ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
‘ನಂಬಿಯೂ ನಂಬದಂತಿರಬೇಕು!’
ಯಾವ ಹುತ್ತದಲ್ಲಿ ಯಾವ
ಹಾವಿದೆಯೊ ಬಲ್ಲವರು ಯಾರು?
ಮೇಲ್ನೋಟಕ್ಕೆ ನೋಡುವ
ಕಣ್ಣುಗಳು ಮಾತ್ರ ಸಾಲವು
ಒಳ ಹೊರಗನ್ನು ಅರುಹುವ
ಅಂತರಂಗದ ಕಣ್ಣು ತೆರೆದಿರಲಿ
ಅಂಕಲ್, ಅಣ್ಣ ,ಸ್ನೇಹಿತ, ಟೀಚರ್
ಪ್ರೇಮಿ ಸನಿಹದಲ್ಲೇ ಇಹರು ಆಪ್ತರಂತೆ
ಮನದ ತ್ರಿಜೂರಿಯ ಬೀಗ ಮುದ್ರೆಯ
ಮುರಿದು ನೆಲೆಗೊಳುವರು
ವಿವಿಧ ಆಮಿಶೆಗಳ ತೆರದಲಿ
ಸ್ನೇಹ ಬೇಕು ಸಲುಗೆ ಬೇಕು
ಪ್ರೀತಿ ಬೇಕು ಸಂಗಾತಿಯೂ ಬೇಕು
ಆದರೂ ನಂಬಿಯೂ ನಂಬದಂತಿರಬೇಕು
ನಾಲಿಗೆ ನಿಜ ಬಣ್ಣ ಅರುಹುವುದಿಲ್ಲ
ನಿನ್ನರಿವೆ ನಿನಗೆ ಗುರು ನೆನಪಿನಲ್ಲಿರಲಿ
ಕಾಮಕ್ಕೆ ಕಣ್ಣಿಲ್ಲ ಕರುಣೆಯೂ ಇಲ್ಲ
ಬೆಲ್ಲದಂತ ಮಾತಾಡಿ ಬೇತಾಳದಂತೆ ಕಾಡಿ
ತಮ್ಮ ಪೌರುಷದ ಅಹಮಿಕೆಯ ಹೇರಿ
ದಾಹ ತೀರಿದ ಮೇಲೆ ಕತ್ತರಿಸಲೂ
ಹೇಸರು! ಎಚ್ಚರ ಇರಲಿ!!
ಸುವಿಧಾ ಹಡಿನಬಾಳ