ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆಗಾಲದ ಆರ್ಭಟ ತಗ್ಗುತ್ತಾ ಚಳಿಗಾಲವು ಪ್ರಾರಂಭವಾಗುವ ಮುನ್ಸೂಚನೆ ನೀಡಿತು. ಬೆಳಗಿನ ಜಾವ ಬೇಗ ಏಳುತ್ತಿದ್ದ ಸುಮತಿಗೆ ಮನೆಯ ಸುತ್ತಲೂ ಕವಿಯುತ್ತಿದ್ದ ಮಂಜು ಮುಸುಕಿದ ವಾತಾವರಣ ಬಹಳ ಪ್ರಿಯವಾಗಿತ್ತು. ಹತ್ತಿರದಲ್ಲಿಯೇ ಟಿಪ್ಪುಸುಲ್ತಾನ್ ಕಟ್ಟಿಸಿದ ವಿಶ್ವವಿಖ್ಯಾತ ಮಂಜುರಾಬಾದ್ ಕೋಟೆ ಇತ್ತು. ಹೆಸರಿಗೆ ತಕ್ಕಂತೆಯೇ ಕೋಟೆಯ ಸುತ್ತಲೂ ಸಂಜೆಯಿಂದ ಬೆಳಗು ಹರಿಯುವವರೆಗೂ ಮಂಜು ಮುಸುಕಿರುತ್ತಿತ್ತು. ಸುಮತಿಯ ಮನೆಯು ಕೋಟೆಗೆ ಒಂದೆರಡು ಕಿಲೋಮೀಟರ್ ಗಳಷ್ಟು ಅಂತರದಲ್ಲಿ ಇದ್ದ ಕಾರಣ ಅಲ್ಲಿ ಕೂಡಾ ಮಂಜು ಮುಸುಕಿದ ವಾತಾವರಣವಿರುತ್ತಿತ್ತು. ಕೆಲವೊಮ್ಮೆ ಬೆಳಗ್ಗಿನ ಜಾವ  ಮನೆಯ ಹಿಂಭಾಗದ ಹಿತ್ತಲಲ್ಲಿ ನವಿಲುಗಳು ಕಾಳು, ಹುಳ-ಹುಪ್ಪಟೆಗಳನ್ನು ಹುಡುಕಿಕೊಂಡು ಬರುತ್ತಿದ್ದವು. ಅವುಗಳ ಅಂದವನ್ನು ನೋಡುವುದು ಸುಮತಿಗೆ ಸಂಭ್ರಮದ ವಿಷಯ. ಸದ್ದು ಮಾಡದೇ ಮೆಲ್ಲನೆ ಹಿಂದಿನ ಬಾಗಿಲು ತೆರೆದು ನಿಲ್ಲುತ್ತಿದ್ದಳು. ಯಾವುದೇ ಅಳುಕಿಲ್ಲದೆ ನವಿಲುಗಳು ಹಿಂಡು ಹಿಂಡಾಗಿ ಮಂಜುಕವಿದ ವಾತಾವರಣದಲ್ಲಿ ಮೇಯುತ್ತಿದ್ದವು. ಬಾಗಿಲಿನ ಮರೆಯಿಂದ ಅಸ್ಪಷ್ಟವಾಗಿ ಕಾಣುತ್ತಿದ್ದ ಅವುಗಳನ್ನು ನೋಡಲೆಂದು ಸುಮತಿ ಅಂಗಳಕ್ಕೆ ಕಾಲಿಟ್ಟರೆ ಅವಳ ಹೆಜ್ಜೆಯ ಸಪ್ಪಳಕ್ಕೆ ಹೆದರಿದ ನವಿಲುಗಳು ಪಟ ಪಟನೆ ರೆಕ್ಕೆ ಬಡಿದು ಸದ್ದು ಮಾಡುತ್ತಾ ಪಕ್ಕದಲ್ಲಿ ಇದ್ದ ಮರಗಳ ಮೇಲೆ ಹೋಗಿ ಕುಳಿತು ಬಿಡುತ್ತಿದ್ದವು. ಗಂಡು ನವಿಲುಗಳ ಬಾಲದ ಗರಿಗಳು ನೋಡಲು ಬಲು ಸುಂದರ. ಅವುಗಳು ಹಾರುವಾಗ ಕೆಲವೊಮ್ಮೆ ಗರಿಗಳು ಕೆಳಗೆ ಬೀಳುತ್ತಿದ್ದವು. ಅವುಗಳನ್ನೆಲ್ಲಾ ಹೆಕ್ಕಿ ಶೇಖರಿಸಿ ಮಗಳಿಗೆ ಕೊಡುತ್ತಿದ್ದಳು ಸುಮತಿ. ಮಗಳು ಅವುಗಳನ್ನೆಲ್ಲಾ ಒಂದೆಡೆ ಜೋಪಾನವಾಗಿ ಇಡುತ್ತಿದ್ದಳು. ಶಾಲೆಯಿಂದ ಬಂದ ನಂತರ ಬಿಡುವಿನ ವೇಳೆಯಲ್ಲಿ ಅವುಗಳ ಚಿತ್ರವನ್ನು ಬಿಡಿಸಿ ಅಮ್ಮನಿಗೆ ತೋರಿಸುತ್ತಿದ್ದಳು. 

ಮಗಳು ಬಿಡಿಸುತ್ತಿದ್ದ ಚಿತ್ರಗಳನ್ನು ಪತಿಗೆ ತೋರಿಸುತ್ತಾ ಹಿರಿ ಹಿರಿ ಹಿಗ್ಗುವಳು ಸುಮತಿ. ಜನ್ಮದತ್ತವಾಗಿ ಮಗಳಿಗೆ ಲಭಿಸಿದ ಚಿತ್ರಕಲೆಯನ್ನು ಸರಸ್ವತಿ ದೇವಿಯ ವರದಾನವೆಂದು ತಿಳಿದು ಅದನ್ನು ಪೋಷಿಸಿ ಬೆಳೆಸಲು ತನ್ನ ಕೈಲಾದ ಸಹಾಯ ಮಗಳಿಗೆ ಮಾಡುತ್ತಿದ್ದಳು. ಹೀಗೆ ಮಗಳೊಂದಿಗೆ ಕಾಲವನ್ನು ಕಳೆಯುತ್ತಾ ಹಳೆಯ ನೋವುಗಳನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಳು ಸುಮತಿ. ಒಂದು ದಿನ ಹೀಗೇ ಮಗಳ ಜೊತೆ ಕುಳಿತಿರುವಾಗ ಸುಮತಿಗೆ ಹೊಟ್ಟೆ ನೋವು ಪ್ರಾರಂಭವಾಯಿತು. ಪತಿಗೆ ತಿಳಿಸಿದಾಗ, ಪತ್ನಿಯನ್ನು ಮತ್ತು ಮಗಳನ್ನು ಜೊತೆಗೆ ಕರೆದುಕೊಂಡು ಆಸ್ಪತ್ರೆ ತಲುಪಿದರು ವೇಲಾಯುಧನ್. ಆದರೆ ಪ್ರಸೂತಿ ಕೊಠಡಿಯಲ್ಲಿ ಸಣ್ಣ ಮಕ್ಕಳಿಗೆ ಪ್ರವೇಶ ನಿಷಿದ್ಧ, ಹಾಗಾಗಿ ಮಗಳನ್ನು ಕರೆದುಕೊಂಡು ವೇಲಾಯುಧನ್ ಮನೆಯ ಕಡೆಗೆ ಹೊರಟರು.  ಹೊರಡುವ ಮುನ್ನ ಪತ್ನಿಯನ್ನೊಮ್ಮೆ ನೋಡಿ ಮುಗುಳ್ನಕ್ಕು…” ಮಗ ಹುಟ್ಟಿದ ಎಂಬ ಸಿಹಿ ಸುದ್ದಿಯನ್ನು ಕೊಡು…ನಿಮ್ಮಿಬ್ಬರನ್ನೂ ನೋಡಲು ಬರುವಾಗ ನಿನಗೆ ಬದಲಿಸಲು ಬೇಕಾದ ಬಟ್ಟೆ, ಮಗುವಿಗೆ ಬೇಕಾದ ಹತ್ತಿ ಬಟ್ಟೆಯನ್ನು ಕೂಡಾ ಜೊತೆಗೆ ತರುವೆ”…ಎಂದು ಹೇಳಿದರು. ಅದಕ್ಕವಳು ನೋವಿನೊಂದಿಗೆ ಮುಗುಳ್ನಗುತ್ತಾ ಪ್ರಸೂತಿ ಕೊಠಡಿಯಲ್ಲಿ ದಾಖಲಾದಳು. ರಾತ್ರಿಯೆಲ್ಲಾ ಸಣ್ಣಗೆ ನೋವಿನಿಂದ ನರಳುತ್ತಿದ್ದಳು ಸುಮತಿ. ಹೊತ್ತು ಸರಿದಂತೆ ಬೆಳಗ್ಗೆ ಸುಮತಿಗೆ ಪ್ರಸವ ವೇದನೆ ಹೆಚ್ಚಾಯಿತು. ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ಒಂದು ಸುಂದರವಾದ ಹೆಣ್ಣು ಮಗುವಿಗೆ ಸುಮತಿ ಜನ್ಮ ನೀಡಿದಳು. ವೈದ್ಯರು ನಗುತ್ತಾ “ಇದೋ ನೋಡು…ಮೊದಲಿನ ವೈದ್ಯರು ಆಪರೇಷನ್ ಮಾಡಿ ತೆಗೆಯಬೇಕು ಎಂದು ಹೇಳಿದ್ದ ಗೆಡ್ಡೆ”….ಎಂದು ನಗುತ್ತಾ  ಸುಮತಿಯ ಪಕ್ಕ ಮಗುವನ್ನು ಮಲಗಿಸಿ, ಅವಳ ಹಣೆ ನೇವರಿಸುತ್ತಾ ಹೇಳಿದರು. ಇಲ್ಲಿಯವರೆಗೂ ತಾವು ಗಂಡೆಂದು ತಿಳಿದಿದ್ದ ಮಗುವು ಹೆಣ್ಣಾಗಿ ಜನಿಸಿದ್ದು ಅರಿತಾಗ ಸುಮತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ನಸುನಗುತ್ತಾ ಅಕ್ಕರೆ ತುಂಬಿದ ಮನದಿಂದ ಮಗುವನ್ನು ಎದೆಗೆ ಅಪ್ಪಿಕೊಂಡು ಹಣೆಗೆ ಹೂಮುತ್ತನ್ನು ಇಟ್ಟಳು.

ಆ ಪುಟ್ಟ ಮಗುವು ಬೆಚ್ಚಗಿನ ಅಪ್ಪುಗೆಯಲ್ಲಿ ಮಿಸುಕಾಡದೇ, ಅಮ್ಮನ ಬೆರಳನ್ನು ಭದ್ರವಾಗಿ ಹಿಡಿದು ಕೊಂಡು ಕಣ್ಣು ಮುಚ್ಚಿ ಮಲಗಿತು. ಸುಮತಿಗೂ ಆಯಾಸವಾಗಿದ್ದ ಕಾರಣ ಮಗುವನ್ನು ಅಪ್ಪಿ ನಿದ್ರಿಸಿದಳು. ನಡು ನಡುವೆ ಮಗುವು ಹಾಲಿಗಾಗಿ ಅತ್ತಾಗ ಎದ್ದು ಹಾಲೂಡಿಸಿ ಬೆನ್ನು ತಟ್ಟಿ ಮಲಗಿಸಿದಳು. ಸಂಜೆಯಾಗುತ್ತಾ ಬಂತು. ಕೆಲಸಕ್ಕೆ ಹೋಗಿದ್ದ ವೇಲಾಯುಧನ್ ಮನೆಗೆ ಬಂದು ಮಗಳನ್ನು ಜೊತೆಗೆ ಕರೆದುಕೊಂಡು ಪತ್ನಿ ಹಾಗೂ ತನ್ನ ಕುಲವನ್ನು ಬೆಳಗುವ ಪುತ್ರನನ್ನು ನೋಡುವ ಸಂಭ್ರಮದಿಂದ ಆತುರಾತುರವಾಗಿ ಆಸ್ಪತ್ರೆಯ ವಾರ್ಡ್ ಬಳಿ ಬಂದು ಇನ್ನೇನು ಒಳಗೆ ಹೋಗಿ ಪತ್ನಿ ಹಾಗೂ ನವಜಾತ ಶಿಶುವನ್ನು ನೋಡಲೆಂದು ವಾರ್ಡ್ ಒಳಗೆ ಅಡಿಯಿಟ್ಟರು. ಕೂಡಲೇ ಅಲ್ಲಿಯೇ ಮೇಜಿನ ಬಳಿ ಕುಳಿತಿದ್ದ ನರ್ಸ್ ಅವರನ್ನು ತಡೆದರು. “ಯಾರನ್ನೂ ಈಗ ಒಳಗೆ ಬಿಡುವುದಿಲ್ಲ….ವಾರ್ಡ್ ಶುದ್ಧ ಮಾಡುವ ಕೆಲಸಗಳು ನಡೆಯುತ್ತಿವೆ….ಸ್ವಲ್ಪ ಸಮಯದ ಬಳಿಕ ನೀವು ಬನ್ನಿ”… ಎಂದು ಹೇಳಿದರು. ಆದರೂ ವೇಲಾಯುಧನ್ ರಿಗೆ ಮಗು ಯಾವುದು ಎಂದು ತಿಳಿಯುವ ಆತುರ!! ಹಾಗಾಗಿ… “ಸಿಸ್ಟರ್ …ನಿನ್ನೆ ಸಂಜೆ ಇಲ್ಲಿ ದಾಖಲಾದ  ನನ್ನ ಪತ್ನಿ ಸುಮತಿಗೆ ಪ್ರಸವವಾಯಿತೇ? …ಯಾವ ಮಗು ಹುಟ್ಟಿದೆ? ದಯವಿಟ್ಟು ತಿಳಿಸಿ ಎಂದು ವಿನಂತಿಸಿಕೊಂಡರು. 

ವೇಲಾಯುಧನ್ ರವರ ಕಾತರದ ನುಡಿ ಕೇಳಿ, ನರ್ಸ್ ನಸುನಗುತ್ತಾ, ನಿಮ್ಮ ಪತ್ನಿ ರಾತ್ರಿಯೆಲ್ಲಾ ನೋವು ಅನುಭವಿಸಿ, ಬೆಳಗ್ಗೆ ಹತ್ತೂವರೆ ಹೊತ್ತಿಗೆ ಅವರಿಗೆ ಸುಖ ಪ್ರಸವವಾಗಿದೆ…. ತಾಯಿ ಮಗು ಇಬ್ಬರೂ ಆರೋಗ್ಯಪೂರ್ಣವಾಗಿ ಹಾಗೂ ಕ್ಷೇಮವಾಗಿದ್ದಾರೆ. ಎಂದಾಗ ವೇಲಾಯುಧನ್ ಮತ್ತೊಮ್ಮೆ…”ಸಿಸ್ಟರ್ ಮಗು ಯಾವುದೆಂದು ನಾನು ತಿಳಿದುಕೊಳ್ಳಬಹುದೇ”… ಎಂದರು.

ಅವರ ಜಿಜ್ಞಾಸೆಯನ್ನು ಅರಿತ ನರ್ಸ್ ಮುಗುಳುನಗೆಯೊಂದಿಗೆ ವೇಲಾಯುಧನ್ ರವರ ಬಳಿ ನಿಂತಿದ್ದ ಪುಟ್ಟ ಹುಡುಗಿಯ ತಲೆಯನ್ನು ನೇವರಿಸುತ್ತಾ…. “ನಿಮ್ಮ ಪತ್ನಿಯು ಇವಳಂತೆಯೇ ಸುಂದರವಾದ ಪುತ್ರಿಗೆ ಜನ್ಮ ನೀಡಿದ್ದಾಳೆ”… ಎಂದರು. ನರ್ಸ್ ಹೇಳಿದ ಸುದ್ದಿಯನ್ನು ಕೇಳಿದ ವೇಲಾಯುಧನ್ ಮುಖವು ವಿವರ್ಣವಾಯಿತು. ಹುಬ್ಬು ಗಂಟಿಕ್ಕಿ ಮತ್ತೊಮ್ಮೆ …”ಏನು? ಹೆಣ್ಣುಮಗುವೆ!! ಎಂದು ಅಚ್ಚರಿಯಿಂದ ಕೇಳಿದರು. ವೇಲಾಯುಧನ್ ಕೇಳಿದ ಪ್ರಶ್ನೆಗೆ ಹೌದು ಎನ್ನುವಂತೆ ತಲೆಯಾಡಿಸಿದರು ನರ್ಸ್. 

ಕೂಡಲೇ ಕೈಯಲ್ಲಿದ್ದ ಬಟ್ಟೆಯ ಚೀಲವನ್ನು ನರ್ಸ್ ಕೈಗೆ ಕೊಟ್ಟು, ಸುಮತಿಗೆ ಕೊಡುವಂತೆ ಹೇಳಿ ಒಂದು ಕ್ಷಣವೂ ಅಲ್ಲಿ ನಿಲ್ಲದೇ ಮಗಳ ಕೈ ಹಿಡಿದು ಎಳೆದುಕೊಂಡು ವೇಲಾಯುಧನ್ ಆಸ್ಪತ್ರೆಯ ಆವರಣದಿಂದ ಹೊರ ನಡೆದರು….”ಅಪ್ಪಾ ಅಮ್ಮನನ್ನು ಮತ್ತು ಪಾಪುವನ್ನು ನೋಡಿಕೊಂಡು ಹೋಗೋಣ”…ಎಂದು ಹೇಳುತ್ತಾ ಆ ಏಳು ವಯಸ್ಸಿನ ಪುಟ್ಟ ಪೋರಿ ಅಪ್ಪನ ಕೈ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಬಿಗಿಯಾಗಿ ಮಗಳ ಕೈಯನ್ನು ಹಿಡಿದು ಆಸ್ಪತ್ರೆಯಿಂದ ಹೊರ ಬಂದು ಮನೆಯ ಕಡೆಗೆ ಹೆಜ್ಜೆ ಹಾಕಿದರು. ನಡೆಯುವಾಗ ದಾರಿಯುದ್ದಕ್ಕೂ ಅಪ್ಪನನ್ನು ಕೂಗುತ್ತಾ, ಅಮ್ಮ ಹಾಗೂ ಪುಟ್ಟ ಪಾಪುವನ್ನೂ ನೋಡಿಕೊಂಡು ಬರೋಣ ಎಂದು ಮಗಳು ಗೋಗರೆತ್ತಿದ್ದರೂ ಕೇಳಿಸಿಕೊಳ್ಳದವರಂತೆ ಮೌನವಾಗಿಯೇ ಇದ್ದರು ವೇಲಾಯುಧನ್. ವಾರ್ಡ್ ನಲ್ಲಿ ಮಲಗಿದ್ದ ಸುಮತಿಯು ಪತಿ ಹಾಗೂ ನರ್ಸ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದಳು. ಪತಿ ಈಗ ಬರಬಹುದು. ತನ್ನನ್ನು ಮತ್ತು ಮಗುವನ್ನು ನೋಡಬಹುದು ಎಂದು ಆಸೆಯಿಂದ ಕಾಯುತ್ತಿದ್ದಳು. ಆದರೂ ಪತಿಯು ತನ್ನನ್ನು ಇಲ್ಲಿ ದಾಖಲಿಸಿ ಹೋಗುವಾಗ ಹೇಳಿದ ಮಾತುಗಳನ್ನು ನೆನೆದು ಅವಳ ಎದೆ ಡವಡವ ಎಂದು ಹೊಡೆದುಕೊಳ್ಳಲು ಪ್ರಾರಂಭಿಸಿತು. ಅವ್ಯಕ್ತವಾದ ಅಳುಕು ಅವಳ ಮನವನ್ನು ಆವರಿಸಿದಾಗ, ಏನೂ ಅರಿಯದಂತೆ ನಿದ್ರಿಸುತ್ತಿದ್ದ ಮುದ್ದಾದ ಮಗಳನ್ನು ಬಿಗಿಯಾಗಿ ಎದೆಗೆ ಅವಿಚಿಕೊಂಡಳು ಸುಮತಿ. ಅವಳ ಕಣ್ಣಿಂದ ತೊಟ್ಟಿಕ್ಕಿದ  ನೀರು ನವಜಾತ ಶಿಶುವಿನ ಕೆನ್ನೆಯನ್ನು ತೋಯಿಸಿತು.


About The Author

Leave a Reply

You cannot copy content of this page

Scroll to Top