ವಿಶ್ವ ಅಮ್ಮನ ಹಾಗೂ ಎಲ್ಲರ ಕಣ್ಮಣಿಯಾಗಿದ್ದ. ಪುಟ್ಟ ತಂಗಿಗೂ ಅಣ್ಣನೆಂದರೆ ಬಹಳ ಪ್ರೀತಿ. ಎರಡು ವರ್ಷದ ಆ ಪುಟ್ಟ ಪೋರಿಗೆ ಅಣ್ಣನೇ ಎಲ್ಲಾ. ವಿಶ್ವನಿಗೆ ಅಮ್ಮ ತಂಗಿಯೇ ಸರ್ವಸ್ವ. ಅಮ್ಮನ ಜೊತೆಗೆ ಎಲ್ಲಾ ಕೆಲಸಗಳಲ್ಲೂ ಸಹಾಯಕ್ಕೆ ನಿಲ್ಲುತ್ತಿದ್ದ. ಇಲ್ಲದಿದ್ದರೆ ಅಮ್ಮ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ತಂಗಿಯನ್ನು ನೋಡಿಕೊಳ್ಳುತ್ತಿದ್ದ. ಸುಮತಿಗೆ ರತ್ನದಂತಹ ಮಕ್ಕಳನ್ನು ಪಡೆದ ಧನ್ಯತಾಭಾವ. ಜವಾಬ್ದಾರಿಯುತ ಮಗನನ್ನು ಪಡೆದ ಹೆಮ್ಮೆಯಿತ್ತು ಸುಮತಿಗೆ. ಹೀಗೇ ದಿನಗಳು ಉರುಳಿದವು. ಒಂದು ದಿನ ವೇಲಾಯುಧನ್ ಕುಟುಂಬವು ಧರ್ಮಸ್ಥಳದ ಯಾತ್ರೆಗೆ ಹೊರಟಿತು. ಅಲ್ಲಿನ ಪಾವನ ಗಂಗೆಯಾದ ನೇತ್ರಾವತಿಯಲ್ಲಿ ಮಿಂದು ಮಂಜುನಾಥನ ಸನ್ನಿಧಿಯಲ್ಲಿ ಕುಟುಂಬವು ಶಿರಬಾಗಿ ನಮಿಸಿ ನಮ್ಮ ಕುಟುಂಬವನ್ನು ಸದಾ ಕಾಲ ಕಾಯ್ದು ಕಾಪಾಡು ಎಂದು ಬೇಡಿಕೊಂಡು, ಅಲ್ಲಿನ ಕಾಯ್ದಿರಿಸಿದ ಕೊಠಡಿಗೆ  ವಿಶ್ರಾಂತಿ ತೆಗೆದುಕೊಳ್ಳಲು ಬಂದರು. ತಂಗಿಯನ್ನು ಎತ್ತಿಕೊಂಡಿದ್ದ ವಿಶ್ವ ಏಕೋ ತುಂಬಾ ಬಳಲಿದಂತೆ ಸುಮತಿಗೆ ಅನಿಸಿತು. ಅವನ ಕಣ್ಣುಗಳು ಕೆಂಪಗಾಗಿದ್ದವು. ವಿಶ್ವನನ್ನು ಬಳಿಗೆ ಕರೆದು ಹಣೆ ಮುಟ್ಟಿ ನೋಡಿದಳು ಸುಮತಿ. ಹಣೆಯು ಕೆಂಡದಂತೆ ಸುಡುತ್ತಿತ್ತು. 

” ಅಯ್ಯೋ ಮಗನಿಗೆ ಜ್ವರ ಬಂದಿದೆ ಏನು ಮಾಡುವುದು ಈಗ? ಅವನ ಮೈ ಜ್ವರದ ತಾಪಕ್ಕೆ ಬಿಸಿಯಾಗಿದೆ….ಹಣೆಯಂತೂ ಕೈ ಇಟ್ಟರೆ ಸುಡುತ್ತಿದೆ…. ಇಲ್ಲಿ ಹತ್ತಿರದಲ್ಲಿ ಯಾವ ಆಸ್ಪತ್ರೆಯೂ ಇದ್ದಂತೆ ಅನಿಸುತ್ತಿಲ್ಲ…. ಗೊತ್ತಿಲ್ಲದ ಊರು ಬೇರೆ….ಯಾರಲ್ಲಿ ಕೇಳುವುದು ಎಂದು ಗಾಭರಿಗೊಂಡು ತನ್ನಲ್ಲಿಯೇ ಹೇಳಿಕೊಳ್ಳುತ್ತಾ ಪತಿಯ ಬಳಿ ಹೋಗಿ…. “ಏನೂಂದ್ರೆ ವಿಶ್ವನ ಹಣೆ ಮುಟ್ಟಿದರೆ ಸುಡುವ ಹಾಗೆ ಇದೆ. ಜ್ವರದ ತಾಪಕ್ಕೆ ಮೈಯೆಲ್ಲಾ ತುಂಬಾ ಬಿಸಿಯಾಗಿದೆ…. ತುಂಬಾ ಬಳಲಿದಂತೆ ಕಾಣುತ್ತಿದ್ದಾನೆ….ಇಲ್ಲಿ ವೈದ್ಯರು ಇರುವರೇ? ಆಸ್ಪತ್ರೆ ಇದೆಯೇ? ಎಂದು ಯಾರನ್ನಾದರೂ ಕೇಳಿ ತಿಳಿದುಕೊಂಡು ಅವನಿಗೆ ಆದಷ್ಟು ಬೇಗ ಉಚಿತವಾದ ಚಿಕಿತ್ಸೆ ಕೊಡಿಸಿ….ಎಂದು ಪತಿಯ ಬಳಿ ವಿನಂತಿಸಿಕೊಂಡಳು.

ವೇಲಾಯುಧನ್ ಕೂಡಲೇ ಮಗನ ಹಣೆ ಮುಟ್ಟಿನೋಡಿ

ಹೊರಗೆ ಹೋದರು. ಅಲ್ಲಿ ಕೆಲವರಲ್ಲಿ ವಿಚಾರಿಸಿದಾಗ ಹತ್ತಿರದಲ್ಲಿ ಒಂದು ಸಣ್ಣ ಗ್ರಾಮೀಣ ಆಸ್ಪತ್ರೆ ಇದೆ ಎಂದು ಹೇಳಿ ಅಲ್ಲಿಗೆ ವಿಶ್ವನನ್ನು ಕರೆದುಕೊಂಡು ಹೋಗಲು ಸೂಚಿಸಿದರು. ಕೊಠಡಿಗೆ ಬಂದ ವೇಲಾಯುಧನ್ ಸುಮತಿಯನ್ನು ಮಗಳ ಜೊತೆ ಅಲ್ಲಿಯೇ ಇರುವಂತೆ ಹೇಳಿ ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯರು ಕೆಲವು ಔಷಧಿಗಳನ್ನು ಕೊಟ್ಟು, ಇಲ್ಲಿಂದ ತೆರಳಿದ ಬಳಿಕ ಸಕಲೇಶಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ನುರಿತ ವೈದ್ಯರಿಗೆ ಮತ್ತೊಮ್ಮೆ ತೋರಿಸಿ ಎಂದು ಸಲಹೆ ಕೊಟ್ಟರು. ಮಗನ ಆರೋಗ್ಯ ಸರಿಯಿಲ್ಲದ ಕಾರಣ ದಂಪತಿಗಳು ಧರ್ಮಸ್ಥಳದಿಂದ ಆದಷ್ಟು ಬೇಗನೇ ಸಕಲೇಶಪುರದ ಕಡೆಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು.  ಜ್ವರದ ತಾಪ ಕೊಂಚ ಕಡಿಮೆ ಆಗಿದ್ದರೂ ಕೂಡಾ ಬಹಳ ಬಳಲಿದಂತೆ ಕಾಣುತ್ತಿದ್ದ ವಿಶ್ವ. ಅವನಿಗೆ ಹೊಟ್ಟೆ ನೋವು ಕೂಡಾ ಕಾಣಿಸಿಕೊಂಡಿತು. ನೋವು ತಾಳಲಾರದೇ ಅಳುತ್ತಿದ್ದ. ನೋವಿನಿಂದ ಅಳುತ್ತಿದ್ದ ತನ್ನ ಕರುಳ ಕುಡಿಯನ್ನು ಕಂಡು ಸುಮತಿ ಒಳಗೊಳಗೇ ಬಹಳ ನೊಂದುಕೊಳ್ಳುತ್ತಿದ್ದಳು. ಆದಷ್ಟೂ ಬೇಗ ನಮ್ಮನ್ನು ಸಕಲೇಶಪುರಕ್ಕೆ ತಲುಪಿಸು ಕೃಷ್ಣಾ ಎಂದು ತನ್ನ ಇಷ್ಟದೈವಕ್ಕೆ ಮೊರೆ ಇಟ್ಟಳು. ಮಗನನ್ನು ತನ್ನ ಎದೆಗೆ ಅವುಚಿಕೊಂಡು ಮಗಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರಯಾಣದುದ್ದಕ್ಕೂ ತನ್ನ ಮಗನಿಗೆ ಯಾವುದೇ ತೊಂದರೆ ಕೊಡಬೇಡ ಕೃಷ್ಣಾ ಎಂದು ಬೇಡಿಕೊಳ್ಳುತ್ತಿದ್ದಳು. ಸಕಲೇಶಪುರಕ್ಕೆ ಬಂದ ಕೂಡಲೇ ಅಲ್ಲಿನ ಆಸ್ಪತ್ರೆಗೆ ವೇಲಾಯುಧನ್ ಮಗನನ್ನು ಕರೆದುಕೊಂಡು ಹೋದರು.

ಅಲ್ಲಿನ ವೈದ್ಯರು ಕೂಲಂಕುಷವಾಗಿ ಪರೀಕ್ಷಿಸಿ ನೋಡಿ ವಿಶ್ವನಿಗೆ ಹೊಕ್ಕುಳುಸುತ್ತು ಆಗಿದೆ, ಹೊಕ್ಕುಳು ಹುಣ್ಣಾಗಿ ಊದಿಕೊಂಡಿದೆ ಜೊತೆಗೆ ಅರಿಶಿನ ಕಾಮಾಲೆ ರೋಗ ಕೂಡಾ ವಿಶ್ವನನ್ನು ಕಾಡುತ್ತಿದೆ ಎಂದು ಹೇಳಿದ ವೈದ್ಯರು ಕೊಡಬೇಕಾದ ಉತ್ತಮ ಚಿಕಿತ್ಸೆಯನ್ನು ಕೊಟ್ಟು ಶೀಷೆಯಲ್ಲಿ ಇದ್ದ ಔಷಧಿಗಳನ್ನು ಕೊಟ್ಟು ಸಮಯಕ್ಕೆ ಸರಿಯಾಗಿ ಮಗನಿಗೆ ಕೊಡಲು ಹೇಳಿ ಮನೆಗೆ ಕಳುಹಿಸಿದರು.

ದಿನ ಕಳೆದಂತೆ ವಿಶ್ವನಲ್ಲಿ ಚೇತರಿಕೆ ಕಾಣಿಸಿಕೊಳ್ಳತೊಡಗಿತು.

ಸುಮತಿ ಮಗನನ್ನು ಸದಾ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಳು. ಅಣ್ಣ ಮಲಗಿರುವುದು ಕಂಡಾಗ ಏನೂ ತಿಳಿಯದ ಪುಟ್ಟ ತಂಗಿ ನನ್ನನ್ನು ಎತ್ತಿಕೋ ಅಣ್ಣ ಎಂದು ದಂಬಾಲು ಬೀಳುತ್ತಿದ್ದಳು. ಆಗ ಸುಮತಿಯು ಅಣ್ಣನಿಗೆ ಹೊಟ್ಟೆ ನೋವು ಬಂದಿದೆ ಮಗಳೇ, ಅವನ ಆರೋಗ್ಯ ಸುಧಾರಿಸಿದ ನಂತರ ನಿನ್ನನ್ನು ಮೊದಲಿನಂತೆಯೇ ಎತ್ತಿಕೊಂಡು ಎಲ್ಲೆಡೆ ಓಡಾಡುವನು ಎಂದು ಹೇಳಿ ಸಮಾಧಾನ ಪಡಿಸುತ್ತಿದ್ದಳು. ಅಮ್ಮನ ಮಾತುಗಳನ್ನು ಕೇಳಿದ ಆ ಪುಟ್ಟ ಹುಡುಗಿ ಪಿಳಿಪಿಳಿ ಕಣ್ಣು ಬಿಡುತ್ತಾ ಅಣ್ಣನನ್ನು ನೋಡಿ ಒಲ್ಲದ ಮನಸ್ಸಿನಿಂದ ಸುಮ್ಮನಾಗುತ್ತಿದ್ದಳು. ತನಗೆ ಆರೋಗ್ಯ ಸರಿ ಇಲ್ಲದೇ ಇರುವುದರಿಂದ ಅಮ್ಮ ಬಹಳವೇ ನೊಂದುಕೊಳ್ಳುತ್ತಿರುವುದನ್ನು ಅರಿತ ವಿಶ್ವ ಅಮ್ಮನನ್ನು ಬಳಿಗೆ ಕರೆದು “ಅಮ್ಮ ಏಕೆ ಹೀಗೇ ಇಷ್ಟು ಕಂಗಾಲಾಗಿರುವೆ? ನನಗೆ ಬಂದಿರುವುದು ಸಣ್ಣ ಹೊಟ್ಟೆ ನೋವು, ಸ್ವಲ್ಪ ಜ್ವರ ಅಷ್ಟೇ…ಅದಕ್ಕೆ ಹೀಗೇಕೆ ನೀನು ಇಷ್ಟೊಂದು ಯೋಚಿಸುತ್ತಿರುವೆ? ನನಗೇನೂ ಆಗದು,ನೀನು ನಗುನಗುತ್ತಿದ್ದರೆ ಸಾಕು ನಾನು ಮತ್ತೆ ಮೊದಲಿನಂತಾಗುವೆ”….ಎಂದು ಹೇಳುತ್ತಾ ಅಮ್ಮನನ್ನು ಸಮಾಧಾನ ಪಡಿಸುತ್ತಿದ್ದನು. ಅವನ ಪಕ್ವತೆಯಿಂದ ಕೂಡಿದ ಮಾತುಗಳನ್ನು ಕೇಳುವಾಗ ಸುಮತಿಯ ಮನಸ್ಸಿಗೆ ಸಮಾಧಾನವಾಗುತ್ತಿತ್ತು. ಆಗೆಲ್ಲಾ ಮಗನನ್ನು ಅಪ್ಪಿಕೊಂಡು ಆನಂದಬಾಷ್ಪ ಸುರಿಸುತ್ತಿದ್ದಳು ಸುಮತಿ. ವೇಲಾಯುಧನ್ ಸದಾ ಗಂಭೀರವಾಗಿ ಇರುತ್ತಿದ್ದ ಕಾರಣ ಅವರ ಮನದ ಭಾವನೆಗಳು ಸುಮತಿ ಹಾಗೂ ವಿಶ್ವನಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಅವರ ಕೋಪಕ್ಕೆ ಮಾತ್ರ ಇವರುಗಳು ಹೆದರಿ ತರಗೆಲೆಗಳಂತೆ ನಡುಗುವರು.

ವಿಶ್ವನ ಆರೋಗ್ಯ ಈಗ ಸ್ವಲ್ಪ ಸುಧಾರಿಸಿತ್ತು. ಎಂದಿನಂತೆ ಅಮ್ಮನಿಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಾ ಶಾಲೆಯ ತರಗತಿಗೆ ಹಾಜರಾಗಿ ಗುರುಗಳು ಹೇಳಿಕೊಟ್ಟ ಪಾಠಗಳನ್ನು

ತದೇಕಚಿತ್ತದಿಂದ ಕೇಳಿ ಮನನ ಮಾಡಿಕೊಳ್ಳುತ್ತಿದ್ದ. ಶಾಲೆಯಿಂದ ಮನೆಗೆ ಬಂದ ನಂತರ ಪುಟ್ಟ ತಂಗಿಯ ಜೊತೆ ಆಟವಾಡುತ್ತಾ ಅವಳ ಕಾಳಜಿ ವಹಿಸುತ್ತಾ ಸಮಯ ಕಳೆಯುತ್ತಿದ್ದ. ಒಂದು ದಿನ ಮತ್ತೊಮ್ಮೆ ಅದೇಕೋ ಶಾಲೆಯಿಂದ ಬಂದವನೇ ಅಮ್ಮಾ ತುಂಬಾ ಬಳಲಿಕೆ ಆಗುತ್ತಿದೆ ಎಂದ. ಸುಮತಿ ಹಣೆಯನ್ನು ಮುಟ್ಟಿ ನೋಡಿದಳು ಸ್ವಲ್ಪ ದಿನ ಬಿಡುವು ಕೊಟ್ಟಿದ್ದ ಜ್ವರ ಮತ್ತೆ ಕಾಣಿಸಿಕೊಂಡಿತು. “ಹೊಟ್ಟೆ ನೋಯುತ್ತಿದೆಯೇ ಮಗನೇ”  ಎಂದು ಸುಮತಿ ವಿಶ್ವನನ್ನು ಕೇಳಿದಾಗ ಹೌದು ಎನ್ನುವಂತೆ ತಲೆಯಾಡಿಸಿದ. ಹೊಕ್ಕುಳಿನ ಭಾಗದಲ್ಲಿ ನೋಡಿದಾಗ ಕೆಂಪಗೆ ಸ್ವಲ್ಪ ಊದಿಕೊಂಡಂತೆ ಕಾಣಿಸಿತು. ಅಯ್ಯೋ ದೇವರೇ ಇತ್ತೀಚೆಗಷ್ಟೇ ಮಗ ಚೇತರಿಸಿಕೊಳ್ಳುತ್ತಿದ್ದ ಮತ್ತೆ ಹೀಗೇಕೆ ಆಯ್ತು ಎಂಬ ಚಿಂತೆ ಸುಮತಿಯನ್ನು ಕಾಡತೊಡಗಿತು. ಕೆಲಸಕ್ಕೆ ಹೋಗಿರುವ ಪತಿಯು ಬರಲಿ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳೋಣ ಎಂದುಕೊಳ್ಳುತ್ತಾ, ಮಗನಿಗೆ ಮಲಗಲು ಹೇಳಿ ಮಗಳನ್ನು ತನ್ನ ಜೊತೆಗೆ ಕರೆದುಕೊಂಡು ರಾತ್ರಿಯ ಅಡುಗೆಗೆ ತರಕಾರಿಯನ್ನು ಬಿಡಿಸಿ ತರಲೆಂದು ಹಿತ್ತಲಿನ ಕಡೆಗೆ ಹೋದಳು. ಅಷ್ಟು ಹೊತ್ತಿಗೆ ವೇಲಾಯುಧನ್ ಕೆಲಸದಿಂದ ಬಂದರು. ಬಾಗಿಲು ತಟ್ಟಿದರು ಯಾರೂ ಬಾರದೇ ಇದ್ದುದ್ದರಿಂದ ತುಸು ಕೋಪದಿಂದಲೇ ಬಾಗಿಲನ್ನು ಜೋರಾಗಿ ತಟ್ಟಿದರು. ಹಿತ್ತಲಲ್ಲಿ ತರಕಾರಿ ಬಿಡಿಸಲು ಹೋದ ಸುಮತಿಗೆ ಬಾಗಿಲು ಬಡಿದೆ ಸದ್ದು ಸರಿಯಾಗಿ ಕೇಳಿಸಲಿಲ್ಲ. ವಿಶ್ವಾ….ಎಂದು ಜೋರಾಗಿ ಕೂಗಿದ ಅಪ್ಪನ ಧ್ವನಿ ಕೇಳಿ ಮಲಗಿದ್ದ ವಿಶ್ವ ನೋವಿನಿಂದಲೇ ಎದ್ದು ಬಂದು ಬಾಗಿಲು ತೆಗೆದ. ತಡವಾಗಿ ಮಗ ಬಂದು ಬಾಗಿಲು ತೆಗೆದಿದ್ದರಿಂದ ಹಾಗೂ ಸುಮತಿಯನ್ನು ಅಲ್ಲಿ ಕಾಣದಿದ್ದುದರಿಂದ ಕೋಪಗೊಂಡು ಅದನ್ನು ನಿಯಂತ್ರಿಸಲಾರದೇ ಮಗನ ಕೆನ್ನೆಗೆ ಛಟೀರ್ ಎಂದು ಹೊಡೆದೇ ಬಿಟ್ಟರು.


Leave a Reply

Back To Top