ಅಪ್ಪಂದಿರ ದಿನದ ವಿಶೇಷ-ವೈ.ಎಂ.ಯಾಕೊಳ್ಳಿ

ಅಪ್ಪನೆಂಬುವ ಪದಕೆ
ಪರ್ಯಾಯವೇ ಇಲ್ಲ
ಹೊತ್ತ ಹೊಣೆಗಳ ಭಾರ
ತೋರದಂತೆ ಬದುಕಿದನಲ್ಲ

ಇರುವ ಕಷ್ಟ ತೋರಗೊಡದೆಯೆ
ಬರಿ ಸುಖವನುಣಿಸಿದನು
ಕಷ್ಟದ ಝಳದ ಕಿರಣ ತಾಕಿಸದೆ
ತಂಪಾದ ಗಾಳಿಯೊಲು ಬೀಸಿದನು

ದಿನ ರಾತ್ರಿಗಳನೊಂದಾಗಿಸಿ ದುಡಿದು
ಕರಿಹೊಲವ ಹಸಿರಾಗಿಸಿದನು
ಬರಡಾದ ಬಾಳಿಗೆ ಪ್ರೀತಿ ಜಲವ
ಎರೆದು ಖುಷಿಯನುಣಿಸಿದನು

ಸಂಕಟವೇನೆ ಇರಲಿ ತಾನುಂಡು
ಮಕ್ಕಳೈವರ ಸಲಹಿದನು
ಅವ್ವನೆಂಬ ಸಮ ಎತ್ತನು ಜೋಡಿ
ಹೂಡಿ ಬಾಳ ಬಂಡಿ ಮುನ್ನಡೆಸಿದನು

ಫಲವೆಂಥದೆ ಇರಲಿ ದುಡಿದು ಬಂದುದು
ನಿನ್ನದು ಬೇರಾವುದಲ್ಲ ಹೇಳಿದನು‌ಪಾಠ
ಅವನ ಶಾಲೆಯಲಿತ್ತು ಪ್ರಾಮಾಣಿಕತೆ
ಸತ್ಯದೊಲುಮೆಯ ಕೂಡಿದ ಪಠ್ಯ

ಬೆಳ್ಳಂಬೆಳಕು ಕಾಂತಿಯಲಿ ಬೆಳಕು
ಹರಡಿರುವದಕೆ ಕಾರಣವೆ ಅಪ್ಪನೆಂಬ ದೈವ
ಅವ್ವನೆಂಬ ಜೊತೆಯ ಜೀವ ಜೋಡಿ
ಅವಗೆ ಪರ್ಯಾಯವಿರದ ಜೀವ


Leave a Reply

Back To Top