ಮಾಲಾ ಹೆಗಡೆ ಅವರ ಕವಿತೆ- ಅಂತರಂಗ

ಅಂತರಂಗದಲಿ ಕೋಟಿ
ಕನಸುಗಳ ಕಟ್ಟು,
ಬಳಿ ಬಂದು ಬಿಚ್ಚಿ
ಕೇಳುವವರಾರುಂಟು?
ಹೇಳಲಿಚ್ಛಿಸಿ ಜೀವ ಕಾಯುವ
ದಿನಗಳೆಷ್ಟು,
ಅರಿತ ಸ್ಪಂದನೆಯಲ್ಲಿಹುದು
ನಿಜವಾದ ನಂಟು.

ತೋರಿಕೆಯ ಸೋಗಿನಲೆ
ಸಾಗಿವೆ ಸಾವಿರ ಸಂಬಂಧಗಳು,
ಇಂದಾಡಿದ ಮಾತನೇ ನಾಳೆ
ಮರೆಯುವ ನಾಲಿಗೆಗಳು.
ಅವರವರ ಮೂಗ ನೇರಕ್ಕೆ
ಎಲ್ಲಾ ಯೋಚನೆಗಳು,
ಮನವರಿಕೆಯ ಹರಸಾಹಸವೇ
ಬಾಳಿನ ಕ್ಷಣಗಳು.

ನಮ್ಮ ನಂಬಿಕೆಯೆ ನಮಗೆ
ನೋವನುಣಿಸುವುದು,
ಆತ್ಮಸಾಕ್ಷಿ ಒಪ್ಪುವ ನಡೆ
ನೆಮ್ಮದಿ ತರುವುದು.
ಈಶನಾದರೂ ಒಲಿವ ಮನುಷ್ಯನೊಲವು ಗಗನ ಸುಮವಿಹುದು,
ಇಷ್ಟಕ್ಕೆ ಹಲವರು ಕಷ್ಟದಲಿ
ಯಾರನೆಲ್ಲಿ ಅರಸುವುದು?

ತನ್ನವರೆoಬುದೆಲ್ಲ ತರಗೆಲೆಗಳ
ಹಾಗಂತೆ,
ತಿರುಗೋ ಕಾಲಚಕ್ರದಡಿ ನಿನ್ನ
ನೀ ತಿಳಿಯುವೆಯಂತೆ.
ನಗುವಿನೊಳಗೂ ನಂಜಿರುವುದು ಬೂದಿ ಮುಚ್ಚಿದ ಕೆಂಡದಂತೆ,
ಹಗೆಯ ಮಂದ ಹೊಗೆಯಾಡುವುದು ಸಮಯ ಸರಿದಂತೆ.


One thought on “ಮಾಲಾ ಹೆಗಡೆ ಅವರ ಕವಿತೆ- ಅಂತರಂಗ

Leave a Reply

Back To Top