‘ಮಾತು ಹೀಗಿರಲಿ ಅಲ್ಲವೇ?’ ಹನಿಬಿಂದು ಲೇಖನ

ಬಸವಣ್ಣ ಹೇಳಿದ ಮಾತು ಎಲ್ಲರಿಗೂ ತಿಳಿದಿದೆ. “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು…” ಬದುಕು ಈ ನುಡಿಯ ಮೇಲೆಯೇ ನಿಂತಿದೆ ಅಲ್ಲವೇ? ನಮ್ಮ ನಡೆ ನುಡಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲುದು ಎಂಬುದಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧೀಜಿ ಇವರು ಸಾಕ್ಷಿ. ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲಿ ಏನು ಕರೆ ಕೊಟ್ಟರೂ ಅದನ್ನು ಮಾಡಲು ಭಾರತೀಯರು ತುದಿಗಾಲಲ್ಲಿ ನಿಂತಿದ್ದರು. ಯಾರು ಅವರ ಮಾತನ್ನು ಕೇಳಲಿಲ್ಲವೋ ಅವರೆಲ್ಲ ಉಗ್ರಗಾಮಿಗಳು ಎನಿಸಿ ನೇಣಿಗೆ ಕೊರಳೊಡ್ಡಿದರು.
      ” ಮೀನು ಮಾರುವವಳ ಜೊತೆ ಗೆಳೆತನಕ್ಕಿಂತ ಗಂಧ ಮಾರುವವಳ ಜೊತೆ ಜಗಳವೆ ಲೇಸು”  ಎಂಬ ಒಂದು ಗಾದೆ ಮಾತು ಇದೆ. ಅಂದರೆ ಒಳ್ಳೆಯ ಜನರೊಡನೆ ಗೆಳೆತನ ಮಾಡಬೇಕು ಎಂಬ ಅರ್ಥ. ಇಲ್ಲಿ ಉತ್ತಮ ಮಾತುಗಾರರ ಜೊತೆ ಸೇರಿದರೆ ನಾವು ಬೆಳೆಯುತ್ತೇವೆ. ಜಗಳಗಂಟರ, ಸದಾ ಋಣಾತ್ಮಕವಾಗಿ ಯೋಚಿಸುತ್ತಾ ಅದರ ಬಗ್ಗೆಯೇ ಮಾತನಾಡುವವರ ಜೊತೆ ಸೇರಿದಾಗ ನಾವು ಕೂಡ ಅಧಮರು ಎನಿಸಿಕೊಳ್ಳುತ್ತೇವೆ ಅಲ್ಲವೇ?
         ಮಾತಿನಲ್ಲೇ ಸರಸ, ವಿರಸ ಎಲ್ಲಾ ಅಲ್ಲವೇ? ನಮ್ಮ ಯೋಚನೆಗಳೇ ನಮ್ಮ ಮಾತುಗಳಾಗಿ ಹೊರ ಹೊಮ್ಮುವುದಲ್ಲವೇ? ನಮ್ಮ ಆಲೋಚನೆಗಳು ಉತ್ತಮವಾಗಿ ಇದ್ದರೆ ಮಾತುಗಳೂ ಕೂಡ ಅವುಗಳಲ್ಲಿ ಹೊರ ಹೊಮ್ಮುತ್ತವೆ. ಮಾತು ಮೃತ್ಯು, ಮಾತೇ ಮುತ್ತು. ಮಾತಿನಲಿ ವೀಣೆ ನುಡಿಸಬಹುದು, ಮಾತಿನಲಿ ಕಥೆ ಕಟ್ಟಬಹುದು, ಮಾತಿನಲಿ ಜಗಳ, ಮಾತಿನಲ್ಲೇ ಮಂಟಪ, ಮಾತಿನಲ್ಲೇ ಸರಸ ವಿರಸ..
    ಮತ್ತೂ ಬರಲು ಮುತ್ತು ಉದುರಲು ಮಾತು ಬೇಕು, ಮಾತೆಂದರೆ ಮುತ್ತು ಉದುರುವುದು ಮಾತ್ರವಲ್ಲ, ಮತ್ತು ಕೊಡುವಂತೆ ಇರಬೇಕು, ಮೆಟ್ಟುವಂತೆ ಇರಬಾರದು, ಮುತ್ತುವಂತೆ, ಮನ ಮುಟ್ಟುವಂತೆ ಇರಬೇಕು. ಮಾತಿನಲಿ ಮಿತ್ಯ ಇರಬಾರದು. ಮಾತು ನಗು ತರುವಂತೆ, ನಗುವಂತೆ ಇರಬೇಕೆ ಹೊರತು ಪರರ ಅಣಕಿಸುವಂತೆ ಇರಬಾರದು.      
      ಮಾತಿನಲ್ಲಿ ಮನೆ ಕಟ್ಟುವವರೂ, ಮಾತಿನಲ್ಲಿ ಮೂಗು ತೋರಿಸುವವರೂ, ಮಾತಿನಲ್ಲಿ ಮನೆ ಕೆಡಿಸುವವರೂ, ಮಾತಿನಲ್ಲೇ ಮುತ್ತು ಉದುರಿಸುವವರೂ, ಮಾತೆಂದರೆ ಜಗಳ ಎನ್ನುವವರೂ, ಮಾತಿನಲ್ಲೇ ಬೀಳುವವರೂ, ಮಾತಿನಲ್ಲೇ ಬದುಕುವವರೂ, ಮಾತಿನಲ್ಲೇ ಕೊಳ್ಳುವವರು, ಮಾತಿನಲ್ಲೇ ಬೇಳೆ ಬೇಯಿಸುವವರು, ಮಾತಿನಲ್ಲೇ ಕಟ್ಟಿ ಹಾಕುವವರು, ಮಾತಿನಲ್ಲಿ ಬೆಲ್ಲ, ಮಾತೆಂದರೆ ಬೇವು ಹಲವರದು.
     ಕೆಲವರು ಮಾತನಾಡಲು ಶುರುವಿಟ್ಟರೆ ಎಸ್ಕೇಪ್ ಆಗಲು ನೋಡುವವರು ಹಲವಾರು ಮಂದಿ ಇದ್ದಾರೆ. ಮೈಕ್ ಸಿಕ್ಕಿದರೆ ಸಾಕು ಗಂಟೆಗಟ್ಟಲೆ ಮಾತನಾಡುವ ಜನರೂ ಇದ್ದಾರೆ. ಬರೀ ಸುಳ್ಳಿನಲ್ಲೇ ಮಾತನಾಡಿ ಎಲ್ಲರನ್ನೂ ಮೆಚ್ಚಿಸಿ ತಾನು ಗ್ರೇಟ್ ಅನ್ನಿಸಿಕೊಳ್ಳುವವರೂ ಇದ್ದಾರೆ. ಮಾತಿಗೆ ಮಾತು ಬೆಳೆದು ಜಗಳಕ್ಕೆ  ತಲುಪಿ ಮನೆ ಎರಡು ಮಾಡುತ್ತದೆ, ಕುಟುಂಬ ಎರಡು ಮಾಡುತ್ತದೆ, ರಾಜ್ಯ, ದೇಶ ತುಂಡರಿಸುತ್ತದೆ! ಮಾತಿಗೆ ಅದೆಂತಹ ಪವರ್!!!
     ನಮ್ಮ ಮಾತು ಮುದ ಕೊಡುವಂತೆ ಇರಲಿ, ದೇಶ ಕಟ್ಟುವಂತೆ ಇರಲಿ, ರಾಜ್ಯ ಬೆಳಗುವ ಹಾಗಿರಲಿ, ಮನೆ ಮೇಲೆ ಮನೆಯೇರುವ ಹಾಗಿರಲಿ, ಸತ್ಯ ಇರಲಿ, ಮಾತು ಮುತ್ತಿನಂತೆ, ಚಿನ್ನದಂತೆ, ಹಿತವಾಗಿ, ಮಿತವಾಗಿ ಇರಲಿ. ಮೆತ್ತುವಂತೆ ಇರದೆ ಎಲ್ಲರೂ ಮೆಚ್ಚುವಂತೆ ಇರಲಿ. ಮನ್ನಿಸುವ ಹಾಗಿರಲಿ, ಮುದ್ಧಿಸುವ ಹಾಗಿರಲಿ, ಮೆಚ್ಚಿಸುವಂತೆ ಇರದೆ, ಮೆಚ್ಚುವ ಹಾಗಿದ್ದರೆ ಚೆನ್ನ ಅಲ್ಲವೇ? ಮಾತೇ ಮಾಣಿಕ್ಯ. ಮಾತೆ ಒಪ್ಪುವ ಮಾತಿರಲಿ. ಮಾತು ಸಕ್ಕರೆಯಂತೆ ಸಿಹಿಯಾಗಿ ಇರಲಿ, ಮತ್ತು ಬರುವಂತೆ ಬೇಡ, ಮುತ್ತು ಕೊಡುವಂತೆಯೂ ಬೇಡ, ಮತ್ತಿನಲಿ ಮಾತಾಡುವುದು ಬೇಡ, ಕನ್ನಡ ಮಾತಾಡೋಣ, ತಾಯ್ನುಡಿ ಮರೆಯದೆ ಇರೋಣ, ಮಾತಿಂದ ಸರ್ವರನ್ನು ಮತಿಗೊಳಿಸೋಣ. ಕಷ್ಟ ಎನ್ನುವವರ ಮಾತಿಗಿಳಿಸಿ ಕಷ್ಟ ಮರೆಸೋಣ. ಮತ್ತೆ ನೀವೇನಂತೀರಿ?

———————————

One thought on “‘ಮಾತು ಹೀಗಿರಲಿ ಅಲ್ಲವೇ?’ ಹನಿಬಿಂದು ಲೇಖನ

Leave a Reply

Back To Top