ವೈ.ಎಂ.ಯಾಕೊಳ್ಳಿ ರೈತ ಗಜಲ್

ನಿನ್ನೆದೆಯ ರಕ್ತವನೆ ಬೆವರಾಗಿ ಹರಿಸಿದವನು ನೀನು
ಲೋಕದ ಹೊಟ್ಟೆಯ ಹಸಿವು ನೀಗಿಸಿದವ ನೀನು

ಚಳಿ‌ ಮಳೆಗಳ ಲೆಕ್ಕಿಸದೆ ಬಿಸಿಲಲ್ಲಿ ಬಳಲಿದೆಯಲ್ಲ
ಬಂದಕಷ್ಟಗಳನೆಲ್ಲ ಒಬ್ಬನೆ ಉಂಡವನು ನೀನು

ಮಕ್ಕಳು ಬಂಧು ಬಾಂಧವರು ಎಲ್ಲರನೂ ಸಲಹಿದೆ
ಸಾಗರದ ಆಗಸದ ಆಳದ ಎದೆಯಂಥವನು ‌ನೀನು

ಬಿತ್ತಿದ ಬೀಜವನು ಬಂಜರು‌ಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು

ನಿನ್ನ ತುಳಿದವರು ನಿನ್ನಿಂದಲೇ ಬೆಳೆದು‌ ಮೇಲಾದರು
ಮೇಲೆರಿದವರ ನೋಡಿ ಕರುಬದೆ ಹರಸಿದವನು ನೀನು

ಬೆಳೆದ ಫಸಲಿಗೂ ಬೆಲೆ ಸೊಗದೆ ಮಾರುಕಟ್ಟೆಲಿ ಅನಾಥ
ಬಂದ ಸಂಪದವನೆಲ್ಲ ಕೈಚೆಲ್ಲಿ ಸುಮ್ಮನೆ ಬಂದವನು ನೀನು

ರಾಸಿ ರಾಸಿ ಸಂಕಟಗಳು ಹಾದಿಯ ಬದಿಯಲ್ಲಿ ಬಂದವು
ವಿಷವ ಕುಡಿದು ನಡೆದು ನಂಜುಂಡನಾದವನು ನೀನು


Leave a Reply

Back To Top