ರೈತ ಸಂಗಾತಿ
ಜಿ. ಹರೀಶ್ ಬೇದ್ರೆ
ಜುಗಾಡ್ (ಏತ)
ಉದಯಪುರದಿಂದ ಜೋಧ್ ಪುರಕ್ಕೆ ಬರುವಾಗ ಸಾಕಷ್ಟು ಹೊಲಗಳಲ್ಲಿ ಒಂದು ವಿಶೇಷವನ್ನು ಕಂಡೆ. ಹಳೆಯ ವಿಚಾರವೇ, ಸಾಕಷ್ಟು ಜನರಿಗೆ ತಿಳಿದಿರುವಂತದ್ದೆ. ಆದರೆ ಈಗ ಕರ್ನಾಟಕದಲ್ಲಿ ಬಹುಶಃ ಇಲ್ಲ ಎನ್ನಬಹುದಾದಂತ ವಿಷಯ.
ರೈತರಿಗೆ ಅದರಲ್ಲೂ ಮಳೆಯನ್ನು ನಂಬಿ ಬೆಳೆಯನ್ನು ಬೆಳೆಯುವ ರೈತರಿಗೆ ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಲಕಾಲಕ್ಕೆ ನೀರುಣಿಸಿ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತು. ಅದಕ್ಕೆ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಮಳೆ ಕಾಲಕ್ಕೆ ಸರಿಯಾಗಿ ಬಂತೋ ಪರವಾಗಿಲ್ಲ, ಇಲ್ಲವೇ ಹೊಲ ಗದ್ದೆಗಳಲ್ಲಿ ಇರುವ ನೀರಿನ ಹೊಂಡಗಳಿಂದಲೊ ಅಥವಾ ಬೋರ್ವೆಲಿನಿಂದಲೊ ನೀರನ್ನು ಗಿಡಗಳಿಗೆ ಹಾಯಿಸಬೇಕು. ಹೀಗೆ ನೀರು ಹಾಯಿಸಬೇಕು ಎಂದರೆ ಕರೆಂಟ್ ಬೇಕೇಬೇಕು. ಸಾಮಾನ್ಯವಾಗಿ ನಮ್ಮಲ್ಲಿ ಮಳೆಯ ಕೊರತೆಯಾದರೆ ಕರೆಂಟಿಗೂ ಕೊರತೆಯಾಗಿ ಲೋಡ್ ಶೆಡ್ಡಿಂಗ್ ಆಗುವುದು ನಿಶ್ಚಿತ. ಅದರಲ್ಲೂ ಹಳ್ಳಿಯ ಕಡೆ ಅನಿಮಿಯತವಾಗಿ ಕರೆಂಟ್ ತೆಗೆಯುತ್ತಾರೆ. ಹೀಗಾದಾಗ ಕೈಗೆ ಬಂದ ಬೆಳೆಯಿಂದ ಅಲ್ಪಸ್ವಲ್ಪವಾದರೂ ಆದಾಯ ಗಳಿಸಲು ಹೊತ್ತು ಗೊತ್ತಿಲ್ಲದೆ ಕರೆಂಟ್ ಬರುವುದನ್ನೇ ಕಾದಿದ್ದು ಬೆಳೆಗೆ ನೀರು ಹಾಯಿಸುತ್ತಾರೆ.
ಜೋಧ್ ಪುರ ಮಾರ್ಗವಾಗಿ ಹೋಗುವಾಗ ರಸ್ತೆ ಬದಿಯ ಹೊಲವೊಂದರಲ್ಲಿ ರೈತನೊಬ್ಬ ಏತದ ಮೂಲಕ ತನ್ನ ಹೊಲಕ್ಕೆ ನೀರು ಹಾಯಿಸುವುದನ್ನು ನೋಡಿ ಆಶ್ಚರ್ಯವಾಯಿತು. ಏಕೆಂದರೆ, ನಾವು ಆಧುನಿಕತೆಯಲ್ಲಿ ಸಾಕಷ್ಟು ಮುಂದುವರೆದಿದ್ದರೂ ಇವರು ಇನ್ನೂ ಹಳೆ ಪದ್ಧತಿಗೆ ಜೋತುಬಿದ್ದಿದ್ದರಲ್ಲ ಅನಿಸಿದ್ದು ಸುಳ್ಳಲ್ಲ. ಅದನ್ನೇ ಆ ರೈತನಿಗೆ ನೇರವಾಗಿ ಕೇಳಿದಾಗ, ಅವರು ಕೊಟ್ಟ ಉತ್ತರ ಖಂಡಿತಾ ಸರಿ ಎನಿಸಿತು.
ಸಾರ್ ನಮ್ಮಲ್ಲಿ ಕರೆಂಟ್ ಯಾವಾಗ ಹೋಗುತ್ತೆ ಯಾವಾಗ ಬರುತ್ತೆ ಗೊತ್ತಾಗುವುದಿಲ್ಲ. ಅದಕ್ಕಾಗಿ ಕಾದು ಕುಳಿತು ನೋಡಿಕೊಳ್ಳಲು ಈಗ ಅಣ್ಣತಮ್ಮಂದಿರು ಬೇರೆ ಬೇರೆಯಾಗಿದ್ದೇವೆ. ಇರುವ ತುಂಡು ಭೂಮಿಯಿಂದ ಹೊಟ್ಟೆ ತುಂಬಲ್ಲ ಅದಕ್ಕಾಗಿ ಬೇರೆ ಕೆಲಸಕ್ಕೂ ಹೋಗಬೇಕು. ಹಾಗಾಗಿ ಬೇರೆ ಕಡೆ ಕೆಲಸಕ್ಕೆ ಹೋಗುವ ಮುನ್ನ ಗಿಡಗಳಿಗೆ ನೀರು ಹಾಯಿಸಿ ಹೋಗುತ್ತೇನೆ. ಇದಕ್ಕೆ ಕರೆಂಟ್ ಬೇಕಿಲ್ಲ, ಅದಕ್ಕಾಗಿ ಕಾಯುವ ಅವಶ್ಯಕತೆಯೂ ಇಲ್ಲ, ಬೇಕಿರುವುದು ಹೊಳೆಯಲ್ಲಿ ನೀರು ಮಾತ್ರ ಎಂದರು.
ಈಗ ನೀವೇ ಹೇಳಿ, ಈ ರೈತ ಹೇಳಿದ್ದು ನೂರಕ್ಕೆ ನೂರು ಸರಿಯಲ್ಲವೆ? ಆಧುನಿಕ ಪದ್ಧತಿಯನ್ನು ನಂಬಿ ಕಾಯುವ ಬದಲು ಹಳೆಯ ಪದ್ಧತಿಯಾದರೇನು ಕೆಲಸ ಆದರೆ ಆಯಿತು ಅಲ್ಲವೆ. ಇವರು ಇದಕ್ಕಾಗಿ ಗಾಣಕ್ಕೆ ಎತ್ತುಗಳನ್ನು ಕಟ್ಟಿದಂತೆ ಕಟ್ಟಿ ಅವುಗಳನ್ನು ವೃತ್ತಾಕಾರವಾಗಿ ತಿರುಗಿಸಿದರೆ ಇದಕ್ಕೆ ಸಂಪರ್ಕೀಸಿದ ಮತ್ತೊಂದು ಕಡೆ ಪುಟ್ಟ ಪುಟ್ಟ ಬಾನಿಗಳಲಿ ಹೊಳೆಯಿಂದ ನೀರೆತ್ತಿ ಬೆಳೆಗಳಿಗೆ ನೀರು ಹೋಗಲು ಮಾಡಿದ ಕಾಲುವೆಯಲ್ಲಿ ಸುರಿಯುತ್ತದೆ. ಅಲ್ಲಿಂದ ಸರಾಗವಾಗಿ ನೀರು ಎಲ್ಲಾ ಕಡೆ ಹರಿದು ಹೋಗಿ ಬೆಳೆ ಉಳಿಯುವಂತಾಗುತ್ತದೆ ಅಷ್ಟೇ ಅಲ್ಲ ಸಮಯವೂ ಉಳಿದು ರೈತರ ಕೈಗೆ ನಾಲ್ಕು ಕಾಸು ಸಿಗುತ್ತದೆ. ಇದರ ಬಗ್ಗೆ ನಮ್ಮಲ್ಲಿರುವ ಸಣ್ಣ ಪುಟ್ಟ ಹೊಲಗಳಿರುವ ರೈತರು ಯೋಚಿಸಬಹುದೇನೊ……
ಜಿ. ಹರೀಶ್ ಬೇದ್ರೆ
ರೈತ ಸಂಗಾತಿ ಹರೀಶ್ ರವರೇ ನಿಮ್ಮ ಚಿಂತನೆಯ ರೈತ ಕಾಳಾಜಿಯಾ ಈ ಲೇಖನ ಅದ್ಬುತವಾಗಿ ಮೂಡಿ ಬಂದಿದೆ…. ಧನ್ಯವಾದಗಳು….. ಇಂತಹ ಲೇಖನ ಇನ್ನಷ್ಟು ಮೂಡಿ ಬರಲಿ……