ಪುಸ್ತಕ ಸಂಗಾತಿ

ಬರ್ಫದ ಬೆಂಕಿ

ನಾಗರೇಖಾ ಗಾಂವಕರ್

ಗೆಳತಿ ನಾಗರೇಖಾ ಗಾಂವಕರ ಅವರ ಪುಸ್ತಕಗಳು ತಲುಪಿ ಬಹಳ ದಿನಗಳಾದರೂ ಓದಿದ್ದು ಈ ವಾರ..ಭರವಸೆಯ ಕವಯಿತ್ರಿ, ಕತೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡದವರು.
“ಬರ್ಫದ ಬೆಂಕಿ” ಹೆಸರೇ ಹೇಳುವಂತೆ ಹೊಸ ರೀತಿಯ ಕಾವ್ಯ ಕಟ್ಟುವಿಕೆಯ ಪ್ರಯತ್ನ. ನನಗೆ ಸ್ವಲ್ಪ ಸಂಕೀರ್ಣವೆನಿಸಿದ ಕವಿತೆಗಳನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಲ್ಲಿನ ಕವಿತೆಗಳು ಭಾವ, ಅನುಭವದ ಹಿನ್ನೆಲೆಯಲ್ಲಿ ಸಹಜವಾಗಿ ಹೊಮ್ಮಿದಂಥವು.


ಮಾಗುವುದೆಂದರೆ
ಅವಳ ಕವಿತೆಗಳು
ಕಾಲಾತೀತ ಕವಿತೆಗಳು
ಬಾನ್ಸುರಿಯ ನಾದ
ಎಂಬ ವಿಭಾಗಗಳಡಿ ಕವಿತೆಗಳು ದಾಖಲಾಗಿವೆ
.

ಅಕ್ಷರಗಳು ಶೋಕೇಸಿನ ಪದಕವಾಗಲ್ಲ, ಕೆಸರಿನ ನೈದಿಲೆಯೂ, ಬೆಳಕಿನ ಹಾಡೂ ಆಗಬೇಕು ಎಂಬ ಆಳದ ಅರಿವಿದೆ ಇಲ್ಲಿ. ಅಸ್ಮಿತೆಯ ಹಂಗಿಲ್ಲದ, ಕಾಯಕವೇ ಯೋಗವಾದ ಬೆಳಕಿನ ಪುಂಜಗಳಿಗೂ, ಸೂಟು ಬೂಟು ವಿಚಿತ್ರ ಆಕ್ಸೆಂಟುಗಳ ಜಂಭದ ಬೀಜಕ್ಕೂ ನಡುವೆ ಗೋಜಲಿನ ಗೂಡಾದ ಮನ ಶೂನ್ಯಕ್ಕೆ ಶರಣಾಗುವುದಿದೆ, ದೇಸಿ, ದೈನೇಸಿತನಕ್ಕಾಗಿ ಹಂಬಲಿಸುವುದಿದೆ ಇಲ್ಲಿ.

ಕಾಯುವುದು, ನೋಯುವುದು, ಕೊರಗುವುದು, ಬೇಯುವುದು, ಮಾಗುವುದು ಹೇಗೆಂದರೆ ಬೆಂಕಿಯನ್ನು ಅಂಗೈಲಿಟ್ಟುಕೊಂಡು ಹೊಳಪಿನ ಚುಕ್ಕಿಯನ್ನು ಹಣೆಯಲ್ಲಿ ಧರಿಸುವುದು!! ಉಕ್ಕುವ ಕಡಲ ಮೋಹಿಸುವ ಇವರ ಹಟಕ್ಕೆ ಬರ್ಫದ ಬೆಂಕಿ ಕುಡಿವ ಹುಚ್ಚಿದೆಯಂತೆ.
ಸುರಿದು ಹೋದ ಎಣ್ಣೆಯ ದೀಪ ಹಚ್ಚಲಾಗದೇ ಕತ್ತಲಲ್ಲಿ ಕಳೆದ ಹಸಿಹಸಿ ಬಯಕೆಯ ಬೆಳದಿಂಗಳ ರಾತ್ರಿಯಿದೆಯಂತೆ!! ಅವಳ ದ್ವಂದ್ವ, ತಲ್ಲಣಗಳು, ಅಬ್ಬಾ!!
ರಾತ್ರಿಯಲ್ಲಿ ಹಗಲಿನ ಪಾಳಿ ಮಾಡುತ್ತಲೇ ನಡೆಯುತ್ತಿದ್ದಾಳೆ ಅವಳು. ನಾಜೂಕು ಬಳೆಗಳು ಗಾಯಗೊಳಿಸಿ ಬೇಡಿಯಾಗಿಸುವ, ಮೂಗುತಿ ಘಾಸಿಗೊಳಿಸುವ, ನಂಜು ತೆಗೆವ ಅರಿಶಿನವೂ ಕೆರೆತ ತಂದಿಡುವ, ಗೆಜ್ಜೆಯ ಸದ್ದೂ ಸಂತೆಯಾಗುವ, ತಾಳಿಯ ನೀರೂ ತಾಳಿಕೊಳ್ಳದ ನಿರಾಕರಣೆಯಲ್ಲೂ ಅವನನ್ನೇ ಒಳಗೊಳ್ಳುವುದು, ತನು ಬಂಧನವ ಮೀರಿ ಮನಗುದುರೆಗೆ ನಾಗಾಲೋಟ ಕಲಿಸುವ ಅವಳು. ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್ಡನ್ನು , ಪರದಾ ಬುರ್ಖಾ, ಕುಂಕುಮವನ್ನು, ತನ್ನ ಹೆಸರಿನೊಡನೆ ಅವನ ಹೆಸರು ಜೋಡಿಸುವುದನ್ನು, ಮಾಧವಿ, ಶಕುಂತಲೆ, ಪಾಂಚಾಲಿಯರನ್ನು ನಿರಾಕರಿಸುತ್ತ “ಹೆಂಡತಿಯಾಗಲಾರೆ” ಎನ್ನುವ ಅವಳು..ಬಿಂಕ ಬಿನ್ನಾಣ, ಒನಪು, ವೈಯಾರದ ಹಂಗು ತೊರೆದ, ಜಡ್ಡುಗಟ್ಟಿದ ಕೈಗಳ, ಮಾಸಿದ ಬಳೆಗಳ ಭೂಮಿ ತೂಕದ ಹೆಣ್ಣು ಅವಳು..
ಇಲ್ಲಿ ಸ್ವಾತಂತ್ರ್ಯವೂ ಬಂಧನವೂ ಕೈ ಜೋಡಿಸಿದೆ.

ಬಾಯಿಲ್ಲದವನ ಕೂಗಿಗೆ ಕಂಚಿನ ಕಂಠ ಎರವಲು ಸಿಕ್ಕಿದೆ…ದಲಿತ ಕೇರಿಯಲಿ ದಿಗ್ವಿಜಯ…ರಾಮ ರಹೀಮರ ಮನೆಯ ಬೆಂಡು ಬತ್ತಾಸು, ಸಿರಕುರಮಾ ಮಾತು ಬಿಟ್ಟಿವೆ..ಕಾಲಾತೀತ ಕವಿತೆಗಳು ಹೀಗಿವೆ.

“ನನ್ನ ಪೇಲವ ಮುಖದ ಮ್ಲಾನತೆಗೆ
ನಿನ್ನ ನಿರಾಕರಣೆ ಕಾರಣ
ಎನ್ನಬೇಕೆನಿಸುವುದಿಲ್ಲ.
ಮುಂಗುರುಳ ಹೆರಳುಗಳು
ನಿನ್ನ ಕೈ ಬೆರಳ ಸಂದಿಯಲ್ಲಿ
ಹೊರಳಿ ನರಳಿ
ಬೆಳಕಾದವಂತೆ.
ನನಗೇನೂ ಈ ಬಂಧಕ್ಕೆ
ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ. “

ಎಡತಾಕುವ ಬೆಕ್ಕಿನಂತೆ ಸುತ್ತುತ್ತಿದ್ದವ
ಅಪರೂಪದ ಬಿಳಿ ಪಾರಿವಾಳವಾದ.
ಆದರೂ
ಹಳೆಯ ಉಸಿರ ಬಸಿರ
ಕಡತಗಳ ತೆಗೆದೊಮ್ಮೆ
ನೋಡಬೇಕೆನಿಸುತ್ತದೆ.
ಓದಬಲ್ಲೆನೇ
ಹಳೆಯ ದಿಟ್ಟಿಯ ಹಿಡಿದು..

ಗೋಪಿಕೆಯರ ಕಮಲದಳ ಕಣ್ಣುಗಳ
ದಂತ ಕದಳಿ ಮೈ ನುಣುಪು
ತೋಳುಗಳ ನಡುವೆಯೂ
ಅದೆಂತಹ ಸೆಳೆತ
ಶ್ಯಾಮಗೆ ರಾಧೆಯೆಡೆಗೆ.
ಅವನ ಕನಸಿನ ತುಂಬಾ ಮುತ್ತಾಗುವುದು
ಮಣಿ ಪೋಣಿಸುವುದು ಆಕೆ ಮಾತ್ರ.”

ದೇಹ ಮೀರಿದ ಪ್ರೇಮದ
ಠೇವಣಿ ಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ
ಈಗ ನಾನು ಅವನೂ ಕೂಡಿಯೇ
ಮನೆ ಕಟ್ಟುತ್ತಿದ್ದೇವೆ.

“ಸೀತೆಯಂತಿರಬೇಕು ನೀನು
ಎಂದಾಗಲೆಕ್ಲ ನಾನೆನ್ನುತ್ತಿದ್ದೆ
ನೀನು ರಾಮನಾದರೆ..
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು
..

ಕಲ್ಪನೆಯಲ್ಲಿ ತೇಲುತ್ತಲೇ, ವಾಸ್ತವದಲ್ಲಿನ ನಡಿಗೆಯಿದು. ಬರ್ಫದಂತೆ‌ ತಣ್ಣಗಿದ್ದರೂ, ಉರಿವ ಬೆಂಕಿಯದು.

ಹೀಗೇ…

ಬೆಳಕು, ಕಡಲು, ಬೆಂಕಿ, ರಾತ್ರಿ, ಆಗಸ, ಗಾಳಿ…ಪ್ರಕೃತಿಯೊಡನೆಯ ಪ್ರೀತಿ, ಸಂಕೀರ್ಣತೆ ..ಒಂದೆಡೆ, ಅವಳ ತರ್ಕ, ತಲ್ಲಣಗಳು, ತಾಕತ್ತು, ದೌರ್ಬಲ್ಯ, ಶೋಷಣೆ ಮತ್ತೊಂದೆಡೆ.. ಜಾತಿ, ಧರ್ಮ, ಆಚರಣೆ ಇನ್ನೊಂದು ಕಡೆ…ಪ್ರೀತಿ, ವಿರಹ,ಬಯಕೆ, ವಿಷಾದ ಮಗದೊಂದೆಡೆ…

***********

ಅಮೃತಾ ಮೆಹಂದಳೆ


4 thoughts on “ಪುಸ್ತಕ ಸಂಗಾತಿ

  1. ಧನ್ಯವಾದ ಅಮೃತಾ.
    ಚಂದ ಪರಿಚಯಿಸಿದ್ದಕ್ಕೆ.
    ನನ್ನ ಸಂಕಲನಕ್ಕೆ ಮತ್ತೊಂದು ಗರಿ

  2. ಬರ್ಫದ ಬೆಂಕಿ …ನಾಗರೇಖಾ ಅವರ ಕಾವ್ಯದ ಅಭಿವ್ಯಕ್ತಿಯ ಮತ್ತೊಂದು ಮಗ್ಗಲು ದಾಖಲಾಗಿದೆ.‌ಹೆಣ್ಣಿನೊಳಗಣ ಕಿಚ್ಚು, ಬಂಡಾಯ ಅವರ ( ಕವಿಯ ಪ್ರಜ್ಞೆಯನ್ನು) ನ್ನು ದಾಟಿ, ಅರಿವು ಮಾತ್ರ ಬರೆಯಿಸಿಕೊಳ್ಳುತ್ತದೆ. ಪುರುಷ ಪ್ರಧಾನ ಸಮಾಜವನ್ನು ನಾಗರೇಖಾ ತಿವಿಯುವ ಬಗೆ ನನಗಿಷ್ಟ. ಬರ್ಫದ ಬೆಂಕಿ ಯಲ್ಲಿ‌ ‌ಬಂಡಾಯದ ನೆಲೆಯ ಐದಾರು ಅದ್ಭುತ ಕವಿತೆಗಳಿವೆ.‌
    ಇದನ್ನು ತಣ್ಣಗೆ ಅಮೃತಾ ಗುರುತಿಸಿದ್ದಾರೆ.
    ಅಕ್ಕಮಹಾದೇವಿ ಕಾವ್ಯ ಪರಂಪರೆ ಕನ್ನಡದಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಅದು ನನಗೆ ಸಂತೋಷ, ಸಮಾಧಾನ‌ಕೊಟ್ಟಿದೆ..

  3. ಕೃತಿಯೆಡೆಗೆಆಕರ್ಷಿಸುವಂತಹ ಸತ್ವಯುತ ವಿಮರ್ಶೆ. ತುಂಬ ಚೆನ್ನಾಗಿ ಅರ್ಥೈಸಿಕೊಂಡು ಬರ್ದಿದ್ದೀರ ಅಮೃತ. ಅಭಿನಂದನೆಗಳು.

Leave a Reply

Back To Top