‘ಒಕ್ಕಲಿಗ ಮುದ್ದಣ್ಣ’ ಲೇಖನ-ನಂರುಶಿ ಕಡೂರು

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

     ೧೨ ನೇ ಶತಮಾನದಲ್ಲಿದ್ದ ನಾಲ್ಕು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಇವರಲ್ಲಿ ಮೇಲ್ಪಂಕ್ತಿಯಲ್ಲಿರುವವರನ್ನು ಸಮೀಕರಿಸಿ ಅವರಿಗಿಂತ ನಾನು ಎಷ್ಟು ಬಲಹೀನನು ಎಂಬುದನ್ನು ವಚನಕಾರರಾದ ಒಕ್ಕಲಿಗ ಮುದ್ದಣ್ಣನವರು ಚಿಕ್ಕದಾದರೂ ಮನಸ್ಸಿಗೆ ತಟ್ಟುವಂತೆ ನೇರವಾಗಿಯೇ ನುಡಿದಿದ್ದಾರೆ.
      ಆಗ ಓದುವವರು ಬ್ರಾಹ್ಮಣರು ಮಾತ್ರ ಎನ್ನುವ ಕಾಲವಾಗಿತ್ತು, ಮತ್ತಾರು ಓದುವಂತಿರಲಿಲ್ಲ. ವೇದ ಶಾಸ್ತ್ರಗಳನ್ನ ಅಧ್ಯಯನ ಮಾಡುವುದಕ್ಕೆ ನಾನು ಬ್ರಾಹ್ಮಣನಲ್ಲ. ಅದು ನನಗೆ ದೂರವಾದದ್ದು, ಪಂಡಿತನಂತೆ ಬೀಗುತ ಓಡಾಡುವವನು ನಾನಲ್ಲ. ಬೇರೆಯವರ ಜೀವಗಳ ಜೊತೆಗೆ ಆಟವಾಡಿ, ರಕ್ತವ ಹರಿಸುತ್ತ, ಇರಿದು ಮೆರೆದು ಅನೇಕ ಮಾನವ ಜೀವಿಗಳ ಅಂತ್ಯಕ್ಕೆ ಕಾರಣವಾದ, ಕೊಲ್ಲುವುದೇ ನನ್ಮ ಆ ಜನ್ಮಸಿದ್ಧ ಹಕ್ಕು. ನಮ್ಮವರನ್ನು ಬಿಟ್ಟು ಬೇರೆ ಯಾರು ಬದುಕಬಾರದು. ಎಲ್ಲವೂ ನನಗೆ ಬೇಕು ಇನ್ನಾರಿಗೂ ಬದುಕುವ ಕಿಂಚಿತ್ತು ಆಸೆ ಕೂಡ ಇರದಂತೆ ಅನ್ಯರ ಶಕ್ತಿಹೀನರ ಸದೆ ಬಡಿಯಲು ಯಾವಾಗಲೂ ಖಡ್ಗವ ಝಳಪಿಸುವ  ಕ್ಷತ್ರಿಯ ನಾನಲ್ಲ. ಅವರ ಪದಾರ್ಥವ ಇವರಿಗೆ ಕೊಟ್ಟು, ಇವರ ಪದಾರ್ಥವ ಅವರಿಗೆ ಕೊಟ್ಟು ಮಧ್ಯದಲ್ಲಿದ್ದುಕೊಂಡೇ ಸರ್ವರಿಗಿಂತಲೂ ಆರ್ಥಿಕವಾಗಿ ಉನ್ನತಿ ಸಾಧಿಸುತ, ಪ್ರತಿ ಕೆಲಸದಲ್ಲಿಯೂ ವ್ಯವಹಾರಿಕವಾಗಿ ಲಾಭದಿಂದಲೇ ಯೋಚಿಸುವ ಯಾವ ಕಷ್ಟಗಳನು ಪಡದೇ, ತಾನು ಇದ್ದಲ್ಲಿಯೇ ಮುಗ್ಧ ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಎಲ್ಲರಿಗಿಂತ ಹೆಚ್ಚು ಸಿರಿವಂತನಾದ ವೈಶ್ಯ ನಾನಲ್ಲ. ನಾನೇ ಮೇಲು ನಾನೇ ಮೇಲು ಎಂದು ಹೇಳಿಕೊಳ್ಳುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಜೀವ ಉಳಿಸಿಕೊಳ್ಳುವುದಕ್ಕಾಗಿ ತಿನ್ನಲು ಅನ್ನ ಕೊಡುವ ವ್ಯವಸಾಯಗಾರ ಮಣ್ಣಿಗೆ ಹತ್ತಿರವಾಗಿರವುವ ಶೂದ್ರ ನಾನು ಎಂದು ಜಂಬದಿಂದ ಹೇಳದಂತೆ, ನಾನೊಬ್ಬ ಉತ್ತು, ಬಿತ್ತಿ ಬೆಳೆದು ಜಗಕೆ ಅನ್ನವ ನೀಡುವ, ಕಷ್ಟಪಟ್ಟು ಬೆವರು ಸುರಿಸಿ ರಕ್ತ ಬಸಿದು ಸರ್ವರಿಗೂ ಜೀವ ಉಳಿಸಿಕೊಳ್ಳಲು ಅನ್ನದಾತನಾಗಿರುವ ಈ ವ್ಯವಸಾಯಗಾರನ ಸಣ್ಣ ತಪ್ಪುಗಳನ್ನ ಲೆಕ್ಕಿಸದೇ ಹೊಟ್ಟೆಯಲ್ಲಿ ಹಾಕಿಕೊಂಡು ಮನ್ನಿಸಿ, ತಪ್ಪುಗಳ ಎತ್ತಿ ಹಿಡಿಯದೇ ಒಪ್ಪಗೊಳ್ಳಯ್ಯ. ಒಬ್ಬರಂತೆ ಓದಿ ತಿಳುವಳಿಕೆ  ಇರುವವನಲ್ಲ. ಮತ್ತೊಬ್ಬರಂತೆ ಇನ್ನೊಬ್ಬರನ್ನು ತುಳಿದು ಜೀವಿಸುವಷ್ಟು ಶಕ್ತಿ ಇಲ್ಲ. ಮಗದೊಬ್ಬರಂತೆ ಅವರದನು ಅವರಿಗೆ ನೀಡಿ ಬೆಳೆಯುವ ಯುಕ್ತಿಯೂ ನನಗಿಲ್ಲ. ನಾನು ನನ್ನ ಕಾರ್ಯವನ್ನೇ ನಿನಗೆ ಮತ್ತು ನನಗೆ ತೃಪ್ತಿಯಾಗುವಂತೆ  ನಿರ್ವಹಿಸುವೆ.  ಜೀವದೊಡೆಯ ನಮ್ಮ ಕಷ್ಟ ಕಾರ್ಪಣ್ಯಗಳನೆಲ್ಲ ಬಲ್ಲಾತನೂ ನೀನೊಬ್ಬನೇ. ನಿನ್ನನ್ನು ಹೊರತು ಮತ್ತಾರು ನನ್ನ ಕ್ಷಮಿಸುವರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರಷ್ಟು ಮೇಲ್ಪಂಕ್ತಿಯನಲ್ಲ. ಈ ಮಣ್ಣನು ನಂಬಿ ಬದುಕಿದವರಾದ ನನ್ನನ್ನು ನೀನು ಬಲ್ಲೆ ಕಾಮಭೀಮ ಎಂದು ಭಕ್ತಿಯಿಂದ ಕಾಲಿಗೆರಗಿ ಬೇಡುತಿರುವೆನು.


Leave a Reply

Back To Top