ಯು ಸಿರಾಜ್ ಅಹಮದ್ ಸೊರಬ ಅವರ ಕೃತಿ,ನೆಲ ನುಡಿದ ನಾದ (ಗಜಲ್ ಕೃತಿ) ಅವಲೋಕನ ನಾರಾಯಣಸ್ವಾಮಿ .ವಿ

ಕೃತಿ: ನೆಲ ನುಡಿದ ನಾದ (ಗಜಲ್ ಕೃತಿ)
ಲೇಖಕರು : ಯು ಸಿರಾಜ್ ಅಹಮದ್ ಸೊರಬ
ಪ್ರಕಾಶಕರು: ನೇರಿಶಾ ಪ್ರಕಾಶನ ಕಡೂರು
ಬೆಲೆ: ನೂರ ಇಪ್ಪತ್ತು ರೂಪಾಯಿಗಳು

[9:02 pm, 26/04/2024] ನಾರಾಯಣಸ್ವಾಮಿ ಬಂಡಹಟ್ಟಿ….: ಸಮಾಜ ಮುಖಿ ಚಿಂತನೆಯ ಗಜಲ್ ಷೇರ್ ಗಳು

ಗಜಲ್ ಕಾವ್ಯವೆಂದರೆ ಭಾವದೊನಲು,
ಮನವನು ಕಾವ್ಯಲೋಕಕೆ ಕರೆದೊಯ್ಯುವ
ಮತಿಗೆ ಮತ್ತೇರಿಸುವಂತಹ ಸಾಲುಗಳ ಗುಚ್ಚ….

ಪಾಶ್ಚಿಮಾತ್ಯ ರಾಷ್ಟ್ರದ ಈ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ, ಕನ್ನಡದ ಭಾಷೆಯಲ್ಲೂ ಕೂಡ ತನ್ನ ಕಾವ್ಯ ಪರಂಪರೆಯನ್ನು ಪಸರಿಸಿದ್ದು ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ ಇಂದು.

ಕನ್ನಡನಾಡಿನಲ್ಲಿ ಗಜಲ್ ಸಾಹಿತ್ಯದ ಕಡೆಗೆ ಒಮ್ಮೆ ಸರಿದು ನೋಡಿದಾಗ, ಶಾಂತರಸರು ಕನ್ನಡ ಸಾಹಿತ್ಯಲೋಕದಲ್ಲಿ ಗಜಲ್ ಎಂಬ ಕಾವ್ಯದ ಬೀಜವನ್ನು ಬಿತ್ತಿ ಹೋದರು. ಅವರು ಒಂದೆರಡು ದ್ವಿಪದಿಗಳ ಕೃತಿಗಳನ್ನು ಹೊರತಂದು ಗಜಲ್ ಗಳ ಕಾವ್ಯ ಪರಂಪರೆಯನ್ನು ಕನ್ನಡಿಗರಿಗೆ ಪರಿಚಯ ಮಾಡಿದರು. ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ಗಿಡವಾಗಿಸಿದರು.  ಮೊದಲ ಗಜಲ್ ಕೃತಿಯನ್ನು ಕನ್ನಡದಲ್ಲಿ ಹೊರತಂದು ಕನ್ನಡ ಮೊದಲ ಗಜಲ್ ಗಾರ್ತಿಯೆಂದು ಗುರುತಿಸಿಕೊಂಡವರು.

 ಗಿಡವಾಗಿ ಚಿಗುತ್ತಿದ್ದ ಗಜಲ್ ಕಾವ್ಯಲೋಕವನ್ನು ಇಂದು ಮರವಾಗಿ ಬೆಳೆಸುತ್ತಿದ್ದಾರೆ ಬಹಳಷ್ಟು ಗಜಲ್ ಕಾರರು. ಒಂದು ಕಾಲದಲ್ಲಿ ಹಲವು  ಸಾಹಿತಿಗಳು ಲೇಖಕರು ಗಜಲ್ ಕಾವ್ಯ ಕಾವ್ಯವೇ ಅಂತ ಮೂದಲಿಸಿದರು. ಹಿರಿಯ ಗಜಲ್ ಕಾರರು ಇತ್ತೀಚೆಗೆ ಬರೆಯುತ್ತಿರುವ ಗಜಲ್ ಗಾರರು ಗಜಲ್  ನಿಯಮಗಳನ್ನು ಅನುಸರಿಸುತ್ತಿಲ್ಲವೆಂದು ದೂರಿದರು. ಒಂದಷ್ಟು  ಹಿರಿಯ ಗಜಲ್ ಕವಿಗಳು ಗಜಲ್ ಕಾವ್ಯ ಎಂದರೆ ಬರೀ ಪ್ರೇಮ, ಪ್ರೀತಿ, ವಿರಹಕ್ಕೆ ಸಂಬಂಧಪಟ್ಟ ಕಾವ್ಯ ಮಾತ್ರ ಎಂದು ಹೇಳಿದರು. ಮತ್ತೆ ಕೆಲವರು ಗಜಲ್ ಕಾರರು ಗಜಲ್  ಕಾವ್ಯದಲ್ಲಿ ಬಂಡಾಯ ಸಾಮಾಜಿಕ ಶೋಷಣೆ ಚಿಂತನೆಗಳನ್ನು ಕಾವ್ಯವಾಗಿ ಹೊರಹೊಮ್ಮಿಸ ಬಹುದೆಂದು ಹೇಳಿದರು. ಒಂದು ಕಾವ್ಯದ ಬಗ್ಗೆ ಗಜಲ್ ಕಾರರಲ್ಲಿ ಇಷ್ಟೆಲ್ಲಾ ವೈರುಧ್ಯಗಳಿದ್ದರೂ ಸಹ ಬರಹಗಾರರನ್ನು ಒಂದು ಶಕ್ತಿಯಾಗಿ ಈ ಗಜಲ್ ಕಾವ್ಯ ಸೆಳೆಯುತಿದೆ. ವರ್ಷಕ್ಕೆ ನೂರಾರು ಗಜಲ್ ಕೃತಿಗಳು ಕನ್ನಡದಲ್ಲಿ  ಇತ್ತೀಚಿಗೆ ಬಿಡುಗಡೆಯಾಗುತ್ತಿವೆ.

ನಂತರದಲ್ಲಿ ಕನ್ನಡ ಸಾಹಿತ್ಯದಲ್ಲಿ ಗಜಲ್ ಕಾವ್ಯ ಪರಂಪರೆ ಯಾನ ಮುಂದುವರಿಯಿತು. ಬಹಳಷ್ಟು ಜನರು ಗಜಲ್ ಕಾವ್ಯ ರಚಿಸಲು ಪ್ರಾರಂಭಿಸಿದರು ಅವರಲ್ಲಿ ಗಿರೀಶ್ ಜಕ್ಕಾಪುರೆ, ಶ್ರೀದೇವಿ ಕೆರೆಮನೆ, ಸಿದ್ದರಾಮ ಹೊನ್ಕಲ್, ಮಲ್ಲಿನಾಥ್ ತಳವಾರ್, ಅಲ್ಲಾ ಗಿರಿರಾಜ್ ಚಂಪೂ ಇನ್ನೂ ಅನೇಕ ಸಮಕಾಲೀನ ಗಜಲ್ ಕಾರರು ಗಜಲ್ ಕಾವ್ಯ ಬರೆಯುತ್ತಾ ಗಜಲ್ ಕಾರರಾಗಿ ಬೆಳಕಿಗೆ ಬಂದರು. ಇವರ ಜೊತೆಯಲ್ಲಿಯೇ ಗಜಲ್ ಸಾಹಿತ್ಯವನು ಹಿಂದಿ ಉರ್ದು  ಸಾಹಿತ್ಯದಲ್ಲಿ ಓದಿ ಅಥೈ೯ಸಿಕೊಂಡು ಆರಗಿಸಿಕೊಂಡವರು ಗಜಲ್ ನೀತಿ ನಿಯಮಗಳನ್ನು ಪಾಲಿಸುತ್ತಾ ಮಾತ್ರಾ ಗಣದಲ್ಲಿ ಗಜಲ್ ಬರೆಯುತ್ತಾ ಬಂದವರು ಯು. ಸಿರಾಜ್ ಅಹಮದ್ ರವರು ಪ್ರಮುಖರು.

ಯು ಸಿರಾಜ್ ಅಹಮದ್  ರವರು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬರೆದರೂ ಅವರ ಕಾವ್ಯ ಪ್ರೀತಿ ಗಜಲ್ ಕಡೆ ತಿರುಗಿತು. ಅವರಿಗೆ ಗಜಲ್  ಕಾವ್ಯ ಬಹುಬೇಗ ಒಲಿಯಲು ಕಾರಣ ಅವರ ಮಾತೃಭಾಷೆ ಉರ್ದು. ಅವರ ಪ್ರಾಥಮಿಕ ಶಿಕ್ಷಣವೂ ಉದು೯ ಭಾಷೆಯಾಗಿದ್ದರಿಂದ ಉರ್ದು ಕಾವ್ಯವಾದ ಗಜಲ್ ಸಾಹಿತ್ಯವನ್ನು ಬಹುಬೇಗ ಅರ್ಥಮಾಡಿಕೊಂಡು ನಿಯಮಬದ್ದವಾಗಿ ಗಜಲ್ ಬರೆದು ಹಿರಿಯ ಗಜಲ್ ಕಾರರೆಂದು ಗುತಿ೯ಸಿಕೊಂಡರು.

ಯು ಸಿರಾಜ್ ಅಹಮದ್ ರವರು. ಇವರು  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನವರು. ಓದಿದ್ದು ಕಡಿಮೆಯಾದರೂ ಕೂಡ ಗಜಲ್ ಸಾಹಿತ್ಯದಲ್ಲಿ ಅಪಾರವಾದ ಜ್ಞಾನವನ್ನು ಪಡೆದುಕೊಂಡು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮ ವಿದ್ವತ್ಪೂರ್ಣ ಬರಹಗಳಿಂದ ಜನ ಮನ್ನಣೆಯನ್ನು ಪಡೆದಿದ್ದಾರೆ.

ಇವರು ‘ಗಾಲಿಬ್ ನಿನಗೊಂದು ಸಲಾಂ’ ಎಂಬ ಸಂಪಾದಿತ ಗಜಲ್ ಕೃತಿಯನ್ನು ಹೊರತಂದರೂ, ಇವರ ಚೊಚ್ಚಲ ಗಜಲ್ ಸಂಕಲನವಾಗಿ ಹೊರತಂದಿದ್ದು “ನವಿಲಿಗೆ ಸಾವಿರ ನಯನಗಳು” ಈ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಇವರಿಗೆ ಹೆಸರನ್ನು ತಂದುಕೊಟ್ಟು ಮರುಮುದ್ರಣದ ಹಂತಕ್ಕೆ ಕಾಲಿಟ್ಟಿದೆ. ನಂತರದಲ್ಲಿ ಇವರು ತಂದ ಗಜಲ್ ಕೃತಿಯು ” ನೆಲ ನುಡಿದ ನಾದ” ಇವರ ಗಜಲ್ ಕೃತಿಗಳಲ್ಲಿ  ಬರೀ ಗಜಲ್ ಸಾಲುಗಳು ಮಾತ್ರವಿರದೇ ಗಜಲ್ ನ ನೀತಿ ನಿಯಮಗಳು, ಗಜಲ್ ಸಾಹಿತ್ಯವು ಹುಟ್ಟಿ ಬಂದ ಹಾದಿ, ಹೊಸ ಬರಹಗಾರರು ಗಜಲ್ ಸಾಹಿತ್ಯವನ್ನು ಯಾರ ರೀತಿಯಲ್ಲಿ ಅರ್ಥೈಸಿಕೊಂಡು ಬರೆಯಬೇಕು ಎಂಬುದನ್ನು  ಈ ಕೃತಿಗಳ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

ಶ್ರೀಯುತ ಯು ಸಿರಾಜ್ ಅಹಮದ್ ರವರು ಹೊರತಂದಿರುವ ಎರಡನೇ ಗಜಲ್ ಕೃತಿಯಾದ “ನೆಲ ನುಡಿದ ನಾದ” ಗಜಲ್ ಕೃತಿಯು ಮೊದಲಿನ ಗಜಲ್ ಕೃತಿಗಿಂತ ವಿಶೇಷವಾಗಿದೆ. ಯಾಕೆಂದರೆ ಮೊದಲು ಗಜಲ್ ಕೃತಿಯಲ್ಲಿ ಗಜಲ್ ಸಾಲುಗಳು ಗಜಲ್ ನೀತಿ ನಿಯಮಗಳನ್ನು ಪಾಲಿಸುತ್ತಾ ಗಜಲ್ ನ ಸಾಲುಗಳನ್ನು ಅನುಂಧಾನ ಮಾಡಿದರೆ ಈ ನೆಲ ನುಡಿದ ನಾದ ಗಜಲ್ ಕೃತಿಯಲ್ಲಿ ಮಾತ್ರಾ ಗಣಗಳ ಅಧಾರದ ಮೇಲೆ ಗಜಲ್ ಸಾಲುಗಳನ್ನು ಬರೆದಿದ್ದಾರೆ. ಮಾತ್ರಾ ಗಣದಲ್ಲಿ ಸಾಲುಗಳನ್ನು ಬರೆಯಲು ಸಮಯ ಬೇಕು, ಪದಗಳು ಮೂಡಬೇಕು ಅದಕ್ಕೆ ರಧೀಪ್ ಮತ್ತು ಮುಕ್ತಾಗಳ ಕೂಡಿಕೆ ಛಂದಸ್ಸಿನ ರೂಪಕವಾಗಬೇಕು. ನಿರಂತರವಾದ ಪರಿಶ್ರಮ ತಾಳ್ಮೆ ಅನುಭವದ ಅಧಾರದಿಂದ ಮಾತ್ರ ಮಾತ್ರಾ ಗಣದಲ್ಲಿ ಸಾಲುಗಳನ್ನು ರಚನೆ ಮಾಡಲು ಸಾಧ್ಯ ಆ ಪ್ರಯತ್ನದಲ್ಲಿ ಸಿರಾಜ್ ಅಹಮದ್ ಯಶಸ್ವಿಯಾಗಿದ್ದಾರೆ.

ನೆಲ ನುಡಿದ ನಾದ ಗಜಲ್ ಕೃತಿಯನ್ನು ದೇಶದ ಬೆನ್ನೆಲುಬಾದ ಅನ್ನದಾತರಿಗೆ ಮತ್ತು ರಾಷ್ಟ್ರದ ಐಕ್ಯತೆಯನ್ನು ಸಾರುವ ಕಟ್ಟಾಳು ಗಳಿಗೆ ಈ ಕೃತಿಯನ್ನು ಸಮರ್ಪಣೆ ಮಾಡಿರುವುದು ವಿಶಿಷ್ಟವಾಗಿದೆ. ಈ ಕೃತಿಗೆ ಚಂದ್ರಶೇಖರ ಪೂಜಾರ ರವರು ಮುನ್ನುಡಿಯನ್ನು ಬರೆದಿದ್ದು, ಮಾತ್ರೆಗಳಿಗೆ ಅನುಗುಣವಾಗಿ ಬರೆದಿರುವ ಈ ಗಜಲ್ ಗಳ ಚೆಲುವು ಮತ್ತು ತಾಜಾತನದಿಂದ ಕೂಡಿದ್ದು ಈ ಕೃತಿಯು ಯುವ ಗಜಲ್ ಕಾರರಿಗೆ ಮಾರ್ಗದರ್ಶಿಯಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.

ಬೆನ್ನುಡಿಯನ್ನು ಬರೆದಿರುವಂತಹ ನಂರುಶಿ ಕಡೂರು ಇವರು ಈ ಕೃತಿಯ ಬಗ್ಗೆ ಹೇಳುತ್ತಾರೆ. ಗಜಲ್ ಸಾಹಿತ್ಯದಲ್ಲಿ ಹಿಡಿತವಿರುವ ಇವರು ಗಜಲ್ ಗಳನ್ನು ಶಾಸ್ತ್ರೀಯತೆಗೆ ಒಳಪಡಿಸಿ ರಚಿಸಿದ್ದಾರೆ. ಯುವ ತಲೆಮಾರಿನ ಗಜಲ್ ಕಾರರಿಗೆ ಹಿರಿಯಣ್ಣನಂತೆ ಕೈಯಿಡಿದು ಮುನ್ನೆಡೆಸುವ ಇವರು, ಗಜಲ್ ಸಾಹಿತ್ಯ ಕೃಷಿಯ ಹೆಗ್ಗಳಿಕೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

ನೆಲ ನುಡಿದ ನಾದ ಗಜಲ್ ಕೃತಿಯ ಮೊದಲ ಗಜಲ್ ಷೇರ್ ಗಳು ದೇಶದ ಅನ್ನದಾತನು ಮಹಿಮೆಯನ್ನು ಸಾರುತ್ತವೆ.

“ಬಿರುಮಳೆಯಲ್ಲೂ ಬೆವರು ಸುರಿಸುವ ಹೊನ್ನಗದ್ದೆಯ ಮಲ್ಲ”
“ನಾಡ ಜನರಿಗಾಗಿ ದುಡಿಯುವ ಪರಿಶುದ್ದ ಹುದ್ದೆಯ ಮಲ್ಲ”

ಈ ಗಜಲ್ ನ ಷೇರ್ ನ್ನು ಗಮನಿಸಿದಾಗ ಈ ದೇಶದ ರೈತ ಅನ್ನವನ್ನು ಬೆಳೆಯುವುದಕ್ಕಾಗಿ ಹೇಗೆ ಶ್ರಮಪಡುತ್ತಾನೆ. ಬಿರುಸಾದ ಮಳೆಯು ಬೀಳುತ್ತಿದ್ದರೂ ಅದನ್ನು ಲೆಕ್ಕಿಸದೆ ಮಳೆಯಲ್ಲೂ ಕೂಡ ಬೆವರು ಉಕ್ಕುವಂತೆ ದುಡಿಯುತ್ತಾನೆ ಅಂದರೆ ಗರಡಿಯಲ್ಲಿ ಕಸರತ್ತು ಮಾಡುವ ಮಲ್ಲನು ತನ್ನ ಗೆಲುವಿಗಾಗಿ ಹೇಗೆ? ಕಷ್ಟ ಪಟ್ಟು ಬೆವರು ಸುರಿಸಿ ದೇಹವನ್ನು ದಂಡನೆಗೆ ಒಳಪಡಿಸುತ್ತಾನೋ ಹಾಗೇಯೇ ಅನ್ನದಾತನೂ ಕೂಡ ಅನ್ನವನ್ನು ಬೆಳೆಯಲು ಬೆವರನ್ನು ಸುರಿಸಿ ದಣಿಯುತ್ತಾನೆ. ಈ ರೈತನು ತನ್ನ ಸ್ವಾರ್ಥಕ್ಕಾಗಿ ದುಡಿಯದೇ ಪರಿಶುದ್ದವಾದ ಮನಸ್ಸಿನಿಂದ ನಾಡಿನ ಜನರ ಜೀವವನ್ನು ಉಳಿಸಲು ದುಡಿಯುತ್ತಾನೆ. ಮತ್ತೆ ಮುಂದಿನ ಷೇರ್ ಗಳಲ್ಲಿ ಹೇಳುತ್ತಾರೆ. ಸೂರ್ಯ ಎಷ್ಟೇ ಬಿರಿಬಿಸಿಲನ್ನು ಭೂಮಿಗೆ ಸುರಿದರೂ ಕೂಡ ಆ ಬಿಸಿಲನ್ನು ಸೋಲಿಸಿ ಸೂರ್ಯನ್ನು ಕೂಡ ಬೆರಗುಗೊಳಿಸುತ್ತಾನೆ. ಕಾಯಕದಲ್ಲಿ ನಿರತನಾಗಿರುವ ರೈತ ಯಾವುದೇ ದುರಾಭಿಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಚಿಂತೆ ಮಾಡದೇ ಸಂತೃಪ್ತವಾದ ನಿದ್ದೆಯನ್ನು ಮಾಡುತ್ತಾನೆ.

ಗಜಲ್ ಮೂರರ ಒಂದು ಷೇರ್ ನ್ನು ನೋಡೋಣ
“ರೂಪಸಿಯಲ್ಲದ ಬದುಕು ರೂಪಕವಿಲ್ಲದ ಬರಹವಾಗಿತ್ತು”
“ಕಬ್ಬಿಗನ ಕಾವ್ಯ ಸಿಂಚನವಾಯಿತು ನಿನ್ನ ಸಹವಾಸದಲ್ಲಿ”

ಈ ಷೇರ್ ನಲ್ಲಿ ತನ್ನ ಮನದನ್ನೆ/ಗೆಳತಿಯ ಸಹವಾಸ ಅಥಾವ ಅವಳ ಸಾನಿಧ್ಯವು ಸಿಗುವುದಕ್ಕಿಂತ ಮೊದಲು ನನ್ನದು ರೂಪವಿಲ್ಲದ ಬದುಕಾಗಿತ್ತು ಮತ್ತು ಬರೆಯುವ ಯಾವುದೇ ಬರಹದಲ್ಲಿ ರೂಪಕಗಳೇ ಮೆಚ್ಚುಗೆಯಾಗುತ್ತಿರಲಿಲ್ಲ ಅದೊಂದು ಕಳಪೆಯಾದ ಬರಹವಾಗಿತ್ತು. ನಿನ್ನ ಸಹವಾಸ ನನಗೆ ದೊರೆತ ಮೇಲೆ ನನ್ನೆದೆಯೊಳಗಿನ ಕವಿಯ ಕಾವ್ಯವೂ ಸಿಂಚನವಾಯಿತು  ಎಂದು ಸೊಗಸಾಗಿ ಮಾತ್ರಾ ಗಣಗಳ ಮೂಲಕ ಗಜಲ್ ಷೇರ್ ರಚನೆಯಾಗಿದೆ.

ಗಜಲ್ ೭ ರ ಒಂದು ಷೇರ್ ನಲ್ಲಿ
“ಜೀವನ ಪುಸ್ತಕದ ಹಾಳೆಯು ಖಾಲಿಯಾಗಿತ್ತು”
 “ಜೊತೆಯಾಗಿ ಪದಗಳ ಖನಿಯಾಗಿಸಿದ್ದು ನೀನೆ”

ಈ ಗಜಲ್ ಷೇರ್ ಗಳಲ್ಲಿ ಗಜಲ್ ಕಾರ ಹೇಳುತ್ತಾರೆ. ನಾನು ನನ್ನ ಮನಸ್ಸು ಚಂಚಲವಾಗಿತ್ತು. ಅಸೆ, ಬಯಕೆ ಅಮಿಷಗಳ ಗೂಡಾಗಿತ್ತು ಇಂತಹ ಚಂಚಲವಾದ ಮನಸ್ಸಿನಲ್ಲಿ ಭಾವನೆಗಳನ್ನು ತುಂಬಿ ಕಾವ್ಯದ ಸಾಲುಗಳನ್ನು ಬರೆಯುವ ಕವಿಯಾಗಿಸಿದ್ದು ನೀನೆ. ನನ್ನ ಮನದೊಳಗೆ ವಿವೇಕವನ್ನು ತುಂಬಿ ನನ್ನ ಕಶ್ಮಲವಾದ ಮನವನ್ನು ಶುಚಿಗೊಳಿಸಿದ್ದು ಕೂಡ ನೀನೆ. ನನ್ನ ಬದುಕು ಪುಸ್ತಕದೊಳಗಿನ ಖಾಲಿಯಾದ ಹಾಳೆಯಂತೆ ಇತ್ತು. ಇಂತಹ ಖಾಲಿ ಹಾಳೆಯೊಳಗೆ ಉತ್ಕೃಷ್ಟವಾದ ಪದಗಳನ್ನು ತುಂಬವ ಖನಿಯಾಗಿದ್ದು ನೀನೆ. ನಿನ್ನ ನೆರಳಿನಲ್ಲಿ ಇದ್ದರೆ ಸಾಕು ಸಿರಾಜ್ ನೀನು, ಉದಾತ್ತವಾದ ಚಿಂತನೆಗಳನ್ನು ನನ್ನ ಮನದೊಳಗೆ ಹೃದಯದೊಳಗೆ ತುಂಬಿ ನನ್ನ ಧಣಿಯಂತೆ ಮಾಡುತ್ತಿಯಾ ಎಂದು ಅಮೋಘವಾಗಿ ಶೇರ್ ಗಳ ರಚನೆಯನ್ನು ಮಾಡಿದ್ದಾರೆ.

ಯು ಸಿರಾಜ್ ಅಹಮದ್ ರವರು ಗಜಲ್ ಪರಂಪರೆಯಲ್ಲಿ ಸಾಗಿಬರುವಂತಹ ಉತ್ಕೃಷ್ಟದ ಚಿಂತನೆಗಳ ಮೂಲಕ ಅಂದರೆ ಈ ಸಮಾಜ ಮನುಜನ ಮನಸ್ಥಿತಿ ದೇಹದ ವಿಕೃತ ದಾಹ ಮುಂತಾದ ಆನೇಕ ವಿಷಯಗಳನ್ನು ತಮ್ಮ ಗಜಲ್ ಸಾಲುಗಳಲ್ಲಿ ಮೂಡಿಸಿದ್ದಾರೆ.

ಬರಿ ಸಮಾಜ ಮನಸ್ಸು ಅನ್ನದಾತನಲ್ಲದೆ ಕನ್ನಡ ನಾಡು ನುಡಿಯ ಬಗ್ಗೆ ಕೂಡ ಗಜಲ್ ಕಾರರು ಈ ಕೃತಿಯಲ್ಲಿ ಷೇರ್ ಗಳನ್ನು ರಚನೆ ಮಾಡಿದ್ದಾರೆ.  ಗಜಲ್ ೯ ರಲ್ಲಿ

“ಅನ್ನವ ನೀಡುವ ಚಿನ್ನದ ಹಾಡು”
“ಕನ್ನಡವಾಗಲಿ ಹೆಮ್ಮೆಯ ಕೊರಳು”

ಕನ್ನಡ ಭಾಷೆಯು ನಮ್ಮ ಹೆಮ್ಮೆಯ ಭಾಷೆ. ಈ ಭಾಷೆಯ ಪದಗಳನ್ನು ಕೇಳಿದರೆ ಸಾಕು ಮೈಮನ ರೋಮಾಂಚನವಾಗುತ್ತದೆ. ಕೈಯಲ್ಲಿ ಪೆನ್ನು ಹಿಡಿದು ಕನ್ನಡದ ಪದಗಳನ್ನು ಬರೆಯಲೊರಟರೆ ಸಾಕು ಕೈಬೆರಳು ಪುಳಕಿತವಾಗುತ್ತದೆ. ಕನ್ನಡ ಪ್ರತಿಯೊಂದು ಅಕ್ಷರವೂ ಕೂಡ ವಜ್ರದ ಹರಳಿನಂತೆ, ಮುತ್ತು ರತ್ನಗಳಂತೆ. ಕನ್ನಡದ ಭಾಷೆಯ ಹಾಡು ಕೇಳುವುದೇ ಒಂದು ಪುಣ್ಯ. ಅನ್ನವ ನೀಡುವ ಚಿನ್ನದ ಹಾಡು ಅದು. ಇದು ಶತಮಾನ ಶತಮಾನಗಳ ಹಿರಿಯ ಭಾಷೆ. ಜಾತಿ ಧರ್ಮ ಭಾಷೆಯ ಹಂಗಿಲ್ಲದೇ ಎಲ್ಲಾರನ್ನೂ ಈ ಭಾಷೆ ಸಲಹುತ್ತದೆ ಅದೇ ರೀತಿ ಸಿರಾಜ್ ಗೆ ಕೂಡ ಕನ್ನಡವೆಂಬ ಈ ಭಾಷೆ ಬದುಕಿನಲ್ಲಿ ನೆರಳನ್ನು ನೀಡಿದೆ ಎಂದು ಆತ್ಯುತ್ತಮವಾಗಿ ಗಜಲ್ ಷೇರ್ ಗಳನ್ನು ರಚನೆ ಮಾಡಿದ್ದಾರೆ.

ಗಜಲ್ ೨೮ ರ ಷೇರ್ ಗಳು ಅಪ್ಪನ ಅಂತರಂಗದ ಸಾಲುಗಳಾಗಿ ಮೂಡಿಬಂದಿದೆ

” ಮನೆತನದ ಹಿತಕ್ಕಾಗಿ ಒಂಟಿ ಸಲಗವಾಗಿ ದುಡಿದು ಬಿಟ್ಟನು ಅಪ್ಪ”
“ನೋವುಗಳ ಸಾಗರವನೇ ಕುಡಿದು ಗಾಯಗಳ ಗೆದ್ದುಬಿಟ್ಟನು ಅಪ್ಪ”

ಅಪ್ಪನು ಆಲದ ಮರಕ್ಕಿಂತ ಮಿಗಿಲು ಆಗಸಗಿಂತಲೂ ವಿಶಾಲವಾದ ಮನಸ್ಥಿತಿಯುಳ್ಳವನು. ತನ್ನ ಕುಟುಂಬ ತನ್ನ ಮಕ್ಕಳ ಹಿತಕ್ಕಾಗಿ ಅವರ ಸಂತೋಷಕ್ಕಾಗಿ ಹಗಲು ರಾತ್ರಿ ಚಳಿ ಮಳೆ ಬಿಸಿಲೆನ್ನದೆ ಸದಾ ದುಡಿಯುತ್ತಿರುತ್ತಾನೆ. ಅದಕ್ಕೆ ಕಾರಣ ತನ್ನ ಕುಟುಂಬದವನ್ನು ಪೋಷಿಸಬೇಕು. ನನ್ನ ಕುಟುಂಬದವರು  ಇತರರ ಮುಂದೆ ಯಾವುದೇ ಸಮಸ್ಯೆಯಿಲ್ಲದೆ ನೋವಿಲ್ಲದೆ ಖುಷಿಯಾಗಿ ಬದುಕಬೇಕು ಅದಕ್ಕಾಗಿ ಒಂಟಿ ಸಲಗದಂತೆ ದುಡಿಯುತ್ತಾನೆ. ಅವನ ಎದೆಯೊಳಗೆ ನೂರಾರು ನೋವುಗಳು ಆವರಿಸಿಕೊಂಡಿದ್ದರೂ ಕೂಡ ಅವುಗಳನ್ನು ತನ್ನ ಕುಟುಂಬದವರ ಮುಂದೆ ತೋರ್ಪಡಿಸಿಕೊಳ್ಳವುದಿಲ್ಲ. ತನ್ನನ್ನು ಕಾಡುತ್ತಿರುವ ನೋವುಗಳು ಗಾಯಗಳಂತೆ ತನ್ನನ್ನು ಕಾಡುತ್ತಿದ್ದರೂ ಕೂಡ ಅವುಗಳನ್ನು ಗೆಲ್ಲುತ್ತಾನೆ. ತನ್ನ ಸಹನೆ ಎಂಬ ಮುಲಾಮಿನಿಂದ ತನ್ನ ದೇಹದಲ್ಲಿರುವ ಬಾಸುಂಡೆಗಳನ್ನೆ ಮುಚ್ಚಿಟ್ಟು ಕೊಳ್ಳುವವನು ಅಪ್ಪ. ಬೆಳಗ್ಗೆಯಿಂದ ಸಂಜೆಯವರೆಗೂ ದುಡಿದು ದುಡಿದು ಅಯಾಸವಾಗಿ  ತನ್ನ ನೋವು ನಿರಾಶೆ ದೇಹದ ಅಯಾಸ ಕುಟುಂಬದವರಿಗೆ ತಿಳಿಯಬಾರದೆಂದು ಕತ್ತಲಕೋಣೆಯಲ್ಲಿ ಮಲಗಿಬಿಡುತ್ತಾನೆ ಅಪ್ಪ ಎಂಬ ಸಶಕ್ತ ಷೇರ್ ಗಳಿಂದ ಅಪ್ಪನ ಅಂತ:ಕರಣವನ್ನು ಬಿಚ್ಚಿಟ್ಟ ಪರಿ ಸೊಗಸಾಗಿದೆ.

ಗಜಲ್ ೩೩
“ವಿಚ್ಛೇದನವ ಕೊಡುವ ಮೊದಲು ನನ್ನ ಯೌವನವನ್ನೂ ಕೊಟ್ಟುಬಿಡು”
“ಮೋಸದಿಂದ ಗಳಿಸಿರುವ ಹೆತ್ತವರ ಹೂಬನವನ್ನು ಕೊಟ್ಟುಬಿಡು”

ಇಂದಿನ ಅಧುನಿಕ ಯುಗದಲ್ಲಿ ವಿಚ್ಛೇದನ ಗಂಡು ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿದ್ದರೂ ಕೂಡ ಪುರುಷನೇ ಹೆಚ್ಚಾಗಿ ವಿಚ್ಛೇದನವನ್ನು ಬಯಸುತ್ತಾನೆ. ವಿಚ್ಛೇದನಕ್ಕೆ ಕಾನೂನಿನಲ್ಲಿ ಕೂಡ ಅವಕಾಶವಿದೆ. ಅದರೆ ಅದಕ್ಕೆ ಸಮಂಜಸವಾದ ಕಾರಣಗಳಿರಬೇಕು. ಸಮಂಜಸವಾದ ಕಾರಣಗಳಿದ್ದಾಗ ವಿಚ್ಛೇದನದ ಪಡೆಯುವುದು ಸಮಂಜವಾಗಿದ್ದರೂ ಕೂಡ, ಇತ್ತೀಚಿನ ಅಧುನಿಕ ಜಗತ್ತಿನಲ್ಲಿ ವಿಚ್ಛೇದನ ಸರ್ವೇಸಾಮಾನ್ಯವಾಗಿಬಿಟ್ಟಿದ್ದೆ. ಈ ಗಜಲ್ ಷೇರ್ ನಲ್ಲಿ ಒಬ್ಬ ಹೆಣ್ಣು ಕೇಳುತ್ತಾಳೆ. ನನ್ನ ಯೌವನ ಸೌಂದರ್ಯವನ್ನು ನೋಡಿ ನೀನು ಮದುವೆಯಾಗಿದ್ದಿಯಾ, ನೀನು ಆನುಭವಿಸಿದ ಬಳಸಿಕೊಂಡ ನನ್ನ ಯೌವನವನ್ನು ಅಂದರೆ ನಾನು ಮದುವೆಯಾಗುವ ಮೊದಲು ಯಾವ ತರಹ ಇದ್ದೆ ಆತರಹ ನನ್ನನ್ನು ಮಾಡಿ ಕೊಟ್ಟುಬಿಡು. ನಿನ್ನ ಮೋಸದ ಮಾತುಗಳಿಂದ ನನ್ನ ಹೆತ್ತವರ ಮನಸ್ಸನ್ನು ಮರಳು ಮಾಡಿ ಅವರ ಹೃದಯದಲ್ಲಿ ಸ್ಥಾನವನ್ನು ಪಡೆದು ನಿನ್ನನ್ನು ಹೂವಿನ ಬನದಂತೆ ಪೋಷಿಸಿದರಲ್ಲಾ ಆ ಹೃದಯವು ಹೂಬನವನ್ನು ಬಾಡದಂತೆ ಕೊಟ್ಟುಬಿಡು ಎಂದು ಕೇಳುತ್ತಾಳೆ.ಮುಂದುವರಿದ ಷೇರ್ ಗಳಲ್ಲಿ ಹೇಳುತ್ತಾರೆ. ನೀನು ನನ್ನ ಮದುವೆಯಾಗಿ ನಿನ್ನ ಮನಸ್ಸು ಬಯಸಿದ ರೀತಿಯಲ್ಲಿ ಬಳಿಸಿಕೊಂಡೆ. ನಿನಗೆ ಬೇಕಾದಾಗ ಬಳಸಿಕೊಂಡು ನಿನ್ನ ಮನಸ್ಸಿಗೆ ಬೇಡವಾದಾಗ ಬಿಟ್ಟುಬಿಡಲು ನಾನು ಸಂತೆಯಲ್ಲಿ ಮಾರುವ ಆಟಿಕೆಯ ವಸ್ತುವಲ್ಲ. ನಾನು ಕೂಡ ನಿನ್ನಂತೆ ಒಂದು ಜೀವ ನನಗೂ ಮನಸ್ಸಿಗೆ ನೋವಿದೆ ಪ್ರೀತಿಯಿದೆ. ನೀನು ವಿಚ್ಛೇದನವನ್ನು ಕೊಡುವುದಾದರೆ ನೀನು ಅನುಭವಿಸಿದ ಈ ದೇಹವನ್ನು ಮೊದಲಿನಂತೆ ಮಾಡಿಕೊಡು. ಅನುಮಾನವನ್ನು ಪಟ್ಟು ನನ್ನ ಮೇಲೆ ಗುರುತರವಾದ ಆರೋಪವನ್ನು ಹೊರಿಸಬೇಡ, ನಾನು ನಿನಗೆ ಕೊಟ್ಟಂತಹ ನಿರ್ಮಲವಾದ ಪ್ರೀತಿ ಶುದ್ದವಾದ ಸುಖವನ್ನು ನನಗೆ ಮತ್ತೆ ಹಿಂದಿರುಗಿಸಿಕೊಡು. ಹೆಣ್ಣಿನಿಂದಲೇ ಜನಿಸಿದ ನೀನು ನನ್ನ ಹೊಟ್ಟೆಯಲ್ಲಿ ನಿನ್ನಿಂದಲೇ ಜನಿಸಿದ ಹೆಣ್ಣು ಮಗುವನ್ನು ಕಂಡು ಯಾಕೆ? ಮೃಗದಂತೆ ವರ್ತಿಸುತ್ತಿಯಾ.. ನನಗೆ ಹಲವಾರು ಹಿಂಸೆಗಳನ್ನು ಕೊಟ್ಟು ನನ್ನಿಂದ ನೀನು ಕಿತ್ತುಕೊಂಡ ಜೀವದ ಪ್ರೀತಿಯನ್ನು ಕೊಟ್ಟು ನನ್ನಿಂದ ವಿಚ್ಛೇದನವನ್ನು ಕೇಳು ಎಂಬ ಸಾಲುಗಳನ್ನು ಓದುತ್ತಿದ್ದಾರೆ ಮನಸ್ಸು ಮೂಕವಾಗುತ್ತದೆ ಇಂತಹ ಯೋಚನಾ ಲಹರಿಗೆ ಜೈಕಾರ ಹೇಳಲೇ ಬೇಕಾಗುತ್ತದೆ.

ಗಜಲ್ ೩೮
ಸಂಕಟದಲ್ಲಾಗದ ಗೆಳೆತನವೇತಕೆ
ಕಪಟವನ್ನರಿಯದ ಎಳೆತನವೇ ಲೇಸು

ಈ ಭೂಮಿಯ ಮೇಲೆ ಸ್ನೇಹ ಅನ್ನೋದು ಒಂದು ಪವಿತ್ರವಾದ ಬಂಧನ, ಅದು ಜಾತಿ ಮತ ಹಣ ಸೌಂದರ್ಯ ನೋಡಿ ಸ್ನೇಹವಾಗುವುದಿಲ್ಲ. ಸ್ವಚ್ಛವಾದ ಮನಸ್ಸುಗಳು ಪರಿಚಯವಾಗಿ ಒಬ್ಬರಿಗೊಬ್ಬರು ಬಿಟ್ಟು ಇರಲಾರದಂತಹ ಅನುಬಂಧ. ತನ್ನವರು ದೂರ ಸರಿದಾಗ ಬೆನ್ನೆಲುಬಾಗಿ ಕಷ್ಟದಲ್ಲಿ ನಿರಂತರವಾಗಿ ಜೊತೆಯಾಗಿರುವುದು ಗೆಳತನ. ನೋವು ನಲಿವಿನಲ್ಲಿ ಒಂದಾಗಿ ಕಷ್ಟಸುಖದಲ್ಲಿ ಭಾಗಿ ಧೈರ್ಯವನ್ನು ತುಂಬುವ ಶಕ್ತಿ ಈ ಗೆಳೆತನಕ್ಕೆ ಇರುತ್ತದೆ. ಗೆಳೆತನದಲ್ಲಿ ಯಾವುದೇ ಮೋಸ ಸುಳ್ಳು ಸ್ವಾರ್ಥವು ಇರಲಾರದು. ಇಂತಹ ಪವಿತ್ರವಾದ ಗೆಳೆತನವು ಒಂದು ಜೀವ ಸಂಕಟದಲ್ಲಿ ನರಳುವಾಗುವ ಆ ಜೀವಕ್ಕೆ ನೆರವಾಗದೇ ನೆರಳಾಗದಿದ್ದರೆ ಮತ್ತೇಕೆ ಈ ಸ್ನೇಹ ಸಂಬಂಧಗಳು… ಮುಗ್ಧವಾದ ಬಾಲ್ಯದಲ್ಲಿ ಮನಸ್ಸು ಯಾವುದೇ ಕಪಟವನ್ನು ಹೊಂದಿರುವುದಿಲ್ಲ. ಬಾಲ್ಯದ ಬದುಕೆ ಚಂದವಾಗಿತ್ತು ಹಂಚಿ ತಿನ್ನುವ ಎಲ್ಲಾರನ್ನು ಸಮಾನವಾಗಿ ನೋಡುವ ಗುಣ ನಮ್ಮ ಜೊತೆಯಲ್ಲಿ ಇದ್ದರೆ ಸಾಕು ಎಂದು ಬಹಳಷ್ಟು ಸೊಗಸಾಗಿ ಈ ಗಜಲ್ ನ ಸಾಲುಗಳನ್ನು ಬರೆದಿದ್ದಾರೆ.

ನನ್ನನ್ನು ಒಂದಷ್ಟು ಯೋಚಿಸುವಂತೆ ಮಾಡಿದವು ಈ ಕೆಳಗಿನ ಸಾಲುಗಳು

“ಗೌರವದಿ ಕೊಟ್ಟ ಕೃತಿಗಳು ಮುಚ್ಚಿಡಬೇಡ ಒಮ್ಮೆ ಓದು”
“ಬರವಣಿಗೆಯಲಿ ಒಬ್ಬನೇ ಪಂಡಿತನೆಂದು ತಿಳಿಯಬೇಡ”

ಹಿಂದಿನ ಕಾಲದ ಸಾಹಿತಿಗಳು ಪತ್ರಿಕೆಗಳಿಗೋ ತಮ್ಮ ಆತ್ಮೀಯ ಸ್ನೇಹಿತರಿಗೋ ತಮ್ಮ ಪುಸ್ತಕದ ಗೌರವದ ಪ್ರತಿಗಳನ್ನು ನೀಡುತ್ತಿದ್ದರು. ಅದರೆ ಈಗ ಬರಹಗಾರರು ಸಂಖ್ಯೆ ಹೆಚ್ಚಾಗಿದೆ ಕೃತಿಗಳ ಪ್ರಕಟನೆಯು ಜೋರಾಗಿದೆ ಅದರೆ ಓದುಗರ ಸಂಖ್ಯೆಯು ಕಡಿಮೆಯಾಗಿದೆ. ಅದರೆ ನಾನು ಬರೆದ ಕೃತಿಯು ಎಲ್ಲಾರೂ ಓದಬೇಕು. ಬೇರೆಯವರು ಬರೆದ ಕೃತಿಯನ್ನು ನಾನು ಓದಲ್ಲ ಯಾಕೆಂದರೆ ನಾನು ಬಹುದೊಡ್ಡ ಬರಹಗಾರ ಅನ್ನುವ ಮನಸ್ಥಿತಿ ಇತ್ತೀಚಿನ ಹಲವಾರು ಬರಹಗಾರರಲ್ಲಿದೆ. ನಾನು ಕೂಡ ಬಹಳಷ್ಟು ಗೌರವ ಪ್ರತಿಗಳನ್ನು ಕಳುಹಿಸಿದ್ದೇನೆ. ಅವರ್ಯಾರು ಓದಿಲ್ಲ. ಅದರೆ ಅವರು ಬರೆದ ಕೃತಿಯನ್ನು ನಾವು ಹಣ ಕೊಟ್ಟು ಪಡೆದು ಓದಿ ಆ ಪುಸ್ತಕದ ಬಗ್ಗೆ ಹೇಳಬೇಕು. ಇಂತಹ ಉದಾಹರಣೆಗೆ ಹತ್ತಾರು ಇವೇ. ಇಂತಹ ಮನಸ್ಥಿತಿಯನ್ನು ಕಂಡ ಗಜಲ್ ಕಾರರು ಇಲ್ಲಿ ಬರೆದಿರುವ ಮಾತುಗಳು ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ಬೀಗುತ್ತಿರುವ ಹಲವು ಬರಹಗಾರರಿಗೆ ಖಂಡಿತವಾಗಿಯೂ ಅನ್ವಯಿಸುತ್ತದೆ.
ಯಾವುದೇ ಒಬ್ಬ ಕವಿ/ಲೇಖಕ ಗೌರವದಿಂದ ಕಳಿಸಿಕೊಟ್ಟ ಪ್ರತಿಯನ್ನು ಮುಚ್ಚಿಡದೇ ಓದು.. ಅವರು ನಿಮ್ಮ ಮೇಲಿನ ಪ್ರೀತಿಯಿಂದಲೋ, ನೀವು ಹಿರಿಯ ಬರಹಗಾರರೆಂದೋ ತಿಳಿದು, ನೀವು ಆ ಕೃತಿಯೊಳಗಿನ ನ್ಯೂನತೆಗಳನ್ನು ಹೊರಗೆಡವಲು  ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆಗಾಗಿ ನಿಮಗೆ ಕಳಿಸಿರುತ್ತಾರೆ. ಆ ಕೃತಿಯನ್ನು ಅವರು ಹೊರತರಲು ಅವರು ಕೂಡ ಶ್ರಮ ಹಣ ಹಾಕಿ ಕೃತಿಯನ್ನು ಹೊರತಂದಿರುತ್ತಾರೆ ನಿಮ್ಮಮನ ಮನೆ ಬಾಗಿಲಿಗೆ ಬಂದ ಕೃತಿಯನ್ನು ಮುಚ್ಚಿಡದೇ ಎಲ್ಲೋ ಒಂದು ಕಡೆ ಬಿಸಾಕದೇ ಓದು…. ಈಗ ಸಾಹಿತ್ಯ ಬರವಣಿಗೆಯಲ್ಲಿ ನೂರಾರು ಜನ ಲೇಖಕರು ಇದ್ದಾರೆ ಅವವರಿಗೆ ಅವರದೇ ಆದ ಪ್ರಬುದ್ಧತೆಯಿದೆ. ನಿನ್ನೊಬ್ಬನೇ ದೊಡ್ಡ ಬರಹಗಾರನೆಂದು ಬೀಗ ಬೇಡ ಎಂದು ಇಂದಿನ ಸ್ವಯಂ ಘೋಷಿತ ಖ್ಯಾತ ಲೇಖಕರಿಗೆ ಛಡಿ ಎಟು ನೀಡಿದ ರೀತಿ ಈ ಸಾಲುಗಳು ಮನವನ್ನು ಸೆಳೆಯುತ್ತವೆ.

ನೆಲ ನುಡಿದ ನಾದ ಈ ಗಜಲ್ ಕೃತಿಯಲ್ಲಿ ಸುಮಾರು ಅರವತ್ತು ನಾಲ್ಕು ಗಜಲ್ ಗಳಿವೆ ಪ್ರತಿಯೊಂದು ಗಜಲ್ ಗಜಲ್ ಕೂಡ ಒಂದೊಂದು ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಸಮಾಜ ಮನುಜ ಅಪ್ಪ ಅಲ್ಲದೆ ಪ್ರೇಮ ವಿರಹದ ಷೇರ್ ಗಳು ಕೂಡ ಈ ಕೃತಿಯಲ್ಲಿ ಇವೇ..ಎಲ್ಲಾ ಗಜಲ್ ಗಳ ಪರಿಚಯವನ್ನು ಮಾಡಿದರೆ ಆ ಸಾಲುಗಳ ತನ್ನ ಸ್ವಾದವು ಕಳೆದುಕೊಳ್ಳಬಹುದು. ಅದರಿಂದ ಕೆಲವೊಂದು ಗಜಲ್ ಗಳ ಪರಿಚಯವನಷ್ಟೆ ಮಾಡಿರುವೆ. ಪ್ರತಿಯೊಬ್ಬ ಯುವ ಗಜಲ್ ಕಾರರು ಗಜಲ್ ರಚನೆಗೆ ಪ್ರಯತ್ನ ಪಡುತ್ತಿರುವ ಬರಹಗಾರರು ಈ ಕೃತಿಯನ್ನು ಕೊಂಡು ಓದಬೇಕು ಎಂಬುದು ನನ್ನ ಗೌರವಪೂರ್ವಕ ಸಲಹೇ. ಯಾಕೆಂದರೆ ಈ ಕೃತಿಯು ಒಂದು ಉಪಯುಕ್ತವಾದ ಕೃತಿಯಾಗಿದೆ. ಆರಂಭದಲ್ಲಿಯೇ ಗಜಲ್ ಗಳ ರಚನೆಯ ಬಗ್ಗೆ ವಿಶ್ಲೇಷಣೆಯಿದೆ. ಮಾತ್ರಾ ಗಣದಲ್ಲಿ ಗಜಲ್ ಹೇಗೆ ಬರೆಯಬಹುದು ಎಂಬುದರ ಬಗ್ಗೆ ಮಾಹಿತಿ ಇದೆ. ಕಲಿಯಲು ಬರೆಯಲು ಬೇಕಾದಂತಹ ಷೇರ್ ಗಳಿವೆ.

ಕವಿಗಳು, ಲೇಖಕರು ಹಿರಿಯ ಗಜಲ್ ಕಾರರಾದಂತಹ ಯು ಸಿ ರಾಜ್ ಅಹಮದ್ ರವರು ಮತ್ತಷ್ಟು ಬರೆಯಲಿ ಆ ಬರಹ ದಲಿತರು, ಶೋಷಿತರು, ರೈತರ, ಧಮನಿತರ ನೋವಿನ ಬರಹವಾಗಲಿ. ಕನ್ನಡ ಸಾಹಿತ್ಯಲೋಕ ಅವರನ್ನು ಗುರುತಿಸಲಿ ಗೌರವ ಪುರಸ್ಕಾರಗಳು ಅವರಿಗೆ ಲಭಿಸಲಿ ಎಂದು ಹಾರೈಸುತ್ತೇನೆ.

Leave a Reply

Back To Top