ಶಶಿಕಾಂತ್ ಪಟ್ಟಣ ಅವರ “ಇಂಕಿಲಾಬ್ ಘೋಷಣೆ” ಕವನ ಸಂಕಲನ ಒಂದು ಅವಲೋಕನ ಡಾ. ಮೀನಾಕ್ಷಿ ಪಾಟೀಲ್

ಡಾಕ್ಟರ್ ಶಶಿಕಾಂತ್ ಪಟ್ಟಣ್ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆ ಇರುವ ಪ್ರತಿಷ್ಠಿತ ಪಟ್ಟಣ ಮನೆತನದವರು. ವೃತ್ತಿಯಿಂದ ಔಷಧ ವಿಜ್ಞಾನಿಗಳು ಪ್ರವೃತ್ತಿಯಿಂದ ಸಾಹಿತಿ ಸಂಶೋಧಕರು ಕವಿಗಳು ವಾಗ್ಮಿಗಳು. ವಚನ ಸಾಹಿತ್ಯ ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿರುವ ಇವರು ಬಸವಾಭಿಮಾನಿಗಳು. ಬಸವಣ್ಣನವರು ಇವರಿಗೆ ಆದರ್ಶ. ಬಸವಧರ್ಮವನ್ನು ಪಾಲಿಸುತ್ತ ಸಮಾಜದ ಜನರಿಗೂ ಬಸವ ಧರ್ಮದ ಕುರಿತು ಜಾಗೃತಿ ಮೂಡಿಸುತ್ತಾ ಬಸವಣ್ಣನವರ ಆಶಯಗಳನ್ನ  ಸಮಾಜದಲ್ಲಿ ನೆಲೆಗೊಳಿಸಲು ಶ್ರಮಿಸುತ್ತಿರುವವರು. ಸುಮಾರು 40 ಕೃತಿಗಳನ್ನ ರಚಿಸಿದ್ದಾರೆ.  ಲೋಕಾರ್ಪಣೆಗೊಂಡಿರುವ ” ಇಂಕಿಲಾಬ್ ಘೋಷಣೆ”
ಕವನ ಸಂಕಲನವನ್ನು ಅವಲೋಕಿಸಿದಾಗ ಒಟ್ಟು 82 ಕವನಗಳ ಒಂದು ಗುಚ್ಛ. ಓದುಗರ ಅನುಕೂಲಕ್ಕಾಗಿ ನಾಲ್ಕು ಭಾಗಗಳನ್ನಾಗಿ ಮಾಡಲಾಗಿದೆ.

ಮೊದಲ ಭಾಗದಲ್ಲಿ ಪ್ರೀತಿ ಪ್ರೇಮ ಸ್ನೇಹಕ್ಕೆ ಸಂಬಂಧಿಸಿದ ಕವನಗಳು
ಎರಡನೆಯ ಭಾಗ  ವಚನ ಸಾಹಿತ್ಯ, ಬಸವಧರ್ಮ, ಮಠ ಸಂಸ್ಕೃತಿ ,ಕಾವಿಧಾರಿಗಳ ಮುಖವಾಡ ಇತ್ಯಾದಿ….. ಮೂರನೇ ಭಾಗ ಸಮಾಜದಲ್ಲಿಯ ಮೌಡ್ಯಗಳು ಸಾಮಾಜಿಕ ಕಳಕಳಿ, ಹೋರಾಟ ಇತ್ಯಾದಿ……
ನಾಲ್ಕನೇಯ ಭಾಗದಲ್ಲಿ ದೇಶಭಕ್ತರು ವಿಚಾರವಾದಿಗಳು ಸತ್ಯ ನುಡಿದವರನ್ನು ಗುಂಡಿಟ್ಟು ಕೊಲ್ಲುವ ನೇಣುಗಂಬಕ್ಕೇರಿಸುವ ಕ್ರೂರ ಸಮಾಜದ ಚಿತ್ರಣ…

ಇಲ್ಲಿ ವಚನ ಸಾಹಿತ್ಯ,ಬಸವಣ್ಣನಿಗೆ ಸಂಬಂಧಿಸಿದ ವಿಚಾರಗಳು, ಸಾಮಾಜಿಕ ಸಮಾನತೆ, ಸಮಾನ ನ್ಯಾಯ ಜಾತಿ ವ್ಯವಸ್ಥೆ , ಅಂಧ ಶ್ರದ್ಧೆ, ರಾಜಕೀಯ, ಚುನಾವಣೆ ಯುದ್ಧ ಇವೆಲ್ಲವುಗಳು ಕವಿತೆಗಳಲ್ಲಿ ಅನಾವರಣಗೊಂಡಿವೆ ಇವುಗಳ ಹೊರತಾಗಿಯೂ ಬೆಚ್ಚನೆಯ ಪ್ರೀತಿ ಇದೆ, ಭಾವ ಚಿಲುಮೆ ಇದೆ,ಒಲವು ಚೈತನ್ಯ ಪ್ರೀತಿ ಇವುಗಳು ಹೃದಯವನ್ನು ಹಗುರಾಗಿಸುತ್ತವೆ.ಜೊತೆಗೆ ನಿರೀಕ್ಷೆ ,ನಿರಾಶೆ ವಿರಹ ತಲ್ಲಣಗಳು ಕವಿತೆಯಲ್ಲಿ ಸ್ಥಾನ ಪಡೆದಿವೆ.

ಇತ್ತೀಚೆಗೆ ಕವಿಗಳು ಹೊಸ ಹೊಸ ಪ್ರಕಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕವಿತೆಯನ್ನು ರಚಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಹೊರಗಿನಿಂದ ಆಮದಾದ ಕಾವ್ಯ ಪ್ರಕಾರಗಳು ಕವಿಗಳನ್ನು ಆಕರ್ಷಿಸುತ್ತಿವೆ. ಕೆಲವೇ ನಿರ್ದಿಷ್ಟ ಸಾಲುಗಳಲ್ಲಿ ಅಪಾರ ಅರ್ಥವನ್ನು ಸ್ಪುರಿಸುವ ದ್ವನ್ಯಾತ್ಮಕವಾದ ಕಾವ್ಯ ಪ್ರಯೋಗಗೊಳ್ಳುತ್ತಿರುವುದು ಓದುಗರಿಗೆ ಅನುಕೂಲವಾಗಿದೆ  ಎನ್ನಬಹುದು. ಹೊರಗಿನವುಗಳು ಎಂದು ಹೇಳಲಾದ ಹೈಕುಗಳು ಟಂಕಾ ತನಗ…. ಇನ್ನೂ ಹೊಸ ಹೊಸ ಪ್ರಕಾರಗಳನ್ನುಕವಿಗಳು ಅಳವಡಿಸಿಕೊಳ್ಳುತ್ತಿದ್ದಾರೆ. ಇವುಗಳು ರಚನೆಗೆ ಸರಳವು ಓದಲು ಸುಲಭವಾಗಿರುವ ಗ್ರಹಿಕೆಗೂ ಸರಳವಾಗಿರುವ ಹೊಸ ಬಗೆಯ ಕಾವ್ಯ ಪ್ರಯೋಗಗಳು ಕನ್ನಡ ಸಾಹಿತ್ಯದ ಕಾವ್ಯ ಪ್ರಕಾರದಲ್ಲಿ ಸ್ಥಾನ ಪಡೆಯುತ್ತಿವೆ. ಇಂತಹ ಕೆಲವು ಹೊಸ ಪ್ರಯೋಗಗಳನ್ನ ಪಟ್ಟಣ ಅವರ ಕವನಗಳಲ್ಲಿ ನೋಡಬಹುದು. ಕಿರಿದರಲ್ಲಿಯೇ ಹಿರಿಯರ್ಥವನ್ನು ಒಳಗೊಂಡ ಇಂತಹ ಕವನಗಳು ಓದುಗರನ್ನ ಆಕರ್ಷಿಸುತ್ತವೆ. ಅವಸರದ ಬದುಕಿನಲ್ಲಿ ದೀರ್ಘವಾದ ಸಾಲುಗಳನ್ನ ಓದುವಷ್ಟು ವ್ಯವಧಾನವು ಇಲ್ಲದ ಸಹೃದಯ ಓದುಗರಿಗೆ ಸಹಜವಾಗಿಯೇ ಹೊಸ ಪ್ರಕಾರಗಳು ಮೆಚ್ಚುಗೆಯಾಗುತ್ತವೆ.ಕಡಿಮೆ ಶಬ್ದಗಳಲ್ಲಿ ಒಂದು ವಿಷಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಕವಿ ಪಟ್ಟಣ ಅವರ ಪ್ರತಿಭೆ ಇಲ್ಲಿ ಕಂಡು ಬರುತ್ತದೆ. ಕವಿಯ ಅಭಿವ್ಯಕ್ತಿಗೆ ಅತ್ಯಂತ ಸರಳವಾದ ನಿತ್ಯ ಬದುಕಿನ ಚಟುವಟಿಕೆಗಳು, ವ್ಯವಹಾರಗಳು, ಸಮಾಜದ ಓರೆ ಕೋರೆಗಳು, ನಿಸರ್ಗ, ಪ್ರೀತಿ ,ಅನ್ಯಾಯ, ಅಸಮಾನತೆ ಇವೆಲ್ಲವುಗಳು ಕವಿಯ ಪ್ರತಿಭೆಗೆ ವಸ್ತುವಾಗುತ್ತವೆ. ಕವಿಯ ಪ್ರತಿಭಾ ಕುಲುಮೆಯಲ್ಲಿ ಭಾವನಾತ್ಮಕವಾದ ನೆಲೆಯಲ್ಲಿ ರೂಪಗೊಳ್ಳುತ್ತವೆ. ಭಾವ ಜೀವಿಯಾದ ಕವಿ ಮೂಡಣದ ಹಾದಿಗೆ ರಂಗು ಬಳಿಯುತ್ತಾನೆ, ಕಪ್ಪಾದ ಮೋಡಗಳಿಗೆ ಒಲವ ಮಳೆ ಸುರಿಸುತ್ತಾನೆ, ತನು ತೋಟದಲ್ಲಿ ಪ್ರೀತಿಯನ್ನು ಬಿತ್ತುತ್ತಾನೆ ಹಕ್ಕಿಯ ಹಾಡಿಗೆ ದನಿಯಾಗುತ್ತಾನೆ ಹರಿಯುವ ನೀರಿನಲ್ಲಿ ಮೀಯುತ್ತಾನೆ. ಕವಿಯ ಭಾವ ಕಿರಣದಲ್ಲಿ ಪ್ರಕೃತಿಯ ಚರಾಚರಗಳೆಲ್ಲವೂ ಪ್ರತಿಫಲಿಸುತ್ತವೆ. ಒಮ್ಮೊಮ್ಮೆ ವಾಸ್ತವದ ಕಟು ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಾನೆ. ಬುದ್ಧ ಬಸವ ಅಂಬೇಡ್ಕರ್ ರ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಕವಿ ಅನ್ಯಾಯ ಅಸಮಾನತೆ ಜಾತಿಭೇದ ವಿಚಾರವಾದಿ ಚಿಂತಕರ ಕೊಲೆ ಎಲ್ಲವುಗಳಿಗೆ ಸಿಡಿದೇಳುತ್ತಾನೆ.ಕ್ರೋಧವನ್ನು ವ್ಯಕ್ತಪಡಿಸುತ್ತಾನೆ. ಸರ್ವಜನ ಸುಖವಾಗಿ ಬಾಳಬೇಕು ಎಂಬ ಧೋರಣೆ ಕವಿ ಪಟ್ಟಣ ಅವರದ್ದು.

ಸಮಕಾಲೀನ ಸಂವೇದನೆ ಎಂದರೆ ಕವಿ ತನ್ನ ಸುತ್ತಲಿನ ಪರಿಸರವನ್ನು  ಗ್ರಹಿಸುವುದು ಮತ್ತು ಸ್ಪಂದಿಸುವುದು. ಅಂತ ಸಂವೇದನೆಯಿಂದ ಮತ್ತು ಸಮರ್ಥ ಅಭಿವ್ಯಕ್ತಿಯಿಂದ ಕಾವ್ಯ ಅರ್ಥಪೂರ್ಣವಾಗುತ್ತದೆ. ಈ ಪ್ರಜ್ಞೆಯನ್ನ ಶಶಿಕಾಂತ್ ಪಟ್ಟಣ ಅವರ ಕವನಗಳಲ್ಲಿ  ಕಾಣಬಹುದು.

     ಅಲ್ಲ ನಮ್ಮದು ಮಠದ ಧರ್ಮ ಎನ್ನುವ ಕವನದಲ್ಲಿ


                     ಅಲ್ಲ ನಮ್ಮದು ಮಠಧರ್ಮ
                      ಇಲ್ಲ ಇಲ್ಲ ಕಾವಿ ಕರ್ಮ
                      ಅಲ್ಲ ನಮ್ಮದು ಪೂಜೆ ಧರ್ಮ
                      ಇಲ್ಲ ಸಂಪ್ರದಾಯ ಕರ್ಮ


ಸಾಂಸ್ಥೀಕರಣವನ್ನು ಸ್ಥಾವರಗಳನ್ನು ನಿರಾಕರಿಸಿದ ಬಸವಣ್ಣ, ಬಸವಣ್ಣನ ನಿಲುವಿಗೆ ವಿರೋಧವಾದ ಮಠ ವ್ಯವಸ್ಥೆ, ಪೀಠ ಕಾವಿಧಾರಿಗಳು ಸಮಾಜದಲ್ಲಿ  ವಿಜ್ರಂಭಿಸುತ್ತಿದ್ದಾರೆ ಎನ್ನುವಲ್ಲಿ ಕವಿಯ ವಿಷಾದವಿದೆ


                      ಇಲ್ಲ ಗದ್ದುಗೆ ಕಾಯ ಕರ್ಪೂರ
                      ಇಲ್ಲ ಗುಡಿ ಬಣ್ಣ ಗೋಪುರ
                      ಇಲ್ಲ ಉತ್ಸವ ಜಾತ್ರೆ ಹಬ್ಬ
                      ಸತ್ಯಸಮತೆ ನಮಗೆ ದಿಬ್ಬ


ಸಮಾಜದಲ್ಲಿ ಮೌಡ್ಯತೆಯನ್ನು ಬೆಳೆಸುವ ಡಾಂಭಿಕ ಭಕ್ತರು ಧರ್ಮ ಪೂಜೆಯ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ . ಎನ್ನುವ ಸಂದೇಶವನ್ನು ಸಾರುವ ಕವಿತೆ. ಜಡ ಮತ್ತು ಚೇತನದ ಪರಿಕಲ್ಪನೆಯನ್ನು ಈ ಕವಿತೆಯಲ್ಲಿ ಅತ್ಯಂತ ಸಮರ್ಥವಾಗಿ ಹೇಳಿದ್ದಾರೆ. ಮುಂದುವರೆದು ಮತ್ತೊಂದು ಕವನದಲ್ಲಿ ನಿನ್ನ ಬಿಟ್ಟು ಬಸವಣ್ಣ……


                       ಬಸವಣ್ಣ ನಿನ್ನ ಬಿಟ್ಟು
                       ಮಠವ ಹಿಡಿದೆವು
                       ನಾವು ಮೂಢ ಮೂರ್ಖರು
                       ವಚನ ತೊರೆದು ಅಪ್ಪಿಕೊಂಡೆವು
                       ವೇದಶಾಸ್ತ್ರ ಪುರಾಣ ಕಥೆಗಳ……


ಎನ್ನುವಲ್ಲಿ ವೈದಿಕ ಪರಂಪರೆಯನ್ನು ಅನುಸರಿಸುತ್ತ ಮಠ ಮಂದಿರ ಜಾತ್ರೆ,ಉತ್ಸವ, ಗದ್ದುಗೆ, ಅಧಿಕಾರಗಳ ಮೂಲಕ ಸುಲಿಗೆ ಶೋಷಣೆಯನ್ನೇ ಒಂದು ಉದ್ಯಮವನ್ನಾಗಿ ಹುಟ್ಟು ಹಾಕಿದ್ದೇವೆ ಎನ್ನುವಲ್ಲಿ ವ್ಯವಸ್ಥೆಯ ಕುರಿತು ಕವಿಯ ಆಕ್ರೋಶ ಇಲ್ಲಿ ವ್ಯಕ್ತವಾಗುತ್ತದೆ.
ಕಾವ್ಯ ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾಗುವಂತಿರಬೇಕು. ಇಲ್ಲಿ ಕವಿಯ ಸಂವೇದನೆ ಸೂಕ್ಷ್ಮವಾಗಿರುತ್ತದೆ. ಜನರ ಭಾಷೆಯಲ್ಲಿಯೇ ಅಭಿವ್ಯಕ್ತಿಗೊಳಿಸುವುದು ಬಹಳ ಮುಖ್ಯವಾಗುತ್ತದೆ.
“ಭಾವ ಪ್ರೀತಿ “ಎನ್ನುವ ಕವನದ ಸಾಲುಗಳಲ್ಲಿ ಈ ಆಪ್ತತೆಯನ್ನ  ಕಾಣಬಹುದು.


                        ಬಿಸಿಲು ಬವಣೆ
                        ಕಪ್ಪು ಮೋಡ
                        ಒಲವ ಮಳೆಯ
                        ಹಸಿರು ಸಿಂಚನ
                        ಕಷ್ಟಕೋಟಲೆ
                        ಕಲ್ಲು ಮುಳ್ಳು
                        ಕನಸು ಚಿಗುರು ಸ್ಪಂದನ


ಬದುಕಿನ ತಲ್ಲಣಗಳ ಮಧ್ಯೆ ಒಲವು ಮಳೆ ಸಿಂಚನರಂತೆ ಮನಸ್ಸನ್ನು ತಂಪಾಗಿಸುತ್ತಿದೆ.


                         ನಿನ್ನೊಲುಮೆ ಪ್ರೀತಿಯಲ್ಲಿ
                         ಜೀವ ಸ್ಪೂರ್ತಿ ಅರಳಿ
                        ಕಾವ್ಯವಾಯಿತು ಗೆಳತಿ
                        ಶಬ್ದ ಅಕ್ಷರದಿ……..,


“ನಿನ್ನೊಲುಮೆ”ಮತ್ತು ಸ್ಪಂದನ ಕವನಗಳಲ್ಲಿ


                         ನೋಡಲಿಲ್ಲ ನಾನು ನೀನು
                          ಹಿರಿದು ಕಿರಿದು ಘನ
                          ಹಣ ಕನಕ ಆಸ್ತಿಯು
                          ಒಲುಮೆ ಪ್ರೇಮ ಭಾವೊಂದೆ
                          ಬಾಳ ಬೆಳಕು ಚಂದನ………


ಎನ್ನುವ ಸಾಲುಗಳಲ್ಲಿ ಕವಿಗೆ ಬದುಕು ಒಂದು ಆಹ್ವಾನವಾಗಿ ಜೀವನದ ಆಲೋಚನೆ ಕೂಡ ಇಲ್ಲಿ ಭಾವಪೂರ್ಣವಾಗಿ ಬಾಳ ಗೆಳತಿಯನ್ನು ಕಾವ್ಯಕ್ಕೆ ಸ್ಪೂರ್ತಿಯಂತೆ ರೋಮ್ಯಾಂಟಿಕ್ ಆಗಿಸುವ ಆತ್ಮ ತೃಪ್ತಿಯನ್ನು ಹೊಂದುವ ಸಂವೇದನೆ ಇಲ್ಲಿ ಮುಖ್ಯವಾಗಿದೆ. ಬದುಕಿನ ಅನುಭವಗಳು ಕಾವ್ಯದ ಆವರಣವನ್ನು ವಿಸ್ತಾರವಾಗಿಸುತ್ತಾ ಸುಖ, ದುಃಖ ಒಲವು, ಒಮ್ಮೊಮ್ಮೆ ಜಿಗುಪ್ಸೆ ಸಮಸ್ಯೆಗಳು ಇಲ್ಲಿ ಸಂಕೇತ ರೂಪಕಗಳಾಗಿ ಕಾವ್ಯದಲ್ಲಿ ಮೈದಳೆಯುತ್ತವೆ.



                        ನಾನು ಒಂಟಿ ಪಯಣಿಗ
                        ನಾನು ಮತ್ತು ನನ್ನ ನೆರಳು
                        ಒಮ್ಮೆ ಹಿಂದೆ ಒಮ್ಮೆ ಮುಂದೆ …        
                        ನಗೆ ನೆಮ್ಮದಿ ನನ್ನ ಆಸ್ತಿ        
                        ಕಸಿದುಕೊಳ್ಳಲು ಹಲವು ಯತ್ನ
                        ನೋವು ದುಃಖ ಬೆನ್ನು ಹತ್ತಿದವು….
                       ನಡೆಯಲಾಗದೆ ಬಳಲಿದವು
                       ನೋವು ನಂಜು ನನ್ನ ಕಂಡು.
                       ದುಃಖ ದುಃಖಿಸಿತು……….


ಇಲ್ಲಿ ನೋವು ನಂಜಾಗಿ …..ದುಃಖ ದುಃಖಿಸಿತು ಎನ್ನುವಲ್ಲಿ ಕವಿ ಬಳಸಿರುವ ರೂಪಕ ಕಾವ್ಯದಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ಬದುಕಿನಲ್ಲಿ ಕೆಲವು ಸಂಗತಿಗಳು ವ್ಯಕ್ತಿಯನ್ನು ಅಧೀರನನ್ನಾಗಿ ಮಾಡಿದರೂ ಅವುಗಳಿಗೆ ಎದೆಗೊಟ್ಟು ಧೀರನಾಗಿ ಮುನ್ನಡೆಯುವ ಎದೆಗಾರಿಕೆ ವಾಸ್ತವಿಕ ಬದುಕಿನ ಚಿತ್ರಣವಾಗಿದೆ. ಕೆಲವೊಮ್ಮೆ ಸಂಕೀರ್ಣ ಭಾವಗಳು ಸಹಜವಾಗಿ ಅಭಿವ್ಯಕ್ತಿಗೊಳ್ಳುತ್ತವೆ.ಅಂತ ಸಂದರ್ಭದಲ್ಲಿ ರೂಪಕಗಳು ಕವಿಯ ಭಾವನೆಗಳಿಗೆ ಪುಷ್ಠಿ ನೀಡುತ್ತವೆ. ಆಗ ಅಭಿವ್ಯಕ್ತಿ ಪರಿಪೂರ್ಣವಾಗುತ್ತದೆ.
ಕಾಣದಾ ದೇವರು ಬದಲಾಗುತ್ತಿರುವ ಹೆಸರು ಮುಗಿಯಬಂತು ಶ್ರಾವಣ ಸತ್ಯ ಹೇಳುವ ಹೊತ್ತು ಮುಂತಾದ ಕವನಗಳು ಜಾತಿ ಧರ್ಮ ಕೋಮುಗಲಭೆ ಮೌಧ್ಯತೆ ಡಾಂಬಿಕ ಭಕ್ತರ ಅಟ್ಟಹಾಸ ಅಧಿಕಾರ ದಾಹ ಸತ್ಯ ನುಡಿದವರಿಗೆ ಶಿಕ್ಷೆ ದಲಿತರ ಶೋಷಣೆ ಇತ್ಯಾದಿ…….
ಇಂತಹ ವಿಷಯಗಳನ್ನು ಕುರಿತಾದ ಅವರ ಕವಿತೆಗಳು ಇಂದಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತವೆ ಕವಿ ತಮ್ಮ ಕವನಗಳ ಮೂಲಕ ಸಮಾಜ ವ್ಯವಸ್ಥೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುತ್ತಾನೆ. ಅಲ್ಲದೆ ಸಮಾಜ ಸುಧಾರಣೆಯ ಕನಸನ್ನು ನನಸಾಗಿಸುವತ್ತ ಅವರ ಪ್ರಾಮಾಣಿಕ ಪ್ರಯತ್ನ ಮತ್ತು ಶ್ರಮ ಈ ಕವಿತೆಗಳಲ್ಲಿ ಕಂಡುಬರುತ್ತದೆ. ಅವರ ಸಾಮಾಜಿಕ ಕಳಕಳಿಯನ್ನು  ಎಲ್ಲ ಕವನಗಳೂ ಪ್ರತಿಬಿಂಬಿಸುತ್ತವೆ.


                       ನಿನ್ನ ಬಿಟ್ಟು ಮಠ ಹಿಡಿವ
                       ದುಷ್ಟ ಮೂಳರ ಜಾತ್ರೆಯಲಿ
                       ಉದೋ ಉದೋ ಎನ್ನುವ
                       ಸಂತೆಯಲ್ಲಿ ಮೌನವಾಗಿರುವೆವು    
                       ಬಸವಣ್ಣ ಧ್ವನಿ ಇಲ್ಲದೆ…….


ಎನ್ನುವಲ್ಲಿ ಸಮುದಾಯದ ಬಗೆಗೆ ಕವಿಯ ಹತಾಶ ಭಾವ ಕಂಡುಬರುತ್ತದೆ ಬಡವನಶಕ್ತಿನ ಹಾಗೆ ಮೌನವಾಗಿ ಅಸಹಾಯಕನಾಗಿದ್ದಾನೆ.

                        ಚಂದ್ರನ ಮೇಲೊಂದು
                        ಗುಡಿಯ ಕಟ್ಟುವೆವು
                        ಜಾಗಟ ಗಂಟೆ ಧೂಪ
                        ರುದ್ರ ಮಂತ್ರ ಜಪ ದೀಪ….

ಇಲ್ಲಿ ಮೌಢ್ಯವೆಂಬ ಸಮೂಹ ಸನ್ನಿಯ ನರ್ತನದ ವಿಡಂಬನೆ ಇದೆ.ಶರಣರ ಸತ್ಯದ ಸಂಸ್ಕೃತಿಯ ಬದಲಾಗಿ ಅಂಧಶ್ರದ್ಧೆಯ  ವಿಕೃತಿಯನ್ನು ಚಂದ್ರಲೋಕದವರೆಗೂ ಒಯ್ಯಲು ಜನ ಹಿಂಜರಿಯಲಾರರು ಎಂದು ವ್ಯಂಗ್ಯವಾಗಿ ಟೀಕಿಸುತ್ತಾರೆ.


                         ಬಸವನ ಹೆಸರಲ್ಲಿ
                         ಬದುಕುವೆವು ನಾವು
                         ಮಠಗಳಲ್ಲಿ ಪೀಠದಲ್ಲಿ
                         ಆಶ್ರಮಗಳ ಆಶ್ರಯದಲ್ಲಿ
……….             ಕೊಲೆಗಾರ ಅತ್ಯಾಚಾರಿಗೆ
                         ಮಣೆ ಹಾಕುವೆವು ನಾವು…


ಸಮಕಾಲೀನ ಸಂದರ್ಭದ ಮೌಢ್ಯತೆಯ ವಿರುದ್ಧ ಹೋರಾಡಿದ ಶರಣರ ಆಶಯಗಳಿಗೆ ವಿರುದ್ಧವಾಗಿ ಅಷ್ಟೇ ಅಲ್ಲ ಬಸವಣ್ಣನ ಬ್ರಾಂಡಲ್ಲಿ ಮಠಗಳಲ್ಲಿ ಪೀಠವನ್ನು ಕಟ್ಟಿಕೊಂಡು ಮರೆಯುತ್ತಿರುವ ಕಾವೀಧಾರಿಗಳ ಕುರಿತು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅನುಭವದ ಅಭಿವ್ಯಕ್ತಿಯಲ್ಲಿ ಕವಿಯ ಪ್ರಾಮಾಣಿಕತೆ ಇದೆ. . ಕವಿಯ ಕಣ್ಣೆದುರು ಇಂಥ ಅನೇಕ ಸವಾಲುಗಳಿವೆ.


                          ಭಗತ್ ಸುಖದೇವ ರಾಜಗುರು
                         ಅಪ್ಪಿದರು ಕೊಲ್ಲುವ ಚಂಡಾಲನ
                           ………ಸ್ವರಾಜ್ಯ ಕಾಣದ ಕೊರಗು  
                           ಸಂಕೋಲೆ ಕಳಚಲಿಲ್ಲ ಇಂಕಿಲಾಬ್
                           ಘೋಷಣೆ


“ಅವ್ವ ನೀನು ಬರಬೇಡ” “ ಭಗತನಿಗೆ ಗಲ್ಲು” “ ಭಗತನ ಹುಟ್ಟು” ಈ ಕವನಗಳಲ್ಲಿ ಭಗತ್ ಮತ್ತು ಭಗತ್ ನಂತಹ ವೀರರು ದೇಶಕ್ಕಾಗಿ ಪ್ರಾಣ ತೆತ್ತರು. ಭಾರತಾಂಬೆಯ ಹೆಸರಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ರಾಜಕಾರಣಿಗಳ ಕುರಿತು ಕವಿಯ ಆಕ್ರೋಶವಿದೆ. ಚುನಾವಣೆಗಳ ನಾಟಕೀಯ ಕುರಿತು  ವಿಡಂಬನೆಯಿಂದ ಸ್ಪಷ್ಟಪಡಿಸುತ್ತಾರೆ. ಜಯಪ್ರಕಾಶ್, ವಿನೋಬಾ, ರಾಮ್ ಮನೋಹರ್ ಲೋಹಿಯಾ ಇವರುಗಳು ದೇಶಕ್ಕಾಗಿ ದುಡಿದ ಕಾರ್ಯಗಳ ಬಗ್ಗೆ ಕವಿಗೆ ಅಭಿಮಾನವಿದೆ ಗೌರವವಿದೆ ಹೆಮ್ಮೆ ಇದೆ.


                       ಬಂದೂಕು ಪಿಸ್ತೂಲು ಒಂದೇ  

ಹೊಡೆಯುವ ಕೈಗಳು ಬೇರೆ ಬೇರೆ
                       ಬುದ್ಧ ಬಸವ ಅಂಬೇಡ್ಕರ್ ತತ್ವ
                       ಪ್ರಸಾರ ಮಾಡುವವರ ಮಾರಣಹೋಮ
                       ಸತ್ಯವ ನಂಬಿ ಶಿಲುಬೆಗೆ ಏರಿದ
                       ಕೊಂದವರು ಉಳಿದರು ನೋಡ……

ದೇಶದಲ್ಲಿ ಆತಂಕಕಾರಿ ಬೆಳವಣಿಗೆಗಳುಕೋಮುವಾದಿಗಳು ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿವೆ ಪ್ರಜ್ಞಾವಂತ ಕವಿ ಇಂಥ ವಿಷಮ ವಾತಾವರಣದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಚಂದ್ರಲೋಕಕ್ಕೆ ಹೋದರು ಅಲ್ಲೂ ಕೂಡ ಕೋಮು ಗಲಭೆ ಉಂಟಾದರೆ ಅಚ್ಚರಿಪಡಬೇಕಿಲ್ಲ ಎನ್ನುವ ಮಾತನ್ನು” ಕೋಮು ಗಲಭೆಯ ಮುಗಿಲು” “ ಹಿಂದೂ ಮುಸ್ಲಿಮರ ಕುರುಕ್ಷೇತ್ರ” ಎಂದು ಹೇಳುತ್ತಾರೆ.
              ಇವರು ಕೊಂದರು ಎನ್ನುವ ಕವನದಲ್ಲಿ……….


                      ಅಗೆದು ತೋರಿದ
                      ಇತಿಹಾಸ ಸಂಸ್ಕೃತಿ
                 ಇವರೇ ಕೊಂದರು ಕಲಬುರ್ಗಿಯವರನ್ನು        .                    

ಗೌರಿ ಲಂಕೇಶ್ ಗಟ್ಟಿಯಾದಳು            
                      ಮಣ್ಣಾದಳು ಮರ್ತೆದಿ

                       ಅಂಧಶ್ರದ್ಧೆ ಹೋಗಲೆಂದು
                       ದಾಬೋಲ್ಕರ್ ಹತ್ಯೆಯಾದರು
                       ಸತ್ಯ ಹೇಳಿದ ಪನ್ನಸಾರೆ  
                       ಇಲ್ಲವಾದರು ಭೂಮಿ ಮೇಲೆ

ಡಾ.ಎಂ ಎಂ ಕಲ್ಬುರ್ಗಿ ಅವರಂತಹ ಸಂಶೋಧಕರನ್ನು ಹತ್ಯೆಗೈದು ಸತ್ಯವನ್ನೇ ಕೊಲೆ ಮಾಡಿದರು. ಈ ಅಸಹನೆ ನೋವನ್ನು ಕುರಿತು ಎಲ್ಲಾ ಕಡೆಗಳಲ್ಲಿ ಪ್ರತಿಭಟನೆಗಳಾದವು ದಾಬೊಲ್ಕರ್ ಅವರಂತಹ ಮೂಢನಂಬಿಕೆಯ ವಿರೋಧಿ ವೈದ್ಯರನ್ನು ಮತ್ತು ಪನ್ಸರೆ ಅವರಂತಹ ಧೀಮಂತ ಹೋರಾಟಗಾರರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಖಂಡಿಸಿ ಕವಿ ತಮ್ಮ ಕವನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಕೋಮುವಾದಿಗಳು ಗಾಂಧಿ ಮತ್ತು ಅಂಬೇಡ್ಕರ್ ಅವರಂತಹ ಯುಗಪುರುಷರ ಚಾರಿತ್ರಿವಧೆ ಮಾಡಿದ್ದಾರೆ. ಇಂತಹ ಅಸಹನೀಯ ವಾತಾವರಣದಲ್ಲಿ ಬಸವಣ್ಣನವರ ಆಶಯದೊಂದಿಗೆ ಬಹುತ್ವದ ಮತ್ತು ಸಮಾನತೆಯ ಕನಸುಗಳನ್ನು ತಮ್ಮ ಕವನದ ಸಾಲುಗಳ ಮೂಲಕ ನನಸಾಗಿಸುವ ಛಲ ಹೊತ್ತುಕೊಂಡಿದ್ದಾರೆ ಕವಿ ಶಶಿಕಾಂತ ಅವರು .


       ನಾನು ಬಸವ ಧರ್ಮದಲ್ಲಿ…………
                 ದೇಸಿ ಕಸುಬು ಉಳಿಯಬೇಕು
                 ಶ್ರಮಿಕ ವರ್ಗ ಬದುಕಬೇಕು
                 ದುಡಿಮೆ ಪೂಜೆ ಬೆವರು ತೀರ್ಥ
                 ಬಸವ ಬಾಳಿನ ಅರ್ಥ…


ರಾಮ್ ಮನೋಹರ್ ಲೋಹಿಯಾ ಕವನದಲ್ಲಿ…….


                 ಸಮಾಜವಾದ ಮೂಲತತ್ವ
                ಜೈಲು ಕಂಡ ಯೋಧನು
                ರಾಷ್ಟ್ರ ಪ್ರೀತಿ ತನ್ನ ಉಸಿರು
                ದೇಶವಾಯಿತು ನಿತ್ಯ ಹಸಿರು….


ಸಾಮ್ರಾಜ್ಯಶಾಹಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ದೇಶಿ ಕಸುಬನ್ನು ಕಬಳಿಸಿಕೊಂಡು ಶ್ರಮಿಕ ವರ್ಗದವರ ನಿಟ್ಟುಸುರಿಗೆ ಕಾರಣವಾಗಿದೆ. ಇದರೊಟ್ಟಿಗೆ ಉಗ್ರಗಾಮಿ ಚಟುವಟಿಕೆಗಳು,ದಬ್ಬಾಳಿಕೆ,ಶೋಷಣೆಗಳು ಕೋಮುವಾದಿ ಶಕ್ತಿಗಳು ಸೃಷ್ಟಿಸಿರುವ ಭಯಾನಕ ವಾತಾವರಣದಲ್ಲಿ ಜನ ಸಮುದಾಯ ಬದುಕಬೇಕಿದೆ. ಹತಾಶರಾದ ಜನರಿಗೆ ರಾಮ ಮನೋಹರ್ ಲೋಹಿಯಾ ಅವರ ಸಮಾಜವಾದ ಮತ್ತು ಬಸವಣ್ಣನವರ ಸಮಸಮವಾದ ಅಥವಾ ಸಮ ಸಮಾನತೆಯ ಅರಿವನ್ನು ಮೂಡಿಸಿ ಸ್ಪೂರ್ತಿ ತುಂಬುತ್ತಿದ್ದಾರೆ ಕವಿ . ತಮ್ಮ ಸೃಜನಶೀಲ ಲೇಖನೆಯ ಮೂಲಕ ಜನಸಮುದಾಯದೊಟ್ಟಿಗೆ ಬೆರೆತು ಅವರ ಹೃದಯ ತಟ್ಟುವ ಪ್ರಯತ್ನ ಈ ಕವನಗಳಲ್ಲಿದೆ. ಜಾತಿ ಧರ್ಮ, ಕೋಮು , ಅಸ್ಪೃಶ್ಯತೆ,ಶೋಷಣೆ ಮತ್ತು ಅಸಮಾನತೆ ಇವುಗಳನ್ನು ಮೀರಿ ಬಹು ಎತ್ತರದ ಆಲೋಚನೆಯ ಸುಂದರ ಸಮಾಜ ಸಮ ಸಮಾಜ ಸಮಾನತೆಯ ಆಶಯಗಳ ಕನಸುಗಳನ್ನು ಹೊತ್ತ ಕಾವ್ಯ ಎಂದು ಹೇಳಬಹುದು. ಇಂಥ ವಿಚಾರಗಳನ್ನು ಕವಿ ತಮ್ಮ ಕವನಗಳಲ್ಲಿ ಚಿತ್ರಿಸಿದ್ದಾರೆ. ಒಟ್ಟಾರೆ ಅವರ ಕವನಗಳ ವಸ್ತು ವಚನ ಸಾಹಿತ್ಯ ಮತ್ತು ಬಸವಣ್ಣನವರ ತತ್ವಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಕವಿ ಮತ್ತೆ ಬಸವ ಯುಗ ಸಮಾಜದಲ್ಲಿ ನಿರ್ಮಾಣ ಆಗಬೇಕು ಎಂಬ ತುಡಿತವಿದೆ ತಮ್ಮ ಅನುಭವಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಸರ್ವಧರ್ಮ ಸಮನ್ವಯತೆಯನ್ನು ಪ್ರತಿಪಾದಿಸುವ ವಚನ ಸಾಹಿತ್ಯಕ್ಕೆ ಸ್ಪಂದಿಸುವ ಅವರ ವಾಸ್ತವಿಕ ಮನೋಭಾವ ಆದರಣೀಯ.
         ಶಶಿಕಾಂತ್ ಪಟ್ಟಣ ಅವರಿಂದ ಇಂಥ ಮತ್ತಷ್ಟು ಕೃತಿಗಳು ರಚನೆಯಾಗಲಿ ಈ ಮೂಲಕ ಸಾಮಾಜಿಕ ಬದಲಾವಣೆಯಾಗಲಿ,  ಬುದ್ಧ ಬಸವ ಅಂಬೇಡ್ಕರರು ಕಂಡ ಕನಸು ನನಸಾಗಲಿ. ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಹೋರಾಟದ ಹಾದಿಯಲ್ಲಿ ಒಂದು ಹೆಜ್ಜೆ ಗುರುತು ಮೂಡುವಂತಾಗಲಿ ಎಂದು ಹಾರೈಸುವೆ.


4 thoughts on “ಶಶಿಕಾಂತ್ ಪಟ್ಟಣ ಅವರ “ಇಂಕಿಲಾಬ್ ಘೋಷಣೆ” ಕವನ ಸಂಕಲನ ಒಂದು ಅವಲೋಕನ ಡಾ. ಮೀನಾಕ್ಷಿ ಪಾಟೀಲ್

  1. ಭರವಸೆಯ ಕವಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಇವರ ಕವನಗಳನ್ನು ಒಳಗೊಂಡ ಅವರ ವೈಚಾರಿಕ ಚಿಂತನ ಆಶಯ ನಿಮ್ಮಿಂದ ಅನಾವರಣ ಆಗಿದೆ ಮೇಡಂ

  2. ಶಶಿಕಾಂತ ಪಟ್ಟಣ ಸರ್ ಒಬ್ಬ ಹೃದಯವಂತ
    ಮತ್ತು ಅಷ್ಟೇ ನಿಷ್ಠುರಿಯಾದ ಕ್ರಾಂತಿಕಾರಿ ಕವಿ … ದೇಶ ಪ್ರೇಮಿ… ಸಾಮಾಜಿಕ ಕಳಕಳಿಯುಳ್ಳ ಒಬ್ಬ ಜವಾಬ್ದಾರಿ ನಾಗರಿಕ.. ಈ ಎಲ್ಲ ವಿಶೇಷಣಗಳನ್ನು ಹೊಂದಿದ ಸರ್ ಬರೆದ ಕವನ ಸಂಕಲನ… ಇಂಕಿಲಾಬ ಘೋಷಣೆ ಯ ಅವಲೋಕನ ಬಹಳ ಸುಂದರವಾಗಿ ಮೂಡಿ ಬಂದಿದೆ…ಮೇಡಂ
    ಧನ್ಯವಾದಗಳು

    ಸುಶಿ

Leave a Reply

Back To Top