ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ತುಳುನಾಡ ಆಷಾಢ
ಆಷಾಢದ ಸೋನೆಮಳೆ ಅಬ್ಬರಿಸಲು
ಭೂರಮೆ ಹಸಿರಿನ ಬಸಿರಾದಳು
ಸಿಡಿಲು ಮಿಂಚು ಗಾಳಿಯ ದಿನಗಳು
ಹಳ್ಳಿಯ ಕೃಷಿಕರ ಪಾಲಿನ ಕಷ್ಟದ ಗೋಳು
ತುಳುನಾಡ ಮನೆಗಳಲಿ ಭಯದ ಭುಗಿಲು
ಔತಣ ಸಮಾರಂಭಗಳಿಗೆ ಬಿಡುವಿತ್ತು
ಅಟ್ಟದ ಚನ್ನೆಮಣೆ ಜಗುಲಿಗೆ ಬಂದಿತ್ತು.
ನವದಂಪತಿಗಳಿಗೆ ವಿರಹದ ಬೇನೆ ಇತ್ತು
ಮಗಳಿಗೆ ತವರಿನ ಭಾಗ್ಯವಿತ್ತು
ಆಟಿ ಅಮಾವಾಸ್ಯೆಯ ಹಾಲೆ ತೊಗಟೆಕಷಾಯ ಎಲ್ಲರ ಧನವಂತರಿಯಾಯಿತು
ಅಡುಗೆ ಮನೆಯಲ್ಲಿ ಬಗೆ ಬಗೆ ಬಿಸಿ ಬಿಸಿ ಖಾದ್ಯಗಳಿತ್ತು
ಕಣಿಲೆ ಚಗಟೆ ಸೊಪ್ಪು ದಂಟು ಮಾವು ಹಲಸು ಕೆಸುವು
ಬಗೆ ಬಗೆ ಪತ್ರೊಡೆ, ಕಡುಬು ದೋಸೆ, ಉಪ್ಪಿನ ಕಾಯಿ ಚಟ್ನಿ ಘಮಘಮ ಸ್ವಾದವು
ದೈವ ದೇವರುಗಳ ಮನೆ ಖಾಲಿಯಾಗಿರಲು
ರೋಗರುಜಿನಗಳ ಅಟ್ಟಹಾಸ ಮೆರೆದಿರಲು
ಮಾರಿಕಳೆಯ ಬಂದ ಆಟಿಕಳೆಂಜ ಕುಣಿಯುತ ಸಾಂತ್ವಾನದ ತೆಂಬೆರೆ ಪಾಡ್ದನದಿಂದ
ಅಕ್ಕಿ, ತೆಂಗಿಕಾಯಿ, ಮೆಣಸು, ಉಪ್ಪು ,ಇದ್ದಿಲ ಕಾಣಿಕೆ ಸಾಕೆಂದ
ಆಟಿ ಅಪಶಕುನವಲ್ಲ ಬದುಕಿನ ತಿರುವೆಂದ
ಶಾಲಿನಿ ಕೆಮ್ಮಣ್ಣು