“ಅಕ್ಕಮಹಾದೇವಿ”ನಂರುಶಿ ಕಡೂರು ಅವರ ಬರಹ

ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು

      ಅಕ್ಕನು ತಮ್ಮ ವಚನಗಳಲ್ಲಿ ಒಳಾರ್ಥಗಳನ್ನೇ ನಮಗೆಲ್ಲ “ಬೂದಿ ಮುಚ್ಚಿದ ಕೆಂಡದಂತೆ” ಹಿಡಿದು ತೋರಿಸಿದ್ದಾರೆ. ನಾವು ಊಹಿಸಿದಂತೆ ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು * ಅವರವರ ಭಾವಕ್ಕೆ ಅವರವರ ಭಕ್ತಿಗೆ ನೋಡುವ ದೃಷ್ಟಿಕೋನ ಬೇರೆಯಾದಂತೆ ವಚನದ ಅರ್ಥ ವಿಸ್ತಾರ ಬೇರೆಯಾಗುತ್ತ ಹೋಗುತ್ತದೆ.

    ಈ ವಚನದಲ್ಲಿ ಅಕ್ಕನವರು ನಾವು ಎಲ್ಲೇ ಇದ್ದರು, ಏನೇ ಮಾಡಿದರೂ, ಸಾವು ಯಾರಿಗೂ, ಎಂದಿಗೂ ಬಿಡುವುದಿಲ್ಲವೆಂಬ ತಾತ್ಪರ್ಯವನ್ನು ಸಾರಿದ್ದಾರೆ. ಯಾವ ವಿದ್ಯೆಯ ಕಲಿತರೇನು? ಚಿರಂಜೀವಿಯಾಗಿ ಉಳಿಯಲು ಸಾಧ್ಯವೇ ಇಲ್ಲ. ಹುಟ್ಟಿದ ಮನುಷ್ಯ ಎಂದಾದರೊಂದು ದಿನ ಸಾಯಲೇ ಬೇಕು. ಜೀವವ ಉಳಿಸುವೆನೆಂದು ಹೇಳುವ ವಿಶ್ವದ ಸರ್ವಶ್ರೇಷ್ಟ ವೈದ್ಯನೇ ಆಗಲಿ, ತನ್ನ ಮೋಡಿ ವಿದ್ಯೆಯಿಂದ ಎಲ್ಲರ ಕಣ್ಣುಕಟ್ಟುವ ಜಾದೂಗಾರನೇ ಆಗಿರಲಿ ಅವನಿಗೂ ಕೂಡ ಸಾವು ತಪ್ಪಿದ್ದಲ್ಲ. ಎಲ್ಲರ ಬೆನ್ನ ಹಿಂದೆ ಕಾಣದಂತ ಮತ್ತು ನಮ್ಮನ್ನು ಎಚ್ಚರಿಸುತ್ತಿರುವ ಒಂದೇ ಒಂದು ನಿಗೂಢ ಶಕ್ತಿ ಎಂದರೆ ಸಾವು ಮಾತ್ರ. ಅಶನವ ಎಂಬ ಪದ ಬಳಕೆ ಕೂಡ ಅಷ್ಟೇ ಉತ್ಕೃಷ್ಟವಾಗಿದೆ, ತಿನ್ನುವ ಎಂಬ ಅರ್ಥ ಬರುತ್ತದೆ. ನಾನು ಏನನ್ನು ತಿನ್ನುವುದಿಲ್ಲ, ತಿಂದರೆ ರೋಗಗಳು ನನ್ನ ಬೆನ್ನುಬಿಡದೆ ಸುತ್ತುತ್ತವೆ, ಅದರಿಂದ ದೂರವಿರಬೇಕೆಂದು ಇಚ್ಚಿಸಿ, ಉಸಿರಾಡುತ್ತಿರುವೆ ಅಷ್ಟೇ ಸಾಕು ನಾನು ಜೀವಿಸಲು ಎಂದು ಊಟವನ್ನೇ ತ್ಯಜಿಸಿದರೂ ಬಿಡದು ಸಾವು. ನಮ್ಮ ಒಳಗೆ ಅವಿತಿರುವ ಉತ್ತಮ ಅಭ್ಯಾಸಗಳು ಇಲ್ಲ ಕೆಟ್ಟ ಅಭ್ಯಾಸಗಳಿಂದ ಪುಣ್ಯ ಹೆಚ್ಚಾಗಿ ಇಲ್ಲ ಪಾಪ ಹೆಚ್ಚಾಗಿಯಾದರೂ ನಾನು ಬದುಕುವೆ ಎಂಬ ಮೂಢನಂಬಿಕೆಯನ್ನು ಇಟ್ಟುಕೊಳ್ಳುವಂಗಿಲ್ಲ. ಉಸಿರು ಒಳಗೆ ಹೋಗಿ ಹೊರಗೆ ಬರುತ್ತಲಿದ್ದರೆ ಅಷ್ಟೇ ನಾವು ಜೀವಂತ. ಅದನ್ನೇ ನಾನು, ನನ್ನ ದಿವ್ಯ ಶಕ್ತಿಯಿಂದ ನಿಲ್ಲಿಸಿ ಬದುಕುವೆ ಎಂಬ ಭಂಡತನವಿದ್ದರೂ ಬಿಡದು. ತಾಯಿಯ ಬಸುರಲ್ಲಿ ಇದ್ದರೆ ಉಳಿಯುವೆ, ಇದೇ ನನ್ನ ಸುರಕ್ಷತೆಯ ಸ್ಥಳವೆಂದರೂ ಸಾವು ಎನ್ನುವ ಭೂತ ಅಲ್ಲಿಗೂ ಬಿಡದೆ ಲಗ್ಗೆಯಾಕುವುದು. ಎಲ್ಲಿಯೂ ಸಾವನ್ನು ಮೀರಿ ಇರಲು ಸಾಧ್ಯವಿಲ್ಲ. ಈ ಹುಲು ಮಾನವ ಚಾಪೆ ಕೆಳಗೆ ನುಸುಳಿದರೆ, ರಂಗೋಲಿ ಕೆಳಗೆ ವಿಧಿ(ಸಾವು) ನುಸುಳುತ್ತದೆ. ಧರೆಯೇ ಹೊತ್ತಿ ಉರಿಯುವಾಗ ಬದುಕಲು ಸಾಧ್ಯವೇ? ಊರ ಕಾಯುವ ತಳವಾರನ ಕಣ್ಣು ತಪ್ಪಿಸಿ ಹೋಗಲು ಸಾಧ್ಯವೇ? ಈ ನೆಲವೇ ತಳವಾರನಾದಾಗ ಅವನ ಕಣ್ಣಿಗೆ ಬೀಳದಿರಲು ಆಗುವುದೇ? ಇಲ್ಲ. ಬೀಳಲೇ ಬೇಕು. ಒಂದಲ್ಲ ಒಂದು ದಾರಿಯಲ್ಲಿ, ಒಂದಲ್ಲ ಒಂದು ಸ್ಥಳದಲ್ಲಿ, ಅಥವಾ ಒಂದು ವೇಳೆಯಲ್ಲಿ ಸಿಗಲೇ ಬೇಕು. “ಹುಟ್ಟು ಉಚಿತ ಸಾವು ಖಚಿತ” ಎಂಬ ನಾಣ್ಣುಡಿಯಂತೆ ಹುಟ್ಟಿದ ಮನುಷ್ಯ ಎಂದಾದರೂ ಒಂದು ದಿನ ಸಾಯಲೇಬೇಕು. ಅವನು ಎಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರೂ, ಇಲ್ಲ ಎಷ್ಟೇ ಕೆಟ್ಟ ಕೆಲಸಗಳನ್ನು ಮಾಡಿದ್ದರೂ ಮರಣವೆನ್ನುವ ಗಾಳಿ ಯಾರನ್ನೂ ಬಿಡದು.  ಚೆನ್ನಮಲ್ಲಿಕಾರ್ಜುನ ನೀನೊಬ್ಬನೇ ಇಲ್ಲಿ ಅಗೋಚರವಾಗಿ ಅಚಲವಾಗಿ ಉಳಿಯುವವನು. ಅದಕ್ಕಾಗಿ ಅಂಗದಲ್ಲಿರುವ ಜೀವ ಶಾಶ್ವತವಲ್ಲವೆಂದು ತಿಳಿದ ಮೇಲೆ, ನಮ್ಮ ಹೆಸರಾದರೂ ಅಳಿಯದೇ ಇರುವಂತಹ ಕೆಲಸಗಳನ್ನು ಈ ಜೀವ ಇದ್ದಾಗಲೇ ಮಾಡಬೇಕು. ಏನಾದರೊಂದು ಸಾಧಿಸಿ, ನಾಲ್ಕು ಜನಕ್ಕೆ ನಾವು ಕೈಲಾದಷ್ಟು ಉಪಯೋಗಕ್ಕೆ ಬಂದರೇ, ಅಷ್ಟೇ ಸಾಕು. ನಾವು ಮಣ್ಣಾದ ಮೇಲೂ, ನಮ್ಮ ಹೆಸರು ಇನ್ನೂ ನಾಲ್ಕಾರು ದಿನವಾದರೂ ಇರುತ್ತದೆ. ಜೀವವೇ ಹೋದ ಮೇಲೆ ಉಳಿದಿದ್ದೆಲ್ಲ ನಮಗೇಕೆ? ಎಂಬ ತಾತ್ಸರತೆ ಇರಬಾರದು.

        ಅಗೋಚರವಾಗಿರುವ ಅವನಲ್ಲದೆ ಇನ್ನುಳಿದ ಜೀವವಿರುವ ತೃಣಗಳಿಗೆಲ್ಲ ಸಾವು ಕಟ್ಟಿಟ್ಟ ಬುತ್ತಿ. ಇಂದಲ್ಲ ನಾಳೆ ಬರಲೇಬೇಕು. ಇದರಿಂದ ಬಿಡುಗಡೆ ಎನ್ನುವುದು ಇಲ್ಲವೇ ಇಲ್ಲ. ಕೇವಲ ಕೆಲವು ದಿನಗಳ ತನಕ ಮುಂದೂಡಬಹುದಲ್ಲದೇ,  ತಿರಸ್ಕರಿಸಲು ಅಥವಾ ಜಯಿಸಲು ಸಹ ಯಾರಿಂದಲೂ ಸಾಧ್ಯವಿಲ್ಲ. “ಜಾತಸ್ಯ ಮರಣಂ ಧೃವಂ” ಎಂಬಂತೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇಬೇಕು ಎಂದು ತಮ್ಮ ವಚನದಲ್ಲಿ ಅಕ್ಕನವರು ಮಾರ್ಮಿಕವಾಗಿ ಬಿಂಬಿಸಿದ್ದಾರೆ.


Leave a Reply

Back To Top