ಹೌದಲ್ಲವಾ?…. ನಾವು ಸ್ವಚ್ಛಂದ ಹಕ್ಕಿಯನ್ನು ಬಂಗಾರದ ಪಂಜರದಲ್ಲಿ ಇಟ್ಟು ಖುಷಿ ಪಡಲು ಬಯಸುತ್ತೆವೆ.ನಾವೆಷ್ಟು ಪಕ್ಷಿ ಪ್ರಿಯರು ಎಂದು ತೋರಿಸಲು!. ಬಾನಂಗಳಲದಲ್ಲಿ ಸ್ವಚ್ಛಂದವಾಗಿ ಹಾರಿಕೊಂಡು ನಕ್ಕು ನಲಿಯುವ ಬಾನಾಡಿಗಳ ಆಕ್ರಂದನ ಮನುಷ್ಯನ ವಿಕೃತ ಮನಸ್ಸಿಗೆ ಹೇಗೆ ತಾನೆ ಅರ್ಥವಾದಿತು.ಇಂದು ಕಾಡಲ್ಲಿರಬೇಕಾದ ಎಲ್ಲ ಜೀವಿಗಳು ನಾಡನ್ನು ಸೇರುತ್ತಿರುವುದನ್ನು ಕಂಡಾಗ,ಭಯ ಬರದೆ ಇರದು? ಇದಕ್ಕೆಲ್ಲ ಕಾರಣವೇನು?  ಹೀಗಿರುವಾಗ,ಜಂಗಲ್,ಕಾಡು,ಅರಣ್ಯಮುಂತಾದ ಹೆಸರುಗಳಿಂದ ಕರೆಯಲ್ಪಡುವ ಕಾನನ.ಅರಣ್ಯ ಜೀವಿಗಳ ತಾಣ!.ಆದರೆ ಕಾಡು ಕಾಡಾಗಿ ಉಳಿದಿಲ್ಲ.ಕಾಡಿನ ಒಡನಾಟವುಳ್ಳವರು,ಕಾಡಿನ ಉತ್ಪನ್ನಗಳು ಹಾಗೂ ಅವುಗಳ ಉಪಯೋಗ ಬಲ್ಲವರು.ಕಾಡುಗಳ್ಳರಿಗೆ ಮೊದಲು ಬಲಿಯಾಗಿದ್ದು, ಅಮೂಲ್ಯವಾದ ಮೂಕ ಮರಗಳು.

‘ಅರಣ್ಯ ಸಂಪತ್ತು ಇಡೀ ಜೀವ ಜಗತ್ತಿನ ಉಳಿವಿಗೆ ಮೂಲಭೂತ ಆಧಾರ’ವೆಂದರೆ ಅಲ್ಲಗಳೆಯುವಂತಿಲ್ಲ.ಹಿಂದೆಲ್ಲಾ ಕಾಡನ್ನು ಪ್ರವೇಶಿಸಲು ಭಯಪಡುವ ಕಾಲವಿತ್ತು.ಭಯಾನಕ ಕಾಡು ಪ್ರಾಣಿಗಳಿಗೆ ಹೆದರಿ ಅತ್ತ ಸುಳಿಯುವವರ ಸಂಖ್ಯೆ ಕಡಿಮೆಯಿತ್ತು. ಅದಕ್ಕಾಗಿ ಅಭಯಾರಣ್ಯಗಳು ಸುರಕ್ಷಿತವಾಗಿ ಕಾಲಕಾಲಕ್ಕೆ ಮಳೆಬೆಳೆಯಾಗುತ್ತಿತ್ತು. ಅವಶ್ಯಕತೆಗಳ ಪ್ರಮಾಣ,ಹಣದ ಮದವನ್ನು ತಲೆಗೆರಿಸಿಕೊಳ್ಳದವರ ಸಂಖ್ಯೆಯು ಕೂಡ ಮಿತವಾಗಿತ್ತು.ಮಾನವೀಯತೆಯ ಜೊತೆಗೆ ಅಂತಃಕರಣ ತುಂಬಿದ ಮನಸ್ಸುಗಳು ಇದ್ದವು.ಶಿಕ್ಷಣದ ಮಹತ್ವ ಕೆಲವೇ ಕೆಲವರು ಬಲ್ಲವರಾಗಿದ್ದರು.ಇಂತಹ ಸಮಯದಲ್ಲಿ, ನಗರಗಳು ಅಷ್ಟೆಲ್ಲ ಅಭಿವೃದ್ಧಿ ಹೊಂದಿರಲಿಲ್ಲ. ದಟ್ಟ ಕಾಡು,ಬೆಟ್ಟಗುಡ್ಡಗಳು,ನದಿ,ಕೆರೆ, ಹಳ್ಳಕೊಳ್ಳಗಳು ಪರಿಶುದ್ದವಾಗಿ ಹರಿಯುತ್ತಿದ್ದವು. ಪರಿಸರವನ್ನು ತನ್ನ ಸ್ವಾರ್ಥಕ್ಕೆ ಬಳಸುವಂತವರು‌ ಹೆಚ್ಚಾಗಿರಲಿಲ್ಲ.ಅಪರೂಪಕ್ಕೆ ಓಡಾಡುವ ಕೆಂಪು ಬಸ್ಸುಗಳು ಹಳ್ಳಿಗರ ಜೀವನಾಡಿಗಳಾಗಿದ್ದವು.ಎಷ್ಟೋ ಕಿ.ಮೀ  ಕಾಲುದಾರಿಯಲ್ಲಿ ನಡೆದು ಜೀವನ ಸಾಗಿಸುವ ಜನರಿಗೆ ಸಾತ್ವಿಕ ಆಹಾರ,ಶುದ್ದಗಾಳಿ ಎಲ್ಲವೂ ಹೇರಳವಾಗಿ ಸಿಗುತ್ತಿತ್ತು. ಹೀಗಾಗಿ ನಮ್ಮ ದೈನಂದಿನ ಕೆಲಸಗಳು ಆರೋಗ್ಯ ಪೂರ್ಣವಾಗಿತ್ತೆಂಬುದನ್ನು ಹಿರಿಜೀವಗಳು ಹೇಳಿದ್ದನ್ನು ಕೇಳಿದ್ದಿದೆ.

ಆರ್ಥಿಕ ಸ್ಥಿತಿ ಉತ್ತಮವಾಗಿರುವವರ ಮನೆಯಲ್ಲಿ ಒಂದ ಸೈಕಲ್, ಕಾರು,ಬೈಕ್,ಟಿ.ವಿ ಇದ್ದರೆ ಮುಗಿತು,ಅವರು,ಇಡೀ ಊರಿಗೆ ಸಾಹುಕಾರರು!. ದಿನಗೂಲಿಗರು ಅವರ ಹೊಲ,ತೋಟಗಳಲ್ಲಿ ದುಡಿಯುತ್ತಿರುವ ದೃಶ್ಯ ಸರ್ವೇಸಾಮಾನ್ಯ.ನಮ್ಮಲ್ಲಿ ಅನೇಕರ ಜೀವನದ ಕಥೆಗಳಲ್ಲಿ ದುಡಿತದ ಭಾಗದ ಪ್ರತಿಫಲ ಎಷ್ಟು ಎಂದು ತಿರಗಾ ಮುರಗಾ ಲೆಕ್ಕ ಹಾಕಿದರೂ,ಬಿಡಿಗಾಸು ಕೈಲಿ ಉಳಿತಿರಲಿಲ್ಲ.ಉಳ್ಳವರ ಮನೆಯ ಮುಂದೆ ಕೂಲಿ ಬೇಡಲು ಕೈಕಟ್ಟಿ ನಿಲ್ಲಬೇಕು.ಆಳುಗಳ ಮೂಲಕ ಎತ್ತಿ ಸುರಿಯುವ ದವಸ ಧಾನ್ಯಗಳು ಹಸಿವಿನ ಚೀಲ ಅರವಟಿಗೆಯಂತಾದರೂ,ಆ ಕ್ಷಣಕ್ಕೆ ಹಸಿವಿನ ಮುಂದೆ ಬೇರಾವ ಪರಿಕರದ ಅವಶ್ಯಕತೆಯಿರಲಿಲ್ಲ!. ಬಡತನದ ಕಹಿಯಲ್ಲಿ ಬೆಂದವರಿಗೆ ಮಾತ್ರ ಹಸಿವಿನ ಬೆಲೆ ಗೊತ್ತು. ಅದೇನೋ ಮಾತಿದೆ”ಬಡವನ ಕೋಪ ದವಡೆಗೆ ಮೂಲ” ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ದರ್ಪದ ಬೂಟುಗಾಲಿನ ಒದೆತ ನೀಡುವವರಿಗೆ ಮೌನವಾಗಿ ನಿಲ್ಲುವ ಹಾಗೂ ಕೆಲಸ ಮಾಡಿಸಿಕೊಂಡು ಬರಿಗೈಲಿ ಮನೆಗೆ ಬಂದವರ ಎದೆಯಲ್ಲಿ ಉಕ್ಕುವ ಸಿಟ್ಟಿನ ಜ್ವಾಲೆಯನ್ನು ಶಮನ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ!. ಹೌದು,ಬಡವನೆಂಬ ಹಣೆಪಟ್ಟಿ ಹೊತ್ತವರು, ಬದುಕಲ್ಲಿ ಯಾವಾಗಲೂ ಬಡವರಾಗಿಯೇ ಉಳಿಯುವರೆಂಬ ಭ್ರಮೆ ಈಗ ಉಳಿದಿಲ್ಲ! ಕಾಲಚಕ್ರ ಉರುಳುತ್ತಿದೆ,ದಿನದ ಪ್ರತಿ ಘಟನೆಗಳು ಮುಂದಿನ ಭವಿಷ್ಯ ನಿರ್ಧಾರ ಮಾಡುತ್ತದೆ ಎಂಬುದನ್ನು ಒಪ್ಪದೇ ವಿಧಿಯಿಲ್ಲ!.

ಭಾರತೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿ ಹಾಸುಹೊಕ್ಕಾದ ನಾಗರಿಕ ಪ್ರಪಂಚದ ಒಳಹೊರಗು; ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆಯಲ್ಲಿ ” ಹಸಿವಿನ” ಹೊರೆಯನ್ನು ಹೊತ್ತು” ಕುಪೋಷಣೆಯು” ಜಗತ್ತಲ್ಲಿ ಮೈಮರೆತು ಕುಣಿಯುತ್ತಿದೆ.ಎಷ್ಟೊಂದು ವಿಚಿತ್ರ ಪ್ರಪಂಚ ಅನ್ನಿಸಿದರೂ, ‘ಬಡವ ಬಲ್ಲಿದ ‘ಎಂಬ ಹೆಸರಿನ ಮೇಲೆ ಪ್ರಭಾವ ಬೀರುವ ಮೂಲಕ ಜಗತ್ತು ತನ್ನ ಅಸ್ತಿತ್ವದ ಸತ್ಯವನ್ನೆ ಮರೆಮಾಚುವ ಹಂತಕ್ಕೆ ತಲುಪಿದೆಯೆಂದರೆ ಆಶ್ಚರ್ಯ ಪಡಬೇಕಾಗಿಲ್ಲ.ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ, ಎಲ್ಲರ ಅವಶ್ಯಕತೆಗಳನ್ನು ಪೂರೈಸಲು ಹೇಗೆ ತಾನೆ ಸಾಧ್ಯ!. ಶಿಕ್ಷಣವೂ ವ್ಯಾಪಾರಿಕರಣವಾಗಿ ಬೆಳೆದಿದ್ದು,ಜಮೀನುಗಳು ಲೇಔಟ್ ಗಳಾಗಿ ಮಾರ್ಪಾಡಾಗಿದ್ದು,ಅರಣ್ಯಗಳು ಮೇಣದಂತೆ ಕರಗುತ್ತಿರುವಾಗ,ಹೊಟ್ಟೆ ಪಾಡಿಗಾಗಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಸಾಗುವ ಹಸಿದವರ ಮುಖವಾಡಗಳು ಎಲ್ಲವೂ ನಮಗೆ ಗೊತ್ತಿದೆ. “ಪರಿವರ್ತನೆ ಜಗದ ನಿಯಮ”. ಆದರೆ ಬದಲಾವಣೆಯ ಭೀಕರತೆಯು ಜನಜಂಗುಳಿಯನ್ನು  ಅಲ್ಲೋಲ, ಕಲ್ಲೋಲಗೊಳಿಸಿದಂತೂ ಸತ್ಯ.ಎಲ್ಲರಿಗೂ ಅನ್ವಯಿಕ ಶಿಕ್ಷಣದ ಅವಶ್ಯಕತೆಯಿದೆ.ಆದರೆ ಅನ್ವಯಿಕ ಅನಿವಾರ್ಯತೆಗಳು ಕೊಂಚ ಭಿನ್ನವಾಗಿವೆ.ಹೀಗಾಗಿ ನಮ್ಮ ಭಾವಿ ಭವಿಷ್ಯದ ಹಾದಿಯನ್ನು ನಾವಾಗಿ ನಾವೇ ಹಾಳುಮಾಡಿಕೊಳ್ಳುತ್ತಿದ್ದೆವೆ.

ದೇಶದ ವಿವಿಧ ರಾಜ್ಯ, ಕೆಲ ಜಿಲ್ಲೆಗಳು ಕುಪೋಷಣೆಯಿಂದ ನರಳುತ್ತಿವೆ.ಅದರಲ್ಲಿ ನೇರವಾಗಿ ಬಲಿಯಾಗುತ್ತಿರುವವರು. ಗರ್ಭಿಣಿಯರು,ನವಜಾತ ಶಿಶುಗಳು,ಮಕ್ಕಳು ಕುಪೋಷಣೆಯಿಂದ ಬಲಿಯಾಗುತ್ತಿರುವ ಸುದ್ದಿಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾವೆಲ್ಲ ಗಮನಿಸಿದ್ದೆವೆ.ಅವರಾರು ಶ್ರೀಮಂತರಲ್ಲ!, ಕೂಲಿ ಕಾರ್ಮಿಕ ಜನರು.ದುರ್ಬಲರು,ಬಡವರು.ಇಂದಿಗೂ ಪರಿಸ್ಥಿತಿ ಸ್ವಲ್ಪ ಭಿನ್ನವಾದರೂ ಇನ್ನೂ ಬಿ.ಪಿ.ಎಲ್ ಕಾರ್ಡ ಹೊಂದಲು ಒದ್ದಾಡುತ್ತಿರುವ ಕುಟುಂಬಗಳು ಅಸಂಖ್ಯಾತ!.ಉಳ್ಳವರು ಎಲ್ಲ ಸೌಲಭ್ಯಗಳ ಅರಸರಾದರೆ,ದುಡಿವವರ ಕೈಗಳು ಯಾವಾಗಲೂ ಬರಿದೆ.ನಮಗೆ ಯಾವುದರಲ್ಲೂ ತೃಪ್ತಿ ಇಲ್ಲ. ಹಣದ ಹಿಂದೆ ಓಡುತ್ತಿದ್ದೆವೆ..ಮಾನವೀಯತೆ ಮರೆತಿದ್ದೆವೆ.ಪರಸ್ಪರ ಹೊಂಚು ಹಾಕಿ ಕೊಲ್ಲುವ ಕಠೋರ ಸ್ಥಿತಿಗೆ ಬಂದು ತಲುಪಿದ್ದೆವೆ. ಅಭಿವೃದ್ಧಿ ಹೆಸರಲ್ಲಿ ಎಲ್ಲವನ್ನೂ ಬರಿದು ಮಾಡಿದ್ದೆವೆ.ಬ್ರಷ್ಟಾಚಾರದ ಪೆಡಂ ಭೂತ ಎಲ್ಲ ರಂಗದಲ್ಲಿ ಕಾಮನಬಿಲ್ಲಿನಂತೆ ಆವರಿಸಿದೆ. ಬರಿಗಾಲಲ್ಲಿ ನಡೆದು,ಬಂಗಲೆಯಲ್ಲಿ ವಾಸಿಸುವ ಭಾಗ್ಯ ಬರುವವರೆಗಿನ ಜೀವನದ ಕ್ರಮಗಳು,ಮಿತಿಮೀರಿದ ಆಸ್ತಿಗಳು…..ಹೀಗೆ ಹೇಳುತ್ತಾ ಹೋದರೆ ಕೊನೆಯಿಲ್ಲ.ಇಂದಿಗೂ ಕೇರಿಗಳು ದೂರವೇ ಇವೆ!. ಜನಸಾಮಾನ್ಯರಾಗಿ ಬದುಕುವ ಎಲ್ಲಾಂಶಗಳು ಎಲ್ಲರಿಗೂ ಲಭ್ಯವಿಲ್ಲ!.

ಒಟ್ಟಾರೆಯಾಗಿ ಹೇಳುವುದಾದರೆ,ಕಾಲಚಕ್ರ ಉರುಳುತ್ತಿದೆ,ಐತಿಹ್ಯವನ್ನು ಮೆಲುಕು ಹಾಕುತ್ತ ಹೊರಟರೆ,ಇಂದಿನ ದಿನದವರೆಗಿನ ಕಾಲಮಾನವನ್ನು ಅಳೆಯಲು ನಮ್ಮಲ್ಲಾದ ಬದಲಾವಣೆಯನ್ನು ಗುರುತಿಸಿದಷ್ಟು ಬಯಲಾಗುವುದು.ಜಗದ ಸಾಧಕ,ಬಾಧಕಗಳನ್ನು ಅರಿತಷ್ಟು,ಅರಿವಿನ ಹರಿವನ್ನು ವಿಸ್ತಾರಗೊಳಿಸಲು ಸಾಧ್ಯ!. ಎಲ್ಲರೂ ಅವರವರ ಕಾಲಘಟ್ಟದಲ್ಲಿ ಮಿಂದೆದ್ದು,ತಮ್ಮ‌ ಅವಶ್ಯಕತೆಗಳಿಗಾಗಿ ಇತರರನ್ನು ಬಲಿ ಪಡೆದು ಮೆರೆದವರು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.ಇದೆಲ್ಲವನ್ನೂ ಮನಗಂಡು,ಎಚ್ಚೆತ್ತುಗೊಂಡ ಕೆಲ ಪ್ರಜ್ಞಾವಂತ ಜನಾಂಗ ತಮ್ಮ ಹಕ್ಕಿಗಾಗಿ,ಉಳಿವಿಗಾಗಿ,ಪರಿಸರ ಸಂರಕ್ಷಣೆಗಾಗಿ,ಮೂಲಭೂತ ಸೌಲಭ್ಯ ಕೆಳಹಂತದವರೆಗೆ ತಲುಪಿಸಲು
ಕಂಕಣ ತೊಟ್ಟು ನಿಂತಿರುವುದು ಸ್ವಾಗತಾರ್ಹ!.ಅಭಿವೃದ್ಧಿಯ ಹೆಸರಲ್ಲಿ  ಹಿಂದೆ ಹಾಗಿತ್ತು,ಹಿಂದೆ ಹೀಗಿತ್ತು ಎಂದು ನಯವಾಗಿಯೇ ಭವುಷ್ಯದ ದಾರಿ ತಪ್ಪಿಸುವ ನಯವಂಚಕರಿಂದ ಎಲ್ಲವನ್ನೂ ಕಳೆದುಕೊಳ್ಳುವ ಮನಸ್ಥಿತಿಗೆ ಬರಬಾರದೆಂಬ ಚಿಂತನೆ‌ ಅಷ್ಟೇ..


8 thoughts on “

  1. ಹಸಿರೆ ಉಸಿರು ಎನ್ನುವ ಘೋಷಣೆ ಅಡಗಿದೆ ಎಲ್ಲೋ ದನಿ ಸೊರಗಿ ಅಳುತಿದೆ ಪೃಥ್ವಿ ನಗುತಿಹ ಮಾನವ ತನ್ನಯ ನಾಶದ ಅರಿವಿರದೆ

  2. ಕಾಡು ಇದ್ದೆರೆ ನಾಡು.. ಪರಿಸರ ಸಂರಕ್ಷಣೆ ಯ ಅದ್ಭುತ ಸಂದೇಶವನ್ನೇ ಬಿಟ್ಟಿದ್ದೀರಾ… ಸೂಪರ್ ❤️

  3. ಪರಿಸರದ ಕುರಿತು ಕಾಳಜಿ ದುಡಿಯುವ ಬರಿಗೈೆ ಜೀವನ…….ಚೆನ್ನಾಗಿ ಮೂಡಿಬಂದಿದೆ ಸೂ…..ಪರ್

  4. ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ಬಿಟ್ಟು ಹೋಗಬೇಕು ಎಂಬುದನ್ನು ಅರಿತು ನಡೆಯಬೇಕಾಗಿದೆ.

  5. ಕಲಿಕಾಲದ ವಾಸ್ತವ ಚಿತ್ರಣ ಮಾರ್ಮಿಕ ವಾಗಿ
    ,ಮನೋಜ್ಞ ವಾಗಿದೆರೀ..

  6. ಕಾರುಣ್ಯವಿರದ ಜಾಗತೀಕರಣದ ಸೆಳೆತ ಬೇಕುಗಳೆಂಬ ದಾಹ ಪ್ರಕೃತಿಯ ವಿನಾಶಕ್ಕೆ ಕಾರವಾಯ್ತು ಅದರೊಂದಿಗೆ ಮನುಷ್ಯನ ಸರ್ವ ನಾಶವೂ ಆಗುತ್ತಿದೆ ಎಂಬುದ ಮರೆತ ಮನುಷ್ಯ ಮನದ ಚಿತ್ರಣ ನಿಮ್ಮ ಅಂಕಣ ಬರಹದಲಿದೆ.

Leave a Reply

Back To Top