ಯುಗಾದಿ ವಿಶೇಷ

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಎಂಬ ದ.ರಾ ಬೇಂದ್ರೆಯವರ ಕವನದ ಸಾಲುಗಳಲ್ಲಿ ಅಭಿವ್ಯಕ್ತಿತ ಹೊಸತನವನ್ನು, ಚೈತನ್ಯವನ್ನು ತರುವ ಹಬ್ಬವಾಗಿದೆ.
ಚೈತ್ರ ಮಾಸದ ಶುಕ್ಲ ಪಕ್ಷದಂದು ಆರಂಭವಾಗುವ ಯುಗಾದಿ ಹಬ್ಬಕ್ಕೆ ಧಾರ್ಮಿಕತೆ ಜೊತೆಗೆ ವೈಜ್ಞಾನಿಕವಾದ ವಿಶೇಷತೆ ಕೂ ಇದೆ.ಹಿಂದೂ ಸಂವತ್ಸರದ ಹೊಸ ವರ್ಷ ಯುಗಾದಿಯಿಂದ ಆರಂಭವಾಗುತ್ತದೆ.ಕರ್ನಾಟಕ ಆಂದ್ರ ಪ್ರದೇಶದಲ್ಲಿ ಯುಗಾದಿ ಎಂದು ಆಚರಿಸಿದರೆ ಮಹಾರಾಷ್ಟ್ರದಲ್ಲಿ ‘ಗುಡಿ ಪಾಡವಾ’ಎಂದು ಆಚರಿಸಲಾಗುತ್ತಿದೆ. ಈ ದಿನದಂದೇ ಒಬ್ಬ ಕುಂಬಾರನ ಮಗನಾದ ಶಾಲಿವಾಹನನು ಮಣ್ಣಿನ ಸೇನೆಮಾಡಿ ಅದರ ಮೇಲೆ  ನೀರು ಚಿಮುಕಿಸಿ ಅದಕ್ಕೆಜೀವ ತುಂಬಿದನು.ಆ ಸೈನ್ಯದ ಸಹಾಯದಿಂದ ಪ್ರಭಾವಿ ಶತ್ರುಗಳನ್ನು ಸೋಲಿಸಿದನು. ಆ ವಿಜಯದ ಸಂಭ್ರಮದ ದಿನದಂದೇ ಶಾಲಿವಾಹನ ಶಕೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಯುಗಾದಿ ಎಂಬ ಪದವು ಸಂಸ್ಕ್ರತದ ಯುಗ+ಆದಿ ಎಂಬ ಪದಗಳಿಂದ ಆಗಿದೆ.’ಯುಗ’ಎಂದರೆ ಅವಧಿ ‘ಆದಿ’ಎಂದರೆ ಪ್ರಾರಂಭ ಹೊಸ (ಅವಧಿ)ವರ್ಷದ ಪ್ರಾರಂಭ ಎಂಬರ್ಥವನ್ನು ನೀಡುತ್ತದೆ.
ಈ ಸಮಯದಲ್ಲಿ  ಮರಗಳ ಎಲೆ ಉದುರಿ ಹೊಸ ಚಿಗುರು ಪ್ರಾರಂಭವಾಗುತ್ತದೆ.ಹಾಗಾಗಿ ಪ್ರಕೃತಿಯೇ ಹೊಸತನದ ಸಂಕೇತವನ್ನು ಸೂಚಿಸುತ್ತದೆ.
ಯುಗಾದಿಯ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಹರಳೆಣ್ಣೆ ತಲೆಗೆ ಹಾಕಿ ಸ್ನಾನ ಮಾಡುತ್ತಾರೆ.ವೈಜ್ಞಾನಿಕ ವಿಶೇಷತೆಯನ್ನು ಒಳಗೊಂಡು ಆರೋಗ್ಯದ ಕುರಿತು ಮಹತ್ವ ತಿಳಿಸುವ ಹಬ್ಬವಾಗಿದೆ.ಕಡಲೆ ಬೇಳೆ ಬೆಲ್ಲದ ಹೂರಣ ತಯಾರಿಸಿ ಹೋಳಿಗೆಯನ್ನು ತಯಾರಿಸುತ್ತಾರೆ.

ಅಂದರೆ ಭೂಮಿಯ ಉತ್ತರ ಗೋಳಾರ್ಧವು ಸೂರ್ಯನ ಅತ್ಯುನ್ನತ ಶಕ್ತಿಯನ್ನು ಪಡೆದುಕೊಳ್ಳುವುದರಿಂದ ಆ ಹೆಚ್ಚಿನ ತಾಪಮಾನವನ್ನುಮನುಷ್ಯನಿಗೆ ಸಹಿಸಿಕೊಳ್ಳಲು ಅನುಕೂಲವಾಗುವಂತೆ ಹರಳೆಣ್ಣೆಯಿಂದ ತಂಪಾಗಿಸಿ ವರ್ಷದ ಶಾಖದ ದಿನಗಳನ್ನು ಕಳೆಯಲು ದೇಹವನ್ನು ಸಜ್ಜುಗೊಳಿಸುತ್ತದೆ.
ತಾಜಾ ಮಾವಿನ ಎಲೆಗಳಿಂದ ಮನೆಯ ಮುಂಭಾಗವನ್ನುಅಲಂಕರಿಸುತ್ತಾರೆ.ಕಾರಣ ತಾಜಾ ಗಾಳಿಯು ಮನೆಯೊಳಗೆ ಪ್ರವೇಶಿಸಿ ಮೈ ಮನಕೆ ತಂಪನ್ನು ನೀಡುತ್ತದೆ.ಹೊಸ ಬಟ್ಟೆಗಳನ್ನು ಧರಿಸುವದರಿಂದ ಮನವು ಹೊಸ ಚೈತನ್ಯದಿಂದ ಪ್ರಫುಲ್ಲಿತವಾಗುತ್ತದೆ. ಬೇವು ಬೆಲ್ಲ ಜೀವನಕೆ ಸಮರಸದ,ಸಂದೇಶ ನೀಡುತ್ತದೆ ಬೇವು ಕಹಿಯಾಗಿದ್ದು ಜೀವನದ ಕಷ್ಟಗಳ ಸಂಕೇತವಾಗಿದೆಬೇವು ಚರ್ಮದ  ತೊಂದರೆಗಳ ನಿವಾರಣೆಮಾಡುತ್ತದೆ..ಬೆಲ್ಲವು ಸಿಹಿಯಾಗಿ‌ದ್ದು ಸುಖದ ಸಂಕೇತವಾಗಿರುತ್ತದೆ.ಬೆಲ್ಲವನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.ಯುಗಾದಿಯ ದಿನ ಬೇವಿನ ಎಲೆಯ ರಸಪಾನ ಮಾಡುವರು.ದೇವಾಲಯದಲ್ಲಿ ದರ್ಶನಕ್ಕೆ ಬಂದ ಜನರಿಗೆ ಬೇವು- ಬೆಲ್ಲದ ಮಿಶ್ಲಣದ ಪ್ರಸಾದ ನೀಡುತ್ತಾರೆ.ಬೇವು ಕಹಿಯಾಗಿದೆ ಆದರೆ ಆರೋಗ್ಯಕರವಾಗಿದೆ.ಪ್ರಾರಂಭಕ್ಕೆ ಕಷ್ಟಕೊಟ್ಟು ನಂತರ ಕಲ್ಯಾಣ ಮಾಡುವವನು ಜ್ಞಾನವಂತನು.ಕಹಿ ಬೇವನು ಸೇವನೆ ಮಾಡುವವನು ಯಾವಾಗಲೂ ನಿರೋಗಿಯಾಗಿರುತ್ತಾನೆ.ಎಷ್ಟೋ ವಿಚಾರಗಳನ್ನು ಆಚರಣೆಗೆ ತರುವಲ್ಲಿ ಕಷ್ಟವಾಗುತ್ತದೆ.ಆದರೆ ಆ ವಿಚಾರಗಳೇ ಜೀವನವನ್ನುಉದಾತ್ತವನ್ನಾಗಿ ಮಾಡುತ್ತವೆ.ಅಂತಹ ಸುಂದರ ಸದ್ವಿಚಾರಗಳ ಸಾತ್ವಿಕತೆಯಲಿ ಮಿಂದು ಮಾನಸಿಕ ಮತ್ತು ಬೌದ್ಧಿಕ ಆರೋಗ್ಯವನ್ನು ಪಡೆಯಲು ಸಾಧ್ಯ.ಜೀವನದಲ್ಲಿ ಎಂದಿಗೂ ಸುಖ ಮತ್ತು ದುಃಖ ಒಟ್ಟಿಗೆ ಬರುವದಿಲ್ಲ.ಸುಖದ ಹಿಂದೆಯೇ ದುಃಖ,ದುಃಖದ ಹಿಂದೆಯೇ ಸುಖದ ಆಗಮನವಾಗುತ್ತದೆ. ಹೀಗೆ ಯುಗಾದಿಯು ಮನಗಳಲ್ಲಿ ಚೈತನ್ಯವನ್ನು ತುಂಬಿ ಸಮರ್ಪಣಾಭಾವನೆಯನ್ನು ಜಾಗೃತಗೊಳಿಸುತ್ತದೆ.

ಯುಗಾದಿ ಹಬ್ಬಕ್ಕೆ ವಿಶೇಷವಾದ ಚಟ್ನಿಯನ್ನು ಕೂಡ ತಯಾರಿಸುತ್ತಾರೆ.ಅದರಲ್ಲಿ ಬೆಲ್ಲ,ಉಪ್ಪು,ಹುಣಸೆಹಣ್ಣು,ಮೆಣಸಿನಪುಡಿ ಬೇವಿನಹೂ,ಮಾವಿನ ಹೋಳನ್ನು ಬಳಸುತ್ತಾರೆ.
ಬೇವು-ಬೆಲ್ಲ ಉಪಯೋಗ ಈಗಾಗಲೆ ತಿಳಿದಿದೆ.ಉಪ್ಪು ದೇಹವನ್ನು ಹೈಡ್ರೀಕರಿಸುತ್ತದೆ.ಮಾವು ಅಂಟಿ ವೈರಸ್ನಂತ ಗುಣ ಹೊಂದಿದ್ದು ಸಂಧಿವಾತ,ಕಫ,ಪಿತ್ತ ನಿಯಂತ್ರಿಸುತ್ತದೆ ಹಾಗೂ ರಕ್ತ ಪರಿಚಲನೆಗೆ ಸಹಾಯಕಾರಿ.

.ಹುಣಸೆಹಣ್ಣು ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.ಮೆಣಸಿನಪುಡಿ ಪ್ರತಿರಕ್ಷಣಾವ್ಯವಸ್ಥೆಗೆ ನೆರವಾಗುತ್ತದೆ.

ನಿಸರ್ಗಕ್ಕೆ ನಿತ್ಯವು ಮರಣ ಈ ಭಾಗ್ಯ ನಮಗೇಕೆ ಇಲ್ಲ ಎಂದೂ ಕೇಳುತ್ತಾರೆ ವರಕವಿ ದ.ರಾ.ಬೇಂದ್ರೆ. ಯುಗಾದಿಯು ಹೊಸಚೇತನ ಶಕ್ತಿಯ ಪುನರುಜ್ಜೀವನಕ್ಕೆ ಹೊಸ ವಿಚಾರಗಳ ನಾಂದಿಗೆ,ಸೃಜನಶೀಲವಾದ ಮನೋನಿಲುವಿಗೆ ಸಂಕೇತವಾಗಿದೆ.
ಸಮರಸದ ಭಾವದಿ ಬೇವು ಬೆಲ್ಲದ ಸವಿಯ ತೆರದಿ ಬದುಕ ಸವೆಸೋಣ ಅಲ್ಲವೇ?


Leave a Reply

Back To Top