ಮಕ್ಕಳ ಸಂಗಾತಿ
ಭಾಗ್ಯ ಮಂಜುನಾಥ್ ಶಿಶುಗೀತೆ-
ಸೊಳ್ಳೆಯ ಕಿರಿಕಿರಿ!
ಒಂದಿನ ಸಂಜೆ ಓದಲು ಕುಳಿತೆ
ಸೊಳ್ಳೆಯು ಕಾಡಿತ್ತು/
ಒಂದೇ ಒಂದು ಗುಟುಕು ರಕ್ತ
ನನ್ನಲಿ ಬೇಡಿತ್ತು//
ಮಬ್ಬುಗತ್ತಲೆ ಹಬ್ಬುತಲಿರಲು
ಸಂತಸ ಪಟ್ಟಿತ್ತು/
ಸೊಳ್ಳೆ ನಾಶಕ ತಂತ್ರವನೆಲ್ಲ
ಸೋಲಿಸಿ ಬಿಟ್ಟಿತ್ತು//
ತಪ್ಪಿಸಿಕೊಳ್ಳಲು ಮುದುಡಿ ಕುಳಿತರೂ
ಹಠವನೆ ತೋರಿತ್ತು!/
ದಪ್ಪನೆ ಉಡುಪಿನ ಮೇಲೂ ಕುಳಿತು
ರಕ್ತವ ಹೀರಿತ್ತು!//
ಮನನವ ಮಾಡಲು ಕಣ್ಣು ಮುಚ್ಚಿದೆ
ಕಿವಿಯಲಿ ಹಾಡಿತ್ತು/
ಕಣ್ಣನು ತೆರೆದು ನೋಡಿದರಲ್ಲಿ
ಎತ್ತಲೋ ಓಡಿತ್ತು//
ನನ್ನಯ ಸುತ್ತವೇ ಗಿರಕಿ ಹೊಡೆಯುತ
ಕಿರಿಕಿರಿ ಮಾಡಿತ್ತು/
ಹಿಡಿತಕೂ ಸಿಗದೆ ಹೊಡೆತಕೂ ಸಿಗದೆ
ಪರಿಪರಿ ಕಾಡಿತ್ತು!//
ಗೋಡೆಯ ಮೇಲೆ ಹಲ್ಲಿ ಅಲ್ಲೇ
ಬೇಟೆಗೆ ಸಜ್ಜಾಯ್ತು/
ಹಾರುತ ಬಂದ ಸೊಳ್ಳೆಯು ಹಲ್ಲಿಯ
ಬಾಯಿಗೆ ತುತ್ತಾಯ್ತು..!//
ಸೊಳ್ಳೆ ಅಂತ್ಯವ ಕಂಡು ಮನದಲಿ
ನೆಮ್ಮದಿ ಮೂಡಿತ್ತು/
ಮಡಿಚಿದ ಪುಸ್ತಕ ತೆರೆಯುತ ಕುಳಿತೆ
ಅಚ್ಚರಿ ಕಾದಿತ್ತು!//
ಮತ್ತೆ ಕಿವಿಯಲಿ ಮತ್ತದೇ ಹಾಡು
ಮೆತ್ತಗೆ ಗುನುಗಿತ್ತು/
ಮತ್ತೊಂದು ಸೊಳ್ಳೆ ಕುತ್ತಿಗೆ ಮೇಲೆ
ಗತ್ತಲಿ ಕುಳಿತಿತ್ತು!//
ಭಾಗ್ಯ ಮಂಜುನಾಥ್.
ಚೆಂದದ ಶಿಶುಗೀತೆ..
Very nice