ಯುಗಾದಿ ವಿಶೇಷ

ಎಲ್ಲೆಲ್ಲಿಯೂ ಹಬ್ಬ ಹಬ್ಬ …ಬಂತು ಯುಗಾದಿ ಹಬ್ಬ ಎಂಬ ಹಾಡು ಮನೆ ಮನೆಗಳಲ್ಲಿಯೂ ಅನುರಣಿಸುವ ಸಮಯವಿದು.

ಯುಗ ಯುಗಾದಿ ಕಳೆದರೂ
 ಯುಗಾದಿ ಮರಳಿ ಬರುವುದು
 ಹೊಸ ವರುಷಕೆ ಹೊಸ ಹರುಷವ
 ಹೊಸತು ಹೊಸತು ತರುವುದು

ಎಂಬ ಬೇಂದ್ರೆ ಅಜ್ಜನವರ ಕವನ ಯುಗಾದಿಯ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ಯುಗಾದಿ ಎಂದರೆ ವಸಂತಕಾಲ. ಯುಗಾದಿ ಎಂದರೆ ಚೈತ್ರ ಮಾಸದ ಆರಂಭದ ಮೊದಲ ಹಬ್ಬ. ಇಡೀ ಪ್ರಕೃತಿಯೇ ಈ ಹಬ್ಬಕ್ಕೆ ಸಜ್ಜಾಗುತ್ತದೆ. ಚಳಿಗಾಲದಲ್ಲಿ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾಗಿರುತ್ತಿದ್ದ ಮರಗಳೆಲ್ಲ ಎಳೆಯ ಹಚ್ಚ ಹಸಿರಿನ ಎಲೆಗಳನ್ನು ತನ್ನದಾಗಿಸಿಕೊಂಡು, ಎಳೆಯ ಕಾಯಿ, ಹಣ್ಣುಗಳು ಬಿಡುವ ಸಮಯ. ಮಾವಿನಲ್ಲಿ ಚಿಗುರೆಲೆಗಳು ಬೇವಿನಲ್ಲಿ ಹೂವುಗಳು ಮೂಡುವ ಈ ಸಮಯದಲ್ಲಿ ಇಡೀ ಪ್ರಕೃತಿಯೇ ಮೈ ಮರೆಸುವ ಸೌಂದರ್ಯಧಾರೆ ಇಳಿದು ಬಂದಂತೆ ಹಸಿರು ಸೀರೆಯುಟ್ಟು ಯುಗಾದಿ ಹಬ್ಬವನ್ನು ಆಚರಿಸಲು ಸಜ್ಜಾಗಿ ನಿಂತಂತೆ ಕಾಣುತ್ತದೆ.
ಯುಗಾದಿ ಹಳ್ಳಿಗರ ಭಾಷೆಯಲ್ಲಿ ಉಗಾದಿ ಹಬ್ಬ….ಯುಗದ ಅಂದರೆ ವರ್ಷದ ಮೊದಲ ಹಬ್ಬ. ನಮ್ಮ ಭಾರತೀಯರ ಹೊಸ ವರ್ಷದ ಸಂಭ್ರಮದ ಹಬ್ಬ.

ಪೌರಾಣಿಕವಾಗಿಯೂ ಕೂಡ ಯುಗಾದಿ ಹಬ್ಬವು ಮಹತ್ವವನ್ನು ಪಡೆದಿದೆ. ರಾವಣನನ್ನು ವಧಿಸಿ ಸೀತಾ ಮಾತೆಯ ಸಮೇತ ಪ್ರಭು ಶ್ರೀ ರಾಮನು ದೀಪಾವಳಿಯ ದಿನ ಅಯೋಧ್ಯೆಗೆ ಆಗಮಿಸಿದ ನಂತರ ಚೈತ್ರ ಮಾಸದ ಯುಗಾದಿ ಪಾಂಡ್ಯದ ದಿನದಂದು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾದ ದಿನವಿದು.
ಮಹಾಭಾರತದಲ್ಲಿ ಚೇದಿ ರಾಜ ವಸುವಿನ ತಪಸ್ಸಿಗೆ ಮೆಚ್ಚಿ ದೇವೇಂದ್ರನು ಆತನಿಗೆ
 ವೈಜಯಂತಿ ಮಾಲೆಯನ್ನು ನೀಡಿದ ಮತ್ತು ಆತನಿಗೆ ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ದಯಪಾಲಿಸಿದನು.
ಜೊತೆಗೆ ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನ ಎಂಬ ಅರಸನು ಈ ದಿನ ಪಟ್ಟಾ ಬಿಷಿಕ್ತನಾದ ನಂತರ ಆತನ ಹೆಸರಿನಲ್ಲಿಯೇ  ಪ್ರತಿ ವರ್ಷದಯುಗಾದಿ ಪಾಡ್ಯದ ದಿನದಂದು ಸಂವತ್ಸರ ಬದಲಾವಣೆಯನ್ನು ‘ಶಾಲಿವಾಹನ ಶಕೆ’ ಎಂದು ಗುರುತಿಸುವರು.

ಹಬ್ಬವೆಂದರೆ ಕೇಳಬೇಕೆ?? ಹಬ್ಬಕ್ಕೆ ಹಲವಾರು ದಿನಗಳ ಮೊದಲೇ ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣದ ಸಾರಣೆ ಮಾಡಿ ಹಾಸಿಗೆಗಳನ್ನು ಒಗೆದು ಹಾಕಿ ಪಾತ್ರೆ ಪಗಡಿಗಳನ್ನು ಮತ್ತೊಮ್ಮೆ ತೊಳೆದು
 ಓರಣವಾಗಿ ಹೊಂದಿಸಿ ಇಟ್ಟುಕೊಳ್ಳುವ ನಮ್ಮ ಹೆಣ್ಣು ಮಕ್ಕಳು ಹಬ್ಬಕ್ಕೆಂದೇ ವಿಶೇಷವಾಗಿ ಮಾವಿನ ತೋರಣ, ಹೂಗಳ ಮಾಲೆಗಳನ್ನು ತಯಾರಿಸಿ ಮನೆಯ ತಲೆಬಾಗಿಲಿಗೆ, ದೇವರ ಕೋಣೆಯ ಬಾಗಿಲಿಗೆ ಕಟ್ಟುತ್ತಾರೆ.

ಹಬ್ಬಕ್ಕೆ ಒಂದೆರಡು ದಿನಗಳ ಮೊದಲು ಬೇವು ಬೆಲ್ಲದ ಪುಡಿಯನ್ನು ತಯಾರಿ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಈ ಬೇವಿನ ಪುಡಿಗೆ ಬೇಕಾಗುವುದು ಪುಟಾಣಿ, ಬೆಲ್ಲ ಇಲ್ಲವೇ ಸಕ್ಕರೆ. ಗೋಡಂಬಿ, ಕೇರಬೀಜ, ದ್ರಾಕ್ಷಿ, ಬಾದಾಮಿ, ಉತ್ತತ್ತಿ, ಚಾರವಾಳ, ಪಿಸ್ತಾ, ಅಕ್ರೂಟ್ ಕಸಕಸೆ ಮತ್ತು ಕೊಬ್ಬರಿಯ ಪುಡಿಗಳನ್ನೂ ಮಂದ ಉರಿಯಲ್ಲಿ ಹುರಿದು ತಣ್ಣಗಾದ ನಂತರ ಪುಡಿ ಮಾಡಿಕೊಂಡು ಇಲ್ಲವೇ ಸಣ್ಣಗೆ ಹೆಚ್ಚಿಕೊಂಡು ಪುಟಾಣಿಹಿಟ್ಟು ಸಕ್ಕರೆ ಇಲ್ಲವೇ ಪುಟಾಣಿ ಹಿಟ್ಟು ಬೆಲ್ಲದ ಮಿಶ್ರಣಕ್ಕೆ ಸೇರಿಸುತ್ತಾರೆ. ಈ ಎಲ್ಲ ಮಿಶ್ರಣಕ್ಕೆ ಏಲಕ್ಕಿ ಪುಡಿ ಹಾಕಿದರೆ ಬೇವಿನ ಪುಡಿ/ಹುಡಿ ತಯಾರು. ಹಬ್ಬದ ದಿನ ಮುಂಜಾನೆ ಬೇವಿನ ಮರದಲ್ಲಿಯ ಹೂಗಳನ್ನು ಹರಿದು ತಂದು ಅವುಗಳನ್ನು ಮರದಲ್ಲಿ ಹಾಕಿ ಚೆನ್ನಾಗಿ ಒತ್ತಿ ಚಪ್ಪರಿಸಿ ಹೂವಿನ ಎಸಳುಗಳನ್ನು ಮಾತ್ರ ಬೇರ್ಪಡಿಸಿ ಈ ಪುಡಿಯ ಮಿಶ್ರಣಕ್ಕೆ ಕಲಸಿದರೆ ಸಂಪೂರ್ಣವಾಗಿ ಬೇವು ತಯಾರಾಗುತ್ತದೆ.

ಯುಗಾದಿ ಅಮಾವಾಸ್ಯೆಯ ದಿನ ಪೂಜೆ ಮಾಡಿದ ನಂತರ ಹೋಳಿಗೆಯ ಇಲ್ಲವೇ ಬೆಲ್ಲದ ಬೇಳೆಯ ಅಡುಗೆ ತಯಾರಾದರೆ ಮರುದಿನ ಮುಂಜಾನೆ ಎಲ್ಲರೂ ಎಣ್ಣೆ ಹಚ್ಚಿಸಿಕೊಂಡು ಬೇವಿನ ಸೊಪ್ಪನ್ನು ಹಾಕಿ ಕಾಯಿಸಿದ ನೀರಿನಲ್ಲಿ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ದೇವರ ಪೂಜೆಯ ನಂತರ ಮನೆಯ ಹೆಣ್ಣು ಮಕ್ಕಳಿಂದ ಪುರುಷರು ಆರತಿ ಮಾಡಿಸಿಕೊಂಡು ಆರತಿಯ ತಟ್ಟೆಗೆ ದುಡ್ಡು, ಸೀರೆ, ಅನುಕೂಲ ಪರಿಸ್ಥಿತಿ ಇದ್ದರೆ ಒಡವೆಗಳನ್ನು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೀಡುವುದು ಉಂಟು.ಶಾವಿಗೆ ಪಾಯಸದ ಜೊತೆಗೆ ಸಕ್ಕರೆಯಲ್ಲಿ ತಯಾರಿಸಿದ ಬೇವಿನ ಪುಡಿಗೆ ತುಪ್ಪ ಹಾಕಿ ದೇವರಿಗೆ ನೈವೇದ್ಯ ಮಾಡಿದ ನಂತರ  ಪ್ರಸಾದವನ್ನು ಸ್ವೀಕರಿಸುವರು. ಮುಂಜಾನೆ ಶಾವಿಗೆ ಬೇವಿನ ಸಿಹಿಯ ಜೊತೆ ತಿಂಡಿಯನ್ನು ತಿಂದರೆ ಮಧ್ಯಾಹ್ನಕ್ಕೆ ಮತ್ತೆ ಬೇಳೆ ಹೋಳಿಗೆ, ಕೋಸಂಬರಿ ಮತ್ತು ನೀರು ಬೇವಿನ ಭೂರಿ ಭೋಜನ. ಪುಟಾಣಿ ಮತ್ತು ಬೆಲ್ಲದ ಜೊತೆ ವಿವಿಧ ಒಣ ಹಣ್ಣುಗಳನ್ನು ಹಾಕಿ ತಯಾರಿಸಿದ ಬೇವಿನ ಪುಡಿಗೆ ಹುಣಸೆ ಹಣ್ಣು ಕಿವುಚಿ ರಸ ತೆಗೆದು ನೀರು ಕಲಸಿ ಮಾವಿನ ಕಾಯಿಯ ತುರಿ ಉಪ್ಪು ಬೆಲ್ಲ ಹಾಕಿ ತಯಾರಿಸಿದ ಬೇವು ಮತ್ತು ಬೆಲ್ಲದ ರಸಾಯನ ಹೋಳಿಗೆಯೊಂದಿಗೆ ತಿಂದರೆ ಆಹಾ!! ಸ್ವರ್ಗಕ್ಕೆ ಎರಡೇ ಗೇಣು!
ಇದರ ಜೊತೆಗೆ ಹಪ್ಪಳ ಸಂಡಿಗೆ ಕರಿದ ಮೆಣಸಿನಕಾಯಿ ಬಾಳಕಗಳು ಹೋಳಿಗೆ ಸಾರು, ಅನ್ನ ಮತ್ತು ಈರುಳ್ಳಿ ಬಜ್ಜಿ ಮತ್ತು ಮೆಣಸಿನ ಕಾಯಿ ಬಜ್ಜಿಗಳು ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ,,!! ಎಂದು ಹೇಳಬಹುದು.

ಈ ಹೋಳಿಗೆ ಮತ್ತು ಬೇವಿನ ಆಹಾರದಲ್ಲಿಯೂ ವೈಜ್ಞಾನಿಕ ಸತ್ಯ ಅಡಗಿದೆ. ಚಳಿಗಾಲದ ದಿನಗಳು ಮುಗಿದು ಬೇಸಿಗೆಯ ಬಿಸಿಲಿನ ವಾತಾವರಣಕ್ಕೆ ಪೂರಕವಾಗಿ ದೇಹವು ಹೊಂದಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗಗಳಿಂದ ಪಾರಾಗಲು ಬೇವಿನ ಎಲೆಯನ್ನು ಹಾಕಿ ಕಾಯಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ದೇಹವು ಉಷ್ಣತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದುತ್ತದೆ. ಇನ್ನು ಕೋಸಂಬರಿಯು ಊಟದ ರುಚಿಯನ್ನು ಹೆಚ್ಚಿಸಿದರೆ ಬೇಳೆ ಮತ್ತು ಬೆಲ್ಲದ ಹೋಳಿಗೆಗಳು ದೇಹದಲ್ಲಿನ ಪಿತ್ತ ಪ್ರಕೃತಿಯನ್ನು ಶಾಂತವಾಗಿಸಿ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತವೆ. ಬೇಳೆಯಲ್ಲಿರುವ ಪ್ರೋಟೀನ್ ಮತ್ತು ಬೇವಿನ ರಸಾಯನಕ್ಕೆ ಹಾಕಿದ ಒಣ ಹಣ್ಣು ಮತ್ತಿತರ ಸಾಮಗ್ರಿಗಳು ದೇಹದ ಚೈತನ್ಯ ಶಕ್ತಿಗೆ ಪೂರಕವಾಗುವ ಆಹಾರಗಳಾಗಿದ್ದು ಇಡೀ ಬೇಸಿಗೆ ಕಾಲವನ್ನು ಆರೋಗ್ಯವಾಗಿ ಮತ್ತು ಆಹ್ಲಾದಕರವಾಗಿ ಕಳೆಯಲು ಅತ್ಯುತ್ತಮ ಆಹಾರಗಳು.

ಹಬ್ಬದ ದಿನದಂದು ಹೊಸ ಬಟ್ಟೆಯನ್ನು ಎಲ್ಲರೂ ಧರಿಸುತ್ತಾರೆ. ಶುಭಕಾರ್ಯಗಳಿಗೆ ಕೂಡ ಯುಗಾದಿ ಪ್ರಶಸ್ತವಾದ ದಿನ. ಈ ದಿನ ಕಟ್ಟಡಗಳ ಪ್ರಾರಂಭೋತ್ಸವ, ಹೊಸ ಮನೆಗೆ ಬಾಗಿಲನ್ನಿಡುವುದು, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳನ್ನು ಕೈಗೊಳ್ಳಬಹುದು.
ರೈತರು ಕೂಡ ತಮ್ಮ ದನಕರುಗಳ ಮೈ ತೊಳೆದು ಅಲಂಕರಿಸಿ ಪೂಜಿಸುತ್ತಾರೆ. ಹೊಲಗಳಿಗೆ ತೆರಳಿ ಭೂಮಿ ತಾಯಿಯ ಪೂಜೆ ನೆರವೇರಿಸಿ ನೈವೇದ್ಯ ಮಾಡುತ್ತಾರೆ.

ಸಾಯಂಕಾಲಗಳಲ್ಲಿ ಆಯಾ ಊರುಗಳಲ್ಲಿ ನಡೆಯುವ ವಿವಿಧ ದೇವಸ್ಥಾನಗಳಲ್ಲಿ ಮತ್ತು ವಿಶೇಷವಾಗಿ ಹನುಮನ ದೇಗುಲಗಳಲ್ಲಿ  ವಿಶೇಷ ಪೂಜೆ, ಪುನಸ್ಕಾರ, ರಥ ಯಾತ್ರೆ ಗಳಲ್ಲಿ ಪಾಲ್ಗೊಂಡು ಪಾನಕ ಕೋಸಂಬರಿಯ ಪ್ರಸಾದವನ್ನು ಸ್ವೀಕರಿಸಿ ಪಂಚಾಂಗ ಶ್ರವಣವನ್ನು ಮಾಡಿದರೆ ಹಬ್ಬ ಸಂಪೂರ್ಣವಾದಂತೆ. ವಿವಿಧ ದೇವಸ್ಥಾನಗಳಲ್ಲಿ ಹೊಸ ಪಂಚಾಂಗವನ್ನು ಅಂದಿನ ದಿನ ಪಠಣ ಮಾಡುತ್ತಾ ಆ ವರ್ಷದ ಮಳೆ, ಬೆಳೆ, ಮುಂದಿನ ದಿನಮಾನಗಳಲ್ಲಿ ನಡೆಯುವ  ವಿಷಯಗಳ ಅರಿವನ್ನು ಪಂಚಾಂಗ ಶ್ರವಣದ ಮೂಲಕ ಹೊಂದುವುದು ಯುಗಾದಿ ಹಬ್ಬದ ಅತ್ಯಂತ ವಿಶೇಷವಾದ ಕಾರ್ಯಕ್ರಮ.

ಯುಗಾದಿ ಹಬ್ಬವು ವರ್ಷದ ಮೊದಲ ಹಬ್ಬ…. ಈ ದಿನದಂದು ನಾವು ಬೇವು ಬೆಲ್ಲವನ್ನು
ಸೇವಿಸುತ್ತಾ ಜೀವನದಲ್ಲಿ ಬರುವ ಸುಖ ದುಃಖ, ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಈ ಹಬ್ಬವು ಕಲಿಸಿಕೊಡುತ್ತದೆ. ಬೇವಿನ ಕಹಿಯ ಜೊತೆ ಬೆಲ್ಲದ ಸಿಹಿಯು ಬೆರೆತರೆ ಬಾಳು ಸಮರಸವಾಗುವುದು ಎಂಬ ಬದುಕಿನ ಬಲು ದೊಡ್ಡ ಪಾಠ ನಮಗೆ ವರ್ಷದ ಮೊದಲ ಹಬ್ಬದಲ್ಲಿ ದೊರೆಯುತ್ತದೆ.


Leave a Reply

Back To Top