ಹೃದಯ ಕಲ್ಲಾದಾಗ…..ಹೊನ್ನಪ್ಪ ನೀ. ಕರೆಕನ್ನಮ್ಮನವರ ಸಣ್ಣ ಕಥೆ

ಅಂದು ಕಲ್ಲೂರಿನ ಸ್ಮಶಾನದಲ್ಲಿ ಗಾಢ ಮೌನ ಹೆಪ್ಪುಗಟ್ಟಿತ್ತು ನಿತ್ಯ ಕತ್ತಲೆ ನುಂಗಿ ಬೆಳಕು ಹೆರುವ ಸೂರ್ಯನೂ ಕೂಡಾ ಅಂದೇಕೋ ಖಿನ್ನನಾದಂತೆ ಕಾಣುತ್ತಿದ್ದ. ಮಬ್ಬುಗತ್ತಲಲ್ಲಿ ಗೂಡಿನ ಸುತ್ತ ಗುಬ್ಬಿ, ಕಾಗೆ ಮೊದಲಾದ ಪಕ್ಷಿಗಳು ಮುಂದಡಿ ಇಡಲಾರದೇ ಅಲ್ಲೇ ಗಿರಿಕಿ ಹೊಡೆಯುತ್ತಿದ್ದವು. ಇನ್ನೇನು ಚುಮು ಚುಮು ಬೆಳಕು ಹರಿಯುವಷ್ಟರಲ್ಲಿ ಯಾರಿಗೂ ಗೊತ್ತಾಗದಂತೆ ಸ್ಮಶಾನಕ್ಕೆ  ಶರವೇಗದಲ್ಲಿ ಸೀತವ್ವಳ ಶವವನ್ನು ಹೊತ್ತು ತಂದ ಆಂಬುಲೆನ್ಸ್ ಕೆಲವೇ ನಿಮಿಷಗಳಲ್ಲಿ ಅಂತ್ಯಸಂಸ್ಕಾರವನ್ನು ಮುಗಿಸಿ ಬಂದ ದಾರಿ ಹಿಡಿಯಿತು. ಸತ್ತಾಗ ಮಣ್ಣಿಗಾದರೂ ನಾಲ್ಕು ಮಂದಿ ಇರಲಿ ಎಂದು ಬದುಕಿದ್ದಕ್ಕೂ ಯಾರೊಂದಿಗೂ  ಕಾದಾಡದ  ಸೀತವ್ವಳ ಹೆಣಕ್ಕೆ ಅನಾಮಿಕರ ಕೈಯಿಂದ ಕೊಳ್ಳಿ ತಾಗಿಸಿಕೊಳ್ಳುವ ಪರಿಸ್ಥಿತಿಯನ್ನು ನೆನೆದು ಅವಳನ್ನು ದಹಿಸುವ ಬೆಂಕಿಯೂ ಕೂಡಾ ತನ್ನ ಕೆನ್ನಾಲಿಗೆಯನ್ನು ಚಾಚಿ ಅರ್ಭಟಿಸದೆ ಮೌನವಾಗಿಯೇ ಉರಿದು ತನ್ನ ಕರ್ತವ್ಯ ಮುಗಿಸಿತು.
              ಅಷ್ಟಕ್ಕೂ ಸೀತವ್ವಳೇನು ಯಾರೂ ದಿಕ್ಕಿರದ  ಅನಾಥಳೇನಲ್ಲ ಕಲ್ಲೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ತುಮರೀಕೋಟಿಯ  ಧರಣೆಪ್ಪ ಸಾಹುಕಾರನ ಮೂರನೇ ಮಗಳು ಹತ್ತಾರು ಕೂರಿಗೆ ಹೊಲ ಮನೆತುಂಬಾ ಆಳುಕಾಳುಗಳು ಕೇಜಿಗಟ್ಟಲೆ ಬೆಳ್ಳಿ, ಬಂಗಾರವಿದ್ದ ಮನೆಯಲ್ಲಿ ಹುಟ್ಟಿಬೆಳೆದವಳು. ಇಷ್ಟಿದ್ದರೂ ಸಿರಿತನದ ದೌಲತ್ತನ್ನು ಎಂದಿಗೂ ತಲೆಗೇರಿಸಿಕೊಳ್ಳದೇ  ಹಸಿದು ಬಂದವರಿಗೆ ಒಂದು ರೊಟ್ಟಿ ಕೊಡುವ ಗುಣವನ್ನು ಅವಳ ತಾಯಿ ಗಿರಿಜವ್ವಳಿಂದ  ಕಲಿತಿದ್ದಳು. ಒಂದರ್ಥದಲ್ಲಿ ಸಾತ್ವಿಕ ಗುಣಗಳನ್ನೇ ಮೈಗೂಡಿಸಿಕೊಂಡು  ಹೆಸರಿಗೆ ತಕ್ಕ ಹಾಗೆ ಸೀತಾಮಾತೆಯಂತೆಯೇ ಸಾದ್ವಿಯಾಗಿದ್ದಳು. ಊರ ಹಿರೇತನ ಮಾಡುತ್ತಿದ್ದ ಅವಳ ತಂದೆ ಧರಣೆಪ್ಪ ಸಾಹುಕಾರ  ಸಮಾಜದಲ್ಲಿ ಎಂದೂ ಆಷಾಢಬೂತಿ ವ್ಯಕ್ತಿಯಾಗದೇ ಉಳಿದಿದ್ದರಿಂದಲೋ ಏನೋ  ಊರೊಳಗಿನ ಯಾವುದೇ ತಂಟೆ ತಕರಾರುಗಳಿಗೆ  ಅವನ ತೀರ್ಮಾನವೇ  ಅಂತಿಮವಾಗಿರುತ್ತಿತ್ತು ಹಾಗಾಗಿ ಅವನು ಬದುಕಿರುವರೆಗೂ ಆ ಊರಿನ ಯಾರೊಬ್ಬರೂ ಜಗಳಕ್ಕಾಗಿ ಕೋರ್ಟು  ಕಛೇರಿಯ ಮೆಟ್ಟಿಲು ಹತ್ತಿದ ಉದಾಹರಣೆಗಳಿರಲಿಲ್ಲ ಅಲ್ಲದೇ ಅವನ ಉದಾರಂತಃಕರಣ ಎಷ್ಟೊಂದು ವಿಸ್ತೃತವಾಗಿತ್ತೆಂದರೆ ದುಡಿದುಣ್ಣುವ ಬಡವರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವ ಈಗಿನ ಕಾಲದಲ್ಲಿ  ಮನೆಯವರ ಮತ್ತು ಸಂಬಂಧಿಕರ ವಿರೋಧದ ನಡುವೆಯೂ ಸ್ವತಃ ಮಗಳಾದ ಸೀತವ್ವಳನ್ನು ತುಂಡು ಭೂಮಿಯೂ ಇರದ ಅವರ ಮನೆಯಲ್ಲಿ  ಜೀತಕ್ಕಿದ್ದ  ಧರ್ಮಣ್ಣನಿಗೆ ಎಳ್ಳಷ್ಟೂ ಯೋಚಿಸದೇ ದಾರಿ ಎರೆದು ಕೊಟ್ಟಿದ್ದ. ಹುಟ್ಟಿನಿಂದ ಹೊರಗಿನ ಬಿಸಿಲನ್ನೇ ಕಾಣದಿದ್ದರೂ ಸೀತವ್ವ ಅಪ್ಪನ ನಿರ್ಧಾರವನ್ನು ಪ್ರಶ್ನಿಸದೇ  ವಿಧೇಯಳಾಗಿ ಒಪ್ಪಿಕೊಂಡು ಮದುವೆಯಾಗಿದ್ದಳು ಅಲ್ಲಿ  ಉಂಡು ಉಡುವಷ್ಟು ಬಡತನವಿದ್ದರೂ ಒಂದು ಸಾರಿಯೂ ಗಂಡನ ಮನೆ ಕುರಿತು ತವರು ಮನೆಯಲ್ಲಿ ಫಿರ್ಯಾದಿ ಹೇಳಿದವಳಲ್ಲ. ಮೊದಮೊದಲು ಗಂಡ ಧರ್ಮಣ್ಣನೂ ಕೂಡ ಸಂಸಾರದ ನೊಗಕ್ಕೆ ಹೆಗಲಾಗುವ ವಿಶ್ವಾಸ ತುಂಬಿ ಅವಳೊಟ್ಟಿಗೆ ಸೌಖ್ಯವಾಗಿಯೇ ಇದ್ದ ನೆಮ್ಮದಿಯ ಸಂಸಾರಕ್ಕೆ ಸಾಕ್ಷಿ ಎಂಬಂತೆ ವರ್ಷಕ್ಕೊಂದರಂತೆ ಮೂರು ಮಕ್ಕಳ ತಾಯಿಯೂ ಕೂಡಾ ಆದಳು. ಬರರಬರುತ್ತ ಸಂಸಾರದ ಭಾರ ಹೆಚ್ಚಾಗತೊಡಗಿತು ಆದರೂ ಸಹಿಸುತ್ತಾ ಹೋದಳು. ಹೀಗೆಯೇ ಕಾಲ ಉರುಳುತ್ತಿರುವಾಗ ಅವಳ ಬದುಕಿನ ಅಚಲ ನಂಬಿಕೆಯನ್ನು ಅಲುಗಾಡಿಸಲೆಂದೇ ನತದೃಷ್ಟ ಗಳಿಗೆಯೊಂದಕ್ಕೆ ಅವಳು ಸಾಕ್ಷಿಯಾಗಬೇಕಾಯಿತು. ಅತ್ತ ಅವಳ ಅಪ್ಪ ಧರಣೆಪ್ಪ  ಅವ್ವ ಗಿರಿಜವ್ವ ಇಬ್ಬರೂ ಯಾವದೋ ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ರಸ್ತೆ ಅಪಘಾತದಲ್ಲಿ  ತೀರಿಹೋದರು. ಅಂದಿನಿಂದ ಅವರ ಕಣ್ಗಾವಲನ್ನು ತಪ್ಪಿಸಿಕೊಂಡ ಧರ್ಮಣ್ಣ ಕೆಲ ಸ್ನೇಹಿತರ ಸಹವಾಸದಿಂದಲೋ ಏನೋ ದುಡಿಮೆ ಮರೆತು ನಿತ್ಯ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳಾಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹೆಂಡತಿಯನ್ನು ಬಡಿಯಲು ಪ್ರಾರಂಭಿಸಿದ. ಅದಕ್ಕೆ  ಮನೆಯಲ್ಲಿದ್ದ ಅವನ ತಾಯಿ ಸಾವಂತ್ರವ್ವ ಸೊಸೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲೆಂದೋ ಏನೋ ಸೀತವ್ವಳ ಬಗ್ಗೆ ಮಗನೆದರು ಇಲ್ಲ ಸಲ್ಲದ ಚಾಡಿ ಹೇಳಿ ಉರಿಯುವ  ಬೆಂಕಿಗೆ ತುಪ್ಪ ಸುರಿಯುತ್ತಿದ್ದಳು. ನಿತ್ಯ ಈ ಗೋಳಿನಿಂದ ಕಂಗಟ್ಟು ಹೋಗಿದ್ದ ಸೀತವ್ವಳಿಗೆ  ಒಮ್ಮೆಯಂತೂ  ಸಂಜೆ  ಕೂಲಿ ಕೆಲಸದಿಂದ ಮನೆಗೆ ಹಿಂದಿರುಗುವಾಗ  ಅವಳು ಯಾರದೋ ಜೊತೆ ಮಾತನಾಡಿದಳೆಂದು  ಸಂಶಯ ತಿಂದು ಅವಳು ಮನೆಗೆ ಬಂದ ಕೂಡಲೇ  ಕುಡಿದ ಅಮಲಿನಲ್ಲಿದ್ದ ಧರ್ಮಣ್ಣ ಮನೆಯಲ್ಲಿದ್ದ ಗುಂಡು ಕಲ್ಲಿನಿಂದ ಸೀತವ್ವಳ ತಲೆಗೆ ಹೊಡೆದು ರಕ್ತದ ಮಡುವಿನಲ್ಲಿ ಕೆಡಿವಿ ಮನೆಯಿಂದ  ಕಂಬಿಕಿತ್ತಿದ್ದ ಇನ್ನು ಅವರತ್ತೆ  ಸಾವಂತ್ರೆವ್ವಳೂ ಕೂಡಾ ಈ ಕ್ಷಣದಲ್ಲಿ ನಾ ಮನೆಯಲ್ಲಿದ್ದರೆ  ಇದರ ಅಪವಾದ ಕುಡುಕ ಮಗನನ್ನು ಬಿಟ್ಟು ತನ್ನ ಮೇಲೆ  ತಗಲಾಕಿಕೊಳ್ಳುವುದೆಂದು ಸೊಸೆಯನ್ನು ಅಲ್ಲೇ ಬಿಟ್ಟು  ಇದ್ದೂರಿಗೆ ಕೊಟ್ಟಿದ್ದ ತನ್ನ ಎರಡನೇ ಮಗಳು ಸುಶೀಲಾಳ ಮನೆಗೆ  ಓಡಿ ಹೋಗಿ ಅವಿತುಕೊಂಡಳು. ಶಾಲೆಯಿಂದ ಮನೆಗೆ ಬಂದ ಪುಟ್ಟ ಮಕ್ಕಳು ಮೂರ್ಛೆ  ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಗೋಳಾಡಿ ಅಳಲಾರಂಭಿಸಿದರು. ಅವರ ಆಕ್ರಂದನ ಕೇಳಿಸಿಕೊಳ್ಳಲಾಗದೆ ಓಡಿ ಬಂದ ಅದೇ ಓಣಿಯ ಪರಮೇಶಿ ಹಾಗೂ ಅವನ ಹೆಂಡತಿ ಪದ್ಮಕ್ಕ ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ ಸ್ವಂತ ಖರ್ಚಿನಲಿ ಆಸ್ಪತ್ರೆಗೆ ದಾಖಲಿಸಿ ಪುಣ್ಯ ಕಟ್ಟಿಕೊಂಡಿದ್ದರು. ಕೊಂಚ ಚೇತರಿಸಿಕೊಂಡ ಮೇಲೆ ವೈದ್ಯರು  ತಲೆಗೆ ಹಾಕಿದ ಹೊಲಿಗೆ ಗಾಯ ಮಾಯಲು ಹದಿನೈದು ದಿನ ಬೇಕಾಗುತ್ತೆ ಎಂದು ಹೇಳಿ ಮನೆಯಲ್ಲಿ ವಿಶ್ರಾಂತಿಯಿಂದರಲು ತಿಳಿಸಿ ಡಿಸ್ಚಾರ್ಜ್ ಮಾಡಿದರು. ಆಸ್ಪತ್ರೆಯಿಂದ ಮನೆಗೆ ಬಂದ ಸೀತವ್ವಳನ್ನು ಆರೈಕೆ ಮಾಡುವುದನ್ನು ಬಿಟ್ಟು  ಅವರತ್ತೆ ಸಾವಂತ್ರೆರವ್ವ “ಗಂಡನ ಹೊಟ್ಟಿ ನೆತ್ತಿಯನ್ನು ಸರಿಯಾಗಿ ನೋಡಿಕೊಂಡಿದ್ರೆ  ಅವನ್ಯಾಕ ನಿನಗ ಹೊಡೀತಿದ್ದ”? ಎಂದು ಆಗಲೂ ಮಗನ ಪರವಾಗಿಯೇ ಓಟು ಹಾಕಿದ್ದಲ್ಲದೇ ಆ ಪರಮೇಶಿಗೂ ನಿನಗೂ ಏನ್ ಸಂಬಂಧ ಅವನ್ಯಾಕೆ ನಿನ್ನನ್ನು ಆಸ್ಪತ್ರೆಗೆ ಸೇರಿಸದ..? ಎಂದು  ಸಲ್ಲದ ಸಂಬಂಧವನ್ನು ಹುಟ್ಟಿಸಿ ಜಗಳಕ್ಕಿಳಿದಾಗ ಸೀತವ್ವಳಿಗೆ  ನಿಂತ ನೆಲವೇ ಕುಸಿದಂತಾಗಿ ತಲೆಗಾದ ಗಾಯಕ್ಕಿಂತ ಈ ಮಾತಿನಿರಿತ ಅವಳನ್ನು ಮತ್ತಷ್ಟು ಜರ್ಜರಿತಳನ್ನಾಗಿಸಿತು. ಎದೆಯಲ್ಲಿ ನೋವಿನ ಸೆಲೆ ನದಿಯಾಗಿ ಹರಿಯಿತು. ಈ ಹಾಳು ಬದುಕು ಸಾಕೆನಿಸಿ ಎಲ್ಲಿಯಾದರೂ ಹೋಗಿ ಸತ್ತು ಬಿಡಬೇಕೆನಿಸಿ  ಉಮ್ಮಳಿಸಿ ಬರುವ ದುಃಖವನ್ನು ಹೊರಹಾಕಿ ಕಂಬನಿಗರೆದಳು   ಅದೆಷ್ಟೇ ಅತ್ತರೂ ಮನಸು ಹಗುರಾಗಲೇ ಇಲ್ಲಾ ಆ ವೇಳೆಗೆ ಎದೆಹಾಲು ಬೇಡಿ ಬಂದ ತನ್ನ ಹಸುಗೂಸಿಗೆ ಹಾಲು ಕುಡಿಸಿದಳೋ ಅಥವಾ ಕಣ್ಣೀರು ಕುಡಿಸಿದಳೋ ಎಂಬುದರ ಪರಿವೂ ಅವಳಿಗಿರಲಿಲ್ಲ ಆ ಸಂಕಷ್ಟದ ವಿಷಣ್ಣಭಾವ  ಅವಳನ್ನು ಹಿಂಡಿ ಹಿಪ್ಪೆಯಾಗಿಸಿತು. ಮನದಲ್ಲಿ ತನ್ನನ್ನು ತಾನು ಎಡೆಬಿಡದೇ ಪ್ರಶ್ನಿಸಿಕೊಳ್ಳತೊಡಗಿದಳು ಇದಕ್ಕೆಲ್ಲ ನನ್ನಿಂದಾದ ತಪ್ಪೇನು ?  ಮದುವೆಯಾಗುವಾಗ ನಾನು ಅಪ್ಪನ ಮಾತು ಕೇಳಿ ತಪ್ಪು ಮಾಡಿದೆನೇ ..? ಛೇ! ಛೇ! ಹಾಗೇನಿಲ್ಲ ಒಂದು ವೇಳೆ ಕೇಳದಿದ್ದರೆ, ಅವನ ಘನತೆಗೆ ಅಪಚಾರವೆಸಿಗಿದಂತಾಗುತ್ತಿತ್ತು. ಗಂಡ ಮತ್ತು ಅತ್ತೆಯ ಈ ಕ್ರೂರ ಮನಸ್ಥಿತಿಗೆ ನನ್ನೊಳಗಿನ ನಡತೆಗಳೇನಾದರೂ ಕಾರಣವಾದವೇ.? ಅದೂ ಕೂಡಾ ಸಾಧ್ಯವಿಲ್ಲ! ಏಕೆಂದರೆ ನಾನೆಂದೂ ಹುಟ್ಟಿನಿಂದ ಸನ್ನಡತೆಯ ಎಲ್ಲೆಯನ್ನು ಮೀರಿದವಳಲ್ಲ  ಮತ್ತೆ ನನ್ನ ಬದುಕಿನ ಚಲನೆ ಹೀಗೇಕೆ..? ಇದು ವಾಸ್ತವದ ಬದುಕೋ ಅಥವಾ ಭ್ರಮೆಯೋ ಹೀಗೆ ಒಂದಾದ ಮೇಲೆ ಮತ್ತೊಂದರಂತೆ ವಿಚಿತ್ರ ಭಾವದಲ್ಲಿ ಕನವರಿಸುತ್ತಾ ತನ್ನ ಏಕಾಂಗಿ ಬದುಕಿನ ಸುತ್ತ ಇರಿಯುವ ನೂರಾರು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಸಿಗದಾಗಿ ದೀರ್ಘ ನಿಟ್ಟುಸಿರಿನೊಂದಿಗೆ  “ಬಯಸಿದಂತೆ ಬದುಕಲ್ಲವೆಂದು” ಅರ್ಥೈಸಿಕೊಂಡು ಬದುಕಿನ ನೂರೆಂಟು ಕವಲುಗಳನ್ನು ದಿಟ್ಟಿಸುತ ಅರೆಪ್ರಜ್ಞಾವಸ್ಥೆಯಲ್ಲಿ ಗೋಡೆಗೆ ಒರಗಿದಳು. ಅಪ್ಪ ಮತ್ತು ಅಜ್ಜಿಯ ದುರ್ನಡತೆಯಿಂದ ಅವ್ವ ಅನುಭವಿಸುತ್ತಿರುವ ಯಾತನೆಯ ಚಿತ್ರಣವನ್ನು  ದೃಷ್ಟಿ ಕದಲದಂತೆ ನೋಡಿದ ಮತ್ತು ಅವಳನ್ನು ತುಂಬಾ ಹಚ್ಚಿಕೊಂಡಿದ್ದ ಎರಡನೇ ಮಗ ಮಾದೇವ   ಅವ್ವನ ಹತ್ತಿರ ಮೆಲ್ಲಗೆ ಹೋಗಿ ಗದ್ದ ಹಿಡಿದು ಅವಳ ಕತ್ತನ್ನು ಅಲ್ಲಾಡಿಸಿ  “ಅವ್ವ ನೀ ಅಳಬ್ಯಾಡ ನಾ ಇದ್ದೀನಿ ನಿನಗ ಏನೂ ಆಗದಂಗ ನೋಡ್ಕೋತೀನಿ” ಎಂದು ತೊದಲುನುಡಿಯಲ್ಲಿ ತನ್ನ ಮನದಿಂಗಿತವನ್ನು ಅವಳ ಮುಂದೆ ಹರವಿದಾಗ ಥಟ್ ಅಂತ ಎಚ್ಚರಗೊಂಡ ಸೀತವ್ವ ವಯಸ್ಸಿಗೆ ಮೀರಿದ ಕರುಳ ಕುಡಿಯ ಒಡಲ ಮಾತಿಗೆ ಕರಗಿ  ಮತ್ತಷ್ಟು ಕಣ್ಣೀರಾದಳು. ತನಗಲ್ಲದಿದ್ದರೂ ಈ ಮಕ್ಕಳಿಗೋಸ್ಕರವಾದರೂ ಬದುಕಬೇಕೆಂಬ ಒಂದು ಸಣ್ಣ ಸೆಳೆತಕ್ಕೆ  ವಗ್ಗಿಕೊಂಡವಳಂತೆ ಮನಸ್ಸನ್ನು ಅಣಿಗೊಳಿಸಿಕೊಂಡು ಆ ನೋವಿನ ಮಧ್ಯದಲ್ಲೂ ಮತ್ತೆ ಬದುಕಿನತ್ತ ದೃಷ್ಟಿ ನೆಟ್ಟು ತನ್ನನ್ನು ತಾನೇ ಆರೈಕೆ ಮಾಡಿಕೊಂಡು ಚೇತರಿಸಿಕೊಂಡಳು.
                ಮನೆಯಲ್ಲಿ ಅತ್ತೆಯ ಕಿರಿಕಿರಿ ನಿರಂತರವಾಗಿ ಇದ್ದೇ ಇತ್ತು. ಅವಳಿಂದ  ಬೇರೆಯಾದರೆ ಮಾತ್ರ ನಿನಗೆ ಕೊಂಚ ನೆಮ್ಮದಿಯಾದರೂ ಸಿಕ್ಕೀತೆಂದು ಸುತ್ತಲಿನ ಮನೆಯವರು ತಿಳಿ ಹೇಳಿದರೂ  ಅವಳೆಷ್ಟೇ ಕಷ್ಟ ಕೊಟ್ಟರೂ ಬಾಳಿನಿಳಿಸಂಜೆಯಲಿ  ಆ ಮುದುಕಿಯನ್ನು ಅನಾಥ ಪ್ರಜ್ಞೆಗೆ ತಳ್ಳುವುದು ಅವಳಿಗೆ ಸುತಾರಾಮ್  ಹಿಡಿಸಲಿಲ್ಲ.  ಬೇಸರ ತರಿಸುವ ಅವಳ  ಯಾವುದೇ ಮಾತಿಗೂ ಎದುರಾಡದೇ ಮೌವಹಿಸುತ್ತಿದ್ದಳು ಅಂದು ಮನೆ ಬಿಟ್ಟು ಹೋದ ಗಂಡ ಧರ್ಮಣ್ಣ ಹತ್ತಾರು ವರ್ಷ ಕಳೆದರೂ ಮನೆಗೆ ಬರಲೇ ಇಲ್ಲ ತನ್ನವರೆನ್ನುವವರ ಯಾರ ಆಸರೆಯೂ ಇಲ್ಲದಂತಾಗಿ ಬೆಂಗಾಡಿನಲಿ  ನಿಂತಂತಾಗಿದ್ದರೂ  “ಬಿದ್ದಲ್ಲಿಯೇ ಏಳಬೇಕೆಂಬ” ಹಠದಿಂದ ನಾಳೆಯ ಭರವಸೆಯಲ್ಲಿ ಹೆಜ್ಜೆ ಹಾಕಿದಳು. ಕೂಲಿ ನಾಲಿಯಿಂದಲೇ   ಮಕ್ಕಳನ್ನು ಚನ್ನಾಗಿ ಓದಿಸುತ್ತಾ ಮನೆಯ ಖರ್ಚುನ್ನೂ ನಿಭಾಯಿಸುತ್ತಿದ್ದಳು ಆ ಸಂದರ್ಭದಲ್ಲಿ  ಅದೃಷ್ಟವೆಂಬಂತೆ ಅವಳ ಕೈ ಹಿಡಿದಿದ್ದು ಅಂದು ಸರಕಾರದವರು ಕೃಷಿಕ ಸಮಾಜದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡ ವಿದ್ಯಾವಂತ ಮಹಿಳೆಯರಿಗೆಂದೇ ಪ್ರತಿ ಪಂಚಾಯತಿಗೊಂದರಂತೆ   ಹೊಸ ಹಾಲಿನ ಡೈರಿಗಳನ್ನು ಮಂಜೂರು ಮಾಡಿದ್ದರು  ಆ ಊರಿನಲ್ಲಿ ಓದಿದ ವಿದ್ಯಾವಂತ ಬಡ ಹೆಣ್ಣುಮಕ್ಕಳು ಯಾರೂ ಇಲ್ಲದ್ದರ ಪರಿಣಾಮವಾಗಿ ಇದ್ದಿದ್ದರಲ್ಲಿಯೇ ಐದನೇ ಇಯುತ್ತೆ ಓದಿ ಪಾಸಾಗಿದ್ದ  ಮತ್ತು  ಸಣ್ಣ ಪುಟ್ಟ ಲೆಕ್ಕ ಪತ್ರ ಮಾಡಲು ಬರುತ್ತಿದ್ದ ಸೀತವ್ವಳ ಹೆಸರಿಗೆ ಆ ಹಾಲಿನ ಡೈರಿ ಮಂಜೂರಾಗಿತ್ತು. ದಿನಾಲೂ ಬೆಳಿಗ್ಗೆ ಮತ್ತು ಸಾಯಂಕಾಲ ಎಲ್ಲರೊಡನೆ ಪ್ರೀತಿ ಮತ್ತು ನಿಷ್ಠೆಯಿಂದ  ಹಾಲಿನ ಡೈರಿಯನ್ನು ನಡೆಸಿ  ಹಾಲು ಹಾಕುವ ರೈತ ಕುಟುಂಬಗಳಿಗೆ ಸರಿಯಾಗಿ ಹಣ ಸಂದಾಯ ಮಾಡುತ್ತಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದಳಲ್ಲದೇ  ಹಿಂದೆಂದೂ ಆಗಿರದ ಆ ಊರಿನಿಂದ ಅತೀ ಹೆಚ್ಚು ಹಾಲು ಸಂಗ್ರಹಿಸಿ ಕೊಟ್ಟ ಡೈರಿ ಎಂಬ ಖ್ಯಾತಿ ಸೀತವ್ವಳದಾಯಿತು. ಅಷ್ಟೇ ಅಲ್ಲದೇ ಹಾಲು ಉತ್ಪಾದಕ ಮಂಡಳಿಯಿಂದ ಜಿಲ್ಲೆಯ ಅತ್ಯುತ್ತಮ ಹಾಲಿನ ಡೈರಿ ಎಂದು ಪ್ರಶಸ್ತಿಯನ್ನೂ ಕೂಡಾ ಪಡೆದುಕೊಂಡಳು ಅದರಿಂದ ಸುತ್ತಲಿನ ಹತ್ತಾರು ಹಳ್ಳಿಯ ರೈತ ಜನರು ಅವಳ ಡೈರಿಗೆ  ಹಾಲು ಹಾಕಲು ಮುಗಿಬಿದ್ದರು. ಅದರಿಂದ ಅವಳ ವರಮಾನವೂ ಕೂಡ ಹೆಚ್ಚಾಯ್ತು  ಬಂದ ಹಣವನ್ನು ಅನಗತ್ಯ ಕರ್ಚು ಮಾಡದೆ ಮಕ್ಕಳು ಮತ್ತು ಮನೆಗೆಂದು ತೆಗೆದಿಟ್ಟು ಮಿಕ್ಕಿದ್ದನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದಳು ನಾಲ್ಕಾರು ವರ್ಷ ಕಳೆದ ಮೇಲೆ ಅವಳ ತಲೆಯಲ್ಲೊಂದು ವಿಚಾರ  ಹೊಳೆಯಿತು ಕೂಡಿಟ್ಟ ಹಣದಿಂದ ನಾನೇಕೆ ಪಟ್ಟಣಗಳಲ್ಲಿ ನನ್ನದೇ ಖಾಸಗಿ ಡೈರಿಗಳನ್ನು ತೆರೆಯಬಾರದೆಂದು..? ಅದಕ್ಕೆ  ಇವಳ ಕಾರ್ಯವೈಖರಿ ಗಮನಿಸಿದ್ದ ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳು ಕೂಡ ಸಾಲ ನೀಡಿದವು ಅದರಿಂದಾಗಿ ನೆರೆಯ ಪಟ್ಟಣಗಳಾದ ಬಂಕಾಪುರ, ಶಿಗ್ಗಾವಿ, ಹಾವೇರಿಗಳಲ್ಲೂ ತಲಾ ಒಂದೊಂದು ಡೈರಿಗಳನ್ನು ತೆರೆದು ಅಲ್ಲಿ ಒಂದೊಂದು ಆಳುಗಳನ್ನು ಇಟ್ಟು ಮುನ್ನಡೆಸಹತ್ತಿದಳು. ಹೀಗೆ ಒಂದು ಇದ್ದ ಹಾಲಿನ ಡೈರಿ ಒಂದು ದೊಡ್ಡ ಉದ್ಯಮವಾಗಿ ಬೆಳೆದು ಮುಂದೆ  ಹಾಲು, ಮೊಸರು, ಬೆಣ್ಣೆ, ತುಪ್ಪ, ಐಸ್ ಕ್ರೀಮ್ ಮುಂತಾದ ಕ್ಷೀರೋತ್ಪನ್ನಗಳನ್ನು ತಯಾರಿಸುವ ಕಂಪನಿಯ ಮಾಲೀಕಳಾದಳು. ಅದು “ಸೀತಾ ಮಿಲ್ಕ್ ಪ್ರಾಡಕ್ಟ್ ಕಂಪನಿ” ಎಂದು ಎಲ್ಲೆಡೆ ಪ್ರಸಿದ್ಧಿ ಪಡೆಯಿತು. ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಹೋಗಿದ್ದರಿಂದ  ಮಾರುಕಟ್ಟೆಯಲ್ಲಿ ಇದ್ದ ಎಲ್ಲ ಕಂಪನಿಗಳ ಜೊತೆಗೆ ಪೈಪೋಟಿಗಿಳಿದು ಲಾಭ ಗಳಿಸುವಷ್ಟರ  ಮಟ್ಟಿಗೆ ಅವಳ ಅದೃಷ್ಟ ಕುಲಾಯಿಸಿತು. ಬಂದ ಆದಾಯದಿಂದ ವಿಲಾಸದಲ್ಲಿ ಮೈ ಮರೆಯದೇ, ಅದೇ ಊರಲ್ಲಿ  ಸೂಳೆಯರ ಸಹವಾಸ ಮತ್ತು ಕುಡಿತಕ್ಕಾಗಿಯೇ  ಹೊಲ ಮನಿ ಮಾರುತಿದ್ದ ಕುರುವತ್ತಿಗೌಡನ ಹತ್ತು ಎಕರೆ ಹೊಲ ಮತ್ತು  ಪಟ್ಟಣಗಳಲ್ಲಿ ನಾಲ್ಕರು  ಸೈಟ್ಗಳನ್ನು ಕೊಂಡು ಮಕ್ಕಳ ಹೆಸರಿಗೆ ಮಾಡಿ ಅಂದು ತೆಗಳಿದ ಸರೀಕರೆಲ್ಲರ ಹುಬ್ಬರಿಸುವಂತೆ ಮಾಡಿದಳು. ತಾಯಿ ಪಡುವ ಕಷ್ಟವನ್ನು ಹತ್ತಿರದಿಂದಲೇ ಮನಗಂಡಿದ್ದ ಮಕ್ಕಳು ಶಾಲೆ ಕಾಲೇಜುಗಳಲ್ಲಿ ಉನ್ನತ ತರಗತಿಯಲ್ಲಿ ತೇರ್ಗಡೆ ಹೊಂದಿ ಹಿರಿಯ ಮಗ ಈಶ್ವರ ಕೃಷಿ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾದ, ಎರಡನೇ ಮಗ ಮಾದೇವ ಪೊಲೀಸ್ ಇನಸ್ಪೆಕ್ಟರ್ ಆದ, ಇನ್ನು ಮೂರನೇ ಮಗ  ಕಾಂತೇಶನಿಗೆ ಯಾಕೋ ವಿದ್ಯೆ ತಲೆಗೆ ಹತ್ತಲೇ ಇಲ್ಲಾ  ಅವ್ವನ ಹಾಲಿನ ಡೈರಿ ಮತ್ತು ಹೊಲ ನೋಡಿಕೊಂಡು ಹೋದ, ಇಷ್ಟೆಲ್ಲ ಬೆಳವಣಿಗೆಯನ್ನು ಯಾರಿಂದಲೋ ಕೇಳಿ  ತಿಳಿದುಕೊಂಡು ಹತ್ತಾರು ವರ್ಷಗಳ ಹಿಂದೆ ಮಾಯವಾಗಿದ್ದ ಗಂಡ ಧರ್ಮಣ್ಣ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿ ಪಶ್ಚಾತಾಪದ ನುಡಿಗಳನ್ನಾಡಿ  ಕಳ್ಳಬೆಕ್ಕಿನಂತೆ ಬಂದು ಮನೆ ಸೇರಿಕೊಂಡ. ಇನ್ನು ಅವಳ ಅತ್ತಿ ಸಾವಂತ್ರೆವ್ವ ಪಾರ್ಶ್ವವಾಯುವಿಗೆ ತುತ್ತಾಗಿ ಸೊಂಟದ ಸ್ವಾಧೀನ ಕಳೆದುಕೊಂಡು ನಾಲ್ಕು ವರ್ಷ ಹಾಸಿಗೆಯಲ್ಲಿ  ಒದ್ದಾಡಿ  ಮಣ್ಣು ಸೇರಿದಳು ಆಗಲೂ ಒಬ್ಬ ಸೊಸೆಯಾಗಿ ಅತ್ತೆಗೆ ಮಾಡುವ ಸೇವಾ ಕರ್ತವ್ಯದಲ್ಲಿ ಇತರರಿಗೆ ಮಾದರಿಯಾಗಿದ್ದಳು.
    ಇಷ್ಟೆಲ್ಲ ಬದುಕಿನ ಗುದುಮುರಿಗೆಯಲ್ಲಿ ನುಗ್ಗಾಗಿ ಕಾಲ ಕಳೆಯುವ ಹೊತ್ತಿಗೆ ಸೀತವ್ವ ಕನ್ನಡಿಯ ಮುಂದೆ ಹೋಗಿ ನಿಂತಾಗ ಅಷ್ಟೊತ್ತಿಗಾಗಲೇ ಅವಳ ತಲೆಯಲ್ಲೊಂದಿಷ್ಟು ಬಿಳಿ ಕೂದಲು ಮೂಡಿದ್ದವು ಸುಖಕ್ಕಿಂತ ಹೆಚ್ಚು ನೋವನ್ನೇ ತಿಂದಿದ್ದರಿಂದಲೋ ಏನೋ ಅರವತ್ತಕ್ಕಿಂತ  ಮೊದಲೇ ದೇಹ ಹಣ್ಣಾಗಿ ಮುಪ್ಪು ಅಡರಿತ್ತು. ಅದೂ ಸಾಲದೆಂಬಂತೆ  ದೇಹವನ್ನೆಲ್ಲ ಬಳಲಿಸಿಬಿಡುವ ವಿಚಿತ್ರ ನರರೋಗ ಒಂದು ವಕ್ಕರಿಸಿಕೊಂಡು  ನಿತ್ಯ ರಾತ್ರಿ ಮಾತ್ರೆಗಳಿಲ್ಲದೇ ನಿದ್ರೆಯೂ ಕೂಡಾ ಅವಳಿಂದ ದೂರ ಸರಿದಂತಿತ್ತು ಇದರ ಮಧ್ಯದಲ್ಲಿ ಮೂರು ಮಕ್ಕಳ ತಲೆ ಮೇಲೆ ನಾಲ್ಕು ಅಕ್ಷತೆ ಹಾಕಿ ಹಗುರಾಗಬೇಕೆನಿಸಿ  ಮಕ್ಕಳು ಮೆಚ್ಚಿದ  ಇದ್ದವರ ಮನೆಯಿಂದ ಕನ್ಯೆ ತಂದು ಕಲ್ಲೂರಿನಲ್ಲಿ ಅದ್ದೂರಿಯಾಗಿ ಮದುವೆಯನ್ನು ಕೂಡ ಮಾಡಿದಳು. ಮದುವೆಯಾಗಿ ಎರಡು ವರ್ಷ ಕಳೆದ ಮೇಲೆ  ಎಲ್ಲವೂ ಸರಿಯಾಗಿದ್ದ ಕುಟುಂಬದಲ್ಲಿ  ಕಷ್ಟದ ಪರಿವೇ ಇಲ್ಲದೆ ಬೆಳೆದಿದ್ದ  ಹಿರಿಯ ಮಗ ಈಶ್ವರನ ಹೆಂಡತಿ ನಾಗವೇಣಿಗೂ  ಎರಡನೇ ಮಗನ ಹೆಂಡತಿ ಸತ್ಯವತಿಗೂ ಅದ್ಯಾಕೋ ಹೊಂದಾಣಿಕೆಯೇ ಆಗಲಿಲ್ಲ  ಮನೆಯಲ್ಲಿ ಬಹುತೇಕ  ಅಡುಗೆ ಕೆಲಸವನ್ನು  ಸೀತವ್ವಳೇ ಮಾಡುತ್ತಿದ್ದರೂ ಮಿಕ್ಕುಳಿದ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಕಸ ಗುಡಿಸುವಂತಹ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖ್ಯಾತೆ ತೆಗೆದು ಬೀದಿಗಿಳಿದು ಜಗಳಕ್ಕೆ ನಿಂತರು. ಮನೆಯ ಮಾನ ಹರಾಜಾಗುವುದನ್ನು ಕಂಡ ಸೀತವ್ವ  ತಿಳಿ ಹೇಳಹೋದರೆ ಅತ್ತೆ ಎನ್ನುವ ಕನಿಷ್ಠ ಸೌಜನ್ಯವನ್ನು ತೋರದೆ  ಇಷ್ಟೆಲ್ಲ ಜಗಳಕ್ಕೆ ನೀನೇ ಕಾರಣವೆಂದು ಅವಳನ್ನೇ ದೂರಿದರು. ಇದರಿಂದ ಒಂದು ಮಾತನಾಡದೇ  ಸೀತವ್ವ ಮೂಕವಿಸ್ಮಿತಳಾಗಿಯೇ ಉಳಿದಳು.. ಇಷ್ಟರ ಮಧ್ಯ “ಇನ್ನು  ನಾನು ನಿನ್ನ ಜೊತೆ ಇರಬೇಕಾದರೆ ಬೇರೆ ಮನೆ ಮಾಡಿದರೆ ಮಾತ್ರ ಸಾಧ್ಯ ಇಲ್ಲದಿದ್ದರೆ ನನ್ನ ದಾರಿ ಬೇರೆ” ಎಂದು ಹೇಳಿದ ಹೆಂಡತಿ ನಾಗವೇಣಿಯ ಮಾತಿಗೆ ಕಿವಿಗೊಟ್ಟ ಈಶ್ವರ ಅವ್ವ ಸೀತವ್ವಳಿಗೂ ಹೇಳದೇ ದುಡ್ಡು ಕೊಟ್ಟು ತಾನೇ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿಕೊಂಡು ಸರ್ಕಾರದವರು ಒಂದೇ ಕಡೆ ಐದು ವರ್ಷ ಇರಬಾರದೆಂದು ಕಡ್ಡಾಯ ವರ್ಗಾವಣೆ ಮಾಡಿದ್ದಾರೆಂದು ಹಾರಿಕೆ ಉತ್ತರ ಕೊಟ್ಟು ಹೆಂಡತಿ ಸೆರಗು ಹಿಡಿದುಕೊಂಡು ಹೋದ. ಯಾರಾದರೂ ಮನೆಗೆ ಬಂದವರು ಅವರ ಸುದ್ದಿ ತೆಗೆದಾಗಲೆಲ್ಲ  ನಿರುತ್ತರಿಯಾಗುತ್ತಿದ್ದ ಸೀತವ್ವಳ ಜೀವ ಹಿಂಡಿದಂತಾಗುತ್ತಿತ್ತು.!
             ಆದರೆ ತಾಯಿಯ ಬಗ್ಗೆ ಅಪಾರ ಕಕ್ಕುಲಾತಿ ಹೊಂದಿದ್ದ ಎರಡನೇ ಮಗ ಮಾದೇವ ಮಾತ್ರ ಪ್ರತಿವರ್ಷ ಪೋಲಿಸ್ ಇಲಾಖೆಯವರು ವರ್ಗಾವಣೆ ಮಾಡುತ್ತಿದ್ದರೂ  ಹೆಂಡತಿ ಸತ್ಯವತಿಯನ್ನು ಸೀತವ್ವಳ ಹತ್ತಿರವೇ ಬಿಟ್ಟು ಪೊಲೀಸ್ ಕ್ವಾಟರ್ಸ್ನಲ್ಲಿ ಉಳಿದುಕೊಂಡು ವಾರಕ್ಕೊಮ್ಮೆ ಮನೆಗೆ ಬಂದು ಹೋಗಿ ಮಾಡುತ್ತಾ   ಸೀತವ್ವಳಿಗೆ ಮನೆಯಿಂದ ದೂರಾದ  ಹಿರಿಯ ಮಗನ  ಅನುಪಸ್ಥಿತಿಯ ನೋವನ್ನು ಕೊಂಚ ಮರೆಯುವಂತೆ ಮಾಡಿದ್ದ. ಅದರೆ ಬರಬರುತ್ತ  ಅದು ಅವನ ಹೆಂಡತಿಗೆ  ಯಾಕೋ ಸರಿ ಕಾಣಲಿಲ್ಲ ಒಂದು ದಿನ  ಆಫೀಸಿನಲ್ಲಿ ಇದ್ದ ಗಂಡ ಮಾದೇವನಿಗೆ ಕರೆ ಮಾಡಿ ನಾನೂ ನಿಮ್ಮ ಜೊತೆ ಪೊಲೀಸ್ ಕ್ವಾಟ್ರಸ್ ನಲ್ಲಿ  ಬಂದು ಉಳಿದುಕೊಳ್ಳುವೆ ಕರೆದುಕೊಂಡು ಹೋಗೆಂದು ಹಠ ಹಿಡಿದಳು. ಅದಕ್ಕವನು ಒಪ್ಪದೇ ಅಣ್ಣ ಅತ್ತಿಗೆಯರಂತೆ ನಾವೂ ಮನೆ ತೊರೆದರೆ ಅದನ್ನು ಸಹಿಸುವ ಶಕ್ತಿ ಅವ್ವಳಿಗಿಲ್ಲ ಆ ಕಾರಣಕ್ಕಾದರೂ ಒಂದಿಷ್ಟು ದಿನವಾದರೂ ಅವಳೊಟ್ಟಿಗಿರು ಎಂದು  ಹಲುಬಿದ. ಆ ಮಾತಿಗೆ ಸಿಟ್ಟಿಗೆದ್ದ ಅವಳು “ನಾನು ನಿನ್ನನ್ನು ಮದುವೆಯಾಗಿದ್ದು ನಿನ್ನೊಟ್ಟಿಗಿದ್ದು ಸಂಸಾರ ಮಾಡಲೆಂದೇ ಹೊರತೂ ನಿಮ್ಮವ್ವನ ಇಚ್ಛೆಯಂತೆ ಬದುಕಲಲ್ಲ” ಎಂದು ಕಟುವಾಗಿ ಹೇಳಿದಳಲ್ಲದೇ ನಾವು  ಮನೆ ಬಿಟ್ಟು ಹೋದರೆ ಅವಳೇಕೆ ಒಂಟಿ ಯಾಗುತ್ತಾಳೆ? ಅವಳ ಜೀವದ ಕಿರಿಸೊಸೆ ಶೀಲಾಳೊಂದಿಗೆ ನೆಮ್ಮದಿಯಿಂದ ಇರುತ್ತಾಳೆ ಎಂದು ವಕ್ರ ಮಾತನ್ನೆಸೆದು ಫೋನಿಟ್ಟಳು. ಇದೆಲ್ಲವನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡ ಸೀತವ್ವಳ ಕಿವಿಗೆ ಕಾಯ್ದ ಕಬ್ಬಿಣದ ಸೀಸವನ್ನು  ಹಾಕಿದಂತಾಯ್ತು. ಸೊಸೆ ಆಡಿದ ಮಾತಿನಿಂದಾದ ನೋವನ್ನು ಮರೆಮಾಚಿ  ಅವಳ ಮನದಿಂಗಿತವನ್ನು ಅರಿತ ಸೀತವ್ವ ಅಂದೇ ಸಂಜೆ ಮಗನಿಗೆ ಪೋನಾಯಿಸಿ  “ನೋಡು ಮಗಾ ಮಾದೇವ ನಾನು ಇನ್ನೆಷ್ಟು ದಿನದಾಕಿ ? ಇಂದಲ್ಲ ನಾಳೆ ಬಿದ್ದು ಹೋಗೋ ಮರ ನನ್ನ ಬಗ್ಗೆ ಚಿಂತೆ ಬಿಡು, ಅವಳಿಗಿಲ್ಲಿ ಯಾಕೋ ಹೊಂದಿಕೊಳ್ಳಲು ಆಗುತ್ತಿಲ್ಲವಂತೆ ನಿನ್ನೊಟ್ಟಿಗೆ ಕರೆದುಕೊಂಡು ಹೋಗೆಂದಳು” ಮರುದಿನ ಮನೆಗೆ ಬಂದ ಮಹದೇವ ಅನ್ಯ ಮಾರ್ಗವಿಲ್ಲದೇ ಅವ್ವನ ಮಾತಿನಂತೆ ಹೆಂಡತಿಯನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದ.
         ಅಚಲ ನಂಬಿಕೆ ಇಟ್ಟಿದ್ದ ಮಾದೇವನ ಸಂಸಾರವೂ ತನ್ನಿಂದ ದೂರಾದ ಮೇಲಂತೂ  ತುಂಬಾ ವಿವ್ಹಲಗೊಂಡ ಸೀತವ್ವ  ಚಿಂತೆಯಿಂದ ಒಂದು ವಾರ  ಊಟ ನಿದ್ರೆ ತೊರೆದಿದ್ದರಿಂದ ಅವಳ ಹಳೆಯ ಕಾಯಿಲೆ ಮತ್ತಷ್ಟು ಉಲ್ಬಣಗೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಯ್ತು ಅವಳ ಯೋಗಕ್ಷೇಮದ ಹೊಣೆ ಕೊನೆಯ ಮಗ ಕಾಂತೇಶನ ಹೆಗಲ ಮೇಲೆ ಬಿದ್ದಿದ್ದರೂ ಆಗಾಗ ಮಾದೇವ ಮನೆಗೆ ಬಂದು ತಾಯಿಯನ್ನು ನೋಡಿಕೊಂಡು ಒಂದಿಷ್ಟು  ಹಣವನ್ನು ಸಹ ಕೊಟ್ಟು ಹೋಗುತ್ತಿದ್ದ.  ಅದರಿಂದಲೇ ಅವಳ ಆಸ್ಪತ್ರೆ ಖರ್ಚು ವೆಚ್ಚಗಳು ನಿರಾತಂಕವಾಗಿ ಸಾಗುತ್ತಿದ್ದವು ಅದರೆ ತನ್ನ ನೌಕರಿಯ ಕಾರ್ಯಒತ್ತಡದ ಮಧ್ಯ ಮಾದೇವ ಒಮ್ಮೊಮ್ಮೆ ತಿಂಗಳಾನುಗಂಟಲೆ ಮನೆಗೆ ಬರದಿದ್ದಾಗ  ಸೀತವ್ವ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಳು ಏಕೆಂದರೆ   ಕಿರಿಸೊಸೆ ಶೀಲಾ ಉಟೋಪಚಾರವನ್ನು ಮಾಡುತ್ತಿದ್ದಳೆನೋ ನಿಜ ಅದರೆ ಬರಬರುತ್ತಾ ಅಧಿಕಗೊಳ್ಳುತ್ತಿದ್ದ ಅವಳ ಆಸ್ಪತ್ರೆ ಖರ್ಚನ್ನು ಗಂಡನೊಬ್ಬನೇ ವ್ಯಯಿಸುವುದನ್ನು ಸಹಿಸದಾದಳು. ನೌಕರಿಯ ನೆಪವೊಡ್ಡಿ ಮನೆಯಿಂದ ದೂರ ಸರಿದಿರುವ ನಿನ್ನ ಅಣ್ಣಂದಿರರಿಗೆ  ಬೇಡವಾದ ತಾಯಿ ನಿನಗಷ್ಟೇ ಏಕೆ ಬೇಕು?  ನಾವು ದುಡಿದಿದ್ದೆಲ್ಲವನ್ನು ಅವಳ  ಆಸ್ಪತ್ರೆಗೆಂದೇ ಖರ್ಚು ಮಾಡುತ್ತಾ ಹೋದರೆ  ಮುಂದೆ  ನಮ್ಮ ಮಕ್ಕಳ ಕೈಗೆ ಚಿಪ್ಪು ಕೊಡಬೇಕಾದೀತು ..! ಎಂದು ಹೇಳಿ ಗಂಡನ ಕರ್ತವ್ಯ ಪ್ರಜ್ಞೆಯನ್ನು ಆಲುಗಾಡಿಸಿದಳು. ಮೊದಮೊದಲು ಕಾಂತೇಶ ಹೆಂಡತಿಯ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳದಿದ್ದರೂ ಬರಬರುತ್ತಾ ಅವಳ ಮಾತಿನಲ್ಲಿ ಅದೇನು ಸತ್ಯವನ್ನರಿತನೋ…?  ಮುಂದೆ ಅವನ ನಡತೆಯಲ್ಲೂ ಸೀತವ್ವ ವೈರುದ್ಯವನ್ನು ಕಾಣುವಂತಾಯ್ತು.!  ಅವಳ ದೈಹಿಕ ವ್ಯಾದಿ ಉಲ್ಬಣಗೊಳ್ಳುತ್ತಿದ್ದರೂ  ದುಡ್ಡಿನ ಲೆಕ್ಕಾಚಾರ ಹಾಕಿ ಆಸ್ಪತ್ರೆಗೆ ತೋರಿಸಲು  ಹಿಂದೇಟು ಹಾಕುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೋಚರಿಸತೊಡಗಿತು. ಗಳಿಸಿದ ಎಲ್ಲಾ ಆಸ್ತಿಯನ್ನು  ಹಿಂದೆ ಮುಂದೆ ನೋಡದೆ ಮಕ್ಕಳ ಹೆಸರಿಗೆ ಬರೆದುಕೊಟ್ಟು ತಾನೆಂತ ಮೂರ್ಖತನವೆಸಗಿದೆನೆಂದು ಪಶ್ಚಾತಾಪ ಪಡುತ್ತಾ ದಿನಕಳೆಯುತ್ತಿರುವಾಗ ಮೂರು ತಿಂಗಳಿಂದ ಕೆಲಸದೊತ್ತಡದಲ್ಲಿದ್ದ ಮಹಾದೇವ ಒಂದು ದಿನ ಬಿಡುವು ಮಾಡಿಕೊಂಡು ಮನೆಗೆ ಬಂದು ತಾಯಿಯನ್ನು ನೋಡಿದಾಗ  ದಿಗ್ಬ್ರಾಂತನಾಗಿ ಹೋದ. ಏಕೆಂದರೆ ಸೀತವ್ವ ಮೊದಲಿನಂತೆ ಉಳಿದಿರಲಿಲ್ಲ ಕಲ್ಲು ಬಂಡೆಯಂತಹ ದೇಹ ಕರಗಿ ಎಲಬು ತಡಿಕೆಗಳ ಹಂದರವಾಗಿದ್ದಳು. ಮಗನನ್ನು ಕಂಡ ಕೂಡಲೇ ತಡೆಯಲಾರದೇ  ದುಃಖ ಉಮ್ಮಳಿಸಿ ಬಂದು ಕಣ್ಣೀರು ಹಾಕಿದಳು. ಅವಳೊಟ್ಟಿಗೆ ತಾನೂ ಕಣ್ಣೀರಾದ ಮಾದೇವನಿಗೆ ಒಂದು ಕ್ಷಣ ಮಾತೇ ಹೊರಡದಂತಾಯಿತು. ಕಡು ಕಷ್ಟದಲ್ಲಿ  ಸಾಕಿ ಬೆಳೆಸಿದ ತಾಯಿಯನ್ನು  ನಾವಿದ್ದೂ ಇಂತಹ ದೈನೇಶಿ ಸ್ಥಿತಿಗೆ ತಂದುಬಿಟ್ಟೆವೆಲ್ಲ ಎಂದು ತನ್ನ ಬಗ್ಗೆ ತಾನೇ ಅಸಹ್ಯ ಪಟ್ಟುಕೊಂಡ,  ಇನ್ನಾದರೂ ಇವಳನ್ನು  ಇಲ್ಲಿಂದ ತನ್ನೊಟ್ಟಿಗೆ ಕರೆದೋಯ್ದು ಸೇವೆ ಮಾಡಿದರಾಯ್ತು ಎಂದು ಅವಳಿಗೆ ತಯಾರಾಗಲು ತಿಳಿಸಿದ. ಅದರೆ  ಸೀತವ್ವಳಿಗೆ ಮಗನೊಟ್ಟಿಗೆ ಹೋಗುವ ಮನಸಿದ್ದರೂ ಈ ಹಿಂದೆ ಅವನ ಹೆಂಡತಿ  ತೋರಿದ್ದ ಗಾಂಚಾಲಿ  ಬುದ್ಧಿ  ಅವಳನ್ನು ಎದೆ ಹಿಡಿದು ಹಿಂದಕ್ಕೆ ತಳ್ಳಿದಂತಾಯ್ತು ಏನೇ ಆದರೂ ಇಲ್ಲೇ  ಇದ್ದು ಸತ್ತರಾಯ್ತು ಎಂಬ ನಿರ್ಧಾರಕ್ಕೆ ಬಂದಂತಿದ್ದ ಸೀತವ್ವ  ತಾ ಬರದಿರಲು ನೈಜ ಕಾರಣವನ್ನು ಮಗನೆದುರು ತೊರ್ಪಡಿಸದೇ  ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ತಾವಿರುವ ಪಟ್ಟಣದಲ್ಲಿ  ಹೊತ್ತು  ಕಳೆಯಲಾಗುವುದಿಲ್ಲವೆಂದು  ಸಬುಬೂ ಕೊಟ್ಟು ಸುಮ್ಮನಾದಳು. ಅದರಿಂದ ಗಲಿಬಿಲಿಗೊಂಡ  ಮಹಾದೇವನಿಗೆ   ಈ ಹಿಂದೆ  ನನ್ನ ಹೆಂಡತಿ ತೋರಿರುವ ಗುಣ ನಡತೆಗಳಿಂದಲೇ ಅವಳಿಂದು ತನ್ನೊಟ್ಟಿಗೆ ಬರಲು ಒಪ್ಪುತ್ತಿಲ್ಲ ಎಂಬುದನ್ನು  ಅರ್ಥೈಸಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ ಮನೋದೈಹಿಕವಾಗಿ ತೀರಾ ಕುಗ್ಗಿ ಹೋಗಿರುವ ಅವಳನ್ನು ಅಂತಹ ಸ್ಥಿತಿಯಲ್ಲಿ ಅವಳನ್ನು ಇಲ್ಲೇ ಬಿಟ್ಟು ಹೋದರೆ ಹೆಚ್ಚು ಕಾಲ ಬದುಕುಳಿಯುವಳೇ..? ಎನ್ನುವ ಪ್ರಶ್ನೆಗೆ ಅವನಲ್ಲಿ ಯಾವುದೇ ಉತ್ತರ ಖಾತ್ರಿ ಅನಿಸಲಿಲ್ಲ.  ಹಾಗಾಗಿ ಹೆಂಡತಿಗೆ ಇಷ್ಟವಿರಲಿ ಇಲ್ಲದಿರಲಿ ಹೇಗಾದರೂ ಮಾಡಿ ಅವಳನ್ನು ಕರೆದುಕೊಂಡು ಹೋಗಿ ತಾನೇ ಚಾಕರಿ ಮಾಡಿದರಾಯ್ತು ಎಂದು ದೃಢವಾಗಿ ನಿಶ್ಚಯಿಸಿದ ಮಾದೇವ ತನ್ನೊಟ್ಟಿಗೆ ಬರಲು ತಾಯಿಯನ್ನ ವಿಧವಿಧವಾಗಿ  ಕೇಳಿಕೊಂಡ ಮಗನ ಈ ಗೋಗರಿಯುವಿಕೆಗೆ ಕಿವಿಗೊಟ್ಟ ಸೀತವ್ವ ಕೊನೆಗೆ ಮನಸ್ಸಿಲ್ಲದಿದ್ದರೂ ಒಪ್ಪಿಕೊಂಡು ಅವನೊಟ್ಟಿಗೆ ಹೋದಳು. ಅವಳಿಗೆ ದಾವಣಗೆರೆಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರರೋಗ ತಜ್ಞರಿಂದ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡು ಮನೆಗೆ ಹೋದ ನಂತರ ತನ್ನ ಹೆಂಡತಿಯನ್ನು ಪ್ರೀತಿಯಿಂದ  ಕರೆದು “ನೋಡು  ಸತ್ಯವತಿ ಇನ್ನು ಮುಂದೆ ಅವ್ವ  ನಮ್ಮೊಟ್ಟಿಗೆ ಇರ್ತಾಳೆ ಅವಳ ಅರೋಗ್ಯ ತೀರಾ ಹದಗೆಟ್ಟಿದೆ ಅವಳನ್ನು ನೋಡಿಕೊಂಡು ಹೋಗುವುದು ನಮ್ಮಿಬ್ಬರ ಜವಾಬ್ದಾರಿ” ಎಂದು ಹೇಳಿ ಸೀತವ್ವಳನ್ನು ಮನೆಯಲ್ಲಿ ಬಿಟ್ಟು ಡ್ಯೂಟಿಗೆ ಹೋದ. ಅದರೆ ತಾನು ತನ್ನ  ಮಕ್ಕಳು, ತವರು ಸಂಬಂಧಿಕರಷ್ಟೇ ಬಂಧುಗಳೆಂದು ತಿಳಿದಿದ್ದ  ಸೊಸೆ ಸತ್ಯವತಿಗೆ ಈ ವಯಸ್ಸಾದ ಅತ್ತೆಯನ್ನು  ಕರೆತಂದು ತನ್ನಿಂದ ಚಾಕರಿ ಮಾಡಲು ಹಚ್ಚುವ ಗಂಡನ ಈ ನಿರ್ಧಾರವು ಎಳ್ಳಷ್ಟೂ ಹಿಡಿಸಲಿಲ್ಲ. ಸೀತವ್ವ ಅವಳ ಮನೆ ಬಾಗಿಲಿಗೆ ಹೋಗಿ ನಿಂತಾಗ ಅವಳಿಗೆ  ಕನಿಷ್ಠ ಕೈಕಾಲು  ತೊಳೆಯಲು ನೀರನ್ನಾದರೂ ಕೊಟ್ಟು “ಒಳಗೆ ಬಾ ಅತ್ತೆ, ಹೇಗಿದ್ದಿಯಾ ? ” ಎನ್ನುವ  ಒಂದು ಸಣ್ಣ ಸೌಜನ್ಯವನ್ನೂ ಕೂಡಾ ತೋರದೆ ಸಿಟ್ಟಿನಿಂದ ಒಳನಡೆದಳು. ಸೊಸೆಯ ಈ ಅನಾದರ ಪ್ರಜ್ಞೆಯನ್ನರಿತ  ಸೀತವ್ವಳಿಗೆ ಇಲ್ಲಿಗೆ ಬರಲು ಮಗನ ಒತ್ತಾಯಕ್ಕೆ ತಾ ಮಣಿಯಬಾರದಿತ್ತೆಂದು ಒಂದು ಕಡೆ ಅನಿಸದರೂ  ಅನಾರೋಗ್ಯದಿಂದ  ಜರ್ಜರಿತಳಾದ ತಾನೀಗ ಇಂತಹ ಪರಿಸ್ಥಿತಿಯಲ್ಲೂ  ಸ್ವಾಭಿಮಾನದ ಹಠ ಸಾಧನೆ ಮಾಡುವುದನ್ನು  ಬಿಟ್ಟು ಮೌನ ವಹಿಸುವುದೇ ಒಳಿತೆಂದುಕೊಂಡು ಸೊಸೆ ಕರೆಯದಿದ್ದರೂ, ಇದೇನು ಬೇರೆಯವರ ಮನೆಯಲ್ಲ ಮಗನ ಮನೆಯಂದು ತಾನೇ ಒಳಗೆ ಹೋಗಿ ಮುದುಡಿದ ಹಕ್ಕಿಯ ಮರಿಯಂತೆ ಮಂಚದ ಮೇಲೆ ವರಗಿಕೊಂಡಳು.
 ಒಂದು ಗಂಟೆ ಕಳೆದ ಮೇಲೆ ಸೊಸೆ ಮಕ್ಕಳ ಕೈಯಲ್ಲಿ ಒಂದು ಕಪ್ಪು ಚಾ ಕೊಟ್ಟು ಕಳುಹಿಸಿ ತನ್ನ ಬೆಡ್ ರೂಮ್ನಲ್ಲಿ ಬಾಗಿಲು ಹಾಕಿಕೊಂಡು  ಮಲಗಿಬಿಟ್ಟಳು.  ಮಧ್ಯಾಹ್ನ ಮೂರರವರೆಗೆ ಅವಳತ್ತ ಸುಳಿಯಲೇ ಇಲ್ಲ ನಂತರ ತನಗೆ ಹಸಿವಾದ ಮೇಲೆ  ಹೊರಬಂದು ಹಿಂದಿನ ರಾತ್ರಿಯಲ್ಲಿ ಉಳಿದಿದ್ದ ಅನ್ನಕ್ಕೆ ಒಗ್ಗರಣೆ ಕೊಟ್ಟು  ತಾನೂ ತಿನ್ನುತ್ತಾ ಸೀತವ್ವಳಿಗೂ ಒಂದು ಹಿಡಿ ಅನ್ನವನ್ನು ತಟ್ಟೆಯಲ್ಲಿ ಹಾಕಿ ಅವಳತ್ತ  ತಳ್ಳಿದಳು ಪ್ರೀತಿ ಇಲ್ಲದೆ ನೀಡಿದ ಅನ್ನ ಹೇಗೆ ಸೇರಿತು? ಆದರೂ ಮರು ಮಾತನಾಡದೇ  ಗಂಟಲಿಗಿಸಿಕೊಂಡ ಸೀತವ್ವ ಮಾತ್ರೆ ತೆಗೆದುಕೊಂಡು ಮಗನ ದಾರಿ ಕಾಯುತ್ತ ಮತ್ತೆ ಹಾಸಿಗೆಗೆ ವರಗಿದಳು.  ಪರಸ್ಪರ ಮಾತುಕತೆ ಇಲ್ಲದೆ ದಿನವಿಡೀ ಸ್ಮಶಾನ ಮೌನ ಆವರಿಸಿದಂತಿದ್ದ ಆ ಮನೆಯಲ್ಲಿ ಒಂದೆರಡು ಅಪ್ತ ಮಾತುಗಳಿಗಾಗಿ ಮಗ ಬರುವ ವರೆಗೂ ದಾರಿ ಕಾಯಬೇಕಾಯಿತು..! ಸಂಜೆ ಡ್ಯೂಟಿ ಮುಗಿಸಿ  ಬಂದ ಮಾದೇವ ತಾಯಿಯ ಅರೋಗ್ಯವನ್ನು ವಿಚಾರಿಸುತ್ತಾ ಪೇಟೆಯಿಂದ ತಂದ ಕಿತ್ತಳೆ ಹಣ್ಣನ್ನು ಸುಲಿದು ಕೊಟ್ಟು ಅವಳ ಆರೋಗ್ಯದ ಚೇತರಿಕೆಗೆ  ಊಟ ತಿಂಡಿ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸೆಂದು ಹೆಂಡತಿಗೆ  ಮತ್ತೆ ಜ್ಞಾಪಿಸಿದ. ಹೀಗೆ  ಪದೇ ಪದೇ ಸೀತವ್ವಳನ್ನು ಕಾಳಜಿ ಮಾಡೆಂದು ಹೇಳುವುದು ಸತ್ಯವತಿಗೆ ಎಳ್ಳಷ್ಟೂ ಹಿಡಿಸುತ್ತಿರಲಿಲ್ಲ ಆದರೂ ಗಂಡನ ಒತ್ತಾಯಕ್ಕೆ  ಮಣಿದು ಅವನ ಮುಂದಷ್ಟೇ ಕಾಳಜಿ ಮಾಡುವ ಹಾಗೆ ನಾಟಕ ಮಾಡಿ ಅವನು ಆಫೀಸಿಗೆ ಹೋದ ಮೇಲೆ ಅವಳಿಗಾಗಿ ತಂದಿಟ್ಟ ಹಣ್ಣು ಹಂಪಲುಗಳನ್ನು ಮಕ್ಕಳಿಗೆ ಕೊಟ್ಟು ಖಾಲಿ ಮಾಡುವುದು, ತಿಂಡಿ ತಿನಸುಗಳನ್ನು  ಕೈಗೆಟುಕದಂತೆ ಮೇಲಿಡುವುದು, ಬೇಕಂತಲೇ ಅಡುಗೆಯ ಪದಾರ್ಥಗಳನ್ನು ಕಡಿಮೆ ತಯಾರಿಸುವುದು ಇನ್ನು ಅವಳಿಗೆ ಯಾವುದೋ ಖಾಯಿಲೆ ಇದೆ ಎಂದು ಮೊಮ್ಮಕ್ಕಳು ಅವಳೊಂದಿಗೆ ಅಕ್ಕರೆಯಿಂದ ಬೆರೆಯದಂತೆ ತಡೆಯುವುದು ಹೀಗೆ ಸೀತವ್ವ ಇಲ್ಲಿ ಇರುವುದಕ್ಕೆ ತನ್ನ ಸಮ್ಮತಿ ಇಲ್ಲವೆಂದು ಸತ್ಯವತಿ ಪರೋಕ್ಷವಾಗಿ ತೋರಿಸತೊಡಗಿದಳು. ಇದೆಲ್ಲವನ್ನ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಸೀತವ್ವ ಸೊಸೆಯ ಈ ಕ್ಷುಲ್ಲಕ ಗುಣಗಳನ್ನು ಮಗನೆದುರು ಹೇಳಿ ಅವರಿಬ್ಬರ ಮಧ್ಯೆ ಜಗಳಕ್ಕೆ ತಾನು ಕಾರಣವಾಗಬಾರದೆಂದು ಒಳಗೊಳಗೇ ನುಂಗಿಕೊಂಡು ಸುಮ್ಮನಿರತೊಡಗಿದಳು ಇನ್ನು ಸೀತವ್ವಳ ಮುಖಭಾವದಿಂದಲೇ ಹೆಂಡತಿಯ  ಎಲ್ಲ ನಡತೆಗಳನ್ನು ಅರಿತುಕೊಳ್ಳತ್ತಿದ್ದ ಮಾದೇವ ಆ ಕುರಿತು ಹೆಂಡತಿಯನ್ನು ಕೆಣಕಿದರೆ  ಮನೆಯಲ್ಲಿ ತಾನಿಲ್ಲದಿದ್ದಾಗ  ತಾಯಿಯನ್ನು ಇನ್ನಷ್ಟು ದ್ವೇಷದಿಂದ ಕಾಣಬಹುದೆಂಬ ಭಯದಿಂದ ಅವನೂ  ತಣ್ಣಗಿದ್ದ. ಅದರೆ  ಸೀತವ್ವಳಿಗೆ ಅಲ್ಲಿರುವುದು ಬರಬರುತ್ತ ಅಸಹನೀಯವೆನಿಸತೊಡಗಿತು.  ಒಂದು ದಿನ ಇದ್ದಕ್ಕಿದ್ದಂತೆ ಸೊಸೆ ಮನೆಯಲ್ಲಿ ಇಲ್ಲದಿದ್ದಾಗ ಮಗನನ್ನು ಕರೆದು “ನೋಡು ಮಾದೇವ ನನಗೆ ಇಲ್ಲಿನ ಹವಾಮಾನ ಯಾಕೋ ಆಗಿ ಬರುತ್ತಿಲ್ಲ ನನ್ನನ್ನು ಕಲ್ಲೂರಿಗೆ ಬಿಟ್ಟು ಬಂದು ಬಿಡು” ಎಂದು ಕೇಳಿಕೊಂಡಳು.  ಅವಳ ಆ ನಿರ್ಧಾರಕ್ಕೆ ತನ್ನ ಹೆಂಡತಿಯ ದುರ್ನಡತೆಯೇ ಕಾರಣವೆಂದು ಅರ್ಥೈಸಿಕೊಂಡ ಮಾದೇವ “ಅವ್ವ ಇದು ನಿನ್ನ ಮನೆ, ಇನ್ನು ಮುಂದೆ ನೀನು ಎಲ್ಲಿಯೂ ಹೋಗುವಂತಿಲ್ಲ ನೀನು ನನ್ನ ಹೆಂಡತಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಅವಳ ಸ್ವಭಾವವೇ ಹಾಗೆ  ಇಂದಲ್ಲ ನಾಳೆ ಸರಿ ಹೋಗ್ತಾಳೆ  ಅವಳನ್ನು ಸರಿ ಮಾಡುವ ಜವಾಬ್ದಾರಿ ನನ್ನದೆಂದು, ನೀನು ನನ್ನ ಮೇಲೆ ನಂಬಿಕೆ ಇಡು” ಎಂದು ತಿಳಿಸಿ ಹೇಳಿದ ಅದರೆ ಆ ಮನೆಯಲ್ಲಿ ಪರಕೀಯಳಾಗಿ ಇರುವುದಕ್ಕೆ ಇಷ್ಟವಿಲ್ಲದಿದ್ದರೂ ಮಗನ ಒತ್ತಾಸೆಗೆ ಇನ್ನಷ್ಟು ದಿನ ಇಲ್ಲೇ ಇದ್ದರೆ ಸೊಸೆಯ ಗುಣದಲ್ಲಿ ಏನಾದರೂ ಬದಲಾವಣೆಯಾದೀತೆಂಬ ಒಂದು ಪುಟ್ಟ ಭರವಸೆಯೊಂದಿಗೆ ಊರಿಗೆ ಹೋಗಬೇಕೆನ್ನುವ ವಿಚಾರನ್ನು ಕೈಬಿಟ್ಟು ಮತ್ತೆ ಅಲ್ಲಿಯೇ ಹೊಂದಿಕೊಳ್ಳಲು ಪ್ರಯತ್ನಿಸಿದಳು. ಸೊಸೆ ಮಾತನಾಡದಿದ್ದರೂ  ತಾನೇ ಮೇಲೆ ಬಿದ್ದು ಮಾತನಾಡಿಸುವುದು, ತನ್ನ ಅನಾರೋಗ್ಯದ ಮದ್ಯದಲ್ಲೂ  ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು  ಹೀಗೆ  ಅವಳ ಮನಸ್ಸನ್ನು ಗೆಲ್ಲಲು ಹತ್ತಾರು  ಕಸರತ್ತು ಮಾಡಿದಳು. ಆದರೆ  ಸೊಸೆಯೇನು ಅದರಿಂದ ಬದಲಾಗಲಿಲ್ಲ. ಅವಳು ಮಾಡುವ ಕೆಲಸದಲ್ಲಿಯೇ ನ್ಯೂನತೆ ಹುಡುಕಿ ಸೀತವ್ವ ತೊಳೆದಿಟ್ಟ ಪಾತ್ರೆಗಳನ್ನು ಮತ್ತು ಒಗೆದಿಟ್ಟ ಬಟ್ಟೆಗಳನ್ನು ಕಿತ್ತು ನಡು ಮನೆಯಲ್ಲಿ ಬಿಸಾಡಿ” ಸ್ವಚ್ಚವಾಗಿ ತೊಳಿಲಿಕ್ಕೆ ಬರದಿದ್ದರೆ ಯಾಕೆ ತೊಳಿಯಬೇಕು? ಮುದುಕಿ ಆದರೂ ಸ್ವಚ್ಛತೆನೇ ಗೊತ್ತಿಲ್ಲ ಅಂದ್ರೆ ಏನನ್ನಬೇಕು..? ಎಂದು ಸಿಟ್ಟಿನಿಂದ   ಬೈಯುತ್ತಾ ದಿನ ಬೆಳಗಾದರೆ ಖ್ಯಾತೆ ತೆಗೆಯಲು ಶುರು ಮಾಡಿದಳು  ತಪ್ಪಿಲ್ಲದಿದ್ದರೂ ನಿತ್ಯವೂ ವಿನಾಕಾರಣ ಬೈಯಿಸಿಕೊಂಡು ಸುಮ್ಮನಿರುತ್ತಿದ್ದ ತಾಯಿಯ  ಮುಖ ನೋಡಿ ಮಾದೇವನ ಸ್ವಾಭಿಮಾನ  ಕೆರಳಿ  ಒಂದು ದಿನ ಹೆಂಡತಿ ಕೂಗಾಡುವಾಗ ಮಧ್ಯ ಬಾಯಿ ಹಾಕಿ” ಇಷ್ಟೆಲ್ಲಾ ಕೂಗಾಡಲು ಅವಳು ಮಾಡಿರುವ ದೊಡ್ಡ ತಪ್ಪಾದರೂ ಏನು” ..? ಎಂದು ಕೇಳಿದ. ತಕ್ಷಣ ಅದಕ್ಕೆ ಮತ್ತಷ್ಟು ಬಾಯಿ ಜೋರು ಮಾಡುತ್ತಾ ಕೈಯಲ್ಲಿದ್ದ ಅಡುಗೆ ಪಾತ್ರೆಯನ್ನು ನೆಲಕ್ಕೆಸೆದು “ಇಲ್ಲ ತಪ್ಪು ಅವಳದೇನೂ  ಇಲ್ಲ ಎಲ್ಲವೂ ನಂದೇ ತಪ್ಪು” ಎಲ್ಲರೂ ನನಗೆ ಬುದ್ದಿ ಹೇಳ್ಲಿಕ್ಕೆ  ಬರ್ತಾರೆ” ಎಂದು ಅತ್ತು ಕರೆದು ನನಗಿಲ್ಲಿ ಜೀವನವೇ  ಸಾಕಾಗಿದೆ ಎಂದು ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಕೈಯನ್ನು ಕುಯ್ದುಕೊಳ್ಳಲು  ಪ್ರಯತ್ನಿಸುವಳು. ಮಕ್ಕಳೆಲ್ಲ ಜೋರಾಗಿ ಅಳತೊಡಗಿದವು ಅದನ್ನು ನೋಡಿದ ಮಾದೇವ ಓಡಿಬಂದು ಅವಳಿಂದ ಚಾಕುವನ್ನು ಕಿತ್ತೆಸೆದು  ಅವಳನ್ನು ಬೆಡ್ ರೂಮ್ ನತ್ತ ಕರೆದೋಯ್ದು ಹೀಗೇಕೆ ಮಾಡುತ್ತಿರುವಿ ಸತ್ಯವತಿ ಅಷ್ಟಕ್ಕೂ ಆಗಿದ್ದಾದರೂ ಏನಿಲ್ಲಿ..? ನೀನು ಹೀಗೆಲ್ಲ ಮಾಡಿದ್ರೆ ಅವ್ವ ಖಂಡಿತವಾಗಿಯೂ  ಇಲ್ಲಿ ಇರುವುದಿಲ್ಲ  ಪ್ಲೀಸ್  ನಿನಗೆ ಕೈ ಮುಗಿದು ಕೇಳ್ತೇನೆ ನಾನು ಬಾಲ್ಯದಿಂದಲೂ ನನ್ನ  ತಾಯಿಯನ್ನು ಕಣ್ಣಲ್ಲಿ  ಕಣ್ಣಿಟ್ಟು ನೋಡಿಕೊಂಡು ಬಂದಿದ್ದೇನೆ  ಅವಳಿಗೆ ಕೊಂಚ ನೋವಾದರೂ  ನನಗೆ ಸಹಿಸಲು ಸಾಧ್ಯವಾಗುವುದಿಲ್ಲ ಪ್ಲೀಸ್ ಬೇಕಿದ್ದರೆ ನಿನಗೆ ಸಿಟ್ಟು ದ್ವೇಷಗಳಿದ್ದರೆ ನನ್ನ ಮೇಲೆ ತೀರಿಸಿಕೋ ಅದರೆ ಕೊನೆಗಾಲದಲ್ಲಿರುವ ಆ ವಯಸ್ಸಾದ ಜೀವಕ್ಕೆ  ತೊಂದರೆ ಕೊಟ್ಟು ನನ್ನಿಂದ ಅವಳನ್ನು ದೂರ  ಮಾತ್ರ ಮಾಡಬೇಡ ಎಂದು ತುಂಬಾ ಭಾವುಕನಾಗಿ ಕಣ್ಣೀರಾದ ಮಾದೇವ  ಅಳುತ್ತ ಮಲಗಿದ್ದ ಹೆಂಡತಿ ತನ್ನೆಡೆಗೆ ಕಿವಿಗೊಡದಿದ್ದರೂ ತನ್ನೆಲ್ಲ ನೋವುಗಳನ್ನು  ಅವಳೆದುರು ಹರವಿಕೊಂಡು ಕೊಂಚ ಹಗುರಾದ. ನಂತರ ಏನೂ ನಡೆದಿಲ್ಲವೆಂಬಂತೆ ಮುಖಭಾವ ಧರಿಸಿಕೊಂಡು ಬೆಡ್ ರೂಮ್ ನಿಂದ ಹೊರಗೆ ಬಂದು ತಾಯಿಯಡೆಗೆ ಕಣ್ಣು ಹಾಯಿಸಿದ. ಇಷ್ಟೆಲ್ಲ ರಾದ್ದಾಂತಕ್ಕೆ ತಾನು ಕಾರಣವಾದೆನಲ್ಲ ಎಂಬ ಚಿಂತೆಯಿಂದ ಜೀವವನ್ನು ಹಿಡಿಯಾಗಿಸಿಕೊಂಡು  ತುಟಿ ಪಿಟಕ್ ಎನ್ನದೆ ಸುಮ್ಮನೆ ಕೂತಿದ್ದ ಸೀತವ್ವ ಮಗನ ಮುಖವನ್ನೊಮ್ಮೆ  ನೋಡಿದಳು.  ಅವನ ಮುಖದಲ್ಲಿ ನೋವಿನ ಛಾಯೆ ಮಡುವುಗಟ್ಟಿತ್ತು  ಆದರೂ ಅದನ್ನು ತೋರಗೋಡದೆ ತಾಯಿಯ ಹತ್ತಿರ ಹೋಗಿ ಮೆಲ್ಲಗೆ  “ಅವ್ವ ಅವಳಿಗೇನೂ ಆಗಿಲ್ಲ ನೀ ಗಾಬರಿಯಾಗಬೇಡ ಅವಳೆಲ್ಲ ಸರಿಹೋಗ್ತಾಳೆ” ಎಂದು ಈ ಹಿಂದೆ ಹೇಳಿದ ಮಾತನ್ನೇ ಮತ್ತೆ ಪುನರುಚ್ಚರಿಸಿದ.  ಅದರೆ ಕ್ಷುಲ್ಲಕ ಕಾರಣಕ್ಕೆ ಸೊಸೆ ಮಾಡುತ್ತಿರುವ ರಾದ್ದಾಂತದಿಂದ ಮಗ ಅನುಭವಿಸುತ್ತಿರುವ ಯಾತನೆಗೆ ತಾನು ಸಾಕ್ಷಿಯಾಗಬೇಕಾಗಯಿತಲ್ಲ ಎಂದು ಕಳವಳಗೊಂಡರೂ ಮಗನ ಮನದಿಚ್ಛೆಯನ್ನು  ತಿಳಿದುಕೊಂಡು ಮತ್ತೆ ಸುಮ್ಮನಾದಳು. ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಹದೇವ ಅಂದು ತಾನೇ ಅಡುಗೆ ಮಾಡಿ ಹೆಂಡತಿಗೂ ಮತ್ತು ತಾಯಿಗೆ ನೀಡಿಕೊಟ್ಟು ಡ್ಯೂಟಿಗೆ ಹೋದ. ಅಷ್ಟೇ ಅಲ್ಲದೇ ಪ್ರತಿನಿತ್ಯ ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಮೇಲೆ ಹೆಂಡತಿಗೆ ಅಡಿಗೆಯಲ್ಲಿ ಸಹಾಯ ಮಾಡುವುದು,  ಶಾಪಿಂಗಿಗೆ ಕರೆದುಕೊಂಡು ಹೋಗುವುದು ಅವಳು ಕೇಳಿದ ಒಡವೆ, ವಸ್ತ್ರ, ಬಂಗಾರವನ್ನು ಕೊಡಿಸುವುದು, ಅವಳ ತವರ ಬಳಗವನ್ನು ಗೌರವಿಸುವುದು ಹೀಗೆ ಮಹದೇವ ತನಗಿಷ್ಟವಿಲ್ಲದಿದ್ದರೂ ಸೀತವ್ವಳ ಸಲುವಾಗಿ ಹೆಂಡತಿ ಹೇಳಿದಂತೆ ಕುಣಿಯುವ ಗೊಂಬೆಯಂತಾದ ಅದರೆ ಸತ್ಯವತಿ ಮಾತ್ರ ಅವನೆದೆಗೆ ಇಣುಕಲೇ ಇಲ್ಲ. ಈ ರೀತಿ ಸೋಲುವ ಗಂಡನ ಗುಣಗಳನ್ನೇ ಅವನ “ವೀಕ್ನೆಸ್” ಎಂದು ಅರ್ಥೈಸಿಕೊಂಡು ಅದರಿಂದಲೇ ಅವನನ್ನು ನಿಯಂತ್ರಣದಲ್ಲಿಡಲು ನೋಡಿದಳೇ ಹೊರತು ಸೀತವ್ವಳ ವಿಚಾರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ನಿತ್ಯವೂ ಇದೆಲ್ಲವನ್ನು  ನೋಡಿ ನೋಡಿ ಮತ್ತಷ್ಟು ತಲೆಗೆ ಹಚ್ಚಿಕೊಂಡಿದ್ದ ಸೀತವ್ವ  ಒಂದು ದಿನ ಚಳಿ ಜ್ವರ ಬಂದು  ಮಲಗಿದಳು.  ಅಂದು ಇಡೀ ದಿನ ಅವಳನ್ನು ನೋಡಿಯೂ ನೋಡದಂತಿದ್ದ  ಸೊಸೆ ಒಮ್ಮೆಲೇ  ಸಂಜೆ ವೇಳೆಗೆ ಸಿಟ್ಟಿನಿಂದ  ಸೀತವ್ವಳಿಗೆ ದರಿದ್ರದವಳು ಯಾವಾಗಲೂ ಮಲಗಿಕೊಂಡೇ ಇರ್ತಾಳೆ, ಅದರಿಂದಲೇ ಈ ಮನೆಗೆ ಅರಿಷ್ಟ  ಹತ್ತಿರೋದು ಎಂದು ನಿಂದಿಸುತ್ತ “ಲಕ್ಷ್ಮಿ ಬರೋ ಹೊತ್ತಾಯ್ತು ಕಸಗುಡಿಸಿ ದೀಪ ಹಚ್ಚಬೇಕು  ಎದ್ದು ಕುಳಿತುಕೋ “ಎಂದು  ಒದರಾಡಿ ಗಡಗಡ ನಡುಗುತ್ತಿರುವ ಸೀತವ್ವಳನ್ನು ಚಳಿ ಜ್ವರದ ಮಧ್ಯದಲ್ಲೂ ಎದ್ದು ಕುಳಿತುಕೊಳ್ಳುವಂತೆ ಮಾಡಿದಳು. ಸೊಸೆಯ ಈ ದಬ್ಬಾಳಿಕೆ ಮತ್ತು ನಿಷ್ಕರುಣೆಗೆ ಸೀತವ್ವ ಜಿನುಗಿದ ಕಣ್ಣೀರನ್ನು ಒರಸಿಕೊಂಡು ಆಡಲು ತುಟಿಗೆ ಬಂದ ಮಾತನ್ನು ಗಂಟಲಲ್ಲೇ ನುಂಗಿಕೊಂಡು ಸುಮ್ಮನೆ ಕುಳಿತಳು. ಸಂಜೆ ಮಗ ಬಂದು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಮತ್ತು ಮಾತ್ರೆಗಳನ್ನು ತಂದು ಹೆಂಡತಿಯ ಕೈಯಲ್ಲಿ ಕೊಟ್ಟು ನಾನು ಬೇರೆ ಕೆಲಸದ ನಿಮಿತ್ತ ಹೊರಗೆ ಹೋಗುವುದಿದೆ ಊಟವಾದ ಮೇಲೆ ಇವುಗಳನ್ನು ಅವ್ವನಿಗೆ ಕೊಡು ಎಂದು ಹೇಳಿ ಅವಳ ಕೈಯಲ್ಲಿ ಕೊಟ್ಟು ಹೊರಡಲು ಸಿದ್ದನಾದ. ಕೈಯಲ್ಲಿ ಕೊಟ್ಟಿದ್ದ ಮಾತ್ರೆಗಳನ್ನು ಎಣಿಸುತ್ತ ಗಂಡನಿಗೆ ” ಅಲ್ರಿ ಒಂದು ಸಣ್ಣ ಜ್ವರಕ್ಕೆ ಇಷ್ಟೆಲ್ಲ ಮಾತ್ರೆಯನ್ನು ತಂದು ದುಡ್ಡನ್ನು ಯಾಕೆ ಹಾಳು ಮಾಡುತ್ತೀರೀ”? ಎಂದು ಪ್ರಶ್ನಿಸಿದಳು. ಅವಳ ಮಾತನ್ನು ಕೇಳಿಸಿಕೊಂಡ ಸೀತವ್ವಳಿಗೆ ತಡೆದುಕೊಳ್ಳಲಾಗಲಿಲ್ಲ ಅಲ್ಲೇ ಇದ್ದ ಮಗನಿಗೆ “”ನಾನು ಇದ್ರೆ ಇರ್ಲಿ ಸತ್ರೆ ಸಾಯಲಿ ಎಪ್ಪಾ ಆ ಮಾತ್ರೆಗಳನ್ನು ವಾಪಸ್ ಕೊಟ್ಟು ಬಂದು ಬಿಡು” ಎಂದು ಹೇಳಿದಳು. ಅದಕ್ಕೆ ಸೊಸೆ “ಆಹಾ !  ಖರ್ಚು ಮಾಡಿಸುವಂಗೆ ಮಾಡಿಸಿ  ಈಗ ಹೆಂಗೆ ಮಳ್ಳಿಯಂಗೆ ಹೇಳ್ತಾಳೆ ನೋಡು ನಿನ್ನ ನಾಟಕಾ ನನಗೆ ಗೊತ್ತಿಲ್ವ? ಎಂದು ಮಾರ್ನುಡಿದಳು. ಹೀಗೆ  ಒಂದಕ್ಕೊಂದು ಮಾತು ಬೆಳೆದು  ಜಗಳವೇ ಪ್ರಾರಂಭವಾಯಿತು.  ಜೋರು ಬಾಯಿ ಮಾಡುತ್ತಿದ್ದ ಹೆಂಡತಿಗೆ ನೀನು ಈ ರೀತಿ ಮಾಡುತ್ತಿರುವ  ಹಿಂದಿನ ಉದ್ದೇಶವಾದರೂ ಏನಿದೆ..? ಹೇಳಿಬಿಡು ಎಂದು ಕೇಳಿದ. ಅದಕ್ಕೆ ಅವಳು ಮತ್ತಷ್ಟು ಕೋಪಗೊಂಡು ನೀನು ಅವಳು ಮಾಡಿದ್ದೇ ಸರಿ ಎಂದು ಹೇಳುವವನು ಹೆಂಡತಿಯ ಮಾತಂದ್ರೆ ನಿನಗೆ ಕಾಲ ಕಸ ಇನ್ನು ಮುಂದೆ ನಾ ಈ ಮನೆಯಲ್ಲಿ ಇರುವುದಿಲ್ಲ ಎಲ್ಲಿಯಾದರೂ ಹೋಗಿ ಸಾಯ್ತಿನಿ ನೀನು, ನಿನ್ನ ತಾಯಿ, ನಿನ್ನ ಮಕ್ಕಳನ್ನು ಇಟ್ಟುಕೊಂಡು ನೆಮ್ಮದಿಯಿಂದ ಇಲ್ಲಿರು ಎಂದು  ಬಟ್ಟೆ ಬರೆಗಳನ್ನು ತುಂಬಿಕೊಂಡು ಹೊರಡಲು ಸಿದ್ಧಳಾದಳು.  ಅವಳು ಹೊಸ್ತಿಲುದಾಟಿ ಹೆಜ್ಜೆ ಇಟ್ಟೊಡನೆ ಅವಳ  ಚಿಕ್ಕ  ಚಿಕ್ಕ ಮೂರು ಮಕ್ಕಳು ಅವಳನ್ನು ಸುತ್ತುವರಿದು ಗಟ್ಟಿಯಾಗಿ ತಬ್ಬಿ ಹಿಡಿದು ಜೋರಾಗಿ ಅಳುತ್ತ ನಮ್ಮನ್ನು ಬಿಟ್ಟು ಹೋಗಬೇಡ ಮಮ್ಮಿ ಎಂದು ಜೋರಾಗಿ ಅಳಲು ಆರಂಭಿಸಿದರು .ಮಕ್ಕಳ ಆ ಆಕ್ರಂದನ ಮತ್ತು ಅವಳು ಮನೆ ಬಿಟ್ಟು ಹೋದರೆ  ಮನೆತನದ ಗೌರವ ಏನಾದೀತು ಎಂಬುದನ್ನು ಒಂದು ಕ್ಷಣ ಮನದಲ್ಲಿ ಆಲೋಚಿಸಿದ ಮಹದೇವ  ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ ಹೊರಡಲು ಸಿದ್ದಳಾಗಿದ್ದವಳನ್ನು  ರಮಿಸಿ ಒಳಗೆ ಕರೆದುಕೊಂಡು ಬಂದು ಕೊಠಡಿಯಲ್ಲಿ ಸೀತವ್ವಳಿಗೆ ಕಾಣದ ಹಾಗೆ ಹತಾಶೆಯಿಂದ ನೇರವಾಗಿ ಅವಳ ಕಾಲಿಗೆ ಬಿದ್ದು ತನ್ನೆರಡೂ ಕೈಗಳನ್ನು ಜೋಡಿಸಿ ” ನೀ ಹೇಳಿದಂತೆ ಕೇಳುವೆ  ದಯವಿಟ್ಟು ಈ ನಿನ್ನ ಗುಣಗಳನ್ನು ಬದಲಿಸಿಕೋ “ಎಂದು ಮತ್ತೆ ತನ್ನ ಅಲಳನ್ನು ತೋಡಿಕೊಂಡ ಆದರೆ ಅದ್ಯಾವ ರಕ್ಕಸವು ಅವಳ ತಲೆಯಲ್ಲಿ ಹೊಕ್ಕಿತೋ ಏನೋ ಗಂಡನ ಮುಂದೆ ಆಯ್ತು ಎಂದು ಎರಡು ದಿನ ಕಳೆದ ಮೇಲೆ ಮತ್ತೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದಳು. ಕುಪಿತಗೊಂಡ ಮಾದೇವ ಆದದ್ದು ಆಗಲಿ ಎಂದು ಅವಳಿಗೆ ಹೇಳುವುದನ್ನು ಬಿಟ್ಟು ತಟಸ್ಥನಾಗಿ ಉಳಿದುಬಿಟ್ಟ. ಅದರೆ ಮನೆಯಲ್ಲಿ ನಿತ್ಯವೂ ಸೊಸೆಯ ಇಂತಹ ಒಂದಿಲ್ಲೊಂದು ಅವತಾರದಿಂದ ಸಾಕು ಬೇಕಾಗಿ ಹೋಗುತ್ತಿದ್ದ ಸೀತವ್ವಳಿಗೆ ಅಲ್ಲಿಂದ  ಕಾಲು ಕೀಳಬೇಕೆನಿಸಿದರೂ ಮಗನಿಗೆ ಬೇಸರಗೊಳಿಸಬಾರದೆಂದು ಅಲ್ಲಿಯೇ ದಿನದೂಡುವುದು ಅನಿವಾರ್ಯವಾಗಿತ್ತು. ಅದು ಸೊಸೆಗೆ ನಾನಿಷ್ಟು ಅಸಹಕಾರ ತೋರಿದರೂ  ಅತ್ತೆ ಮನೆ ಬಿಟ್ಟು ಹೋಗದಿರಲು ಗಂಡನ ಸಲಿಗೆಯೇ ಕಾರಣವೆಂದು ಒಂದು ದಿನ ಗಂಡ ಡ್ಯೂಟಿಗೆ ಹೋದಾಗ ಮಧ್ಯಾಹ್ನದ  ಯಾರಿರದ ವೇಳೆಯಲ್ಲಿ  ಇದ್ದಕ್ಕಿದ್ದಂತೆ   ಅವಾಚ್ಯ ಶಬ್ದಗಳಿಂದ ನಿಂದಿಸುತ್ತ  ತನ್ನ ತಿಜೋರಿಯಲ್ಲಿನ ಒಂದು ಸಾವಿರ ರೂಪಾಯಿಯನ್ನು ಸೀತವ್ವ ಕಳವು ಮಾಡಿದ್ದಾಳೆಂದು ಜೋರಾದ ದ್ವನಿಯಲ್ಲಿ ಕಿರುಚುತ್ತ ರಂಬಾಟ ಎಬ್ಬಿಸಿದಳು ಆ ಕೂಗು  ಓಣಿಯುದ್ಧಕ್ಕೂ ಹರಡಿ ಸುತ್ತಲಿನವರೆಲ್ಲ ಬಂದು ಸೇರುವಂತೆ ಮಾಡಿತು. ಸೀತವ್ವ ತಾನಂತವಳಲ್ಲ ಎಂದು ಎಷ್ಟೇ ಕೇಳಿಕೊಂಡರೂ ಬಿಡದೇ ಆ ಹಣವನ್ನು ನೀನೆ ತೆಗೆದುಕೊಂಡಿದ್ದು, ನಿನ್ನ ಬಿಟ್ಟರೆ ಮತ್ಯಾರು ತೆಗೆದುಕೊಳ್ಳಲು ಸಾಧ್ಯ ? ಒಂದು ವೇಳೆ ನೀನು ತೆಗೆದುಕೊಂಡಿಲ್ಲವೆಂದರೆ ಜಗಲಿಯ ಮೇಲಿನ ಮನೆದೇವ್ರು ಬಸವಣ್ಣನನ್ನು ಮುಟ್ಟಿ  ಎಲ್ಲರೆದುರು ಆಣೆ ಮಾಡೆಂದು ಹಠ ಹಿಡಿದಳು  ಹಿರೇಮನುಷ್ಯಳನ್ನು ಸಲ್ಲದ ಕಾರಣಕ್ಕೆ ದೇವರನ್ನು ಮುಟ್ಟಿಸಿ ಅಣಿ ಮಾಡಿಸುವುದು ಅಷ್ಟು ಸರಿಯಲ್ಲವೆಂದು ನೆರೆಮನೆಯವರು ಎಷ್ಟೇ ಪರಿ ಪರಿಯಾಗಿ ತಿಳಿಸಿ ಹೇಳಿದರೂ ಕೇಳದ ಸತ್ಯವತಿ ನಿಮಗೆ ಅವಳ ಬಗ್ಗೆ ಗೊತ್ತಿಲ್ಲ  ಆಗಾಗ ಇಂತಹ ಕೆಲಸ ಮಾಡುತ್ತಿದ್ದರಿಂದಲೇ ಅವಳನ್ನು ಅಲ್ಲಿಂದ ಇಲ್ಲಿಗೆ  ಕಳಿಸಿದ್ದಾರೆ ಆಣಿ ಮಾಡಲೇಬೇಕೆಂದು ಹಠ ಹಿಡಿದು ಮಾಡಿಸಿಯೇ ಬಿಟ್ಟಳು. ಯಾವ ದೇವರ ಭಯದಿಂದಲೇ ಜೀವನದಿದ್ದಕ್ಕೂ  ಸುಳ್ಳು ಮೋಸ ವಂಚನೆ ಕಳ್ಳತನ ಮಾಡದ ಸೀತವ್ವ  ಅಂದು ತಾ ಮಾಡದ ತಪ್ಪಿಗೆ ದೇವರನ್ನು ಮುಟ್ಟಿ ತನ್ನನ್ನು ತಾನು ಪ್ರಮಾಣಿಕರಿಸಿಕೊಳ್ಳಬೇಕಾಯಿತು. ಅದರಿಂದ ತೀರಾ ಅವಮಾನಕ್ಕೊಳಗಾದಂತಾದ ಸೀತವ್ವ  ಆ ಓಣಿಯವರಿಗೆ ಮುಖತೋರಿಸಲಾಗದೆ  ಕಂಬನಿಗರೆಯುತ್ತ  ತುಂಬ ಹೊದ್ದುಕೊಂಡು ಮಲಗಿದಳು. ಅದೆಷ್ಟೇ ಪ್ರಯತ್ನಿಸಿದರೂ ರೆಪ್ಪೆಗಳು ಒಂದಕ್ಕೊಂದು ಕೂಡದಾದವು. ಸೊಸೆಯಾಡಿದ ಮಾತುಗಳೇ ಅವಳನ್ನು ಕುಕ್ಕಿ ಕುಕ್ಕಿ ತಿನ್ನಹತ್ತಿದವು.  ಅಷ್ಟರಲ್ಲಿ ಮನೆಗೆ ಬಂದ  ಮಾದೇವ ಕೈ ಕಾಲು ಮುಖ ತೊಳೆದು ಒಳಗೆ ಬಂದು ಎಂದಿನಂತೆ ತಾಯಿಯ ಹತ್ತಿರ ಹೋಗಿ ಅವ್ವಾ ಏಳು ಯಾಕೆ ಮಲ್ಕೊಂಡಿದ್ದೀಯಾ..? ಸಂಜೆ ಆಯ್ತು ಚಾ ಕುಡಿಯೋಣ ಎದ್ದೇಳು ಎಂದ. ಮಗನ ಮಾತು ಕೇಳಿಸಿಕೊಂಡಿದ್ದರೂ ಅವನಿಗೆ  ಏನಂತ ಪ್ರತಿಕ್ರಿಯಿಸುವುದು ಎಂಬ ಒದ್ದಾಟದಿಂದ ನೋವನ್ನೇ ಉಸಿರಾಡುತ್ತಾ ಸೀತವ್ವ ಸುಮ್ಮನೆ ಮಲಗಿಕೊಂಡಿದ್ದಳು. ಅದನ್ನು ಗಮನಿಸಿದ ಮಾದೇವ  ಎಂದೂ ಈ ರೀತಿ ಮಾಡದವಳು ಇಂದೇಕೆ  ಮೌನವಾಗಿದ್ದಾಳೆಂದು ಹೆಂಡತಿಯನ್ನು ಕರೆದು ಅವ್ವನಿಗೆ ಏನಾಗಿದೆ ಯಾಕೆ ಮಾತಾಡ್ತಿಲ್ಲ ಎಂದು ಕೇಳಿದ..? ಅದಕ್ಕೆ ಅವಳು ಸಿಟ್ಟಿನಿಂದ ನನಗೇನು ಗೊತ್ತು..? ನೀನೇ ಎಬ್ಬಿಸಿ ಕೇಳು ಇವತ್ತು ಎಂತಾ ದುಷ್ಟ ಕೆಲಸ ಮಾಡಿದ್ದಾಳೆ ಅನ್ನೋದು ಅವಳನ್ನು ಹೊತ್ತು ಕುಣಿಯುತ್ತಿರುವ ನಿನಗೂ ಸ್ವಲ್ಪ ಗೊತ್ತಾಗಲಿ ಎಂದಳು. ಅವಳ ಮಾತಿನಂತೆ ತಾಯಿಯ ಹತ್ತಿರ ಹೋಗಿ ಅವಳ ಮೈದಡವಿ  ಮೇಲೆ ಹೊದ್ದುಕೊಂಡಿದ್ದ ಚಾದರವನ್ನು ಸರಿಸಿ ಏನಾಯ್ತವ್ವ..? ಎಂದು ಕೇಳಿದ. ಅಷ್ಟು ಅನ್ನೋದೊಂದೇ ತಡ ಸೀತವ್ವ ಎದ್ದು ಕೂತು ಗೊಳೋ ಎಂದು  ಅಳುತ್ತ “ನಾನಿವತ್ತು ಈ ಮನೆಯಲ್ಲಿ ಕಳ್ಳಿಯಾಗಿಬಿಟ್ನೆಪಾ ನಾನು ಇನ್ನೊಂದು ಕ್ಷಣ ಈ ಮನೆಯಲ್ಲಿ ಇರಲಾರೆ ನನ್ನನ್ನು ಈಗಲೇ ಊರಿಗೆ ಬಿಟ್ಟು ಬಂದುಬಿಡು” ಎಂದು ನಡೆದ ಎಲ್ಲ ಘಟನೆಯನ್ನು ಮಗನೆದರು ಬಿಚ್ಚಿಟ್ಟು ಅಳತೊಡಗಿದಳು. ಕಡುಬಡತನದ ಬದುಕು ಸವೆಸಿದರೂ ಎಂದೂ ಇಂತಹ ಆರೋಪವನ್ನು ಹೊತ್ತುಕೊಂಡಿರದ ತಾಯಿಯ ವ್ಯಕ್ತಿತ್ವಕ್ಕೆ ಹೆಂಡತಿ ಕಪ್ಪು ಚುಕ್ಕಿ ಇಟ್ಟಳಲ್ಲ ಎಂದು ತೀವ್ರ ನೊಂದುಕೊಂಡು ಸಿಟ್ಟಿಗೆದ್ದ ಮಾದೇವ ಹೆಂಡತಿಯ ವಿಷಯದಲ್ಲಿ ಈವರೆಗೆ ತಾಳಿಕೊಂಡು ಬಂದ ಅವನ ಸಹನೆಯ ಕಟ್ಟೆ ಒಡೆದಿತ್ತು ನೇರವಾಗಿ ಹೆಂಡತಿ ಹತ್ತಿರ ಹೋಗಿ ಅವಳ ಕಪಾಳಕ್ಕೆ  ಎರಡು ಬಾರಿಸಿ ಎಂತ ಪಾಪಿ ಹೆಣ್ಣು ನೀನು..! ಅವಳಿಗೇಕೆ ಇಂಥ ಅಪವಾದ ಹೊರಿಸಿದೆ..? ಎಂದು ಕೇಳಿದಾಗ “ಅಯ್ಯೋ ಇದೊಳ್ಳೆ ಕಥೆಯಾಯ್ತಲ್ಲ ಕಳ್ಳಿಗೆ ಕಳ್ಳಿ ಎನ್ನಲಾರದೆ ಒಳ್ಳೆಯವಳು ಅನಲಿಕ್ಕೆ ಆಗುತ್ತಾ..?” ಅವಳಿಗೆ ಬುದ್ದಿ ಹೇಳುವ ಬದಲು ಅವಳ ತಪ್ಪನ್ನು ಸಮರ್ಥಿಸಿಕೊಳ್ಳಲು ಬರುತ್ತಿರುವ ನಿನ್ನಂತ ಗಂಡನಿಗೆ ಏನೆನ್ನಬೇಕು..? ಎಂದಳು ನನ್ನ ತಾಯಿ ಎಂಥವಳು ಅಂತ ನನಗೆ ಚೆನ್ನಾಗಿ ಗೊತ್ತು ಹೆಚ್ಚು ವಾದಿಸಬೇಡ  ನಿನ್ನ ಇಂತಹ ವರ್ತನೆಯಿಂದ ಸಾಕಾಗಿ ಹೋಗಿದೆ ನೀನು ಈ ಕ್ಷಣದಿಂದಲೇ ನನ್ನ ಕಣ್ಣಿಗೆ ಕಾಣಬೇಡ ಮನೆ ಬಿಟ್ಟು ತೊಲಗು ಎಂದು ತಾಕೀತು ಮಾಡಿದ. ಗಂಡ ಅಷ್ಟು ಅಂದೊಡನೆ “ಆಯ್ತು ಹೋಗ್ತೇನೆ ಆದರೆ ಒಂದು ಮಾತನ್ನು ನೆನಪಿಟ್ಟುಕೋ “ನಾನೀಗ ಬಿಟ್ಟು ಹೋದರೆ ಮತ್ತೆಂದೂ ಇಲ್ಲಿಗೆ ತಿರುಗಿ ಬರುವುದಿಲ್ಲ” ಎಂದು ಹೇಳಿ ಮಕ್ಕಳನ್ನು ಅಲ್ಲೇ ಬಿಟ್ಟು ಹೊರಡಲು ಸಿದ್ದಳಾದಳು ಆಗ ಸೀತವ್ವಳ ಮನದಲ್ಲಿ ಒಂದು ವೇಳೆ ಸೊಸೆ ತಾನಾಡಿದಂತೆ ಶಾಶ್ವತವಾಗಿ ಮನೆ ತೊರೆದು ಹೋಗಿಬಿಟ್ಟರೆ ಮೊಮ್ಮಕ್ಕಳು ಮತ್ತು ಮಗನ ಗತಿಯೇನೆಂದು ಚಿಂತೆ  ಶುರುವಾಗಿ ಮಗನಿಗೆ “ಅಪ್ಪ ಮಗನೇ ಮನೆ ಬಿಟ್ಟು ತೊಲಗಬೇಕಾದವಳು ನಾನು ಅವಳಲ್ಲ.! ನಾನೊಬ್ಬಳು ಇಲ್ಲಿಂದ  ಹೋದರೆ ಎಲ್ಲವೂ ಸರಿ ಹೋಗ್ತದೆ ನನ್ನನ್ನು ಇವತ್ತು ಕಲ್ಲೂರಿಗೆ ಬಿಟ್ಟು ಬರದೆ ಹೋದರೆ ನಾನು ಯಾವುದೇ ಕಾರಣಕ್ಕೂ ಊಟ ತಿಂಡಿಯನ್ನು ಕೂಡ ಮಾಡುವುದಿ ಲ್ಲವೆಂದು ಹಠ ಹಿಡಿದು ಕುಳಿತುಬಿಟ್ಟಳು. ಅನ್ಯಮಾರ್ಗವಿಲ್ಲದೆ ಮಾದೇವ ಅಸಹಾಯಕನಾಗಿ ಅವಳನ್ನು ಕರೆದುಕೊಂಡು ಹೋಗಿ ಕಲ್ಲೂರಿಗೆ ಅಂದೆ ರಾತ್ರಿ ಬಿಟ್ಟು ಬಂದ.
     ಸೀತವ್ವ ಕಲ್ಲೂರಿಗೆ ಹೋದಮೇಲೆ ಅಲ್ಲಿ  ಅವಳ ಕಿರಿಯ ಮಗ ಕಾಂತೇಶ ಮತ್ತು ಅವನ ಹೆಂಡತಿ ಮೊದಲಿಗಿಂತಲೂ ತುಂಬಾ ಬದಲಾಗಿದ್ದರು. ತಮ್ಮ ಹೊಲಮನಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರೇ ಹೊರತು ಇವಳ ಕಡೆ ಗಮನವನ್ನೇ ಹರಿಸಲಿಲ್ಲ. ಇದರಿಂದ  ಸೀತವ್ವ ಮತ್ತಷ್ಟು  ಮಾನಸಿಕವಾಗಿ ಅಸ್ವಸ್ಥಗೊಂಡು ಖಿನ್ನತೆಗೆ ಜಾರಿ ಹುಚ್ಚರಂತೆ ವರ್ತಿಸತೊಡಗಿದಳು, ಯಾರೊಂದಿಗೂ ಬೆರೆಯದೆ ಒಂಟಿಯಾಗಿರತೊಡಗಿದಳು. ಆಗ ಮಗ ಅವಳನ್ನು ಮನೋವೈದ್ಯರಿಗೆ ತೋರಿಸುವ ಬದಲು ಅವಳಿಗೆ ಯಾವುದೋ ದೆವ್ವ ಹಿಡಿದಿರಬೇಕೆಂದು ಉಕ್ಕಡಗಾತ್ರಿಯ ಕರಿಬಸವನ ಗುಡಿಗೆ ಕರೆದುಕೊಂಡು ಹೋಗಿ ಒಂದು ತಾಯಿತ ತಂದು ಕಟ್ಟಿ ಕೈ ತೊಳೆದುಕೊಂಡು ಬಿಟ್ಟ. ಹೀಗೆ ನಾಲ್ಕು ದಿನ ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸೀತವ್ವ ಮಗ ಮತ್ತು ಸೊಸೆ ಹೊಲಕ್ಕೆ ಹೋದಾಗ ಮನೆದೇವರು ಬಸವಣ್ಣನಿಗೆ ಕೈಮುಗಿದು ಉಟ್ಟ ಬಟ್ಟೆಯ ಮೇಲೆಯೇ ಅದೇ ಊರಿನಿಂದ ದಾವಣಗೆರೆ ಮಾರ್ಗವಾಗಿ ಹಾಸನಕ್ಕೆ ಹೋಗುವ ಬಸ್ಸನ್ನು ಹತ್ತಿದಳು. ಟಿಕೆಟ್ ಕೇಳುತ್ತ ಬಂದ ಕಂಡಕ್ಟರ್ ಅಮ್ಮ ಎಲ್ಲಿಗೆ ಟಿಕೆಟ್ ಕೊಡ್ಲಿ? ಅಂದ ತಾನಲ್ಲಿಗೆ ಹೊರಟಿದ್ದೇನೆ ಎಂದು ಗೊತ್ತೇ ಇರದ ಸೀತವ್ವ “ಅಪ್ಪ ಈ ಬಸ್ ಎಲ್ಲಿಗೆ ಹೋಗ್ತದ ? ಅಂತ ಕೇಳಿದಳು ಅದಕ್ಕೆ ಕಂಡಕ್ಟರ್ ಇದು ಹಾಸನದವರೆಗೆ ಹೋಗ್ತದ ಅಂದ ಹಾಗಾದರೆ ನನಗೂ ಅಲ್ಲಿ ವರೆಗೆ ಟಿಕೆಟ್ ಕೊಡು ಎಂದು ಆಧಾರ್ ಕಾರ್ಡ್ ತೋರಿಸಿ “ಉಚಿತ ಬಸ್ ಸಾರಿಗೆ “ಯಲ್ಲಿ   ಹಾಸನದ ವರೆಗೂ ತಲುಪಿದಳು.   ಅಷ್ಟೊತ್ತಿಗಾಗಲೇ ಸಂಜೆಯಾಗಿ ಕತ್ತಲಾವರಿಸಿತ್ತು ಮುಂಜಾನೆಯಿಂದ ಏನೂ ತಿಂದಿರದ ಸೀತವ್ವ ಬಸ್ಟ್ಯಾಂಡಿನಲ್ಲಿ ಅವರಿವರ ಹತ್ತಿರ ಭಿಕ್ಷೆ ಬೇಡಿ ಬಂದ ಹಣವನ್ನು ಒಟ್ಟುಗೂಡಿಸಿಕೊಂಡು ಬಿಸ್ಕೆಟ್ಗಳನ್ನು  ತಂದು ತಿಂದಳು. ದೂರದ ಪ್ರಯಾಣದಿಂದ ಸುಸ್ತಾಗಿದ್ದರಿಂದ ಅಪರಿಚಿತ ಊರಿನಲ್ಲಿ ಅನಾಮಿಕಳಂತೆ ಅಲ್ಲೇ ಬಸ್ಟ್ಯಾಂಡಿನ ಒಂದು ಮೂಲೆಯಲ್ಲಿ ವರಗಿಕೊಂಡಳು ಸುತ್ತಲಿನ ಜನದಟ್ಟಣೆ, ವಾಹನಗಳ ಗೌಜು ಗದ್ದಲದ ಮಧ್ಯದಲ್ಲೂ ಅದ್ಯಾವುದೋ ಬಂಧನದಿಂದ ಬಿಡುಗಡೆಗೊಂಡವಳಂತೆ ಅಂದು ರಾತ್ರಿ ನಿರಾಳವಾಗಿ ಅಲ್ಲೇ ಕಳೆದಳು.. ಹೀಗೆ ಒಂದು ವಾರ ಅಲ್ಲೇ  ಬಸ್ಸ್ಟ್ಯಾಂಡಿನ ಸುತ್ತಮುತ್ತಲೂ ಹಗಲೆಲ್ಲ  ಬೇಡಿಕೊಂಡು ಬಂದು  ರಾತ್ರಿ  ತಿಂದು ಅಲ್ಲೇ ಮಲಗತೊಡಗಿದಳು. ಹೀಗಿರುವಾಗ ಒಂದು ವಾರದಿಂದ ಅವಳ ಚಲನವಲನಗಳನ್ನು ಸಂಶಯದಿಂದ ವೀಕ್ಷಿಸುತ್ತಿದ್ದ ಅಲ್ಲಿನ ಬಸ್ ಕಂಟ್ರೋಲರ್ ನಿತ್ಯವೂ ಇಲ್ಲೇ ಬಿಡಾರ ಹೂಡಿರುವ ಈ ಮುದುಕಿ ಯಾರಿರಬಹುದೆಂದು  ಅವಳನ್ನು ಕೇಳಿದರಾಯಿತೆಂದು ಒಂದು ದಿನ ಅವಳ ಹತ್ತಿರ ಬಂದು ಅಮ್ಮಾ ಯಾವ ಊರು ನಿಂದು ? ಇಲ್ಯಾಕೆ ಉಳಿದುಕೊಂಡಿದ್ದಿಯಾ ಅಂತ ಕೇಳಿದ.?  ಬೇರೆ ಏನನ್ನೂ ಹೇಳಲಾಗದೇ ತಡಬಡಿಸುತ್ತಾ “ಎಪ್ಪಾ ನಾನೊಬ್ಬಳು ಅನಾಥಳು” ಅಂತ ಅಷ್ಟೇ ಹೇಳಿದ್ಲು ಅನಾಥಳು ಅಂದ ಕೂಡಲೇ ಕಂಟ್ರೋಲರ್ನಿಗೆ ನಿತ್ಯವೂ ಆ ಬಸ್ಟ್ಯಾಂಡಿನಿಂದ ಬೆಳಿಗ್ಗೆ ಹತ್ತು ಗಂಟೆಗೆ ಹೊರಡುವ ಅನಾಥಾಶ್ರಮದ ಬಸ್ಸು ನೆನಪಾಯಿತು ಅದಕ್ಕೆ ಅವನು ಅಮ್ಮ ನೀನೊಂದು ಕೆಲಸ ಮಾಡು  ನಿಮ್ಮಂತವರಿಗೋಸ್ಕರವಾಗಿಯೇ ಅಲ್ಲೊಂದು ಅನಾಥಾಶ್ರಮ ಅಂತಾ ಇದೆ ಅಲ್ಲಿ ನಿನಗೆ ಊಟ ವಸತಿ ಎಲ್ಲ ಕೊಟ್ಟು ನೋಡಿಕೊಳ್ಳುತ್ತಾರೆ ನಾಳೆ ಬೆಳಿಗ್ಗೆ ನನ್ ಹತ್ರ ಬಾ ಆ ಬಸ್ ಹತ್ತಿಸಿ ಕಳಸ್ತೇನೆ ಅಂತ ಹೇಳಿದ. ಅಷ್ಟಂದ  ಕೂಡಲೇ ಸೀತವ್ವ ನೇರವಾಗಿ ಅವನ ಕಾಲಿಗೆ ಬಿದ್ದು “ಎಪ್ಪಾ ಅಷ್ಟು ಮಾಡು ನಿನಗೆ ಪುಣ್ಯ ಬರ್ತದ” ಅಂತ ಕೈಮುಗಿದಳು.  ಮರುದಿನ ಬೆಳಿಗ್ಗೆ ಕಂಟ್ರೋಲರ್ ನ ಮಾತಿನಂತೆ  ಆ ಬಸ್ಸನ್ನು ಹತ್ತಿ ಅನಾಥಾಶ್ರಮಕ್ಕೆ ಹೋಗಿ ಇಳಿದುಕೊಂಡಳು.
         ಆ ಅನಾಥಾಶ್ರಮದ ಒಂದು ವಿಶೇಷವೆಂದರೆ ಅಲ್ಲಿಗೆ ಬರುವವರು ವೃದ್ಧರಾಗಿದ್ದರೆ ಅವರನ್ನು ಸೇರಿಸಿಕೊಳ್ಳುವ ಸಮಯದಲ್ಲೇ ಅವರ ಎಲ್ಲ ಸ್ವ ವಿವರದೊಂದಿಗೆ ಅವರ ಅಂತಿಮ ಇಚ್ಛೆಯನ್ನು ಕೂಡಾ ದಾಖಲಿಸಿಕೊಂಡು ಅದನ್ನು ಈಡೇರಿಸಲು ಪ್ರಯತ್ನಿಸುವುದು. ಅದರಂತೆಯೇ ಅಲ್ಲಿನ ಮೇಲ್ವಿಚಾರಕರು ಸೀತವ್ವಳಿಗೆ ಅವಳ ಎಲ್ಲ ಮಾಹಿತಿಯೊಂದಿಗೆ ಅವಳ ಅಂತಿಮ ಇಚ್ಛೆಯನ್ನೂ ಕೂಡ ಕೇಳಿದರು. ಅದರೆ ಖಿನ್ನತೆ ಖಾಯಿಲೆಯಿಂದ ತಾನು ಯಾರು.? ತಾನೆಲ್ಲಿಗೆ ಬಂದಿದ್ದೇನೆ  ಎಂಬುದರ ಅರಿವೇ ಇಲ್ಲದ್ದರಿಂದ ಅವರಿಗೆ ಅಷ್ಟೊಂದು ಸಮರ್ಪಕವಾಗಿ ಮಾಹಿತಿಯನ್ನು ಕೊಡಲಿಲ್ಲ ಆದರೆ ನಿನ್ನ ಕೊನೆಯ ಆಸೆ ಏನು.? ಅಂತ ಕೇಳಿದಾಗ ಅದನ್ನು ಮಾತ್ರ ತನ್ನ ನೆನಪನ್ನು ಒಟ್ಟುಗೂಡಿಸಿಕೊಂಡು ಸ್ಪಷ್ಟವಾಗಿ ಹೇಳಿಬರೆಸಿ ಅಲ್ಲಿ ಪ್ರವೇಶಾತಿ ಪಡೆದುಕೊಂಡು ಒಳಗೆ ಹೋಗಿ ಅಲ್ಲಿನ ಅದೆಷ್ಟೋ ಅನಾಥ  ಹೃದಯಗಳ ಜೊತೆಗೆ ತನ್ನನ್ನು ತಾನು ಬೆಸೆದುಕೊಂಡಳು.
             ಇತ್ತ ಸೀತವ್ವ ಮನೆ ಬಿಟ್ಟು ಹೋದ ಸುದ್ದಿ  ಊರ ತುಂಬೆಲ್ಲ ಹಬ್ಬಿತು ತಾನೆಷ್ಟೇ ಹುಡುಕಿದರೂ ಅವ್ವ ಸಿಗುತ್ತಿಲ್ಲವೆಂದು ಕಾಂತೇಶ ಅಣ್ಣ ಮಾದೇವನಿಗೆ ಫೋನ್ ಮಾಡಿ ತಿಳಿಸಿದ. ಆ ಸುದ್ದಿಯನ್ನು ಕೇಳಿದ ಕೂಡಲೇ ಮಾದೇವನಿಗೆ ಸಿಡಿಲು ಬಡಿದಂತಾಯ್ತು ಅಂದು ಸ್ಟೇಷನ್ ಗೆ ರಜಾ ಹಾಕಿ ಮಾದೇವ ತಾನು ತನ್ನ ಪೊಲೀಸ್ ಡಿಪಾರ್ಟ್ಮೆಂಟಿನ ಎಲ್ಲ ಸಿಬ್ಬಂದಿಯೊಂದಿಗೆ ಎಲ್ಲ ಕಡೆ ಹುಡುಕಾಡಿದ.  ಎರಡು ವಾರ ಕಳೆದರೂ ಎಲ್ಲಿಯೂ ಅವಳ ಸುಳಿವೇ ಸಿಗಲಿಲ್ಲ ಕೊನೆಗೆ ಯಾರೋ ಒಬ್ಬರು ಹಾಸನದ ಹತ್ತಿರ ವೃದ್ಧಾಶ್ರಮದಲ್ಲಿ ಇರುವಳೆಂದು ಸುಳಿವು ಕೊಟ್ಟರು ಅಲ್ಲಿಗೆ ಹೋಗಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ  ಹೌದು ಅವಳು ಇಲ್ಲೇ ಇದ್ಲು ಆದ್ರೆ ಮೊನ್ನೆ ಅವಳ ಮಾನಸಿಕ ಕಾಯಿಲೆಯಿಂದಾಗಿ ಬಾತ್ ರೂಮ್ನಲ್ಲಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಳು ಕೂಡಲೇ ಅವಳನ್ನು ಆಸ್ಪತ್ರೆಗೆ ಸೇರಿಸಿ ಐ. ಸಿ ಯು. ದಲ್ಲಿ ಇಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವಳು ನಿನ್ನೆ ತೀರಿಕೊಂಡಳಂತೆ ಅವಳ ಕೊನೆಯ ಆಸೆಯಂತೆ ತನ್ನ ಊರಾದ ಕಲ್ಲೂರಿನಲ್ಲಿ  ಆಸ್ಪತ್ರೆಯವರೇ ಶವಸಂಸ್ಕಾರ ಮಾಡಿ ಬಂದಿರುವುದಾಗಿ ನಮಗೆ ವರದಿ ಕೊಟ್ಟಿದ್ದಾರೆ ಎಂದು ಹೇಳಿದರು. ತಾಯಿ ಇನ್ನಿಲ್ಲವೆಂಬ  ಸುದ್ದಿಯನ್ನು ಕೇಳಿದ ಕೂಡಲೇ ಇನ್ನೇನಿದ್ದರೂ  ತೃಣವೆನಿಸಿ ಅವರ ಮಾತು ಪೂರ್ಣಗೊಳ್ಳುವ ಮುಂಚೆಯೇ ನೆಲಕ್ಕೆ ಕುಸಿದ ಮಾದೇವ  ತಾನೊಬ್ಬ ಪೊಲೀಸ್ ಅಧಿಕಾರಿ ತನ್ನ ಸುತ್ತಲೂ ಸಿಬ್ಬಂದಿ ಇದ್ದಾರೆ ಎಂಬುದನ್ನೂ  ಕೂಡಾ ಲೆಕ್ಕಿಸದೇ ಅನಾಥಶ್ರಮದ ಆವರಣದಲ್ಲಿ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸದ ಕೊನೆಗೆ ಅವರ ಸಿಬ್ಬಂದಿಯವರೇ ಸಮಾಧಾನಪಡಿಸಿ ಎದ್ದು ಕೂಡ್ರಿಸಿದರು ಕೊಂಚ ಸುಧಾರಿಕೊಂಡ ನಂತರ ತನ್ನ ದೃಷ್ಟಿಯನ್ನು ನೇರವಾಗಿ ಕಲ್ಲೂರಿನೆಡೆಗೆ ನೆಟ್ಟ ಮಾದೇವ ತನ್ನ ಜೀಪಿಗೆ ಡ್ರೈವರ್ ನಿದ್ದರೂ ಅವನನ್ನು ಹಿಂದೆ ಸರಿಸಿ ತಾನೇ ವಾಹನವನ್ನು ಓಡಿಸುತ್ತ ಐದು ತಾಸಿನ  ದಾರಿಯನ್ನು ಮೂರೆ ತಾಸಿನಲ್ಲಿ ಕ್ರಮಿಸಿ ಕಲ್ಲೂರಿನ ಸ್ಮಶಾನದ ಮುಂದೆ ತಂದು ನಿಲ್ಲಿಸಿದ. ಅಲ್ಲಿ ಅನಾಥಾಶ್ರಮದವರು ಹೇಳಿದಂತೆ ನಿನ್ನೆ ಬೆಳಗಿನ ಜಾವ ಸ್ಮಶಾನದ ಸುತ್ತಲೂ ಅಲ್ಲಿ ಇಲ್ಲಿ ಬಿದ್ದಿದ್ದ ಕಟ್ಟಿಗೆಗಳ ಅಯ್ದುಕೊಂಡು ಆಸ್ಪತ್ರೆ ಸಿಬ್ಬಂದಿಯವರೇ ಸುಟ್ಟು ಹೋಗಿದ್ದ ಸೀತವ್ವಳ ಬೂದಿಯಲ್ಲಿ ಹೊಗೆಯಾಡುತ್ತಿತ್ತು ಅದನ್ನು ನೋಡಿ ಮತ್ತಷ್ಟು ಸಂಕಟಕ್ಕೊಳಗಾದ ಮಾದೇವ   ಭಾವತೀವ್ರತೆಯಿಂದ ಗಟ್ಟಿಯಾಗಿ ಧ್ವನಿ ತೆಗೆದು ಅವ್ವಾ…. ಎಲ್ಲಿಗೆ ಹೋದೆ..? ಎಂದು ಅಳುತ್ತ ಕೂಗಾಡಿದ, ಬಾರದ ಲೋಕಕ್ಕೆ ಹೋಗಿದ್ದ ಶೀತವ್ವ ‘ಓ’ ಅನ್ನಲೇ ಇಲ್ಲ. ಕೊನೆಗೆ ಅವಳ ಬೂದಿಯನ್ನು ಹಣೆಗೆ ಹಚ್ಚಿಕೊಂಡು ನನ್ನಿಂದಾದ ತಪ್ಪನ್ನು ಕ್ಷಮಿಸು ತಾಯಿ ಎಂದು  ಸುಡುವ ಕೆಂಡವಾಗಿ ಮನೆಗೆ ಹೋದ. ಮನೆಯಲ್ಲಿ ಈ ಘಟನೆಯಿಂದ ಕೊಂಚವೂ ವಿಚಲಿತಳಾಗದೇ ನಿರಾಳವಾಗಿದ್ದ ಹೆಂಡತಿಯ ಮುಖಭಾವವನ್ನು ಕಂಡು ಎಂತವಳ ಜೊತೆ ಬಾಳ್ವೆ ನಡೆಸುತ್ತಿದ್ದೇನೆಂದು ತನಗೆ ತಾನೆ ನಾಚಿಕೆ ಪಟ್ಟುಕೊಂಡ ಮಾದೇವ ಅವಳ ಮೇಲೆ ದ್ವೇಷ  ಸಾಧನೆಗೆ ಆಗಾಗ ಮನಸು ಹಾತೊರೆಯುತ್ತಿದ್ದರೂ ಮಕ್ಕಳ ಮುಖ ನೋಡಿ  ಏನೂ ಮಾಡಲಾಗದ ಅಸಹಾಯಕನಾಗಿ ಸುಮ್ಮನೆ ಉಳಿದುಬಿಟ್ಟ. .
              ಕೆಲವು ತಿಂಗಳು  ಕಳೆದ ಮೇಲೆ  ಮಾದೇವನ ಹೆಂಡತಿ ಒಂದು ದಿನ “ಏನ್ರಿ,  ತವರಿನಲ್ಲಿ ನಿತ್ಯವೂ ಅಣ್ಣನ ಹೆಂಡತಿ  ಅವ್ವನ ಜೊತೆ ಜಗಳ ಮಾಡಿ ಅಪ್ಪ ಅವ್ವರನ್ನು ಹೊರಗೆ ಹಾಕಿದ್ದಾಳಂತೆ”..! ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಅವ್ವಳಿಗೆ ಇತ್ತೀಚಿಗೆ ಪಾರ್ಶ್ವವಾಯು ಆಗಿದೆ ಅಂತೆ. ಅದರಿಂದ ಅವಳು ತುಂಬಾ ತೊಂದರೆಯಲ್ಲಿದ್ದಾಳಂತೆ ಆದಕಾಗಿ ಒಂದಿಷ್ಟು ದಿನ ಅವಳನ್ನು ಇಲ್ಲಿಗೆ ಕರೆದುಕೊಂಡು ಬಂದು  ಜೋಪಾನ ಮಾಡಬೇಕೆಂದಿದ್ದೇನೆ  ತಾವೇನಂತೀರಿ..? ಎಂದು ಕೇಳಿದಳು ಹಾಗಂದ ಕೂಡಲೇ ಮಾದೇವ ಹೊಗೆಯಾಡುವ ತನ್ನ ಕಣ್ಣಿನಿಂದ ಒಮ್ಮೆ  ಮನೆಯ ಗೋಡೆಯಲ್ಲಿ ನೇತು  ಹಾಕಿದ್ದ ಸೀತವ್ವಳ ಫೋಟೋದತ್ತ ದೃಷ್ಟಿ ಹಾಯಿಸಿ ಒಂದೂ ಮಾತನಾಡದೇ ಮಹಾ ಮೌನಕ್ಕೆ ಶರಣಾಗಿ ಕಲ್ಲಾಗಿದ್ದ..!

—————————————————

2 thoughts on “ಹೃದಯ ಕಲ್ಲಾದಾಗ…..ಹೊನ್ನಪ್ಪ ನೀ. ಕರೆಕನ್ನಮ್ಮನವರ ಸಣ್ಣ ಕಥೆ

Leave a Reply

Back To Top