ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ ಕೃತಿ ‘ಕಣ್ಣು ಬೆರಗು ಬವಣೆ’ ಒಂದು ಪರಿಚಯ ಬಿ.ಎಸ್.ಶ್ರೀನಿವಾಸ್ ಅವರಿಂದ

ಕಣ್ಣು ಬೆರಗು ಬವಣೆ.
ಲೇಖಕರು – ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್
ಪ್ರತಿ ಬೇಕಾದವರು ಪರಶಿವಪ್ಪ ಸ್ನೇಹ ಬುಕ್ ಹೌಸ್ – +91 98450 31335 ಇವರನ್ನು ಸಂಪರ್ಕಿಸಬಹುದು
ಸಪ್ನ ಬುಕ್ ಹೌಸ್ ನಲ್ಲಿಯೂ ಲಭ್ಯವಿದೆ

ಸಮನ್ವಯ ಸಮಿತಿ ಸಾಹಿತ್ಯ ದಾಸೋಹ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಹಿರಿಯ ಸಾಹಿತಿ ದಿ.ಎಚ್ಚೆಸ್ಕೆಯವರ ಜನ್ಮಶತಾಬ್ಧಿಯ ಅಂಗವಾಗಿ, “ಎಚ್ಚೆಸ್ಕೆ ಅಕ್ಷರ ನಮನ” ಕಾರ್ಯಕ್ರಮದ ಭಾಗವಾಗಿ ಪ್ರಕಟಗೊಂಡ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ “ಕಣ್ಣು ಬೆರಗು ಬವಣೆ” ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಣೆಯಾದ ಒಂದು ವಿಶಿಷ್ಟ ಕೃತಿ ಎನ್ನಬಹುದು.ವಿಜ್ಞಾನದ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದು ತಿಳಿಸುವ ಸಾಮರ್ಥ್ಯವಿರುವವರು ಬಹಳ ವಿರಳ.ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ಕೂಡ ಅಂಥವರ ಸಾಲಿಗೆ ಸೇರುವ  ಅನನ್ಯ ಪ್ರತಿಭೆ. ಸುಮಾರು ಎರಡು ದಶಕಗಳ ತಮ್ಮ ವೈದ್ಯಕೀಯ ವೃತ್ತಿಯ ಅನುಭವದ ಮೂಸೆಯಲ್ಲಿ ಮೂಡಿದ ಕೃತಿಯೇ “ಕಣ್ಣು ಬೆರಗು ಬವಣೆ”.
ಈ ಪುಸ್ತಕದಲ್ಲಿ ಮೂರು ವಿಭಾಗಗಳಿವೆ.ಬೆರಗು,ಬವಣೆ ಹಾಗೂ ಮತ್ತೆ ಬೆರಗು.ಕಣ್ಣುಗಳು ಅನೇಕ ವಿಸ್ಮಯಕಾರಿ, ಬೆರಗು ಮೂಡಿಸುವ ವಿಷಯಗಳ ಆಗರ.ರೋಗ ನಿರ್ಣಯ, ಚಿಕಿತ್ಸಾ ವಿಧಾನಗಳು ಹಾಗೂ ನೂತನ ಸಂಶೋಧನೆಗಳೂ ಕೂಡ ಅಷ್ಟೇ ಕುತೂಹಲಕಾರಿ ಬೆರಗಿನ ಸರಕು.
ಕಣ್ಣಿನ ಸಂರಚನೆ,ಅದಕ್ಕೆ ಬರುವ ರೋಗಗಳು,ಅದಕ್ಕೆ ಅವಶ್ಯವಿರುವ ಚಿಕಿತ್ಸಾ ವಿಧಾನ ಹಾಗೂ ಜನಸಾಮಾನ್ಯರು ಪಾಲಿಸಬೇಕಾದ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸರಳ ಕನ್ನಡದಲ್ಲಿ ತಿಳಿಸುವಲ್ಲಿ ಕೃತಿ ಯಶಸ್ವಿಯಾಗಿದೆ.ಕಣ್ಣಿನ ಬೇನೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಜನಸಾಮಾನ್ಯರಿಗೆ ಉತ್ತಮ ಅರಿವು ಮೂಡಿಸುವ ನಿಟ್ಟಿನಲ್ಲಿ ಕೃತಿಯು ಮಹತ್ವದ ಪಾತ್ರ ವಹಿಸುವುದರಲ್ಲಿ ಸಂಶಯವೇ ಇಲ್ಲ.


ಇತ್ತೀಚೆಗೆ “ಕಣ್ಣು ಬೆರಗು ಬವಣೆ” ಕೃತಿಗಾಗಿ ಡಾ. ಎಚ್.ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) ಬಹುಮಾನ ಪಡೆದಿರುವ ಡಾ. ಶ್ರೀಲಕ್ಷಿ ಶ್ರೀನಿವಾಸನ್ ಅವರಿಗೆ ಹಾರ್ದಿಕ ಅಭಿನಂದನೆಗಳು
ಡಾ.ಶ್ರೀಲಕ್ಷ್ಮಿಯವರ ಲೇಖನಿಯಿಂದ ಇಂತಹ ಇನ್ನೂ ಹಲವಾರು ಮಹತ್ವದ ಕೃತಿಗಳು ಹೊರಬಂದು ಕನ್ನಡ ಸಾರಸ್ವತ ಲೋಕ ಸಮೃದ್ಧವಾಗಲಿ ಎಂಬುದು ನಮ್ಮ ಮನದಾಳದ ಹಾರೈಕೆ.

*********

ಡಾ.ಶ್ರೀಲಕ್ಷ್ಮಿಶ್ರೀನಿವಾಸನ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ದಲ್ಲಿ ತಮ್ಮ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ನಂತರ ಗ್ಲಾಸ್ಕೋ ವಿಶ್ವವಿದ್ಯಾಲಯದಿಂದ ಎಫ್.ಆರ್.ಸಿ.ಎಸ್ ಪದವಿಯನ್ನು ಪಡೆದು,ಬೆಂಗಳೂರಿನ ಲಯನ್ಸ್ ಕಣ್ಣಾಸ್ಪತ್ರೆಯಿಂದ ಸಾಮಾನ್ಯ ನೇತ್ರವಿಜ್ಞಾನ ವಿಭಾಗದಲ್ಲಿ ಫೆಲೋಷಿಪ್ ಗಳಿಸಿದ್ದಾರೆ.
ಕರ್ನಾಟಕದ ಅಕ್ಷಿಪಟಲ ಸಂಸ್ಥೆಯಲ್ಲಿ ಅಕ್ಷಿಪಟಲ ಮತ್ತು ವರ್ಣಪಟಲ ಕುರಿತ ವಿಶೇಷ ತರಬೇತಿಯನ್ನು ಪಡೆದ ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ಅದೇ ಸಂಸ್ಥೆಯ ರಿಜಿಸ್ಟ್ರಾರ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.
ಬಿ.ಡಬ್ಲ್ಯೂ.ಲಯನ್ಸ್ ಕಣ್ಣಾಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯ ಆಸ್ಪತ್ರೆಗಳಲ್ಲದೆ
ಸುಮಾರು ಎರಡು ದಶಕಗಳ ಕಾಲ ಬೆಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ನೇತ್ರತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನೇತ್ರವಿಜ್ಞಾನದಲ್ಲಿ ಅಪಾರ ಅನುಭವ ಹೊಂದಿರುವ ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟೂರಾದ ಆನೇಕಲ್ ನಲ್ಲಿ “ಸ್ವಾಸ್ಥ್ಯ” ಎಂಬ ಹೆಸರಿನಲ್ಲಿ ನೇತ್ರ ಚಿಕಿತ್ಸಾ ಆಸ್ಪತ್ರೆಯನ್ನು ಆರಂಭಿಸಿ ರೋಗಿಗಳಿಗೆ ಸಂಪೂರ್ಣ ನೇತ್ರ ಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ.

ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹಲವಾರು ಪ್ರಬಂಧಗಳನ್ನು ಮಂಡಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಮನ್ನಣೆಯನ್ನು ಗಳಿಸಿದ್ದಾರೆ.

ವೃತ್ತಿಯಿಂದ ವೈದ್ಯರಾಗಿರುವ ಅವರು ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯೂ ಕೂಡ.ಬಿಡುವಿನ ಸಮಯದಲ್ಲಿ ಕಥೆ, ಕವನಗಳನ್ನು ಹಾಗೂ ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವುದು ಅವರ ನೆಚ್ಚಿನ ಹವ್ಯಾಸ.
ಇತ್ತೀಚೆಗೆ ಅವರು ಬರೆದ “ಕಣ್ಣು ಬೆರಗು ಬವಣೆ” ಪುಸ್ತಕಕ್ಕೆ ವೈದ್ಯಕೀಯ ವಿಭಾಗದಲ್ಲಿ ಡಾ.ಹೆಚ್.ಡಿ.ಚಂದ್ರಪ್ಪ ಗೌಡ ಪ್ರಶಸ್ತಿ ಲಭಿಸಿದೆ.

ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ ವೈದ್ಯಕೀಯ ಸೇವೆ ಹಾಗೂ ಸಾಹಿತ್ಯ ಸೇವೆ ಹೀಗೇ ಮುಂದುವರೆಯಲಿ.ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ ಹಾಗೂ ಮನ್ನಣೆ ದೊರಕಲಿ ಎಂಬುದೇ ನಮ್ಮೆಲ್ಲರ ಮನದಾಳದ ಹಾರೈಕೆ


2 thoughts on “ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ ಕೃತಿ ‘ಕಣ್ಣು ಬೆರಗು ಬವಣೆ’ ಒಂದು ಪರಿಚಯ ಬಿ.ಎಸ್.ಶ್ರೀನಿವಾಸ್ ಅವರಿಂದ

Leave a Reply

Back To Top