ಭಾರತ ವಿಶಾಲವಾದ ಸಮೃದ್ಧ ದೇಶ.  ಇಲ್ಲಿ ಬಹು ಧರ್ಮಗಳ, ಜಾತಿಗಳ, ಸಂಸ್ಕೃತಿಗಳ, ಭಾಷೆಗಳ ಸಮ್ಮಿಲಿತಗೊಂಡಿರುವ ಒಂದು ಪ್ರಬುದ್ಧ ಭಾರತವಾಗಿದೆ. ಜಗತ್ತಿನ ಬೇರೆ ಬೇರೆ ದೇಶಗಳನ್ನು ನಾವು ಅವಲೋಕನ ಮಾಡಿದಾಗ ಬಹುತೇಕ ದೇಶಗಳು ಏಕ ಪ್ರಕಾರದ ಸಂಸ್ಕೃತಿ, ಭಾಷೆ , ಜನಾಂಗ ಮುಂತಾದವುಗಳನ್ನು ಒಳಗೊಂಡು ಅನೇಕ ವೈರುಧ್ಯಗಳನ್ನು ಎದುರಿಸುತ್ತಿವೆ. ಆದರೆ ನಮ್ಮ ಭಾರತ ದೇಶವು ಹಲವು ಸಂಸ್ಕೃತಿಗಳನ್ನು ಹೊಂದಿದ್ದರೂ ನಮ್ಮದೇ ಆದ ವಿಭಿನ್ನವಾದ ಹೆಜ್ಜೆ ಗುರುತುಗಳನ್ನು ಜಗತ್ತಿಗೆ ಬಿಟ್ಟು ಕೊಟ್ಟಿದ್ದೇವೆ. ಶಾಂತಿ, ಸಹನೆ, ತಾಳ್ಮೆ, ಐಕ್ಯತೆ ಅಲಿಪ್ತ ನೀತಿಗಳನ್ನು ಒಳಗೊಂಡಿರುವ ಮೌಲ್ಯಗಳನ್ನು ಜಗತ್ತಿಗೆ ನೀಡಿದ್ದೇವೆ. ಹಾಗಾಗಿ ಸಾಂಸ್ಕೃತಿಕವಾಗಿ ಜಾಗತಿಕ ಹಿರಿಯಣ್ಣನ ಸ್ಥಾನವನ್ನು ನಾವು ಪಡೆದುಕೊಂಡಿದ್ದೇವೆ. ತಾಂತ್ರಿಕ, ವ್ಯಾಪಾರಿಕರಣ ಮತ್ತು ವಾಣಿಜ್ಯ ಮುಂತಾದ ಅಭಿವೃದ್ಧಿ ಪಥದ ಅನೇಕ ದಾಪುಗಾಲನ್ನು ಇಡುವುದರ ಜೊತೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ನಾವು ಇನ್ನೂ ಬಿಟ್ಟು ಕೊಟ್ಟಿಲ್ಲ. ಅದು ನಮ್ಮ ಹಿರಿಮೆ.

 ಒಂದು ದೇಶದ ಹಿರಿಮೆ ಎಂದರೆ ಅಲ್ಲಿಯ ಜನ – ಜೀವನದ ಸಂಸ್ಕೃತಿಯ ಪ್ರತಿಬಿಂಬ.  ಸಂಸ್ಕೃತಿ ಎಂದರೆ ಬದುಕಿನ ವಿವಿಧ ಆಯಾಮಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಬದುಕುವುದಾಗಿದೆ. ಇಂತಹ ಸಾಮರಸ್ಯದ ಬದುಕು ನಮ್ಮ ಭಾರತ ದೇಶದ ಬದುಕಾಗಿದೆ. ಇಷ್ಟಾದರೂ ನಮ್ಮ ಸಂಸ್ಕೃತಿಗೆ ಕಪ್ಪು ಮಸಿ ಬಳಿಯುವ,  ಕೆಟ್ಟ ಹೆಸರು ತರುವ ಅನೇಕ ದುಷ್ಟ ಕೆಲಸಗಳನ್ನು ಅಲ್ಲಲ್ಲಿ ನಾವು ಕಾಣುತ್ತೇವೆ. ಜನಾಂಗೀಯ ಅಸಮಾನತೆಗಳು, ಆತಂಕಗಳು, ಧಾರ್ಮಿಕ ದುರಾಲೋಚನೆಗಳು, ಅಸ್ಪೃಶ್ಯತೆಯ ಬರೆಗಳು, ಮೇಲು-ಕೀಳು ಎಂಬ ತಾರತಮ್ಯದ ನೋವುಗಳು ಇವು ಭಾರತೀಯ ಪರಂಪರೆಯ ಸಂಸ್ಕೃತಿಗೆ ಕಪ್ಪು ಚುಕ್ಕೆಗಳಿದ್ದಂತೆ. ಈ ತಾರತಮ್ಯದ ಎಲ್ಲೆಯನ್ನು ಕಿತ್ತೊಗೆಯಬೇಕಾಗಿದೆ ಆಗ  ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎನ್ನಬಹುದು.  ಕೃಷಿ, ಸಂಪತ್ತು ನಿಸರ್ಗ ಸಂಪತ್ತು ಕೈಗಾರಿಕಾ ಸಂಪತ್ತು, ಅರಣ್ಯ ಸಂಪತ್ತು, ಮಾನವ  ಸಂಪತ್ತು ಹೀಗೆ ಅನೇಕ ಸಂಪತ್ತುಗಳನ್ನು ನಮ್ಮ ದೇಶ ಒಳಗೊಂಡಿದೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿದಾಗ ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೃಷಿ, ಕೈಗಾರಿಕೆ ಮುಂತಾದ ವಲಯಗಳಲ್ಲಿ ದುಡಿಯುವವರು ದುಡಿಯುತ್ತಲೇ ಇದ್ದಾರೆ. ಬೆವರಿನ ಬೆಲೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕೆಂದರೆ ಸದಾ ದುಡಿಮೆಯ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕೆಲಸವಾಗಬೇಕು.  ಹಗಲು  – ಇರುಳು ಎನ್ನದೆ  ದುಡಿದು ಸಂಪತ್ತನ್ನು ಉತ್ಪಾದಿಸಲು ಕಾರಣವಾಗುವ ಶ್ರಮಿಕ ವರ್ಗಕ್ಕೆ ಗೌರವದ ಜೊತೆಗೆ ಅದಕ್ಕೆ  ತಕ್ಕಂತೆ ಆದಾಯ ಕೊಡದಿರುವುದು ಕೂಡ ಅಪರಾಧವಾದೀತು. ಇದು ಕೂಡ ನಮ್ಮ ಭಾರತ ದೇಶದ ತಾರತಮ್ಯದ ಒಂದು ಭಾಗವೆಂದೇ ಹೇಳಬಹುದು.  ಅಸ್ಪೃಶ್ಯತೆ ಜನಾಂಗೀಯ  ತಾರತಮ್ಯವಷ್ಟೇ ಅಲ್ಲದೆ ಆರ್ಥಿಕ ನೆಲೆಗಟ್ಟಿನಲ್ಲಿಯೂ ಕೂಡ ತಾರತಮ್ಯವನ್ನು ಎದುರಿಸುತ್ತಿದ್ದೇವೆ. ಇಂತಹ ತಾರತಮ್ಯವನ್ನು ಹೋಗಲಾಡಿಸಬೇಕೆಂದರೆ ಬಂಡವಾಳಶಾಹಿಗಳಿಗೆ ಮಾನವೀಯ ಮೌಲ್ಯಗಳು ಗೊತ್ತಿರಬೇಕು. ಶ್ರಮಿಕ ವರ್ಗವು ದುಡಿದು ಉತ್ಪಾದಿಸುವ ಆದಾಯಕ್ಕೆ ಪ್ರತಿಯಾಗಿ ಅವರಿಗೂ ಒಂದಿಷ್ಟು ಅದಾಯದ ಭಾಗ ಕೊಟ್ಟಾಗ ಸಂಪತ್ತಿನ ಸಮಾಧಾನದ ಹಂಚಿಕೆಯಾಗುತ್ತದೆ. “ಸಮಾನ ಹಂಚಿಕೆಯಾಗದಿದ್ದರೂ ಪರವಾಗಿಲ್ಲ” ಎನ್ನುವ ನಿಟ್ಟುಸಿರು ಅವರಿಂದ ಬಂದರೆ ಸಾಕು  ಭಾರತ ಅಭಿವೃದ್ಧಿಯ ಪಥದತ್ತ ಮುನ್ನುಗ್ಗಲು ಸಾಧ್ಯವಾಗುತ್ತದೆ.

 ಹಾಗೆಯೇ ಭಾರತೀಯ ಪರಂಪರೆಯಲ್ಲಿ ‘ದೇವರು’  ‘ದೇವಸ್ಥಾನ’ ಗಳಿಗೆ ತನ್ನದೇ ಮಹತ್ವವಿದೆ.  ಇಲ್ಲಿ ಶರಣರು, ಸಂತರು, ಸೂಫಿಗಳು, ದಾಸರು ಜಾತ್ಯತೀತವಾಗಿ, ಧರ್ಮಾತೀತವಾಗಿ ತಮ್ಮ ಮಾನವೀಯ ಮೌಲ್ಯಗಳ ತತ್ವಗಳನ್ನು ಈ ನೆಲಕ್ಕೆ ಬಿತ್ತಿ ಹೋಗಿದ್ದಾರೆ.  ಎಲ್ಲಾ ಧರ್ಮಗಳ ಸಾರವು ‘ಮನುಷ್ಯತ್ವದ ಮೂಲಸೆಲೆಯಾಗಿದೆ’ ಪ್ರೀತಿ, ವಿಶ್ವಾಸ, ನಂಬಿಕೆ, ಕಷ್ಟಕ್ಕೆ ಸ್ಪಂದಿಸುವ ಕರುಣಾಶೀಲತೆ, ಮಾನವೀಯ ಮೌಲ್ಯಗಳ ಬೆಳೆಸುವಿಕೆ, “ತನ್ನಂತೆ ಎಲ್ಲರೂ ಒಂದೇ” ಎನ್ನುವ ಪರೋಪಕಾರ ಭಾವನೆ, ಇವೆಲ್ಲವೂ ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ರೂಪಗೊಂಡಿದೆ. ಇವು ಶರಣರ, ದಾಸರ, ಮೌಲ್ಯಗಳಾಗಿವೆ. ದೇವರು ಕೇವಲ ಮಂದಿರದಲ್ಲಿ ಇಲ್ಲ, ಮಸೀದಿಯಲ್ಲಿ ಇಲ್ಲ, ಚರ್ಚಿನಲ್ಲಿ ಇಲ್ಲ, ಗುರುದ್ವಾರದಲ್ಲಿ ಇಲ್ಲ, ದೇವರು ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ ಇದ್ದಾನೆ. ದೇವರನ್ನು ಆರಾಧಿಸುವ, ಪ್ರೀತಿಸುವ, ಪೂಜಿಸುವ, ಆತನ ತತ್ವಗಳನ್ನು ಆಚರಿಸುವ ಪ್ರತಿಯೊಬ್ಬರೂ ಬದುಕಿನಲ್ಲಿ ಮನುಷ್ಯತ್ವವನ್ನು ರೂಪಿಸಿಕೊಳ್ಳುತ್ತಾರೆ. ಅಂತಹ ಪರಂಪರೆ ನಮ್ಮ ಭಾರತೀಯ ಪರಂಪರೆ. ಭಾರತೀಯ ಪರಂಪರೆಯಲ್ಲಿ ಬದುಕಿನ ಮೌಲ್ಯಗಳು ನೈಸರ್ಗಿಕ ನೆಲೆಯಲ್ಲಿ ರೂಪಗೊಂಡಿವೆ. ಇಡೀ ನಮ್ಮ ಬದುಕು ಪಂಚಭೂತಗಳ ಜೊತೆ ಜೊತೆಗೆ ನಿಂತಿದೆ. ಕೊನೆಗೊಂದು ದಿನ ಪಂಚಭೂತಗಳ್ಳಲ್ಲಿಯೇ ಲೀನವಾಗುವುದು ವಾಸ್ತವ ಸತ್ಯ. ಅಂದರೆ ಪಂಚಭೂತಗಳೆಲ್ಲವೂ ದೇವರಂತೆ, ದೈವದಂತೆ ಎಂದು ಭಾರತೀಯರು ಭಾವಿಸಿಕೊಂಡಿದ್ದೇವೆ.   ಅಸಹಾಯಕರಿಗೆ ಸಹಾಯ ಮಾಡುವ, ಅವರನ್ನು ಕೈ ಹಿಡಿದು ನಡೆಸುವ, ಗುರು ಪರಂಪರೆ ನಮ್ಮದು.

ನಾವು ಪಂಚಭೂತಗಳ ಜೊತೆ ಜೊತೆಗೆ ಬದುಕಿದವರಲ್ಲವೇ ಹಾಗಾಗಿ, ಸೂರ್ಯ, ಚಂದ್ರ, ಮರ, ನೀರು, ಗಾಳಿ, ಬೆಂಕಿ, ಬೆಳಕು ಇವೆಲ್ಲವೂ ನಮಗೆ ದೇವರಾಗಿರುವುದು ಪರಮ ಸತ್ಯ.  ನಿಸರ್ಗದಲ್ಲಿ ದೇವರ ಸ್ವರೂಪವನ್ನು ಕಂಡವರು.  ಹಾಗೆಯೇ ಮನುಷ್ಯ ಮನುಷ್ಯರ ನಡುವಿನ ಅಗಾಧವಾದ ಪ್ರೀತಿಯನ್ನು ಬಿತ್ತಿ ಬೆಳೆದವರು.

ಇಂತಹ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆ ಹೊಂದಿರುವ ನಾವುಗಳು ನಮ್ಮ ಪಾತ್ರವನ್ನು ಇಂದು ಯಾವ ರೀತಿ ನಿರ್ವಹಿಸುತ್ತೇವೆ..? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಸೀಮಿತಗೊಂಡಿರುವ ಸಂಬಂಧಗಳು,  ಅಡ್ಡಗೋಡೆಯಾಗಿರುವ ಪರದೆಗಳು, ಗೆರೆ ಎಳೆದ ಬರೆಗಳು… ಇವು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಹೆದ್ದಾರಿಯಾಗಿಸುವಲ್ಲಿ ಅಡ್ಡವಾಗಿವೆ ಎಂದರೆ ತಪ್ಪಲ್ಲ. ಕೇವಲ ಆರ್ಥಿಕ ಸಂಪತ್ತಷ್ಟೇ ನಮಗೆ ಮುಖ್ಯವಲ್ಲ. ನಾವು ನಡೆದುಕೊಳ್ಳುವ ರೀತಿ – ನೀತಿಗಳು, ನಮ್ಮ ಕೃತಿಗಳು, ಆಚರಣೆಗಳು, ಸಂಪ್ರದಾಯಗಳು, ವೈಜ್ಞಾನಿಕ ಸಂಶೋಧನೆಗಳು… ಇವೆಲ್ಲವೂ ನಾವುಗಳು ನಮ್ಮ ದೇಶದಲ್ಲಿ ಅನುಸರಿಸುವ ಬಹುದೊಡ್ಡ ಹೆದ್ದಾರಿಗಳು..!!  ಕೇವಲ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನಾವು ನಮ್ಮ ಮುಖವಾಡಗಳನ್ನು ಧರಿಸಿಕೊಂಡು, ಸೀಮಿತ ಕಕ್ಷೆಯನ್ನು ಹಾಕಿಕೊಂಡು ಗಿರಿಕಿ ಹೊಡೆಯುವುದನ್ನು ಬಿಟ್ಟು, ನಾವು ವಿಶಾಲವಾಗಿ ಬದುಕಬೇಕಾಗಿದೆ.  ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪೆರಿಯಾರ್ ಅವರ ನಾಡಿನಲ್ಲಿ ನಾವು ಮನುಷ್ಯ ಪ್ರೀತಿಯ ಬೀಜವನ್ನ ಬಿತ್ತಿ ಬೆಳೆಯಬೇಕಾಗಿದೆ. ಹಾಗಾದಾಗ ಮಾನವೀಯ ಮೌಲ್ಯಗಳು ಮತ್ತು ನಾವು ಏಕ ಪ್ರಕಾರವಾಗಿರಲು ಸಾಧ್ಯ. ನಮ್ಮ ದೇಶ ಬಹು ಸಂಸ್ಕೃತಿಯನ್ನು ಹೊಂದಿರುವುದೆಂದು ಈಗಾಗಲೇ ಹೇಳಿರುವಂತೆ, ಒಬ್ಬರ ಆಚರಣೆಗಳನ್ನು ಇನ್ನೊಬ್ಬರು ಗೌರವಿಸಬೇಕು. ಇನ್ನೊಬ್ಬರ ಆಚರಣೆಗಳನ್ನು ನಾವು ಕೂಡ ಗೌರವಿಸಬೇಕು. ನಮ್ಮ ತಾರತಮ್ಯಗಳ ಮನಸ್ಥಿತಿಯಿಂದ ಹೊರಬಂದು ಪ್ರತಿಯೊಂದರಲ್ಲಿಯೂ ಒಳಿತನ್ನು ಹುಡುಕಿ ಅವುಗಳನ್ನು ಅನುಸರಿಸಬೇಕು. ಯಾವ ಧರ್ಮವೂ ಕೆಟ್ಟ ಭಾವನೆಗಳಿಂದ, ಕೆಟ್ಟ ಮನೋಭಾವದ ಮೌಲ್ಯಗಳಿಂದ ಕೂಡಿರುವುದಿಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ ಅದೇ  “ದಯವೇ ಧರ್ಮದ ಮೂಲವಯ್ಯ, ದಯವಿಲ್ಲದಾವುದು ಧರ್ಮವಯ್ಯ..?”  ಎನ್ನುವ ವಚನಕಾರರ ಸತ್ಯವನ್ನು ನಾವು ಮನಗಾಣಬೇಕಾಗಿದೆ.

 ಗೋವಿಂದ ಭಟ್ಟರು – ಸಂತ ಶಿಶುನಾಳ ಶರೀಫರ ಗುರು ಶಿಷ್ಯ ಪರಂಪರೆಯ ಮೌಲ್ಯಗಳು, ವ್ಯಾಸರಾಯ – ಕನಕದಾಸರ ಬದುಕಿನ ಸಾರ್ಥಕ ಮಾರ್ಗದರ್ಶನದ ಮೌಲ್ಯಗಳು,  ವಿದ್ಯಾರಣ್ಯ – ಹಕ್ಕ-ಬುಕ್ಕರ ಗುರು ಶಿಷ್ಯತ್ವದ  ಆದರ್ಶಗಳು, ಚಾಣಕ್ಯ – ಚಂದ್ರಗುಪ್ತ ಮೌರ್ಯರ ನಂಟಸ್ತಿಕೆಗಳ  ಆದರ್ಶಗಳು ನಮಗೆ ಗೊತ್ತಿರಬೇಕು.  ದಾಸರವಾಣಿಗಳು, ಸೂಫಿಗಳ ಕೀರ್ತನೆಗಳು, ವಚನಕಾರರ ವಚನಗಳು,  ಅನುಭವದ ಜಾನಪದಗಳು ಮತ್ತು ಮಾನವೀಯ ಮೌಲ್ಯವುಳ್ಳ ಯಾವುದೇ ತತ್ವ ಸಿದ್ಧಾಂತಗಳು ನಮ್ಮ ಬದುಕಿಗೆ ಆದರ್ಶದ ಮಾರ್ಗವಾಗಬೇಕು.

 ನಮ್ಮ ದೇಶದ ಸಾಂಸ್ಕೃತಿಕ  ಪರಂಪರೆಯು ಅತ್ಯಂತ ಹಿರಿದಾಗಿದೆ. ಆದರೆ ನಾವು ನಡೆದುಕೊಳ್ಳುವ ರೀತಿಯನ್ನು ಮತ್ತೆ ಮತ್ತೆ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ನಮ್ಮ ದೇಶವು ಶ್ರೀಮಂತಿಕೆಯಿಂದ ಕೂಡಿರುವ ವಾಸ್ತುಶಿಲ್ಪ ಕಲೆಗಳನ್ನು ಯಾರು ತಾನೆ ಮರೆಯಲು ಸಾಧ್ಯ…?  ಮಂದಿರ, ಮಸೀದಿ, ಚರ್ಚುಗಳ ವಾಸ್ತು ಶಿಲ್ಪಗಳು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಗುರುತುಗಳಾಗಿವೆ. ಇಲ್ಲಿ ಆಳಿದ ಎಲ್ಲಾ ಅರಸರು ತಮ್ಮ ತಮ್ಮ ಆದರ್ಶದ ಮೌಲ್ಯಗಳನ್ನು ಕೊಡುಗೆಗಳಾಗಿ ನೀಡಿ ಹೋಗಿದ್ದಾರೆ. ನಾವು ಅವುಗಳನ್ನು ಉಳಿಸಿಕೊಳ್ಳಬೇಕಷ್ಟೇ. ಹಿಂದಿನ ಇತಿಹಾಸವನ್ನು  ಇಂದಿನ ವಾಸ್ತವಿಕ ಪರಂಪರೆಗೆ ಹೋಲಿಸಿ ಬದುಕುವುದು ಒಳಿತಲ್ಲ. ಅವತ್ತಿನ ಕಾಲಘಟ್ಟದಲ್ಲಿ ನಡೆದ ಘಟನೆಗಳೇ ಬೇರೆ ಇವತ್ತಿನ ವಾಸ್ತವ ಸ್ಥಿತಿಯಲ್ಲಿರುವ ಘಟನೆಗಳೇ ಬೇರೆ. ಎರಡಕ್ಕೂ ತಳುಕು ಹಾಕಿಕೊಂಡು, ದ್ವೇಷದ ವಿಷ ಬೀಜ ಬಿತ್ತುವುದಕ್ಕಿಂತ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ನಾವುಗಳು ಉಳಿಸಬೇಕಾದರೆ ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ. ಒಳಿತಿಗಾಗಿ, ಮಾರ್ಗದರ್ಶನಕ್ಕಾಗಿ, ಇತಿಹಾಸವನ್ನು  ಮರೆಯಬಾರದು. ದೇಶದ ಸಾಂಸ್ಕೃತಿಕ ಪರಂಪರೆ ಎಂದರೆ “ನನ್ನಂತೆ ಎಲ್ಲರೂ ಒಂದೇ” ಎಂದು ಕಾಣುವ ಹಿರಿಮೆ, ಅಂತಹ ಆದರ್ಶದ ಅಲಿಪ್ತ ನೀತಿಯು, ಆದರ್ಶ ಮೌಲ್ಯಗಳು ಜಾಗತಿಕ ಮಟ್ಟದಲ್ಲಿ ಹೆಗ್ಗುರುತಾಗಿ ಉಳಿದರುವಂತೆ ನಮ್ಮ ದೇಶದಲ್ಲಿಯೂ ನಾವುಗಳು ಅವುಗಳನ್ನು ಉಳಿಸಿಕೊಂಡು ಪ್ರೀತಿಯನ್ನು ಹಂಚಬೇಕಾಗಿದೆ.  ದೇಶದ ಸಾಂಸ್ಕೃತಿಕ ಪರಂಪರೆಯೊಂದಿಗೆ ನಾವುಗಳು “ಎಲ್ಲರೂ ಒಂದೇ” ಎಂದು ಬೆರತಾಗ ಜಗತ್ತಿನಲ್ಲಿ ಭಾರತ  ವಿಜೃಂಭಣೆಯಿಂದ ಮೆರೆಯಬಲ್ಲದು. ಈ ಮಾತನ್ನು ಎಲ್ಲರೂ ಮನದೊಳಗೆ ಇಳಿಸಿಕೊಳ್ಳೋಣ. ಇದೇ ಅಲ್ವಾ ಒಲವೆಂದರೇ..?


Leave a Reply

Back To Top