ಮಕ್ಕಳ ಸಂಗಾತಿ
ಬಿ.ಟಿ.ನಾಯಕ್
‘ನೋವು ನಲಿವು ಅರಿವು’
ಬಾರಿ ಸುಮಾರು ಎಳು ಎಂಟು ವಯಸ್ಸು ಆಸುಪಾಸಿನ ಮಕ್ಕಳು ಒಬ್ಬ ಧಡೂತಿ ವ್ಯಕ್ತಿಯನ್ನು ಬೆನ್ನತ್ತಿ, ಅವನ ಬೆನ್ನ ಹಿಂದೆಯೇ ಹೋಗುತ್ತಿದ್ದರು. ಆದರೆ ಧಡೂತಿಗೆ ನಡೆಯುವುದೇ ತ್ರಾಸದಾಯಕ ಆಗಿತ್ತು. ಇನ್ನು ಓಡುವದಂತೂ ಅಸಾಧ್ಯದ ಮಾತು. ಅಂಥಹ ವ್ಯಕ್ತಿಯ ಹಿಂದೆ ಮಕ್ಕಳು ಹೋಗಿ, ತಮ್ಮ ಎರಡೂ ಕೈಗಳಿಂದ ಶಕ್ತಿ ಹಾಕಿ ಆತನನ್ನು ತಳ್ಳಿ ಕಿರುಕುಳ ಕೊಡುತ್ತಿದ್ದರು. ಆಗ ಧಡೂತಿ ಆಗ ಅಲ್ಲಿಯೇ ಗಕ್ಕನೇ ಒಂದು ಕ್ಷಣ ನಿಂತು, ಆನೆಯಂಥಹ ತನ್ನ ಮೈಯನ್ನು ಹೊರಳಿಸಿ ಅವರ ಕಡೆಗೆ ನೋಡುವಷ್ಟರಲ್ಲಿ, ಮಕ್ಕಳು ಅಲ್ಲಿಂದ ದೂರಕ್ಕೆ ಓಡಿ ಹೋಗಿ ಬಿಡುತ್ತಿದ್ದರು. ಸ್ವಲ್ಪ ಸಮಯದ ನಂತರ, ಯಥಾ ಪ್ರಕಾರ ಆ ಧಡೂತಿ ಮತ್ತೆ ಮತ್ತೇ ತನ್ನ ಹೆಜ್ಜೆಗಳನ್ನು ಹಾಕ ತೊಡಗುತ್ತಾನೆ. ಅನಂತರವೂ ಮಕ್ಕಳು ತಮ್ಮ ಕೀಟಲೆಯ ಕೆಲಸವನ್ನು ಪುನಃ ಮುಂದುವರೆಸುತ್ತಾರೆ. ಅಂದರೆ, ಮತ್ತೇ ಆತನ ಬೆನ್ನ ಹಿಂದೆ ಹೋಗಿ ಆತನನ್ನು ತಳ್ಳಿ ತಕ್ಷಣ ಓಡಿ ಬಂದು ಬಿಡುತ್ತಾರೆ. ಆ ಧಡೂತಿಗೆ ಇದು ಪ್ರಾಣ ಸಂಕಟವಾಯಿತು. ಹಾಗೆಯೇ ಕಷ್ಟ ಅನುಭವಿಸುತ್ತಾ ಮುಖ ಸಪ್ಪೆ ಮಾಡಿಕೊಂಡು ಅಲ್ಲಿ ನಿಲ್ಲದೇ ತನ್ನ ಹೆಜ್ಜೆಗಳನ್ನು ಅನಿವಾರ್ಯವಾಗಿ ಮುಂದೆ ಹಾಕುತ್ತಿದ್ದ ಮತ್ತು ತನ್ನ ಭಾವಗಳಿಂದ ಪ್ರತಿರೋಧವನ್ನು ತೋರಿಸುತ್ತಿದ್ದ. ಆದರೆ, ಆತನ ಭಾವ ಪ್ರತಿರೋಧನೆ ಮಕ್ಕಳ ಮನಸ್ಸಿನ ಮೇಲೆ ಏನೂ ಪರಿಣಾಮ ಬೀರಲೇ ಇಲ್ಲ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ನಿಂತಿದ್ದ ಒಬ್ಬ ಕಾವಿ ಧಾರಿ ಸಂತರು ಈ ದೃಶ್ಯಾವಳಿಯನ್ನು ನೋಡುತ್ತಲೆಯೇ ಇದ್ದರು. ಆಗ ಅವರು ಧಡೂತಿಯ ರಕ್ಷಣೆಗೆ ಮುಂದಾಗಿ, ಮಕ್ಕಳ ಬಳಿ ಹೋಗಿ ಹೀಗೆ ಹೇಳಿದರು; ‘ಮಕ್ಕಳೇ, ಆತ ತನ್ನಷ್ಟಕ್ಕೆ ತಾನು ನಡೆದುಕೊಂಡು ಹೋಗುತ್ತಿರುವಾಗ, ಆತನಿಗೇಕೆ ತೊಂದರೆ ಕೊಡುತ್ತಿರುವಿರಿ ? ಎಂದಾಗ ; ‘ಅಯ್ಯೋ ಆಗ ನಮ್ಗೆ ಖುಷಿ ಆಗ್ತದೆ, ಹಾಗಾಗಿ ಆತನನ್ನು ತಳ್ತೇವೆ.’ ಎಂದೋಬ್ಬ. ಆಗ ಸಂತರು ಆ ಬಾಲಕನನ್ನು ಉದ್ದೇಶಿಸಿ ಹೀಗೆ ಹೇಳಿದರು; ‘ಮಗೂ ನಿನ್ನ ಹೆಸರೇನು ?’. ‘ನನ್ನೆಸ್ರು ಮಹೇಶ’. ‘ಹೌದಾ…ಮಹೇಶ ಎಂದ್ರೇ ಏನರ್ಥ ?’. ‘ನಂಗೊತ್ತಿಲ್ಲ, ನಂಗೆ ನಮ್ಮಮ್ಮ ಮತ್ತು ಮೇಸ್ಟ್ರು ಹಾಗೆ ಕರೀತಾರೆ.’ ಎಂದ. ಹೋಗಲಿ ಬಿಡು ಮಗು, ನಿನ್ನಮ್ಮನೇನೋ ಸರಿ, ಆದರೆ, ಮೇಸ್ಟ್ರು ಅಂದರೆ ಯಾರು?’. ‘ಅಯ್ಯೋ ಅಷ್ಟು ತಿಳಿದಿಲ್ವೇ?. ಅವ್ರು ನಮ್ಗೆ ಪಾಠ ಹೇಳ್ತಾರೆ’ ಎಂದು ಹೇಳಿ ನಕ್ಕಿತು. ‘ಸರಿ, ಪಾಠ ಅಂದರೆ ಏನು ?’. ‘ಅಯ್ಯೋ ಅದೂ ಹೇಳ್ಬೇಕಾ ? ನಮ್ಮ ಪುಸ್ತಕದಲ್ಲಿ ಇರೋದನ್ನು ಅವರು ಹೇಳ್ತಾರೆ, ಅದೇ ಪಾಠ’. ‘ ನಿನ್ನ ಪುಸ್ತಕದಲ್ಲಿ ಇರೋದನ್ನು ಅವರೇಕೆ ಹೇಳಬೇಕು? ನೀನೆ ಓದಬಹುದಲ್ಲವೇ ?’. ‘ನನ್ನಮ್ಮ ಹೇಳಿದ್ದಾಳೆ, ಮೇಸ್ಟ್ರು ಹೇಳಿದ ಪಾಠವನ್ನೇ ಓದಬೇಕಂತೆ. ಅದಕ್ಕೆ ಹಾಗೆ ಓದೋದು’. ‘ಸರಿ ನಿನಗೆ ಎಂಥಹ ಪಾಠ ಇಷ್ಟ ?’ ‘ನಂಗೆ ಎಲ್ಲಾ ಇಷ್ಟ. ಕೆಲವೊಮ್ಮೆ ಕಷ್ಟ ಆಗುತ್ತದೆ’ ಎಂದ ಬಾಲಕ. ‘ಇಷ್ಟ ಕಷ್ಟ ಎಂದರೆ ಏನರ್ಥ?’ ಸಂತರು ಪ್ರಶ್ನೆ ಹಾಕಿದರು. ‘ನಂಗೆ ಅಳು ಬಂದರೆ ಕಷ್ಟ. ಆದರೆ, ಆಟ ಇಷ್ಟ’. ಎಂದ ಮಹೇಶ. ‘ಸರಿ, ನಿನಗೆ ಇಷ್ಟವಾದದ್ದು ಸಿಕ್ಕರೆ ಎಷ್ಟು ಆನಂದವಾಗುತ್ತದೆ ?’ ‘ ಬಹಳ ಅಂದ್ರೆ ಬಹಳಷ್ಟು ಆನಂದವಾಗುತ್ತದೆ’. ‘ಇನ್ನು ಕಷ್ಟ ಎಂದರೆ ಹೇಗಿರುತ್ತದೆ ?’ ಅದಕ್ಕಾಗಿ ನಿನಗೆ ಅಳು ಏಕೆ ಬರುತ್ತದೆ ?’ ‘ನಂಗೆ ಕಷ್ಟವೆಂದರೆ ಭಯ. ಒಮ್ಮೆ ತರಗತಿಯಲ್ಲಿ ಇರುವಾಗ, ನನ್ನ ಪಕ್ಕದಲ್ಲಿ ಕುಳಿತವನಿಗೆ ನಾನು ಕೀಟಲೆ ಮಾಡಿದಾಗ ಮೇಸ್ಟ್ರು ನನ್ನ ಕೆನ್ನೆಗೆ ಬಾರಿಸಿದ್ದರು. ಆಗ ನನ್ನ ಕೆನ್ನೆ ಉರಿದ ಹಾಗೆ ಆಗಿ ಊದಿ ಕೊಂಡಿತ್ತು. ಅದೇ ಕಷ್ಟ.’ ಎಂದ. ‘ಅಂದರೆ ನೀನು ನಿನ್ನ ಪಕ್ಕದವನಿಗೆ ತೊಂದ್ರೆ ಕೊಟ್ಟದ್ದಕ್ಕೆ ನಿನ್ನ ಮೇಸ್ಟ್ರು ಹೊಡೆದು ಶಿಕ್ಷಿಸಿದರು ಆಲ್ವಾ?’ ‘ ಹೌದು ನಾನು ತಪ್ಪು ಮಾಡಿದ್ದೆ, ಹಾಗಾಗಿ ಅವರು ಬಾರಿಸಿದರು’. ‘ಇಷ್ಟು ಅರ್ಥ ಮಾಡಿಕೊಂಡ ನಿನಗೆ, ಆ ಧಡೂತಿಗೆ ನಿನ್ನ ಸ್ನೇಹಿತ ರೊಂದಿಗೆ ಜೊತೆಗೂಡಿ ಯಾಕೆ ಆತನಿಗೆ ತೊಂದ್ರೆ ಕೊಡ್ತೀರಾ ? ಇದು ತಪ್ಪಲ್ಲವೇ ?’ ‘ಹೌದು ತಪ್ಪು. ಆದರೆ ನಮಗೆ ತಿಳಿಯಲಿಲ್ಲ.’ ಮಹೇಶ ಎಂದಾಗ ಸಂತರು ಹೀಗೆ ಕೇಳಿದರು ; ‘ನಿನ್ನ ಮೇಸ್ಟ್ರುಗೆ ಈ ವಿಷ್ಯ ತಿಳಿದರೆ ಅವರು ನಿನ್ನನ್ನು ಸುಮ್ಮನೆ ಬಿಡ್ತಾರೆಯೇ ? ‘ ಎಂದಾಗ ಮಹೇಶ ಗಾಭರಿಗೊಂಡ ಮತ್ತು ಅಳು ಮುಖ ಮಾಡಿಕೊಂಡ ಮತ್ತು ಹೀಗೆ ಹೇಳಿದ ; ‘ನೀವು ಈ ವಿಷ್ಯ ಮೇಸ್ಟ್ರುಗೆ ಹೇಳ್ಬೇಡಿ. ಅವರಿಗೆ ಕೋಪ ಜಾಸ್ತಿ. ನನ್ನನ್ನು ಹೊಡೆದು ಸಾಯಿಸಿ ಬಿಡ್ತಾರೆ. ಈಗ ನೀವು ಹೇಗೆ ಹೇಳ್ತೀರೋ ಹಾಗೆ ಕೇಳ್ತೀನಿ’ ಎಂದು ಗೋಗರೆದ. ಆಗ ಸಂತರು ಹೀಗೆ ಹೇಳಿದರು ;
‘ಆ ವ್ಯಕ್ತಿಯ ಬಳಿ ಹೋಗಿ, ‘ನಮ್ಮದು ತಪ್ಪಾಗಿದೆ ಕ್ಷಮಿಸು’ ಎಂದು ಎಲ್ಲರೂ ಕೇಳಿರಿ ಎಂದರು. ತಕ್ಷಣವೇ ಎಲ್ಲಾ ಮಕ್ಕಳು ಆ ಧಡೂತಿ ಬಳಿಗೆ ಹೋಗಿ ಹೀಗೆ ಹೇಳಿದರು ; ‘ಅಣ್ಣಾ ನಮ್ಮಿಂದ ತಪ್ಪಾಗಿದೆ ಕ್ಷಮಿಸು’ ಎಂದಾಗ, ಆ ವ್ಯಕ್ತಿ ಏನೂ ಹೇಳಲಿಲ್ಲ. ಆದರೆ, ಮಕ್ಕಳು ಆತನನ್ನು ಬಿಡಲೋಲ್ಲರು. ಹೀಗೆಯೇ ಅಲ್ಲಿ ದೃಶ್ಯಾವಳಿ ನಡೆದಾಗ ಸಂತರು ಅಲ್ಲಿಗೆ ಹೋದರು. ಆಗ ಧಡೂತಿ ಸಂತರ ಕಡೆಗೆ ನೋಡಿ ತನ್ನ ಎರಡೂ ಕೈಯನ್ನು ಜೋಡಿಸಿ, ತನ್ನ ಕಣ್ಣುಗಳಲ್ಲಿ ಆನಂದ ಭಾಷ್ಪ ಮೂಡಿಸಿಕೊಂಡ. ಅಲ್ಲಿ ಆತನ ಕೃತಜ್ಞತೆ ಇತ್ತು. ಆಗ ಸಂತರಿಗೂ ಕೂಡ ಕಣ್ಣಲ್ಲಿ ನೀರು ಬಂದವು. ಅದನ್ನು ನೋಡಿದ ಮಕ್ಕಳೂ ಅಳತೊಡಗಿದವು ಮತ್ತು ಹೀಗೆ ಹೇಳಿದವು ; ‘ನೀವು ಮತ್ತು ಆತ ಏಕೆ ಅಳಬೇಕು ? ನಾವು ತಪ್ಪು ಮಾಡಿದ್ದೇವೆ, ನಾವು ಅಳಬೇಕು’ ಎಂದಾಗ ಸಂತರು ಹೀಗೆ ಹೇಳಿದರು ; ‘ಮಕ್ಕಳಾ, ಆತನ ಮನ ನೋಯಿಸುವ ತಪ್ಪು ಒಂದೇ ಆಗಿಲ್ಲ, ಅದರ ಜೊತೆಗೆ ಇನ್ನೊಂದು ಸೇರಿಕೊಂಡಿದೆ’ ಎಂದರು.
‘ಅಂಥದ್ದು ಏನು? ‘ ಎಂದಾಗ, ಅವರು ಹೇಳಿದರು ; ಅವನು ನಿಮ್ಮ ಕೀಟಲೆ ಹೇಗೋ ಸಹಿಸಿಕೊಂಡ, ಅಲ್ಲದೇ ನಿಮ್ಮನ್ನು ಕ್ಷಮಿಸಿದನೂ ಕೂಡ. ಆದರೆ, ಆತನಿಗೆ ನಿಮ್ಮನ್ನು ಕ್ಷಮಿಸಿದ್ದೇನೆ ಎಂದು ಹೇಳಲು ಆತನಿಗೆ ಬಾಯಿ ಇಲ್ಲ. ಏಕೆಂದರೆ, ಆತ ಮೂಗ’ ಎಂದರು. ಆತನ ಭಾವ ನಾನರಿತೆ. ನೀವು ಮಕ್ಕಳು ಮತ್ತು ಮುಗ್ಧರು, ಹಾಗಾಗಿ ನೀವು ಅರಿಯಲಿಲ್ಲ’ ಎಂದರು. ಆಗ ಧಡೂತಿ ಮತ್ತು ಮಕ್ಕಳು ಆಯಾಸಗೊಂಡಿದ್ದು ಕಂಡು ಕೊಂಡ ಸಂತರು, ತಮ್ಮ ಬಳಿ ಇದ್ದ ಕುಡಿಯುವ ನೀರನ್ನು ಅವರಿಗೆ ಕೊಟ್ಟರು. ಆಮೇಲೆ, ಮಕ್ಕಳ ತಲೆ ಮೇಲೆ ಕೈಯಾಡಿಸಿ, ಸಣ್ಣನೆಯ ನಗು ಬೀರುತ್ತಾ ಅಲ್ಲಿಂದ ಹೊರಟು ಹೋದರು. ಆಮೇಲೆ ಒಬ್ಬರಿಗೊಬ್ಬರು ಕೈಗಳನ್ನು ಬೀಸುತ್ತಾ ಧಡೂತಿ ಮತ್ತು ಮಕ್ಕಳು ಅಲ್ಲಿಂದ ಅವರೂ ಹೋದರು.
ಬಿ.ಟಿ.ನಾಯಕ್