ಕಾರ್ಮಿಕ ದಿನದ ವಿಶೇಷ-ಬರಹ

ಮೇ 1 ಚಿಂತನೆ- ಚಿಂತೆಗಳು

ಪೂರ್ಣಿಮಾ ಸುರೇಶ್

ಮೇ 1 ಚಿಂತನೆ- ಚಿಂತೆಗಳು

Balloon Seller Stock Pictures, Royalty-free Photos & Images ...

ಮೇ ದಿನ ಅಂದರೆ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, (ಅಂತರರಾಷ್ಟ್ರೀಯ ಶೃಮಿಕ ದಿನಾಚರಣೆಯೂ ಹೌದು )ವರ್ಗ ಹೋರಾಟಗಳ ವಾರ್ಷಿಕ ದಿನಾಚರಣೆಯಾಗಿ ಕಾರ್ಮಿಕ ವರ್ಗ ಆಚರಿಸುತ್ತಿದ್ದಾರೆ. ಕಾರ್ಮಿಕರ ಸಭೆ, ವಿಚಾರಗೋಷ್ಠಿ,ಪ್ರದರ್ಶನ, ಹಕ್ಕುಗಳನ್ನು ಸಾಧಿಸಲು ಮೆರವಣಿಗೆ ಮುಂತಾದವುಗಳನ್ನು ಹಮ್ಮಿಕೊಳ್ಳುವ ಕಾರ್ಮಿಕರ ಉತ್ಸವದ ದಿನ . ಸಾರ್ವಜನಿಕ ರಜಾ ದಿನವಾಗಿಯೂ ಘೋಷಿತವಾಗಿದೆ .ದೇಶವೊಂದರ ಜೀವನಾಡಿಯಂತಿರುವ ಕಾರ್ಮಿಕರ ಬದುಕಿನ ಸಮಾನತೆಗಾಗಿ ಅವರ ಹೋರಾಟದ ಬದುಕನ್ನು ನೆನಪಿಸುವ ದಿನದ ಆಚರಣೆಯ ಹಿಂದೆ ಒಂದು ಇತಿಹಾಸವಿದೆ. 

 

     1886ರ ಮೇ 4 ರಂದು ಚಿಕಾಗೋದ ಇಲಿನಾಯ್ಸ ಪ್ರದೇಶದ ‘ಹೇ ಮಾರ್ಕಟ್’ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯು ಕಾರ್ಮಿಕ ಪ್ರಭುತ್ವ ಉದಯದ ಶುಭಗಳಿಗೆಯ ಕುರುಹಾಗಿ ಮೇ1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಆಚರಣೆ ಆರಂಭಗೊಂಡಿತು. ಬಂಡವಾಳಶಾಹಿ ಪ್ರಭುತ್ವದ ಶೋಷಣೆ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕಾರ್ಮಿಕರೆಲ್ಲರೂ ಒಂದಾಗಿ ಈ ದಿನವನ್ನು ಆಚರಣೆ ಮಾಡಬೇಕೆಂಬುದು ಈ ದಿನದ ಕರೆ .  ಕಾರ್ಮಿಕರ ಶ್ರೇಯಾಭಿವೃದ್ದಿಗಾಗಿ    ಕಾರ್ಮಿಕ ಸಂಘಟನೆಗಳೂ ರೂಪುಗೊಂಡವು. ಮೇ ದಿನ ಉತ್ಸವವಾಗಿಸಿತು..        ತಮ್ಮದೇ ಆದ ಸಂಘಟನೆಗಳನ್ನು  ಕಾರ್ಮಿಕರು ಕಟ್ಟಿಕೊಂಡಿರುವುದರಿಂದ ಸಂಘಟನೆಗಳು ಅವರ ಹೋರಾಟಕ್ಕೆ ಶಕ್ತಿ ನೀಡಿವೆ. ಇದರಿಂದಾಗಿ ಕಾರ್ಮಿಕ ವಲಯ ಇಂದು ಸಮಾಜದಲ್ಲಿ ಪ್ರಭಾವಶಾಲಿಯಾಗಿದೆ. ತಮ್ಮನ್ನು ತಾವು ನಾಯಕತ್ವದ ಹಾದಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಇವರು ಸಂಘಟಿತ ವಲಯದ ಕಾರ್ಮಿಕರು. ಇವರಲ್ಲಿ ಹಲವಾರು ಮಂದಿ ಕಾರ್ಮಿಕ ನಾಯಕರು ಸಮಾಜದ ನಾಯಕರಾಗಿ ಹಲವಾರು ಕ್ಷೇತ್ರಗಳಲ್ಲಿ ಮೂಡಿ ಬಂದಿದ್ದಾರೆ ಜಗತ್ತಿನಾದ್ಯಂತ ಇವರು ಮಹತ್ತರ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳೂ ಸಾಕಷ್ಟಿವೆ.  ಉದಾ:  ಮುಂಬೈಯ ಅತೀ ದೊಡ್ಡ ಕಾರ್ಮಿಕ ನಾಯರೆನಿಕೊಂಡಿದ್ದ ದಿವಂಗತ ಜಾರ್ಜ್ ಫರ್ನಾಂಡೀಸ್ ಕೂಡ ಒಬ್ಬರು

       ಕಾರ್ಮಿಕ ದಿನಾಚರಣೆಯೆಂದರೆ ಸಮಾನ ಬದುಕಿನ ಹಕ್ಕೊತ್ತಾಯ, ಬಂಡವಾಳ ಶಾಹಿ ವ್ಯವಸ್ಥೆ, ಮೇಲ್ವರ್ಗದ ದಬ್ಬಾಳಿಕೆಯ ವಿರುದ್ದ ಶ್ರಮಿಕ ವರ್ಗದ ಹೋರಾಟದ ದಿನವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಇಂದಿನ ಕಾರ್ಮಿಕ ದಿನಾಚರಣೆ ಹೊಸ ದೃಷ್ಟಿಯಿಂದ ನೋಡಿ ಅರ್ಥಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂದೆ ಕಾರ್ಮಿಕರ ಹಕ್ಕುಗಳ ಜೊತೆಜೊತೆಗೆ ಕಾರ್ಮಿಕರ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಜಗತ್ತಿದೆ. ಕರೋನ ಎಂಬ ಮಾಹಾಮಾರಿ ಜಗತ್ತನ್ನೇ ಕಬಳಿಸಲು ಹೊರಟಂತೆ ವ್ಯಾಪಿಸಿ ಕೊಂಡಿದೆ. ಈ ಸಮರ ಯಾವುದೇ ಜಾಗತಿಕ ಸಮರಕ್ಕಿಂತ ಕಡಿಮೆಯಲ್ಲ. ಲಾಕ್ ಡೌನ್ ಎಂಬ  ಸೂತಕದ ಛಾಯೆಯಲ್ಲಿ ಜನರು ಮನೆಯೊಳಗೆ ಬಂಧಿಗಳಾಗಿದ್ದಾರೆ. ಇದರ ಪರಿಣಾಮ  ಶ್ರೀಮಂತ ವರ್ಗದಿಂದ ಕಟ್ಟಕಡೆಯ ಶ್ರಮಿಕನ ಮೇಲೂ ಅತ್ಯಂತ ಗಾಢ ಫಲಿತಾಂಶ ತಂದಿದೆ . ಅಂದರೆ ಕಾರ್ಮಿಕ ವರ್ಗದ ಮೇಲೆ ನಡೆದಿರುವ , ಮುಂದಿನ ದಿನಗಳಲ್ಲಿ ನಡೆಯಬಹುದಾದ ಪರಿಣಾಮಗಳು ಬಲು ಘೋರ ಹಾಗೂ ಭೀಕರ . ಈ ಹಿನ್ನಲೆಯಲ್ಲಿ ನಾವಿಂದು ಕಾರ್ಮಿಕ ದಿನಾಚರಣೆಯ  ಅಗತ್ಯ ಅನುಸರಿಸಬೇಕಾದ , ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.

  ಕಾರ್ಮಿಕರೆಂದರೆ ಸಂಘಟಿತ ವಲಯದ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು.

    ಸಂಘಟಿತ ವಲಯದ ಕಾರ್ಮಿಕರು  ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ದಕ್ಕಿಸಿಕೊಳ್ಳುವ ಶಕ್ತಿ ಹೊಂದಿರುವರು. ಇವರಿಗೆ ತಮ್ಮದೇ ಆದ ಸಂಘಟನೆಗಳು ಇರುವುದರಿಂದ ಈ ಸಂಘಟನೆಗಳು ಅವರ ಹೋರಾಟಕ್ಕೆ ನೈತಿಕ ಶಕ್ತಿ ನೀಡಿವೆ. ಇದರಿಂದ  ಈ ಕಾರ್ಮಿಕ ವಲಯ ಪ್ರಭಾವಶಾಲಿ ವಲಯವಾಗಿದೆ.

 ಅಸಂಘಟಿತ ವಲಯದ ಕಾರ್ಮಿಕರು. ಇವರು ನಮಗೆ ಸಮಾಜದ ಮದ್ಯೆ ಎದ್ದು ತೋರುವುದಿಲ್ಲ. ಇವರಿಗೆ ತಮ್ಮ ಹಕ್ಕೊತ್ತಾಯ ನಡೆಸುವ ಸಂಘಟನಾ ಶಕ್ತಿಯೂ ಇರುವುದಿಲ್ಲ. ಯಾವೊಬ್ಬ ನಾಯಕರು ಇವರ ಪರವಾಗಿ ಧ್ವನಿ ಎತ್ತುವುದಿಲ್ಲ. ಅಂದಿನ ದುಡಿಮೆಯನ್ನು ಅಂದಿಗೆ ಖರ್ಚು ಮಾಡಿ ಬದುಕು ನಡೆಸುವ ದುರ್ಬಲ ವರ್ಗದವರೇ ಇವರಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು.ಹೋರಾಟದ ಮನೋಭಾವವೂ ಇವರಲ್ಲಿ ಬಹಳ ಕಡಿಮೆ. ಈ ಅಸಂಘಟಿತ ವಲಯದ ಕಾರ್ಮಿಕರಲ್ಲೂ ಒಂದೇ ಕಡೆ ನೆಲೆನಿಂತ ಕಾರ್ಮಿಕರು ಒಂದು ಕಡೆಯಾದರೆ ವಲಸೆ ಬಂದ ಕಾರ್ಮಿಕರದ್ದು ಮತ್ತೊಂದು ಬಗೆಯ ಭವಣೆಯ  ಬದುಕು .

ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಹೋಗುವ ಈ  ಅಸಂಘಟಿತ ಕಾರ್ಮಿಕ ವರ್ಗ ನಗರಪ್ರದೇಶಗಳಲ್ಲಿ ಕೊಳೆಗೇರಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

       ಭಾರತದ ಇತಿಹಾಸವನ್ನೇ ತೆಗೆದರೆ ಮುಂಬಾಯಿಯ ಧಾರಾವಿಯ ಬ್ರಹತ್ ಕೊಳೆಗೇರಿ,ನವದೆಹಲಿ, ಕೊಲ್ಕತ್ತಾ, ಚೆನ್ನೈ ಯಂತಹ ಮಹಾನಗರಗಳ ಕೊಳೆಗೇರಿಗಳಲ್ಲಿ ಲಕ್ಷಾಂತರ ಕಾರ್ಮಿಕರು ವಾಸವಾಗಿದ್ದಾರೆ. ಇವರ ದುಡಿಮೆಯ ಹೆಚ್ಚಿನ ಪಾಲು ದುಶ್ಚಟಗಳಿಗೆ ಹೋಗುವುದೂ ಸತ್ಯ. ಇವರಲ್ಲಿ ದೊಡ್ಡ ಪ್ರಮಾಣದ ಹೋರಾಟದ ಮನೋಭಾವವೂ ಇಲ್ಲ. ಈ ಕಾರ್ಮಿಕರ ಸಾಮಾಜಿಕ ಹಾಗೂ ಸಾಂಸಾರಿಕ ಜೀವನ ಅತ್ಯಂತ ಬರ್ಬರ .ಇವರು ಅಂದಂದಿನ ದುಡಿಮೆ ಅಂದಿಗೆ ಉಣ್ಣುವುದರಿಂದ ಇವರಲ್ಲಿ ಉಳಿತಾಯವೂ ಬಹಳ ಕಡಿಮೆ. ಯಾವುದೇ ಕಾನೂನು ಹಾಗೂ ನಿಯಮಾವಳಿಯ ಹಿಡಿತದಿಂದ ಇವರನ್ನು ಹಿಡಿದಿಡುವುದೂ ಸಾಧ್ಯವಿಲ್ಲ. ಕಾನೂನಿನ ದೊಡ್ಡ ಸಹಕಾರವೂ ಇವರಿಗಿಲ್ಲ. ಇಂತಹ ಕಾರ್ಮಿಕರು ಬಲು ದೊಡ್ಡ ಸಂಖ್ಯೆಯಲ್ಲಿ ನಮ್ಮಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲಿ ಇದ್ದಾರೆ ಕೃಷಿ,ಕೂಲಿ,ಕೈಗಾರಿಕೆ,ಮೀನುಗಾರಿಕಾ ಉದ್ಯಮಗಳಲ್ಲು ತೊಡಗಿಸಿಕೊಂಡ ದಿನಗೂಲಿ ನೌಕರಿವರು .ಸಾಂಪ್ರದಾಯಿಕ ವೃತ್ತಿ ಮಾಡುವ ಶೃಮಿಕರಿವರು.

    ಕೋವಿಡ್-19 ದಾಳಿಯ ನಂತರ ಇಂತಹ ಕಾರ್ಮಿಕ ವರ್ಗ ಬಲುದೊಡ್ಡ ಘಾತಕ್ಕೆ ಒಳಗಾಗಿದೆ .  ಇವರು ಆರ್ಥಿಕವಾಗಿ ನೆಲಕಚ್ಚಿರುವ ಶೃಮಿಕ ವರ್ಗ. ಅದರಲ್ಲೂ ಅಸಂಘಟಿತ  ಕಾರ್ಮಿಕರಲ್ಲಿ  ಯಾವುದೇ ನಿರ್ಧಿಷ್ಟ ಹೆಸರಲ್ಲಿ ಗುರುತಿಸಲ್ಪಡದ ಕಾರ್ಮಿಕರ ಗೋಳು ಅತೀ ದುಸ್ತರ ಎನ್ನಬಹುದು.

Bicycle Ice Cream Seller Stock Photos & Bicycle Ice Cream Seller ...

    ‌‌‌ ಲಾಕ್ ಡೌನ್ ನಿಂದಾಗಿ ಸದ್ಯ  ಈ ಕಾರ್ಮಿಕರು ದುಡಿಮೆಗೆ ಹೊರಹೋಗುವಂತಿಲ್ಲ. ಒಳಗಡೆ ಕೊಳೆಗೇರಿಗಳಲ್ಲಿ, ಬೆಂಕಿಪೊಟ್ಟಣದಂತಹ ಜಾಗದಲ್ಲಿ  10 ಕ್ಕಿಂತಲೂ ಹೆಚ್ಚು ಜನರು ಇರಬೇಕಾದ ಅನಿವಾರ್ಯತೆ. ಇಲ್ಲಿ ರೋಗ ಒಬ್ಬರಿಗೆ ತಗುಲಿದರೆ ಉಳಿದವರೂ ಇದರ ಪರಿಣಾಮ ಎದುರಿಸಲೇಬೇಕು . ಆದ್ದರಿಂದ ಈ ಸಮಯದಲ್ಲಿ ಇಂತಹ ಜನರ ಬಗ್ಗೆ ಹೆಚ್ಚು ಯೋಚಿಸಬೇಕಾದ ಅನಿವಾರ್ಯತೆ  ನಮ್ಮ ಮುಂದಿದೆ

     ಇವರಲ್ಲದೆ ಬೆಲೂನ್ ನಂತಹ ಪುಟ್ಟ ಸರಕುಗಳನ್ನು ಮಾರುವಂತವರು, ಭಿಕ್ಷಾಟಣೆ ಮಾಡಿ ಹೊಟ್ಟೆ ಹೊರೆಯುವ ಮಂದಿ,ದೇವದಾಸಿಯರು,ಯಕ್ಷಗಾನ ಕಲಾವಿದರು, ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ವಲಸೆ ಬಂದು ಟೆಂಟ್ ಕಟ್ಟಿ ವಾಸ ಮಾಡುವ, ಊರೂರು ತಿರುಗಿ  ಮಣ್ಣಿನ ಗೊಂಬೆ, ಅಲಂಕಾರಿಕ ವಸ್ತುಗಳಂತಹ ಸರಕುಗಳನ್ನು  ಮಾರಿ ಬದುಕು ಕಟ್ಟಿಕೊಂಡ ಜನರನ್ನು ಕಾರ್ಮಿಕರ ಯಾದಿಯಲ್ಲಿ ಸೇರ್ಪಡೆಗೊಳಿಸದಿರಲು ಸಾಧ್ಯವೇ? ಸದ್ಯ ಇಂತಹ ಕಾರ್ಮಿಕರ ಆರೋಗ್ಯ, ಖರ್ಚುವೆಚ್ಚಗಳ ಪಾಡೇನು? ಇವುಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿದ್ದಾರೆ?  ಕಾರ್ಮಿಕರ ಬಗ್ಗೆ ಇದುವರೆಗೂ ಇರುವ  ಸಿದ್ದ ಆಲೋಚನೆಯ ಮಾದರಿಯನ್ನು ಬದಲಿಸಲೇಬೇಕಾದ  ಅನಿವಾರ್ಯತೆ ಯನ್ನು ಕರೋನ ಎಂಬ ವೈರಸ್ ತಂದಿಟ್ಟಿದೆ ಕಾರ್ಮಿಕರು ತಮ್ಮ ಸ್ಥಳವನ್ನು ಬಿಟ್ಟು ವಲಸೆ ಹೋದಾಗ ಒಳಗಾಗುವ ಸಂಕಷ್ಟ ಅದರ ಪರಿಹಾರ ಹೇಗೆ ಎಂಬುದನ್ನು ಸರಕಾರ ಹಾಗೂ ಸಮಾಜ ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಾದ ಕಾಲವಿದು . ಯಾವ ಪ್ರದೇಶಗಳು ದೊಡ್ಡ ಕೈಗಾರಿಕಾ ಪ್ರದೇಶವಾಗಿರುವುದೋ ಅಲ್ಲಿ ಕೋವಿಡ್ ಹೆಚ್ಚು ಪ್ರಸಾರವಾಗಿದೆ. ಇಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಾಗಿರುತ್ತಾರೆ ಅವರಿಗೆ ನಿರ್ಧಿಷ್ಟ ಉತ್ತಮ ವಾಸ್ತವ್ಯ ಇರುವುದೂ ಕಷ್ಟ . ಭವಿಷ್ಯದ ದಿನಗಳಲ್ಲಿ ಕಾರ್ಮಿಕರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.  ಕಾರ್ಮಿಕರು ಬಲು ದೂರ ವಲಸೆ ಹೋಗದಂತೆ ವ್ಯವಸ್ಥೆ ಕಲ್ಪಿಸುವ, ಕ್ರಮ ತೆಗೆದುಕೊಳ್ಳಬೇಕಾದ ಗಂಭೀರ ಚಿಂತನೆಯನ್ನೂ ಮಾಡಬೇಕಾಗಿದೆ. ಇವರ ಸಂಬಳ ಮಾತ್ರವಲ್ಲ ಬದುಕು ಯಾವ ಬಗೆಯಲ್ಲಿ ಹಸಿರಾಗಿಡಬಹುದು ಎಂಬ ಬಗ್ಗೆಯೂ ಯೋಚಿಸಬೇಕು.    ಬದುಕು ಇದ್ದಾಗಷ್ಟೆ ದುಡಿಮೆ. ದುಡಿದಾಗ ತಕ್ಕ ಪ್ರತಿಫಲ ಸಿಗಬೇಕು ನಿಜ.  ಈ ನಿಟ್ಟಿನಲ್ಲಿ ಕಾರ್ಮಿಕರ ಹೋರಾಟ. ಆದರೆ ಈಗ ಬದುಕು ಉಳಿಸಿಕೊಳ್ಳುವುದೇ ದುಸ್ತರ ಎಂಬಂತಾಗಿದೆ. ಬದುಕುವ ಅವಕಾಶವೇ ಮಸುಕಾದರೆ..? ಜೀವ ಉಳಿಸಿಕೊಳ್ಖುವ ಪೇಚಾಟದಲ್ಲಿ ಅದೆಷ್ಟೋ ಶ್ರಮಿಕ ವರ್ಗ ಹೋರಾಟ ನಡೆಸುತ್ತಿದೆ. ಇವರಿಗೆ ಸಾವು ಹಾಗೂ ಬದುಕಿನ ನಡುವಿನ ಗೆರೆ ಮಾಯವಾದಂತಿದೆ. ಇವರ ನೋವು, ಸಂಕಟ ಅರ್ಥಮಾಡಿಕೊಳ್ಳುವವರು ಯಾರು? ಇವರ ಅಸ್ತಿತ್ವವೇ ಪ್ರಶ್ನಾರ್ಥಕವಲ್ಲವೇ ?ಇವರಿಗೆ ಉಂಟಾಗಿರುವ ಮಾನಸಿಕ ಅಘಾತ,ಮತ್ತೆ ಇವರು ಮೊದಲಿನಂತೆ ಕೆಲಸಕ್ಕೆ ಹೋಗಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈ ಕಾರ್ಮಿಕ ದಿನದಂದು ಹೆಚ್ಚು ಪ್ರಜ್ಞಾಪೂರ್ವಕ ಹೃದಯದಿಂದ ಚಿಂತಿಸಬೇಕಾದ ಅಗತ್ಯದಲ್ಲಿ ನಾವಿದ್ದೇವೆ .

*************************

Leave a Reply

Back To Top