ಸೌಮ್ಯ ದಯಾನಂದ ಅವರ ಕೃತಿ “ಸಂಜೆ ಐದರ ಸಂತೆ” ಅವಲೋಕನ ಬಡಿಗೇರ ಮೌನೇಶ್

ಹಿತವಾಗಿ ಕಾಡುವ ನೆನಪುಗಳನ್ನು, ಬೆಚ್ಚನೆಯ ಕನಸುಗಳ ಕಾವನ್ನು ಸರಳ, ಸುಂದರ ಪದಗಳಲ್ಲಿ ಮನೋಜ್ಞವಾಗಿ ಕವಿತೆಗಳ ಹೆಣೆದಿರುವ ಕವಯಿತ್ರಿ ಸೌಮ್ಯ ದಯಾನಂದ ಶಿಕ್ಷಕಿಯಾಗಿ,ತಾಯಿಯಾಗಿ ನಿತ್ಯ  ಬದುಕಿನ ಬವಣೆ,ಬೆರಗುಗಳಿಗೆ ಕಾವ್ಯದ ಜೀವ ತುಂಬಿದ್ದಾರೆ. ಸಂಜೆ ಐದರ ಸಂತೆ’   ಇವರ ‘ಚೊಚ್ಚಲ ಸಂಕಲನ.ಚೊಚ್ಚಲ ಸಂಭ್ರಮ ಮಾತುಗಳಿಗೆ ಮೀರಿದುದು. “ಕಾವ್ಯ ದಾರಿಯಲ್ಲಿ ನಾನಿನ್ನು ಎಳಸು” ಎಂದು ಬಹಳ ವಿನಮ್ರತೆಯಿಂದಲೇ ಪ್ರಕಟಿಸಿರುವುದು ಅವರ ಪ್ರಾಮಾಣಿಕತೆ ಮತ್ತು ಉದಾರತೆ. ಏಕೆಂದರೆ ಎಲ್ಲ ಕವಿತೆಗಳೂ ಅನುಭವದ ಪರಿಪಾಕದಿಂದ ಹುಟ್ಟಿದ ಕವಿತೆಗಳೇ. ಹಾಗಾಗಿ ನನಗಂತೂ ಚೊಚ್ಚಲ ಕೃತಿ ಎನಿಸುವುದೇ ಇಲ್ಲ.


ಬದುಕು
 ಸಂಜೆ ಐದರ ಸಂತೆ
ಎಂಟಕ್ಕೆ
ಸುರುಳಿ ಸುತ್ತಿದ ಬೊಂತೆ
ಆ ನಡುವೆ ಬಂದುಬಿಡು
ಕೊಟ್ಟುಕೊಳ್ಳೋಣ..!

ಕಪ್ಪು ಬಿಳುಪಿನಲ್ಲಿವೆ ಎಲ್ಲಾ ಬಣ್ಣ… ಎಂಬ ಕವಿತೆಯ ಕೊನೆಯ ಚರಣವಿದು. ‘ಬದುಕು ನೀರ ಮೇಲಣ ಗುಳ್ಳೆ’ ಸಂಜೆ ಐದರ ಸಂತೆ’ಯಂತೆ ಅಶಾಶ್ವತ.ಇರುವಷ್ಟು ದಿನ ಪ್ರೀತಿ, ವಿಶ್ವಾಸ,ಹೊಂದಾಣಿಕೆಗಳ ಕೊಡುಕೊಳ್ಳುವಿಕೆಯಲ್ಲೆ ಬದುಕಿನ ಸಂತಸ ಅಡಗಿದೆ.
      ಪ್ರೀತಿಯನ್ನು ಕುರಿತು ಬರೆಯದ ಕವಿಯಿಲ್ಲ.ಅದು ಬಣ್ಣನೆಗೆ ನಿಲುಕದ ವ್ಯಾಖ್ಯಾನ. ಸೌಮ್ಯ ಅವರು ಇದೇ ಕವಿತೆಯಲ್ಲಿ ರಸವತ್ತಾಗಿ ಹಿಡಿದಿಟ್ಟಿದ್ದಾರೆ.

ಪ್ರೀತಿ
ಕೊಳೆಯದ ಹಣ್ಣು
ಅದು ಮುಗಿಯದ ರಸವಂತಿ
ಮನದ ಕೈತೋಟದಲ್ಲಿ
ಪ್ರತಿ ಸಂಜೆ ಅರಳುವ ಮಲ್ಲಿಗೆ!
ಮನದ ಪೇಟೆಯ ತುಂಬಾ
ದಿಂಡು ಹಾರದ ಸಂತೆ
ಪ್ರೀತಿ ಕಾಸಿಗೆ ಎಂದೂ
ಮೋಸವಿಲ್ಲ.

ಪ್ರೀತಿ ಮೊಗೆದಷ್ಟೂ ಮಿಕ್ಕುಳಿವ ಕಡಲನಿಧಿ,ಅರಳಿದಷ್ಟೂ ಹರಡುವ ಸುಗಂಧ. ಹಾಗಾಗಿ ಮೇಲಿನ ಸಾ‌ಲುಗಳು ಹಿತವೆನಿಸುತ್ತವೆ.
        ‘ನೀವು ಟೀಚರ್ರಾ?’ ಎಂಬ ಶೀರ್ಷಿಕೆಯ ಕವಿತೆ ಶಿಕ್ಷಕಿಯಾಗಿ ಮನೆಯಿಂದ ಹೊರಟಾಗ ಕಾಣುವ ವೃತ್ತಿ ಬದುಕಿನ ನಿತ್ಯದ ಅನುಭವದ ಗುಚ್ಛವಾಗಿ ಒಡಮೂಡಿದೆ.
      ‘ಎರಡನೇ ಬಸಿರು’, ‘ ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ’ ಕವಿತೆಗಳು ತುಂಬಾ ಆಪ್ತವೆನಿಸುತ್ತವೆ. ತಾಯ್ತನದ ತುಡಿತ,ಕಾಳಜಿಗಳು ಇವರ ಅನುಭವದಾಳದಿಂದ ಆವಿರ್ಭವಿಸಿದ ಮುತ್ತುಗಳು.ಇಡೀ ಸಂಕಲನದಲ್ಲಿಯೇ ಗಮನ ಸೆಳೆಯುತ್ತವೆ.
         ‘ಹಬ್ಬದಡುಗೆಯ ಮಾಡಿ ನಾ ಉಪವಾಸ ಇದ್ದದ್ದು’ ಎಂಬ ಕವಿತೆ ಹೆಣ್ಣೊಬ್ಬಳ ಸಂವೇದನೆಯನ್ನು ಸೂಕ್ಷ್ಮವಾಗಿ ಅಭಿವ್ಯಕ್ತಪಡಿಸುತ್ತದೆ. ಆಕೆಯ ಅಂತರಂಗವೇ ಹಾಗೆ ಗಂಡ ಮಕ್ಕಳಿಗಾಗಿ ತುಡಿವ ಸೂಕ್ಷ್ಮ ಒಳತೋಟಿ.

ಹಬ್ಬದಡುಗೆಯ ಮಾಡಿ
ಉಪವಾಸ ನಾನಿದ್ದು
ವ್ರತವೆಂದು ದೂರವಿರೆ
ದೂರದಿರು ನನ್ನ

ಸಹಜವಾಗಿ ಹಬ್ಬ ಹರಿದಿನಗಳಲ್ಲೆ ಉಪವಾಸ, ವ್ರತ,ನೇಮಗಳ ಮಾಡುವ ಸ್ತ್ರೀಯರು ಮನೆಮಂದಿಗೆಲ್ಲ ಹಬ್ಬದಡುಗೆ ಮಾಡಿ ತಾವು ಸಂಭ್ರಮ ಪಡುತ್ತಾರೆ.
        ‘ಅವ್ವನ ಸೆರಗು’ ಕವಿತೆಯಲ್ಲಿ ಭೂತದ ನೆನಪು ವರ್ತಮಾನದ ಮಗು ಇವೆರಡಕ್ಕೂ ಸೇತುವೆಯಂತಿರುವ ಸೆರಗನ್ನು ಕುರಿತ ಈ ಕೆಳಗಿನ ಸಾಲುಗಳು ಅರ್ಥಪೂರ್ಣವಾಗಿವೆ.

ಬೆಚ್ಚನೆಯ ನೆನಪೀಗ
ನೆನಪು ಮಾತ್ರ!
ಕಂದನ ಹಾಲ್ದುಟಿ
ಒರೆಸಿದ ತೃಪ್ತಿ ಅದಕೆ…
ಗುಮ್ಮ ಬಂದಾಗ
ಬಚ್ಚಿಟ್ಟುಕೊಂಡು
ಸಲಹಿದೆ…

ಅವ್ವನ ಸೆರಗನ್ನು ಹೊದ್ದ ತಲೆಅವ್ವನ ಸೆರಗಿದು/ ಹೊಂಗೆಯ ನೆರಳು ಎಂಬ  ಧನ್ಯತೆ, ಸಾರ್ಥಕತೆಯನ್ನು ಪಡೆಯುತ್ತದೆ.

   ಮೌನಕ್ಕೆ ಸಾವಿರ ಮಾತುಗಳಿಗೂ ಮೀರಿದ ಅರ್ಥವಿದೆ. ಅದು ಮಾತು ಮಾತುಗಳ ಮಂಥನ, ಗಂಭೀರ ಸಂವಹನ.

ಮೌನಕ್ಕಿದೆ
ಮಾತುಗಳೂ
ಹೇಳಲಾಗದ ಅರ್ಥ!
ಆದರೆ ಸಮ್ಮತಿಯಲ್ಲ..!
ಕೆಲವೊಮ್ಮೆ
ತಿರಸ್ಕಾರವೂ ಅಲ್ಲ…!
ಆದರೆ ಒಮ್ಮೊಮ್ಮೆ
ಅಸ್ತ್ರ!

ಹೆಂಡತಿಯ ಮೌನಕ್ಕೆ
ಮನಸ್ತಾಪದ ವಾಸನೆ…
ಗಂಡನ ಮೌನಕ್ಕೆ
ಮನಃಶಾಂತಿಯ ಕಾಮನೆ…

    ಮನಸ್ತಾಪದಿಂದ ಹೆಂಡತಿ ಮೌನವಹಿಸಿದರೆ, ಗಂಡ ಮನಃಶಾಂತಿಗಾಗಿ ಮೌನವಹಿಸುವುದು ಮೌನದ ವೈವಿಧ್ಯತೆಗಳನ್ನು ಭೀಷ್ಮ, ಊರ್ಮಿಳೆ,ರಾಮ ಇವರ ಉದಾಹರಣೆಗಳನ್ನು ನೀಡಿರುವುದು ಅರ್ಥಪೂರ್ಣವಾಗಿದೆ.

ನುಡಿವ ಹೃದಯವಿರಲು
ಮೌನ ಮಧುರವೆಂದರು…
ಮೌನವೇ ಮಾತಾಗಿ
ಪ್ರೀತಿಯಾಯ್ತು ಎಂದರು.

ಮೌನ ಮಧುರ ಮಾತಾಗಿ ಪ್ರೀತಿಯಾಗುವುದು ಎಷ್ಟೊಂದು  ಸೊಗಸು.

    ಇಂದಿನ ಆಧುನೀಕರಣದ ಭರಾಟೆಯಲ್ಲಿ  ನಮ್ಮ ಬದುಕು ಸಂಕೀರ್ಣವಾಗುತ್ತಿದೆ.ಸಂಬಂಧಗಳು ಸಡಿಲವಾಗುತ್ತಿವೆ.ಪ್ರೀತಿ,ಸ್ನೇಹ, ಬಾಂಧವ್ಯಗಳೆಲ್ಲ ಕೇವಲ ಔಪಚಾರಿಕವಾಗಿವೆ ಎಂಬುದು ‘ಸಂಬಂಧಗಳು ಐಸಿಯುವಿನಲ್ಲಿವೆ’..! ಎಂಬ ಕವಿತೆ ಇಂದಿನ ವಾಸ್ತವ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ.

ಬದುಕಿರುವ ನೆನಪಿಗೆ
‘ಹ್ಯಾಪಿ ಬರ್ತ್ ಡೇ’
ಜೊತೆಗಿರುವ ತಪ್ಪಿಗೆ
‘ಹ್ಯಾಪಿ ಆನಿವರ್ಸರಿ’
ಆಗಾಗ ಫೋಟೋದೊಂದಿಗೆ
‘ಐ ಲವ್ ಮೈ ಫ್ಯಾಮಿಲಿ’?

ಈ ಸಾಲುಗಳು ಚಾಟಿಯೇಟಿನಂತಿವೆ.  ಸರಳ ರೇಖೆ, ನಾಕುಬಿಂಬ, ಚುಕ್ಕಿ ತಪ್ಪಿದ ರಂಗೋಲಿ, ಒಂಟಿ ಪಯಣಿಗ ಈ ಕವಿತೆಗಳಲ್ಲಿ ಬದುಕಿನ ಆಶಾವಾದ, ಬದುಕಿನ ಅರ್ಥಗಳ ಹುಡುಕಾಟವಿದೆ. ಹೀಗೆ ಇಲ್ಲಿನ ಎಲ್ಲ ಕವಿತೆಗಳು ಆಡುಮಾತಿನ ಸಂಭಾಷಣೆಯಂತೆ ಕಾವ್ಯದ ಜೊತೆ ಪಯಣ ಮಾಡುತ್ತಿರುವಂತೆ ಓದುತ್ತ ಓದುತ್ತ ಪುಸ್ತಕದ ಪುಟಗಳು ಮುಗಿದದ್ದೇ ಗೊತ್ತಾಗುವುದಿಲ್ಲ. ಒಂದು ನವಿರಾದ ಹಿತವನ್ನು ನೀಡುತ್ತ ಕರೆದೊಯ್ಯುತ್ತದೆ.  ಈ ಮಾತುಗಳು ವಿಮರ್ಶೆಯಲ್ಲ, ಅವಲೋಕನವೂ ಅಲ್ಲ, ಸಹೃದಯನೊಬ್ಬನ ಅರಿವಿಗೆ ನಿಲುಕಿದ ಸಂತಸದ ಸಾಲುಗಳು.   ಸೌಮ್ಯ ದಯಾನಂದ ಅವರು ಇನ್ನೂ ಉತ್ತಮ ಕವಿತೆಗಳನ್ನು ರಚಿಸಿ ನಾಡಿನ ಹೆಸರಾಂತ ಕವಯಿತ್ರಿಯಾಗಲೆಂದು ಶುಭ ಹಾರೈಸುತ್ತೇನೆ.


Leave a Reply

Back To Top