“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು.
ಶಿಕ್ಷಣ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ಅಂಕ ಆಧಾರಿತ ಶಿಕ್ಷಣಕ್ಕಿಂತ ಕೌಶಲ್ಯ ಮತ್ತು ವೃತ್ತಿಪರತೆ ಆಧಾರಿತ ಮೂಲ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಈ ಶಿಕ್ಷಣ ವ್ಯವಸ್ಥೆ ಸುಧಾರಿಸಬಹುದೇನೋ. ಅಂಕ ಮಾಡಲು ಯೋಗ್ಯತೆ ಇಲ್ಲದವನು ಅದನ್ನು ಕೊಂಡುಕೊಂಡು ಅದೆಷ್ಟೋ ಪ್ರತಿಭಾವಂತರಿಗೆ ತೊಂದರೆ ಮಾಡುವ ಬದಲು ವೃತ್ತಿ ಕೌಶಲ್ಯ ಆಧಾರಿತ ಕಲಿಕೆ ಪ್ರತಿಭಾವಂತರನ್ನು ಸೃಷ್ಟಿಸುತ್ತದೆ. ಕೌಶಲ್ಯ ಮತ್ತು ಪ್ರತಿಭೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವತಃ ರೂಡಿಸಿಕೊಳ್ಳುವಂತದ್ದು. ಕೆಲಸಕ್ಕೆ ತಕ್ಕ ಕೌಶಲ್ಯ ಕೌಶಲ್ಯಕ್ಕೆ ತಕ್ಕ ಅನುಭವ ಅನುಭವಕ್ಕೆ ತಕ್ಕ ಪರಿಶ್ರಮ ಸಿಕ್ಕಾಗ ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಬಲ ತುಂಬಿದಂತಾಗುತ್ತದೆ. ಬರೀ ಅಂಕ ಗಳಿಕೆಯ ಹಿಂದೆ ಓಡುತ್ತಿರುವ ಇಂದಿನ ಯುವ ಸಮುದಾಯ ಅತ್ತ ಅಂಕ ಗಳಿಸಲು ಬರದಾಡುತ್ತಿದ್ದರೆ ಇತ್ತ ಪಟ್ಟಭದ್ರರು ತಮ್ಮವರ ಹಿತಕ್ಕಾಗಿ ಕೋಟ್ಯಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ತಾವು ಮಾತ್ರ ತಮ್ಮ ಹಣ ಅಧಿಕಾರ ಪ್ರಭಾವ ಬಳಸಿ ಎಲ್ಲಾ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮೆರೆಯುತ್ತಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಹೆತ್ತವರಿಗೆ ಇನ್ನಿಲ್ಲದ ನೋವು ಕೊಡುವ ಪರಿಸ್ಥಿತಿಗೆ ತಂದು ಬಿಟ್ಟಿದೆ ಈ ವ್ಯವಸ್ಥೆ. ಶಿಕ್ಷಣ ಸ್ವಉದ್ಯೋಗಿಗಳನ್ನು ಸೃಷ್ಟಿ ಮಾಡಬೇಕೆ ವಿನಹ ಸರ್ಕಾರ ಸಂಘ ಸಂಸ್ಥೆಗಳ ಬಾಗಿಲಲ್ಲಿ ನಿಂತು ಕೆಲಸಕ್ಕಾಗಿ ಅಂಗಲಾಚುವ ದೈನಿಶಿ ಸ್ಥಿತಿಯಲ್ಲಿ ಮಕ್ಕಳನ್ನು ತಂದು ನಿಲ್ಲಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡುವ ಬದಲು ಪುಸ್ತಕದ ಹುಳುಗಳನ್ನಾಗಿಸಿ ಸ್ವಂತಿಕೆಯನ್ನೇ ಮರೆಸಿ ಕೇವಲ ಅಂಕ ್ರ್ಯಾಂಕ್ಗಳ ಹಿಂದೆ ಓಡುವಂತೆ ಮಾಡಿದೆ. ಇಲ್ಲಿ ವಿಫಲನಾದನವನಿಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳುವ ಬದಲು ಕೈ ತಪ್ಪಿದ ಅವಕಾಶದ ಚಿಂತೆಯಲ್ಲಿಯೇ ಬದುಕು ಭವಿಷ್ಯಗಳ ಎರಡನ್ನು ಕತ್ತಲೆ ಮಾಡಿಕೊಂಡು ಹೆತ್ತವರಿಗೆ ಸರಿಯಾಗಿ ಜನ್ಮಕ್ಕಾಗುವಷ್ಟು ನೋವನ್ನು ನೀಡಿ ಸೊರಗಿ ಹೋಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಸತ್ಯತೆ ಮತ್ತು ಪ್ರಾಮಾಣಿಕತೆಗೆ ಅವಕಾಶ ಇರುವುದಿಲ್ಲ. ಅಲ್ಲಿ ಏನಿದ್ದರೂ ತಾಂತ್ರಿಕತೆಗೆ ನಾವೆಷ್ಟು ಸಮರ್ಥರು ಎಂಬುದನ್ನು ಸಾಬೀತುಪಡಿಸಬೇಕಷ್ಟೆ. ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆ ಇಲ್ಲದವನು ಹಣ ಅಧಿಕಾರಗಳ ಪ್ರಭಾವ ಬಳಸಿ ಅದನ್ನು ಕೊಂಡುಕೊಳ್ಳಲು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ದುರಂತ. ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ಕತ್ತಲಾಗಿಸಿಬಿಡುತ್ತದೆ. ಶಿಕ್ಷಣ ಜ್ಞಾನವನ್ನು ಕೊಡಬೇಕು ಅಂಕಗಳನ್ನಲ್ಲ. ಜ್ಞಾನ ಬದುಕನ್ನು ಅನ್ವೇಶಿಸಿ ಸರಿ ತಪ್ಪುಗಳ ವಿಶ್ಲೇಷಿಸಿ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಓದಿನಲ್ಲಿ ಮುಂದಿರುವವರಿಗೆ ಬದುಕಿನ ಪರ್ಯಾಯ ಹಾದಿಗಳು ಗೊತ್ತೇ ಇರುವುದಿಲ್ಲ. ಕುದುರೆಗೆ ಕಣ್ಣು ಕಟ್ಟಿದಂತೆ ಓಡುವುದಷ್ಟೇ ಅವನ ಗುರಿಯಾಗಿರುತ್ತದೆ. ಕೈಗೆಟುಕದ ಉನ್ನತ ಗುರಿಗಿಂತಲೂ ಅಂಗೈಯಲ್ಲಿರುವ ಬೆಣ್ಣೆಯನ್ನೇ ತುಪ್ಪವಾಗಿಸುವ ಕೌಶಲ್ಯವನ್ನು ಇಂದಿನ ಶಿಕ್ಷಣ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ತಂತ್ರಜ್ಞಾನದ ಆವಿಷ್ಕಾರ ಮನುಷ್ಯನನ್ನು ಸೋಮಾರಿಯಾಗಿಸಿದೆ. ಅವನ ಶ್ರಮದ ಕೆಲಸಗಳನ್ನೆಲ್ಲ ನುಂಗಿ ಹಾಕಿ ಗುಂಡಿ ಬತ್ತಿದರೆ ಸಾಕು ಆಗಬೇಕಾದ ಕೆಲಸಗಳೆಲ್ಲ ನಿರ್ದಿಷ್ಟ ಸಮಯದಲ್ಲಿ ಮುಗಿಸಿ ಕೊಡುತ್ತಿರುವಾಗ ಮನುಷ್ಯನ ದೈಹಿಕ ಶ್ರಮ ಕೌಶಲ್ಯ ಎಲ್ಲವೂ ಮೂಲೆಗುಂಪಾಗಿ ನಿರುದ್ಯೋಗಿಗಳು ಉತ್ಪಾದನೆಯಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೇಶದ ಪ್ರಗತಿಯ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಲಿದೆ. ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾದ ಈ ಕಾಲಘಟ್ಟದಲ್ಲಿ ಪ್ರತಿಭೆಗಳು ಹುಟ್ಟುವುದು ಅಷ್ಟು ಸುಲಭವಲ್ಲ. ಉಳ್ಳವರ ಎದೆಗೊದ್ದು ಪ್ರತಿಭಾವಂತ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಲ್ಲೂ ಇಂದಿನ ರಾಜಕೀಯ ವ್ಯವಸ್ಥೆ ಕೇವಲ ಗುಲಾಮರನ್ನು ಸೃಷ್ಟಿಸುವ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತಿದೆ ವಿನಹ ಕೌಶಲ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದು ಅವರರಿಗೂ ಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ಗಳಿಸಿಕೊಂಡು ತಾನು ಮಾತ್ರ ಉದ್ದಾರವಾಗುವ ಮನಸ್ಥಿತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಹೀಗಿರುವಾಗ ಓದಿದ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಕರ್ತನನ್ನಾಗಿಸುವ ಬದಲು ಕೇವಲ ಅನುಯಾಯಿಯಾಗಿ ಅನುಸರಿಸುವ ಅಮಾಯಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ. ಯುವ ಸಮುದಾಯ ಒಂದು ಮಹಾನ್ ಶಕ್ತಿ. ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇಂದು ಅದನ್ನು ಮಾರ್ಗದರ್ಶಿಸುವ ಹಾಗೂ ಅದಕ್ಕೆ ಸರಿಯಾದ ಗುರಿ ನಿಗದಿಪಡಿಸುವ ಗುರುವಿನ ಕೊರತೆ ಎದ್ದು ಕಾಣುತ್ತದೆ. ಯುವಶಕ್ತಿಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದನ್ನು ಒಗ್ಗೂಡಿಸಿಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಆಡಿಸುವವರ ಯೋಗ್ಯತೆ ಒಟ್ಟುಗೂಡಿಸುವಲ್ಲಿನ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುವ ಬದಲು, ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಬದಲು ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಸರಿಪಡಿಸಲು ಬೇಕಾದ ಚಾಕಚಕ್ಯತೆಯನ್ನು ಹೊಂದಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಸಿಕೊಂಡು ವ್ಯವಸ್ಥೆಯ ಓರೆ ಕೋರೆಗಳನ್ನು ತಿದ್ದಿ ಅರ್ಹರಿಗೆ ಅವಕಾಶಗಳ ಬಾಗಿಲನ್ನು ತೆರೆಸುವ ಶಿಕ್ಷಣ ವ್ಯವಸ್ಥೆ ಅದನ್ನು ಮುನ್ನಡೆಸುವ ಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿ ಬೇಕಾಗಿದೆ. ಅಮು ಭಾವಜೀವಿ ಮುಸ್ಟೂರು.
“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು. Read Post »









