ಶೋಭಾ ಮಲ್ಲಿಕಾರ್ಜುನ್ ಅವರ ಕವನ- ಅಹಲ್ಯೆ

ಅಹಲ್ಯೆ ಕಲ್ಲಾದಳೆ ಗೆಳತಿ ಗೌತಮನ ಶಾಪಕ್ಕೆ..?
ಕಲ್ಲಾದದ್ದು ಅವಳ ಮನಸ್ಸು ಗೌತಮನ ನಿರ್ಭಾವುಕಥೆಗೆ
ಸಂತೆಯಲ್ಲೂ ಸಂತನಾದುದಕೆ
ವನರಾಶಿಯ ಚೈತ್ರದ ಚಿಗುರಿವಳು
ವೈಶಾಖದ ಶಾಖದಿ ಬೆಂದ ತನು ಮನದವಳು
ಜೇಷ್ಠದಲಿ ಇಂದ್ರ ಶ್ರೇಷ್ಟನಂತೆ ಗೋಚರಿಸಿದನೆ..
ಆಷಾಢದ ಪ್ರೇಮ ಬಿರುಗಾಳಿ ಧೂಳಿಪಟ ಮಾಡಿತೇ
ಶ್ರಾವಣದ ಮಳೆಯಾಗಿ ಭೋರ್ಗರೆದಳೇ…
ಭಾದ್ರಪದದಲ್ಲಿ ಪದಗಳಿಗೆ ನಿಲುಕದ ಸುಖವನರಸಿದಳೆ..
ಆಶ್ವೀಜದ ಆಹ್ವಾನಕೆ ಇಂದ್ರನಿಗರ್ಪಣೆಯಾದಳೆ
ತಪ್ಪೇನಿಲ್ಲ ಬಿಡುಸಖೀ..
ಕಾರ್ತಿಕದಲಿ ಹೃದಯದಲಿ ಹಚ್ಚಿಟ್ಟಳು ಪ್ರೇಮದಾ ಹಣತೆ
ಮಾರ್ಗಶಿರದಲಿ ಅರಿತಳೆ ತನ್ನೊಳಗಿನ ತುಮುಲಗಳಿಗೊಂದು ಮಾರ್ಗ
ಪುಷ್ಯದಲ್ಲಿ ಪುಷ್ಪದಂತೆ ನಳನಳಿಸಿ
ಮಾಘದಲಿ ಮೇಘದಂತೆ ಹಗುರಾಗಿ
ಪಾಲ್ಗುಣದಲಿ ಪಲ್ಗುಣಿಯಲಿ ಮಿಂದು ಮುಳುಗಿದಳೇ….
ಕಳೆಗುಂದಿತೇ ನೈತಿಕತೆಯ ಜ್ಞಾನ
ರಾಡಿಯಾಯಿತೇ ಬೇಗುದೀ ಮನ
ಸಹಸ್ರಾಕ್ಷನ ಅಭಿಮಾನದಿ ಕಳೆದು ಹೋಯಿತೇ ಸ್ವಾಭಿಮಾನ
ಮನದ ತುಮುಲಗಳಿಗೆಲ್ಲಿದೆ ಜಾಗ
ಗೌತಮನ ಗಾಂಭೀರ್ಯದಲಿ
ಗಾಯಕೆ ಸುಣ್ಣವನೆ ಸುರುವಿಕೊಂಡು
ಸೋತು ಸುಣ್ಣವಾದವಳು
ಅಹಲ್ಯೆ ಕಲ್ಲಾಗಿಸಿಕೊಂಡಳು ತನ್ನ ಮನವ
ಗೌತಮ ಕಲ್ಲಾಗಿಸಿದ್ದು ಅವಳ ತನುವ


One thought on “ಶೋಭಾ ಮಲ್ಲಿಕಾರ್ಜುನ್ ಅವರ ಕವನ- ಅಹಲ್ಯೆ

  1. ತುಂಬಾ ವಿಶ್ಲೇಷಣಾತ್ಮಕವಾದ ಕವಿತೆ. ಕವಯತ್ರಿ ಶೋಭಾ ಮಲ್ಲಿಕಾರ್ಜುನ್ ರವರಿಗೆ ಅಭಿನಂದನೆಗಳು

Leave a Reply

Back To Top