ವಿಶೇಷ ಲೇಖನ
ವೀಣಾ ಹೇಮಂತ್ ಗೌಡ ಪಾಟೀಲ್
“ಮರೆತೇನೆಂದರೆ ಮರೆಯಲಿ ಹ್ಯಾಂಗ….
ಬಾಲ್ಯದ ಸವಿ ನೆನಪುಗಳ”
ಇಂದಿನ ರಜಾದಿನಗಳಲ್ಲಿ ಮನೆಮನೆಗಳಲ್ಲೂ ರಜೆಯ ಮಜ ಸವಿಯುತ್ತಿರುವ ಮಕ್ಕಳು. ಮಕ್ಕಳ ಚೀರಾಟ, ಹಾರಾಟ, ಜಗಳ,ಗದ್ದಲ ಕೋಲಾಹಲಗಳಿಂದ ಕಂಗೆಟ್ಟಿರುವ ಪಾಲಕರು. ಮನೆಯ ಹೊರಗಡೆ ಬಿಸಿಲಿನ ತಾಪವಾದರೆ ಮನೆಯೊಳಗಡೆ ಮಕ್ಕಳ ಪ್ರತಾಪ.ತಾಯಂದಿರು ಕುಕ್ಕರಗಳಾಗಿದ್ದರೆ ಸಿಡಿದು ಹೋಗುತ್ತಿದ್ದರೇನೋ. ಹಿಂದೆ ಹೀಗಿರಲಿಲ್ಲವೇ ಎಂದು ಯೋಚಿಸಿದರೆ ಮನಸ್ಸು ನಮ್ಮ ಬಾಲ್ಯದ ದಿನಗಳತ್ತ ಓಡಿತು.
ನಮಗೆ ಪ್ರತಿವರ್ಷ ಬೇಸಿಗೆಯಲ್ಲಿ ಎರಡು ತಿಂಗಳ ದೀರ್ಘಾವಧಿಯ ರಜೆ ಮತ್ತು ದಸರೆಯಲ್ಲಿ 15 ರಿಂದ 30 ದಿನಗಳ ಅಲ್ಪಾವಧಿ ರಜೆ ಇರುತ್ತಿತ್ತು.
ಹಿಂದೆ ಅವಿಭಕ್ತ ಕುಟುಂಬಗಳು ಇದ್ದು ರಜೆ ಬಿಟ್ಟೊಡನೆ ನಾವು ಮಕ್ಕಳು ಅಜ್ಜನ ಮನೆಗೆ,ಮಾವನ ಮನೆ, ಚಿಕ್ಕಮ್ಮ ದೊಡ್ಡಮ್ಮರ ಮನೆಗೆ, ಸೋದರತ್ತೆಯ ಮನೆಗೆ ರಜೆಯ ದಿನಗಳನ್ನು ಕಳೆಯಲು ಹೋಗುತ್ತಿದ್ದೆವು. ಹಳ್ಳಿಯ ವಿಶಾಲವಾದ ಬಂಕದ ಮನೆಗಳು, ಹಿತ್ತಲಲ್ಲಿರುವ ದೊಡ್ಡ ದೊಡ್ಡ ಕಟ್ಟೆಗಳು, ಊರ ಮುಂದಿನ ಹೊಳೆ-ಹಳ್ಳಗಳು, ತೋಟಗಳು, ಹೊಲಗದ್ದೆಗಳು, ತೋಪುಗಳು, ದೇವಸ್ಥಾನದ ಆವರಣಗಳು, ಒಂದೇ ಎರಡೇ ನಮಗೆ ಆಟವಾಡಲು. ಬೆಳಿಗ್ಗೆ ಎದ್ದು ಮುಖಮಾರ್ಜನ ಮಾಡಿ ಚಹ ಇಲ್ಲವೇ ಹಾಲನ್ನು ಕುಡಿದು ಟವಲನ್ನು ಸುತ್ತಿ ಕೈಯಲ್ಲಿ ಹಿಡಿದು ಹಿರಿಯರ ಮೇಲುಸ್ತುವಾರಿಯಲ್ಲಿ ಬಾವಿಗೆ ಈಜಲು ತೆರಳುವುದು. ಒಂದೆರಡು ಗಂಟೆಗಳ ಕಾಲ ಈಜು ಮೋಜು ಎಲ್ಲವೂ ಒಟ್ಟಿಗೆ ನಡೆದು ನಂತರ ಬಾವಿಯಿಂದ ಹೊರಗೆ ಬಂದರೆ ಕೈ, ಕಾಲುಗಳ ಬೆರಳುಗಳು ನೀರಿನ ಹೊಡೆತಕ್ಕೆ ಮುದುರಿ ಗಗ್ಗರಿಗಟ್ಟುತ್ತಿದ್ದವು. ನಂತರ ಮನೆಗೆ ಬಂದು ಮತ್ತೊಮ್ಮೆ ಸ್ನಾನ ಮಾಡಿ ತಿಂಡಿ ತಿಂದು
ವಾರಿಗೆಯ ಮಕ್ಕಳೊಡನೆ ಬೀದಿಗಿಳಿದರಾಯಿತು. ಗೋಲಿ, ಮರಕೋತಿಯಾಟ , ಸರಬಡಿಗೆಯಾಟ, ಕಣ್ಣ ಮುಚ್ಚಾಲೆ ಹೆಣ್ಣುಮಕ್ಕಳಾದರೆ ಕುಂಟೆಬಿಲ್ಲೆ ಆಣೆಕಲ್ಲು, ಗಜ್ಜುಗ, ಬಳೆ ಚೂರಿನ ಆಟ ಹೀಗೆ ಹತ್ತು ಹಲವು ಆಟಗಳನ್ನು ಆಡಿ ಮನೆಯವರ ಕೂಗಿಗೆ ಓಗೊಟ್ಟು ಮನೆಗೆ ಬಂದು ಕೈ ಕಾಲು ಮುಖ ತೊಳೆದು ಊಟ ಮಾಡುವುದು. ಹಾಗೆ ಸುಮ್ಮನೆ ಊಟ ಮಾಡುವುದು ಕೂಡ ಮತ್ತೆ ಆಟಕ್ಕೆ ಕಳುಹಿಸಲಿ ಎಂಬ ಬಯಕೆಯಿಂದಲೇ. ಆದರೆ ಹಿರಿಯರು ಸೂರ್ಯನ ಬಿಸಿಲು ಸರಿಯುವವರೆಗೆ ಮನೆಯ ಒಳಗಡೆ ಆಟವಾಡಿಕೊಳ್ಳಬೇಕೆಂದು ಕಟ್ಟಪ್ಪಣೆ ಮಾಡುತ್ತಿದ್ದರು. ಬಿಸಿಲಿನ ಬೇಗೆಯ ನೆಪದಲ್ಲಿ ದೊಡ್ಡವರೆಲ್ಲ ವಿಶ್ರಾಂತಿ ಪಡೆಯಲು ಕೋಣೆ, ಪಡಸಾಲೆಗಳನ್ನು ಸೇರಿದರೆ ಮಕ್ಕಳು ಮನೆಯ ಹಿತ್ತಲಿನ ಕಟ್ಟೆಯ ಮೇಲೆ ಮತ್ತೆ ಜಮಾವಣೆಯಾಗುತ್ತಿದ್ದರು. ನಿದ್ದೆ ಬಾರದ ಅಜ್ಜ ಅಜ್ಜಿ ಈ ಮಕ್ಕಳೊಂದಿಗೆ ಸೇರಿ ಚೌಕಾಬಾರ, ಕವಡೆ,ಹುಲಿಮನೆಗಳನ್ನು ಸೀಮೆಸುಣ್ಣದ ಪೆನ್ಸಿಲಿನಿಂದ ಬರೆದು ಆಟವಾಡುತ್ತಿದ್ದರು. ಕೊಂಚ ದೊಡ್ಡವರಾದ ನಂತರ ಚೆಸ್, ಕೇರಂ ಬೋರ್ಡ್, ಹಾವು ಏಣಿ ಆಟ, ಲುಡೋ, ರಾಜಾ, ರಾಣಿ, ಪೊಲೀಸ್, ಕಳ್ಳ ಮುಂತಾದ ಆಟಗಳಿಗೆ ಬಡ್ತಿ ದೊರೆತದ್ದು ನಿಜ.
ಟಿವಿ, ಮೊಬೈಲ್ಗಳಂತಹ ಯಾವುದೇ ಆಕರ್ಷಣೆಗಳು ನಮಗಿರದ ಕಾಲದಲ್ಲಿ ಪುಸ್ತಕ ನಮಗೆ ಅತ್ಯಂತ ಆತ್ಮೀಯ ಸಂಗಾತಿಯಾಗಿತ್ತು. ಮನೆಯ ಅಟ್ಟದಲ್ಲಿ ಇರುತ್ತಿದ್ದ ಪುಸ್ತಕಗಳನ್ನು ಓರಣವಾಗಿ ಜೋಡಿಸಿಟ್ಟುಕೊಂಡು ಓದಲಾರಂಭಿಸಿದರೆ ಊಟ ನಿದ್ರೆಗಳನ್ನು ಕೂಡ ಮರೆಯುವಂತಹ ದಿನಗಳು. ಚಂದಮಾಮ, ಬಾಲಮಿತ್ರ, ತರಂಗ, ಸುಧಾ, ಪ್ರಜಾ ಮತ, ಮಯೂರ, ಕಸ್ತೂರಿ, ತುಷಾರ ಮಾಸಪತ್ರಿಕೆಗಳ ಮಕ್ಕಳ ಪುಟಗಳಲ್ಲದೆ ಕಥೆ ಕಾದಂಬರಿಗಳನ್ನು ಕೂಡ ಓದುತ್ತಿದ್ದೆವು.
ಹೊಲಕ್ಕೆ ಹೋದರೆ ಯಾರದ್ದೋ ಹೊಲದ ಮಾವಿನಕಾಯಿ, ಪೇರಲಹಣ್ಣು, ಚಿಕ್ಕು ಕಾಯಿಗಳನ್ನು ತಿನ್ನುವ ಬಯಕೆ. ತೆಂಗಿನ ಎಳನೀರನ್ನು ಕುಡಿದು ಹೊಟ್ಟೆ ತುಂಬಿಸಿಕೊಂಡದ್ದು ಉಂಟು. ಮರದಲ್ಲಿ ಸಿಕ್ಕುವ ಹುಣಸೆ ಕಾಯಿ ಆರಿಸಿ ತಂದು ಮನೆಯ ಹಿರಿಯರನ್ನು ಕಾಡಿ ಬೇಡಿ ಉಪ್ಪು ಬೆಲ್ಲ ಜೀರಿಗೆ ಹಾಕಿ ನುಣ್ಣಗೆ ಚಿಗಳಿ ಕುಟ್ಟಿಸಿಕೊಂಡು ತಿನ್ನುವ ಸಂಭ್ರಮ. ನೆಲಗಡಲೆ ಅಥವಾ ಶೇಂಗಾ ಬೀಜ, ನೆನೆ ಹಾಕಿದ ಹುಣಸೆ ಬೀಜಗಳನ್ನು ಹುರಿದು ತಿನ್ನಲು ಒಯ್ಯುತ್ತಿದ್ದುದು ಕೂಡ ವಿಶೇಷವೇ. ಹತ್ತು ಪೈಸೆಗೆ ದೊರೆಯುವ ಕ್ಯಾಂಡಿ, 25 ಪೈಸೆಗೆ ದೊರೆಯುವ ಹಾಲಿನ ಐಸ್ ಕೊಡಿಸಿದರಂತೂ ಸ್ವರ್ಗಕ್ಕೆ ಎರಡೇ ಮೆಟ್ಟಿಲು. ಆದರೆ ಅವು ಕೂಡ ಎಲ್ಲರ ಪಾಲಿಗೆ ದುಬಾರಿ ಹವ್ಯಾಸಗಳು.
ಸಂಜೆ ಮತ್ತೆ ಮನೆಯ ಬಳಿ ಸಾರಿ ಕೈ ಕಾಲು ಮುಖ ತೊಳೆದು ಮನೆಯ ಹಿರಿಯರ ಜೊತೆ ಊರ ಮುಂದಣ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಹಿರಿಯರು ದೇವಸ್ಥಾನದ ಜಗಲಿಯ ಮೇಲೆ ಕಾಲಕ್ಷೇಪ ಕ್ಕಾಗಿ ಮಾತನಾಡಲು ಕುಳಿತರೆ ದೇವಸ್ಥಾನದ ಆವರಣದಲ್ಲಿ ಮತ್ತೆ ಮಕ್ಕಳ ಕಲರವ. ವಿಶೇಷ ಪೂಜೆಯ ದಿನಗಳಾದರೆ ಪೂಜೆಯ ಪ್ರಸಾದ ವಿನಿಯೋಗ ಮತ್ತು ಪ್ರವಚನ ಕಾರ್ಯಕ್ರಮ. ಈ ಸಮಯದಲ್ಲಿ ಮುಂಜಾನೆಯಿಂದ ಆಡಿ ದಣಿದ ದೇಹಕ್ಕೆ ಪ್ರವಚನಕಾರರ ಮಾತು ಜೋಗುಳದ ಲಾಲಿಯಂತಾಗಿ ಎಷ್ಟೋ ಬಾರಿ ಅಲ್ಲಿಯೇ ಮಲಗಿದ್ದು ಕಾರ್ಯಕ್ರಮ ಮುಗಿದ ನಂತರ ಮನೆಯವರೊಂದಿಗೆ ಮತ್ತೆ
ಮನೆಯೆಡೆಗೆ ಪಯಣಿಸಿ ಊಟ ಮಾಡಿ ಮಲಗಿದರೆ ಮತ್ತೆ ಎಚ್ಚರವಾಗುವುದು ಬೆಳಗಾ ಮುಂಜಾನೆ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಿದಾಗಲೇ.
ಒಂದೊಂದು ದಿನ ಮನೆಯಲ್ಲಿ ಅಜ್ಜಿ ಮಕ್ಕಳಿಗೆ ಕೈ ತುತ್ತು ಹಾಕುತ್ತಾ ಕಥೆ ಹೇಳಿದರೆ
ಕಂಗಳರಳಿಸಿ ಹೊಟ್ಟೆ ಭಾರವಾಗುವುದರ ಅರಿವು ಕೂಡ ಆಗದಷ್ಟು ಕಥೆಯಲ್ಲಿ ಮುಳುಗಿ ಹೋಗುತ್ತಿದ್ದರು. ಕಥೆ, ಒಗಟು,ಗಾದೆ ಮಾತುಗಳನ್ನು, ಹಾಡಿನ ಬಂಡಿ(ಅಂತಾಕ್ಷರಿ)ಯನ್ನು ಚಲನಚಿತ್ರಗಳ ಹೆಸರು ಹೇಳುವ ಸ್ಪರ್ಧೆ ಹೀಗೆ ಹತ್ತು ಹಲವಾರು ಸ್ಪರ್ಧಗಳನ್ನು ನಾವುಗಳೇ ಆಯೋಜಿಸಿ ಆಡುತ್ತಿದ್ದೆವು.
ಇನ್ನು ಕೆಲವೊಮ್ಮೆ ಹಪ್ಪಳ, ಉಪ್ಪಿನಕಾಯಿ, ಸಂಡಿಗೆ ತಯಾರಿಯಲ್ಲಿ ಮನೆಯ ಹಿರಿಯರು ತೊಡಗಿದಾಗ ಅವರಿಗೆ ಗೊತ್ತಿಲ್ಲದಂತೆ ಉಪ್ಪಿನಕಾಯಿಗೆ ಹೆಚ್ಚಿದ ಹೋಳುಗಳನ್ನು ಕದ್ದು ತಂದು ಅದಕ್ಕೆ ಕಾರ ಉಪ್ಪು ಹಚ್ಚಿ ಸವಿಯುವುದು, ಸಂಡಿಗೆ ಹಾಕಿದ ನಂತರ ಉಳಿದ ಗಟ್ಟಿಯಾದ ಸಂಡಿಗೆ ಹಿಟ್ಟನ್ನು ತಿನ್ನುವುದು ಹಪ್ಪಳದ ಹಿಟ್ಟನ್ನು ಹಸಿಯಾಗಿಯೇ ತಿನ್ನುವುದು ಹೆಣ್ಣು ಮಕ್ಕಳಾದರೆ ಹಪ್ಪಳ ಸಂಡಿಗೆಗಳ ತಯಾರಿಯಲ್ಲಿ ಸಂಡಿಗೆ ಹಾಕುವುದು ಹಪ್ಪಳ ಲಟ್ಟಿಸುವುದನ್ನು ಕಲಿಯುತ್ತಿದ್ದರು.
ಇನ್ನು ರಜೆಯ ಸಮಯದಲ್ಲಿ ಮನೆಗಳಲ್ಲಿ ಮದುವೆ ಸಂಭ್ರಮವಿದ್ದರೆ ಆ ಮಾತೇ ಬೇರೆ. ಹಿರಿಯರೊಂದಿಗೆ ಜವಳಿ ಖರೀದಿಯಿಂದ ಹಿಡಿದು ಮನೆಗೆ ಬೇಕಾಗುವ ಎಲ್ಲ ಖರೀದಿ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ನಮಗೂ ಬಟ್ಟೆ ಬರೆ ಕೊಡಿಸಿದರೆ ಸಂಭ್ರಮ ಇನ್ನೂ ದುಪ್ಪಟ್ಟಾಗುವುದು. ಸೀಮಂತ ಕಾರ್ಯ, ನಾಮಕರಣ ಜವಳ, ದೈವ ದರ್ಶನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ರಜೆಯ ದಿನಗಳಲ್ಲಿ.
ಬೇಸಿಗೆಯ ದಿನಗಳಲ್ಲಿ ಜಾತ್ರೆಗಳು, ರಥೋತ್ಸವಗಳು ಹೆಚ್ಚಾಗಿ ನಡೆಯುತ್ತವೆ. ರಥೋತ್ಸವದ ದಿನ ಮುಂಜಾನೆ ದೇಗುಲಕ್ಕೆ ನೈವೇದ್ಯವನ್ನು ಅರ್ಪಿಸಿ, ಅಲ್ಲಿಯ ಸಾಮೂಹಿಕ ಭೋಜನದಲ್ಲಿ ಪ್ರಸಾದವನ್ನು ಸ್ವೀಕರಿಸಿ ಮನೆಗೆ ಬರುತ್ತಾರೆ. ಸಂಜೆ ಹೊಸ ಬಟ್ಟೆಗಳನ್ನು ಧರಿಸಿ ರಥೋತ್ಸವಕ್ಕೆ ಹೋಗುತ್ತಿದ್ದೆವು.ಅಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ತೇರು ಸಾಗುತ್ತಿದ್ದರೆ ಉತ್ತತ್ತಿ ಬಾಳೆಹಣ್ಣುಗಳನ್ನು ತೇರಿನಲ್ಲಿರುವ ದೇವರ ಉತ್ಸವ ಮೂರ್ತಿಗೆ ಎಸೆದು ಕೈ ಮುಗಿಯಬೇಕು. ಇಲ್ಲಿಯೂ ಮಕ್ಕಳಿಗೆ ಒಂದು ಪೈಪೋಟಿ. ತೇರಿನತ್ತ ಬೀಸಿದ ಉತ್ತತ್ತಿ ಮತ್ತು ಬಾಳೆಹಣ್ಣುಗಳನ್ನು ಯಾರು ಹೆಚ್ಚು ಸಂಪಾದಿಸುತ್ತಾರೆ ಎಂದು!!
ಜಾತ್ರೆಯ ಗಲಾಟೆ ತುಸು ಕರಗಿದ ಮೇಲೆ ಮಿರ್ಚಿ, ಮಂಡಕ್ಕಿ, ಬದನೆಕಾಯಿ ಬೋಂಡಾ ಸವಿಯುವುದು. ತರಹೆವಾರಿ ಸಿಹಿಗಳು, ಬೆಂಡು ಬೆತ್ತಾಸ, ಕಬ್ಬಿನ ಹಾಲು ಐಸ್ ಕ್ರೀಮ್
ಮತ್ತಿತರ ಬಗೆಯ ಬಗೆಯ ದೋಸೆ ಇಡ್ಲಿ ಸಾಲುಗಳು ಗೋಬಿ ಮಂಚೂರಿ ಮತ್ತಿತರ ವಿವಿಧ ಬಗೆಯ ಚೈನಿಸ್ ತಿಂಡಿಗಳ ಪೂರೈಕೆ, ಸಾಲು ಸಾಲುಗಳಲ್ಲಿ ಖರೀದಿಸುತ್ತಿರುವ ಜನಗಳು,
ನಮಗೆ ಇಷ್ಟವಾದ ಆಟದ ಸಾಮಾನುಗಳನ್ನು ಪೀ ಪೀ, ಬಲೂನು, ಗಿರಗಿಟ್ಟಿಗಳನ್ನು ಕೊಂಡು ಹರ್ಷಿಸುವ ನಾವು ಅವುಗಳನ್ನು ತೆಗೆದುಕೊಂಡು ಮತ್ತೆ ಮರಳಿ ಮನೆಗೆ ಹೊರಟರೆ ಅಂದಿನ ರಥೋತ್ಸವ ಕಾರ್ಯಕ್ರಮ ಸಾಂಗವಾದಂತೆಯೆ ಸರಿ.
ಹೀಗೆ ಯಾವುದೇ ಚಿಂತೆ ಅಡ್ಡಿ ಆತಂಕಗಳಿಲ್ಲದೆ ರಜಾ ದಿನಗಳನ್ನು ಕಳೆದು ನೆನಪಿನ ಬುತ್ತಿಗೆ ಮತ್ತಷ್ಟು ಸವಿ ನೆನಪುಗಳನ್ನು ಸೇರಿಸಿ ಎಲ್ಲರಿಗೂ ಮತ್ತೆ ಮುಂದಿನ ರಜೆಯಲ್ಲಿ ಸಿಗುವ ವಾಗ್ದಾನ ಮಾಡಿ ಊರಿನಡೆಗೆ ಮುಖ ಮಾಡುತ್ತಿದ್ದೆವು. ಎಷ್ಟು ಚಂದ ಬಾಲ್ಯದ ಆ ದಿನಗಳು….. ಮರೆತೇನೆಂದರೆ ಮರೆಯಲಿ ಹ್ಯಾಂಗ. ಎಲ್ಲರೂ ಮರಳಿ ಮತ್ತೆ ಏನನ್ನಾದರೂ ಬಯಸಿದರೆ ಅದು ಅವರ ಬಾಲ್ಯ…..,ಮತ್ತೆ ಮತ್ತೆ ಸವಿಯಬೇಕೆನಿಸುವ ಆ ಬಾಲ್ಯದ ದಿನಗಳನ್ನು ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾ ನಂದನ್ ಪಂತ್ ಹೀಗೆ ಹೇಳಿದ್ದಾರೆ
‘ಬಾರ್ ಬಾರ್ ಆತೀ ಹೈ ಮುಜಕೋ
ಮಧುರ ಯಾದ ಬಚಪನ್ ತೇರಿ
ಗಯಾ ಲೆ ಗಯಾ ತು ಜೀವನ್ ಕೀ
ಸಬ ಸೆ ಮಧುರ ಖುಷಿ ಮೇರಿ…….
ವೀಣಾ ಹೇಮಂತ್ ಗೌಡ ಪಾಟೀಲ್