ಕೆಪ್ಪ
ಅಂಜನಾ ಹೆಗಡೆ
ಕೆಪ್ಪನ ಕಥೆ ಶುರುವಾಗುವುದು ನವರಾತ್ರಿಯಿಂದ. ನವರಾತ್ರಿಯೆಂದರೆ ಅದು ಅಂತಿಂಥ ನವರಾತ್ರಿಯಲ್ಲ. ಹಳೇಮನೆ ರಾಮಚಂದ್ರಣ್ಣನ ನವರಾತ್ರಿಯೆಂದರೆ ಯಲ್ಲಾಪುರ ತಾಲೂಕಿನಲ್ಲೆಲ್ಲ ಮನೆಮಾತಾದ ನವರಾತ್ರಿ ಅದು. ಚೌತಿ ಹಬ್ಬ ಮುಗಿದು ಇನ್ನೇನು ಹತ್ತೋ ಹದಿನೈದೋ ದಿನವಾಗುವಷ್ಟರಲ್ಲಿ ರಾಮಚಂದ್ರಣ್ಣನ ನವರಾತ್ರಿಯ ಧಾವಂತ ಶುರುವಾಗುತ್ತಿತ್ತು. ಅಟ್ಟದ ಮೇಲಿನ ಅಡಿಕೆ ಕಂಬಗಳನ್ನು ಒಂದೊಂದಾಗಿ ಕೆಳಗಿಳಿಸಿ ದೇವರಮನೆಯಲ್ಲಿ ನಿಲ್ಲಿಸುವುದರಿಂದ ಶುರುವಾಗುವ ನವರಾತ್ರಿ ಸಂಭ್ರಮ ಹಳೆಮನೆಯಲ್ಲಿ ವಿಜಯದಶಮಿಯವರೆಗೂ ಇರುತ್ತಿತ್ತು. ಅಲ್ಯೂಮಿನಿಯಂ ಬೋಗುಣಿಯೊಂದರಲ್ಲಿ ತಾನೇ ಕೈಯಾರೆ ತಯಾರಿಸಿಕೊಂಡ ಗೋಧಿಅಂಟಿನೊಂದಿಗೆ ಪ್ರತೀರಾತ್ರಿ ರಾಮಚಂದ್ರಣ್ಣ ಶಾರದೆಯ ಮಂಟಪ ರೆಡಿಮಾಡಲು ಕೂತುಬಿಡುತ್ತಿದ್ದ. ‘ಅಚ್ಯುತಂ ಕೇಶವಂ ರಾಮನಾರಾಯಣಂ’ ಎನ್ನುವ ತನ್ನ ಪ್ರೀತಿಯ ಭಜನೆಯೊಂದನ್ನು ಲಯಬದ್ಧವಾಗಿ ಹಾಡುತ್ತಾ ರಾಮಚಂದ್ರಣ್ಣ ಮಂಟಪ ಕಟ್ಟಲು ಕೂತನೆಂದರೆ ಇಡೀ ಹಳೇಮನೆ ಕೇರಿಯೇ ಅಲ್ಲಿ ನೆರೆಯುತ್ತಿತ್ತು.
ಯೋಚಿಸಿದರೆ, ಕೆಪ್ಪನಿಗೂ ನನಗೂ ಅಂಥ ವ್ಯತ್ಯಾಸವೇನಿಲ್ಲ. ನಾನು ರಾಮಚಂದ್ರಣ್ಣನ ಮನೆ ಸೇರಿದಾಗ ನನಗೆ ಹನ್ನೊಂದು ವರ್ಷ. ಐದನೆಯ ಕ್ಲಾಸಿನವರೆಗೆ ಮಾತ್ರವೇ ಓದಲು ಅವಕಾಶವಿದ್ದ ಅಂಕೋಲೆಯ ಚಿಕ್ಕ ಹಳ್ಳಿಯೊಂದರಲ್ಲಿ ನಾನು ಹುಟ್ಟಿದ್ದು. ಅಮ್ಮನ ತಂಗಿ ಗಂಗಾಚಿಕ್ಕಿಯನ್ನು ರಾಮಚಂದ್ರಣ್ಣನ ತಮ್ಮನಿಗೆ ಮದುವೆ ಮಾಡಿಕೊಟ್ಟಿದ್ದರು. ರಾಮಚಂದ್ರಣ್ಣ ವಯಸ್ಸಿನಲ್ಲಿ ನನ್ನ ಅಪ್ಪನಿಗಿಂತ ದೊಡ್ಡವನಾಗಿದ್ದರೂ ನಾವೆಲ್ಲ ಅವನನ್ನು ಕರೆಯುತ್ತಿದ್ದದ್ದು ರಾಮಚಂದ್ರಣ್ಣ ಅಂತಲೇ. ರಾಮಚಂದ್ರಣ್ಣನಿಗೆ ಇದ್ದ ಒಬ್ಬನೇ ಮಗ ಹಾವು ಕಚ್ಚಿ ಸತ್ತುಹೋದನೆಂದು ಗಂಗಾಚಿಕ್ಕಿ ಯಾವಾಗಲೋ ಹೇಳಿದ್ದು ಬಿಟ್ಟರೆ, ಆ ವಿಷಯವನ್ನು ಯಾರೂ ಮಾತಾಡುತ್ತಿರಲಿಲ್ಲ. ರಾಮಚಂದ್ರಣ್ಣ ಮಾತ್ರ ಯಾವ ದುಃಖವೂ ಶಾಶ್ವತವಲ್ಲವೆಂಬ ನಿರ್ಲಿಪ್ತತೆಯಲ್ಲಿ ಊರಿನ ಮಕ್ಕಳನ್ನೆಲ್ಲ ವಿಶ್ವಾಸದಿಂದ ನೋಡುತ್ತಾ ತಾನಾಯಿತು ತನ್ನ ನವರಾತ್ರಿಯಾಯಿತು ಎಂಬಂತೆ ಇದ್ದುಬಿಡುತ್ತಿದ್ದ. ನಾನು ಐದನೇ ಕ್ಲಾಸು ಮುಗಿಸಿ ಬೇಸಿಗೆರಜೆಯ ಮಜವನ್ನೆಲ್ಲ ಚಿಕ್ಕಮ್ಮನ ಮನೆಯಲ್ಲಿಯೇ ಅನುಭವಿಸಿ ಮುಗಿದಮೇಲೆ, ಮನೆಗೆ ವಾಪಸ್ಸು ಕರೆದೊಯ್ಯಲು ಅಪ್ಪ ಬಂದಿದ್ದ. ಅಪ್ಪ, ಚಿಕ್ಕಪ್ಪ, ರಾಮಚಂದ್ರಣ್ಣ ಮಧ್ಯಾಹ್ನದ ಮೇಲೆ ಬಾಳೆಕಾಯಿ ಚಿಪ್ಸ್ ತಿನ್ನುತ್ತಾ ಚಾ ಕುಡಿಯುವಾಗ ನನ್ನ ಆರನೇ ಕ್ಲಾಸಿನ ಸಮಸ್ಯೆ ಧುತ್ತೆಂದು ಚಿಪ್ಸ್ ಪ್ಲೇಟಿಗೆ ಬಿತ್ತು. “ಅದೆಂಥ ಸಮಸ್ಯೆ, ಅವಳು ನಮ್ಮನೇಲೇ ಶಾಲೆಗೆ ಹೋಗಲಿ; ನಮ್ಮನೆಲ್ಲೂ ನವರಾತ್ರಿಗೊಂದು ದುರ್ಗೆ ಬೇಕು ಮಾರಾಯ” ಎಂದವನೇ ರಾಮಚಂದ್ರಣ್ಣ ಚಾ ಲೋಟಾ ತೊಳೆಯಲು ಎದ್ದುಹೋದ. ಆವತ್ತಿಂದ ಹಳೇಮನೆ ನವರಾತ್ರಿಯ ಪರ್ಮನೆಂಟ್ ದುರ್ಗೆ ಆದೆ ನಾನು.
ನನಗೆ ನೆನಪಿದ್ದಂತೆ ಅದು ನನ್ನ ಏಳನೇ ಕ್ಲಾಸಿನ ನವರಾತ್ರಿಯಿರಬೇಕು. ವಿಜಯದಶಮಿಯ ದಿನ ಶಾರದೆಯನ್ನು ಕಳುಹಿಸಿ, ಕೇರಿಯ ಹೆಂಗಸರೆಲ್ಲ ‘ಹರಸಿದಳೆಲ್ಲರಿಗೂ ಶಾರದೆ ಒಲಿದು’ ಎಂದು ಹಾಡುತ್ತಿದ್ದ ಎಮೋಷನಲ್ ಸನ್ನಿವೇಶದಲ್ಲಿ ಈ ಕೆಪ್ಪ ಕೇರಿಗೆ ಕಾಲಿಟ್ಟಿದ್ದ. ಅವನು ತೊಟ್ಟಿದ್ದ ಬೆಳ್ಳನೆಯ ಬಟ್ಟೆಯಿಂದಲೂ ಇರಬಹುದು ತುಸು ಜಾಸ್ತಿ ಕಪ್ಪಗೆ ಕಾಣಿಸುತ್ತಿದ್ದ. ಹಳೇಮನೆ ಕೇರಿಯ ಮೊದಲ ಮನೆಯಾಗಿದ್ದ ರಾಮಚಂದ್ರಣ್ಣನ ಮನೆಯ ಅಂಗಳದ ಮೆಟ್ಟಿಲಮೇಲೆ ತನ್ನದೇ ಮನೆಯೆಂಬಂತೆ ಬಂದು ಕುಳಿತುಕೊಂಡ. ಬಸ್ ಸ್ಟಾಪಿಗೆ ಹತ್ತಿರದಲ್ಲೇ ಇದ್ದ ಹಳೇಮನೆಗೆ ಬಸ್ಸು ತಪ್ಪಿಸಿಕೊಂಡವರು ನೀರು ಕುಡಿಯಲೆಂದೋ ಅಥವಾ ಮುಂದಿನ ಬಸ್ಸಿನ ಸಮಯ ಕೇಳಲೆಂದೋ ಬರುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡ ನಮಗೆಲ್ಲ ಅವನಿಗೆ ಮಾತು ಬರುವುದಿಲ್ಲ ಎನ್ನುವುದು ಅರ್ಥವಾಗಿದ್ದು ಅವನು ಅದೇನನ್ನೋ ಹೇಳಲು ಪ್ರಯತ್ನಿಸಿದಾಗಲೇ. ಅವನು ಪ್ರಯತ್ನಿಸಿದ ಮಾತುಗಳೆಲ್ಲ ವಿಚಿತ್ರ ಶಬ್ದಗಳನ್ನು ಹೊರಡಿಸಿದವಾದರೂ ಯಾವುದೂ ಅರ್ಥವಾಗಲಿಲ್ಲ. ರಾಮಚಂದ್ರಣ್ಣ ಆಗಷ್ಟೇ ಪೂಜೆ ಮುಗಿಸಿ, ಉಟ್ಟಿದ್ದ ಮಡಿ ಬಿಚ್ಚಿ ಲುಂಗಿ ಉಡುತ್ತ “ಯಾರೇ ಅದು, ಬಸ್ಸು ತಪ್ಪಿಸಿಕೊಂಡರಂತಾ ಏನು” ಎಂದು ಹೆಂಡತಿಯನ್ನು ಕೇಳುತ್ತ ಹೊರಬಂದಾಗ ಕೆಪ್ಪ ಅವನ ಮುಖ ನೋಡುತ್ತಾ ಏನೇನೋ ಶಬ್ದಗಳನ್ನು ಹೊರಡಿಸಿದ. ರಾಮಚಂದ್ರಣ್ಣ ಅವನನ್ನು ಮಧ್ಯದಲ್ಲಿ ತಡೆದು ಪ್ರಶ್ನೆ ಕೇಳಲು ಪ್ರಯತ್ನಿಸಿದನಾದರೂ ಯಾವುದಕ್ಕೂ ಸ್ಪಂದಿಸದ ಅವನಿಗೆ ಕಿವಿಯೂ ಕೇಳುವುದಿಲ್ಲ ಎನ್ನುವುದು ನಮಗೆಲ್ಲ ಖಚಿತವಾಯಿತು.
ಮಾತೂ ಬರದ ಕಿವಿಯೂ ಕೇಳಿಸದ ಅವನಿಂದ ಯಾವ ವಿವರಗಳನ್ನೂ ಪಡೆದುಕೊಳ್ಳಲಾಗಲೇ ಇಲ್ಲ. ಪೆನ್ನು ಹಾಳೆಗಳನ್ನು ಕೊಟ್ಟರೆ ಅವು ತನಗೆ ಸಂಬಂಧಪಟ್ಟ ವಸ್ತುಗಳೇ ಅಲ್ಲವೆನ್ನುವಂತೆ ಅವುಗಳೆಡೆಗೆ ತಿರುಗಿಯೂ ನೋಡದ ಅವನಿಗೆ ಅಕ್ಷರಜ್ಞಾನ ಇದ್ದಿರಬಹುದಾದ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅವನಿಗೆ ಹೆಸರೊಂದು ಇದ್ದಿರಬಹುದಾದರೂ ಅದನ್ನು ಕಂಡುಹಿಡಿಯುವ ಯಾವ ಮಾರ್ಗವೂ ಯಾರಿಗೂ ಗೋಚರಿಸಲಿಲ್ಲ. ಗಂಗಾಚಿಕ್ಕಿ ಬಡಿಸಿದ ಹಬ್ಬದೂಟ ಉಂಡವನೇ ತಟ್ಟೆ ಲೋಟಾಗಳನ್ನು ತೊಳೆದು ತನ್ನದೇ ಆಸ್ತಿ ಎಂಬಂತೆ ಜಗಲಿಯ ಮೂಲೆಯಲ್ಲಿಟ್ಟುಕೊಂಡ. ಅದೆಲ್ಲಿಂದ ಬಂದ, ಹಳೇಮನೆ ಕೇರಿಗೇ ಯಾಕೆ ಬಂದ, ಬಂಧುಬಳಗದವರು ಯಾರಾದರೂ ಇದ್ದಾರೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ನನಗೆ ಯಾವತ್ತಿಗೂ ಬಗೆಹರಿಯದ ಒಂದು ವಿಚಿತ್ರವೆಂದರೆ ಕೇರಿಯ ಯಾರೊಬ್ಬರೂ ಅವನನ್ನು ಸಂಶಯದ ದೃಷ್ಟಿಯಿಂದ ನೋಡಲೇ ಇಲ್ಲ. ರಾಮಚಂದ್ರಣ್ಣನ ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲ ಜಾಜಿ ಬಳ್ಳಿಯಂತೆ ಕೇರಿಯನ್ನೆಲ್ಲ ಹಬ್ಬಿದಂತೆ ನನಗೆ ಈಗಲೂ ಅನ್ನಿಸುತ್ತದೆ. ಹೀಗೆ ಕೆಪ್ಪ ಎಂಬ ಹೊಸ ಹೆಸರಿನೊಂದಿಗೆ ಕೆಪ್ಪ ರಾಮಚಂದ್ರಣ್ಣನ ಮನೆಯ ಖಾಯಂ ಸದಸ್ಯನಾದ.
ಆದರೆ ಕೆಪ್ಪನ ವಾಸಕ್ಕೆ ತಕ್ಕ ಜಾಗ ಕೇರಿಯ ಯಾವ ಮನೆಯಲ್ಲೂ ಇರಲಿಲ್ಲ. ಹಳೇಮನೆಯ ಯಾವ ಕುಟುಂಬವೂ ಅಂಥ ಸ್ಥಿತಿವಂತ ಕುಟುಂಬವೇನೂ ಆಗಿರಲಿಲ್ಲ. ರಾಮಚಂದ್ರಣ್ಣನ ಅಪ್ಪನ ಕಾಲದಲ್ಲಿ ಖಾಂದಾನಿ ಎನ್ನಬಹುದಾಗಿದ್ದ ಕುಟುಂಬ, ಮಕ್ಕಳ ಕಾಲಕ್ಕೆ ಹೊಂದಾಣಿಕೆಯಾಗದೇ ಎಂಟು ಮನೆಗಳಾಗಿ ಒಡೆದುಹೋಗಿತ್ತು. ಅವರುಗಳ ಮಧ್ಯ ತಲೆಹೋಗುವಂತಹ ಜಗಳಗಳು ಆಗುತ್ತಿರಲಿಲ್ಲವಾದರೂ ಗದ್ದೆಕಾಯುವ ರಾತ್ರಿಪಾಳಿಯ ವಿಷಯಕ್ಕೋ, ಅವರ ಮನೆಯ ಬೆಕ್ಕು ಅರ್ಧತಿಂದುಬಿಟ್ಟ ಇಲಿ ಇವರ ಮನೆ ಅಟ್ಟದ ಮೇಲೆ ಕೊಳೆತು ವಾಸನೆ ಬರುತ್ತಿರುವ ವಿಷಯಕ್ಕೋ ಆಗಾಗ ಚಿಕ್ಕಪುಟ್ಟ ಮನಸ್ತಾಪಗಳಾಗುತ್ತಿದವು. ಈ ಮನಸ್ತಾಪಗಳೇನಾದರೂ ಜಗಳಕ್ಕೆ ತಿರುಗಿದರೆ ರಾಮಚಂದ್ರಣ್ಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೊಂದು ಜಾಣತನದ ಪರಿಹಾರ ಹುಡುಕುತ್ತಿದ್ದ. ಹೆಚ್ಚೇನೂ ಓದಿರದ ರಾಮಚಂದ್ರಣ್ಣ ತನ್ನ ಅಚ್ಚುಕಟ್ಟಾದ ಮಾತಿನಿಂದಲೇ ಕೇರಿಯವರಷ್ಟೇ ಅಲ್ಲದೇ ಊರಿನವರ ಗೌರವವನ್ನೂ ಗಳಿಸಿಕೊಂಡಿದ್ದ. ಯಾವತ್ತೂ ಧ್ವನಿ ಎತ್ತರಿಸಿ ಮಾತನಾಡದ ರಾಮಚಂದ್ರಣ್ಣ, ಏರುಧ್ವನಿಯಲ್ಲಿ ಮೂರೂ ಹೊತ್ತು ಹಲಬುತ್ತಲೇ ಇರುತ್ತಿದ್ದ ಕೆಪ್ಪನೊಂದಿಗೆ ಸೌಹಾರ್ದ ಬೆಳೆಸಿಕೊಳ್ಳಬಹುದಾದ ಯಾವ ನಿರೀಕ್ಷೆಯೂ ಕೇರಿಯವರ್ಯಾರಿಗೂ ಇರಲಿಲ್ಲವಾದರೂ ಕೆಪ್ಪನ ವಾಸಕ್ಕೊಂದು ಜಾಗ ಹುಡುಕುವ ಜವಾಬ್ದಾರಿ ರಾಮಚಂದ್ರಣ್ಣನ ತಲೆಗೇ ಬಂತು.
ರಾಮಚಂದ್ರಣ್ಣನ ಮನೆ ಕೇರಿಯ ಮೊದಲ ಮನೆಯಾದದ್ದರಿಂದ ಜಾಗವನ್ನು ಕೊಂಚ ವಿಸ್ತರಿಸಿ ಮನೆಯನ್ನು ನವೀಕರಿಸುವ ಅವಕಾಶ ಮನೆಗಳೆಲ್ಲ ಹಿಸೆಯಾದ ಸಮಯದಲ್ಲೇ ರಾಮಚಂದ್ರಣ್ಣನಿಗೆ ಒದಗಿಬಂದಿತ್ತು. ಅಣ್ಣತಮ್ಮಂದಿರು ಒಟ್ಟಿಗೇ ಇದ್ದಿದ್ದರಿಂದ ಸ್ವಲ್ಪ ಅನುಕೂಲಸ್ಥನಾಗಿದ್ದ ರಾಮಚಂದ್ರಣ್ಣ ಮನೆ ಹಿಂದೆ ಇದ್ದ ಸೊಪ್ಪಿನ ಬೆಟ್ಟದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿಸಿ ವಿಶಾಲವಾದ ಕೊಟ್ಟಿಗೆಯನ್ನು ಕಟ್ಟಿಸಿಕೊಂಡಿದ್ದ. ಆ ಕೊಟ್ಟಿಗೆಯಲ್ಲೇ ಸಣ್ಣದೊಂದು ಭಾಗದಲ್ಲಿ ಮಣ್ಣಿನ ಗೋಡೆಯನ್ನೆಬ್ಬಿಸಿ ಬಾಗಿಲು ಕಿಟಕಿಗಳಿಲ್ಲದ ರೂಮೊಂದನ್ನು ಕಟ್ಟಿಸಿ, ರಾಮಚಂದ್ರಣ್ಣ ಕೆಪ್ಪನ ಪಾಲಿನ ಆಪತ್ಬಾಂಧವನಾದ. ಎರಡೇ ದಿನದಲ್ಲಿ ರಾಮಚಂದ್ರಣ್ಣ ಮಾಡಿಸಿಕೊಟ್ಟ ಹಲಸಿನ ಮಂಚದ ಮೇಲೆ ಆಸೀನನಾದ ಕೆಪ್ಪ ಕೊಟ್ಟಿಗೆಯ ಒಡೆಯನೂ, ಕೇರಿಯ ಕಾವಲುಗಾರನೂ ಆಗಿಹೋದ. ಗಂಗಾಚಿಕ್ಕಿಯ ಕೊಟ್ಟಿಗೆಯ ಜವಾಬ್ದಾರಿಯನ್ನು ತಾನಾಗಿಯೇ ವಹಿಸಿಕೊಂಡ. ದಿನ ಬೆಳಗಾದರೆ ಒಂದು ಎಮ್ಮೆ, ಒಂದು ಹಸುವಿನ ಹಾಲು ಕರೆದು, ಸೊಪ್ಪು ಕಡಿದು ತಂದು, ಸಗಣಿ ತೆಗೆದು, ಹೊಸ ಸೊಪ್ಪು ಹಾಸುವವರೆಗೂ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ರಾತ್ರಿಗಳಲ್ಲಿ ಗದ್ದೆ ಕಾಯುವ ಕೆಲಸವನ್ನೂ ತಾನೇ ವಹಿಸಿಕೊಂಡು ಕೇರಿಯವರ ನಿದ್ರೆಯನ್ನೂ ಸಲಹತೊಡಗಿದ. ಬೆಕ್ಕು ಕೂಡಾ ಯಾರ ಭಯವೂ ಇಲ್ಲದೇ ತಾನು ಹಿಡಿದ ಇಲಿಗಳನ್ನೆಲ್ಲ ತಂದು ಕೆಪ್ಪನ ರೂಮಿನಲ್ಲೇ ರಾಜಾರೋಷವಾಗಿ ತಿನ್ನತೊಡಗಿತು. ಅರ್ಥವಾಗದ ಭಾಷೆಯಲ್ಲಿ ಬೆಕ್ಕಿಗೋ, ಇಲಿಗೋ ಬಾಯ್ತುಂಬ ಬೈಯುತ್ತ ಅಳೆದುಳಿದ ಇಲಿಯ ಅವಶೇಷಗಳನ್ನು ಬಳಿದು ಗೊಬ್ಬರದ ಗುಂಡಿಗೆ ಎಸೆದು ಬೆಕ್ಕು ಓಡಾಡಿದ ಜಾಗವನ್ನೆಲ್ಲ ಸಗಣಿನೀರು ಹಾಕಿ ತೊಳೆದುಬಿಡುತ್ತಿದ್ದ. ಯಾರ ಮನೆಯ ಅಂಗಳವಾದರೂ ಸರಿಯೇ, ಒಂದು ಹುಲ್ಲುಕಡ್ಡಿ ಬಿದ್ದರೂ ಅದನ್ನೆತ್ತಿ ಬಿಸಾಕುತ್ತಿದ್ದ ಕೆಪ್ಪನ ಚೊಕ್ಕು, ಶಿಸ್ತು ನೆನಪಾದಾಗಲೆಲ್ಲ ನನಗೆ ಬಾಲ್ಯದ ಅದೆಷ್ಟೋ ಪಾಠಗಳನ್ನ ಮಾತೇ ಬರದ ಕೆಪ್ಪ ಕಲಿಸಿಕೊಟ್ಟಂತೆನ್ನಿಸುತ್ತದೆ. ಕಾಲಕಳೆದಂತೆ ಕೆಪ್ಪ ಊರಿನವರ ಬಾಯಲ್ಲಿ ‘ಹಳೇಮನೆ ಕೆಪ್ಪ’ನೇ ಆಗಿಹೋದ.
ನಾನು ಏಳನೇ ಕ್ಲಾಸು ಮುಗಿಸಿ, ಹಳೇಮನೆಯಿಂದ ಮೂರು ಕಿಲೋಮೀಟರು ದೂರದ ಗೋಳಿಮಕ್ಕಿ ಹೈಸ್ಕೂಲಿಗೆ ಸೇರಿದೆ. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಬಚ್ಚಲ ಒಲೆಗೆ ಬೆಂಕಿ ಹಾಕಿ, ಬಾವಿಯಿಂದ ನೀರು ಸೇದಿ ಹದಮಾಡಿದ ನೀರು ಹಂಡೆ ತುಂಬಾ ಇದೆಯೆಂದು ಖಾತ್ರಿಯಾದ ಮೇಲೆಯೇ ಕೆಪ್ಪ ಕೊಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಪ್ಪನಿಗಿದ್ದ ಒಂದೇ ಒಂದು ಚಟವೆಂದರೆ ಬೀಡಿ. ಕೆಪ್ಪ ಹಳೇಮನೆ ಸೇರಿ ಒಂದು ವಾರವಾಗುತ್ತಿದ್ದಂತೆ ಒಂದಿನ ರಾಮಚಂದ್ರಣ್ಣ ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಅವನ ಪಕ್ಕ ಬಂದು ಅದೇ ಏರುಧ್ವನಿಯಲ್ಲಿ ಮಾತಾಡತೊಡಗಿದನಂತೆ. ಅರ್ಥವಾಗದ ರಾಮಚಂದ್ರಣ್ಣ ಅವನ ಮುಖ ನೋಡಿದ್ದಕ್ಕೆ, ಬೀಡಿಕಟ್ಟು ಹೊರತೆಗೆದು ಕಟ್ಟಿನಲ್ಲಿದ್ದ ಕೊನೆಯ ಬೀಡಿಯನ್ನು ತೋರಿಸುತ್ತಾ ತಂದುಕೊಡುವಂತೆ ಕೈಸನ್ನೆ ಮಾಡಿದನಂತೆ. ಕೈ ಒರೆಸುತ್ತಾ ರಾಮಚಂದ್ರಣ್ಣ “ಇವನಿಗೆ ಬೀಡಿ ಬೇಕಂತೆ, ನಾಳೆ ಯಲ್ಲಾಪುರಕ್ಕೆ ಹೋಗಿಬರ್ತೀನಿ; ಮನೆ ಸಾಮಾನು ಪಟ್ಟಿ ಮಾಡಿಕೊಡು” ಎಂದಿದ್ದು ಯಲ್ಲಾಪುರ ಬಸ್ಸು ನೋಡಿದಾಗೆಲ್ಲ ನೆನಪಾಗುತ್ತದೆ ನನಗೆ. ಆ ಬೀಡಿಕಟ್ಟಿನ ಬಾಂಧವ್ಯ ಅವರಿಬ್ಬರನ್ನೂ ವಿಚಿತ್ರವಾಗಿ ಬೆಸೆದಿತ್ತು. ಬೀಡಿ ಸಿಗರೇಟು ಹಾಗಿರಲಿ, ಕವಳವನ್ನೂ ಹಾಕದ ರಾಮಚಂದ್ರಣ್ಣ ಪ್ರತೀಸಲ ಯಲ್ಲಾಪುರಕ್ಕೆ ಹೋದಾಗಲೂ ಕೆಪ್ಪನಿಗೆಂದು ಬೀಡಿಕಟ್ಟು ತರುತ್ತಿದ್ದ. ಮನೆಯಲ್ಲಿದ್ದ ಮಕ್ಕಳಲ್ಲೇ ದೊಡ್ಡವಳಾಗಿದ್ದ ನನ್ನ ಕೈಯಲ್ಲಿ ಹಳೇ ಪೇಪರಿನಲ್ಲಿ ಸುತ್ತಿದ ಬೀಡಿಪೊಟ್ಟಣವನ್ನು ಕೊಟ್ಟು ಕೆಪ್ಪನಿಗೆ ಕೊಡುವಂತೆ ಹೇಳುತ್ತಿದ್ದ. ಅದರಲ್ಲಿರುವುದು ಬೀಡಿಪೊಟ್ಟಣ ಎನ್ನುವುದು ನನಗಾಗ ಗೊತ್ತಾಗದೇ ಇದ್ದರೂ ಅದನ್ನು ನೋಡಿದ ತಕ್ಷಣ ಕೆಪ್ಪನ ಮುಖ ಅರಳಿದ್ದು ಮಾತ್ರ ಗೊತ್ತಾಗುತ್ತಿತ್ತು. ಕೇರಿಯ ಮಕ್ಕಳಿಗೆ ಕಾಣಿಸದಂತೆ ಬೆಟ್ಟದಮೇಲೋ, ಕೊಟ್ಟಿಗೆಯ ಮೂಲೆಯಲ್ಲೋ ಕುಳಿತು ಬೀಡಿ ಸೇದುತ್ತಿದ್ದ ಕೆಪ್ಪ ಉಳಿದ ಬೀಡಿಮೋಟನ್ನು ಮಾತ್ರ ಗೊಬ್ಬರದ ಗುಂಡಿಗೇ ಬಿಸಾಕುತ್ತಿದ್ದ. ನನಗೆ ಹೈಸ್ಕೂಲು ಮುಗಿಯುತ್ತಿದ್ದ ಸಮಯದಲ್ಲಿ ಕೆಪ್ಪನ ಬೀಡಿಪ್ರೇಮ, ಅವನು ಹಲಬುತ್ತಿದ್ದ ಕೆಲವು ಶಬ್ದಗಳೆಲ್ಲ ಅರ್ಥವಾಗತೊಡಗಿ, ‘ಪಾಪ ಕೆಪ್ಪ!’ ಅನ್ನಿಸುತ್ತಿತ್ತು. ಈಗಲೂ ಯಾರಾದರೂ ಯಾರಿಗಾದರೂ ಪಾಪ ಅಂದಾಗಲೆಲ್ಲ, ಬೀಡಿಕಟ್ಟು ಸಿಕ್ಕಿದಾಗ ಅರಳಿದ ಕೆಪ್ಪನ ಮುಖ ನೆನಪಾಗುತ್ತದೆ.
ನಾನು ಹೈಸ್ಕೂಲು ಮುಗಿಸಿ ಕುಮಟಾದಲ್ಲಿ ಪಿಯುಸಿಗೆ ಸೇರಿ ಅಲ್ಲೇ ಡಿಗ್ರಿಯನ್ನೂ ಮುಗಿಸಿ, ಕಾರವಾರದ ರೆಸಾರ್ಟ್ ಒಂದರಲ್ಲಿ ಫ್ರಂಟ್ ಆಫೀಸ್ ಕೆಲಸಕ್ಕೆ ಸೇರಿಕೊಂಡೆ. ಪ್ರತೀವರ್ಷ ನವರಾತ್ರಿಯ ಹತ್ತು ದಿನವೂ ಕೆಲಸಕ್ಕೆ ರಜೆ ಹಾಕುತ್ತಿದ್ದ ನಾನು ರೆಸಾರ್ಟಿನ ಗಿಡಗಳನ್ನು ಮೆಂಟೇನ್ ಮಾಡುತ್ತಿದ್ದ ರಾಜಣ್ಣನ ಬಾಯಲ್ಲೂ ರಾಮಚಂದ್ರಣ್ಣನ ಮನೆಯ ದುರ್ಗೆಯೇ ಆಗಿದ್ದೆ. ಈ ಸಲ ನವರಾತ್ರಿಗೆ ಹಳೇಮನೆಗೆ ಹೋದಾಗ ಗಂಗಾಚಿಕ್ಕಿ, ಕಳೆದ ಮಳೆಗಾಲ ಕೆಪ್ಪ ತೀರಿಕೊಂಡ ಸುದ್ದಿಯನ್ನು ಹೇಳುತ್ತಾ ಕುಡಿಯಲು ಮಜ್ಜಿಗೆ ಬೆರೆಸಿಕೊಟ್ಟಳು. ಹೊಸ ಬಟ್ಟೆ ತಂದುಕೊಟ್ಟರೂ ಅದನ್ನು ಗೋಣೀಚೀಲದಲ್ಲಿ ಕಟ್ಟಿಟ್ಟು ರಾಮಚಂದ್ರಣ್ಣನ ಹಳೆಯ ಬಿಳಿ ಅಂಗಿಯನ್ನೇ ತೊಡುತ್ತಿದ್ದ ಕೆಪ್ಪ, ಸಾಯುವ ದಿನ ರಾಮಚಂದ್ರಣ್ಣ ಕಳೆದವರ್ಷ ನವರಾತ್ರಿಗೆ ತಂದುಕೊಟ್ಟ ಹಸಿರು ಅಂಗಿಯನ್ನು ತೊಟ್ಟಿದ್ದನಂತೆ. ಜೀವಹೋಗುವ ಅರ್ಧಗಂಟೆ ಮೊದಲು ರಾಮಚಂದ್ರಣ್ಣನನ್ನು ಕರೆದು ಹೊಸ ಅಂಗಿ ತೋರಿಸುತ್ತಾ ಅದೇನನ್ನೋ ಹೇಳಲು ಪ್ರಯತ್ನಿಸಿದನಂತೆ. ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬರುವ ಹೊತ್ತಿಗೆ ಬಚ್ಚಲೊಲೆಯ ಬೆಂಕಿಯಲ್ಲಿ ಹಲಸಿನಬೀಜ ಸುಡುತ್ತಾ ನಮಗಾಗಿ ಕಾಯುತ್ತಿದ್ದ ಕೆಪ್ಪ ನೆನಪಾಗಿ, ಬಾಲ್ಯದ ಬೆಚ್ಚನೆಯ ನೆನಪೆಲ್ಲ ಹೇಳದೇಕೇಳದೇ ಕೆಪ್ಪನೊಂದಿಗೇ ಹೊರಟುಹೋದಂತೆನ್ನಿಸಿತು. ಶಾರದೆಗೆ ಸೀರೆ ಉಡಿಸುತ್ತಿದ್ದ ರಾಮಚಂದ್ರಣ್ಣನ ಕೈ ಸ್ವಲ್ಪ ನಡುಗುತ್ತಿರುವಂತೆನ್ನಿಸಿ ಗಂಗಾಚಿಕ್ಕಿಯ ಹತ್ತಿರ ವಿಚಾರಿಸಿದೆ. ರಾಮಚಂದ್ರಣ್ಣನ ಶುಗರ್ ಲೆವಲ್ ಕಡಿಮೆಯಾಗಿದ್ದು, ಈಗ ಕಿವಿಯೂ ಸ್ವಲ್ಪ ಮಂದವಾಗಿರುವುದು, ಕೆಪ್ಪ ಸತ್ತುಹೋದಮೇಲೆ ರಾಮಚಂದ್ರಣ್ಣ ಯಲ್ಲಾಪುರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದು, ರಾಯ್ಸದ ಡಾಕ್ಟ್ರು ತಿಂಗಳಿಗೊಮ್ಮೆ ಮನೆಗೇ ಬಂದು ಚೆಕಪ್ ಮಾಡುವುದು ಎಲ್ಲವನ್ನೂ ಗಂಗಾಚಿಕ್ಕಿ ನಡುಗುವ ಧ್ವನಿಯಲ್ಲಿ ಹೇಳಿದಳು. ತಾನು ನೆಟ್ಟ ಮೌಲ್ಯಗಳನ್ನು ನೀರು ಗೊಬ್ಬರ ಹಾಕಿ ಪೊರೆಯುತ್ತಿದ್ದ ಕೆಪ್ಪ ಇಲ್ಲದೇ ರಾಮಚಂದ್ರಣ್ಣ ಅನಾಥನಾದಂತೆ ಎನ್ನಿಸಿತು. ಊರಿನ ಹೆಣ್ಣುಮಕ್ಕಳನ್ನೆಲ್ಲ ಸಾಲಾಗಿ ಕೂರಿಸಿ, ಹತ್ತು ರೂಪಾಯಿ ನೋಟಿನ ಮೇಲೆ ಕೇತಕಿ ಹೂವೊಂದನ್ನು ಇಟ್ಟು ಒಬ್ಬೊಬ್ಬರಿಗೇ ಕೊಡುತ್ತಾ ಕಾಲುಮುಟ್ಟಿ ನಮಸ್ಕರಿಸುತ್ತಿದ್ದ ರಾಮಚಂದ್ರಣ್ಣ. ಹೊಳೆಯುವ ಕಾಗದದ ಶಾರದೆಯ ಮಂಟಪದ ಕೆಂಪು ಹಳದಿ ಬಣ್ಣಗಳೆಲ್ಲ ಪುಟ್ಟಪುಟ್ಟ ಜಡೆಯ ದುರ್ಗೆಯರ ಕೆನ್ನೆಮೇಲಿನ ಅರಿಸಿನಕ್ಕೆ ಅಂಟಿಕೊಂಡವು.
**************
ತುಂಬಾ ಚೆನ್ನಾಗಿದೆ ಕತೆ.
ಹಳೆ ನೆನಪುಗಳೆ ಇಂದಿನ ನವೋಲ್ಲಾಸದ ಬದುಕಿಗೆ.
ಕೆಪ್ಪನ ಬದುಕು ನವರಾತ್ರಿಯ ನೆಪದಲಿ ಹದವಾಗಿಸಿದ
ಬಗೆ ಮಾಂತ್ರಿಕರಿಸಿದಂತಿದೆ… ಮಸ್ತ ಇದೆ ಕಥೆ….
Once again, fantastically narrated story.. keep it up!
Chandaaa♥️
ಕಣ್ಬುಂದೆ ನಡೆದಂತಾಯಿತು