ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. 
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ

ಗಝಲ್ ಲೋಕ

ಏಳನೇ ಅದ್ಯಾಯ

Purple Bell Flowers

ಕನ್ನಡ ಗಜಲ್ ಅಲ್ಲಿ ಉರ್ದು ಪದ ಬಳಕೆ

ಕೆಲವೊಂದು ಗಜಲಗಳನ್ನು ಓದಿರುತ್ತೀರಿ… ಅವು ಹೇಗಿರುತ್ತವೆ ಎಂದರೆ ಮೊಹಬ್ಬತ್ತ, ಗೋರಿ, ಜಿಂದಾ,ಜಿಂದಗಿ, ಇಷ್ಕ, ಅವಾಜ್, ಪಿರ್, ಮುದ್ದಾಮ, ಖುದಾ, ಹಕಿಕತ್ ಮೊದಲಾದ ಉರ್ದು ಪದಗಳು ಆ ಕನ್ನಡದ ಗಜಲ್ ಅಲ್ಲಿ ಅಲ್ಲಲ್ಲಿ ನುಸುಳಿರುತ್ತವೆ. ಹೀಗೆ ಉರ್ದು ಮಿಶ್ರಿತ ಗಜಲ್ ಬರೀತಾ ಇದ್ದಿದ್ದು ಆರಂಭದಲ್ಲಿ ಒಬ್ಬರೇ ಖ್ಯಾತ ಗಜಲಕಾರರು. ಈಗ ನೋಡಿದರೆ ಅದೇ ರೀತಿಯ ಗಜಲ್ ಬರೆಯುತ್ತಿರುವವರು ನಮಗೆ ಹತ್ತು ಹನ್ನೆರಡು ಜನ ಸಿಗತಾರೆ, ಈ ಸಂಖ್ಯೆ ಇನ್ನೂ ಹೆಚ್ಚಾದರೂ ಸಹ ಹೆಚ್ಚಾಗಬಹುದು ಮತ್ತು ಅವರಲ್ಲಿ ಬಹುತೇಕರು ಇತ್ತೀಚೆಗೆ ಗಜಲ್ ಬರೆಯಲು ಆರಂಭಿಸಿದವರೇ ಆಗಿದ್ದಾರೆ. ಹಾಗಾದರೆ ಕನ್ನಡ ಗಜಲ್ ಅಲ್ಲಿ ಕೆಲವು ಉರ್ದು ಪದಗಳ ಬಳಕೆ ಸೂಕ್ತವೇ ಎಂಬುದು ತುಂಬಾ ಉದಯೋನ್ಮುಖ ಬರಹಗಾರರ ಪ್ರಶ್ನೆ ಆಗಿದೆ. ಈ ವಿಷಯದ ಉತ್ತರ ಮತ್ತು ಸಾಹಿತ್ಯದಲ್ಲಿ ಹೀಗೆ ಅನ್ಯಭಾಷೆಯ ಪದ ಬಳಕೆಯ ಅರಿವಿದ್ದೂ ನನಗೆ ಆ ಸ್ಪಷ್ಟವಾಗಿದ್ದರೂ ಇದನ್ನು ಹಲವಾರು ಖ್ಯಾತ ಗಜಲಕಾರರ ಬಳಿ ಪ್ರಶ್ನಿಸಿ ಚರ್ಚಿಸಿ ಅವರ ಅಭಿಪ್ರಾಯವನ್ನು ಸಹ ತಿಳಿದು ಸಂತಸವಾಯಿತು ಮತ್ತು ಅದೇ ಸಮಯಕ್ಕೆ ಇಂತಹ ಪದ ಬಳಕೆಯ ಬಗ್ಗೆಯೂ ಸಹ ತುಂಬಾ ಬರಹಗಾರರು ತಮ್ಮ ಬೇಜಾರನ್ನು ವ್ಯಕ್ತಪಡಿಸಿದರು.

ಅದೊಂದು ವಿಭಿನ್ನ ಪ್ರಯೋಗವೇ?

ಇದರ ವಿಷಯ ಇಷ್ಟೇ, ಇಂತಹ ಬೆಳವಣಿಗೆಗೆ ಕಾರಣ ಏನೆಂದರೆ ಮೊದಮೊದಲು ಹಾಗೆ ಗಜಲ್ ಬರೆಯುತ್ತಿದ್ದ ಆ ಖ್ಯಾತನಾಮರ ಗಜಲ್ ಓದುತ್ತಿದ್ದ ಬರಹಗಾರರು ಓದುತ್ತಾ ಹೋದಂತೆ ಅಂತಹ ಪದ ಬಳಕೆಯ ಕಡೆ ಶುರುವಾದ ಕುತೂಹಲ ಆಕರ್ಷಣೆಯಾಗಿ ಮಾರ್ಪಾಟ್ಟು ಏನೋ ಒಂಥರಾ ಚೆನ್ನಾಗಿ ಇದೆ ಅಲ್ವಾ, ವಿಭಿನ್ನ ಪ್ರಯೋಗ ಎಂದೆನಿಸಿ ನಾವು ಯಾಕೆ ಹಾಗೆ ಬರೆಯಬಾರದು ಅಂದುಕೊಂಡು ಬರೆಯತೊಡಗಿದ್ದಾರೆ. ಇನ್ನೂ ಕೆಲವರು ಹಾಗೆ ಉರ್ದು ಪದಗಳನ್ನು ಬಳಸುವುದೇ ಗಜಲ್ ಎಂದು ಮತ್ತು ಅದೇ ಅದರ ಲಕ್ಷಣ, ಹಾಗೆ ಬರೆಯುವುದೇ ಶ್ರೇಷ್ಠ ಎನ್ನುವ ಭ್ರಮೆಗೊಳಗಾಗಿದ್ದಾರೆ. ಇದಕ್ಕಾಗಿ ಹಿಂದಿ, ಉರ್ದು ಬಾರದಿದ್ದರೂ ಸಹ ಎಲ್ಲೆಲ್ಲಿಂದಲೋ ಯಾವುದೋ ಪದಗಳನ್ನು ಹೆಕ್ಕಿ ತಂದು ಅಲ್ಲಿ ಒಂದು ಕನ್ನಡ ಪದದ ಬದಲಾಗಿ ಇದನ್ನು ತೂರಿಸಿ ಬಿಡುತ್ತಾರೆ. ಹೀಗೆ ಮಾಡಿದ ತಕ್ಷಣ ಆ ಗಜಲ್ ತನ್ನ ಕಾವ್ಯಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತದೆ ಎನ್ನುವುದೇ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಪದಗಳನ್ನು ತೂರಿಸಿರುವುದಲ್ಲದೆ ಆ ಉರ್ದು ಪದಗಳ ಅರ್ಥವನ್ನು ಗಜಲನ ಕೊನೆಯಲ್ಲಿ ಕೆಲವರು ನೀಡಿರುತ್ತಾರೆ. ಅಲ್ಲಿಗೆ ಈ ವಿಷಯ ಸ್ಪಷ್ಟವಾಗುತ್ತೆ ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಅಭಾಸವಾಗುವ ಅಸಂಗತ ಪದಗಳನ್ನು ತುರುಕಿಸಲಾಗಿದೆ ಎನ್ನುವುದೇ ಅಲ್ಲಿ ಪರೋಕ್ಷ ವಿವರಣೆ ಆಗಿರುತ್ತದೆ.

ಹಾಗಿದ್ದರೆ ಈ ತರಹ ಬಳಸುವುದು ಸರಿಯಾದ ಕ್ರಮ ಅಲ್ಲವೇ ಎನ್ನುವ ನಿಮ್ಮ ಪ್ರಶ್ನೆಗೆ ಹೌದು, ಅದು ಖಂಡಿತ ಸಲ್ಲದು ಎನ್ನುವುದೇ ಸಾಹಿತ್ಯದ ಅಂತಿಮ ಉತ್ತರವಾಗಿರುತ್ತದೆ. ಯಾವುದೇ ಭಾಷೆಯ ಯಾವುದೇ ಪ್ರಕಾರದ ಸಾಹಿತ್ಯವನ್ನು ತಗೊಳ್ಳಿ, ಅದು ಸದಾ ತನ್ನ ಭಾಷೆಗೆ ನಿಷ್ಠವಾಗಿರುತ್ತದೆ. ಉರ್ದು ಖವ್ವಾಲಿಗಳಲ್ಲಿ ಇಂಗ್ಲೀಷ್ ಪದಗಳು ಕಂಡು ಬರತಾವಾ, ಖಂಡಿತ ಇಲ್ಲ… ಅಂತೆಯೇ ಹಿಂದಿ ಗಜಲ್ ಅಲ್ಲಿ ತೆಲುಗು ಪದಗಳು ಬರತಾವಾ, ಸಾಧ್ಯವೇ ಇಲ್ಲ… ತಮಿಳು ಕಾವ್ಯದಲ್ಲಿ ಮರಾಠಿ ಪದಗಳು ಸ್ಥಳ ಆಕ್ರಮಿಸಿಕೊಳ್ಳುತ್ತಾವಾ???? ಖಂಡಿತ ಇವು ಯಾವುವು ಎಂದಿಗೂ ಸಾಧ್ಯ ಇಲ್ಲದ ಅಂಶಗಳು. ಯಾವುದೇ ಭಾಷೆಯ ಯಾವುದೇ ಸಾಹಿತ್ಯ ಪ್ರಕಾರವು ಇದನ್ನು ಒಪ್ಪುವುದಿಲ್ಲ. ಒಂದು ವೇಳೆ ಹಾಗಾದರೆ ಅದು ಆ ಸಾಹಿತ್ಯಕ್ಕೆ ಕೊಂಚ ಧಕ್ಕೆಯಾಗದಂತೆ ಮತ್ತು ಆ ಮೂಲಕ ತಡಬಡಾಯಿಸಿದಂತೆ ಅರ್ಥ. ಕಮರ್ಷಿಯಲ್ ಆದ ಚಿತ್ರ ಗೀತೆಗಳಲ್ಲಿ ಯಾವಾಗಲೋ ಎಂದೋ ಯಾವುದರಲ್ಲೋ ಒಮ್ಮೆ ಪ್ರಾಸಕ್ಕೋಸರವೋ ಅಥವಾ ಜನಪ್ರಿಯ ನುಡಿಗಟ್ಟು ಎಂತಲೋ ಬಳಸಬಹುದು. ಅದು ವಾಣಿಜ್ಯತ್ಮಾಕವಾಗಿ ಆ ಸೀಮಿತ ಹಾಡಿನ ಮಟ್ಟಿಗೆ ಮಾತ್ರ ಸರಿ ಎಂದರೂ ಅಷ್ಟು ತಕ್ಕುದಾದಲ್ಲ ಎಂದೇ ಹೇಳಬಹುದು

ಪರಿಣಾಮಕಾರಿ ಬಳಕೆ ಯಾವುದು?

ಇನ್ನೂ ಹೀಗೆ ಉರ್ದು ಬಳಕೆಯ ಕುರಿತು ಹೇಳುವುದಾದರೆ ಮೊಘಲರ ಕಾಲಘಟ್ಟದಲ್ಲಿ ಅವರ ಆಳ್ವಿಕೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಉರ್ದು ಜನ ಸಾಮಾನ್ಯರ ಭಾಷೆಯಾಗಿತ್ತೇನೋ ಎನ್ನುವುದು ಸರಿ ಅಷ್ಟೇ. ಆದರೆ ಇಂದು ಉರ್ದು ಎನ್ನುವುದು ಯಾವುದೋ ಪ್ರದೇಶದ ಅಥವಾ ಯಾವುದೋ ಊರಿನ ಹಾಗೂ ಹತ್ತು ಹಲವಾರು ಸಾಮಾನ್ಯ ಜನರು ಆಡುವ ಭಾಷೆಯಾಗಿ ಉಳಿದಿಲ್ಲ. ಅದು ಇಂದು ಒಂದು ಸಮುದಾಯದ ಜನರು ಮಾತ್ರ ಆಡುವ ಭಾಷೆಯಾಗಿ ಮಾತ್ರ ಭಾರತದಲ್ಲಿ ಪ್ರಚಲಿತದಲ್ಲಿದೆ. ಆದ್ದರಿಂದ ಹೀಗೆ ಒಂದು ಪಂಥ, ಮತದ ಭಾಷೆಯನ್ನು ಇನ್ನೊಂದು ಭಾಷೆಯಲ್ಲಿ ಬಳಸುವುದರಿಂದ ಅದನ್ನು ನೋಡುವ ದೃಷ್ಟಿಕೋನವು ಸಹ ಸಾಕಷ್ಟು ಜನರಲ್ಲಿ ಬದಲಾಗುತ್ತದೆ ಮತ್ತು ತನ್ನ ವಿಶಾಲ ವ್ಯಾಪ್ತಿಯನ್ನು ಮೀರಿ ಧೀರ್ಘವಧಿಯಲ್ಲಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಇಂತಹ ಬೇಧ ಎಂದೂ ಸಹ ಸಲ್ಲದು. ಅದಕ್ಕೆ ಅಂತಹ ತಡೆಗೋಡೆ ಹಾಕಕೂಡದು. ಆದ್ದರಿಂದ ಯಾರೋ ಬರೆದ ಹಾಗೆ ಇನ್ನೂ ಯಾರೋ ಅದನ್ನು ಹಿಂದೂ ಮುಂದೂ ನೋಡದೆ ಅನುಸರಿಸುವುದು ತರವಲ್ಲ.

ಇಂತಹ ಮಿಶ್ರಿತ ಬರಹಗಳು ಆರಂಭದಲ್ಲಿ ಒಂದಿಷ್ಟು ಪರಿಣಾಮಕಾರಿ ಎನಿಸುವುದಾದರೂ ಅದರ ಪ್ರಭಾವ ಓದುಗರ ಮೇಲೆ ಬಹು ಬೇಗ ಕುಂದಿ ಹೋಗಿ ಬಿಡುತ್ತದೆ. ಭಾಷೆ ಎನ್ನುವ ಸಂವಹನ ಅದರ ವೈಶಾಲ್ಯತೆಯ ಮನೋಭಾವದಲ್ಲಿ ಉತ್ತಮ ಬಳಕೆ, ವಿಧಾನ ಮತ್ತು ತಂತ್ರಗಳನ್ನು ಆ ಒಂದು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದರೆ ಅದು ಮನಸ್ಸು ಮುಟ್ಟಲು ಸರಳವಾಗಿರುತ್ತದೆ. ಭಾಷೆಯ ಚತುರತೆಯೊಂದಿಗೆ ಭಾವನೆಗಳ ಚಕಮಕಿಯಾದಾಗಲೇ ಅದರ ಹರಿವು ಸಹ ಸರಾಗವಾಗಿ ಮುಂದುವರಿಯಲು ಅನುಕೂಲ.

ಸಾಹಿತ್ಯದ ಧ್ವನಿ


ಕೇವಲ ಕನ್ನಡ ಭಾಷೆ ಅಂತಹ ಏನಲ್ಲ, ಅದು ಯಾವುದೇ ಭಾಷೆಯಾದರೂ ಸರಿ ಅದು ಸಾಹಿತ್ಯದ ಧ್ವನಿಯನ್ನು ಕ್ಷೀಣಿಸುವ, ಮೂಲ ಭಾಷೆಯನ್ನೆ ಕುಗ್ಗಿಸುವ ಬರಹವಾಗಿರಬಾರದು. ಒಂದು ಭಾಷೆ ಕೇವಲ ಅದು ಸಂವಹನ ಮಾಧ್ಯಮ ಮಾತ್ರ ಆಗಿರುವುದಿಲ್ಲ. ಪ್ರತಿ ಭಾಷೆಯು ತನ್ನ ಭಾಷೆಯಲ್ಲಿ ತನ್ನದೇ ಆದ ನೆಲ, ಜಲ, ಸಂಸ್ಕೃತಿ, ಸೊಗಡು, ಆಚರಣೆ, ಸಾಮಾಜಿಕ ಶಿಷ್ಟಾಚಾರ, ಕಟ್ಟುಪಾಡುಗಳು, ಆಚಾರ ವಿಚಾರ, ಆಹಾರ, ಜೀವನ ಕ್ರಮ, ಮಾನವೀಯ ಮೌಲ್ಯಗಳೂ ಇತರೆ ಮೊದಲಾದ ಬಹುಮುಖ್ಯ ಲಕ್ಷಣಗಳನ್ನು ಒಳಗೊಂಡು ಸಂಪದ್ಬರಿತವಾಗಿರುತ್ತದೆ. ಜೊತೆಗೆ ಒಂದನ್ನೊಂದು ಅವಲಂಬಿಸಿ ಪ್ರತಿಯೊಂದು ಅದರೊಂದಿಗೆ ತಳುಕು ಹಾಕಿಕೊಂಡು ರಾಗ ತಾಳ ಮೇಳಗಳು ಕೂಡಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಂಪರ್ಕ ಸೇತುವೆಯು ಆಗಿರುತ್ತದೆ. ಆದ್ದರಿಂದ ಆಕ್ರಮಣ ಕನ್ನಡದಂತಹ ವಿಶಾಲ ನುಡಿಗೆ ಮಾರಕವಲ್ಲದಿದ್ದರೂ ಇಲ್ಲಿನ ಸೊಗಡು ಅಂತಹ ಅನ್ಯಭಾಷೆಗಳಿಗೆ ಕಾಣಲು ಸಾಧ್ಯವಿರದ ಕಾರಣ ನಮ್ಮದು ಎನ್ನುವುದು ಸಹಜವಾಗಿಯೇ ಅರಗಿಸಿಕೊಳ್ಳಲು ಆಗಲಾರದಂತದ್ದು. ತಾಯ್ನಾಡಿಯ ಪ್ರೇರಣೆಯೇ ಬೇರೆ ತರಹ ಇರುತ್ತೆ. ಇತರೆ ಯಾವುದೇ ನುಡಿಯ ವರ್ತನೆ ಎಂದಿಗೂ ಅದರ ಮುಂದೆ ಕಳೆಗುಂದುವ ಅಂಶವೇ ಆಗಿದೆ. ಅಂತೆಯೇ ಗಜಲನ ಅಭಿವ್ಯಕ್ತಿ ಸೂಕ್ಷ್ಮ ಸಂವೇದನೆಶೀಲತೆ ಮತ್ತು ಸೃಜನಾತ್ಮಕ ಲಕ್ಷಣಗಳನ್ನು ಹೊಂದಲು ಕನ್ನಡ ಗಜಲಗಳ ಪ್ರತಿ ಪದವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು

ಒಂದು ಪದಕ್ಕೆ ಅದೇ ಅರ್ಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿ ಕೊಡಬಲ್ಲಂತಹ ಐವತ್ತು ಬೇರೆ ಬೇರೆ ಪದಗಳು ಕನ್ನಡದಲ್ಲಿ ಇವೆ. ಇಷ್ಟು ವಿಸ್ತಾರವಾದ ಶಬ್ದ ಸಂಪತ್ತು ಇನ್ನೊಂದು ಭಾಷೆಯಲ್ಲಿ ಖಂಡಿತವಾಗಿಯೂ ಕಂಡು ಬರುವುದಿಲ್ಲ. ಆದ್ದರಿಂದ ಅಂತಹ ಅನಿವಾರ್ಯವೇ ಉದ್ಭವ ಆಗದ ಕಾರಣ ಕನ್ನಡ ಗಜಲಗಳು ಕನ್ನಡ ಗಜಲ್ ಎಂದೆನಿಸಿಕೊಳ್ಳಲು ಅದರ ಪ್ರತಿ ಪದವೂ ಸಹ ಕನ್ನಡಮಯವೇ ಆಗಿರಬೇಕು.

********

ಬಸವರಾಜ ಕಾಸೆ

Leave a Reply

Back To Top