ಸುಪ್ತದೀಪ್ತಿ ಕವಿತೆ-ಉಲ್ಲಂಘನೆ

ಕಾವ್ಯಸಂಗಾತಿ

ಸುಪ್ತದೀಪ್ತಿ

ಉಲ್ಲಂಘನೆ

ಉಲ್ಲಂಘನೆಯಲಿ ಮಹಾಸುಖವಿದೆ
ಬೇಲಿ ಸಾಲನು ಹಾದು ಹೋದರೆ
ಹೊರಗೆ ಆಡುವ ಮುಕ್ತ ಬಯಲಿದೆ
ಸೀಮೆ ದಾಟಿದ ಕಡಲ ಹಾರಿದ
ಹನುಮಬಲದ ಹುಡುಕು ಛಲವಿದೆ

ಉಲ್ಲಂಘನೆಯಲಿ ಬದುಕ ಸೆಲೆಯಿದೆ
ಮೂಲಬೇರಿನ ಆಳಕೆಳಸದೆ
ಮೇಲಕೇರುವ ಹಸುರ ಚಿಗುರಿದೆ
ಅಂಟಿಕೊಳ್ಳದೆ ಕಳಚಿ ಇಳಿಯಲು
ಮಣ್ಣ ಸೆಳೆತದ ಭೌಮ ಕನಸಿದೆ

ಉಲ್ಲಂಘನೆಯಲಿ ನೀಲದರಿವಿದೆ
ಕಣ್ಣ ಪರಿಧಿಯ ಆಚೆಯಗಲದ
ಬಣ್ಣ ಬರೆಯುವ ಚಿತ್ರಕಲೆಯಿದೆ
ಅಳತೆಗೋಲನು ಊರುತೂರುತ
ಲಂಘಿಸುವ ಹೊಸ ಅಕ್ಷಪರಿಯಿದೆ

ಉಲ್ಲಂಘನೆಯಲಿ ಮಹಾಸುಖವಿದೆ
ಉಲ್ಲಂಘನೆಯಲಿ ಬದುಕ ಸೆಲೆಯಿದೆ
ಉಲ್ಲಂಘನೆಯಲಿ ನೀಲದರಿವಿದೆ
ಉಲ್ಲಂಘನೆಯಲಿ ಬದುಕೇ ಇದೆ.


ಸುಪ್ತದೀಪ್ತಿ.

Leave a Reply

Back To Top