ಕಾವ್ಯ ಸಂಗಾತಿ
ಜಯಂತಿ ಸುನಿಲ್
‘ಅಳುವ ಹೆಣ್ಣಿನ ಆರ್ತನಾದ’
ಜಂಗಮಹೃದಯವೆಂದುಕೊಂಡರೆ
ಹೀಗೆ
ಹಿಡಿತುಂಬ ಹಿಡಿಯಬಹುದೇ
ಹಾರುವ ಹಕ್ಕಿಯನ್ನು?
ನೋಡೀಗ….
ಅತ್ತ ಹಾರಲಾಗದೆ, ಇತ್ತ ಸಾಯಲಾಗದೆ
ಸುಡು ಬಿಸಿಲಲಿ ಬೆಂದ ಹಕ್ಕಿಯ ಪಾಡು..
ಬರಿದೆ ಕಣ್ಣೀರಲ್ಲಿ ಅರಳಿದ
ಕೆಂದಾವರೆಯ ಹಾಡು..!!
ಈ ಹಿಂದೆ ಕಂಡಿಲ್ಲಾ ಇನ್ನು ಮುಂದೆ ನೋಡೊಲ್ಲಾ..
ಎಂಥಾ ಕಡುಪಾಪಿ ಹೃದಯ
ಸತ್ತ ಭಾವಗಳಿಗೆ ಜೀವ ತುಂಬಿತೆಂದುಕೊಂಡರೆ
ಬರಿದೆ ಮಾತುಗಳಲಿ ಬಸವಳಿಸುವೆ
ಇಗೋ…
ಎಳೆದುಬಿಡು ಈ ಮನಸಿನ ಪರದೆಯನು
ಯುಗಪಲ್ಲಟಗಳು ಉರಳಿದರೂ
ಕೇಳಿಸದ ಅಳುವ ಹೆಣ್ಣಿನ ಆರ್ತನಾದವನು..
ಮೌನದ ಅಲೆಗೆ ಕೊಚ್ಚಿ ಹೋಗುವ ಅವಳೆದೆಯ ಭಾವವನು..!!
ಹೋದರೋಗಲಿ ಬಿಡು
ಈ ಜಗದ ಕಸದ ರಾಶಿಯಲಿ
ಹೆಣ್ಣೆಂಬ ಹೂವೊಂದು ಮತ್ತೆ ಅರಳಲಿ
ಆ ಹೂವಿನ ಮೇಲೆ ಪುನಃ
ನನ್ಹೆಸರ ಬರೆಯದಿರಲಿ
ಬರೆದರೂ ನಿನಗದು ಸಿಗದಿರಲಿ.
ಜಯಂತಿ ಸುನಿಲ್