ಶಾಂತಿವಾಸು ಅವರ ಹೊಸ ಕಥೆ-ಜೆರಾಕ್ಸ್ ಪೇಪರ್

ಮೂಗಿನಮಟ್ಟ ಅಗ್ಗದ ಸೇಂದಿ ಹೀರಿ ತೂರಾಡುತ್ತಾ ಬಂದು ಕಟ್ಟುತ್ತಿದ್ದ ಮೂರಂತಸ್ತಿನ ಕಟ್ಟಡದ ಎದುರಿದ್ದ ಮನೆಯ ಗೇಟಿಗೊರಗಿ “ದೇವ್ರೇ ಈ ಕಾಲಕ್ಕಾದ್ರೂ ಕಣ್ಬಿಟ್ಟು ಈ ಮನೆ ಕೊಡ್ತಿದ್ದೀಯ. ನೀನು ಚೆನ್ನಾಗಿರ್ಬೇಕು” ಎಂದು ಗೊಣಗುತ್ತಾ ಆಕಾಶದ ಕಡೆ ಮುಖ ಮಾಡಿ ಕೈಯೆತ್ತಿ ಮುಗಿದು ನೇರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದ ಮುರುಗ. ಆದರೆ ಸಾಧ್ಯವಾಗಲಿಲ್ಲ. ಬಿದ್ದು, ಹಾಗೇ ಅಲ್ಲೇ ಕೈಕಾಲುಗಳನ್ನು ಆದಷ್ಟು ಮುದುರಿಕೊಂಡು ಮಲಗಿಯೇಬಿಟ್ಟ. ಅಷ್ಟೇ ಮಧ್ಯಾನ್ಹದ ತನಕ ಅವನ ಜಾಗ ಅಲ್ಲೇ. ಆಗಲೇ ಐದಾರು ತಿಂಗಳಿನಿಂದ ನಿತ್ಯ ಇದು ಹೀಗೇ ನಡೆಯುತ್ತಿದೆ. ಅಕ್ಕಪಕ್ಕ ಸುಳಿದವರು ಅವನನ್ನು ಮಾತಾಡಿಸುವುದು ಬೇಡ, ಅವನು ಕೇವಲ ಉಸಿರಾಡಿದರೂ ಸಾಕು ಮುಖ ಸಿಂಡರಿಸಿ, ಮೂಗು ಮುಚ್ಚಿಕೊಳ್ಳುವಷ್ಟು ಸಾರಾಯಿಯ ಗೊಬ್ಬು ವಾಸನೆ.

         ಆದರೆ ಅವನನ್ನ ಯಾರೂ ಮಾತಾಡಿಸೋದಿಲ್ಲ ಅನ್ನೋದು ಬೇರೆ ಮಾತು ಬಿಡಿ. ಇದು ಬೆಂಗಳೂರು. ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ರಸ್ತೆಯಲ್ಲಿದ್ದ ಗುಡಿಸಲಿನಲ್ಲಿ ಮೂರುಗ, ಅವನಮ್ಮ ದ್ರೌಪದಿ ಹಾಗೂ ಅಪ್ಪ ಗೋವಾಲು ಸುಮಾರು ಇಪ್ಪತ್ತು ವರ್ಷಗಳಿಂದ ವಾಸವಾಗಿದ್ದರು. ಗೋವಾಲನ ಮಿಕ್ಕ ಮೂರು ಗಂಡು ಮಕ್ಕಳೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕೆಲಸ ಮಾಡುತ್ತಾ ಅಲ್ಲೇ ಕಾವಲುಗಾರರಾಗಿ ಸೇರಿಕೊಂಡಿದ್ದರು. ಅವರಿಗೆ ಮದುವೆ ಆಗಿದೆಯೋ ಇಲ್ಲವೋ ಅದು ಈ ಕಥೆಗೆ ಸಂಬಂಧವಿಲ್ಲ. 

    ಗೋವಾಲು ಹಾಗೂ ದ್ರೌಪದಿಗೆ ದೇವಸ್ಥಾನದ ಮುಂದೆ ಚಪ್ಪಲಿ ಕಾಯುವ ಕೆಲಸ. ಮುರುಗ ಹುಟ್ಟಿದ್ದು ಗುಡಿಸಲಿನಲ್ಲಿ. ಈಗ ಕಟ್ಟುತ್ತಿರುವ ಆ ಮನೆಯ ಜಾಗದಲ್ಲೇ ಮೊದಲು ಆ ಗುಡಿಸಲಿತ್ತು. ಆ ಗುಡಿಸಲಿನ ಎದುರಿಗೇ ಅವನು ಈಗ ಮಲಗಿರುವುದು. ಹಾಗಲ್ಲ. ಇರಿ ಹೇಳ್ತೀನಿ. ಅವನ ಲೆಕ್ಕಾಚಾರದಲ್ಲಿ ತಾನು ಅಲ್ಲಿ ಖುದ್ದು ಹಾಜರಿದ್ದು ಗುಡಿಸಲು ಕೆಡವಿ ತನ್ನದೇ ಸ್ವಂತ ಕಟ್ಟಡದ ಕೆಲಸ ನೋಡಿಕೊಳ್ಳುತ್ತಿದ್ದಾನೆ ಅಂತ. ಅರ್ಥ ಆಯ್ತಲ್ಲಾ? ಇನ್ನು ಇವನ ಬಗ್ಗೆ ಕೂಡಾ ಇಷ್ಟೇ.

       ತರಕಾರಿ ಕೊಳ್ಳಲು ಹೊರಬಂದ ಸರಸಳಿಗೆ ಗೇಟಿನ ಮುಂದೆಯೇ ಉದ್ದುದ್ದ ಮಲಗಿದ್ದವನನ್ನು ನೋಡಿ ಪಿತ್ತ ನೆತ್ತಿಗೇರಿತು. ಅವಳು ತನ್ನ ಗಂಡ ಹಾಗೂ ಇಬ್ಬರು ಮಕ್ಕಳೊಡನೆ ಈ ಮನೆಗೆ ಬಾಡಿಗೆಗೆ ಬಂದು ಬರೋಬ್ಬರಿ ಎಂಟು ವರ್ಷಗಳಾಗಿತ್ತು. ಆಗಿನಿಂದಲೂ ಗುಡಿಸಲಿನಲ್ಲಿದ್ದ ಇವರುಗಳನ್ನು ನೋಡಿದಾಗೆಲ್ಲಾ "ಪುಣ್ಯವಂತರು. ಯಾರದೋ ಜಾಗದಲ್ಲಿ ಗುಡಿಸಲು ಹಾಕ್ಕೊಂಡು ಹಾಯಾಗಿದ್ದಾರೆ. ಬಾಡಿಗೆ ಕಟ್ಟೋ ಹಾಗೂ ಇಲ್ಲ. ಟ್ಯಾಕ್ಸ್ ಕಟ್ಟೋ ತಲೆನೋವಿಲ್ಲ. ಪಕ್ಕದಲ್ಲೇ ನೀರಿನ ಟ್ಯಾಂಕು ಬೇರೆ. ಅವ್ರು ಇವ್ರು ಮಿಕ್ಕಿದ್ದು  ಕೊಡೋದೇ ಹೊಟ್ಟೆಗೆ ಸಾಕು. ಇನ್ನೇನು ಬೇಕು? ಬೆಂಗ್ಳೂರಲ್ಲಿ ಸ್ವಂತ ಮನೇನಲ್ಲಿದಂಗೇ ಆಯ್ತಲ್ಲಾ? ನಮ್ಮ ಪಾಡು ನೋಡಿ. ತಿಂಗಳು ಎಷ್ಟು ಬೇಗ ಓಡಿ ಬರುತ್ತೋ, ಬಾಡಿಗೆ ಕಟ್ಟಿ ಕಟ್ಟಿ ಸಾಕಾಗ್ತಿದೆ. ಒಂದು ಸ್ವಂತ ಮನೆ ಇರ್ಬೇಕಪ್ಪಾ" ಎಂದು ಅಕ್ಕಪಕ್ಕದವರು, ಕುಟುಂಬದ ಸದಸ್ಯರ ಮುಂದೆ ನಿತ್ಯ ಜಪ ಮಾಡುತ್ತಲೇ ಇದ್ದಳು. 

      ಇಷ್ಟರ ನಡುವೆ ಆಗಲೇ ಮೂರು ವರ್ಷಗಳಿಂದ ಮನೆ ಖಾಲಿ ಮಾಡುವಂತೆ ಮಾಲೀಕನ ಒತ್ತಾಯ ಬೇರೆ. ಮಕ್ಕಳ ಶಾಲೆ ಮುಗಿಯಲಿ ಎಂದೋ, ಗಂಡನ ಕಚೇರಿಗೆ ಹತ್ತಿರವಿದೆಯೆಂದೋ ನೆಪ ಹೇಳಿ, ಅಷ್ಟಿಷ್ಟು ಬಾಡಿಗೆ ಹೆಚ್ಚು ಮಾಡುತ್ತಾ ತಪ್ಪಿಸಿಕೊಳ್ಳುತ್ತಿದ್ದವರಿಗೆ "ಕಟ್ಟಡ ತುಂಬಾ ಹಳೆಯದು. ಕೆಡವಿ ಕಟ್ಟಿದ ನಂತರ ಇಷ್ಟೇ ಬಾಡಿಗೆಗೆ ಮತ್ತೆ ನೀವೇ ಬನ್ನಿ" ಎಂದು ಆಸೆ ತೋರಿಸಿಯಾದರೂ ಖಾಲಿ ಮಾಡಿಸಲೇಬೇಕೆಂದು ಟೊಂಕಕಟ್ಟಿ ನಿಂತಿದ್ದಾನೆ ಮಾಲೀಕ.

          ಇಲ್ಲಿಯವರೆಗೆ ಎರಡು ಸಲ ಕೊಟ್ಟಷ್ಟು ಹಣ ಪಡೆದು ಸೊಟ್ಟ ಗೋಡೆಯ ಮನೆಗೆ ಬಣ್ಣ ಬಳಿದಿರುವುದು ಆ ಸಾರಾಯಿ ಮುರುಗನೇ. ಹಾಗಾಗಿ ಇಲ್ಲಿಯ ತನಕ ಸರಸಳಿಗೆ ಅವನ ಬಗ್ಗೆ ಒಂಚೂರು ದಾಕ್ಷೀಣ್ಯವಿತ್ತು. ಆದರೆ ಇತ್ತೀಚಿನ ಅವನ ಅತಿರೇಖಕ್ಕೆ ಬೇಸತ್ತಿದ್ದಳು. "ಈ ಗೋಳನ್ನ ಯಾರಿಗೆ ಅಂತ ಹೇಳೋದು? ಹಾಳು ಮುಂಡೆಗಂಡ ದಿನಾ ಇಲ್ಲೇ ಬಂದು ವಾಂತಿ ಮಾಡ್ಕೊಂಡು ಸಾಯ್ಬೇಕಾ? ಸದ್ಯ ಇವತ್ತೇನೋ ಇನ್ನು ವಾಂತಿ ಮಾಡ್ಕೊಂಡಿಲ್ಲ ಅನ್ನೋದೇ ಪುಣ್ಯ. ಈ ಬಿಲ್ಡಿಂಗ್ ಓನರಂತೂ ಎಷ್ಟು ಹೇಳುದ್ರೂ ತಲೆ ಕೆಡುಸ್ಕೊಳ್ಳಲ್ಲ. ಅದರ ಮೇಲೆ 'ಮನೆ ಖಾಲಿ ಮಾಡಿ ಖಾಲಿ ಮಾಡಿ' ಅಂತ ಕಿರಿಕಿರಿ ಬೇರೆ. ಥೂ ಸಾಕಪ್ಪಾ ಸಾಕು. ಒಂದು ಸ್ವಂತ ಮನೆ ಕಟ್ಟಿ ಇಂಥ ಕುಡುಕರನ್ನ ರೋಡಿಗೇ ಸೇರುಸ್ದೇ ಇರೋ ಅಷ್ಟು ಸಾಮರ್ಥ್ಯ ಕೊಡಪ್ಪಾ ದೇವ್ರೇ" ಎನ್ನುತ್ತಾ ವಾಪಸ್ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು. ಗಂಡ ಗಂಗಾಧರ ಆರಾಮವಾಗಿ ಕುಳಿತು ಓದುತ್ತಿದ್ದ ಪೇಪರ್ ಕಸಿದುಕೊಂಡು "ಇನ್ನು ತಾವು ಪೇಪರ್ ಓದಿದ್ದು ಸಾಕು. ಎಷ್ಟು ದಿನ ಅಂತ ನಾನೂ ಸಹಿಸ್ಕೊಂಡಿರೋದು? ಇವತ್ತೇನಾದ್ರೂ ಆಗ್ಲಿ. ಪೊಲೀಸರಿಗೆ ಕಂಪ್ಲೇಂಟ್ ಮಾಡಿ. ಇಲ್ದೇ ಇದ್ರೆ ಅವ್ನು ಮಾಡೋ ವಾಂತಿನ ನೀವು ಕ್ಲೀನ್ ಮಾಡಿ. ನನಗಂತೂ ಸಾಕು ಸಾಕಾಗ್ತಾ ಇದೆ" ಅಂತ ದುಂಬಾಲು ಬಿದ್ದಳು. 

        ಅವನೋ ತಿಂದಿದ್ದು ಉಪ್ಪಿಟ್ಟು. ರಾತ್ರಿ ಪಾಳಿ ಬೇರೆ ಮುಗಿಸಿ ಬಂದಿದ್ದ. ಇನ್ನೇನು ಈಗ ಮಲಗಿದರೆ ಮಧ್ಯಾಹ್ನ ಎರಡು ಗಂಟೆ ತನಕ ನಿದ್ದೆ ಮಾಡುವುದು ಗ್ಯಾರಂಟಿ. ಯಾರದೋ ದೇಹ ಎನ್ನುವಂತೆ ಸೊಟ್ಟಗೆ ಮೈಮುರಿಯುತ್ತಾ "ಮನೆ ಕಟ್ಟಿ ಮುಗುದ್ಮೇಲೆ ಅವ್ನು ಬೀದಿನಲ್ಲಿ ಯಾಕೆ ಮಲಗ್ತಾನೆ? ಅವನ ಮನೇನಲ್ಲಿ ಅವನಿರ್ತಾನೆ. ಸ್ವಲ್ಪ ದಿನ ಅಷ್ಟೇ. ಹೇಗೋ ಇರ್ಲಿ ಬಿಡು. ಪಾಪ" ಎಂದ. ಅವಳ ಮೆದುಳು ಚುರುಕಾಗಿತ್ತು. ಮಾತಾಡುವ ಲಹರಿಗೆ ಬಂದಳು. "ವರ್ಷಗಟ್ಲೇ ಯಾರದೋ ಜಾಗ್ದಲ್ಲಿ ಗುಡುಸ್ಲು ಹಾಕ್ಕೊಂಡಿದ್ದ ಮಾತ್ರಕ್ಕೆ ಆ ಸೈಟು ಅವನಿಗೇ ಆಗುತ್ತೇನ್ರೀ? ನಿಮಗಾದ್ರೂ ಬುದ್ದಿ ಬೇಡ್ವಾ? ಮನೆ ಖರ್ಚಿಗೆ ಹತ್ರುಪಾಯಿ ಹೆಚ್ಚು ಕೇಳುದ್ರೆ ಎಷ್ಟು ಕಾನೂನು ಮಾತಾಡ್ತೀರ. ಕಂಡವರ ಮನೇನ ನಮ್ದು ಅಂತ ಹೇಳೋದು ತಪ್ಪು ಅಂತ ಹೇಳೋ ಯಾವ ಕಾನೂನೂ ಇಲ್ವಾ? ತಾವು ಪೇಪರ್ ಓದಿ ಓದಿ ಏನು ಕಿಸುದ್ರಿ" ಎಂದಳು ವ್ಯಂಗ್ಯ ಬೆರೆತ ದನಿಯಲ್ಲಿ.

    ಗಂಗಾಧರ "ಹೇಳೋಕ್ಕೆನು? ಸ್ವತಂತ್ರ ಭಾರತದಲ್ಲಿ ಬಾಯಲ್ಲೇ ಬಾವಿ ತೊಡಬಹುದು. ಅದು ಬೇರೆ ವಿಷ್ಯ. ಆದ್ರೆ ಆ ಮನೆಯವರು ಅವನಿಗಂತಾನೆ ಆ ಮನೆ ಕಟ್ತಿರೋದು" ಎಂದ ಖಂಡಿತವಾಗಿ. ಇದರಿಂದ ಅವಳಿಗೂ 'ಮುರುಗ ಹೇಳೋದು ನಿಜಾನಾ? ಸುಳ್ಳು ಹೇಳೋದೇನ್ಬಂತು? ವಾರಸುದಾರರು ಮನೆ ಕಟ್ಟೋಕ್ಕಂತ ಗುಡುಸ್ಲು ಕೆಡವಿದ ದಿನ ನಡುರಸ್ತೇನಲ್ಲಿ ಉರುಳಾಡಿ "ಅಯ್ಯಯ್ಯೋ ನಾನು ಬಾಳಿ ಬದುಕಿದ ನನ್ನ ಮನೆ ಹೋಯ್ತು?" ಅಂತ ಅತ್ತಿದ್ದು ಸುಳ್ಳಾಲ್ವಲ್ಲಾ? ನಾನೂ ಕಣ್ಣಾರೆ ನೋಡಿದ್ದೀನಲ್ಲಾ? ಆಮೇಲೆ ಎರಡು ದಿನಕ್ಕೆಲ್ಲಾ "ನಾನೂ ಆ ಮನೇಗೆ ಪರ್ಟ್ನರ್" ಅಂತ ಹೇಳಿಕೊಂಡು ಓಡಾಡಿದ್ದನ್ನ ಮರೆಯೋಕ್ಕಾಗುತ್ತಾ? ಅದೂ ನಿಜ ತಾನೇ?' ಒಂದು ಕ್ಷಣದಲ್ಲೇ ಹಲವು ಮಾತುಗಳು ಮಿಂಚಿದವು.

     ಈ ವಿಷಯದಲ್ಲಿ ಸರಸಳಿಗೆ ಮಾತ್ರವಲ್ಲ ಆ ರಸ್ತೆಯ ಎಲ್ಲರಿಗೂ ಅನುಮಾನವೇ. "ಹೌದು ಅವ್ನು ಆ ಬಿಲ್ಡಿಂಗಿಗೆ ಪಾರ್ಟ್ನರ್ ಹೇಗಾಗ್ತಾನ್ರೀ?" ಕೇಳಿದಳು. "ಉಳುವವನೇ ಭೂಮಿಗೊಡೆಯ ಅಂತ ಕಾನೂನಿದೆಯಲ್ಲ? ಅದರ ಪ್ರಕಾರ ಸೈಟು ಅವನದ್ದು ಅಂತ ಆ ಸೈಟಿನ ಓನರ್ ಒಪ್ಕೊಂಡಿದ್ದಾರಂತೆ" ಅಂದ. "ಓ ಸರಿ. ಆಮೇಲೆ?" "ಆಮೇಲೆ ಭೂಮಿಗೊಡೆಯ ಸರ್ಕಾರಕ್ಕೇ ಸೈಟು ಮಾರುದ್ರೆ ಅರವತ್ತು, ನಲವತ್ತು ಅಂತ ಭಾಗ ಬರುತ್ತೆ. ಅರವತ್ತು ಸರ್ಕಾರಕ್ಕೆ, ನಲವತ್ತು ಭೂಮಿಗೊಡೆಯನಿಗೆ ಆಯ್ತಾ? ಇವ್ನು ಬುದ್ದಿವಂತ 'ನನ್ಗೆ ಸೈಟು ಬೇಡ ಮನೆ ಬೇಕು' ಅಂದನಂತೆ. ಅವರೂ ಒಪ್ಪಿ ಜಾಯಿಂಟ್ ವೆಂಚರಿಗೆ ಸೈನ್ ಮಾಡುಸ್ಕೊಂಡಿದ್ದಾರಂತೆ. ಅದಕ್ಕೆ ಕಟ್ತಿರೋ ಮನೇನ ನೋಡ್ಕೊಂಡು ಅವ್ನು ಇಲ್ಲೇ ಮಲಗೋದು" ಎಂದುದನ್ನು ಕೇಳಿ ಆಕೆಗೆ ತಲೆ ಸುತ್ತು ಬಂದಿತ್ತು. 

         'ಆ ಸೈಟಿನವರು ಇವೆಲ್ಲಾ ಒಪ್ಪಂದವನ್ನ ಬಾಯಲ್ಲೇ ಕೇಳಿ, ಒಪ್ಪಿ ಸದ್ದಿಲ್ಲದೆ ವ್ಯವಹಾರ ಮುಗುಸ್ಬಿಟ್ರಾ?' ತನ್ನಲ್ಲೇ ಪ್ರಶ್ನೆ ಮೂಡಿತ್ತು. ದೊಡ್ಡದಾಗಿ ಬಾಯಿ ಬಿಟ್ಟು "ಬೆಂಗ್ಳೂರಲ್ಲಿ ಮನೆ ಮಾಡ್ಕೊಳ್ಳೋದು ಇಷ್ಟು ಸುಲಭಾನಾ? ಅಯ್ಯೋ? ಅದುಕ್ಕೇ...ಅರ್ಧ ರಾತ್ರಿನಲ್ಲೇ  ಇಷ್ಟೊಂದು ಮನೆಗಳು ಎದ್ದೆಳೋದು" ಅಂದರೆ "ಅದೆಲ್ಲಿ ಸಿಕ್ತೋ ಏನೋ ಗೊತ್ತಿಲ್ಲ. ಈ ಎಲ್ಲಾ ಕಾನೂನು ಜಾರಿಯಾದ ದಿನದ ಪತ್ರಿಕೆಗಳನ್ನ ಹತ್ತು ವರ್ಷಗಳಿಂದ ಸೇರಿಸಿಟ್ಕೊಂಡಿದ್ದಾನೆ. ತಪ್ಪದೇ ಜೇಬಲ್ಲಿಟ್ಕೊಂಡೇ ಓಡಾಡ್ತಿದ್ದಾನೆ. ಕಾನೂನಿನ ಪ್ರಕಾರ ನೋಡುದ್ರೆ, ಎಲ್ಲಾ ಸಾಧ್ಯ ಅಂತ ಆಯ್ತಲ್ಲಾ?" ಅಂದ ಗಂಗಾಧರ.

       "ಅಯ್ಯೋ ಹೌದಾ? ಹಾಗಾದ್ರೆ ನಾವೂ ಈ ಮನೆ ಖಾಲಿ ಮಾಡೋದೇ ಬೇಡ. ಹೇಗೂ ಇಲ್ಬಂದು ಎಂಟು ವರ್ಷ ಆಯ್ತು. ಇನ್ನಷ್ಟು ವರ್ಷ ಖಾಲಿ ಮಾಡ್ದೇ ಇದ್ರೆ ಪೂರ್ತಿ ಬಿಲ್ಡಿಂಗ್ ನಮ್ದೇ. ಆಗಿದ್ದಾಗ್ಲಿ, ಹೇಗಾದ್ರೂ ಯಾಮಾರಿಸಿ ಅವನತ್ರ ಇರೋ ಆ ಪೇಪರ್ ತಗೊಂಡು ಜೆರಾಕ್ಸ್ ಮಾಡಿಟ್ಕೊಳ್ಳೋಣ" ಅನ್ನುತ್ತಾ ಸರಸ ಹಲ್ಲು ಕಿರಿದಳು. "ಹಾಗಾದ್ರೆ ನಾನೂ ಆರಾಮಾಗಿ ಸೇಂದಿ ಸಾರಾಯಿ ಕುಡ್ದು ಬೀದೀಲೇ ಮಲಕ್ಕೊಬಹುದು. ಹೇಗೂ ಎರಡೂ ಮನೆಗೆ ಒಬ್ಬನೇ ಓನರ್. ಅವನ ಹೆಸರೇಳಿ ಎಷ್ಟು ಬೇಕಾದ್ರೂ ಸಾರಾಯಿ ಕುಡೀಬೋದು" ಅನ್ನುತ್ತಾ ತಾನೂ ಹಲ್ಲು ಕಿರಿದ ಗಂಗಾಧರ.

Leave a Reply

Back To Top