ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ

ಭೂಮಿ ಒಣಗಿ ಬಾಯಿ ಬಿರಿದಿದೆ
ಉರಿ ಬಿಸಿಲ ಝಳಕೆ ಸೊರಗಿದೆ
ಬಿರುಕು ಬಿರುಕಿನಲೂ ಬಿಸಿಯಿದೆ
ದಾಹಿ ನೆಲ ನೀರೆಂದು ಪರಿತಪಿಸಿದೆ

ಮಣ್ಣ ಮಗನವನು ಕನವರಿಸಿದ
ನಿತ್ಯ ಆಗಸದಿ ತನ್ನ ಮೊಗವೆತ್ತಿದ
ಮೋಡದ ಸುಳಿವಿಲ್ಲ ಆಗಸದಲಿ
ಇಂಗಿದೆ ನೀರು ಬತ್ತಿದ ಕಣ್ಣಲಿ

ಹಣೆಗಿಟ್ಟ ಹಸ್ತ ದಿಟ್ಟಿ ಆಕಾಶದತ್ತ
ನಭದ ಪ್ರಖರತೆಗೆ ಎವೆ ಮುಚ್ಚುತ
ಆಸೆ ಕಟ್ಟಿಕೊಳ್ಳುವವ ಮನದಲಿ
ಮಳೆ ಬಂದೀತೆಂಬ ಭರವಸೆಯಲಿ

ದಿನ ದೂಡುವವ ಹಿಡಿಯಲಿ ಮಣ್ಣು
ಸೋಲದು ನಿತ್ಯ ನೋಡುವ ಕಣ್ಣು
ಗುಡುಗು ಸಿಡಿಲು ಮುಂಗಾರಿನಲಿ
ಭೂ ರಮೆ ಒಡಲಲಿ ಹಸಿರು ತುಂಬಲಿ


Leave a Reply

Back To Top