ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಮಳೆಯಾಟ
ಸೂರ್ಯ ಮೂಡುವ ಹೊತ್ತಿಗೆ
ಕಪ್ಪು ಕೊಡೆ ಹಿಡಿದಂತೆ
ಕತ್ತಲು ಆವರಿಸಿದಂತೆ
ಕಪ್ಪನೆಯ ಮೋಡಗಳು
ಮುತ್ತಿಕ್ಕುವ ಒಂದಕ್ಕೊಂದು
ಬೆಸೆಯುವ ಪ್ರೇಮದಾಟ
ಕೂಟಕ್ಕೆ ಕೂಗುವ ಹಕ್ಕಿಯಂತೆ
ಮೋಡಗಳ ಮಿಲನದ ಸದ್ದು
ಗುಡುಗಾಗಿ ಅರ್ಭಟಿಸಿ
ನಾಲ್ಕು ಹನಿ ಹನಿಸಬೇಕೆನ್ನುವಷ್ಟರಲ್ಲಿ….
ವೈರಿಯಂತೆ ಬಿರುಗಾಳಿ
ಬರ್ರನೆ ಬೀಸಿ ಪ್ರೇಮವನ್ನು
ಚದುರಿಸಲು ಹವಣಿಸುತ್ತಿತ್ತು
ಮುನಿಸಿಕೊಂಡ ಮೋಡಗಳು
ಗಾಳಿಯ ಮರೆಮಾಚಿ
ಅಲ್ಲಲ್ಲೇ ಸುತ್ತುತ್ತ
ಕೂಡಲು ಕಾತರಿಸುತ್ತಿದ್ದವು
ಅವುಗಳ ಪ್ರೇಮ ಮಿಲನಕ್ಕೆ
ಭುವಿ ಕಾಯುತ್ತಿದ್ದಳು
ಒಂದಕ್ಕೊಂದು ಮಸೆದು
ತೆಕ್ಕೆಯಲ್ಲಿ ಬಾಚಿಕೊಳ್ಳುವ ಹುನ್ನಾರ
ಸುರಿದು ಬಿಡಲೇ
ಪ್ರೇಮ ರಸವ
ಧರಣಿಯ ಒಡಲು ತಣಿಸಲು
ಆಗಿಷ್ಟು ಈಗಿಷ್ಟು
ಬಯಲಲ್ಲಿ ಬೆಟ್ಟದಲ್ಲಿ
ಮಲೆನಾಡೊ ಬಯಲಸೀಮೆಯೋ
ಒಮ್ಮೆ ನೆಲದ ಕಡೆಗೆ ಸುರಿಯುವ
ಮಗದೊಮ್ಮೆ ಜಲದ ಕಡೆಗೆ ಜಾರುವ
ಎಲ್ಲಿಯಾದರೂ ಸರಿ
ನೆಲ ಜಲಧಿಗೆ
ಹೂಂಕರಿಸಿ ಬರುವ
ಸುಂಟರಗಾಳಿಗೆ ಹೊಯ್ದಾಡಿ
ಹಾರಿ ಹೋಗುವ ಮುನ್ನ
ತಂಪೆರವೆ ತುಂತುರ ಸಿಂಚನ
ಇಲ್ಲವೇ ಧಾರಾಕಾರ ವರ್ಷಧಾರೆ
ಡಾ. ಮೀನಾಕ್ಷಿ ಪಾಟೀಲ್
ಸುಂದರ,ಭಾವಪೂರ್ಣ ಬರಹ ಮೇಡಂ.
Beautiful poem Madam