ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …

ಮುಂಗಾರಿನ ಮುತ್ತು
ಹನಿಗಳ ಸಿಂಚನ
ಜೀವಕುಲಕಾಯ್ತು
ಸಂತಸದ ರೋಮಾಂಚನ
ಹಸಿರು ಮುಡಿದ
ಭೂತಾಯಿಗೆ ಸಮಾಧಾನ
ಬದುಕಿನ ಜೀವಸೆಲೆ
ತುಂಬಿತದೋ ಪೂರ್ಣ
ಸುಂಯ್ಯೆಂಬ ಗಾಳಿಯ
ಬಳುಕುವ ನರ್ತನ
ಎಲ್ಲೆಲ್ಲೂ ಚೆಲುವುನೂತನ…

ಅದೇನೋ
ಸಿಟ್ಟು , ಆಕ್ರೋಶ
ಗುಡ್ಡ ಬೆಟ್ಟಗಳಿಗೆ
ಮನುಜನ ಸಲ್ಲದ
ಕಿತಾಪತಿಗಳಿಗೆ…
ಒಡಲಲವಿತಿಟ್ಟ
ಕೋಪಾರೋಷಗಳು
ಸಿಡಿದೆದ್ದವು ಒಮ್ಮೆಲೇ
ಸ್ಫೋಟಗೊಂಡು..
ಮುಗಿಲು ಹರಿದು
ಬಿದ್ದಂಥ ಭೀಕರ ಮಳೆಯಲೇ…

ಕುಸಿದ ಮಣ್ಣ
ಗುಡ್ಡೆಯಡಿ
ದಾರಿ, ಲಾರಿ ,ಕಾರು ,ಊರು
ಮನೆ ,ಜನ,ದನ, ಕರು
ಎಲ್ಲವೂ ನಾಪತ್ತೆ ;
ಮಣ್ಣ ಜೊತೆಗೇ
ಮಣ್ಣಾಗಿ ಹೋದವೆಲ್ಲವೂ
ಕಣ್ ಮುಂದೆಯೇ
ಗುರುತೂ ಉಳಿಯದಂತೆ…

ಹೌಹಾರಿದೆ ಜಗವು
ಮೂಕನಾಗಿ
ಎಂದೂ ಕೇಳದ ಕಂಡರಿಯದ
ನಿಸರ್ಗದ ಅಟ್ಟಹಾಸಕೆ
ನಿಷ್ಕರುಣೆಯ ರೌದ್ರಕೇಕೆಗೆ…

ಇದು ಮುಂಗಾರೋ..?
ಪ್ರಕೃತಿ ಕೊಟ್ಟ ಶಿಕ್ಷೆಯೋ..?
ಯಾರದೋ ತಪ್ಪಿಗೆ..ಯಾರಿಗೋ ಶಿಕ್ಷೆ…!!!


6 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …

  1. ದೇವರ ಆಟ, ಭೂಮಿ ತಾಯಿಯ ಪಾಠ…. ಚಿಂತನಾರ್ಹ ರಚನೆ.

    1. ವಾಸ್ತವ ಪರಿಸ್ಥಿತಿ ತೆರೆದಿಟ್ಟ ಕವನ.. ಪ್ರಕೃತಿ ವಿಕೋಪದ ಮುಂದೆ ಮನುಷ್ಯ, ಜೀವಸಂಕುಲ ಜರ್ಜರಿತ..ಮನ ಕಲಕಿದ ಕವನ ಮೇಡಂ

Leave a Reply

Back To Top