ಪಣಿಯಮ್ಮ – ಎಂ ಕೆ ಇಂದಿರಾ : ಕಾದಂಬರಿಯ ಸಾಮಾಜಿಕ ಮತ್ತು ಮನೋವಿಶ್ಲೇಷಣಾತ್ಮಕ ಲೇಖನ-ಡಾ.ಯಲ್ಲಮ್ಮ ಕೆ

ರಾಮತಾರಕ ಉಪದೇಶ ಕೊಟ್ಟು ಸತ್ತ ನಮ್ಮಪ್ಪ. ಎಲ್ಲ ಪುರಾಣ ಪುಣ್ಯಕಥೆ ತಲೆ ತುಂಬ, ಬಾಯ್ತುಂಬ ಕೂತದೆ ಬನಶಂಕ್ರಿ. ಸುಮ್ನೆ ಅದೊಂದು ಹವ್ಯಾಸ ಅಷ್ಟೇ ಸೈ. ಅಂಥ ಶ್ರೀರಾಮನ ಕೈಹಿಡಿದು ಮಹಾತಾಯಿ  ಸೀತಾದೇವಿ ಯಂತ ಸುಖಪಟ್ಲೇ..? ಉದ್ದಕ್ಕೂ ಆಕೆಗೆ ಕಷ್ಟವೇ. ಹೋಗ್ಲಿ ಆ ಗಂಡನಾರಾ ಸುಖಕೊಟ್ನೆ..? ಪ್ರಪಂಚಕ್ಕೆಲ್ಲಾ ಬೇಕಾದ ದೇವರು ಆ ರಾಮಚಂದ್ರ. ಆಕೇನ ಬೆಂಕಿಗೆ ಹಾರಿಸ್ದ, ಬಸರಿ ಹೆಂಗಸ್ಸು ಅಂತಾನೂ ನೋಡ್ದೆ ಕಾಡಿಗೆ ಕಳಿಸ್ದ. ದ್ರೌಪದಿ ತುಸು ಕಷ್ಟ ಪಟ್ಟಳೇ..? ಹೆತ್ತಯ್ಯ ಅರ್ಜುನನು, ಮುತ್ತಯ್ಯ ದೇವೇಂದ್ರ, ಮತ್ತೆ ಸೋದರಮಾವ ಕೃಷ್ಣನಿರುತಿರಲು ಸತ್ತನೇಕಯ್ಯ ಅಭಿಮನ್ಯು..? ಅಂತ ಕೃಷ್ಣ ಕಾರಣ ಕಥೆ ಓದಿದಾಗ ಹೇಳ್ತಿದ್ದ. ಶ್ರೀಕೃಷ್ಣನ್ನ ಬಗಲಾಗೆ ಇಟ್ಕಂಡು ಪಾಂಡವರು ಪಡಬಾರದ ಪಾಡು ಪಟ್ರು. ಎಂಥ ಪುರಾಣವೋ.., ಪುಣ್ಯಕಥೆಯೋ..? ಅಂತೂ ಮಾಡೋಕೆ ಕಸುಬಿಲ್ಲದೋರು ಬರೆದಿಟ್ಟು, ನಮ್ಮಂಥ ಸೋಮಾರಿಗಳು ಅದನ್ನ ನಂಬೋದೂ ಸೈ.


ರೇಣುಕೆಯು ನದಿಯ ನೀರಿನಲ್ಲಿ ಎದರು ತೀರದಲ್ಲಿ ಕುಳಿತ ಸಂನ್ಯಾಸಿಯ ಮುಖ ನೋಡಿದ ಮಾತ್ರದಿಂದ ಅವಳ ಮರಳ ಕುಂಭ ಒಡೆದು ಹೋಯಿತಂತೆ ಅದಕ್ಕೆ ಅವಳ ಶಿರಚ್ಛೇದ. ತನ್ನ ಗಂಡನ ರೂಪದಲ್ಲಿ ಬಂದ ದೇವೇಂದ್ರನನ್ನು ಕೂಡಿದ ಮಾತ್ರದಿಂದ ನಿರಪರಾಧಿಯಾದ ಅವಳು ಎಷ್ಟೋ ವರ್ಷಗಳ ಕಾಲ ಕಲ್ಲಾಗಿ ಬಿದ್ದಳು ಅಹಲ್ಯೆ, ಗಂಡಸರು ಸಾವಿರ ಹೆಂಗಸರನ್ನು ಕೂಡಿದರೂ ಅವರು ಅಗ್ನಿಯಂತೆ ಶುದ್ದರಂತೆ..! ಏನು ವಿಚಿತ್ರ ಸಂಪ್ರದಾಯ ನಮ್ಮದು..? ಗಂಡಸು ಹೊಲತಿಯನ್ನು ಮುಟ್ಟಿ ಬಂದರೂ ಸ್ನಾನ ಮಾಡಿ, ಜನಿವಾರ ಬದಲಿಸಿದರೆ ಶುದ್ದ. ಹೆಂಗಸು ಅಪ್ಪಿತಪ್ಪಿ ಪರ ಪುರುಷನನ್ನು ನೋಡಿದರೆ ಆಕೆ ಕುಲಟೆ..! ಭಗವಂತ ಏನು ನಿನ್ನ ವಿಚಿತ್ರ ಲೀಲೆ..? ಶೌಚ ತೊಳೆಯುವ ಎಡಗೈ ಪೂಜೆ ಮಾಡುವಾಗ ಗಂಟೆ ಬಾರಿಸಬೇಕು, ನಮಸ್ಕರಿಸುವಾಗ ಎರಡು ಕೈ ಜೋಡಿಸಬೇಕು, ಅದು ಬಿಟ್ಟರೆ ಬೇರೆ ಯಾವ ಶುಭಕಾರ್ಯಗಳಿಗೂ ಎಡಗೈ ಮೊದಲು ಹಾಕಬಾರದು. ಎಲ್ಲ ಕೆಲಸಗಳಿಗೂ ಎಡಗೈ ನೆರವು ಬೇಕು. ಆದರೆ ಶುಭಕಾರ್ಯಗಳಿಗೆ ಅದು ಮುಂದೆ ಬರಬಾರದು. ಇಂತಹ ಕುರುಡು ಸಂಪ್ರದಾಯಗಳು ನಮ್ಮಲ್ಲಿ ಅಸಂಖ್ಯ ಇವೆ. ಅಪ್ಪ ನೆಟ್ಟ ಆಲದಮರವೆಂದರೆ, ಎಲ್ಲರೂ ಅದಕ್ಕೆ ನೇಣು ಹಾಕಿಕೊಳ್ಳುವರೇ ಹೊರತು ಅದನ್ನು ಬದಲಾಯಿಸಬೇಕೆಂಬ ಬುದ್ಧಿ ಇಲ್ಲವಲ್ಲ.


ಪಣಿಯಮ್ಮ ಅರ್ಥಾತ್ ಅಂಚೆ ಅತ್ತೆ :


ಪಣಿಯಮ್ಮ ಸಂಪ್ರದಾಯದ ಸಂಕೋಲೆಯೊಂದಿಗೆ ಶಾಂತವಾಗಿ ಬೆಳೆದವಳು. ಮನೆಯಲ್ಲಿನ ಹತ್ತಿಪ್ಪತ್ತು ಹೆಣ್ಣುಮಕ್ಕಳ ಪೈಕಿ ಈ ಪಣಿಯಮ್ಮ ಮಾತ್ರ ಆಕಾರದಲ್ಲಿ ಗಿಡ್ಡು, ಸಣ್ಣ ಶರೀರ, ಕೇದಗೆ ಬಣ್ಣ, ಪುಟ್ಟ-ಪುಟ್ಟವಾದ ಕಣ್ಣು, ಮೂಗು, ಬಾಯಿ, ಸ್ವಭಾವವಂತೂ ತೀರಾ ಮೃದು. ಬೆಕ್ಕಿನಂತೆ ಸದ್ದಿಲ್ಲದ ನಡೆ, ಗದ್ದಲವಿಲ್ಲದ ಕೆಲಸ, ಮಾತನಾಡುವ ಭಾಷೆಯೂ ಮೃದು ; ಮಾತಂತೂ ಮತ್ತೂ ಮೆಲು. ಅವಳಿಗೆ ಹಿರಿಯರು ಹೇಳಿದಂತೆ ಕೇಳಬೇಕೆಂಬುದು ಮಾತ್ರ ಗೊತ್ತು. ಪಣಿಯಮ್ಮನ ಮೇಲೆ ಯಾರಿಗೂ, ಯಾವ ವಿಷಯಕ್ಕೂ ಅಸಮಾಧಾನವಿರಲಿಲ್ಲ. ಕಾರಣ ಎಲ್ಲರ ಮರ್ಜಿ ಅನುಸರಿಸಿ ನಡೆಯುವ ಗುಣ ಒಂದು ಆಕೆಯದ್ದು. ಎಳ್ಳಮಾವಾಸ್ಯೆ ಆಕೆಯ ಪಾಲಿಗೆ ದುರ್ದಿನ. ಆಕೆಯ ಇಡೀ ಜನ್ಮವನ್ನು ಸಂನ್ಯಾಸತ್ವಕ್ಕೆ ನೂಕಿದ ದಿನ. ಆಕೆಯ ಜನ್ಮದ ಮೂರು ಕಹಿ ಘಟನೆಗಳು : ಒಂದು ಎಳ್ಳಮಾವಾಸ್ಯೆ ದಿನ ತನ್ನ ಜಡೆ ಕತ್ತರಿಸಲ್ಪಟ್ಟಿದ್ದು ; ಎರಡನೆಯದು ತಾನು ಮೈನೆರೆದ ನಾಲ್ಕನೆಯ ದಿನವೇ ತನ್ನ ತಲೆ ಬೋಳಾದದ್ದು ; ಮೂರನೆ ಯದು ಸುಬ್ಬಿ-ಪುಟ್ಟಾ ಜೋಯಿಸನ ಪ್ರಣಯ ಪ್ರಸಂಗ. ಇವು ಮೂರು ಆಕೆಯನ್ನು ಈ ಕೊಳಚೆ ಪ್ರಪಂಚದಿಂದ ತಪಸ್ವೀ ಜೀವನದ ಕಡೆಗೆ ಒಯ್ದಿದ್ದವು. ಆಕೆಗೆ ಗಂಡನಿಲ್ಲ, ಸಂಸಾರವಿಲ್ಲ, ಬಂಧನವಿಲ್ಲ..! ಸರ್ವರಿಗೂ ಬೇಕಾದ ವ್ಯಕ್ತಿ-ವ್ಯಕ್ತಿತ್ವ. ಅಂಚೆ ಅತ್ತೆ ಬಾಣಂತನ ಮಾಡಿದರೆ ಮಗು-ಬಾಣಂತಿಗೆ ಯಾವ ಕಾಯಿಲೆಯೂ ಬರೋದಿಲ್ಲ, ಮಕ್ಕಳೂ ಪೂರ್ಣಾಯಸ್ಸು ಹಾಕಿಕೊಂಡು ನಿರೋಗಿಯಾಗಿ ಬೆಳೆಯುತ್ತವೆ ಎಂಬುದು ಇಡೀ ಅಂಚೆ ಮನೆತನ, ಸುತ್ತಮುತ್ತಲಿನ ಬಂಧುವರ್ಗಕ್ಕೆಲ್ಲ ಪ್ರತೀತಿಯಾಗಿತ್ತು.


ಪಾಪಿಗೆ ಆಯಸ್ಸು ಹೆಚ್ಚಂತೆ..! ಹೂವು, ಹಣ್ಣು, ಕಾಯಿ ಕೊಡದೇ ಇರೋ ಮರದ ಹಾಂಗೆ ನಾನು..! ನಾ ಇನ್ನು ಎಷ್ಟು ದಿನ ಬದುಕಿದ್ರೂ ಇಷ್ಟೇ ಸೈಯಲ್ಲ. ಚಟ್ಟ ಕಟ್ಟೋಕೂ ಬರದು, ಬುಟ್ಟಿ ಹೆಣೆಯೋಕೂ ಬರದು, ಅಂಥ ಗೆದ್ದ ತಿಂದ್ಯ ಗಳು ನಾನು. ಯಾತಕ್ಕೆ ಪ್ರಯೋಜನ ಹೇಳು..? ಆದ್ರೆ ನಾನಾಗೆ ಪ್ರಾಣ ಕಲಕಳೊದಿಲ್ಲ. ಏಳು ಜನ್ಮದ ಪಾಪನೆಲ್ಲ ಈ ಜನ್ಮದಾಗೆ ಅನುಭವಿಸಿಕೊಂಡೇ ಸಾಯ್ತಿನಿ ಕಣ್ರೇ, ಮತ್ತೆ ನಂಗೆ ಈ ಜನ್ಮ ಬ್ಯಾಡ ಅಂತಿನಿ ನಾನು. ಏನು ಜನ್ಮವೋ, ಜಾಪತ್ತೋ ಅದು ಅದೆಯೋ, ಇಲ್ಲವೋ ಯಾರಿಗ್ಗೊತ್ತು..? ಪರಮಾತ್ಮನಿಗೆ ಪಣಿಯಮ್ಮನ ಹೃದಯಕ್ಕಿಂತ ಪವಿತ್ರವಾದ ಸ್ಥಾನ ಬೇರೆ ಎಲ್ಲೂ ಇರಲಿಲ್ಲವೆಂದು ಕಾಣುತ್ತದೆ. ಆದ್ದರಿಂದ ದಿನಕ್ಕೆ ಎರಡು ಹಣ್ಣು ತಿಂದು, ತಣ್ಣೀರಿನ ಸ್ನಾನ ಮಾಡಿ ಕರ್ಮದಿಂದಲೇ ಶರೀರವನ್ನು ಸವೆಸುತ್ತಿದ್ದ ಪಣಿಯಮ್ಮನ ಹೃದಯದಲ್ಲಿ ಜೀವಾತ್ಮ ಹಾಯಾಗಿ ಕುಳಿತಿದ್ದ. ಆಕೆ ಸಂತೋಷ-ದುಃಖ, ದುಗುಡ-ದುಮ್ಮಾನಗಳ ಸೀಮಾರೇಖೆ ಯಿಂದ ಹೊರಗೆ ಬಂದು ನಿಂತಿದ್ದಳು – ಆಕೆಯನ್ನು ಕರ್ಮಯೋಗಿ ಎನ್ನಬಹುದು. ಮನೆಯಲ್ಲಿ ಯಾರೇ ಜಗಳವಾಡಲೀ, ಯಾವುದು ತನಗೆ ಸಂಬAಧವಲ್ಲದ್ದು, ಕಂಡವರ ಸೇವೆ ಮಾಡಿ ಋಣ ತೀರಿಸಿಕೊಂಡು ಹೋಗಲು ಜನ್ಮವೆತ್ತಿ ಬಂದ ತನಗೆ ಇಲ್ಲದ ಉಸಾಬರಿ ಯಾಕೆ ಅನ್ನುವುದೇ ಆಕೆಯ ತೀರ್ಮಾನ.


ಅಂಚೆ ಮನೆತನ – ರನ್ನರ್   :
ಅಂಚೆ ಮೈಸೂರು ಸಂಸ್ಥಾನಕ್ಕೆ ಕಾಲಿಟ್ಟು ಹಳ್ಳಿಹಳ್ಳಿಗೂ, ಮನೆ-ಮನೆಗೂ ತಲುಪಿಸುವ ಏರ್ಪಾಟು ನಡೆದದ್ದು ೧೮೩೮-೩೯ ರಲ್ಲಿ. ಎಲ್ಲಕಡೆಗೂ ಕುದುರೆ ಗಾಡಿಗಳಲ್ಲಿ ಅಂಚೆ ತಲುಪಿಸುವ ವ್ಯವಸ್ಥೆ, ಇಪ್ಪತ್ತೊಂದು ಮುವತ್ತು ಮೈಲಿಗಳಿ ಗೊಂದರಂತೆ ಕುದುರೆಗಾಡಿಗಳನ್ನು ಇಟ್ಟಿರುತ್ತಿದ್ದರು. ಕುದುರೆ ಮತ್ತು ಸವಾರ ಅದರ ಜೊತೆಗಿರುವ ಮತ್ತೊಬ್ಬ ಪೇದೆ, ಮೂರೂ ಜನಕ್ಕೂ ಟಪಾಲು ಮುಗಿದ ಹಳ್ಳಿಗೆ ವಿಶ್ರಾಂತಿ. ಅಲ್ಲಿ ಸಿದ್ದವಿರುವ ಮತ್ತೊಂದು ಗಾಡಿಗೆ ಆ ಅಂಚೆ ಚೀಲ ರವಾನಿಸಿ ಹೊರಟರಾಯಿತು. ಆ ಗಾಡಿ ತಾಲ್ಲೂಕು ಅಥವ ಜಿಲ್ಲೆ ತಲುಪಿದ ಮೇಲೆ ಟಪಾಲಿನ ಚೀಲದ ಬೀಗದ ಮುದ್ರೆಗೆ ತಮ್ಮಲ್ಲಿರುವ ಬೀಗದಕೈ ಬಳಸಿ ತೆಗೆದು ಹಳ್ಳಿಹಳ್ಳಿಗಳ ಅಂಚೆಯನ್ನು ಬೇರೆ ಮಾಡುವುದು. ಹೀಗೆ ವಾರಕ್ಕೊಮ್ಮೆ ಎರಡು ಬಾರಿ ಪೋಸ್ಟ್ ಬರುವುದು. ಅಷ್ಟರಲ್ಲಿ ಅಂಚೆ ಹಂಚುವವರೆಲ್ಲ ಅಲ್ಲಿ ಹಾಜರಿರಬೇಕು. ಒಬ್ಬೊಬ್ಬರಿಗೆ ಇತ್ತೆಂಬುದೂರಿಂದ ಮೂವತ್ತು ಹಳ್ಳಿಗಳ ಅಂಚೆ ಪಾಲು ಬರುವುದು, ಅಷ್ಟನ್ನೂ ಕಾಲ್ನಡಿಗೆಯಲ್ಲೇ ನಡೆದು ಹಂಚಬೇಕು.  
ಆ ಪೇದೆಗಳಿಗೆ ಆಗಿನ ಸರಕಾರದವರು ಅವರ ಕಾಲಿಗೆ ಮೆಟ್ಟು, ಖಾಕಿ ಪ್ಯಾಂಟು, ಕೋಟು, ಖಾಕಿಯವೇ ಪಗಡಿ ಕೊಡುತ್ತಿದ್ದರು. ಮತ್ತು ಕೈಯಲ್ಲೊಂದು ದಪ್ಪ ಬೀಟೆ ಮರದ ಕೋಲು. ಅದರ ತುದಿಗೆ ಒಂದು ಹಿತ್ತಾಳೆ ಉಂಗುರ. ಅದರೊಳಗೆ ಹತ್ತಿಪ್ಪತ್ತು ಹಿತ್ತಾಳೆ ತಗಡಿನ ವೀಳೆಯದೆಲೆ ಆಕಾರದ ಬಲ್ಲೆಗಳು.ಅಂಚೆಪೇದೆ ತನ್ನ ದಿರಿಸು ಗಳನ್ನು ಧರಿಸಿ ಅಂಚೆ-ಚೀಲ ಹೆಗಲಿಗೇರಿಸಿ, ಕೈಯಲ್ಲಿನ ಕೋಲನ್ನು ಅಡ್ಡವಾಗಿ ಹಿಡಿದು ಝಣಕು ಝಣಕು ಸದ್ದು ಮಾಡುತ್ತ ಹೊರಟನೆಂದರೆ ಊರಿನವರಿಗೆ ಅದನ್ನು ನೋಡುವುದೇ ಒಂದು ಸಂಭ್ರಮ. ಆತನಿಗೆ ಬ್ರಿಟಿಷರು ರನ್ನರ ಎಂದು ನಾಮಕರಣ ಮಾಡಿದ್ದರು. ಆತ ಅಂಚೆಯಿAದ ಹೊರಟು ತಾಲ್ಲೂಕು ದೊರೆಗಳೆನಿಸಿಕೊಂಡಿದ್ದ ಮಾಮಲೇದಾರ ಅಥವ ಅಮಲ್ದಾರರ ಮನೆಯ ಅಂಚೆ ಇದ್ದರೆ ಮೊದಲು ತಲುಪಿಸಿ, ಮುಂದೆ ಓಡಬೇಕು. ನಾಲ್ಕು ದಿನಗಳಲ್ಲಿ ಸರಿ ಸುಮಾರು ಇಪ್ಪತ್ತು ಹಳ್ಳಿಗಳನ್ನಾದರೂ ಸುತ್ತಬೇಕು ಹಳ್ಳಿಯ ಅಂಚೆ ಇದ್ದರೆ ಮಾತ್ರ. ಅವನ ಸಂಬಳವೇನೂ ಕಡಿಮೆಯೇ ತಿಂಗಳಿಗೆ ಎರಡು ರೂಪಾಯಿ..! ಆಗಿನ ಕಾಲಕ್ಕದು ಸಾವಿರವಿದ್ದಂತೆ. ಆಗಿನ ಜನರಿಗಂತೂ ಓದು ಕಡಿಮೆ, ಸಾಮಾನ್ಯವಾಗಿ ಬ್ರಾಹ್ಮಣರೇ ಓದುವುದು, ಅದು ಹೆಚ್ಚೆಂದರೆ ಲೋಯರ್ ಸೆಕೆಂಡರಿ ಡಿಗ್ರಿ ಮುಗಿಸುತ್ತಿದ್ದರು. ಅಮಲ್ದಾರಿಕೆ, ಶೇಕದಾರಿಕೆ ಅವರಿಗೇ ಮೀಸಲು. ಐಗಳ ಮಠದಲ್ಲಿ ಅ,ಆ,ಇ,ಈ ತಿದ್ದಿ ಎ ಕ್ಲಾಸು ಬಿ ಕ್ಲಾಸು ಪಾಸು ಮಾಡಿದವರಿಗೆ ಮಾತ್ರ ಈ ರನ್ನರ್ ಹುದ್ದೆ ಸಿಗುತ್ತಿತ್ತು. ಮಿಕ್ಕವರೆಲ್ಲ ಹೆಬ್ಬೆಟ್ಟಿನವರೇ.
ರನ್ನರ್‌ಗಳ ಕೋಲಿನ ಝಣಕ್ ಸದ್ದು ಮಾಡುತ್ತ ಬಂದನೆAದರೆ ಊರಿಗೆ ಏನೋ ಹೊಸ ವರ್ತಮಾನ ಬಂದಿದೆ ಎಂದು ಅರ್ಥ. ಕುತೂಹಲದಿ ಆತನನ್ನು  ಮುತ್ತಿಕೊಳ್ಳುವರು. ಒಂದು ಹಳ್ಳಿಗೆ ಒಂದು ಪತ್ರ ಬಂದಿದೆ ಎಂದರೆ ಆ ದಿನ ಅಂಚೆ ಪೇದೆಗೆ ಊರಿನ ಪ್ರಮುಖರ ಮನೆಯಲ್ಲಿ ಸ್ನಾನ, ಭೋಜನ, ತಾಂಬೂಲ, ವಿಶ್ರಾಂತಿ. ಅನರಕ್ಷರ ಮನೆ ಯವ ರಲ್ಲಿ ತಾನೇ ಪತ್ರ ಓದಿ ವಿಷಯ ತಿಳಿಸಿ ಮತ್ತದಕ್ಕೆ ಮರುಉತ್ತರವನ್ನೂ ಅವರ ಅಣತಿಯಂತೆ ಬರೆದೊಯ್ಯುತ್ತಿದ್ದ ಪ್ರತಿಯಾಗಿ  ನಂತರ ಪಯಣದಲ್ಲಿ ಪೋಸ್ಟ್ ಚೀಲದಲ್ಲಿ  ಅವರಿಂದ ಬಿಟ್ಟಿ ಸಿಕ್ಕುವ ಸಾಮಾನು-ಸರಂಜಾನುಗಳನ್ನು ತುಂಬಿಕೊಂಡು ಹೊತ್ತೊಯ್ಯುತ್ತಿದ್ದ. ಈ ತೀತಿಯಾಗಿ ರನ್ನರ್ ಆಗಿ ಕೆಲಸ ಮಾಡಿದ ಹೆಬ್ಬಲಿಗೆ ತಮ್ಮಯ್ಯನವರ ಮನೆತನಕ್ಕೆ ಅಂಚೆ ಮನೆತನ ಎಂಬುದು ದೊಡ್ಡ ಬಿರುದಾವಳಿಯೇ ಆಗಿತ್ತು. ಇಂಥ ಮನೆಯಲ್ಲಿ ಹುಟ್ಟಿದವಳು ಪಣಿಯಮ್ಮ.


ಮನೆಯೊಂದು ನಾಲ್ಕು ಬಾಗಿಲು :
ಅಂಚೆಮನೆ ತಮ್ಮಯ್ಯನವರ ದೊಡ್ಮನೆಗೆ ನಾಲ್ಕೂ ದಿಕ್ಕಿಗೂ ಬಾಗಿಲುಗಳಿದ್ದವು. ಒಂದು ಬೀದಿಯ ಬಾಗಿಲು, ಒಂದು ಹಿತ್ತಲ ಬಾಗಿಲು, ತೋಟಕ್ಕೆ ಹೋಗುವ ಬಾಗಿಲೊಂದು, ದನಕರುಗಳನ್ನು ಕೊಟ್ಟಿಗೆಯಿಂದ ಹೊರಕ್ಕೆ ಕಳುಹಿಸುವ ಬಾಗಿಲೊಂದು. ತೋಟಕ್ಕೆ ಹೋಗುವ ಬಾಗಿಲಿನ ಪಕ್ಕದ್ದೇ ಮುಟ್ಟಾದವರ ಕೋಣೆ, ಆ ಕೋಣೆ ಯಾವತ್ತು ತೆರವೇ ಇರುತ್ತಿರಲಿಲ್ಲ. ಒಬ್ಬರು ನೀರು ಹಾಕಿಕೊಳ್ಳುವುದರೊಳಗೆ ಇನ್ನೊಬ್ಬರು ಮುಟ್ಟಾಗುತ್ತಿದ್ದರು.


ಹೆರಿಗೆ ಕ್ವಾಣೆ :
ಹೆರಿಗೆ ಎಂದರೆ..? ಅದೊಂದು ಪುತ್ರ ಕಾಮೇಷ್ಠಿ ಯಾಗವಾಗಿರಲಿಲ್ಲ. ಹೆಂಗಸರು ಬಸುರಿಯಾಗಲೀ, ಕಾಯಿಲೆಯಾಗಲೀ ಬೆಳಗಿನಿಂದ ಸಂಜೆಯತನಕ ಅವರಿಗೆ ಮೈತುಂಬ, ಕೈತುಂಬ ಕೆಲಸವಿದ್ದೇ ಇರುತ್ತಿತ್ತು. ದುಡಿದು ದುಡಿದು ಮೈ ಹಣ್ಣಾಗಿರುತ್ತಿತ್ತು. ಹೆರಿಗೆ ನೋವು ಕಾಣಿಸಿಕೊಂಡಾಗಲೇ ಆಕೆ ಹೆರಿಗೆ ಕೋಣೆಗೆ ಹೋಗಬೇಕು. ಆ ಕೋಣೆಗೆ ಬಾಣಂತಿ ಕೊಣೆಯೆಂದೇ ಹೆಸರು. ಹರಿಗೆ-ಕ್ವಾಣೆ ಎಂದು ಅನ್ನುತ್ತಿದ್ದರು. ಅಲ್ಲಿ ಎಲ್ಲ ಸಿದ್ಧವಿರುತ್ತಿತ್ತು. ಗೋಣಿ ಚೀಲ, ಕಂಬಳಿ, ಕಸ (ಮಾಸ) ಹಾಕಲು ಮಡಿಕೆ-ಕುಡಿಕೆ, ವೀಲ್ಯದೆಲೆ-ಅಡಿಕೆ, ಕಸ್ತೂರಿ, ಬಾಣಂತಿ-ಟೋಪಿ, ಮಗು ಮಲಗಿಸುವ ಮರ ಇತ್ಯಾದಿ..,  
ಕಾಲಸೂಚಿ  ಬಿಗ್ ಬೆನ್ ಗಡಿಯಾರ – ಗಳಿಗೆ ಬಟ್ಟಲು  :
 ಹಗಲು ಹೊತ್ತಾದರೆ ಗೋಡೆಯ ಮೇಲಿನ ಬಿಸಿಲಿನ ಲೆಕ್ಕದಿಂದ ಸರಿಯಾದ  ಗಂಟೆ ಹೇಳುತ್ತಿದ್ದರು. ಮಳೆ ಗಾಲ ಮತ್ತು ರಾತರಿ ವೇಳೆಯಾದರೆ ಈ ಗಳಿಗೆ ಬಟ್ಟಲು  ಜೊತೆಗೆ ಪಂಚಾಂಗವೂ ಬೇಕೇ ಬೇಕು. ಜೋಯಿಸರ ಮನೆಯಲ್ಲಿ ಸಾಮಾನ್ಯವಾಗಿ ಗಳಿಗೆ-ಬಟ್ಟಲು ಇರುತ್ತಿತ್ತು ಅದನ್ನು ನೋಡುವ ಕ್ರಮವೂ ತಿಳಿದಿರುತ್ತಿತ್ತು. ಗಳಿಗೆ-ಬಟ್ಟಲು ನೀರಿನ ಮೇಲೆ ಮುಳುಗಿದ ತಕ್ಷಣ ಅದನ್ನು ಎತ್ತಿ, ನೀರು ಸುರುವಿ ಮತ್ತೆ ನೀರ ಮೇಲೆ ಇಡಬೇಕು. ರಾತ್ರಿ ಮತ್ತು ಹಗಲು ಹನ್ನೆರಡೂವರೆಯು  ಅಭಿಜಿನ್ ಮುಹೂರ್ತ ವಾಗಿರುತ್ತದೆ.  
ಅಳಲೇ ಕಾಯಿ ಪಾಂಡಿತ್ಯ :
ಅಂಚೆ ತಮ್ಮಯ್ಯನವರ ಅಜ್ಜ ಜಾತಕ ನೋಡುವುದರಲ್ಲಿ, ಕವಡೆ ಹಾಕಿ ನಿಮಿತ್ಯ ನೋಡುವುದರಲ್ಲಿ, ಯಂತ್ರ-ಮಂತ್ರಗಳಲ್ಲಿ ಬಹಳ ಗಟ್ಟಿಗರು. ಅವರ ಹಸ್ತಗುಣವೋ ಯೋಗಾಯೋಗವೋ ರೋಗಗಳು ಗುಣವಾಗುತ್ತಿದ್ದವು. ಜೊತೆಗೊಂದಿಷ್ಟು ಅಳಲೇಕಾಯಿ ಪಾಂಡಿತ್ಯ ಬೇರೆ ಇತ್ತು. ಆಸ್ಪತ್ರೆ, ಡಾಕ್ಟರ್, ಮಿಡ್ ವೈಫ್ ಅನ್ನೋ ಹೆಸರುಗಳನ್ನೇ ಅರಿಯರು. ಮನುಷ್ಯರಿಗೆ ರೋಗ-ರುಜಿನಗಳು ಇರುತ್ತಿದ್ದದ್ದೇ ತಾನೇ..? ತಮಗೆ ತಿಳಿದ ನಾಡಿ, ಯುನಾನಿ, ಆರ್ಯುವೇದ, ಹೋಮಿಯೋಪತಿ ಹೀಗೆ ಯಾವುದೋ ಔಷಧಿ ಜೊತೆಗೆ ಯಂತ್ರ-ಮAತ್ರ, ಒಟ್ಟಿನಲ್ಲಿ ಕಾಯಿಲೆ ವಾಸಿಯಾಗುತ್ತಿತ್ತು. ಆಯುಸ್ಸು ಮುಗಿದವರು ಸಾಯುತ್ತಿದ್ದರು. ಗಟ್ಟಿ ಇದ್ದವರು ಹೇಗೋ ಉಳಿದುಕೊಳ್ಳುವರು.


ಶೃಂಗೇರಿ ಶಾರದಾ ಮಠ  :
ಪ್ರತಿ ಊರಿನಲ್ಲೂ, ಪ್ರತಿ ಮನೆಯಲ್ಲೂ ಇಂಥದ್ದೇ ಕೆಲಸಕ್ಕಾಗಿ ಕಾದು ಕುಳಿತಿರುವವರು ಇದ್ದೇ ಇರುತ್ತಾರಲ್ಲ. ಅವರಿಗೆ ಯಾರ್ಯಾರ ಮನೆಯಲ್ಲಿ ಏನೇನು ಹುಳುಕು ಇದೆ ಎಂದು ಆರಿಸಿ ಮೇಲೆತ್ತಿ ಹಿಡಿದು ತಮ್ಮ ಬೆನ್ನು ತಾವೇ ತಟ್ಟಿ ಕೊಳ್ಳುವ ಚಪಲ. ಮಾತು ಎತ್ತಿದರೆ ಬಹಿಷ್ಕಾರ..! ಅಪ್ಪಿ ತಪ್ಪಿ ಬಾಲವಿಧವೆ ಬಸಿರಾದಳೆಂದರೆ..? ಮುಗಿಯಿತು. ಹಾಹಾಕಾರ, ಗದ್ದಲ, ಸಂಪೂರ್ಣ ಅಪರಾಧ ಅವಳದ್ದೇ ಎನ್ನುವ ಅಂತಿಮ ತೀರ್ಮಾನ. ಅರಮನೆ, ಗುರುಮನೆಗಳ ವ್ಯವಹಾರಗಳೇ ಹಾಗೆ..! ಶೃಂಗೇರಿ ಮಠದಿಂದ ಶ್ರೀಶ್ರೀ ಶ್ರೀ ನರಸಿಂಹ ಭಾರತಿ ಸ್ವಾಮಿಗಳು ಪಟ್ಟಕ್ಕೆ ಬಂದ ಕಾಲ.  ಸ್ವಾಮಿಗಳಾದರೂ ಹೇಳಿ-ಕೇಳಿ ಸಂನ್ಯಾಸಿ. ಸದಾ ಈ ವ್ಯಭಿಚಾರದ ಪುರಾಣ ಕೇಳುವುದು ತಮ್ಮ ಬ್ರಹ್ಮಚರ್ಯಕ್ಕೆ ಕುಂದು ಎಂದು ತಿಳಿಯದವರು. ಕಥೆ ಕೇಳಿ ಸನ್ನೆ ಯಿಂದಲೇ ಅದನ್ನು ಮಠದ ಧರ್ಮಾಧಿಕಾರಿಗಳಿಗೆ ವಿಚಾರಣೆಗೆ ವಹಿಸುತ್ತಿದ್ದರು. ಇನ್ನು ಕೇಳಬೇಕೆ..? ತೋಳನಿಗೆ ಕುರಿ ಕಾಯಲು ಬಿಟ್ಟಂತೆ. ಅವರ ಸೊಂಟಕ್ಕೆ ಕೆಲವು ಅಪ್ಪಟ ಬೆಳ್ಳಿಯ ರೂಪಾಯಿಗಳು ಸೇರಿದ ಕೂಡಲೇ ಬಡಪಾಯಿ ಮಡಿ ಹೆಂಗಸಿಗೆ ಬಹಿಷ್ಕಾರ ಬಿದ್ದಂತೆಯೇ. ಮುಂದೆ ಅವಳು ಊರವರ ಬಿಟ್ಟಿ ಸ್ವತ್ತು. ಎಲ್ಲರ ಮನೆಯ ಚಾಕರಿ ಮಾಡಬೇಕು, ಅವರು ಕೊಟ್ಟಿದ್ದನ್ನು ತಿನ್ನಬೇಕು, ಅವಳ ಸಂತಾನ ಮಾಲೇರ ಜಾತಿಗೆ ಸೇರಿದ್ದಾಗುತ್ತಿತ್ತು.


ಪಾಪನಾಶಿನಿ :
ಪರಶುರಾಮ ದೇವರು ಮತ್ತೊಬ್ಬ ಋಷಿಯ ನೆರಳನ್ನು ನೀರಿನಲ್ಲಿ ಕಂಡು ಕಲುಷಿತಳಾದ ರೇಣುಕೆಯ ಶಿರಚ್ಛೇದ ಮಾಡೆಂದು ತಂದೆ ಆಜ್ಞೆ ಮಾಡಿದಾಗ ಹಿಂದುಮುಂದು ನೋಡದೆ ತನ್ನ ಕೊಡಲಿಯಿಂದ ಒಂದೇ ಏಟಿಂದ ತಾಯಿಯನ್ನು ಕೊಂದು ರಕ್ತಲೇಪಿತ ಕೊಡಲಿಯನ್ನು  ತಂದೆಯ ಮುಂದೆ ಹಿಡಿದ ಮಗನ ಶೌರ್ಯಕ್ಕೆ ಮೆಚ್ಚಿದ ತಂದೆ ನಿನಗೆ ಬೇಕಾದ ವರ ಬೇಡು ಎಂದ. ತಾಯಿಯ ಶಿರಚ್ಛೇದವಾದೊಡನೆ ಆಕೆಯ ಪಾಪ ಪರಿಹಾರವಾಯ್ತು. ತಾವು ವರ ನೀಡುವುದಾದರೆ ಮತ್ತೆ ನನಗೆ ನನ್ನ ತಾಯಿಯನ್ನು ಬದುಕಿಸಿಕೊಡಿ ಎಂದು ವರ ಬೇಡಿದ ಈ ಧೀರಪುತ್ರ. ಅಸ್ತು ಎಂದ ತಂದೆ. ರೇಣುಕೆ ಪರಿಶುದ್ಧಳಾಗಿ ಎದ್ದು ಬಂದು ಪತಿಗೆ ನಮಸ್ಕರಿಸಿದಳು. ಆದರೆ ಪರಶುರಾಮ ಮಂಕಾಗಿ ನಿಂತಿದ್ದನ್ನು ಕಂಡು ಜಮದಗ್ನಿ ಕೇಳಿದ : ಯಾಕೆ ಮಗನೇ ಇನ್ನು ಚಿಂತೆ..?  ನಿನ್ನ  ತಾಯಿ  ಬದುಕಿ ಬಂದಳಲ್ಲ..? ಪರಶುರಾಮ ಹೇಳಿದ : ತಾಯಿ ಬದುಕಿ ಬಂದಳು, ನಿಜ. ಆಕೆ ಪವಿತ್ರಳಾದಳು.ಆದರೆ ಮಾತೃಹತ್ಯಾದೋಷದಿಂದ ನಾನು ಕಲುಷಿತನಾಗಿದ್ದೇನೆ. ಈ ಪಾಪದಿಂದ ನನ್ನ ಪೌರುಷವೆಲ್ಲ ನಾಶವಾದೀತು. ಇದಕ್ಕೆ ಪರಿಹಾರ ಹೇಳು. ಜಮದಗ್ನಿ ಪರಶುರಾಮನ ಕೊಡಲಿಯ ಕಡೆ ನೋಡಿದ. ಅದರ ನಾಲ್ಕು ಕಡೆ ಅಂಟಿದ ರಕ್ತ ಒಣಗಿಹೋಗಿತ್ತು. ಆತ ಆಜ್ಞೆಮಾಡಿದ್ದ : ನಿಜ, ಮಗನೇ ನಿನ್ನ ಪರಶು ಕಲುಷಿತವಾಘಿದೆ. ಇದನ್ನು ಸಂಪೂರ್ಣವಾಗಿ ತೊಳೆಯದ ಹೊರತು ಈ ದೋಷ ಪರಿಹಾರ ವಾಗಲಾರದು. ಈಗಲೇ ಹೊರಟು ಪ್ರತಿಯೊಂದು ಕ್ಷೇತ್ರದ  ನದಿ-ನದಿಗಳಲ್ಲೂ ಈ ಕೊಡಲಿಯನ್ನು ಒಂದು ಬಾರಿ ಉಜ್ಜಿ  ತೊಳೆದು ಸ್ನಾನ ಮಾಡಿ ದೇವರ ದರ್ಶನ ಮಾಡಿ ಬಾ. ಕಡೆಯದಾಗಿ ಎಲ್ಲಿ ಪೂರ್ಣರಕ್ತ ತೊಳೆಯುತ್ತದೆ -ಯೋ ಅಲ್ಲಿಗೆ ನಿನ್ನ ಮಾತೃಹತ್ಯಾದೋಷ ಪರಿಹಾರವಾಗುತ್ತದೆ ಎಂದು ಹೇಳಿ ಕಳಿಸಿದ.
ಸರಿ, ಪರಶುರಾಮ ನಮ್ಮ ಕರ್ನಾಟಕದ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮುಳುಗಿ ಎದ್ದ. ಕೊಡಲಿ ತೊಳೆದ. ಕಡೆಗೆ ಕೊಡಲಿಯಲ್ಲಿ ಒಂದು ಎಳ್ಳುಕಾಳಿನಷ್ಟು ಉಳಿದಿತ್ತು ರಕ್ತ. ಅಂದು ಮಾರ್ಗಶಿರ ಬಹುಳ ಅಮಾವಾಸ್ಯೆ. ಸಾಕ್ಷಾತ್ ಶ್ರೀರಾಮದೇವರು ಈಶ್ವರಲಿಂಗವನ್ನು ಪ್ರತಿಷ್ಠಾಪಿಸಿದ ತುಂಗಾತೀರದ ತೀರ್ಥಹಳ್ಳಿಯ ಪಾಪನಾಶಿನಿ ತೀರ್ಥದಲ್ಲಿ ಕೊಡಲಿಯನ್ನು ಅದ್ದಿದ. ಎಳ್ಳುಕಾಳಿನಷ್ಟು ರಕ್ತವೂ ತೊಳೆದು ಪರಿಶುದ್ಧವಾಯಿತು. ಮೊದಲು ಅದಕ್ಕೆ ರಾಮಕುಂಡ ವೆಂದು ಹೆಸರಿತ್ತು. ರಾಮದೇವರು ದಂಡಕಾರಣ್ಯದಲ್ಲಿ  ನಡೆಯುವಾಗ ಅಲ್ಲಿ ಸ್ನಾನ ಮಾಡಿ ರಾಮೇಶ್ವರನನ್ನು ಸ್ಥಾಪಿಸಿ ಪೂಜಿಸಿ ಮುಂದಕ್ಕೆ ಹೋಗಿದ್ದರಂತೆ . ಅಂತೂ ಪರಶುರಾಮನ ಪಾಪ ಪರಿಹಾರವಾಗಿದ್ದರಿಂದ ಆತ ಸಾರಿಹೋದ : ಈ ಅಮವಾಸ್ಯೆಯಲ್ಲಿ ಇಲ್ಲಿ ಸ್ನಾನ ಮಾಡಿದವರಿಗೆ ಎಲ್ಲ ಪಾಪಗಳು ಪರಿಹಾರವಾಗುತ್ತವೆ ಎಂದು. ಕಾಲಕ್ರಮದಲ್ಲಿ ಅದು ಜಾತ್ರೆಯಾಯ್ತು. ತ್ರೇತಾಯುಗದ ಕಥೆ ಕಲಿಯುಗದವರೆಗೂ ನಡದು ಬಂದಿದೆ. ಜನವೂ ಮರಳು, ಜಾತ್ರೆಯೂ ಮರಳು.  


ಮದುವೆ ಅಥವ ಉಪನಯನ :
ಆಗಿನ ಕಾಲದಲ್ಲಿ ಗಂಡುಮಕ್ಕಳಿಗೆ ಐದು ವರ್ಷಕ್ಕೆ ಉಪನಯನ, ಹೆಣ್ಣುಮಕ್ಕಳಿಗೆ ಏಳ ವರ್ಷದಿಂದ ಒಂಬತ್ತು ವರ್ಷ ದೊಳಗೆ ಮದುವೆ ಮಾಡಿ ಮುಗಿಸುವರು. ಮದುವೆಯಾಗುವ ಗಂಡನ್ನಾಗಲಿ, ಹೆಣ್ಣನ್ನಾಗಲೀ ಕೇಳಬೇಕೆಂಬ ಸಂಪ್ರದಾಯ ಆಗ ಜಾರಿಯಿರಲಿಲ್ಲ. ಕೇಳುವುದು ಹಾಗಿರಲಿ, ಒಬ್ಬರನ್ನು ಒಬ್ಬರು ನೋಡಬೇಕು, ಒಪ್ಪಬೇಕು ಎಂಬುದು ಕೂಡ ಮಹಾ ಅಪರಾಧವಾಗುತ್ತಿತ್ತು. ಮನೆಯ ಹಿರಿಯರು ಅಂದರೆ ಹುಡುಗಿಯ ಅಜ್ಜನೋ ಅಪ್ಪನೋ ನೋಡಿದ್ದರೆ ಸಾಕು. ವಿದ್ಯೆ ಬೇಕೆಂಬ ಆಲೋಚನೆಯೇ ಇರಲಿಲ್ಲ. ಸಂಧ್ಯಾವಂದನೆ, ಪೂಜೆ, ಮಂತ್ರ ಬಂದರೆ ಸಾಕು. ಜೋಯಿಸರ ಮನೆಯವರಾದರೆ ಪೌರೋಹಿತ್ಯ ತಿಳಿದಿದ್ದರೆ ಸಾಕು. ಹುಡುಗ ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದರೆ ಅದೇ ಮಹಾಡಿಗ್ರಿ..!  ಅಂತೆಯೇ ಪಣಿಯಮ್ಮನ ವರ ತಪಾಸಣೆಯಲ್ಲಿ – ಮೇಳಿಗೆಯ  ನೀಲಕಂಠಭಟ್ಟರ ಮಗ ಹದಿನೈದು ವರ್ಷದ  ನಂಜುAಡ ಮತ್ತು ಪಣಿಯಮ್ಮನ ಜಾತಕಕ್ಕೆ ಸರಿಯಾಗಿ ಹೊಂದಿತು. ಹುಡುಗನಿಗೆ ಪೂರ್ಣಾಯಸ್ಸು, ಮಾಂಗಲ್ಯಕೂಟ, ದಾಂಪತ್ಯ ಕೂಟ, ನಕ್ಷತ್ರ, ಗೋತ್ರ, ಸೂತ್ರಗಳು ಹದನಾಗಿ ಕೂಡಿಬಂದವು. ಹೆಣ್ಣು-ಗಂಡಿನ ಕಡೆಯವರು ಒಪ್ಪಿಯಾಯ್ತು. ಹೇಗೂ ವಧು-ವರರನ್ನು ಕೇಳುವ ತಂಟೆಯೇ ಇಲ್ಲವಲ್ಲ. ಅಲ್ಲದೇ ಅವಕ್ಕೇನು ತಿಳಿಯುತ್ತೆ..? ಇನ್ನೂ ಮಕ್ಕಳು, ನಾವು ಮಾಡುವುದು ಅವಳ ಒಳ್ಳೆಯದಕ್ಕೆ ಅಲ್ಲವೇ..? ಎನ್ನುತ್ತಿದ್ದರು. ನನಗೆ ಮದುವೆ ಬೇಡ ಎಂದು ಹೇಳಬೇಕೆಂದು ಅಂದಿನ ಕನ್ಯೆಯರಿಗೆ ತಿಳಿದೇ ಇರಲಿಲ್ಲ. ತಾವು ಇರುವ ಸ್ಥಿತಿಗಿಂತ ಹೆಚ್ಚಿನ ಸುಖ ಪ್ರಪಂಚದಲ್ಲಿ ಇದೆಯೆಂದು ಅವರಿಗೆ ಗೊತ್ತಿದ್ದರೆ ತಾನೆ ಅವರು ವ್ಯಸನಪಡ ಬೇಕಾದ್ದು. ತಾವಿರುವುದೇ ಸುಖ ಅವರ ಪಾಲಿಗೆ.


ಯಂಕಣ್ಣನೇ ಬರೆದ ಪಣಿಯಮ್ಮನ ಜಾತಕ :
ಹುಡುಗಿಗೆ ಪೂರ್ಣಾಯಸ್ಸು, ಅಖಂಡ ಸೌಭಾಗ್ಯವತಿ, ಶ್ರೀಮಂತ ಗಂಡನ ಕೈ ಹಿಡಿತಾಳೆ.., ಇತ್ಯಾದಿ ಎಂದು ಭವಿಷ್ಯವೂ ಬಂದಿದೆ ಎಂದು ಮೊಮ್ಮಗಳ ಜಾತಕ ಕಂಡು ಹಿಗ್ಗಿ-ಎದೆಯುಬ್ಬಿಸಿ ಹೇಳಿದರು ತಮ್ಮಯ್ಯನವರು ಅಂತೂ ಮದುವೆಯಾಯ್ತು. ಪಣಿ ಜಾತಕ ಬಾಳ ಚಂದಾಗಿದೆ. ಹದಿನಾರು ಗುಣಗಳೂ ಕೂಡಿ ಬರುತ್ತೆ ಹುಡುಗರದ್ದು, ಮಾಂಗಲ್ಯ ಯೋಗ ಹೇಳೊ ಹಾಂಗೇ ಇಲ್ಲ. ಅಖಂಡ ಸೌಭಾಗ್ಯ, ಅಷ್ಟಪುತ್ರ ಜನನ ಯೋಗ ಇವರದ್ದು, ಇಲ್ಲಿತನಕ ನನ್ನ ಮಾತು ಸುಳ್ಳಾಗಿಲ್ಲ. ನಿಮ್ಮ ಸೊಸೆ ಮನೆ ತುಂಬಿಕೊಳ್ಳೋದರ ಒಳಗೇ ನಿಮ್ಮ ಮನೆ ತುಂಬುತ್ತೆ. ತುಸಾನೂ ಅನುಮಾನ ವಿಲ್ಲ. ಜಾತಕವೆಲ್ಲ  ನುಣ್ಣಗ ಅಳಿಸಿ ತೊಳೆದು ಈಗ ಅವಳು ಮೊದಲಿನ ಕನ್ಯೆಯೇ ಆಗಿದ್ದಳು. ಹುಡುಗಿಯ ಕಾಲ್ಗುಣ ಒಳ್ಳೆಯದಲ್ಲ, ಮದುವೆಯಾಗಿ ಎರಡು ತಿಂಗಳೊಳಗೆ ಗಂಡನನ್ನು ನುಂಗಿತು ಎಂದು ಒಬ್ಬಿಬ್ಬರು ಮಾತನಾಡಿದರು.
ಗಂಡ ಸತ್ತು ಹನ್ನೊಂದನೆಯ ದಿನಕ್ಕೆ ಮುತ್ತೈದೆ ಚಿಹ್ನೆಗಳನ್ನು ತೆಗೆದು ಕೈಬಳೆಗಳನ್ನು ಒಡೆದರು, ಪಾಪ ಪಣಿ ಬಿಕ್ಕಿ ಬಿಕ್ಕಿ ಅತ್ತಳು..! ಗಂಡ ಸತ್ತಿದ್ದಕ್ಕಲ್ಲ ಮೊನ್ನೆ ಮೊನ್ನೆ ಎಳ್ಳಮವಾಸ್ಯೆಯಲ್ಲಿ ಕೈತುಂಬ ತೊಟ್ಟ ಚುಕ್ಕೆ ಹೂವಿನ ಬಳೆ ಅನ್ಯಾಯವಾಗಿ ಹೋಯಿತಲ್ಲ ಎಂಬುದು ಅವಳ ಮುಗ್ಧತೆ.
ಮೈನೆರೆದ ನಾಲ್ಕನೆಯ ದಿನವೇ ದಯೆ-ದಾಕ್ಷಿಣ್ಯವಿಲ್ಲದೆ ಅವಳ ತಲೆಬೋಳಿಸಿದರು . ಬಾಕಿ ಎಲ್ಲ ಹೆಣ್ಣುಮಕ್ಕಳಂತೆ ತನಗಿನ್ನು ನೋಹಿ-ವ್ರತಗಳು, ಪೂಜೆ ಪುನಸ್ಕಾರಗಳಿಲ್ಲ. ತಾನು ಬದುಕಿರುವವರೆಗೂ ಒಪ್ಪತ್ತೂಟ ಉಂಡು, ಮುಂಡೆಯಾಗಿ ಬಾಳಬೇಕು ಎಂಬುದು ಅವಳ ತಿಳಿವಳಿಕೆಗೆ ಬಂದಿತ್ತು. ಆದರೆ ಮಾಡುವುದಾದರೂ ಏನು..? ಪ್ರಪಂಚೆಲ್ಲ ಹೀಗೇ ಎಂದಷ್ಟೇ ಗೊತ್ತು ಅವಳಿಗೆ. ಎಲ್ಲ ಗಂಡ ಸತ್ತವರಿಗೆ ಮಾಡುವಂತೆ ತನಗೂ ಮಾಡಿದರೂ. ಇದರಲ್ಲಿ ಯಾರ ತಪ್ಪೂ ಇಲ್ಲ. ತಪ್ಪಿದ್ದರೆ ಶೃಂಗೇರಿ ಮಠದಿಂದ ಬಹಿಷ್ಕಾರ ಬೀಳುತ್ತಿತ್ತಲ್ಲ ಎಂಬುದು ಅವಳ ದೃಢವಾದ ನಂಬಿಕೆ. ಅವಳು ತನ್ನೆಲ್ಲ ಕಷ್ಟವನ್ನು ಒಂದು ನಿರ್ಲಿಪ್ತಭಾವದಿಂದ ಮರೆತಳು. ಅತ್ತೆಯ ಮನೆಗೆ ಹೋಗಿದ್ದರೂ ಇದೇ ಚಾಕರಿ ತಾನೇ..? ಅವರಾಗಿ ಕರೆಯಲಿಲ್ಲ, ಇವರಾಗಿ ಕಳಿಸಲಿಲ್ಲ, ಮಗನೇ ಇಲ್ಲದ ಮೇಲೆ ಸೊಸೆ ಯಾಕೆ ಅಂತ ಅವರಿಗೆ.


ಹಲಸರ ಕೇರಿಯ ಸಿಂಕಿಯ ಬ್ಯಾನಿ ಸಂಕಟ  :
ತಟ್ಟನೆ ತಂದೆ ಹೇಳಿದ ಮಾತು ನೆನಪಿಗೆ ಬಂತು : ತುಂಗೆ ದನ ಗಬ್ಬಾಗಿಲ್ಲ.., ಎಲ್ಲರಿಗೂ ಮಕ್ಕಳಾಗುವ ಕ್ರಮ ಇದೇನೆ..? ಎಲ್ಲ ಮಕ್ಕಳು ಹುಟ್ಟೋದು ಹೀಗೆ ಸೈ ಅಂತ ಕಾಣುತ್ತೆ. ಯಂತ ಹೇಸಿಕೆಯಪ್ಪ ಇದು..! ಇಸ್ಸಿ, ಮದುವೆ, ಮುಂಜಿ, ಪ್ರಸ್ತ, ಮಕ್ಕಳು, ಬಾಣಂತನ, ಸಂಸಾರ, ಪೂಜೆ-ಪುನಸ್ಕಾರ, ಮಡಿ-ಹುಡಿ..! ಯಾತಕ್ಕೆ ಮಣ್ಣು ಹುಯ್ಕಳೊಕೆ..! ಸದ್ಯ ನನ್ನ ಗಂಡ ಸತ್ತದ್ದೇ ಒಳ್ಳೆದಾತು. ಇಲ್ದಿದ್ರೆ ನಂಗೂ ಇದೇ ಅವಸ್ಥೆ ಇತ್ತೋ ಏನ ಕತೆಯೋ..!  ಇಕಾ ನಾ ಹೇಳಿದಂಗ ಕೇಳಿದ್ರ ಸರಾಗವಾಗಿ ಹೆರಿಗೆ ಆಗುತ್ತೆ, ಇನ್ನು ಮೂರು ಗಳಿಗೆಲಿ ಮಗು ಹೊರಗೆ ಬರುತ್ತೆ ತಾಳು.., ಹೆಣ್ಣು ಜನ್ಮಕ್ಕೆ ಬಂದದ್ದಲ್ಲವೆನೇ ಸಂಕಟ, ಇದೆಲ್ಲ ಯಾವ ಸಂಕಟ..? ಭಗವಂತ ಇದೆಂಥಹ ಹೊಲಸು ನಿನ್ನ ಸೃಷ್ಟಿ, ನನಗೆ ಮುಂಡೆತನವಾದರೂ ಅಡ್ಡಿಯಿಲ್ಲ, ಈ ಹೊಲಸಿನಿಂದ ಪಾರು ಮಾಡಿದೆಯಲ್ಲ ಎಂದು ಕೊಂಡರು. ಆ ರಕ್ತ ಮಾಂಸಗಳ ರಂಪ ನೋಡಿ ಅವರ ಜೀವ ರೋಸಿ ಹೊಯ್ತು. ದೇವ ಏನಿದು ನಿನ್ನಯ ಮಾಯೆ..? ಈ ಯಾತನೆ, ಈ ಹೊಲಸು ಎಲ್ಲ ಮರೆತು ಗಂಡನ ಹತ್ರ ಹೋಗ್ತಾರಲ್ಲ, ಹೆಂಗಸರು ಎಂಥ ವಿಚಿತ್ರ ಮರೆವು..? ಹತ್ತು ಹದಿನೈದು ಮಕ್ಕಳನ್ನು ಹೆತ್ತು ಹೆತ್ತು ಹಾಕ್ತರಲ್ಲ , ನನಗಿನ್ನು ಮಾನವ ಜನ್ಮ ಬೇಡ ; ಅದರಾಗೂ ಹೆಣ್ಣಿನ ಜನ್ಮ ಬೇಡ್ವೇ ಬೇಡ ಎಂದು ಕೈ ತೊಳೆದುಕೊಂಡಳು.
ಒಂದು ಹೆರಿಗೆ ಮಾಡಿದರೆ ಒಂದು ಸಾರಿ ಕಾಶಿಯಾತ್ರೆ ಮಾಡಿದ ಪುಣ್ಯ ರ‍್ತದೆ ಎಂದು ಅಜ್ಜಿ ಹೇಳುತ್ತಿದ್ದಳು. ಏನಾದರೂ ಆಗಲಿ, ಪುಣ್ಯ ಕಟ್ಟಿಕೊಂಡು ನಾನು ಎಲ್ಲಿಗೆ ಹೋಗಬೇಕಾಗಿದೆ..? ಯಾರಾದರೇನು ಜೀವ ಅನ್ನೋದು ದೊಡ್ಡದಲ್ಲವೇ..? ಎರಡು ಜೀವ ನನ್ನಿಂದ ಉಳಿದಿದ್ದಾದರೆ ಅದೂ ಒಂದು ಪುಣ್ಯ ಕಾರ್ಯವೇ. ಇನ್ನು ಅದನ್ನು ತಿರುಗ-ಮುರುಗ ಯೋಚಿಸಬಾರದು ಎಂದುಕೊAಡು ಮರೆತಳು ಮೂಢತತ್ವಕ್ಕೆ ಅಂಟಿಕೊಂಡ ಮನಸ್ಸು ತನಗೆ ತಾನೇ ಸಮಾಧಾನ ಹೇಳಿಕೊಂಡಿತು.
ನಮ್ಮ ಗರ್ಭದೊಳಗಿನದೇ ರಕ್ತ ಹೊರಗೆ ಬಂದಾಗ ಅದು ಹೆಂಗಸಿನ ಪಾಲಿಗೆ ಮೈಲಿಗೆ, ಮೂರು ದಿನಗಳು ಹೊರಗೆ ಕೂತಿರಬೇಕು. ನಾಲ್ಕನೆಯ ದಿನಕ್ಕೆ ಅದು ಶುದ್ದಿ, ನಂತರ ಮಡಿ,ತಮ್ಮ ಕುಟುಂಬದಲ್ಲೇ ಅನೇಕ ಹೆಂಗಸರಿಗೆ ಮುಟ್ಟು ನೀರು ಆದ ಮೇಲೂ ನಾಲ್ಕಾರು ದಿನ ಸೆರಗಿಗೆ ಮೈಲಿಗೆ ಇರುತ್ತಿತ್ತು, ಆದರೂ ಮಡಿ. ತಿಂಗಳು, ತಿಂಗಳೂ ಹಜಾಮನನ್ನು ಮುಟ್ಟಿಕೊಳ್ಳುವ ಮಡಿ ಹೆಂಗಸರು ಮಡಿ, ಯಾವ ಗಂಡಸಿನ ಸಂಪರ್ಕವೂ ಇಲ್ಲದ ಸಕೇಶಿಯರು ಯಾವ ಮಡಿ ಕೆಲಸಕ್ಕೂ ಬಾರದಷ್ಟು ಮೈಲಿಗೆ. ಇಂಥಹ ನೂರಾರು ಪ್ರಶ್ನೆಗಳು ಪಣಿಯಮ್ಮನ ತಲೆ ತಿನ್ನುತ್ತಿದ್ದವು.
ಯಾತಕ್ಕೆ ಈ ಮನುಷ್ಯ ಜನ್ಮ..? ದೇವಾ..! ಮತ್ತೆ ನನಗೆ ಪುನರ್ಜನ್ಮ ಇರೋದಾದರೆ ಒಂದು ಹೂವಿನ ಗಿಡದ ಜನ್ಮ ಕೊಡು ಸಾಕು. ಈ ಜನ್ಮದಲ್ಲಿ ನಾನು ಅಂತೂ ಯಾವ ಪಾಪಕ್ಕೂ ಹೋಗಿಲ್ಲ, ನನಗಿನ್ನು ಹೆಣ್ಣು ಜನ್ಮ ಬೇಡ. ಇದು ಆಕೆಯ ಅನುದಿನದ ಪ್ರಾರ್ಥನೆ. ಸ್ವರ್ಗ, ನರಕ, ಪುನರ್ಜನ್ಮ, ನರಕದ ಶಿಕ್ಷೆ, ಪ್ರಾಯಶ್ಚಿತ್ತ ಇವುಗಳನ್ನು ಮೂಢರು ಬಲವಾಗಿ ನಂಬುತ್ತಿದ್ದ ಕಾಲ.  


ಮಹಾಕ್ರಾಂತಿ :
ಯಂತದೋ ಗೋತ್ರ-ಸೂತ್ರ ನೋಡಿ ಮಾಡ್ಕಂದ್ರಾತು. ಯಂತ ಜಾತಕವೋ, ಏನು ಕರ್ಮವೋ, ಗಂಡು-ಹೆಣ್ಣು ಒಪ್ಪಿದರಾತು.ಹಣೇಲಿ ಬರೆದದ್ದನ್ನು ಯಾರು ತಪ್ಸೊಕಾಗುತ್ತೆ..? ನೀವೆಲ್ಲ ಕಾಣ್ತಾ ಇದ್ದಿರಲ್ಲ ನನ್ನ ಬಾಳ್ನ, ಕೆಸುವಿನ ಎಲೆಯ ಮೇಲಿನ ನೀರಿನ ಹಾಗೆ ಅದನಿ ಕಣೆ ಬನಶಂಕ್ರಿ ನಾನು ಎಂದು ಆಗಾಗ ಅನ್ನುತ್ತಿದ್ದಳು. ತಣ್ಣನೆಯ ಪ್ರತಿರೋಧ ದ  ಪಣಿಯಮ್ಮ ವಿಚಾರಗಳ ಪ್ರಭಾವಲಯಕ್ಕೆ ಸಿಕ್ಕಿದ ದಾಕ್ಷಾಯಿಣಿ ಗುಡ್ಡೇಪಾಲು ಸೀತಾರಾಮಯ್ಯನ ಮಗಳು ಚಿಬ್ಬಲಗುಡ್ಡೆ ಅವಳ ಗಂಡನ ಮನೆ, ಮದುವೆಯಾಗಿ ನಾಲ್ಕು ವರ್ಷವಾಗಿತ್ತು, ಹದಿನಾರು ವರ್ಷದ ತುಂಬು ಪ್ರಾಯದ ಹೆಣ್ಣು ಇನ್ನು ಮಕ್ಕಳಾಗಿರಲಿಲ್ಲ ಪ್ರಸ್ತವಾಗಿ ಒಂದು ವರ್ಷದೊಳಗೆ ಸನ್ನಿ (ಟೈಪಾಯ್ಡ್) ರೋಗದಿಂದ ಗಂಡ ಸತ್ತು ಹೋಗಿ ಬಿಟ್ಟ. ಮುತ್ತೈದೆ ಚಿಹ್ನೆಗಳನ್ನು ತೆಗೆಯದೇ, ಮುಡಿ ತೆಗೆಯದೆ, ನಿಮ್ಮ ನಗನೇ ಬಸಿರು ತುಂಬಿದವರು. ನಾ ಯಾಕೆ ತೌರಿಗೆ ಹೋಗಲಿ..? ನೀವೇ ಬಾಣಂತನ ಮಾಡಿ. ಆ ಮಗನ ಬದ್ಲಿಗೆ ಈ ಮಗ ಅಷ್ಟೇ ಸೈಯಲ್ಲ. ಎಂದು ಗದರಿದ್ದು, ಅತ್ತೆ-ಮಾವಂದಿ ರಿಂದಲೇ ಬಾಣಂತಿತನವನ್ನು ಮಾಡಿಸಿಕೊಂಡದ್ದು ಸ್ತ್ರೀ -ಕುಲದಲ್ಲಿ ಒಂದು ಮಹಾಕ್ರಾಂತಿ ಎಂದೇ ಹೇಳಬಹುದು.
ಎಲ್ಲಿ ಹೋಗುತ್ತೆ ಪುರುಷ ಬುದ್ಧಿ..? ಪದ್ಮಿನಿ ಜಾತಿ ಯ ಹುಡುಗಿ  ಎಂದು ಜರೆದವರಿಗೆ, ಅಣ್ಣನ ಹೆಂಡತಿ ಅತ್ತಿಗೆ, ಎರಡನೆಯ ತಾಯಿ ಎಂದು ಎಣಿಸಿದೆ ಹೀನಕೃತ್ಯಕ್ಕೆ ಮುಂದಾಗಿದ್ದು, ಹುಡುಗಿ ಛಲೋ ಕೆಲಸ ಮಾಡಿದ್ಲು. ಸದ್ಯ ಮೈದ್ನನ್ನೆ ಮಾಡ್ಕಂಡಳಲ್ಲ ಪುಣ್ಯ..! ಈಗೀನ ಕಾಲ್ದಾಗ ಮುದುಕಿಯರೇ ಮಡಿಯಾಗಲ್ಲ, ಸಮಾ ಮಾಡ್ತು ಹುಡುಗಿ, ಮಗು ಅವರ ಮನೆಯದೇ ಸೈಯಲ್ಲ. ಆಸ್ತಿ ಹಕ್ಕುದಾರ. ಏನಾದ್ದೀಗ..? ಎಂಬ ಕಿಟ್ಟಪ್ಪನ ಮಾತುಗಳು ಏನನ್ನು ಧ್ವನಿಸುತ್ತಿದೆ ಎಂಬುದನ್ನು ಸೂಕ್ಷö್ಮವಾಗಿ ಅವಲೋಕಿಸಿದಾಗ ದಾಕ್ಷಾಯಿಣಿ ಮಾಡಿದ್ದು ಸರಿ. ಬೇರೆ ಜಾತಿ, ಧರ್ಮ, ಕುಲ-ಗೋತ್ರ ತಿಳಿಯದವನ ಸಂಗ ಬಯಸಿದ್ದರೆ/ಮಾಡಿದ್ದರೆ ಅದು ಮಹಾಪರಾಧವಾಗಿಬಿಡುತ್ತಿತ್ತು. ಅವರು ಸೈ ಅನ್ನೋದು ಪ್ರಾಯದ ಹುಡುಗಿ, ಸಣ್ಣವಯಸ್ಸು, ಅದಕ್ಕು ಮನಸ್ಸು ಇದೆ, ಅದು ಸ್ವಲ್ಪ ಸುಖಕಾಣಲೀ ಅಂತ ಅನುಕಂಪ, ಪ್ರೀತಿ, ವಾತ್ಸಲ್ಯದಿಂದಲ್ಲ ; ಹೇಗೂ ಬಸಿರು ತುಂಬಿದ ಮಗು ಅಂದರೆ ಮೈದುನ ತಮ್ಮ ಕುಲಬಾಂಧವರಾದ್ದರಿಂದ, ಹಕ್ಕುದಾರಿಕೆ ಅವರದ್ದೇ ಆದ್ದರಿಂದ ಧರ್ಮಸಮ್ಮತವಾಯ್ತು ಆ ಬಸಿರು, ಗಂಡಿನ ತಪ್ಪಿಗೆ ತಿಲಾಂಜಲಿಯನ್ನು ಬಿಟ್ಟರು. ಇಂತಹ ಪುರುಷರ ಇಬ್ಬದಿತನದ ಧೋರಣೆಯನ್ನು ಪ್ರಶ್ನಿಸುತ್ತ ಸಾಗುವ ಫಣಿಯಮ್ಮ ಮತ್ತು ದಾಕ್ಷಾಯಿಣಿ ಇಂದಿಗೂ ಹೆಚ್ಚು ಪ್ರಸ್ತುತವೆನಿಸತ್ತಾರೆ.


ನನ್ನಿಂಗಿತ :
ಈ ಪಣಿಯಮ್ಮನ ಜೀವನ ವೃತ್ತಾಂತಕ್ಕೆ ಕೂಪವೆಂದು ಕರೆದಿದ್ದೆ, ಈ ಕಾದಂಬರಿ ನೂರೈವತ್ತು ವರ್ಷಗಳ ಹಿಂದಿನ ಕಾಲದ ಒಂದು ಜೀವನಕ್ರಮವನ್ನು ಚಿತ್ರಿಸುವ ಕೃತಿ. ಕಾದಂಬರಿ ಎಂದಾಕ್ಷಣ ಇದೆಲ್ಲವೂ ಸ್ವಕಪೋಲ ಕಲ್ಪಿತವೂ ಅಲ್ಲ ; ನಡೆದದ್ದೂ ಅಲ್ಲ. ಅರ್ಧ ಹಾಗೆ, ಅರ್ಧ ಹೀಗೆ. ಕಥಾನಾಯಕಿ ನನ್ನ ಅಜ್ಜ ನವರ ತಂಗಿ ಪಣಿಯಮ್ಮ, ನಡೆದ ಕೆಲ ಘಟನೆಗಳೂ ಸುಳ್ಳಲ್ಲ. ಆದರೂ ಕೆಲ ಕೆಲವು  ಪಾತ್ರಗಳನ್ನೂ  ಸಂಗತಿಗಳನ್ನೂ  ಅನಿವಾರ್ಯವಾಗಿ ಬದಲಿಸ ಬೇಕಾಯಿತು, ಬದಲಿಸಿದ್ದೇನೆ. ಪಣಿಯಮ್ಮನು ಬಾಳಿದ್ದು ನೂರಹನ್ನೆರಡು ವರ್ಷ. ಅಂತಹ ಪುಣ್ಯ ಜೀವಿಯನ್ನು ಕಣ್ಣಾರೆ ಕಂಡ ನಾನೇ ಧನ್ಯ ಎಂದುಕೊಳ್ಳುತ್ತೇನೆ ಒಮ್ಮೊಮ್ಮೆ.
ಪಣಿಯಮ್ಮನನ್ನು ಓದಿ ಮೆಚ್ಚಿ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಿದ ನಮ್ಮ ಕನ್ನಡ ಸಾಹಿತ್ಯಾ ಭಿಮಾನಿಗಳಿಗೂ ಹಾಗೂ ೧೯೭೬-೭೭ ರ ಉತ್ತಮ ಕೃತಿಯೆಂದು ಆಯ್ಕೆಮಾಡಿ ಅದಕ್ಕೆ ಬಹುಮಾನ-ಪ್ರಶಸ್ತಿ ನೀಡಿದ ರಾಜ್ಯಸಾಹಿತ್ಯ ಅಕಾಡಿಮಿಗೂ, ಇದನ್ನು ಚಲನಚಿತ್ರವಾಗಿಸಲು ಕಾರ್ಯೋನ್ಮುಖರಾಗಿರುವ ಶ್ರೀಮತಿ ಪ್ರೇಮಾ ಕಾರಂತರಿಗೂ ಸವಿನಯ ನಮನಗಳೊಂದಿಗೆ.
-ಎಂ.ಕೆ ಇಂದಿರಾ


Leave a Reply

Back To Top