ಧಾರಾವಾಹಿ-54
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮೂರು ದಿನಗಳ ಆಸ್ಪತ್ರೆಯ ವಾಸದ ನಂತರ ಡಿಸ್ಚಾರ್ಜ್ ಆಗಿ ಸುಮತಿ ಹಾಗೂ ನವಜಾತ ಶಿಶು ತಮ್ಮ ಮನೆಗೆ ಬಂದರು. ಕರೆದುಕೊಂಡು ಬರಲು ವೇಲಾಯುಧನ್ ಹೋದರೂ ಕೂಡಾ ಪತ್ನಿಯೊಂದಿಗೆ ಹೆಚ್ಚು ಮಾತುಗಳನ್ನು ಆಡಲಿಲ್ಲ. ಮುದ್ದಾದ ಮಗುವಿನ ಕಡೆಗೆ ಒಮ್ಮೆಯೂ ತಿರುಗಿ ನೋಡಲೂ ಇಲ್ಲ. ಗಂಡಾಗಿ ಹುಟ್ಟದೇ ಹೆಣ್ಣಾಗಿ ಹುಟ್ಟಿದ್ದೇ ಆ ಮಗು ಮಾಡಿದ ಬಹು ದೊಡ್ಡ ಅಪರಾಧ ಹಾಗೂ ಹೆಣ್ಣುಮಗುವನ್ನು ಹೆತ್ತು ಸುಮತಿ ದೊಡ್ಡ ತಪ್ಪು ಮಾಡಿದಳು ಎನ್ನುವಂತೆ ಇತ್ತು ವೇಲಾಯುಧನ್ ರವರ ನಡೆ. ಅವರ ಈ ನಡವಳಿಕೆಯಿಂದ ಸುಮತಿಗೆ ಬಹಳ ನೋವಾಯಿತು. ಆದರೂ ಕೋಪಿಷ್ಠನಾದ ಪತಿಯನ್ನು ಎದುರಿಸಿ ಸುಮತಿ ಏನೂ ಹೇಳುವಂತೆ ಇರಲಿಲ್ಲ. ಆಗ ಮುದ್ದಾದ ಮಗುವನ್ನು ಎದೆಗೆ ಅಪ್ಪಿ ಮೌನವಾಗಿ ಕಣ್ಣೀರಿಡುವಳು. ಶ್ರೀ ಕೃಷ್ಣನ ವಿಗ್ರಹದ ಮುಂದೆ ನಿಂತು ಮೌನವಾಗಿ ತನ್ನ ನೋವುಗಳನ್ನು ಹೇಳಿಕೊಳ್ಳುತ್ತಾ “ನನ್ನ ಈ ಮಗುವನ್ನು ಕಾಪಾಡು ….ಪತಿಗೆ ಈ ಮಗುವಿನ ಮೇಲೆ ಪ್ರೀತಿ ಹುಟ್ಟುವಂತೆ ಮಾಡು ಕೃಷ್ಣಾ”… ಎಂದು ಬೇಡಿಕೊಳ್ಳುವಳು. ಈ ಬಾರಿ ಅವಳು ಬಾಣಂತನಕ್ಕೆ ಅಕ್ಕನ ಮನೆಗೆ ಹೋಗುವಂತೆಯೂ ಇರಲಿಲ್ಲ. ಅಕ್ಕನಿಗೆ ಈಗಾಗಲೇ ಏಳು ಮಕ್ಕಳು ಹುಟ್ಟಿದ್ದವು. ಕುಟುಂಬದ ನಿರ್ವಹಣೆ ಮಾಡುತ್ತಾ ಮಕ್ಕಳನ್ನು ನೋಡಿಕೊಳ್ಳಲು ಹೆಣಗುತ್ತಿದ್ದ ಅಕ್ಕನ ಪರಿಸ್ಥಿತಿ ತಿಳಿದು ಸುಮತಿ ಅಕ್ಕನ ಮನೆಗೆ ಹೋಗದೇ ತನ್ನ ಮನೆಯಲ್ಲಿ ಇದ್ದುಕೊಂಡು ತನ್ನ ಬಾಣಂತನದ ವಿಶ್ರಾಂತಿಯನ್ನು ಪಡೆಯದೇ ಎಂದಿನಂತೆ ಮನೆಯ ಎಲ್ಲಾ ಕೆಲಸವನ್ನು ಮಾಡುತ್ತಾ ಮಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಅವಳ ಏಳು ವರ್ಷದ ಪುಟ್ಟ ಹಿರಿಯ ಮಗಳು ಅಮ್ಮನಿಗೆ ಬೇಕಾದ ಸಣ್ಣ ಪುಟ್ಟ ಸಹಾಯ ಮಾಡುವಳು. ಅಮ್ಮ ಕೆಲಸದಲ್ಲಿ ನಿರತಳಾದಾಗ ತನ್ನ ಪುಟ್ಟ ತಂಗಿಯನ್ನು ನೋಡಿಕೊಳ್ಳುವಳು.
ಪುಟ್ಟ ಮಗುವಿನ ಅಳುವನ್ನು ಕೇಳಿದರೆ ವೇಲಾಯುಧನ್ ಸಿಡಿಮಿಡಿಗೊಳ್ಳುತ್ತಿದ್ದರು. ತಾನು ಮನೆಯಲ್ಲಿ ಇದ್ದಾಗ ಮಗು ಅಳದೇ ಇರುವಂತೆ ನೋಡಿಕೋ ಎಂದು ತಾಕೀತು ಮಾಡಿದ್ದರು. ಎಲ್ಲಿ ಕೋಪಗೊಂಡು ಪುಟ್ಟ ಮಗುವನ್ನು ಕೂಡಾ ಹೊಡೆದು ಬಿಡುವರೋ ಎಂಬ ಹೆದರಿಕೆಯಿಂದ ಮಗುವು ಅಳದಂತೆ ಸದಾ ಎಚ್ಚರ ವಹಿಸುತ್ತಿದ್ದಳು ಸುಮತಿ.
ಆದರೆ ಆ ಪುಟ್ಟ ಕಂದನಿಗೇನು ಗೊತ್ತು ತಾನು ಅಳಬಾರದು ಎಂದು. ಅಪ್ಪ ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಇನ್ನೇನು ಹೊಸ್ತಿಲು ದಾಟಿ ಮನೆಯ ಒಳಗೆ ಪ್ರವೇಶಿಸಬೇಕು ಎನುವ ಹೊತ್ತಿಗೆ ಸರಿಯಾಗಿ ಆ ಪುಟ್ಟ ಮಗುವು ಅಳಲು ಪ್ರಾರಂಭಸುತ್ತಿತ್ತು. ಕೂಡಲೇ ಸುಮತಿ ಮಗುವನ್ನು ಎತ್ತಿಕೊಂಡು ಹಿಂಬಾಗಿಲಿನಿಂದ ಮನೆಯ ಹೊರಗೆ ಹೋಗಿ ಮಗುವನ್ನು ಮೆಲುವಾಗಿ ತಟ್ಟುತ್ತಾ… “ನನ್ನ ಮುದ್ದು ಕಂದಾ ಅಪ್ಪ ಮನೆಗೆ ಬಂದಾಗ ಅಳಬೇಡ…ಅಮ್ಮನ ಮುದ್ದು ಮಗಳು ಅಲ್ಲವೇ”…ಸುಮ್ಮನಿರು ಕಂದಾ ಎಂದು ಹೇಳುತ್ತಾ ಬೆನ್ನು ತಟ್ಟಿ ಮುದ್ದು ಮಾಡುತ್ತಾ ಮಗುವನ್ನು ಸಮಾಧಾನ ಪಡಿಸಲು ನೋಡುವಳು. ಅಮ್ಮನ ಸ್ಪರ್ಶಕ್ಕೆ ಅಳುವ ಮಗಳು ಸುಮ್ಮನಾಗುವಳು. ತಾನು ಬಂದ ಕೂಡಲೇ ಚಹಾ ಮಾಡಿಕೊಡಲಿಲ್ಲ ಎಂದು ಪತ್ನಿಯನ್ನು ವೇಲಾಯುಧನ್ ಕೂಗಿದಾಗ ಅವರ ಜೋರಾದ ಧ್ವನಿಗೆ ಹೆದರಿ ಮತ್ತೊಮ್ಮೆ ಮಗು ಅಳಲು ಪ್ರಾರಂಭಿಸುತ್ತಿತ್ತು. ಸುಮತಿಗೆ ಇಕ್ಕಟ್ಟಿನ ಪರಿಸ್ಥಿತಿ ಮಗುವನ್ನು ಸಮಾಧಾನ ಪಡಿಸುವುದೋ ಅಥವಾ ಪತಿಗೆ ಚಹಾ ಮಾಡಿಕೊಡುವುದೋ ಎಂದು ತಿಳಿಯದೇ ಮೌನವಾಗಿ ಕಣ್ಣೀರಿಡುತ್ತಾ ಅಡುಗೆಯ ಮನೆಗೆ ಬಂದು ಮಗುವನ್ನು ಎತ್ತಿಕೊಂಡೇ ಚಹಾ ಮಾಡಿ ಪತಿಗೆ ಕೊಡುವಳು. ಇದುವೇ ಅವಳ ದಿನಚರಿ. ಇದರ ನಡುವೆ ಪುಟ್ಟ ತಂಗಿಯನ್ನು ಆದಷ್ಟೂ ಅಳದಂತೆ ನೋಡಿಕೊಳ್ಳುವುದು ಪುಟ್ಟ ಅಕ್ಕನ ಜವಾಬ್ದಾರಿ ಕೂಡಾ ಆಗಿತ್ತು.
ಒಂದು ದಿನ ಪತಿಯು ಕೆಲಸಕ್ಕೆ ಹೋದ ಬಳಿಕ ಮಗುವನ್ನು ಸೀರೆಯ ಜೋಲಿಯಲ್ಲಿ ಮಲಗಿಸಿ ಮುಂಬಾಗಿಲು ಹಾಕಿ, ಹಿರಿಯ ಮಗಳನ್ನು ಜೊತೆಗೆ ಕರೆದುಕೊಂಡು ಅಡುಗೆ ಮಾಡಲೆಂದು ಹಿತ್ತಲಲ್ಲಿ ತರಕಾರಿಗಳನ್ನು ಬಿಡಿಸಲು ಹೋದಳು. ಅಲ್ಲಿಯೇ ಪಕ್ಕದಲ್ಲಿ ಇದ್ದ ಕುರುಚಲು ಕಾಡಿನಿಂದ ಸ್ವಲ್ಪ ಜೋರಾಗಿಯೇ ಶಿಳ್ಳೆ ಹೊಡೆದಂತೆ ಸೀತ್ಕಾರದ ಶಬ್ದ ಕೇಳಿಸಿತು. ಕೂಡಲೇ ಸುಮತಿ ಹಿತ್ತಲ ಅಂಗಳಲ್ಲಿ ಆಟವಾಡುತ್ತಿದ್ದ ಮಗಳನ್ನು ಬೇಗನೇ ಎತ್ತಿಕೊಂಡಳು. ಹಾಗೆಯೇ ಕುರುಚಲು ಕಾಡಿನೆಡೆಗೆ ನೋಡಿದಾಗ ತರಗೆಲೆಗಳು ಅಲುಗಿದಂತೆ ಕಾಣಿಸಿತು. ಜೊತೆಗೆ ಸರಸರ ಸದ್ದು ಕೇಳಿಸಿತು. ಅಲ್ಲಿಂದ ಬೇಗನೆ ಮನೆಯ ಕಡೆಗೆ ಇನ್ನೇನು ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲಿ ಕಡುಕಪ್ಪು ಬಣ್ಣದ ದೊಡ್ಡ ಕಾಳಿಂಗ ಸರ್ಪವೊಂದು ಮಿಂಚಿನ ವೇಗದಲ್ಲಿ ಇವರ ಮನೆಯ ಕಡೆಗೆ ಹರಿದು ಹೋದದ್ದು ಸುಮತಿಗೆ ಕಂಡಿತು. ಕಂಕುಳಲ್ಲಿ ಎತ್ತಿಕೊಂಡಿದ್ದ ಮಗಳನ್ನು ಬಿಗಿಯಾಗಿ ಹಿಡಿದುಕೊಂಡು ಮನೆಕಡೆಗೆ ಓಡಿದಳು….”ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದ್ದೇನಲ್ಲಾ…ಅಯ್ಯೋ ದೇವರೇ”…ಎನ್ನುತ್ತಾ ಮನೆಯ ಒಳಗೆ ಬಂದಳು. ಅಡುಗೆ ಮನೆಯಲ್ಲಿ ನೋಡಿದಳು ಅಲ್ಲಿ ಏನೂ ಕಾಣಲಿಲ್ಲ. ಮಗುವನ್ನು ಮಲಗಿಸಿದ್ದ ತೊಟ್ಟಿಲ ಬಳಿಗೆ ಓಡಿದಳು ಅಲ್ಲೂ ಏನೂ ಕಾಣಲಿಲ್ಲ. ಸಮಾಧಾನದ ನಿಟ್ಟುಸಿರನ್ನು ಹೊರಚೆಲ್ಲಿ ಮನೆಯ ಒಂದೊಂದು ಕೋಣೆಯಲ್ಲೂ ಹೋಗಿ ನೋಡಿದಳು. ಎಲ್ಲೂ ಏನೂ ಕಾಣಲಿಲ್ಲ. ಆದರೂ ಆಗಾಗ ಕಾಳಿಂಗನ ಬುಸುಗುಡುವ ಸದ್ದು ಕಿವಿಗೆ ಕೇಳಿಸುತ್ತಿತ್ತು. ಭಯದಿಂದ ಸುತ್ತಮುತ್ತ ನೋಡಿದಳು. ಆದರೂ ಏನೂ ಕಾಣಲಿಲ್ಲ. ಅಷ್ಟು ದೊಡ್ಡ ಕಾಳಿಂಗವು ಎಲ್ಲಿ ಹೋಯಿತು? ಎಂದು ಪುನಃ ಮನೆಯ ಪ್ರತೀ ಕೋಣೆಯಲ್ಲೂ ಹೋಗಿ ಪರೀಕ್ಷಿಸಿದಳು. ಹಜಾರಕ್ಕೆ ಬಂದಳು ಅಲ್ಲೂ ಕಾಣಲಿಲ್ಲ.
ಮತ್ತೊಮ್ಮೆ ಶಿಳ್ಳೆ ಸದ್ದಿನೊಂದಿಗೆ ಸೀತ್ಕಾರವು ಮನೆಯೊಳಗೆ ಕೇಳಿಸಿತು. ಕೂಡಲೇ ಜೋಲಿಯಲ್ಲಿ ಮಲಗಿದ್ದ ಮಗು ಕಿಟಾರನೆ ಕಿರುಚಿ ಅಳಲು ಪ್ರಾರಂಭಿಸಿತು. ಮೊದಲೇ ಹೆದರಿದ್ದ ಸುಮತಿಯ ಎದೆ ಕಿವಿಗೆ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳಲು ಶುರುವಾಯಿತು. ಅಯ್ಯೋ ದೇವರೇ ಮಗುವಿನ ಬಳಿ ಕಾಳಿಂಗನು ತಲುಪಿದ್ದಾನೆ ಎನಿಸುತ್ತಿದೆ ಎಂದುಕೊಳ್ಳುತ್ತಾ, ಹಿರಿಯ ಮಗಳನ್ನು ಎತ್ತಿಕೊಂಡು ಸದ್ದುಮಾಡದೇ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾ ಮನೆಯ ಮುಂದಿನ ಬಾಗಿಲನ್ನು ತೆರೆದಳು. ಹಾಗೇ ನಿಧಾನವಾಗಿ ಹೋಗಿ ಹಿತ್ತಲ ಬಾಗಿಲನ್ನು ತೆರೆದಳು. ಮೆಲ್ಲನೇ ಮಗು ಮಲಗಿದ್ದ ಕೋಣೆಯನ್ನು ಇಣುಕಿ ನೋಡಿದಳು. ಕೂಡಲೇ ಹಿರಿಯ ಮಗಳು “ಅಮ್ಮಾ”…ಎನ್ನುತ್ತಾ ಜೋಲಿಯ ಕೆಳಗೆ ಸಿಂಬಿಯಂತೆ ಸುತ್ತಿಕೊಂಡು ಹೆಡೆಯನ್ನು ಎತ್ತಿ ಆಡಿಸುತ್ತಾ, ಆಗಾಗ ನಾಲಗೆಯನ್ನು ಹೊರ ಹಾಕುತ್ತಾ ಜೋಲಿಯನ್ನು ನೋಡುತ್ತಿದ್ದ ಕಾಳಿಂಗನೆಡೆಗೆ ತೋರು ಬೆರಳನ್ನು ತೋರಿಸುತ್ತಾ ಕಿರುಚಿದಳು. ಕೂಡಲೇ ಸುಮತಿಯು ಮಗಳ ಬಾಯನ್ನು ಕೈಯಿಂದ ಮುಚ್ಚಿ, ಕಿವಿಯಲ್ಲಿ ಉಸುರಿದಳು… ಮಗೂ ಕಿರುಚಬೇಡ…. ಆ ಹಾವು ಗಾಬರಿಗೊಂಡು ತಂಗಿಯನ್ನು ಕಚ್ಚಿಬಿಟ್ಟೀತು…ಎಂದಳು. ಅಮ್ಮನ ಮಾತು ಕೇಳಿ ಮಗಳು ಸುಮ್ಮನಾದಳು. ಆದರೆ ಹೆದರಿಕೆಯಿಂದ ಅಮ್ಮನ ಕೊರಳನ್ನು ಅಪ್ಪಿ ಹಿಡಿದಳು. ಸುಮತಿಯೂ ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು ಜೋಲಿಯ ಕಡೆಗೆ ನೋಡುತ್ತಾ…ದೇವರೇ ನಮ್ಮನ್ನು ರಕ್ಷಿಸು…ನನ್ನ ಮಗುವನ್ನು ಈ ಕಾಳಿಂಗನಿಂದ ರಕ್ಷಿಸು ಎಂದು ಮನದಲ್ಲೇ ತಾವು ಊರಲ್ಲಿ ಇದ್ದಾಗ ಸರ್ಪಕಾವಿಗೆ ಹೋಗಿ ದೀಪ ಹಚ್ಚುವಾಗ ಜಪಿಸುತ್ತಿದ್ದ ಜಪವನ್ನು ಹೇಳಿಕೊಳ್ಳುತ್ತಾ ನಾಗದೇವತೆಯನ್ನು ಪ್ರಾರ್ಥಿಸಿದಳು. ಸ್ವಲ್ಪ ಹೊತ್ತು ತಲೆ ಆಡಿಸುತ್ತಾ ಅತ್ತಿಂದ ಇತ್ತ ನೋಡುತ್ತಿದ್ದ ಕಾಳಿಂಗವು ಪಕ್ಕದಲ್ಲಿಯೇ ಇದ್ದ ಮಂಚದ ಮೇಲೆ ಏರಿ ಕಿಟಕಿಯ ಮೂಲಕ ಸರಸರನೆ ಇಳಿದು ಹೊರಗೆ ಹೋಯಿತು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸಮಾಡಿದವರೀಗಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ತಾಯಿಯಾಗಿ ಎಷ್ಟು ಕಷ್ಟಪಟ್ಟು ಮಗುವನ್ನು
ಸಾಕುವಳು. ಅದೇ ಗಂಡು ಹೃದಯಗಳು
ಉದಾಸೀನ ಮಾಡಿಹಿಂಸೆಕೊಟ್ಟು
ಮತ್ತೆ ಹೆಣ್ಣಿಗಾಗೇ ಪರಿತಪಿಸುವ ಪರಿಪಾಠವಾಗಿದೆ.
ಕಾಳಿಂಗ ಸರ್ಪದ ಬಗ್ಗೆ ಓದಿ ಬೆಚ್ಚಿಹೋಯಿತು
ಆಗ ಆ ತಾಯಿ ಎಲ್ಲವನ್ನು ಹೇಗೆ ಸಹಿಸಿರಬೇಡ
ಕರುಣಾಮಯಿ ಅವಳಲ್ಲವೇ.
ತ್ಯಾಗಮಯಿ ಅವಳಲ್ಲವೇ
ಇವಳೇ ಹೆಣ್ಣು ಬಾಳಿನ ಕಣ್ಣು
ತಮ್ಮ ನುಡಿಗಳಿಗೆ ಅನಂತ ಧನ್ಯವಾದಗಳು
ನಿಮ್ಮ ಮಾತುಗಳು ಅಕ್ಷರಶಃ ನಿಜ. ನಿಮ್ಮ ಪ್ರೋತ್ಸಾಹ ಸದಾ ನನಗಿರಲಿ ಎಂದು ಆಶಿಸುವೆ.
ತಾಯಿಯ ಕಾಳಜಿ, ನಿಷ್ಕಲ್ಮಶ ಪ್ರೀತಿಯೇ ಆಕೆಯನ್ನು ಶ್ರೇಷ್ಠ ಸ್ಥಾನದಲ್ಲಿ ಇಟ್ಟು ಪೂಜಿಸುವಂತೆ ಮಾಡಿರುವುದು.
ತನ್ನ ಜೀವವನ್ನು ಒತ್ತೆಯಿಟ್ಟು ಮಗುವಿಗೆ ಜನ್ಮ ನೀಡಿದ ತಾಯಿ ಎಂತಹ ಪರಿಸ್ಥಿತಿಯಲ್ಲೂ ತನ್ನ ಕರ್ತವ್ಯ ಪಾಲನೆ ಮಾಡುವಳು. ಹೆಣ್ಣಿನ ಬಗ್ಗೆ ನಿಮಗಿರುವ ಕಾಳಜಿ ಗೌರವ ನೋಡಿ ಮನ ತುಂಬಿತು