ರಸ ಋಷಿ ಕುವೆಂಪು ನೆನಪಿನಲ್ಲಿ
ಮಧು ವಸ್ತ್ರದ್
ರಸ ಋಷಿಕುವೆಂಪು
ಕುಪ್ಪಳ್ಳಿಯಲಿ ಜನಿಸಿ ಜನ ಮನ್ಮನೋಮಂದಿರದಿ ನೆಲೆಸಿಹರು ಈ ಕರ್ಮಯೋಗಿ
ಅಪ್ಪಟ ಸಾಹಿತ್ಯಾಭಿಮಾನಿಗಳೆಲ್ಲ ಗೌರವದಿಂದ ನಮಿಸುವರಿವರಿಗೆ ನಿತ್ಯ ತಲೆಬಾಗಿ
ಸಹ್ಯಾದ್ರಿ ಶೃಂಗದ ಹಸಿರ ಮಧ್ಯೆ ಹರಿವ ತೊರೆಯ ನೀರೊಳಾಡುತ ಬೆಳೆದ ಬಾಲಕ
ಸಾಹಿತ್ಯದ ಆಗಸದಂಚಿನ ಆಚೆಯವರೆಗೂ ಬೆಳೆದು ನಿಂತ ತ್ರಿವಿಕ್ರಮ ರೂಪಿ ಸಾಧಕ..
ಕನ್ನಡಿಗರಿಗೆ ಶ್ರೀ ರಾಮಾಯಣ ದರ್ಶನಂ ಗ್ರಂಥದ ಕೊಡುಗೆ ನೀಡಿದ ರಸಋಷಿ
ಹೊನ್ನಗಿಂಡಿಯಲಿ ಕಾವ್ಯಾಮೃತದ ಸವಿಯುಣಿಸಿ ಮನ ತಣಿಸಿದ ಕವಿ ಮಹರ್ಷಿ..
ಮಿಂಚುಳ್ಳಿ ನವಿಲು,ಮುಸ್ಸಂಜೆ ಮುಗಿಲು ಸಿಡಿಲು ಕಡಲು ವರ್ಣಿಸಿದ ನಿಸರ್ಗ ಕವಿ
ಮಿಂಚುಬಳ್ಳಿ ಮಳೆಬಿಲ್ಲು ಹೊಳೆವ ಚುಕ್ಕಿ ಹೂವು ಹಕ್ಕಿಗಳಲಿ ಕಂಡಿದೆ ಇವರದೇ ಛವಿ..
ವಿಚಾರಕ್ರಾಂತಿಗೆ ಆಹ್ವಾನವಿತ್ತು ವಿಜ್ಞಾನದೀಪದಡಿ ಮುನ್ನಡೆಯಿರೆಂದ ಮಹಾಜ್ಞಾನಿ
ಆಚಾರದಿ ಸಮನ್ವಯ,ಸರ್ವೋದಯ ಸಾಧಿಸುತ ಕಳೆದರು ಮೌಢ್ಯತೆಯ ಗ್ಲಾನಿ..
ಕಾನೂರು ಹೆಗ್ಗಡತಿಯ ಗಾಂಭೀರ್ಯ ಮಲೆಗಳಲಿ ಮದುಮಗಳ ಸೌಂದರ್ಯ ಅಪ್ರತಿಮ
ನೂರು ರೂಪದ ಮೇರು ಭಾವದ ಕವಿಯಾಗಿ ಜನಮಾನಸದಿ ಮೆರೆದ ಪರಿ ಅತ್ಯುತ್ತಮ..
ಅಂಗಳದವರೆಯ ಚಪ್ಪರದಡಿಯಲಿ ತಿಳಿಸಿದರು ಮಂತ್ರಮಾಂಗಲ್ಯದ ಮಧುರ ದೀಕ್ಷೆ
ಮಂಗಳದ ಮುಂಬೆಳಕನು ಹರಿಸುತ ಎಲ್ಲೆಡೆಯಲಿ ನೀಡಿದರು ನಾಡಿಗೆ ದಿವ್ಯರಕ್ಷೆ..
ಕೊಳಲು ಪಾಂಚಜನ್ಯ ನಾದ ಹೊಮ್ಮಿಸುತ ಬೈಗು ಕೆಂಪಲಿ ಇತ್ತರು ಗಾನ ದರ್ಶನ
ನೆಳಲು ಬಿಸಿಲು,ಜೀವನ ಸಂಜೀವನ ಬಾಂಧವ್ಯದ ಬಗ್ಗೆ ಕೊಟ್ಟರು ಮಾರ್ಗದರ್ಶನ..
ಅಸೀಮ ಭಕ್ತಿ ಉಕ್ಕಿಸುವ ಕಸ್ತೂರಿ ಕಂಪ ಸೂಸುವ ನಾಡಗೀತೆ ರಚಿಸಿದ ದಿವ್ಯಚೇತನ
ವ್ಯೋಮದೆತ್ತರಕೇರಿದ ವಿಶ್ವಮಾನವಗೆ ಅರ್ಪಣ ನನ್ನೀ ಮನದಾಳದ ನುಡಿನಮನ..
ಮಧು ವಸ್ತ್ರದ್-ಮುಂಬಯಿ