ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಪುಸ್ತಕ ಪ್ರಕಾಶನದಿಂದ ಹೊರತಂದ ಮೂರು ಪ್ರಮುಖ ಕಥಾಸಂಕಲನಗಳೆಂದರೆ ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಪೀಸ್ ಮತ್ತು ಕಿರಗೂರಿನ ಗಯ್ಯಾಳಿಗಳು. ಈ ಕಥಾ ಸಂಕಲನಗಳಲ್ಲಿ ಹದಿನೇಳು ಕಥೆಗಳಿವೆ. ಅಬಚೂರಿನ ಪೋಸ್ಟಾಫಿಸ್ ಕಥಾ ಸಂಕಲನದಲ್ಲಿರುವ ಅಬಚೂರಿನ ಪೋಸ್ಟಾಫೀಸ್, ತಬರನಕಥೆ, ಕುಬಿ ಮತ್ತು ಇಮಾಲ ಚಲನಚಿತ್ರವಾಗಿ ಜನಪ್ರಿಯಗೊಂಡಿದ್ದೆ ಅಲ್ಲದೆ ರಾಜ್ಯ, ರಾಷ್ಟ್ರ ಮಟ್ಟದ ಪುರಸ್ಕಾರಕ್ಕೂ ಪಾತ್ರವಾಗಿವೆ. ಇನ್ನೂ ‘ಕಿರಗೂರಿನ ಗಯ್ಯಾಳಿಗಳು’ ಕಥಾ ಸಂಕಲನದಲ್ಲಿರುವ ‘ಮಾಯಾಮೃಗ’ ಆ 4 ವರ್ಷದ ಭಾರತೀಯ ಕಥಾ ಸಂದರ್ಭದ 10 ಶ್ರೇಷ್ಠಕಥೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಕಥಾ ಪ್ರಶಸ್ತಿಯನ್ನು ಪಡೆದಿದೆ.
ಅಬಚೂರಿನ ಪೋಸ್ಟಾಫೀಸ್ ಕಥಾಸಂಕಲನದಲ್ಲಿರುವ ‘ಅವನತಿ’ ನನ್ನನ್ನು ಗಾಢವಾಗಿ ತಟ್ಟಿದ ಕಥೆ ಜ್ಞಾನಪೀಠಪ್ರಶಸ್ತಿ ವಿಜೇತ ಲೇಖಕ ಯು.ಆರ್. ಅನಂತಮೂರ್ತಿಯವರು ಜಗತ್ತಿನ ಶ್ರೇಷ್ಠ ಕಥೆಗಳಲ್ಲೊಂದು ಎಂದು ಈ ಕಥೆಯನ್ನು ಗುರುತಿಸಿದ್ದಾರೆ. ಅಸಾಮಾನ್ಯ ಕೌಶಲ್ಯ, ಕಲೆಗಾರಿಕೆಯನ್ನು ಹೊಂದಿದ ಸೂರಾಚಾರಿ ಆಧುನಿಕ ಸಮಾಜದಲ್ಲಿ  ತನ್ನ ಕಲಾವಂತಿಕೆಯನ್ನು ಬಳಸಿಕೊಳ್ಳಲಾರದೆ ತನಗೆ ಉಪಯೋಗಕ್ಕೆ ಬಾರದ ಹತ್ತು ಹಲವು ಉದ್ಯೋಗ ಹಿಡಿದು  ಅವನತಿಯತ್ತ ಸಾಗುವುದರ ಜೊತೆಗೆ ಅಪೂರ್ವ ಸುಂದರಿ ಗೌರಿಯ ಸುಂದರಕಾಯವನ್ನು ಸುಟ್ಟು ಹಾಳುಮಾಡುವ ಮಟ್ಟಕ್ಕೆ ಇಳಿಯುವ ದುರಂತವನ್ನು ‘ಅವನತಿ’ ಕಥೆಯು ಚಿತ್ರಿಸುತ್ತದೆ.
ಇಸ್ಲಾಪುರದ ವಾಸಿ ಸೂರಾಚಾರಿಯ ಮೂಲಕಸುಬು ಕಲ್ಲಿನ ಕತ್ತನೆಯ ಕೆಲಸ. ಹಳೇಬೀಡಿನ ಮೂಲವಾಸಿಯಾಗಿದ್ದ ಆತ ಇಸ್ಲಾಪರಕ್ಕೆ ಬರುವ ಮುಂಚೆ ಮಹಾನ್ ಕಲಾವಿದನಾಗಿದ್ದ. ಆತ ಶ್ರದ್ಧೆಯಿಂದ ತನ್ನ ಕೆಲಸ ನಿರ್ವಹಿಸುತ್ತಿದ್ದ. ಮಲೆಸೀಮೆಗೆ ಬಂದನಂತರ ದೇವಸ್ಥಾನದ ಕಂಭ, ದೇವರ ವಿಗ್ರಹಗಳ ಕೆಲಸ ಸಿಗದೆ ಮರದ ಮಾರಿಗೊಂಬೆಗಳನ್ನು ಮಾಡಿಕೊಡುವ ಕೆಲಸಕ್ಕೆ ಇಳಿಯುತ್ತಾನೆ. ಆ ಗೊಂಬೆಗಳ ಪ್ರಮಾಣಬದ್ಧ ನಿಲುವು, ಮುಖದ ಅಭಿವ್ಯಕ್ತಿ, ಸಮಪ್ರಮಾಣದ ಕುಚಗಳು, ಕರಾರುವಾಕ್ಕಾದ ಭಂಗಿಯನ್ನು ಕಂಡು “ನಿಮ್ಮ ಬೊಂಬೆ ನೋಡಿದರೆ ಮಾರಿ ಜಪ್ತಿಗೆ ಬರೋದೆ ಇಲ್ಲ !” ಎಂದು ವರ್ಣಿಸಲು ಪ್ರಾರಂಭಿಸಿದಾಗ ಸೂರಾಚಾರಿ ಬೇರೆ ದಾರಿಕಾಣದೆ ಕೊಕ್ಕರೆ ಮೂಗು, ಬಿಡುಗಣ್ಣಿನ ಕಿಸುಬಾಯಿಯ ಮಡಕೆಮಾಲೆಗಳ ಮಾರಿಗೊಂಬೆಗಳನ್ನು ಮಾಡಿಕೊಡತೊಡಗುತ್ತಾನೆ. ಜೀವನೋಪಾಯಕ್ಕಾಗಿ ಇದೂ ಸಾಲದೆ ಮಂತ್ರ, ತಂತ್ರ, ತಾಯಿತ ಕೊಡುವುದು, ಭತ್ತದ ವ್ಯಾಪಾರ, ಎತ್ತಿನ ವ್ಯಾಪಾರ ಮುಂತಾಗಿ ಅರ್ಥಹೀನವಾಗಿ ಅಸಂಬದ್ಧವಾದ ಯಾವು ಯಾವುವೋ ಕಸುಬುಗಳನ್ನು ಮಾಡತೊಡಗುತ್ತಾನೆ. ಈ ವ್ಯವಹಾರದಿಂದ ಒಂದೇ ಕಾಸಿನ ಲಾಭ ಇರದಿದ್ದರೂ ಸುಮ್ಮನೆ ಕಾಲ ಕಳೆಯಲೆಂದೇ ಸೂರಾಚಾರಿ ಇಷ್ಟನ್ನೆಲ್ಲ ಹಚ್ಚಿಕೊಂಡು ಲಾಟರಿ ಹೊಡಯುತ್ತಿರುತ್ತಾನೆ.
ಇತ್ತಾವಾರದ ಸುಬ್ಬಯ್ಯನ ಹೆಂಡತಿ ಗೌರಿ ಸೌಂದರ್ಯದಲ್ಲಿ ಸಕಲ ಶಿಲ್ಪಶಾಸ್ತ್ರಗಳ ಲಕ್ಷಣಗಳ ಅವತಾರದಂತೆ ಆಶ್ಚರ್ಯದ್ಭುತವಾಗಿದ್ದಳು. ಆಕೆಯ ನಡೆ, ಚರ್ಯೆ, ನಿಲ್ಲುವ ನಡೆಯುವ ಭಂಗಿ ಇವುಗಳ ವಿನ್ಯಾಸವಂತೂ ಸೌಂದರ್ಯವೇ ಛಂದೋಬದ್ಧವಾದಂತೆ ಕಾಣುತ್ತಿತ್ತು. ತನ್ನ ಸೌಂದರ್ಯದ ಬಗ್ಗೆ ಆಕೆಗಿದ್ದ ಅಸ್ಪಷ್ಟಪ್ರಜ್ಞೆಯೊಂದನ್ನು  ಬಿಟ್ಟರೆ ಬೇರಾರಿಗೂ ಅತ್ತ  ಗಮನ ಹೋದಂತಿರಲಿಲ್ಲ. ಅವಳು ಸುಂದರಿ  ಎಂದು ಕ್ಷೀಣವಾಗಿ ಅನಿಸಿದ ಕೆಲವರು ಅವಳನ್ನು ಸಂದೇಹದ ಕಣ್ಣಿನಿಂದ ಕಾಣುವವರು. ಆಕೆ ಸುಬ್ಬಯ್ಯನನ್ನು ಮದುವೆಯಾದ ನಾಲ್ಕು ವರ್ಷದಲ್ಲಿ ಮೂರು ಮಕ್ಕಳು ಹುಟ್ಟಿ ಕೆಲವೇ ವಾರಗಳಲ್ಲಿ ಅವು ತೀರಿಕೊಂಡವು. “ಸುಬ್ಬಯ್ಯನಿಗೆ ಏನಾದರೂ ಒಳರೋಗ, ದೋಸ ಉಂಟಾ”? ಎಂಬ ಈರೇಗೌಡನ ಮಾತನ್ನು ಕೇಳಿ ಹಲ್ಲು ಕಡಿದಿದ್ದೆ ಅಲ್ಲದೆ ಚಿಂತಿತನಾಗಿದ್ದಾನೆ.


ಸೂರಾಚಾರಿ ಈರೇಗೌಡನೊಂದಿಗೆ ಎತ್ತಿನ ಖರೀದಿಗಾಗಿ ಸುಬ್ಬಯ್ಯನ ಮನೆಗೆ ಬಂದಿದ್ದಾನೆ. ಸುಬ್ಬಯ್ಯನ ಚಿಕ್ಕಪ್ಪನ ಕಣ್ಣಿಗೆ ಈಚಲಮುಳ್ಳು ಹೊಡೆದು ಎಡಕಣ್ಣಿನ ಕಿಸುರುನೀರು ಸೋರುತ್ತಿದೆ. ಇದಕ್ಕೆ ಸೂರಾಚಾರಿ ಒಣಶುಂಠಿ ಸುಟ್ಟು ಭಸ್ಮಮಾಡಿ ಎದೆಹಾಲಿಗೆ ಬೆರಸಿ ಹಾಕಲು ಸೂಚಿಸಲಾಗಿ ಆತ ಸುಬ್ಬಯ್ಯನ ಹೆಂಗ್ಸಿಗೆ ಹೇಳಿ ‘ಒಂದು ವಳಲೇಲಿ ಈಟು ಹಾಲು ಇಸ್ಕೊಂಡು ಬರಲು’ ಗೌರಿಯ ಬಳಿಗೆ ಅಲ್ಲಿದ್ದ ಹುಡುಗ ವಿಶ್ವನಾಥನನ್ನು ಅಟ್ಟುತ್ತಾನೆ.
ಮುಂದೆ ಸುಬ್ಬಯ್ಯ ಹುಟ್ಟಿದ ಮೂರು ಮಕ್ಕಳು ಕೆಲದಿನ ಇದ್ದು ಸತ್ತ ವಿಷಯ ತಿಳಿಸಿದಾಗ ಸೂರಾಚಾರಿ ಇದು  ‘ಮಲೆ ದೋಸಾನೆ’ ಎಂಬ ತೀರ್ಮಾನಕ್ಕೆ ಬರುತ್ತಾನೆ. ‘ಮಲೇಲಿ ಮೇಲುಗಡೆ ಒಂದು ನೀಲಿ ನರ ಇರ್ತದೆ. ಅದರೊಳಗಿರ್ತದೆ. ನೋಡು ಹುಳ. ಅರಿಶಿನದ ಕೊಂಬಿನ ಕೆಂಡಾ ಮಾಡಿ ಅದನ್ನು ಸುಟ್ಟು ತಗೀಬೇಕು. ಇಲ್ಲದಿದ್ದರೆ ಒಂದಲ್ಲಾ ಮೂರಲ್ಲಾ ನೂರು ಮಕ್ಕಳಾದರೂ ಒಂದು ಉಳಿಯಕಿಲ್ಲ’ ಎನ್ನುತ್ತಾನೆ ಸೂರಾಚಾರಿ.
“ನೋಡಾನ, ಈಗೇನಾದ್ದು, ಇನ್ನೊಂದು ಮೊಗ ಆಗಲಿ, ಆಮೇಲೂ ತೊಂದರೆ ಕಂಡರೆ ಸೂರಾಚಾರ್ರಿದ್ದರಲ್ಲ” ಎಂದು ಇಷ್ಟು ಹೊತ್ತು ತೆಪ್ಪನಿದ್ದ ಈರೇಗೌಡ ತಟ್ಟನೆ ಮೈ ತಿಳಿದವನಂತೆ ಮಾತನಾಡಿದ.
“ನೋಡಾನಂದರೆ ಇನ್ನೆಂತ ನೋಡದು. ಈಗಾಗಲೇ ಮೂರು ಹೊದ್ವು. ಬೇಗ ಅದಕ್ಕೇನಾದರೂ ಔಷಧಿ ಮಾಡದಿದ್ದರೆ ನಾನೇನು ಮಕ್ಕಳ ಮಾರೆ ನೋಡ ಹಂಗಿಲ್ಲ. ಸತ್ತರೆ ಹಾಲು ತುಪ್ಪ ಇಲ್ಲ” ಎಂದು ಸೂರಾಚಾರ್ರ ಕಡೆ  ಆರ್ತದೃಷ್ಠಿ ಬೀರಿದ ಸುಬ್ಬಯ್ಯ.
ಸಿಕ್ಕಬಿದ್ದ ಕೂದಲಿನಲ್ಲಿ ಓಡಾಡುವ ಬಾಚಣಿಗೆಯಂತೆ ಕರ್ಮಜಾಲದ ಬಾಗಿಲಿಲ್ಲದ ಕೋಣೆಯೋಳಗೆ ಬಿದ್ದಾಂತಾದ ಸೂರಾಚಾರಿ ಸುಬ್ಬಯ್ಯನ ಅಂಗಲಾಚುವಿಕೆಯನ್ನು ಕಂಡು “ ನಾಳಿದ್ದಿನ ಅಮಾಸೆ ಕಳಕುಂಡು ಹೆಂಗ್ಸು ಕರಕೊಂಡು ಬಾ. ಏನಾರು ಒಂದು ಮಾಡಾನ” ಎಂದು ಹೇಳುತ್ತಾನೆ. ಇಲ್ಲಿಗೆ ಕಥೆ ಮುಗಿಯುತ್ತದೆ.
ನೈಪುಣ್ಯತೆ ಹೊಂದಿದ ಅದ್ಭುತಕಲಾವಿದ ಅವಕಾಶವಂಚಿತನಾಗಿ ಆ ಪರಿಸರಕ್ಕೆ ತಕ್ಕ ಅಸಂಬದ್ಧ ಜೀವನ ನಡೆಸಿ ಸುಂದರ ವಿಗ್ರಹಗಳನ್ನು ವಿಕೃತಿಗೊಳಿಸುವುದರ ಜೊತೆಗೆ ಬರುಬರುತ್ತಾ ಗೌರಿಯಂತಹ ಸುಂದರಕಾಯರು  ವಿಕೃತಗೊಳ್ಳಲಾರಂಭಿಸುತ್ತಾರೆ. ಆಸಕ್ತಿ ಅಭಿರುಚಿ ಇರುವ ಕ್ಷೇತ್ರದಲ್ಲಿ ಅವಕಾಶಗಳ ಕೊರತೆ. ತನಗೆ ಆಸಕ್ತಿಯಿಲ್ಲದ ಕ್ಷೇತ್ರಗಳಲ್ಲಿ ಇದ್ದು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾರದೆ ಏಗುವ, ತನ್ಮೂಲಕ ಆ ಕ್ಷೇತ್ರಕ್ಕೂ ನ್ಯಾಯಸಲ್ಲಿಸದ ಅನೇಕರ ಜೀವನವನ್ನು ಕಥೆ ಸಾಂಕೇತಿಕಾಗಿ ಬಿಂಬಿಸುತ್ತದೆ. ಓದುತ್ತಾ ಓದುತ್ತಾ ಹತ್ತು ಹಲವು ಚಿಂತನೆಗಳಿಗೆ ದಾರಿ ಮಾಡಿಕೊಡುವ ‘ಅವನತಿ’ ನಿಜಕ್ಕೂ ಒಂದು ಶ್ರೇಷ್ಠ ಕಥೆ.
ತೇಜಸ್ವಿಯವರು  ಬದುಕಿದ್ದರೆ ಸೆಪ್ಟೆಂಬರ್ 8ಕ್ಕೆ (ಜನನ ಸೆ. 8-1938) ಅವರಿಗೆ 85 ವರ್ಷ ತುಂಬುತ್ತಿತ್ತು. ತಾವು ಅಂದುಕೊಂಡಂತೆ ಬದುಕಿ ತಮ್ಮ ಕೃತಿಗಳ ಮೂಲಕ ಅಪಾರ ಓದುಗರನ್ನು ಸೃಷ್ಠಿಸಿಹೋದ ಅವರ ಕೃತಿಗಳನ್ನು ಓದುತ್ತಾ ಪರಿಸರ ಪ್ರೇಮಿ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳಸಿಕೊಳ್ಳುವುದು  ನಾವು ಅವರಿಗೆ ಸಲ್ಲಿಸುವ ಕೃತಜ್ಞತೆ.

——————————–

2 thoughts on “ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್

  1. ಸೊಗಸಾದ ವಿಮರ್ಶೆ ಸರ್, ತೇಜಸ್ವಿ ಅವರಂತ ಅದ್ಭುತ ಪ್ರಕೃತಿ ಪ್ರೇಮಿಗೆ ನಮನ ಸಲ್ಲಿಸುವುದೆಂದರೆ ಅವರ ಪುಸ್ತಕ ಓಡುವುದೇ ಆಗಿದೆ

Leave a Reply

Back To Top