ಎಂ ಬಿ ಸಂತೋಷ್ ಅವರ ಕೃತಿ ನೂಪುರ (ಹಾಯ್ಕುಗಳ ಸಂಕಲನ ) ಒಂದು ಅವಲೋಕನ-ರಾಘವೇಂದ್ರ ಸಿ.ಎಸ್

ಕೃತಿ : ನೂಪುರ
ಹಾಯ್ಕುಗಳ ಸಂಕಲನ
ಕೃತಿಕಾರರು : ಶ್ರೀ ಎಂ ಬಿ ಸಂತೋಷ್
ಪ್ರಕಾಶನ : ಡಿ ವಿ ಪಬ್ಲಿಕೇಶನ್
ಬೆಲೆ : 200/- ರೂ


ಕನ್ನಡ ಸಾಹಿತ್ಯದ ಮೂಲ ಬೇರುಗಳನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನೂರಾರು ಮಹನೀಯರು ಕನ್ನಡದ ಕಟ್ಟಾಳುಗಳಂತೆ ಕರ್ತವ್ಯದ ನೆಲೆಯಲ್ಲಿ ಸಾಹಿತ್ಯವನ್ನು ಪಲ್ಲವಿಸಿದ್ದಾರೆ. ಇಂತಹ ಸೃಜನಾತ್ಮಕ ಕಾರ್ಯ ವೈಖರಿಯಲ್ಲಿ ತಮ್ಮನ್ನು ತಾವು ಅರ್ಪಣಾ ಭಾವಗಂಧಿಯಾಗಿ, ಅಗ್ನಿದಿವ್ಯವಾಗಿ ತೊಡಗಿಸಿಕೊಂಡವರು ಸಾಹಿತ್ಯ ಸಂತ ಶ್ರೀಯುತ ಎಂ.ಬಿ. ಸಂತೋಷ್ ಅವರು. ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಸಂಘಟನಾ ಚತುರರಾದ ಹಿರಿಯ ಕವಿ, ಕಾದಂಬರಿಕಾರರಾಗಿ  ಇದುವರೆಗೆ ೨೮ ಕೃತಿಗಳನ್ನು ಪ್ರಕಟಿಸಿರುವ ಎಂ.ಬಿ.ಸಂತೋಷ್ ಅವರ ಚೊಚ್ಚಲ ಹಾಯ್ಕುಗಳ ಸಂಕಲನ ಹೊಸ ದೃಷ್ಟಿಕೋನದಿಂದ ನೋಡಿ ಭರವಸೆ ನೀಡಬಲ್ಲ ಕೃತಿ ಮಾಣಿಕ್ಯವಾಗಿದೆ‌. ಕನ್ನಡ ಕಾರ್ಯವೆಂದರೆ ಚಿರಯುವಕನಂತೆ ಉತ್ಸಾಹದ ನಡೆಯಲ್ಲಿ ಸದಾ ಪುಟಿಯುವ ಜೀವಚೈತನ್ಯವನ್ನು ಹೊಂದಿದ ಇವರಿಗೆ ಹಲವಾರು ಪ್ರಶಸ್ತಿಗಳನ್ನು, ಗೌರವ ಆದರಗಳಿಗೆ ಪಾತ್ರವಾಗಿದ್ದಾರೆ.  ಸತತವಾಗಿ ೨೪ ವರ್ಷಗಳಿಂದ ತಮ್ಮ ಪ್ರತಿಷ್ಠಾನದ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ‌ ಸೇವೆಯನ್ನು ಮಾಡುತ್ತಿದ್ದಾರೆ‌.೯೫೦ಕ್ಕೂ ಹೆಚ್ಚು ಮಕ್ಕಳಿಗೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರತಿಷ್ಠಾನದ ವತಿಯಿಂದ ಹಲವು ಪ್ರಶಸ್ತಿಗಳನ್ನು ನೀಡಿದ್ದಾರೆ.ಹಾಗೆಯೇ ೪೫೦ಕ್ಕೂ ಹೆಚ್ಚು ಹಿರಿಯ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ                  

        ಎಂ.ಬಿ‌.ಸಂತೋಷ್ ಅವರು ಐದು, ಏಳು, ಐದರ ನಿಯಮಗಳನ್ನು ಒಳಗೊಂಡ ೧೭ ಅಕ್ಷರಗಳಿಂದ ಮೂರು ಸಾಲುಗಳಲ್ಲಿ ರಚಿತವಾಗುವ ಪುಟ್ಟ ಕಾವ್ಯ  ಹಾಯ್ಕು ಪ್ರಕಾರದಲ್ಲಿ ಕೃತಿ ರಚಿಸುವ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿಯಾಗಿದ್ದಾರೆ. ಮೂರು ಸಾಲುಗಳಲ್ಲಿ ನಿಯಮಗಳನ್ನು ಪಾಲಿಸುತ್ತಾ ೪೪೪ ಹಾಯ್ಕುಗಳನ್ನು ರಚನೆ ಮಾಡಿರುವುದು ಒಂದು ದೊಡ್ಡ ಸಾಹಸವೇ ಸರಿ ಎನ್ನಬಹುದು‌.

ಈ ನೋವು, ಸಾವು
ನಿಜ ಯಾರನ್ನೂ ಕೇಳಿ
ಬರುವುದಿಲ್ಲ


3 ಸಾಲುಗಳಲ್ಲಿ 5, 7, 5ರ ನಿಯಮಗಳನ್ನು ಒಳಗೊಂಡಂತೆ 17 ಅಕ್ಷರಗಳಿಂದ ಹಾಯ್ಕು ರಚನೆ ಮಾಡುವುದು ಎಂದರೆ ಅದು ಕನ್ನಡಿಯಲ್ಲಿ ಕರಿಯನ್ನು ತೋರಿಸಿದ ಸಾಹಸವೇ ಆಗುತ್ತದೆ.
     ಬದುಕು ಎಂದರೆ ಸುಖ-ದುಃಖಗಳ, ಸಾವು-ನೋವುಗಳ ಸಮ್ಮಿಲನ. ನೋವಾಗಲಿ, ಸಾವಾಗಲಿ ಹೇಳಿಕೇಳಿ ಬರುವುದಂತಲ್ಲ. ಅದು ಬಂದಂತೆ ಸ್ವೀಕರಿಸುವ ಗುಣ ಆಗಬೇಕು. ನೋವಾದಾಗ, ಸಾವು ಸಂಭವಿಸಿದಾಗ ದುಃಖವಾಗುವುದು ಸಹಜ ಆದರೆ ಅದನ್ನೇ ಆಲೋಚಿಸುತ್ತಾ ಎದೆಗುಂದಬಾರದು ಎಂಬುದನ್ನು ಈ ಮೇಲಿನ ಹಾಯ್ಕುವಿನ ಮೂಲಕ ತಿಳಿಸಿದ್ದಾರೆ.        


ಹಣವಿಲ್ಲದ
ಬಾಳು ಕಲಿಸುವುದು
ನೂರೆಂಟು‌ ಪಾಠ


ಬದುಕು ನಡೆಸಲು ಹಣ ಅಗತ್ಯ‌. ಹಣವಿಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಾಗದು. ಅದನ್ನೇ ಇಲ್ಲಿ ಸಾಲಂಕೃತವಾಗಿ  ಹೇಳಲಾಗಿದೆ. ಜೀವನ ನಿರ್ವಹಣೆಗೆ ಹಣ ಅನಿವಾರ್ಯವೂ ಹೌದು, ಅಗತ್ಯವೂ ಹೌದು. ಹಣ ಇಲ್ಲದಿದ್ದರೆ ಅದರಿಂದ ಕಲಿಯುವ ಪಾಠ 108 ಎನ್ನುವ ಮೂಲಕ ಹಣವಿಲ್ಲದಿದ್ದರೆ ಯಾರೊಬ್ಬರೂ ಕೂಡ ನಮ್ಮ ಬೆಂಬಲಕ್ಕೆ ನಿಲ್ಲಲಾರರು ಎಂಬುದನ್ನು ತಿಳಿಸುವುದರ ಜೊತೆಗೆ ಹಣವಿಲ್ಲದೇ ಹೋದಲ್ಲಿ ಬಡತನ, ಹಸಿವು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ‌ ಎಂಬ ಅಂಶವನ್ನು ತಿಳಿಸಿದ್ದಾರೆ.


ಸಾಧನೆಯಲ್ಲಿ
ನಾ ಸೋತಿರಬಹುದು
ಇನ್ನೂ ಸತ್ತಿಲ್ಲ


    ಬದುಕಿನಲ್ಲಿ ಏನೇ ಬಂದರೂ ಅದನ್ನು ಎದುರಿಸಿ ನಿಲ್ಲುವ ಛಲ ನಮ್ಮದಾಗಬೇಕು ಎಂಬುದನ್ನು ಈ ಹಾಯ್ಕುನ ಮೂಲಕ ತಿಳಿಯಬಹುದು. ಗೆಲುವು ನಮ್ಮನ್ನು ಜಗತ್ತಿಗೆ ಪರಿಚಯಿಸಿದರೆ ಸೋಲು ನಮ್ಮನ್ನು ನಾವು ಪರಿಚಯಿಸಿಕೊಳ್ಳುವಂತೆ ಮಾಡುತ್ತದೆ‌. ಸೋಲು ಕಲಿಸುವ ಪಾಠವನ್ನು ಗೆಲುವು ಕಲಿಸಿ ಕೊಡಲಾರದು. ಅದನ್ನೇ ಕವಿ ಸಾಧನೆಯ ಹಾದಿಯಲ್ಲಿ ನಾ ಸೋತಿರಬಹುದು ಆದರೆ ಸತ್ತಿಲ್ಲ ಎನ್ನುವ ಮೂಲಕ ಮುಂದೆ ಗೆದ್ದೆ ತೀರಬಲ್ಲೆನೆಂಬ ಭರವಸೆಯ ನುಡಿಯನ್ನು ಸೂಚ್ಯವಾಗಿಸಿದ್ದಾರೆ.
        ತಾವೇ ಸ್ವತಹ ಲೇಖಕರಾಗಿ, ಕವಿಯಾಗಿ, ಸಾಧಕರ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನಿಸುವ, ದೀಪ ತಾನು ಉರಿದರೂ ಇತರರಿಗೆ ಬೆಳಕನ್ನು ನೀಡುವ ಹಾಗೆ; ತಾನೊಬ್ಬ ಬೆಳೆದರೆ ಸಾಲದು ಇತರರನ್ನು ತನ್ನೊಂದಿಗೆ ಬೆಳೆಸಬೇಕೆಂಬ ಉನ್ನತವಾದ ಧ್ಯೇಯಗಳನ್ನು ಇಟ್ಟುಕೊಂಡು ಆ ಪಥದಲ್ಲಿ ಕಾರ್ಯನಿರ್ವಹಿಸುತ್ತಿರುವ  ಲೇಖಕರ ಸಾಧನೆ ನಿಜಕ್ಕೂ ಶ್ಲಾಘನೀಯ. ಆದರೂ ಸಾಧನೆ ಮಾಡಬೇಕಾದುದು ಇನ್ನೂ ಇದೆ ಎಂಬ ಧೋರಣೆಯ ಈ ಹಾಯ್ಕು ವಿನೀತ ಭಾವವನ್ನು ಸೂಚಿಸುವಂತಿದೆ.


ನಾನು ನನ್ನದು
ಎಂಬುದು ಜಗದಲ್ಲಿ
ತುಂಬಾ ಕೆಟ್ಟದು


   ಮನುಷ್ಯ ಸ್ವಾರ್ಥಿ ಒಪ್ಪುವುದಕ್ಕೆ ಮುಜುಗರವಾಗುವಂತಿದ್ದರೂ ಒಪ್ಪಲೇಬೇಕಾದ ಕಟು ಸತ್ಯವಿದು. ನಾನು,ನನ್ನದು, ನನ್ನಿಂದಲೇ ಎಲ್ಲಾ ಎಂಬ ನಾನತ್ವ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮನೆ ಮಾಡಿರುತ್ತದೆ. ಇಂತಹ ನಾನತ್ವ ಅಳಿಯಬೇಕು ನಾನು ಹೋಗಿ ನಾವು ಎಂಬ ಉದಾರ ತತ್ವ ನಮ್ಮದಾಗಬೇಕೆಂಬ ಉನ್ನತವಾದ ಆದರ್ಶ ಈ ಹಾಯ್ಕುವಿನಲ್ಲಿ ಅಡಗಿದೆ ಎನ್ನಬಹುದು. ನಮ್ಮಂತೆ ಇತರರು ಎಂದು ಭಾವಿಸಿದಾಗ ಜಗತ್ತಿನಲ್ಲಿ ಅರ್ಧ ಸಮಸ್ಯೆ ಬಗೆಹರಿದಂತೆಯೇ ಸರಿ. ಇದು ಕಾರ್ಯೋನ್ಮುಖವಾಗಬೇಕಾದರೆ ನಾನು ಎಂಬ ಸ್ವಾರ್ಥ ಬುದ್ಧಿ ಮರೆಯಾಗಲೇಬೇಕು ಎಂಬ ಕಾಳಜಿ ಇದರಲ್ಲಿದೆ ಎನ್ನಬಹುದು.


ಮಿತಿ ಮೀರಿದ
ಮಾತು ಒಳ್ಳೆಯದಲ್ಲ
ಮೌನ ಬಂಗಾರ


   ಮಾತನಾಡುವ ಕಡೆ ಮೌನವಾಗಿರುವುದು, ಮೌನವಾಗಿರುವ ಕಡೆ ಮಾತನಾಡುವುದು ಎರಡು ಕೂಡ ತಪ್ಪು. ಸಂದರ್ಭ ಸನ್ನಿವೇಶ ಪರಿಸ್ಥಿತಿಗಳನ್ನು ಅರಿತು ಮಾತನಾಡುವುದು ಸೂಕ್ತ. ಕೆಲವು ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು ಕೆಲಸವನ್ನು ಮಾಡುತ್ತದೆ. ಆದ್ದರಿಂದಲೇ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂಬ ಗಾದೆಯನ್ನು ಸೃಜಿಸಿದ್ದಾರೆ. ಇಲ್ಲಿಯೂ ಕೂಡ ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ ಮೌನ ಬಂಗಾರ ಎನ್ನುವ ಮೂಲಕ ಮಾತು ಮಾಡದಿದ್ದ ಕೆಲಸವನ್ನು ಮೌನ ಮಾಡಬಲ್ಲದು ಎಂಬುದನ್ನು ಈ ಹಾಯ್ಕುವಿನಲ್ಲಿ ತಿಳಿಸಿದ್ದಾರೆ ಎನ್ನಬಹುದು‌.


ಗಂಡು ಮಕ್ಕಳು
ಮನೆ ತುಂಬಾ, ಕಷ್ಟಕ್ಕೆ
ಯಾರೂ ಆಗಲ್ಲ


             ನಮ್ಮ ಭಾರತೀಯರಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಬಗ್ಗೆ ಮಮಕಾರ ಹೆಚ್ಚು. ಹಿಂದಿನ ಕಾಲದಲ್ಲಿ ಎಷ್ಟೇ ಹೆಣ್ಣು ಮಕ್ಕಳಿದ್ದರೂ ಗಂಡು ಮಕ್ಕಳು ಬೇಕೆಂದು ಪರಿತಪಿಸುತ್ತಿದ್ದರು. ಗಂಡು ಮಕ್ಕಳಾದರೆ ಅವರಿಂದ ನಮ್ಮ ವಂಶ ಉದ್ಧಾರವಾಗುವುದು, ನಮಗೆ ಮೋಕ್ಷ ಸಿಗುವುದು ಎಂಬ ಭ್ರಮೆಯಿಂದ‌ ಹೆಚ್ಚೆಚ್ಚು ಗಂಡು ಮಕ್ಕಳನ್ನು ಪಡೆಯಲು ಅಪೇಕ್ಷಿಸುತ್ತಿದ್ದರು.
        ಈ ಹಾಯ್ಕುವಿನಲ್ಲಿ  ಮನೆ ತುಂಬಾ ಗಂಡು ಮಕ್ಕಳಿದ್ದರೂ ಕಷ್ಟಕ್ಕೆ ಯಾರೂ ಆಗಲ್ಲ ಎನ್ನುವ ಮೂಲಕ ವಾಸ್ತವತೆಯ ಚಿತ್ರಣವನ್ನು ತೆರೆದಿಡಲಾಗಿದೆ. ಹೆತ್ತವರಿಗೆ ಗಂಡು ಮಕ್ಕಳ ಮೇಲಿರುವ ಅತಿಯಾದ ವ್ಯಾಮೋಹ ಒಳ್ಳೆಯದಲ್ಲ , ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದು ಗಂಡು ಮಕ್ಕಳಿಂದಲೇ  ಎಂಬುದು ಒಪ್ಪಲೇಬೇಕಾದ ಕಟು ಸತ್ಯ. ಕಷ್ಟಕ್ಕೆ ಸ್ಪಂದಿಸುವ ಗುಣವಿಲ್ಲದಿದ್ದರೆ ಹೆತ್ತು, ಹೊತ್ತು, ಸಾಕಿ ಸಲಹಿದ್ದಕ್ಕೆ ಯಾವುದೇ ಬೆಲೆ ಇರಲಾಗದು ಎಂಬ ಅಂಶವನ್ನು ಇದರಿಂದ ತಿಳಿಯಬಹುದಲ್ಲದೆ ಗಂಡು ಮಕ್ಕಳೇ ಬೇಕೆಂಬ ಮೋಹವನ್ನು ತ್ಯಜಿಸಬೇಕೆಂಬ ಭಾವ ಇಲ್ಲಿದೆ ಎನ್ನಬಹುದು‌.

ಅವಸರಕ್ಕೆ
ಒಲಿದ ಪ್ರೀತಿ ಹೆಚ್ಚು
ದಿನ ಇರದು


        ಪ್ರೀತಿ ಎಂಬುದು ಮಧುರವಾದ ಬಾಂಧವ್ಯ, ಎರಡು ಮನಸುಗಳ ಸುಮಧುರ ಬೆಸುಗೆ. ಆದರೆ ಇಂದಿನ ಆಧುನಿಕತೆಯ ಯುಗದಲ್ಲಿ ಪ್ರೀತಿ ತುಂಬಾ ವೇಗವಾಗಿಯೇ ಹುಟ್ಟುತ್ತದೆ. ಅಷ್ಟೇ ಬೇಗದಲ್ಲಿ ಆ ಪ್ರೀತಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತದೆ. ಅದನ್ನೇ ಇಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ. ಪ್ರೀತಿ ಎಂದರೆ ತಕ್ಷಣವೇ ಸಿಕ್ಕು ತದ ನಂತರ ಕಳೆದುಹೋಗುವುದಂತಲ್ಲ, ಅದು ಎರಡು ಹೃದಯಗಳ ನಡುವಿನ ಮಧುರ ಬಂಧ. ಇಂತಹ ಪ್ರೀತಿ ಇಂದು ಆಧುನಿಕತೆಯ ಸೋಗಿನಲ್ಲಿ ಅವಸರವಾಗಿಯೇ ಉದ್ಭವಿಸಿ ಹೆಚ್ಚು ದಿನ ಕಳೆಯಲಾಗದೇ ಸೊರಗಿ ಹೋಗುತ್ತಿದೆ.
      ಬದುಕು ಎಲ್ಲಕ್ಕಿಂತ ಮುಖ್ಯವಾದುದು ಅದನ್ನು ಇಲ್ಲಸಲ್ಲದ ಪ್ರೀತಿ ಎಂಬ ಮುಖವಾಡವನ್ನು ಹಾಕಿಕೊಂಡು ಕಪಟಿಗಳಾಗಿ ವರ್ತಿಸುವರೊಂದಿಗೆ ಹಂಚಿಕೊಳ್ಳಬೇಡಿರೆಂದು ಯುವಜನಾಂಗಕ್ಕೆ ಉತ್ತಮವಾದ ಸಂದೇಶವನ್ನು ಸಾರಿದಂತಿದೆ ಈ ಹಾಯ್ಕು.


ಸತ್ಯಕ್ಕೆ ಎಂದೂ
ಸಾವಿಲ್ಲ, ಹೆಚ್ಚು ಕಾಲ
ಸುಳ್ಳು ಬಾಳದು


  ಸತ್ಯವಂತರಿಗಿದು ಕಾಲವಲ್ಲ ಎಂದು ಯಾರು ಎಷ್ಟೇ ಬೊಬ್ಬೆ ಹಾಕಿದರೂ ಕೊಡ ಸತ್ಯಕ್ಕೆ ಇರುವ ಬೆಲೆ ಎಂದಿಗೂ ಕಡಿಮೆಯಾಗಲಾರದು. ಉದಾಹರಣೆಗೆ ಸತ್ಯ ಎಂದ ಕೂಡಲೇ ಹರಿಶ್ಚಂದ್ರ ಎಂಬ ಪದ ಜಂಟಿಯಾಗಿಯೇ ನೆನಪಿಗೆ ಬರುತ್ತದೆ. ಇದು ಸತ್ಯಕ್ಕಿರುವ ಅತಿ ದೊಡ್ಡ ಮೌಲ್ಯ. ಬಹುಶಃ ಹರಿಶ್ಚಂದ್ರನ ಕಾಲಕ್ಕೆ ಅವನನ್ನು ಲೋಕಜ್ಞಾನ ಇಲ್ಲದವ, ದಡ್ಡ ಎಂದು ಜನರು ಭಾವಿಸಿದ್ದರಬಹುದು. ಆದರೆ ಕೊನೆಯವರೆಗೂ ಸತ್ಯವನ್ನೇ ನುಡಿದ ಹರಿಶ್ಚಂದ್ರ ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಶತಮಾನಗಳೇ ಕಳೆದರೂ ಎಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾನೆ. ಇದೇ ಸತ್ಯಕ್ಕಿರುವ ಶಕ್ತಿ‌. ಪ್ರಸ್ತುತ ಕಾಲದಲ್ಲಿ ಸುಳ್ಳು ವಿಜೃಂಭಿಸುತ್ತಿರಬಹುದು, ಸತ್ಯ ಕಣ್ಮರೆಯಾಗುತ್ತಿರಬಹುದು ಆದರೆ ಕೊನೆಗೆ ಉಳಿಯುವುದು ಸತ್ಯವೇ ಹೊರತು ಸುಳ್ಳಲ್ಲ ಎಂಬುದನ್ನು ಈ ಹಾಯ್ಕು ಮನಮುಟ್ಟುವಂತೆ ತಿಳಿಸುತ್ತದೆ.


ಸಮಾಜದಲ್ಲಿ
ಪ್ರೀತಿ ಹಂಚಬೇಕಿದೆ
ದ್ವೇಷವನ್ನಲ್ಲ


         ಪ್ರಸ್ತುತ ಸನ್ನಿವೇಶದಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವ ತತ್ವ ಇದಾಗಿದೆ. ಎಲ್ಲೆಡೆಯೂ ಅಶಾಂತಿ, ಅಸೂಯೆ, ದ್ವೇಷಗಳೇ ಮನೆ ಮಾಡಿರುವಾಗ ಹಂಚ ಬೇಕಾಗಿರುವುದು ಪ್ರೀತಿ ಮಾತ್ರ. ಒಳ್ಳೆಯದನ್ನು ಚಿಂತಿಸಿದರೆ ಒಳ್ಳೆಯದೇ ಆಗುತ್ತದೆ ಎಂಬ ನಾಣ್ಣುಡಿಯಂತೆ ಸಮಾಜಕ್ಕೆ ಪ್ರತಿಯೊಬ್ಬರು ಹಂಚ ಬೇಕಿರುವುದು ಪ್ರೀತಿಯ ಹೊರೆತು ದ್ವೇಷವಲ್ಲ ಎನ್ನುವ ಈ ಹಾಯ್ಕು ಪ್ರತಿಯೊಬ್ಬ ನಾಗರೀಕನ ಕರ್ತವ್ಯವನ್ನು ಸಾರುವಂತಿದೆ.

ಬರೆದವರು
ಬರೆದಂತೆ ಇದ್ದರೆ
ವ್ಯಕ್ತಿಗೆ ಬೆಲೆ


        ನುಡಿದಂತೆ ನಡೆಯುವವರು ಸಿಗುವುದು ತೀರಾ ಅಪರೂಪ. ತಾವು ಹೇಳುವುದಕ್ಕೂ, ನಡೆದುಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸ ತೋರಿಸುವ ಸ್ವಭಾವ ಬಹುತೇಕರಲ್ಲಿ ಮನೆ ಮಾಡಿರುತ್ತದೆ.‌
      ನಮ್ಮ ಬದುಕು ನಾವು ಬರೆದಂತಿರಬೇಕು. ಅಂದರೆ ನಮ್ಮ ನಡವಳಿಕೆ, ಆಲೋಚನೆ ಎಲ್ಲವೂ ಒಂದೇ ಬಗೆಯಲ್ಲಿರಬೇಕು. ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬಂತೆ ಇರಬಾರದು ಎಂಬುದನ್ನು ತಿಳಿಸಿದ್ದಾರೆ.
     12ನೇ ಶತಮಾನದಲ್ಲಿದ್ದಂತಹ ವಚನ ಸಾಹಿತ್ಯವನ್ನು 21ನೇ ಶತಮಾನದಲ್ಲೂ ಓದುತ್ತಿದ್ದೇವೆ ಎಂದರೆ ಅದಕ್ಕೆ ಬಹುಮುಖ್ಯ ಕಾರಣ ಶರಣರು ಅಥವಾ ವಚನಕಾರರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಯಾರಲ್ಲಿ ಈ ಮನೋಭಾವ ಇರುತ್ತದೋ ಅಂತಹ ವ್ಯಕ್ತಿಗೆ ಬೆಲೆ ಖಂಡಿತವಾಗಿಯೂ ಇರುತ್ತದೆ ಎಂಬುದನ್ನು ಈ ಹಾಯ್ಕುವಿನ ಮೂಲಕ ಗ್ರಹಿಸಬಹುದು‌.


ಬೆಣ್ಣೆ ಹಚ್ಚುವ
ಕೈಯಲ್ಲಿ ಚಾಕು ಇದೆ
ಮರೆಯಬೇಡಿ


        ಕಹಿಯ ಮೂಲಕ ಸಿಹಿಯನ್ನು ಉಣಬಡಿಸಿದಂತಿರುವ ಈ ಹಾಯ್ಕು ಎಚ್ಚರಿಕೆಯೊಂದಿಗೆ ಹಿತವಚನವನ್ನು ತಿಳಿಸುತ್ತಿದೆ. ಹೊಗಳಿಕೆ ಎಂಬುದು ಪ್ರತಿಯೊಬ್ಬರಿಗೂ ಇಷ್ಟವಾದದು. ಕೆಲವರಿಗಂತು ಮುಖಸ್ತುತಿ ತುಂಬಾ ಅವಶ್ಯಕವಾಗಿರುವಂತೆ ವರ್ತಿಸುತ್ತಾರೆ. ಅಂತವರಿಗೆ ಬುದ್ಧಿವಾದವನ್ನು ಹೇಳಿದಂತಿದೆ. ಸುಖ ಸುಮ್ಮನೆ ಹೊಗಳುತ್ತಿದ್ದಾರೆ ಎಂದರೆ ಅದರ ಹಿಂದೆ ಖಂಡಿತವಾಗಿಯೂ ಯಾವುದೋ ದುರುದ್ದೇಶ ಇರುತ್ತದೆ ಎಂಬುದನ್ನು ನಾವು ಮರೆಯಬಾರದು ಎಂಬುದನ್ನು ಬೆಣ್ಣೆ ಮತ್ತು ಚಾಕುವಿನ ಉಪಮೇಯಗಳ ಮೂಲಕ ತುಂಬಾ ಅರ್ಥವತ್ತಾಗಿ ತಿಳಿಸಲಾಗಿದೆ.
   ಈ ಮೊದಲೇ ತಿಳಿಸಿದಂತೆ ಕರಿಯನ್ನು ಕನ್ನಡಿಯಲ್ಲಿ ಅಡಗಿಸಿಟ್ಟಂತೆ ೪೪೪ ಹಾಯ್ಕುಗಳಲ್ಲಿ ಬೆರಳೆಣಿಕೆಯನ್ನಷ್ಟೇ ಇಲ್ಲಿ ತಿಳಿಸಿದ್ದು ಎಲ್ಲವನ್ನು ಓದಿ ಸುಖಿಸುವ ಭಾಗ್ಯ ನಮ್ಮದಾಗಬೇಕಾದರೆ ಕೃತಿಯನ್ನು ಖರೀದಿಸಿ ಓದಿ ಆ ಭಾವವನ್ನು ಅರ್ಥ ಮಾಡಿಕೊಂಡು ನಮ್ಮ ನಡವಳಿಕೆಯಲ್ಲಿ ಸ್ವಲ್ಪ ಮಟ್ಟಿಗಾದರೂ ಬದಲಾವಣೆಗಳು ಜರುಗಿದಲ್ಲಿ ಕೃತಿಗೂ ಕೃತಿಕಾರರಿಗೂ ಗೌರವ ಸಲ್ಲಿಸಿದಂತೆಯೇ ಸರಿ.
     ಮೂರು ಸಾಲುಗಳಲ್ಲಿ ಜೀವನದ ಅನುಭವಗಳನ್ನು ಹೇಳುವ ಮೂಲಕ ಸಮಾಜ ಕೊಂದು ಮಾದರಿ ಸಂದೇಶವನ್ನು ನೀಡುವ ಪ್ರಯತ್ನ ಎಂ.ಬಿ ಸಂತೋಷ್ ಅವರು ಈ ಕೃತಿಯ ಮೂಲಕ ಮಾಡಿದ್ದಾರೆ. ಕಥೆ,ಕವನ, ಲೇಖನ, ಕಾದಂಬರಿ ಈ ಸಾಹಿತ್ಯದ ಯಾವ ಪ್ರಕಾರವೇ ಆಗಲಿ ಸ್ವಲ್ಪ ಮನಸ್ಸಿಟ್ಟು ಶ್ರದ್ಧೆ ಇಟ್ಟು ಸುಲಭವಾಗಿ ಬರೆಯಬಹುದು. ಆದರೆ 5,7.5 ರಂತೆ 17 ಅಕ್ಷರಗಳನ್ನು ಕೇವಲ ಮೂರು ಸಾಲುಗಳಲ್ಲಿ ಅದು ಮನಮುಟ್ಟುವಂತೆ ಬರೆಯುವ ಪ್ರಯತ್ನ ಅಂದುಕೊಂಡಷ್ಟು ಅಥವಾ ಓದಿದ್ದಷ್ಟೇ ಸುಲಭವಾದುದಲ್ಲ. ಆ ಪ್ರಯತ್ನಕ್ಕೆ ಯಾರೇ ಆದರೂ ಎದ್ದು ನಿಂತು ಕರತಾಡನದ ಮೂಲಕ ಗೌರವ ಸಲ್ಲಿಸಬೇಕಾದದ್ದೇ. ಇಂತಹ ಒಂದು ಅಪರೂಪದ ಕೃತಿಗೆ ಕಲಶಪ್ರಾಯವಾದ ಮುನ್ನುಡಿಯನ್ನು ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ‌ ಪ್ರತಿಷ್ಠಾನದ ಕಾರ್ಯದರ್ಶಿಗಳಾದ, ಕವಯತ್ರಿಯು, ಶಿಕ್ಷಕಿಯೂ ಆದ ಶೋಭ.ಬಿ ಅವರು ಸೊಗಸಾಗಿ ಬರೆದಿದ್ದಾರೆ. ತಮ್ಮದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕರು ಶುಭ ಹಾರೈಕೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ವ್ಯರ್ಥವಾಗಿ ಸಮಯವನ್ನು ಕಳೆಯುವ ಬದಲು ಸುಂದರವಾದ ಹೊಸ ಪ್ರಯೋಗದ ಈ ಕೃತಿಯನ್ನು ಕೊಂಡು ಓದಿ ಬೆಂಬಲಿಸುವುದು ಪ್ರತಿಯೊಬ್ಬ ಸಹೃದಯರ ಕರ್ತವ್ಯ ಎಂಬುದು ನನ್ನ ಭಾವನೆ ಸಾಹಿತ್ಯ ಎಂದಿಗೂ ಕೊಳಕನ್ನು ತೊಳೆದು ಶುಚಿ ಮಾಡಿ,  ಬಿರುಕುಗೊಂಡಿರುವ ಮನದ ಗೋಡೆಗಳಿಗೆ ಮುಲಾಮಾಗುವ ಚೂರಾದ ಹೃದಯಗಳನ್ನು ಜೋಡಿಸುವ ಮಹತ್ಕಾರ್ಯ ಮಾಡಿವ ಏಕೈಕ ದಿವ್ಯ ಔಷಧ ಇದಕ್ಕೆ ಸೂಕ್ತ ಸಾಕ್ಷಿಗಣ್ಣು ಸದರಿ ಹಾಯ್ಕುಗಳ ಭಾವದ ತೊರೆ.


Leave a Reply

Back To Top