“ಹಳ್ಳಿಗಾಡಿನ ಜನರ ಪ್ರೀaತ್ಯಾದರ” ಸುಧಾ ಹಡಿನಬಾಳ ಲೇಖನ

ಭಾರತ ಹಳ್ಳಿಗಳ ದೇಶ ; ಈ ದೇಶದ ಅಸ್ಮಿತೆ ಇರುವುದೇ ಹಳ್ಳಿಗಳಲ್ಲಿ. ಇಲ್ಲಿನ ಮುಗ್ಧ ಜನರ ಪ್ರೀತಿ ಆದರಾತಿಥ್ಯ,  ಶ್ರಮ ಸಂಸ್ಕೃತಿ, ಕೌಟುಂಬಿಕ ಪ್ರೇಮ ಇವೆಲ್ಲ ಯುವ ತಲೆಮಾರಿಗೆ ಮಾದರಿಯಾಗಬೇಕಾದದ್ದು. ಇಂದಿಗೂ ಒಂದಿಷ್ಟು ಜಾತಿ ಪದ್ಧತಿ, ಮೂಢನಂಬಿಕೆ ಇವೆಲ್ಲ ಹಳ್ಳಿಗಾಡಿನಲ್ಲಿ ಬೇರು ಬಿಟ್ಟಿವೆಯಾದರೂ ವಿದ್ಯಾವಂತ ಬುದ್ಧಿಜೀವಿಗಳಿರುವ ನಗರ ಪರಿಸರಕ್ಕಿಂತ ಸಾವಿರ ಪಾಲು ಮಿಗಿಲಾದ ಸಂಸ್ಕೃತಿ ಹಳ್ಳಿಗಾಡಿನಲ್ಲಿದೆ. ವಿನಾಕಾರಣ ಯಾರಿಗೂ ಕೇಡು ಬಗೆಯದ, ಮಾನವೀಯ ಹೃದಯ, ಅನುಕಂಪವಿರುವ ಹಿರಿಯರ ಉಪಸ್ಥಿತಿಯಿಂದಲೇ ಇಂದಿಗೂ ಭಾರತ ತನ್ನ  ಸಂಸ್ಕಾರವನ್ನು ಉಳಿಸಿಕೊಂಡು ಬಂದಿದೆ .ಅದಕ್ಕೆ ಜೀವಂತ ನಿದರ್ಶನವೆಂಬಂತೆ ಇತ್ತೀಚಿನ ಅನುಭವವೊಂದು
ಕನ್ನಡಿ ಹಿಡಿದಿದೆ .ಬಹಳ ಸಂತೋಷದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಕೆಲ ಹವ್ಯಕ ಸಮುದಾಯದ ಜನರು ಕೂಡ ಜಾತಿ ಪದ್ಧತಿಯನ್ನು ಮೀರಿ ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿಯನ್ನು ಹೊಂದುವತ್ತ ಬದಲಾವಣೆಯ ಹೊಸ ತಂಗಾಳಿಯೆಂದು ಬೀಸುತ್ತಿರುವುದು .ಆದರೂ ಇಂದಿಗೂ ವಿದ್ಯಾವಂತರೆನಿಸಿಕೊಂಡ ಅನೇಕರಲ್ಲಿ ಈ ತಾರತಮ್ಯ ಧೋರಣೆ ಮಾತು ಕೃತಿಯಲ್ಲಿ ಎದ್ದು ಕಾಣುತ್ತಿರುವುದು ಕೂಡ ಬೇಸರದ ಸಂಗತಿ . ನಾನು ನೋಡಿದ ಒಂದು ಕೂಡು ಕುಟುಂಬದ ಹವ್ಯಕ ಸಮುದಾಯದ ಆದರಾತಿಥ್ಯ ,  ಮಾನವೀಯ ನಡೆ ಮನಸ್ಸಿಗೆ ತುಂಬಾ ಹಿತವೆನಿಸಿ ದಾಖಲಿಸಬೇಕೆನಿಸಿತು.

ಪ್ರತಿ ಐದು ವರ್ಷಕ್ಕೊಮ್ಮೆ   ಬರುವ ವಿವಿಧ  ಹಂತದ ಸಾರ್ವತ್ರಿಕ ಚುನಾವಣೆಗಳು ಸರ್ಕಾರಿ ನೌಕರರ ಪಾಲಿಗೆ ಒಂದು ರೀತಿಯ ಕಡ್ಡಾಯ ಕರ್ತವ್ಯದ ಜೊತೆಗೆ ಮಾನಸಿಕ ಕಿರಿಕಿರಿಯೂ ಕೂಡ!  ಉರಿ ಬಿಸಿಲ ಧಗೆಯಲ್ಲಿ ಏಪ್ರಿಲ್ ಮೇ ರಜೆಯಲ್ಲಿ ಎಲ್ಲಿಗೂ ಹೋಗಲಾರದೆ ಚುನಾವಣೆ ಗೋಸ್ಕರ ಕಾದು ಕುಳಿತು ಯಾವುದೋ ಹಳ್ಳಿಗಾಡಿನ ಶಾಲೆ,  ಯಾರೋ ಒಂದಿಷ್ಟು ಅಪರಿಚಿತ ತಂಡದೊಟ್ಟಿಗೆ ಕೆಲಸ ಮಾಡಬೇಕಾದ  ಪ್ರಮುಖವಾದಂತಹ ಜವಾಬ್ದಾರಿ;  ಅದನ್ನ ಪೂರ್ತಿಯಾಗಿ ನಿಭಾಯಿಸಿ ಹೊರ ಬರುವವರೆಗೂ ಒಂದು ರೀತಿಯ ಆತಂಕ,  ಒತ್ತಡ.  ಹಾಗಂತ ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ. ಸರಕಾರದ ಸೇವಕರಾದ ನಾವುಗಳು  ಚುನಾವಣಾ ಕರ್ತವ್ಯವನ್ನು ಜೊತೆಗೆ  ಸರ್ಕಾರದ ಯಾವುದೇ ಕೆಲಸವಿರಲಿ ಅಷ್ಟೇ ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿಭಾಯಿಸುತ್ತಾ ಬಂದಿದ್ದೇವೆ ಕೂಡ. ಈ ಬಾರಿಯ ಚುನಾವಣೆ ಕೂಡ ನನ್ನ ಪಾಲಿಗೆ ಒಂದು ಹೊಸ ಅನುಭವ;  ಹೃದಯ ತಟ್ಟುವಂತಹ ಕಳೆದ ವರ್ಷದ ಚುನಾವಣಾ ಅನುಭವ  ಕೂಡ
  ಅಕ್ಷರ ರೂಪದಲ್ಲಿ ದಾಖಲಾಗಿತ್ತು. ಅಂತಹುದೇ ಇನ್ನೊಂದು  ಕುಟುಂಬದ ಪರಿಚಯ ತಮ್ಮ ಮುಂದೆ .

ಈ ಬಾರಿ ಭಟ್ಕಳ  ವಿಧಾನಸಭಾ ಮತಕ್ಷೇತ್ರದ  ನಮ್ಮದೇ ತಾಲೂಕಿನ ಮೇಲಿನ ಮಣ್ಣಿಗೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಮ್ಮ ತಂಡ ನಿಯೋಜಿಸಲ್ಪಟ್ಟಿತು. ಅಷ್ಟೇನೂ ದೂರವಲ್ಲದ  ಗುಡ್ಡಗಾಡಿನ ತೊಪ್ಪಲಿ ನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ;  ಸುತ್ತಲೂ  ಹಸಿರು ಹೊದಿಕೆ  ಹೊದ್ದ ಸಹ್ಯಾದ್ರಿ ಶ್ರೇಣಿ,  ತಗ್ಗು ಪ್ರದೇಶದಲ್ಲಿರುವ ಅಡಿಕೆ ಚಪ್ಪರದಲ್ಲಿ  ಚದುರಿದ ಚಿತ್ತಾರದಂತೆ ದೂರ ದೂರದಲ್ಲಿ ಹರಡಿಕೊಂಡಿದ್ದ ಮನೆಗಳು, ನಿರ್ಜನ ಪ್ರದೇಶದ  ಸುಂದರ ಪರಿಸರ ಮನಸ್ಸಿಗೆ ಹಿತ ನೀಡಿತು.  ತಂಡದ ನಾಯಕರೂ ನಗುಮೊಗದ, ಅರ್ಹ ವ್ಯಕ್ತಿಯಾಗಿದ್ದು ಇಡೀ ತಂಡ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸುವ ಉತ್ಸಾಹದಲ್ಲಿದ್ದೆವು,

 ಆದರೂ ಕೂಡ ಹೆಣ್ಣು ಮಕ್ಕಳಿಗೆ ಊಟ ತಿಂಡಿಗಿಂತ ರಾತ್ರಿ ಮಲಗುವ,  ಸ್ನಾನ ಶೌಚ ಇತ್ಯಾದಿ ಕ್ರಿಯೆಗಳಿಗೆ ಒಂದು ವ್ಯವಸ್ಥೆಯಾಗಿ ಬಿಟ್ಟರೆ ಮನಸ್ಸಿಗೆ ನೆಮ್ಮದಿ .ಇತ್ತೀಚಿಗೆ ಬಹುತೇಕ ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳು,  ಪ್ರತಿ ತರಗತಿಗೆ ಫ್ಯಾನ್, ವಿದ್ಯುತ್ತು ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ  ಸಂದರ್ಭದಲ್ಲಿ ಇನ್ನಷ್ಟು ಮುತುವರ್ಜಿಯಿಂದ  ವ್ಯವಸ್ಥೆ ಮಾಡಲಾಗುತ್ತದೆ.ಹೀಗಾಗಿ ಉಳಿದುಕೊಳ್ಳಲೇನು ಸಮಸ್ಯೆ ಇರಲಿಲ್ಲ .ಆದರೆ ಸ್ನಾನ ಒಂದನ್ನು ಪೂರೈಸಬೇಕಲ್ಲ ! ಸ್ನಾನದ ಕೊಠಡಿಗಳು ಸರ್ಕಾರಿ ಶಾಲೆಯಲ್ಲಿ ಇರಲಾರವು, ಶೌಚಾಲಯದಲ್ಲಿ ಸ್ನಾನ ಮಾಡಲು ಮನಸ್ಸು ಒಪ್ಪದು. ಉರಿಯುವ ಧಗೆಯಲ್ಲಿ ಸ್ನಾನ ಮಾಡದೆಯೂ ಬೆವರಿನ  ಸ್ನಾನದಿಂದಲೇ ಮೈ ಒದ್ದೆಯಾಗುತ್ತಿರುವಾಗ ತಣ್ಣನೆ ಸ್ನಾನ ಮಾಡದೆ ಇರಲು ಸಾಧ್ಯವೇ?  ಅದೊಂದು ಸಮಸ್ಯೆ ಕಾಡುತ್ತಿತ್ತು. ಸಂಜೆಯಾಗುತ್ತಿದ್ದಂತೆ ನಮ್ಮ ಬರವಣಿಗೆಯ ಕೆಲಸದಲ್ಲಿ  ನಾವಿರುವಾಗ  ಶಾಲೆಯ ತಗ್ಗು ಪ್ರದೇಶದಲ್ಲಿರುವ ಒಂದು ಕುಟುಂಬದ ಹಿರಿಯ ಯಜಮಾನರು ಶಾಲೆಗೆ ತಮ್ಮ ಪುಟ್ಟ ಮೊಮ್ಮಗು ವಿನೊಂದಿಗೆ ಬಂದರು;  ಬರುವಾಗ ಒಂದು ಡಬ್ಬ ತುಂಬಾ ಘಮ್ಮೆನ್ನುವ  ಬಿಡಿಸಿದ ಬೊಕ್ಕೆ ಹಲಸಿನ ಹಣ್ಣಿನ ಸೊಳೆಗಳನ್ನು ತಂದು ಕೊಟ್ಟರು. ಚುನಾವಣಾ  ಕರ್ತವ್ಯಕ್ಕೆ ಹೋದವರಿಗೆ ಈ ಬಗೆಯ ಸತ್ಕಾರ ಆಶ್ಚರ್ಯ!  ಈ ಸೀಸನ್ ನ ಮೊದಲ ಹಲಸಿನ ಹಣ್ಣಿನ ರುಚಿ ಇದಾದದ್ದರಿಂದ ಹಲಸಿನ ಹಣ್ಣಿಗೆ ಇನ್ನಷ್ಟು ರುಚಿ ಬಂದಿತ್ತು ! ಮತ್ತೆ ತುಂಬಾ ಉದಾರವಾಗಿ ಪ್ರೀತಿಯನ್ನೆಲ್ಲ ಡಬ್ಬದಲ್ಲಿ ತುಂಬಿ ಕಳುಹಿಸಿದ ಹಿರಿಯರು ಅತಿಥಿಗಳನ್ನು ಆದರಿಸುವಂತೆ ತಂಡದಲ್ಲಿರುವ ನಾವು ಮೂವರು ಮಹಿಳಾ ಸಿಬ್ಬಂದಿಗಳನ್ನು ತುಂಬಾ ಪ್ರೀತಿಯಿಂದ ತಮ್ಮ ಮನೆಗೆ ಬಂದು ಮಲಗುವಂತೆ,  ಬೆಳಿಗ್ಗೆ ಸ್ನಾನವನ್ನು ಕೂಡ ಅಲ್ಲಿಯೇ ಮುಗಿಸಿ ಬರುವಂತೆ ಆಹ್ವಾನಿಸಿದ್ದರು .ಅವರ ಪ್ರೀತಿ ಅತಿಥಿ ಸತ್ಕಾರ ಕೇವಲ  ಔಪಚಾರಿಕವಾಗಿರದೆ ಮನಸ್ಸಿಗೆ ತಟ್ಟುವಂತಿತ್ತು. ಹೀಗಾಗಿ ಒಂದಿಷ್ಟು ಬರವಣಿಗೆಯ ಕೆಲಸ ಮುಗಿಸಿ ಹಲಸಿನ ಹಣ್ಣಿನ ಪರಿಮಳವನ್ನು  ಆಸ್ವಾದಿಸುತ್ತಾ ಹೊಟ್ಟೆ ತಣ್ಣಗಾಗಿಸಿಕೊಂಡು ಮೂವರು ಸೇರಿ ಪರಿಸರದ ಸೊಬಗನ್ನು ಸವಿಯುತ್ತಾ ರಸ್ತೆಯಲ್ಲಿ ಒಂದು ಸುತ್ತು ವಾಯು ವಿಹಾರಕ್ಕೆ ಹೋಗಿ ಬರುವಾಗ ತಗ್ಗು ಪ್ರದೇಶದಲ್ಲಿರುವ ಹೆಗಡೆಯವರ ಮನೆಗೆ  ಹೋಗಿ ಮನೆಯ ಪರಿಸರವನ್ನು ನೋಡಿಕೊಂಡು ಬರೋಣವೆಂದು ಹೋದೆವು. ಶಾಲೆಯಿಂದ ಸುಮಾರು 25 ಮೆಟ್ಟಿಲು ಇಳಿದು ಹೋದರೆ ದೊಡ್ಡದಾದ ಮನೆ . ಮನೆಗೆ ಹೊಂದಿಕೊಂಡಂತೆ ಎತ್ತರದಲ್ಲಿ ದೊಡ್ಡ ಕೊಟ್ಟಿಗೆ. ಅಲ್ಲಿ ಸಂಜೆಗತ್ತಲಲ್ಲೂ ಸೊಂಟಕ್ಕೆ ಟವೆಲ್ ಬಿಗಿದು ಬೆನ್ನು ಬಾಗಿಸಿ ಕೊಟ್ಟಿಗೆ ಕೆಲಸದಲ್ಲಿ ತೊಡಗಿರುವ ಮನೆಯ ಹಿರಿಯ ಸದಸ್ಯೆ. ಪ್ರೀತಿಯಿಂದ  ಹೊರಗೆ ಬಂದು ಮಾತನಾಡಿಸಿದಾಗ ಅವರ ಬಗೆಗೇನೋ ಗೌರವ ಭಾವ.
 ಮನೆಯಲ್ಲಿರುವ ಹಿರಿಯರು, ಇಡೀ ಕೂಡು ಕುಟುಂಬಕ್ಕೋರ್ವ ಮೊಮ್ಮಗು ಬಂದ ಖುಷಿ  ; ಒಟ್ಟಾರೆ  ಒಂದು ಆತ್ಮೀಯ ವಾತಾವರಣ ಕಂಡು ಹಿತವೆನಿಸಿತು.ಆ ಹಿರಿಯ ಜೀವಗಳಿಂದ ತುಂಬಾ ಪ್ರೀತಿಯ ಮಾತುಗಳು, ಮನೆಯವರ , ಗೋಡೆಯ  ಮೇಲಿರುವ ಪೋಟೋಗಳ ಪರಿಚಯ,  ಇಡೀ ಮನೆಯನ್ನೆಲ್ಲ ತೋರಿಸಿ ಪ್ರತಿ ವರ್ಷ ಚುನಾವಣಾ ಕರ್ತವ್ಯಕ್ಕೆ ಬರುವ ಮಹಿಳಾ ಸಿಬ್ಬಂದಿಗಳು ಸ್ನಾನಕ್ಕೆ ಮನೆಗೆ ಬಂದು ಹೋಗುತ್ತಾರೆ ನೀವು ಕೂಡ ಬನ್ನಿ;  ಮಾಳಿಗೆಯ ಮೇಲೆ ತೋರಿಸಿ ಅಲ್ಲಿ ಬೇಕಾದರೂ ಮಲಗಿಕೊಳ್ಳಬಹುದು ಎಂದು  ತುಂಬಾ ಪರಿಚಿತರೇನೊ ಎಂಬಂತೆ ಮನೆಯ ಮಹಿಳೆಯರು ಯಜಮಾನರು ಕಂಡುಬಂದರು. ರಾತ್ರಿ ಬರಲಾಗದಿದ್ದರೆ ಶೌಚಾಲಯವನ್ನು ಸ್ನಾನದ ಮನೆಯನ್ನು ತೋರಿಸಿ ಬಂದು ಸ್ನಾನ ಮಾಡಿ ಹೋಗುವಂತೆ ಹೇಳಿದರು.
ಶಾಲೆಯಲ್ಲಿ ಮಲಗಿಕೊಳ್ಳಲು ಎಲ್ಲ ರೀತಿಯ ಅನುಕೂಲ ಇದ್ದುದರಿಂದ ಮತ್ತೆ ಯಾಕೆ ತೊಂದರೆ ಕೊಡುವುದೆಂದು ಅವರ ಮನೆಗೆ ಹೋಗಿರಲಿಲ್ಲ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮೂವರು ಮನೆಯ ಹೊರಗಡೆ ಇರಬಹುದಾದ ಸ್ನಾನಗೃಹಕ್ಕೆ  ಹೋದೆವು. ಹೊಸದಾಗಿ  ಕಟ್ಟಿಸಿದ ದೊಡ್ಡದಾದ ಸ್ನಾನಗೃಹ, ಅದಕ್ಕೆ ಹೊಂದಿಕೊಂಡಂತೆ ಇದ್ದ ಶೌಚಾಲಯ .. ಬಿಸಿನೀರಿನ  ಅಗತ್ಯ ಇಲ್ಲವೆಂದು ಹೇಳಿದ್ದರೂ ರಾತ್ರಿಯೇ ಬೆಂಕಿ ಒಟ್ಟಿ ನೀರು ಕಾಯಿಸಿಟ್ಟಿದ್ದರು. ಹೀಗಾಗಿ ಮನೆಯವರನ್ನು ಎಬ್ಬಿಸದೆ ಎಲ್ಲಾ ಮುಗಿಸಿ ಮನಸ್ಸಿನಲ್ಲೇ ಅವರಿಗೊಂದು ಧನ್ಯವಾದ ಹೇಳುತ್ತಾ  ಅವರ ಉದಾರ ಹೃದಯ ಶ್ರೀಮಂತಿಕೆಯ ಬಗ್ಗೆ ಮಾತನಾಡುತ್ತಾ ಐದು ಗಂಟೆಗೆಲ್ಲ ಮತ್ತೆ ಶಾಲೆಗೆ ಬಂದು ಸೇರಿದೆವು..    ಜೊತೆಗೆ ಶಾಲೆಯಲ್ಲಿ ಅಡಿಗೆ ಸಿಬ್ಬಂದಿಗಳು ಪ್ರೀತಿಯನ್ನು ಉಣಬಡಿಸಿ ಉಪಚರಿಸಿದ್ದರಿಂದ ಚುನಾವಣಾ ಕರ್ತವ್ಯ ಹೊರೆಯಾಗದೆ ಸಂತಸವಾಗಿ ಕಳೆದು ಹೋಯಿತು.  ಈ ಒಂದು ಚುನಾವಣಾ ಕರ್ತವ್ಯ ಮನಸ್ಸಿಗೆ ಹಿತ ನೀಡಿರುವುದರ ಜೊತೆಗೆ ಆ ಹೆಗಡೆಯವರ ಕುಟುಂಬದ ಎಲ್ಲರನ್ನೂ ಒಳಗೊಳ್ಳುವ,  ಜಾತಿ ಭೇದವನ್ನೆಲ್ಲ ಮೀರಿ ನಿಂತ  ಮನಸ್ಥಿತಿ ಮನಸ್ಸಿಗೆ ತುಂಬಾ ಹಿಡಿಸಿತ್ತು.. ಯಾಕೆಂದರೆ  ಇಂತಹ ಮನಸ್ಥಿತಿಯ ಕುಟುಂಬಗಳು ಕೇವಲ ಬೆರಳೆಣಿಕೆಯಷ್ಟು ಇರಬಹುದಷ್ಟೆ! ಮನೆಯ ಯಜಮಾನರ ಹೆಸರು ಕೇಳದಿದ್ದರೂ ಮೇಲಿನ ಮಣ್ಣಿಗೆಯ ಶಾಲೆಯ ಕೆಳಗಿನ ಹೆಗಡೆಯವರ ನೆನಪು ಮನಸ್ಸಿನಲ್ಲಿ ಚಿರಕಾಲ  ಉಳಿಯುವಂತಿತ್ತು.   ಇಂತಹ ಮುಗ್ಧ ಮನಸ್ಸಿನ ಹಿರಿಯ ಜೀವಗಳ ಪ್ರೀತಿ, ಆದರ ಹಳ್ಳಿಗಾಡಿನ ಸಾಮಾಜಿಕ ಜೀವನದ ಹೆಗ್ಗುರುತು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಪರಿವರ್ತನೆಯ ತಂಗಾಳಿ ಬೀಸುತ್ತಿರುವುದು ಸಂತಸದ ಸಂಗತಿಯಲ್ಲವೆ?

2 thoughts on ““ಹಳ್ಳಿಗಾಡಿನ ಜನರ ಪ್ರೀaತ್ಯಾದರ” ಸುಧಾ ಹಡಿನಬಾಳ ಲೇಖನ

  1. ಮನಮುಟ್ಟುವ ಸುಂದರ, ಸರಳ ಲೇಖನ…
    ಆ ಹೆಗಡೆ ಅವರ ಉಪಕಾರ ನೆನೆದು
    ಬರಹ ರೂಪದಲ್ಲಿ ದಾಖಲಿಸಿದ ನಿಮ್ಮ
    ಉಪಕಾರ ಸ್ಮರಣೆ ನಿಜಕ್ಕೂ ಸ್ಲಾಘ ನೀಯ
    ..! ಜಯವಾಗಲಿ..!!

Leave a Reply

Back To Top