಿ ವಿಧಾನ ಎಂದು ದೃಢವಾಗಿ ನಂಬಿದವರು” ಆದ್ದರಿಂದಲೇ ಈ ಸೋದರಿತ್ವದ ಭಾವನೆ ಇಲ್ಲಿನ ಕಥಾ ಪಾತ್ರಗಳಲ್ಲಿ ಗಮನಿಸಬಹುದು. ಸೀತೆ ಭೇಟಿಯಾಗುವ ಎಲ್ಲಾ ಸ್ತ್ರೀ ಪಾತ್ರಗಳು ಈ ಭಾವನೆಯನ್ನು ಬೆಳೆಸಿಕೊಂಡಿದೆ. ಇವರ ಜೀವನ ಅನುಭವಗಳ ಮಾತಿನಿಂದ ಸೀತೆಯೂ ಸತ್ಯಾಸತ್ಯಗಳ ನಡುವಿನ ವಿಚಾರಗಳನ್ನು ತಿಳಿದುಕೊಂಡು ಎಲ್ಲ ಬಂಧನಗಳಿಂದಲೂ ಹೊರಗೆ ಬಂದು ಸ್ವತಂತ್ರಳಾಗಿಬಿಡುತ್ತಾಳೆ. ಸಮಾಜದಲ್ಲಿ ಪುರುಷನಿಂದ ಗುರುತಿಸಿಕೊಳ್ಳುವ ಆಕೆ ನಿಜದ ಅರಿವಾದಾಗ ತಾನು ಕೇವಲ ಭೂಪುತ್ರಿಯಾಗಿ ಉಳಿಯುವ ದಿಟ್ಟ ತೀರ್ಮಾನ ಕೈಗೊಳ್ಳುವುದು ಶ್ಲಾಘನೀಯ.  ಹೀಗೆ ಓಲ್ಗಾ ಅವರು ಈ ಪಾತ್ರಗಳ ಮೂಲಕ ಹೊಸತೊಂದು ಲೋಕವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಆ ಲೋಕವನ್ನು ಪ್ರವೇಶಿಸಿದ ಓದುಗಾರಿಗೆ ಅಲ್ಲಿ ಹಲವು ಅಚ್ಚರಿಗಳೂ ಕಾದಿರುತ್ತದೆ.  ಅಜಯ್ ಅವರ ಅಲಂಕಾರಗಳಿಲ್ಲದ ನೇರ ಮತ್ತು ಸರಳವಾದ ಭಾಷೆ, ಕಥಾ ನಿರೂಪಣೆ, ಎಲ್ಲವೂ ಓದುತ್ತಾ ಹೋದಂತೆ ಆಪ್ತವಾಗಿಬಿಡುತ್ತದೆ. ಈ ಕಥೆಗಳೆಲ್ಲವೂ ಬಹಳ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

          ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಬಿ. ಎನ್ ಸುಮಿತ್ರಾಬಾಯಿ ಅವರು ಮುನ್ನುಡಿ ಬರೆದಿದ್ದಾರೆ. ಇದರಲ್ಲಿ ಓ ಎಲ್ ನಾಗಭೂಷಣಸ್ವಾಮಿ ಅವರ ಅಭಿಪ್ರಾಯವೂ ಇದೆ.

 “ಇದು ಪೌರಾಣಿಕ ನಾಯಕಿಯರ ಅಂತರಂಗದ ಅಷ್ಟೇ ಅಲ್ಲ ರಾಮನಂಥವರ ಒಳತೋಟಿಗಳನ್ನೂ ಆಳಕ್ಕಿಳಿದು ಗ್ರಹಿಸಿದೆ” ಎನ್ನುವ ವೈದೇಹಿಯವರು ಇದಕ್ಕೆ ಬೆನ್ನುಡಿ ಬರೆದಿದ್ದಾರೆ.  ಅಜಯ್ ಅವರು ಓಲ್ಗಾ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೊನೆಯ ಭಾಗದಲ್ಲಿ ಹಂಚಿಕೊಂಡಿರುವುದರಿಂದ ಅವರ ಬಗ್ಗೆ ತಿಳಿದುಕೊಳ್ಳಲು ಓದುಗರಿಗೆ ಸಹಕಾರಿಯಾಗಿದೆ.  ಇದು ಒಂದು ಅನುವಾದಿತ ಕೃತಿಯಾಗಿದ್ದರೂ ಆ ಭಾವನೆ ಬರಂದಂತೆ ತುಂಬ ಮುತುವರ್ಜಿಯಿಂದ ಸ್ವಂತಿಕೆಯನ್ನುಳಿಸಿಕೊಂಡು ಅಜಯ್ ಅನುವಾದಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಉತ್ತಮ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಓಲ್ಗಾ ಅವರನ್ನು ಕನ್ನಡಿಗರಿಗೂ ಪರಿಚಯಿಸಿದ್ದಕ್ಕೆ ಕೃತಜ್ಞತೆಗಳು. ಇಂತಹ ಉತ್ತಮ ಕೃತಿಗಳನ್ನು ಅನುವಾದ ಮಾಡುತ್ತಿರಿ ಕನ್ನಡಿಪರಿಚಯಿಸುತ್ತಿರಿ. ನಿಮ್ಮ ಬರವಣಿಗೆಯೂ ನಿರಂತರವಾಗಿರಲಿ.

********

ಚೇತನಾ ಕುಂಬ್ಳೆ

One thought on “ಪುಸ್ತಕ ಸಂಗಾತಿ

Leave a Reply

Back To Top