ಯುಗಾದಿ ವಿಶೇಷ

ಹಾಡು ಕೋಗಿಲೆ ವಸಂತದಾಗಮನವ
ಋತುರಾಜನ ಸಂಭ್ರಮ
ಯಾಕೋ ದನಿ ನಡುಗುತಿದೆ
ರೆಕ್ಕೆಗಳು ಭಾರವಾಗಿವೆ
ಇಂಪಿಲ್ಲದ ನಿನ್ನ ದನಿ
ಸೊಂಪಿಲ್ಲದ ನಿನ್ನ ಸಡಗರ
ಕಳೆಗೆಟ್ಟಿದೆ ವಸಂತ
ಮಾವು ಪಲ್ಲವಿಸಲಿಲ್ಲ
ಬೇಹೂವಿನ ಘಮವಿಲ್ಲ
ಮಲ್ಲಿಗೆಯ ಕಂಪಿಲ್ಲ
ಮುತ್ತುಗದ ಕೆಂಪಿಲ್ಲ
ಚೈತ್ರದ ಮಸಣ ಮೆರವಣಿಗೆ

ಭೂತಾಯಿಯ ಒಡಲ ಹುಡಿಗೆಡಿಸಿ
ನಂಜಾಗಿ ನೆಟ್ಟ ಬೀಜ ಮೊಳಕೆಯೊಡೆಯದೆ
ಕಮರಿದ ಬೆಳೆಗೆ ಬಾರದ ಮಳೆಗೆ
ಕಂಗೆಟ್ಟ ರೈತನ ಸಾವಿಗೆ
ದನಿಗಟ್ಟಿದೆಯಾ
ಅಂಕುರಿಸುವ ಮೊದಲೆ
ಒಡಲ ಬಗೆದು ಹೆಂಗೂಸಿನ ಜೀವ ತೆಗೆದ
ನಿಷ್ಕರುಣಿಗಳ ಭೀಭತ್ಸತೆಗೆ
ಬೇಸತ್ತೆಯಾ
ಅಂತರಂಗದ ಸುಪ್ತ ಆಸೆಗಳೆಲ್ಲ
ಬೊಬ್ಬಿಟ್ಟು ಮುತ್ತು ಕೊಡಲು ಹೋದವರ
ಕತ್ತು ಹಿಚುಕಿ ಬಯಲು ಬೆತ್ತಲೆ ಮಾಡಿ
ಬೆಂಕಿ ಇಟ್ಟ ಕೈಗಳ ದೌರ್ಜನ್ಯಕ್ಕೆ
ಮರುಗಿದೆಯಾ
ನೋಡಿದಲ್ಲೆಲ್ಲ ಕೊಲೆ ಸುಲಿಗೆ
ಅನ್ಯಾಯ ಅಸಮಾನತೆ
ಅತ್ಯಾಚಾರ ಭ್ರಷ್ಟಾಚಾರ
ಮೋಸದಾಟಗಳ ಮೆರವಣಿಗೆ
ವೈಭವದ ಮಸಣ ಪಲ್ಲಕ್ಕಿಯ
ನೋಡಿ ಪಕ್ಕನೆ ನಕ್ಕು ಹಾಡು
ನಿಲ್ಲಿಸಿದೆಯಾ
ಹಾಡು ಕೋಗಿಲೆ ಬೇಸರ ಬೇಡ
ಶರಣ ಸಂತ ಮಹಾತ್ಮರು
ನಿನ್ನ ದನಿಗೆ ದನಿಗೂಡಿಸುವರು
ರೆಕ್ಕೆ ಬಲಿತ ನಿನ್ನ ಮರಿಗಳು
ಆಸೆ ಹೊತ್ತು ಅನಂತಾಕಾಶದಲಿ ಹಾರುವವು
ಮಾವ ಚಿಗುರುತ್ತದೆ ಬೇವು ಘಮಿಸುತ್ತದೆ
ಮುತ್ತುಗ ಕೆಂಪಿಟ್ಟು ನಲಿಯುತ್ತದೆ
ನೀ ಹಾಡಿದಾಗಲೇ ವಸಂತರಾಜನ
ಮದುವೆ ಮೆರವಣಿಗೆ
ನಿನ್ನ ಹಾಡೇ ಯುಗಾದಿಗೊಂದು
ಸ್ವಾಗತ ಗೀತೆ


Leave a Reply

Back To Top