‘ಮಾನವನಾಗುವೆಯಾ? ಇಲ್ಲಾ ದಾನವನಾಗುವೆಯಾ?’ಡಾ.ಸುಮಂಗಲಾ ಅತ್ತಿಗೇರಿ ಅವರ ಲೇಖನ

ಒಳ್ಳೆಯವರು ಮತ್ತು ಕೆಟ್ಟವರು ಎಂಬುವವರು ಮನುಷ್ಯ ಬದುಕಿನ ಇತಿಹಾಸದುದ್ದಕ್ಕೂ ಇದ್ದರೆಂಬುದು ನಾವೆಲ್ಲ ತಿಳಿದಿದ್ದೇವೆ. ಎಲ್ಲ ಕಾಲದಲ್ಲಿಯೂ ಎಲ್ಲರೂ ಒಳ್ಳೆಯವರಾಗಿರಲು ಅಥವಾ ಎಲ್ಲರೂ ಕೆಟ್ಟವರಾಗಿರಲು ಸಾಧ್ಯವಿಲ್ಲ. ಕೆಲವರು ಒಳ್ಳೆಯವರಿರುತ್ತಾರೆ ಇನ್ನು ಕೆಲವರು ಕೆಟ್ಟವರಾಗಿರುತ್ತಾರೆ. ಅದಕ್ಕೆ  ಡಿ.ವಿ.ಜಿ. ಅವರು ಒಂದಕಡೆ ಹೀಗೆ ಹೇಳತ್ತಾರೆ;

“ರಾಮನಿರ್ದಂದು ರಾವಣನೊಬ್ಬನಿರ್ದನಲ
    ಭೀಮನಿರ್ದಂದು ದುಶ್ಯಾಸನನದೊರ್ವನ್
                 ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು?
               ರಾಮಭಟನಾಗು ನೀ ಮಂಕುತಿಮ್ಮ

ಈ ಭೂಮಿಯ ಮೇಲೆ ಅನ್ಯಾಯವಿಲ್ಲದ ಕಾಲವಿಲ್ಲ. ರಾಮನಿದ್ದ ಕಾಲದಲ್ಲಿ ರಾವಣನೆಂಬ ದುಷ್ಟನೂ, ಭೀಮನಿದ್ದ ಕಾಲದಲ್ಲಿ ದುಶ್ಯಾಸನನೆಂಬ ದುರುಳನೂ ಇದ್ದಂತೆ ಎಲ್ಲ ಕಾಲದಲ್ಲಿಯೂ ಒಳ್ಳೆಯವರು ಮತ್ತು ಕೆಟ್ಟವರ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ.
ನಾವು ಬದುಕಿರುವ ಪರಿಸರದಲ್ಲಿಯೂ ನಮ್ಮ ನಡುವೆ ಒಳ್ಳೆಯವರು ಇರುತ್ತಾರೆ. ಕೆಟ್ಟವರೂ ಇರುತ್ತಾರೆ. ಮಿತ್ರತ್ವ ಮತ್ತು ಶತೃತ್ವ ಈ ಒಳ್ಳೆಯದು ಮತ್ತು ಕೆಟ್ಟದುದರ ಹಿಂದೆ ಕೆಲಸ ಮಾಡುತ್ತದೆ. ಯಾರು ನಮ್ಮೊಂದಿಗೆ ಮಿತ್ರತ್ವದಿಂದ ಇರಲು ಬಯಸುತ್ತಾರೋ ಅವರು ಸಹಜವಾಗಿ ಒಳ್ಳೆಯವರಾಗಿಯೇ ಇರುತ್ತಾರೆ. ಅದೇ ನಮ್ಮ ಬಗೆಗೆ ದ್ವೇಷ ಮತ್ತು ಶತೃತ್ವದ ಭಾವ ಹೊಂದಿದವರು ನಮಗೆ ಕೇಡು ಬಯಸುತ್ತಲೇ ಇರುತ್ತಾರೆ. ಅಂತವರು ನಮಗೆ ಕಟ್ಟವರಾಗಿ ಕಾಣುತ್ತಾರೆ. ಆದರೆ ಅವರವರ ಗುಣಸ್ವಭಾವಗಳು, ನಡುವಳಿಕೆಗಳು ಅಂತಿಮವಾಗಿ ಅವರನ್ನೇ ಬಾಧಿಸುತ್ತವೆ ಅಥವಾ ಅವರಿಗೆ ಮಾರಕವಾಗುತ್ತವೆ. ಒಳಿತು ಬಯಸಯವವರಿಗೆ ಒಳ್ಳೆಯದಾಗುವ ಮತ್ತು ಕೇಡಕು ಬಯಸುವವರಿಗೆ ಕೇಡಾಗುವ ಅನೇಕ ನೈಜ ನಿದರ್ಶನಗಳು ವಾಸ್ತವದಲ್ಲಿ ಎಷ್ಟೋ ಬಾರಿ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಬಹುಶಃ ಈ ಸರಿತಪ್ಪುಗಳ, ನ್ಯಾಯ ಅನ್ಯಾಯಗಳ ಲೆಕ್ಕಾಚಾರ ಮನುಷ್ಯನ ಹಿಡಿತದಿಂದ ಕೈತಪ್ಪಿಸಿಕೊಂಡರೂ ವಿಧಿಯ ಎದಿರು ತಪ್ಪಿಸಿಕೊಳ್ಳಲಿಕ್ಕಾಗದು. ಅದಕ್ಕೆ ಪ್ರತಿ ವ್ಯಕ್ತಿಯ ಸಾವಿನ ನಂತರ ಆ ಸಾವಿನ ಸುದ್ದಿ ತಿಳಿದ ಮೇಲೆ ಜನಾಡುವ ಮಾತಿನಲ್ಲಿ ನಿಜವಾಗಿ ಆ ವ್ಯಕ್ತಿಯ ಒಟ್ಟು ಬದುಕಿನ ಒಳಿತು-ಕೆಡುಕಿನ ಸರಿಯಾ ವಿಮರ್ಶೆಯಾಗುವ ಪರಿಯನ್ನು ನಾವು ನೋಡಬಹುದು. ವ್ಯಕ್ತಿ ಸಾವಿನ ನಂತರ ಹೀಗೆ ಆಡಿದ ಮಾತುಗಳನ್ನು ನೀವು ಕೇಳಿರಬಹುದು ಅಥವಾ ನೀವೇ ಹೀಗೆ ಹೇಳಿರಲೂಬಹುದು. “ಅಯ್ಯೊ ಬಾಳ ಉರಿತಿದ್ದ ಉರದ ಉರದು ಹೊಂಟುಂಟ್ಲೆ ಹೋದಾನೋಡ, ಇದ್ದಾಗ ಯಾರಿಗೂ ಒಂದು ಐದಪೈಸಾ ಕೊಡತಿರಲಿಲ್ಲ. ಈಗ ಎಲ್ಲಾನೂ ಹೆಂಗ ಬಿಟ್ಟ ಹೊಂಟಾನ ನೋಡ, ಮಾಡಿದ್ದ ಕರ್ಮ ಎಲ್ಲಿ ಹೊಕ್ಕೇತಿ ಕಡಿಗೆ ಬರಬಾರದ್ದು ಬಂದು ಹೊಂಟ, ಇಂಥಾ ಕರ್ಮ ಯಾರಿಗೂ ಬರಬಾರದು, ಅಮಾಯಕರಿಗೆ ಅನ್ಯಾಯ ಮಾಡಿದ್ದಕ್ಕ ಈ ಗತಿ ಬಂತ ನೋಡ ಎಂತಲೋ ಇಲ್ಲವೆ ಆ ವ್ಯಕ್ತಿ ಬಾಳ ಒಳ್ಳೆಯವನು. ಅವನಿಗೆ ಹಿಂಗಾಗಬಾರದಿತ್ತು, ಸಾಯೋ ವಯಸ್ಸಲ್ಲಾ ಇನ್ನಷ್ಟು ಆಯಸ್ಸು ಕೊಟ್ಟು ದೇವರು ಬದುಕಿಸಬೇಕಿತ್ತು, ನಮ್ಮ ಆಯುಷ್ಯವನ್ನು ಅವರಿಗೆ ಕೊಟ್ಟ ಬದುಕಿಸಿದ್ರೆ ನಾಲ್ಕಾರ ಜನಕ್ಕೆ ಒಳ್ಳೆಯದಾಗತಿತ್ತು ಅವರು ಇದ್ದಿದ್ರ. ಒಳ್ಳೆಯವರನ ದೇವರು ಬಿಡೋದಿಲ್ಲ ಬೇಗ ಕರಕೊಂಡ ಬಿಡತಾನ, ಪಾಪಾ ಒಳ್ಳೆ ಮನುಷ್ಯ ಇದ್ದಾಗ ಅಂತು ಸುಖಾ ಕಾಣಲಿಲ್ಲ ಸತ್ತ ಮೇಲಾದ್ರು ಸ್ವರ್ಗಾ ಸೇರಲಿ…”
ಹೀಗೆ ವ್ಯಕ್ತಿ ಸಾವಿನ ನಂತರ ಆತನ ವ್ಯಕ್ತಿತ್ವದ ಸರಿಯಾದ ಮೌಲ್ಯ ನಿರ್ಣಯವಾಗುವುದು. ಆದರೆ ವ್ಯಕ್ತಿಯ ಆ ವ್ಯಕ್ತಿತ್ವ ಆತ ತನ್ನ ಜೀವಿತಾವಧಿಯಲ್ಲಿ ಮಾಡಿದ ಕೆಲಸಗಳ ಮೇಲೆ ರೂಪಗೊಂಡಿರುತ್ತದೆ. ಸತ್ತೋನು ಸತ್ತ ಮೇಲೆ ಯಾರು ಏನಂದ್ರು ಸತ್ತ ವುಕ್ತಿಗೆ ಕೇಳಿಸುವುದಿಲ್ಲ ಅಂತಾ  ನಾವು ಅನ್ನಬಹುದು. ಆದರೆ ಇದರಿಂದ ಪ್ರತಿ ವ್ಯಕ್ತಿಯಿಂದಲೂ ಸಮಾಜಕ್ಕೆ ಒಂದು ಸಂದೇಶವಂತೂ ಸಿಗುತ್ತದೆ.  ಒಳ್ಳೆಯತನದಿಂದ ಬದುಕಿದರೆ ಏನಾಗುತ್ತದೆ ಮತ್ತು ಕೆಟ್ಟತನದಿಂದ ಬದುಕಿದರೆ ಏನಾಗುತ್ತದೆ ಎಂಬುದಕ್ಕೆ ನಾವು ಬೇರೆಲ್ಲೊ ಹುಡುಕಬೇಕಿಲ್ಲ. ನಮ್ಮ ನಿತ್ಯ ಬದುಕಿನಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಇವೆಲ್ಲ ನಮಗೆ ಪಾಠವಾಗಬೇಕು. ಬದುಕಿದ್ದಾಗ ಯಾರು ಒಳ್ಳೆಯವರಾಗಿರುತ್ತಾರೋ ಅವರು ಜನಮಾನಸದಲ್ಲಿ ಬಹುಕಾಲ ಉಳಿಯುತ್ತಾರೆ.
ರಾಮ ಭಟನಾಗಬೇಕು ಎಂಬ ಡಿವಿಜಿ ಅವರ ಮಾತಿನಂತೆ ಮನಗೆ ಯಾರೂ ಏನೇ ಕೆಟ್ಟದ್ದು ಬಯಸಲಿ. ಆದರೆ ಇತರರಿಗೆ ನಾವು ಒಳಿತನ್ನೇ ಬಯಸುವ ಗುಣ ಬೆಳೆಸಿಕೊಳ್ಳಬೇಕು. ಒಳಿತಿನ ಮಾರ್ಗದಲ್ಲಿಯೇ ನಡೆಯಬೇಕು. ಆ ಒಳ್ಳೆಯತನವೇ ನಮ್ಮನ್ನು ಕಾಯುತ್ತದೆ. ಅವರಾರೋ ನಮ್ಮನ್ನು ದ್ವೇಷಿಸುತ್ತಾರೆ ಎಂದರೆ ನಾವು ಅವರನ್ನು ದ್ವೇಷಿಸಿದರೆ ನಮಗೂ ಅವರಿಗೂ ಯಾವ ವ್ಯತ್ಯಾಸ ಉಳಿಯದು. ಯಾರು ಹೇಗಾದರೂ ಇರಲಿ ನಾವು ನಾವಾಗಿರೋಣ. ನಮ್ಮ ನಡೆನುಡಿಗಳು ಇತರರಿಗೆ ಹಿತವಾಗಬೇಕೇ ವಿನಃ ಅಹಿತವಾಗಬಾರದು. ಆದರೆ ಕಾಲಿಗೆ ಮುಳ್ಳು ನಟ್ಟಾಗ ಅದನ್ನು ಕಿತ್ತೆಸೆದು ಮುಂದೆ ಸಾಗುವುದು ಅನಿವಾರ್ಯ. ನಮ್ಮ ಭಗವದ್ಧ ಗೀತೆಯೂ ಸಹ ದುಷ್ಟ ನಿಗ್ರಹ ಮತ್ತು ಶಿಷ್ಟ ಪರಿಪಾಲನೆಯ ನೀತೆಯನ್ನೇ ಹೇಳುತ್ತದೆ. ಕನೆಗೂ ಜಯ ಸಿಗುವುದು ಶಿಷ್ಟರಿಗೆ ವಿನಃ ದುಷ್ಟರಿಗಲ್ಲ. ಅವರವರ ಕರ್ಮ ಅವರಿಗೆ.
ನಮ್ಮ ಇತಿಹಾಸದುದ್ದಕ್ಕು ನಡೆದುದು ಇದೇನೆ.  ಅಧರ್ಮ ಅನ್ಯಾಯಗಳು ಹೆಚ್ಚಾದಾಗ ಅವುಗಳ ವಿನಾಶದಿಂದ ಮತ್ತೆ ಧರ್ಮ ಸಂಸ್ಥಾಪನೆ ಮರುಹುಟ್ಟು ಪಡೆಯುತ್ತಲೇ ಇರುತ್ತದೆ. ರಾಮನಿಂದ ರಾವಣನ ಸಂಹಾರವಾಗುತ್ತದೆ. ಕುರುಕ್ಷೇತ್ರದಲ್ಲಿ ಕೌರವರು ಸೋತು ಧರ್ಮನಿಷ್ಟರಾದ ಪಾಂಡವರು ಗೆಲ್ಲುತ್ತಾರೆ. ಸುರಾಸುರರ ಸಂಘರ್ಷದಲ್ಲಿ ಅಸುರರ ಅಸುರತ್ವ ನಾಶವಾಗಿ ಸುರರಿಗೆ ಜಯವಾಗುತ್ತದೆ. ಹೀಗೆ ಗಾಂಧಿ ಇದ್ದ ಕಾಲದಲ್ಲಿ ಗೋಡ್ಸೆಯೂ ಇದ್ದ, ಏಸುಕ್ರಿಸ್ತನ ಬದುಕಿನಲ್ಲಿ ಜುದಾಸನೂ ಇದ್ದ. ಇಲ್ಲಿ ದುಷ್ಟರಿಂದ ಗಾಂಧಿ ಹತನಾದರೂ, ಏಸು ಶಿಲುಬೆಗೇರಿದರೂ ಅವರ ವ್ಯಕ್ತಿತ್ವ ಮತ್ತು ಆದರ್ಶ ಇಂದಿಗೂ ಜೀವಂತವಾಗಿವೆ. ಕಾರಣ ಅವರ ಒಳ್ಳೆಯತನ ಮತ್ತು ಅವರು ಮಾಡಿದ ಒಳ್ಳೆಯ ಕೆಲಸಗಳಿಂದ.
ನಮ್ಮ ಇತಿಹಾಸ ಮತ್ತು ವಾಸ್ತವದ ಸಂಗತಿಗಳನ್ನು ಗಮನಿಸಿ ನಮ್ಮ ನಡೆ ಯಾವ ಕಡೆ ಎಂಬುದನ್ನು ನಾವೇ ನಿರ್ಧರಿಸಬೇಕು.


Leave a Reply

Back To Top