‘ಮಾಗಿ ಚಳಿಗೆ ಮುಗಿಯದಿರಲಿ ಬದುಕು….’ಚಳಿಗಾಲಕ್ಕೊಂದುಬೆಚ್ಚನೆಯಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಚಳಿಗಾಲ ಸಂಗಾತಿ

*ಅವರನ್ನು ನಿನ್ನೆ ನೋಡಿದ್ದೆ ಅಯ್ಯೋ ಪಾಪ..! ಹೀಗಾಗಬಾರದಿತ್ತು. ನಂಬಲು ಆಗುತ್ತಿಲ್ಲ ಎಂತಹ ಸಾವು ಅವರದು..!

 ಸೋಂಬೇರಿಯಾಗಿ ತಡವಾಗಿ ಎದ್ದೇಳುವ ಗಂಡನನ್ನು ಹಿಗ್ಗಾಮುಗ್ಗಾ ಜಾಡಿಸುವ ಹೆಂಡತಿ, ಜಗಳವಾಡುತ್ತಲೇ  ಮುನಿಸಿಕೊಂಡು ತವರೂರ ಕಡೆ ಹೆಜ್ಜೆ ಹಾಕುತ್ತಾಳೆ…!

 ಈ ಮೇಲಿನ ಎರಡು ಸನ್ನಿವೇಶಗಳು ಬಹುತೇಕವಾಗಿ ನಮ್ಮ ಬದುಕಿನಲ್ಲಿ ಕಾಣುತ್ತೇವೆ. ಪ್ರಾಕೃತಿಕ ಬದಲಾವಣೆಗಳಂತೆ ನಮ್ಮ ಬದುಕಿನಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿರುತ್ತವೆ.  ಇಂದಿನ ಬದುಕು ಒತ್ತಡದ ಬದುಕು. ಇಬ್ಬರೂ ದಂಪತಿಗಳು  ನೌಕರಿ ಇದ್ದರಂತೂ ಹೇಳುತ್ತೀರದು.

 ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ದಂಪತಿಗಳು ಚಳಿಗಾಲದಲ್ಲಂತೂ ಸದಾ ಜಗಳವಾಡುತ್ತಲೇ ಇರುತ್ತಾರೆ.  ಅದಕ್ಕೆ ಅನೇಕ ಕಾರಣಗಳು ನಮ್ಮ ಕಣ್ಮುಂದೆ ಇದೆ. ಸೆಪ್ಟಂಬರ್ ಮುಗಿಯುತ್ತಿದಂತೆ ಚಳಿಗಾಲ ಪ್ರಾರಂಭವಾಗುತ್ತದೆ. ನವಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಂತೂ ಚಳಿ ಬಿಟ್ಟುಬಿಡದೆ ನಮ್ಮನ್ನು ಕಾಡುತ್ತದೆ.

ಮಾಗಿಚಳಿ  ನಮ್ಮ ಬದುಕನ್ನು ಮಾಗಿಸಿ ಬಿಡುತ್ತದೆ. ಕೆಲಸದ ಒತ್ತಡದಲ್ಲಿ ಮಾನಸಿಕವಾಗಿ ಕುಗ್ಗಿಹೋದ ಅವರು ಕಚೇರಿಯ ಬಾಸ್ ನ ಬೈಗುಳ ಬೇರೆ,  ಹಾಗಾಗಿ ತಡರಾತ್ರಿಯವರೆಗೂ  ಮಾಡಿದ ಕೆಲಸದಿಂದಾಗಿ ಬೆಳಿಗ್ಗೆ ಎದ್ದೇಳಲು ಮನಸ್ಸು ಹಿಂದೇಟು ಹಾಕುತ್ತದೆ. ಹಾಸಿಗೆಯಲ್ಲಿ ಹೊರಳಾಡುತ್ತಾ, ಕೈ ಕಾಲು ಅಲ್ಲಾಡುಸುತ್ತ “ಆಮೇಲೆ ಎದ್ದರಾಯಿತು” ಎನ್ನುವ ಸೋಮಾರಿತನಕ್ಕೆ ಅಡುಗೆ ಮನೆಯಿಂದ ಎಸೆಯುವ ಸಾಮಾನುಗಳ ಶಬ್ದಕ್ಕೆ, ಹೆಂಡತಿಯ ಬೈಗುಳಕ್ಕೆ ದಿಢೀರನೆ ಎದ್ದೇಳಬೇಕಾದ ಅನಿವಾರ್ಯತೆ  ಗಂಡನಿಗೆ..!  

 ಕೊರೆಯುವ ಚಳಿಯಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿಗೆ, ಕಚೇರಿಗೆ ಹೋಗುವ ಗಂಡನಿಗೂ ಮತ್ತು ತನಗೂ ಅಡುಗೆ ಸಿದ್ಧತೆ ಮಾಡಬೇಕು. ಮನೆಯ ಸಣ್ಣ ಪುಟ್ಟ ಎಲ್ಲ ಕೆಲಸಗಳನ್ನು ಮಾಡಬೇಕು. ಅವುಗಳನ್ನು ಮಾಡುವುದರೊಳಗೆ ಅವಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಹೋಗುತ್ತಾಳೆ. ಹಾಗಾಗಿ ತನ್ನಲ್ಲಿರುವ ಕೋಪವನ್ನು ಗಂಡನ ಮೇಲೆಯೋ ಮಕ್ಕಳ ಮೇಲೆಯೂ ಈ ರೀತಿ ತೀರಿಸಿಕೊಳ್ಳುತ್ತಾಳೆ.  ಅದು ಅವಳ ತಪ್ಪಲ್ಲ.  ಬದುಕಿನ ಒತ್ತಡದ ಪರಿಣಾಮ.

 ಇನ್ನು  ವಯಸ್ಸಾದ ವೃದ್ಧರಿರಲಿ, ಚಿಕ್ಕ ಮಕ್ಕಳಿರಲಿ ಅವರಿಗೆ ಅಸ್ತಮಾ, ಕೆಮ್ಮು, ದಮ್ಮು, ನೆಗಡಿ  ಮುಂತಾದ ಉಸಿರಾಟದ ತೊಂದರೆ ಕಾಯಿಲೆಗಳಿದ್ದರೆ ಇಂತಹ ಕೊರೆಯುವ ಮಾಗಿಚಳಿ ಅವರ ಬದುಕನ್ನು ಮುಗಿಸಿಬಿಡುತ್ತದೆ. ಇವತ್ತಿನ ಕಲುಷಿತ ವಾತಾವರಣ, ಕಲಬೆರಕೆ ಆಹಾರ, ಶಿಸ್ತಿಲ್ಲದ ಜೀವನ ಪದ್ಧತಿ ನಮ್ಮ ಬದುಕನ್ನು ಕೊನೆಗಾಣಿಸುವ ನಮ್ಮ ಶತ್ರುಗಳು ಎನ್ನಬಹುದು. ಹಾಗಾಗಿ ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಸಾವು ನೋವುಗಳು ಸಂಭವಿಸುತ್ತವೆ.  ಚಳಿಗಾಲ ಬಂತೆಂದರೆ ನಾವು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮಕ್ಕಳಿಗೆ, ಹಿರಿಯರಿಗೆ ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನು ಒದಗಿಸುವ,  ಸಾಧ್ಯವಾದಷ್ಟು ಕಫ ಕರಗಿಸುವ ಕಷಾಯ, ಚಹಾ ಕಾಫಿ ಇವುಗಳನ್ನು ಕಾಲಕಾಲಕ್ಕೆ ಹಿರಿಯ ಜೀವಿಗಳಿಗೆ ಮನೆಯವರು ಮಾಡಿಕೊಡಬೇಕು.

 ಈ ಮಾಗಿಚಳಿಗೆ ನಾವೆಲ್ಲ ಚಿಕ್ಕವರಿದ್ದಾಗ ಓಣಿಯ ಅಂಗಳದಲ್ಲೂ ಇದ್ದು ಬಿದ್ದ ಕಸ,  ಸೇದಿ,ಕಟ್ಟಿಗೆ ಹಾಕಿ ಬೆಂಕಿಹಚ್ಚಿ ಉರಿ ಹಾಕುತ್ತಿದ್ದೆವು.  ಚಳಿಯನ್ನು ತಡೆದುಕೊಳ್ಳಲಾಗದೆ ಗೆಳೆಯರೆಲ್ಲ ಸೇರಿಕೊಂಡು ಸುತ್ತಲೂ ಕುಳಿತುಕೊಂಡು ಚಳಿಯನ್ನು ಅರ್ಥಾತ್‌ ಚಳಿಗೆ ನಮ್ಮ ಮೈಯನ್ನು  ಕಾಯಿಸುತ್ತಿದ್ದೆವು.  ಉರಿಗೆ ಕೈತಾಗಿಸಿ ಮುಖಕ್ಕೆ ಎದೆಗೆ ಒತ್ತಿಕೊಂಡು ಸುಖಾನುಭವ ಪಡೆಯುತ್ತಿದ್ದೆವು. ಆಗ ನಮಗೆ ಕಾಲು ಒಡೆಯುತ್ತವೆ ಎನ್ನುವ ಯಾವುದೇ ಆತಂಕ ಇರುತ್ತಿರಲಿಲ್ಲ.  ಕೈ ಕಾಲುಗಳು ಒಡೆದರೆ ಹೊಡೆದು ಹೋಗಲಿಬಿಡು ಎನ್ನುವ ತಾತ್ಸಾರ ನಮ್ಮೊಳಗಿತ್ತು.

ಹಾಗಂತ ಮಾಗಿಯ ಚಳಿಯಿಂದಾಗಿ ಅನೇಕ ತೊಂದರೆಗಳಿಗೆ ಮಾತ್ರ ಒಳಗಾಗುತ್ತೇವೆ ಎಂದು ನಾವು ತಿಳಿದುಕೊಂಡರೆ ತಪ್ಪು.  ಮಾಗಿಚಳಿಯಿಂದ ನಾವು ಅನೇಕ ಉಪಯೋಗಗಳನ್ನು ಪಡೆದುಕೊಳ್ಳುವುದನ್ನು ಕಾಣಬಹುದು.  ಬಹುತೇಕ ಎರೆ ಹೊಲದಲ್ಲಿರುವ ಹಿಂಗಾರು ಬೆಳೆ ಬರಲು ಮುಖ್ಯ ಕಾರಣ ಮಾಗಿಚಳಿ..!  ಮಾಗಿಚಳಿಗೆ ಉಳುಗಡಲೆ, ಬಿಳಿಜೋಳ, ಹತ್ತಿ, ಸೂರ್ಯಕಾಂತಿ ಮುಂತಾದ ಬೆಳೆಗಳು ಹುಲಸಾಗಿ ಬೆಳೆಯುತ್ತವೆ. ಇವು ಜನೇವರಿ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಎಳ್ಳು ಅಮಾವಾಸ್ಯೆಯ ದಿನ ಹುಲುಸಾಗಿ ಬೆಳೆದ ಬೆಳೆಗೆ, ಭೂಮ್ತಾಯಿಗೆ ಪೂಜಿಸುವ, ಸಾಂಪ್ರದಾಯವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿದ್ದೇವೆ. ಮಾಗಿಚಳಿ ನಮಗೆ ಬದುಕನ್ನು ಕಟ್ಟಿಕೊಡುತ್ತದೆ. ವರ್ಷಕ್ಕಾಗುವ ಕೂಳನ್ನು ತಂದುಕೊಡುತ್ತದೆ. ಇದು ಒಂದು ಮಗ್ಗಲುವಾದರೇ..

ಇನ್ನೊಂದು ಮಗ್ಗಲು ನೋಡುವುದಾದರೆ, ಸಂಸಾರದಲ್ಲಿ ಜಗಳವಾಡಿದ ಗಂಡ ಹೆಂಡತಿಯರು ಮಾಗಿಚಳಿಗೆ ಮನಸ್ಸು ಮಾಡಿ, ತಮ್ಮ ಬದುಕನ್ನು ಶೃಂಗಾರಗೊಳಿಸಿಕೊಳ್ಳುತ್ತಾರೆ.  ದೂರ ದೂರವಿದ್ದ ದಂಪತಿಗಳು ಮಾಗಿಚಳಿಗೆ ದಾಂಪತ್ಯ ಸುಖವನ್ನು ಅಪ್ಪಿಕೊಳ್ಳುವುದರ ಮೂಲಕ ಸಂಸಾರದಲ್ಲಿ ಹೊಸತನವನ್ನು ಅನುಭವಿಸುತ್ತಾರೆ. ಇದು ಮಾಗಿಚಳಿಯ ಮ್ಯಾಜಿಕ್ ಎನ್ನಬಹುದು. ಮಾಗಿಚಳಿಯು ನಮ್ಮನ್ನು  ತಂಪುಗೊಳಿಸುವದರ ಜೊತೆಗೆ ನಮ್ಮ ನೆತ್ತಿಯನ್ನು ತಂಪಾಗಿರಿಸುತ್ತದೆ ಆದರೆ ನಮ್ಮ ನೆತ್ತಿಯನ್ನು ಅತಿಯಾಗಿ ತಂಪುಗೊಳಿಸಿಕೊಳ್ಳದೆ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ.

ಮಾಗಿಚಳಿಗೆ ಕೈಕಾಲು ಬೇಕಾದರೂ ಒಡೆಯಲಿ, ತುಟಿ ಬೆರೆಯಲಿ, ಮುಖದ ಚರ್ಮ ಸುಕ್ಕುಗಟ್ಟಲಿ  ಆದರೆ ಸಂಸಾರದಲ್ಲಿ ಗಂಡ ಹೆಂಡತಿ, ಮಕ್ಕಳ ಬದುಕು ಒಂದುಗೂಡಲಿ…!  ಗಂಡ ಹೆಂಡತಿಯ ದಾಂಪತ್ಯ  ಸುಕ್ಕುಗಟ್ಟದಿರಲಿ.  ಬದುಕು ಒಡೆಯದಿರಲಿ. ಮತ್ತೆ ಮತ್ತೆ ಬದುಕಿನಲ್ಲಿ ಒಂದಾಗಿ, ಮಾಗಿಚಳಿ ನೆಪದಲ್ಲಾದರೂ ಸಂಸಾರ, ಕುಟುಂಬ, ನಮ್ಮೆಲ್ಲರ ಬದುಕು ಸರಿದಾರಿಗೆ ಬರಲಿ. ಮಾಗಿಚಳಿಗೆ ಬದುಕು ಮುಗಿಯದಿರಲಿ. ಬದುಕು ಚಿಗುರಿ ನಳನಳಿಸಲೆಂದು ಬಯಸುವೆ.


Leave a Reply

Back To Top